ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎದೆಗೆ ಒಂದಿಷ್ಟು ಪ್ರೀತಿ..

ಭವ್ಯ ಕಬ್ಬಳಿ

ಎದೆಗೆ ಒಂದಿಷ್ಟು ಪ್ರೀತಿ
ಬೇಕೆನ್ನಿಸಿದಾಗ
ಹಗಲಿನ ಮೇಲೂ
ರಾತ್ರಿಯ ಮೇಲೊ
ಸಮಾನ ಹಗುರ ಮನಸ್ಸು
ದೀರ್ಘ ಸಂಜೆಗಳ ಮೇಲಷ್ಟೆ
ಕಿಡಿ ಆರದ – ಭುವಿ ಹೀರದ
ಮುಗಿಯದ ಮುನಿಸು ಇವನಿಗೆ

ಅಸ್ಪಷ್ಟ ಸಂಜೆಯಲ್ಲಿ ತೂಗುವ
ತಕ್ಕಡಿಯಂಥಾ ಪ್ರೀತಿಯನ್ನು
ಮತ್ತೆ ಪ್ರಶ್ನಿಸಿಕೊಳ್ಳುತ್ತಾನೆ
ಉತ್ತರ ಸಿಗದೆ, ತನ್ನೆಲ್ಲ ಸಂಜೆಗಳನ್ನು
ತುದಿ ಬೆರಳಿಗೆ ಅಂಟಿಸಿಕೊಂಡ
ಸಿಗರೇಟಿನಲ್ಲಿಯೇ ಸುಟ್ಟುಬಿಡುತ್ತಾನೆ

ತನ್ನ ನೋವಿನ
ಯಾವ ಪುರಾವೆಯನ್ನೂ
ಉಳಿಸಬಾರದು ಎಂದುಕೊಂಡು
ನಿಂತ ಜಾಗದಲ್ಲೆ
ಕೊಂಚ ಹೆಚ್ಚೇ ಯೋಚಿಸಿ,
ಹೆಜ್ಜೆ ಮೂಡಿಸಿ ಹೊರಟುಬಿಡುತ್ತಾನೆ

ಹಾಡುವಾಗಲೇ‌ ಸುಮ್ಮನಾದ
ತಂತಿ ಬೆರಳಿನಂತೆ
ಕಣ್ಣೀರು ತಾಕಿ ಅರ್ಧ
ಅಳಿಸಿದ ಹಳೆಯ ಸಾಲು,
ಮೀನಿಗಾಗಿ ಬಲೆಯ ಬೀಸುವ
ಸವೆದ ತೋಳಿನಂತೆ
ಕ್ಷಣವು ಕಾದು ಕುಳಿತ ಮೇಲೆ
ಮತ್ತೆ ಸೋಲು

ಮಬ್ಬು ಸಂಜೆಗೆ
ಎಂದೂ ತಬ್ಬಲಾರದ ತಬ್ಬಲಿಯಾಗಿಯೇ
ಉಳಿದುಬಿಡುತ್ತಾನೆ

ಮುಗಿಯದ ಸಾಲುಗಳು
ಮುಗಿದಂತೆ ಕಾಣುವಷ್ಟರಲ್ಲಿ,
ಇವನಿಗೆ ಬಿಕ್ಕಳಿಕೆ
ಯಾರೋ ನೆನೆದಂತೆ
ಯಾರನ್ನೋ ನೆನೆದಂತೆ

ಹೀಗೆ, ಅಸ್ಪಷ್ಟ ಸಂಜೆಗಳನ್ನು
ದ್ವೇಷಿಸುತ್ತಲೇ ಪ್ರೀತಿಸುತ್ತಾನೆ…

‍ಲೇಖಕರು Avadhi

13 October, 2020

1 Comment

  1. Siddu arts

    ಒಂದು ಒಳ್ಳೆಯ ಸಾಹಿತ್ಯದ ರಸದೌತಣ ನೀಡುವ ಪತ್ರಿಕೆ. ನನ್ನ ಪೇವರೀಟ್ ವೇಬ್ ಪೇಜ್ ಆಗಿದೆ. ಇಲ್ಲಿಯ ಹೊಸ ಕಲ್ಪನೆಯ ಕವಿತೆಗಳು ತುಂಭಾ ಚೆನ್ನಾಗಿ ಇರುತ್ತವೆ ಸರ್.ಧನ್ಯವಾದಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading