ಕತ್ತೆ ಸಿದ್ದಣ್ಣನ ಕತೆ

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಪಶುವೈದ್ಯಾಧಿಕಾರಿ ಹುದ್ದೆಗೆ ಮೊದಲ ಮೇಲಧಿಕಾರಿ ಎಂದರೆ ತಾಲ್ಲೂಕು ಮಟ್ಟದ ಸಹಾಯಕ ನಿರ್ದೇಶಕರು.

ಇವರಿಗೆ ಪಶುವೈದ್ಯಾಧಿಕಾರಿಗಳ ಮೇಲೆ ಹೆಚ್ಚಿನ ಮಟ್ಟದ ನಿಯಂತ್ರಣವೇನೂ ಇರುವುದಿಲ್ಲ. ನಾನು ಕೆಲಸಕ್ಕೆ ಸೇರಿದಾಗ ಸಾಂದರ್ಭಿಕ ರಜೆಯನ್ನೂ ಸಹ ಸಹಾಯಕ ನಿರ್ದೇಶಕರಿಗೆ ಮಂಜೂರು ಮಾಡುವ ಅಧಿಕಾರವಿರಲಿಲ್ಲ.

ಪಶುವೈದ್ಯಾಧಿಕಾರಿಗಳ ಅಸಲಿ ನಿಯಂತ್ರಣಾಧಿಕಾರಿಯೆಂದರೆ ಜಿಲ್ಲಾ ಮಟ್ಟದ ಉಪನಿರ್ದೇಶಕರೇ. ಜಿಲ್ಲೆಯ ಎಲ್ಲ ಪಶುವೈದ್ಯಾಧಿಕಾರಿಗಳ ಸೇವಾ ಪುಸ್ತಕ ಇವರ ಬಳಿ ಇರುತ್ತಿದ್ದವು. ಅವರೇ ನಮ್ಮ ಎಲ್ಲ ತರಹದ ರಜೆಗಳನ್ನು ಮತ್ತು ವಾರ್ಷಿಕ ವೇತನ ಬಡ್ತಿಯನ್ನೂ ಸಹ ಮಂಜೂರು ಮಾಡುತ್ತಿದ್ದದ್ದು.

ನಾನು ಸೇವೆಯಲ್ಲಿದ್ದಾಗ ಕೆಲವು ಸರ್ಕಾರದ ಕಾರ್ಯಕ್ರಮಗಳು ನಮ್ಮ ಇಲಾಖೆಗೆ ನೇರವಾಗಿ ಸಂಬಂಧಪಡದೇ ಹೋದರೂ ಗುರಿ ನಿಗದಿಪಡಿಸಿ ಸಾಧಿಸಬೇಕೆಂದು ಆದೇಶವಿರುತ್ತಿತ್ತು. ಉದಾಹರಣೆಗೆ ಸಣ್ಣ ಉಳಿತಾಯ, ಕುಟುಂಬ ಯೋಜನೆ, ಸಾಕ್ಷರತಾ ಆಂದೋಲನ, ಬಯೋಗ್ಯಾಸ್ ಇತ್ಯಾದಿ.

ನಮ್ಮ ಇಲಾಖೆಯ ಗುರಿ, ಸಣ್ಣ ಉಳಿತಾಯ ಯೋಜನೆಯಲ್ಲಿ ನಿಗದಿಪಡಿಸಿದ ಗುರಿಗಳನ್ನು ಸುಲಭವಾಗಿ ಸಾಧಿಸುತ್ತಿದ್ದೆ. ಆದರೆ ಕುಟುಂಬ ಕಲ್ಯಾಣ ಯೋಜನೆಗೆ ಸಂಬಂಧಪಟ್ಟ ಗುರಿಗಳೇ ನನ್ನ ತಲೆ ತಿನ್ನುತ್ತಿದ್ದವು. ಅದರಲ್ಲಿ ಇಷ್ಟು ಕಾಂಡೋಮ್‌ಗಳ ಬಳಕೆ, ಇಷ್ಟು ಕಾಪರ್ ಟಿ ಹಾಕಿಸುವುದು, ಇಷ್ಟು ವ್ಯಾಸೆಕ್ಟಮಿ, ಟ್ಯೂಬೆಕ್ಟಮಿ ಆಪರೇಷನ್ ಮಾಡಿಸಬೇಕು ಎಂದು ಗುರಿ ಇರುತ್ತಿತ್ತು.

ಇದರಲ್ಲಿ ಯಾವುದೇ ಪರಿಶ್ರಮ ಇಲ್ಲದ ಪಶುವೈದ್ಯರೇನು ಮಾಡಬೇಕು, ಹೇಗೆ ಮುಂದುವರೆಯಬೇಕೆಂದು ಹೇಳುವವರಿರಲಿಲ್ಲ. ಒಂದಷ್ಟು ವರ್ಷಗಳ ಸೇವೆ ಸಲ್ಲಿಸಿ ಪಳಗಿದ ಪಶುವೈದ್ಯರನೇಕರು ಇಂತಹ ಕೆಲಸಗಳ ಬಗ್ಗೆ ಕ್ಯಾರೇ ಎನ್ನುತ್ತಿರಲಿಲ್ಲ. ಆದರೆ ಕೆಲಸಕ್ಕೆ ಹೊಸದಾಗಿ ಸೇರಿದ್ದ ನಾನು ಇಂತಹವುಗಳನ್ನೆಲ್ಲ ಬಹಳ ತೀವ್ರವಾಗಿ ಪರಿಗಣಿಸಿ ಆತಂಕಕ್ಕೊಳಗಾಗುತ್ತಿದ್ದೆ.

ಆಗ ನಮ್ಮ ಉಪನಿರ್ದೇಶಕರಾಗಿದ್ದವರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯದರ್ಶಿಗಳನ್ನು ಮತ್ತಿತರೆ ಹಿರಿಯ ಅಧಿಕಾರಿಗಳನ್ನು ಹಾಗೂ ರಾಜಕಾರಣಿಗಳನ್ನು ಮೆಚ್ಚಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಕ್ರಮಗಳನ್ನು ನಮ್ಮ ತಲೆಯ ಮೇಲೆ ಎಳೆದಿದ್ದರು.

ಅದೃಷ್ಟಕ್ಕೆ ನನಗೆ ಸರ್ಕಾರಿ ಆಸ್ಪತ್ರೆಗಳ ಅನೇಕ ವೈದ್ಯಾಧಿಕಾರಿಗಳು ಪರಿಚಯವಿದ್ದುದರಿಂದ ಇಂತಿಷ್ಟು ಕಾಂಡೋಮ್‌ಗಳ ಬಳಕೆ, ಕಾಪರ್ ಟಿ ಗಳ ಅಳವಡಿಕೆಗಳಿಗೆ ನಾನು ಪ್ರೇರಕನಾಗಿದ್ದೇನೆಂದು ಅವರಿಂದ ಪತ್ರ ಪಡೆದು ನಿರಾತಂಕನಾದೆ. ಆದರೆ ವ್ಯಾಸೆಕ್ಟಮಿ, ಟ್ಯೂಬೆಕ್ಟಮಿ ಶಸ್ತ್ರಚಿಕಿತ್ಸೆ ಮಾಡಿಸುವುದೇ ತ್ರಾಸದಾಯಕವಾಗಿತ್ತು. ಇಡೀ ನೊಣವಿನಕೆರೆ ಹೋಬಳಿಗೆ ಇದ್ದುದು ನಮ್ಮದೊಂದೇ ಪಶುವೈದ್ಯ ಸಂಸ್ಥೆ.

ಪಶುಚಿಕಿತ್ಸಾಲಯದ ವ್ಯಾಪ್ತಿಯಲ್ಲಿ ೬೦-೭೦ ಕ್ಕೂ ಮೇಲ್ಪಟ್ಟು ಹಳ್ಳಿಗಳಿದ್ದವು. ಒಬ್ಬ ಪಶುವೈದ್ಯನಾದ ನಾನು, ಒಬ್ಬ ಪಶುಪರೀಕ್ಷಕ, ಒಬ್ಬ ಕಾಂಪೌಂಡರ್, ಒಬ್ಬ ಸೇವಕ ಇಷ್ಟೇ ಇದ್ದದ್ದು ಒಟ್ಟು ಸಿಬ್ಬಂದಿ. ಬೆಳಿಗ್ಗೆ ೭-೮ ಗಂಟೆಗೆ ಕೆಲಸ ಪ್ರಾರಂಭಿಸಿದರೆ ರಾತ್ರಿ ಏಳೆಂಟು ಗಂಟೆಯಾದರೂ ಮುಗಿಯುತ್ತಿರಲಿಲ್ಲ. ಅದರಲ್ಲೇ ಬಿಡುವು ಮಾಡಿಕೊಂಡು ಜನರಲ್ ಆಸ್ಪತ್ರೆಗೆ ಹೋಗಿ ಅರ್ಹ ದಂಪತಿಗಳ ಪಟ್ಟಿಯನ್ನು ತಂದೆನು.

ಆಗ ಡಾ|| ಬ್ರಹ್ಮರಾಜ್ ಎಂಬುವವರು ವೈದ್ಯಾಧಿಕಾರಿಗಳಾಗಿದ್ದರು. ಅವರು ನನಗಿಂತ ಬಹಳ ಹಿರಿಯರಾಗಿದ್ದರೂ ವಿಪರೀತ ಪ್ರೀತಿ ವಿಶ್ವಾಸದಿಂದಿದ್ದರು. ಅವರು ಕೊಟ್ಟ ಪಟ್ಟಿಯನ್ನು ಜಾಲಾಡಿದರೂ ನನಗೆ ಒಬ್ಬನೇ ಒಬ್ಬ ಪರಿಚಿತನಿರಲಿಲ್ಲ. ಆಗ ನಮ್ಮ ಪಶುಪರೀಕ್ಷಕರಾಗಿದ್ದ ತಿಮ್ಮೇಗೌಡರು ಪಟ್ಟಿಯನ್ನು ಕೂಲಂಕುಷವಾಗಿ ಅಭ್ಯಸಿಸಿ ಆ ಪಟ್ಟಿಯಲ್ಲಿರುವ ಸಿದ್ದಣ್ಣ ಎನ್ನುವವನನ್ನು ಬಜಗೂರು ವಾಸಿಯೂ, ವಿವಾಹಿತನೂ, ಯಾವುದೇ ಕುಟುಂಬ ಕಲ್ಯಾಣ ಯೋಜನೆಯನ್ನೂ ಅಳವಡಿಸದೆ ನಾಲ್ಕೈದು ಮಕ್ಕಳಾಗಿವೆಯೆಂದೂ ಇನ್ನೂ ಹಲವು ವರ್ಷ ಅವನು ಹೀಗೇ ಮುಂದುವರೆಯಬಹುದೆಂದು ಸಮಾಚಾರ ತಂದರು.

ಈ ಸಿದ್ದಣ್ಣ ಎಂಬ ವ್ಯಕ್ತಿ ಆರೋಗ್ಯ ಇಲಾಖೆಗೆ ಸವಾಲಾಗಿದ್ದ. ಸರ್ಕಾರದ ಯಾವ ಆಮಿಷಗಳಿಗೂ ಸೊಪ್ಪು ಹಾಕದೆ, ಇಲಾಖೆಯ ಎಲ್ಲ ಜನನ ನಿಯಂತ್ರಣದ ಕಾರ್ಯಕ್ರಮಗಳನ್ನು ಕಾಲಾನುಕಸವಾಗಿ ಕಂಡಿದ್ದ. ಇಡೀ ಆರೋಗ್ಯ ಇಲಾಖೆಯೇ ಸಿದ್ದಣ್ಣನ ಮನವೊಲಿಸಲು ಪ್ರಯತ್ನಿಸಿ ಸೋತಿರುವುದಾಗಿ ಡಾ. ಬ್ರಹ್ಮರಾಜ್ ತಿಳಿಸಿದರು.

“ಕುಟುಂಬ ಯೋಜನೆ ಬಗ್ಗೆ ನಮ್ಮ ದೊಡ್ಡ ಇಲಾಖೆಯೇ ಇದೆ. ನಾವೇ ಪ್ರಗತಿ ಸಾಧಿಸುತ್ತೇವೆ. ನೀವೇನು ತಲೆ ಕೆಡಿಸ್ಕೋಬೇಡಿ. ನಮ್ಮ ಆಸ್ಪತ್ರೆಯ ಪ್ರಗತಿ ಚೆನ್ನಾಗಿಯೇ ಇದೆ” ಎಂದರು. ಡಾ||ಬ್ರಹ್ಮರಾಜರು ಇಷ್ಟೇ ಹೇಳಿದ್ದರೆ ನಾನು ವ್ಯಾಸೆಕ್ಟಮಿ/ಟ್ಯುಬೆಕ್ಟಮಿಗಳ ಸಹವಾಸವೇ ಬೇಡ ಎಂದು ಸುಮ್ಮನಾಗಿಬಿಡುತ್ತಿದ್ದೆನೋ ಏನೋ? ಆದರೆ ಡಾ|| ಬ್ರಹ್ಮರಾಜ್ ಕೊನೆಯದಾಗಿ “ಸಿದ್ದಣ್ಣ ಮನುಷ್ಯ ಡಾಕ್ಟ್ರು ಮಾತು ಕೇಳಲ್ಲ. ಆದರೆ ದನೀನ ಡಾಕ್ಟ್ರುಮಾತು ಕೇಳ್ಬಹುದು! ಒಮ್ಮೆ ಪ್ರಯತ್ನಿಸಿ ಬಷೀರ್” ಎಂದು ಬೆನ್ನು ತಟ್ಟಿದರು.

ಡಾ|| ಬ್ರಹ್ಮರಾಜರ ಮಾತುಗಳು ನನ್ನಲ್ಲಿ ಚೆನ್ನಾಗಿ ಕೆಲಸ ಮಾಡಿದವು. ಒಂದು ಕೈ ನೋಡೇಬಿಡೋಣ ಎಂದುಕೊಂಡೆ. ಯಾರೋ ಒಬ್ಬ ಬಡವ ಮಕ್ಕಳಾಗದಂತೆ ಆಪರೇಷನ್ ಮಾಡಿಸಿಕೊಳ್ಳೋದು ಒಳ್ಳೆಯದೇ ಅಲ್ಲವೇ? ಈಗಾಗಲೇ ಹುಟ್ಟಿರುವ ಮಕ್ಕಳಿಗಾದರೂ ಇನ್ನೂ ಹೆಚ್ಚು ಅನ್ನ, ಅಕ್ಷರ ಸಿಗಲಿ ಎಂದು ಯೋಚಿಸಿದೆ.

ಪಶುವೈದ್ಯ ಪರೀಕ್ಷಕರಾದ ತಿಮ್ಮೇಗೌಡರಿಗೆ ಬಜಗೂರಿಗೆ ಹೋದಾಗ ಸಿದ್ದಣ್ಣನ ವೃತ್ತಿ, ಮನೆ ಇತ್ಯಾದಿ ವಿವರ ತಿಳಿದುಕೊಂಡು ಬನ್ರಿ ಎಂದು ಹೇಳಿದೆ. ಒಂದೆರಡು ದಿನದಲ್ಲಿಯೇ ತಿಮ್ಮೇಗೌಡರು “ಸಾರ್ ಸಿದ್ದಣ್ಣನು ಬೋಜೇಗೌಡರ ಮನೇಲಿ ಕತ್ತೆ ಕಾಯ್ತಾನೆ. ಅವನು ಕತ್ತೆ ಸಿದ್ದಣ್ಣ ಎಂದೇ ಫೇಮಸ್. ಬೋಜಣ್ಣಾರವು ಐವತ್ತು ಕತ್ತೆ ಇವೆ. ಕೇಳಿಕೊಂಡ ಅವರಿವರ ತೋಟದಲ್ಲಿ ಅವನ್ನು ಮಂದೆ ಹಾಕೋದಕ್ಕೆ ಸಿದ್ದಣ್ಣನ್ನ ಮಡಿಕ್ಕಂಡವ್ರೆ” ಅಂತ ಸುದ್ದಿ ತಂದ್ರು.

ಬಹಳಷ್ಟು ಜನ ಬಹಳಷ್ಟು ವರ್ಷ ಮಕ್ಕಳಾಗದಂಗೆ ಮಾಡುವ ಆಪರೇಷನ್ ಬಗ್ಗೆ ಮಾತಾಡಿ ಕತ್ತೆ ಸಿದ್ದಣ್ಣನಿಗೆ ರೇಗಿ ಹೋಗಿತ್ತೆಂದು ಕಾಣುತ್ತದೆ. ಆಪರೇಷನ್ನನ್ನು ಸಿದ್ದಣ್ಣ ಸಾವಿಗೆ ಸಮೀಕರಿಸಿಕೊಂಡಿದ್ದ. ಆಪರೇಷನ್ ಅಂದ ಕೂಡಲೆ ಗಡಗಡ ನಡುಗುತ್ತಿದ್ದ. ತಾನಾಗಲೀ ತನ್ನ ಹೆಂಡತಿಯಾಗಲೀ ಯಾವುದೇ ಕಾರಣಕ್ಕೆ ಆಪರೇಷನ್ ಮಾಡಿಸ್ಕಳಲ್ಲ ಅಂತ ಎಲ್ಲರಿಗೂ ಖಂಡತುಂಡಾಗಿ ಹೇಳುತ್ತಿದ್ದ.

ಅನಕ್ಷರಸ್ಥನೂ, ಅತ್ಯಂತ ಮುಗ್ಧನೂ ಆಗಿದ್ದ ಸಿದ್ದಣ್ಣನಿಗೆ ಆಪರೇಷನ್ ಮಾಡಿಸುವುದು ಈ ಜನ್ಮದಲ್ಲಿ ಸಾಧ್ಯವೇ ಇರಲಿಲ್ಲ. ತಿಮ್ಮೇಗೌಡ್ರಿಗೆ “ಹೋಗ್ರಿ ಹೋಗ್ರಿ, ದನ ಎಮ್ಮೆಗಳೆಲ್ಲ ಚಪ್ಪೆರೋಗ, ಮೆಟ್ರೆರೋಗ ಬಂದು ಸಾಯ್ತಿದಾವೆ. ಅವಕ್ಕಿಂಜಕ್ಷನ್ ಮಾಡ್ರಿ, ದನಗಳವರಿಗೆ ಯಾಕ್ರಿ ಜನಗಳ ಉಸಾಬರಿ. ನಿಮ್ನಿಮ್ಮ ಕೆಲಸ ನೀವು ಮಾಡ್ರಿ” ಎಂದು ಸಿದ್ದಣ್ಣ ಬೈದು ಕಳಿಸಿದ್ದ. ಸಿದ್ದಣ್ಣನ ಮಾತಿನಲ್ಲಿ ಸಲಹೆ, ಉಪದೇಶ, ಆದೇಶ, ಲೋಕಜ್ಞಾನ, ವಿವೇಕ ಎಲ್ಲವೂ ಇದ್ದವು. ಅವನ ಮಾತಿಗೆ ಒಪ್ಪಿ ನಾವು ಸುಮ್ಮನಾದೆವು.

ಅದೇ ಸಮಯದಲ್ಲಿ ಬಜಗೂರಿನ ಪುಟ್ಟಸ್ವಾಮಿ ಎನ್ನುವವರು ತನಗಾಗದವರು ಮನೆಯ ಎರಡು ಎಮ್ಮೆಗಳಿಗೆ ವಿಷ ಹಾಕಿ ಸಾಯಿಸಿದ್ದಾರೆ ಎಂದು ಪೊಲೀಸ್ ಕೇಸ್ ಹಾಕಲಾಗಿ, ಪೊಲೀಸ್ ಸಬ್‌ಇನ್ಸ್ಪೆಕ್ಟರರು ನನ್ನನ್ನು ಎಮ್ಮೆಗಳ ಶವಪರೀಕ್ಷೆಗೆ ಬಜಗೂರಿಗೆ ಕರೆದುಕೊಂಡು ಹೋದರು. ನಾನು ನಮ್ಮ ಪಶುಪರೀಕ್ಷಕರನ್ನು ಕರೆದುಕೊಂಡು ಪೋಲೀಸ್ ಜೀಪು ಹತ್ತಿದೆ. ಫೋಟೋಗ್ರಾಫರ್, ಒಂದಿಬ್ಬರು ಪೊಲೀಸರು ಎಲ್ಲ ಸೇರಿ ಜೀಪು ಭರ್ತಿಯಾಗಿತ್ತು.

ಎರಡು ಎಮ್ಮೆ ಶವಗಳನ್ನು ಕೆರೆಯ ಅಂಗಳದಲ್ಲಿ ಹಾಕಿಕೊಂಡು ಬಜಗೂರಲ್ಲಿ ಜನ ನಮಗಾಗಿ ಕಾಯುತ್ತಿದ್ದರು. ಜೀಪು ಸೀದ ಕೆರೆಯಂಗಳಕ್ಕೆ ಹೋಗಿ ನಿಂತಿತು. ಅಲ್ಲಿಯೇ ಸುಮಾರು ಕತ್ತೆಗಳು ಮೇಯುತ್ತಿದ್ದವು. ನಾವೆಲ್ಲರೂ ಇಳಿದೆವು. ನಾನು, ಪೋಲೀಸ್ ಸಬ್‌ಇನ್ಸ್ಪೆಕ್ಟರು, ಇಬ್ಬರು ಪೋಲೀಸರು ಮತ್ತು ಪಶುಪರೀಕ್ಷಕರಾದ ತಿಮ್ಮೇಗೌಡರು ಎಲ್ಲರೂ ಒಂದು ಕಡೆ ಮಾತಾಡುತ್ತ ನಿಂತಿದ್ದೆವು.

ನಮ್ಮ ಮುಂದೆ ಒಬ್ಬ ವ್ಯಕ್ತಿ ಕೈಯ್ಯಲ್ಲೊಂದು ಉದ್ದನೆ ಕೋಲು ಹಿಡಿದುಕೊಂಡು ನಿಂತಿದ್ದ. ಕೂಡಲೇ ತಿಮ್ಮೇಗೌಡರು ಅವನ ಕಡೆ ಕೈ ತೋರಿಸಿ “ಇವನೇ ಸಾರ್ ಕತ್ತೆ ಸಿದ್ದಣ್ಣ, ಡಾ|| ಬ್ರಹ್ಮರಾಜ್ ಹೇಳಿದ್ರಲ್ಲಾ, ಅವನೇ ಇವ್ನು” ಎಂದು ಜೋರಾಗಿಯೇ ಹೇಳಿದರು. ಸಿದ್ದಣ್ಣ ಅನಾಯಾಸವಾಗಿ ಕಾಣಿಸಿದ್ದು ತಿಮ್ಮೇಗೌಡರಿಗೆ ಸಂತಸ ತಂದಿತ್ತು. ನಾನು ಗೊತ್ತಾಯ್ತೆಂದು ತಲೆಯಾಡಿಸಿ ಸುಮ್ಮನಾದೆ.

ಆದರೆ ಪೋಲೀಸ್ ಸಬ್‌ಇನ್ಸ್ಪೆಕ್ಟರ್ ಮಾತ್ರ “ಯಾಕ್ರೀ… ಏನ್ ಮಾಡ್ದ?” ಎಂದು ಸಿದ್ದಣ್ಣನ ಕಡೆ ತಿರುಗಿದರು. ಅಷ್ಟೇ ಸಿದ್ದಣ್ಣ ಕೈಯ್ಯಲ್ಲಿದ್ದ ಕೋಲು ಬಿಸಾಕಿ ಸತ್ನೋ ಕೆಟ್ನೋ ಎಂದು ಓಡುತ್ತ ನಮ್ಮೆಲ್ಲರ ಕಣ್ಣುಗಳ ವ್ಯಾಪ್ತಿಯಿಂದ ಏಕ್‌ದಂ ನಾಪತ್ತೆಯಾದ. ಸಿದ್ದಣ್ಣನನ್ನು ಮಾತನಾಡಿಸಬೇಕೆಂದಿದ್ದೆ. ಆದರೆ ಯಾವುದಕ್ಕೂ ಅವನು ಅವಕಾಶವನ್ನೇ ಕೊಡಲಿಲ್ಲ.

ನಾವು ಎಮ್ಮೆಗಳ ಶವಪರೀಕ್ಷೆಯನ್ನು ಮಾಡಿಕೊಂಡು, ಪ್ರಯೋಗಾಲಯಕ್ಕೆ ಕಳುಹಿಸಬೇಕಾದ ಎಮ್ಮೆಗಳ ಶರೀರದ ಕೆಲವು ಭಾಗಗಳನ್ನು ಬಾಟಲಲ್ಲಿ ಹಾಕಿಕೊಂಡು ಆಸ್ಪತ್ರೆಗೆ ವಾಪಸ್ ಬಂದೆವು. ಆದರೆ ಅಂದು ನಾಪತ್ತೆಯಾದ ಕತ್ತೆ ಸಿದ್ದಣ್ಣ ಮತ್ತೆಂದೂ ಬಜಗೂರಿಗೆ ವಾಪಸ್ ಬರಲಿಲ್ಲ.

ನಾಲ್ಕಾರು ತಿಂಗಳ ನಂತರ ಎಮ್ಮೆಕರುಗಳಿಗೆ ಜಂತು ನಾಶಕ ಔಷಧ ತೆಗೆದುಕೊಂಡು ಹೋಗಲು ಬೋಜಣ್ಣ ನಮ್ಮಾಸ್ಪತ್ರೆಗೆ ಬಂದಿದ್ದರು. “ಸಿದ್ದಣ್ಣ ಮತ್ತೇನಾದ್ರೂ ಬಂದ್ನ ಬೋಜಣ್ಣ?” ಎಂದು ವಿಚಾರಿಸಿದೆ. ಬೋಜಣ್ಣ “ಅಯ್ಯೋ… ಇಲ್ಲ ಸಾರ್. ಅಂಥ ಒಳ್ಳೆ ಆಳು ನನಗಿನ್ನ ಸಿಗಲ್ಲ ಬಿಡಿ. ಯಾರ ಮುಖಾಂತರ ಹೇಳಿ ಕಳಿಸಿದ್ನೋ ಏನೋ! ಅವನ ಹೆಂಡತಿ ಮಕ್ಕಳೂ ಸಹ ಯಾರಿಗೂ ಹೇಳ್ದಂಗೆ ಕೇಳ್ದಂಗೆ ಊರು ಖಾಲಿ ಮಾಡಿದ್ರು.

ಈಗ ಎಲ್ಲೋ ಕೂಲಿನಾಲಿ ಮಾಡ್ಕಂಡ್ ಬದುಕರ‍್ತಾರೆ. ಈಗ ಐದಾರು ವರ್ಷದ ಹಿಂದೆ ಎಲ್ಲಿಂದಲೋ ಬಂದು ನಮ್ಮನೆ ಸರ‍್ಕಂಡಿದ್ದ. ಈಗ ಎತ್ತೋದ್ನೋ. ಹೆಣ ಹೊರೋಕೆ ಹಿಂದಾದ್ರೇನು ಮುಂದಾದ್ರೇನು ಸಾರ್?” ಅಂದು ಸ್ವಲ್ಪ ಹೊತ್ತು ಮೌನವಾಗಿದ್ದು ಎದ್ದು ಹೋದರು.

ಬದುಕು ಕತೆಗಿಂತ ವಿಚಿತ್ರವೂ, ಊಹಾತೀತವೂ, ನಾಟಕೀಯವೂ ಆಗಿರುತ್ತದೆ ಎನಿಸಿತು.

‍ಲೇಖಕರು Avadhi

October 13, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. ಲಲಿತಾ ಸಿದ್ಧಬಸವಯ್ಯ

    ಬಹಳ ಆಸಕ್ತಿಕರವಾಗಿತ್ತು ಕತ್ತೆ ಸಿದ್ಧಣ್ಣನ ಕತೆ.

    ಪ್ರತಿಕ್ರಿಯೆ
  2. Sudhakara Battia

    In his own way, Siddanna defeat rest of all other so called progressive reformists. Character sketch of Siddanna is amazing

    ಪ್ರತಿಕ್ರಿಯೆ
  3. ಲೋಕೇಶ್ ರತನ್

    ಸಂತಾನಹರಣವೋ…… ಸ್ವಾತಂತ್ರ್ಯ ಹರಣವೋ…..ಪಾಪ ಸಿದ್ದಣ್ಣ!!!!

    ಪ್ರತಿಕ್ರಿಯೆ
  4. Lokesh Rathan

    ಸಂತಾನಹರಣವೋ…… ಸ್ವಾತಂತ್ರ್ಯ ಹರಣವೋ…..ಪಾಪ ಸಿದ್ದಣ್ಣ!!!!

    ಪ್ರತಿಕ್ರಿಯೆ
  5. Dr akthar Hussain

    Innocent sidana , interesting story… So called development and advancement of society spoiled this innocency among people…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: