ರೂಮ್ ಗಿಂತ ಬಾತ್ ರೂಮ್ ವಾಸಿಯಿತ್ತು…

ಬಿ ವಿ ಭಾರತಿ ಅವರ ʼಶೋವಾ ಎನ್ನುವ ಶೋಕ ಗೀತೆʼ ಅಂಕಣದಲ್ಲಿ ಪೋಲೆಂಡ್ ನಲ್ಲಿ ನಿಟ್ಟುಸಿರ ಪಯಣ ಕುರಿತ ಅನುಭವಗಳನ್ನು ಹಂಚಿಕೊಂಡಿದ್ದಾರೆ.

। ಕಳೆದ ವಾರದಿಂದ ।

ರೂಮ್ ಗಿಂತ ಬಾತ್ ರೂಮ್ ವಾಸಿಯಿತ್ತು…

ರೋಸೆದ್ದು ಹೋಗಿ ಹುಚ್ಚು ಹಿಡಿಯುವುದರಲ್ಲಿ 25-26 ರ ಹುಡುಗನೊಬ್ಬ ಬಂದು ‘ಇಂಡಿಯಾ?’ ಎಂದ. ಸುಸ್ತಾಗಿ ಹೋಗಿದ್ದ ನಾವು ‘ಏನಯ್ಯಾ ನಿನ್ನ ಕತೆ… ಅದೆಲ್ಲಿ ಹಾಳಾಗೋಗಿದ್ದೆ’ ಎಂದರೆ ಅವನು ‘ನಾನು ಇಲ್ಲೇ ಎಕ್ಸಿಟ್‌ನಲ್ಲಿದ್ದೆ’ ಅಂದ! ‘ಏ ಬೊಗಳೆದಾಸ! ನೀನ್ಯಾವ ಎಕ್ಸಿಟ್‌ನಲ್ಲಿದ್ದೆ, ನಾವು ಅಲ್ಲೇ ಇದ್ದೆವಲ್ಲ’ ಅಂತ ದಬಾಯಿಸಿದೆವು.

‘ಅಯ್ಯೋ ಮದರ್ ಪ್ರಾಮಿಸ್ ಅಲ್ಲೇ ಇದ್ದೆ! ನಿಮ್ಮನ್ನ ಹೇಗೆ ಕಾಂಟ್ಯಾಕ್ಟ್ ಮಾಡ್ಬೇಕು ಅಂತಲೇ ಗೊತ್ತಾಗದೇ ಹುಡುಕಾಡ್ತಾ ಇದ್ದೆ’ ಎಂದ. ‘ಆ! ನೀನು ಹುಡುಕಾಡ್ತಿದ್ಯಾ. ನಾವು ಹುಡುಕಾಡಿದ್ದು. ಅಲ್ಲಿದ್ದ ಟ್ಯಾಕ್ಸಿ ಸ್ಟ್ಯಾಂಡ್ ಪೂರಾ ಹುಡುಕಾಡಿದ್ವಿ, ಎಸ್ಕಲೇಟರ್ ಹತ್ತಿ ಅಲ್ಲೂ ಹುಡುಕಾಡಿದ್ವಿ, ಪತ್ತೆಯಿಲ್ಲ. ಈ ಕಡೆ ಅಂಗಡಿ ಹತ್ರ ನೋಡಿದರೂ ಇಲ್ಲ. ಅಲ್ಲೆ ಇದ್ದೆ ಅಂತ ಸುಳ್ಳು ಬೇರೆ’ ಅಂದರೆ ಅವನು ಕಕ್ಕಾಬಿಕ್ಕಿಯಾಗಿ ‘ಟ್ಯಾಕ್ಸಿ ಸ್ಟ್ಯಾಂಡಾ! ಅಲ್ಲಿ ಯಾವ್ದೂ ಟ್ಯಾಕ್ಸಿ ಸ್ಟ್ಯಾಂಡೇ ಇಲ್ವಲ್ಲ’ ಎಂದ. 

‘ಆ! ಟ್ಯಾಕ್ಸಿ ಸ್ಟ್ಯಾಂಡ್ ಇಲ್ವಾ! ನಮಗೇನು ಲೂಸಾ ಸುಳ್ಳಾಡಕ್ಕೆ’ ಎಂದು ನಾವು. ‘ಅಯ್ಯೋ ನಿಜ್ಜ! ಅಲ್ಲಿ ಟ್ಯಾಕ್ಸಿ ಸ್ಟ್ಯಾಂಡ್ ಇದ್ದಿದ್ರೆ ನಾನು ಯಾಕೆ ಎಲ್ಲೋ ಗಾಡಿ ನಿಲ್ಲಿಸಿ ಅಲ್ಲಿ ಕಾಯ್ತಿದ್ದೆ ಹೇಳಿ!’ ಎಂದ…

ಹೀಗೇ ನಾವು ಕಿತ್ತಾಡುವುದರಲ್ಲಿ ಆ ಹುಡುಗಿ ‘ಬಹುಶಃ ನೀವು ಮುಂದುಗಡೆ ಬಾಗಿಲಲ್ಲಿ ಕಾಯ್ತಿದ್ರಿ ಅನ್ಸತ್ತೆ’ ಎಂದಳು. ಆಗ ನಾವು ಕಣ್ಣು ಕಣ್ಣು ಬಿಡುತ್ತ ‘ಈ ಸ್ಟೇಷನ್‌ಗೆ ಎರಡು ಬಾಗಿಲಿದ್ಯಾ’ ಎಂದೆವು. ಆಗ ನಮ್ಮ ಡ್ರೈವರ್ ‘ಹೌದು. ಎರಡು ಬಾಗಿಲಿದ್ಯಲ್ಲ’ ಎನ್ನುತ್ತಾನೆ ಪುಣ್ಯಾತ್ಮ. ‘ಅಯ್ಯೊ ರಾಮ ಮೊದಲೇ ಹೇಳೋದಲ್ವಾ ಗುರೂ!’ ಅಂದೆವು.

ಒಟ್ಟಿನಲ್ಲಿ ‘ಪರಮೇಶಿ ಪ್ರಣಯ ಪ್ರಸಂಗ’ ಸಿನೆಮಾದಲ್ಲಿ ಬೇರೆ ಬೇರೆ ಕಾಮತ್ ಹೋಟೆಲ್ ಮುಂದೆ ಕಾಯುತ್ತ ನಿಂತ ರಮೇಶ್ ಭಟ್ ಮತ್ತು ಅರುಂಧತಿ ನಾಗ್ ಥರ ಇಷ್ಟು ಕಿತ್ತಾಡಿ ಮುಗಿಸಿದೆವು. ಅಲ್ಲ ನಮ್ಮ ಬೆಂಗಳೂರಿನ ರೈಲ್ವೆ ಸ್ಟೇಷನ್‌ಗೆ ಎರಡು ಬಾಗಿಲಿರುವಾಗ ಕ್ರಾಕೋವ್‌ಗೆ ಯಾಕೆ ಇರಬಾರದು! ಅಷ್ಟು ಹೊಳೆಯಬಾರದಾ ನಮಗೆ.

ಒಟ್ಟಿನಲ್ಲಿ ಏನೋ ಸಮಯ ಉಳಿಸಿ ಬಿಡುತ್ತೇವೆ ಎಂದುಕೊಂಡು ಪ್ಲ್ಯಾಟ್‌ ಫಾರಂ ಬಿಟ್ಟುಬಂದಿದ್ದಕ್ಕೆ ಸುಮಾರು ಎರಡೂವರೆ ಘಂಟೆಗೂ ಮಿಕ್ಕಿ ಸಮಯ ಹಾಳಾಗಿತ್ತು. ಆದರೆ ಸದ್ಯ ಆ ಎನ್ಕ್ವೈರಿ ಕೌಂಟರಿನ ಹೆಣ್ಣು ಮಗಳಿಂದ ಕೊನೆಗೂ ನಮ್ಮ ಸಮಸ್ಯೆ ಪರಿಹಾರವಾಗಿತ್ತು. ಆಕೆಗೆ ವಂದಿಸಿ ಹೊರಟೆವು.

ನಮ್ಮ ಹೋಟೆಲ್ತುಂಬ ಹತ್ತಿರದಲ್ಲಿದ್ದುದರಿಂದ ಆ ಡ್ರೈವರ್ ನಮ್ಮನ್ನು ಒಂದು ರೆಸಿಡೆನ್ಷಿಯಲ್ ರಸ್ತೆಯಲ್ಲಿನ ಗ್ರಾರ್ಟ್ಗೆ ಎಂಬ ಪುಟ್ಟ ಹೋಟೆಲ್ ಮುಂದೆ ನಿಲ್ಲಿಸಿ ನಮ್ಮ ಲಗೇಜ್‌ಗಳನ್ನೆಲ್ಲ ಕೆಳಗಿಳಿಸಿದವನೇ ಕ್ಷಣ ಮಾತ್ರದಲ್ಲಿ ಮಾಯವಾದ. ಆ ಹೋಟೆಲ್ಲಿನ ಬಾಗಿಲು ತಲುಪಲೇ 10-15 ಮೆಟ್ಟಿಲು. ಒಬ್ಬನೇ ಒಬ್ಬ ಸಿಬ್ಬಂದಿಯ ಸುಳಿವಿಲ್ಲ. ಇನ್ನೇನು ಮಾಡುವುದು? ಹೆಣಭಾರದ ಲಗೇಜ್‌ಗಳನ್ನು ನನ್ನ ಗಂಡ ಮತ್ತು ಮಗನೇ ಹೊತ್ತು ಸಾಗಿಸಿದರು.

ಒಳಗೆ ಹೋಗಿ ನೋಡಿದರೆ ಅದು ಮನೆಯಂಥಪುಟ್ಟ ಹೊಟೆಲ್ ಅಷ್ಟೇ.  ರಿಸೆಪ್ಷನ್ ಹಾಲ್ ಕೂಡಾ ಬಹಳ ಚಿಕ್ಕದು. ಅಲ್ಲಿದ್ದ ಕೌಂಟರ್‌ನಲ್ಲಿ ಒಬ್ಬ ಚಿಕ್ಕ ಹುಡುಗನಿದ್ದ. ಎಲ್ಲರೂ ಅವನ ಮುಂದೆ ನಮ್ಮ ಪಾಸ್‌ಪೋರ್ಟ್ ಮತ್ತು ಬುಕಿಂಗ್ ವೋಚರ್ ಅನ್ನು ಹಾಕಿ ಉಸ್ಸೆಂದು ಅಲ್ಲಿಯೇ ಕುಳಿತೆವು.

ಮೂರು ಘಂಟೆಗಳ ಕಾಲ ರೈಲ್ವೇ ಸ್ಟೇಷನ್ ತಡಕಾಡಿ ಹೆಣ ಬಿದ್ದು ಹೋಗಿತ್ತು. ಕೂತಲ್ಲಿಯೇ ಕಣ್ಣಾಡಿಸಿದರೆ ಹೋಟೆಲ್ ತುಂಬ ಶುಭ್ರವಾಗಿತ್ತು. ಖುಷಿಯಿಂದ ಮಗನಿಗೆ ಹೇಳಿದೆ. ‘ಏ ಸುಮ್ನಿರು ಅತೀಖುಷಿ ಪಡಬೇಡ. ರೂಮ್ ಹೇಗಿದೆಯೋ ನೋಡೋಣ ಮೊದಲು’ ಅಂದ.

‘ಏ ಇಷ್ಟು ಚೆಂದದ ಹೋಟೆಲ್‌ನಲ್ಲಿ ರೂಮ್ ಚೆನ್ನಾಗಿ ಇಲ್ಲದೇ ಇರುತ್ತದಾ?’ ಎಂದವಳು ಅಲ್ಲಿದ್ದ ವಿವಿಧ ಅಲಂಕಾರಿಕ ವಸ್ತುಗಳನ್ನು ನೋಡುತ್ತಾ ನಿಂತೆ. ಜ್ವರದಿಂದ ಬಳಲಿದ್ದ ದೇಹ ತುಂಬ ನಿತ್ರಾಣವಾಗಿತ್ತು. ಹೇಗೋ ಒಂದು ರೂಮ್ ಸೇರಿಕೊಂಡು ಬಿಸಿಬಿಸಿ ಕಾಫಿ ಮಾಡಿ ಕುಡಿಯಬೇಕು ಎಂದುಕೊಂಡೆ.  ವಿದೇಶಿ ಪ್ರಯಾಣಿಕರು ರೂಮ್ ಚೆಕ್ ಇನ್ ಮಾಡುವಾಗ ನೂರೆಂಟು ಡಾಕ್ಯುಮೆಂಟ್‌ಗಳನ್ನು ಕೇಳುತ್ತಾರೆ. ಹಾಗಾಗಿ ಅದೊಂದು ದೊಡ್ಡ ಕೆಲಸ ಎಲ್ಲ ಕಡೆಯೂ.

ಸರಿ ನಾವು ಹೇಗೂ ಸುಮ್ಮನೆ ನಿಂತಿದ್ದೆವಲ್ಲ, ಲಗೇಜನ್ನು ರೂಮ್ ಸೇರಿಸಿ ಬಿಟ್ಟರೆ ಬೇಗ ಸೆಟಲ್ ಆಗಿ ಕಾಫಿ ಕುಡಿಯಬಹುದು ಎಂದುಕೊಂಡೆ. ಅಷ್ಟರಲ್ಲಿ ರಾತ್ರಿ ಊಟದ ನೆನಪಾಗಿ ‘ರೆಸ್ಟೊರೆಂಟ್ ಎಲ್ಲಿ’ ಎಂದೆ. ‘ಇಲ್ಲಿ ರೆಸ್ಟೊರೆಂಟ್ ಇಲ್ಲ, ಬರೀ ಬೆಳಗಿನ ತಿಂಡಿಯಷ್ಟೇ ಸಿಗುತ್ತದೆ’ ಎಂದ ಆ ಹುಡುಗ. ಅಯ್ಯೋ ಕರ್ಮವೇ, ಇನ್ನು ಇವತ್ತು ರಾತ್ರಿಗೆ ಊರಿನಿಂದ ತಂದಿದ್ದ ಬಿಸಿಬೇಳೆ ಬಾತ್ ಅಥವಾ ಗೊಜ್ಜವಲಕ್ಕಿಯೇ ಗತಿ ಎಂದುಕೊಂಡೆ. 

ಸಾಧಾರಣವಾಗಿ ಇಂಥ ಅನಿರೀಕ್ಷಿತ ದಿನಗಳಿಗೆಂದೇ ಒಂದು ಸ್ವಲ್ಪ ಈ ತರಹದ ರೆಡಿ ಟು ಈಟ್ ಏನಾದರೂ ಕೊಂಡೊಯ್ದಿರುತ್ತೇವೆ. ಅಂಥದ್ದು ಹೇಗೋ ಎಲ್ಲೋ ಉಪಯೋಗಕ್ಕೆ ಬಂದೇ ಬರುತ್ತದೆ ಅನ್ನುವುದು ನನ್ನಅನುಭವದ ಮಾತು. ಸರಿ ರೂಮ್‍ಗೆ ಲಗೇಜ್ ಸಾಗಿಸುತ್ತೇವೆ ಕೀ ಕೊಡು ಎಂದೆವು. 

ಪುಟ್ಟ ಲಿಫ್ಟ್ ಹತ್ತಿ ಮೂರನೆಯ ಮಹಡಿಯ ಬಾಗಿಲು ತೆರೆದ ಕೂಡಲೇ ನಾನು, ನನ್ನ ಮಗ ಬವಳಿ ಬೀಳುವುದೊಂದೇ ಬಾಕಿ… ಅಷ್ಟು ಚಿಕ್ಕ ರೂಮ್. ನಮ್ಮ ರಾಕ್ಷಸಾಕಾರದ ಎರಡು ಸೂಟ್‌ಕೇಸ್ ಇಟ್ಟರೆ ನಾವು ಅದರ ಮೇಲೆ ಜಂಪ್ ಮಾಡಿ ಓಡಾಡುವಷ್ಟು ಚಿಕ್ಕ ರೂಮು.

ಜೊತೆಗೆ ಇನ್ನೊಂದು ವಿಚಿತ್ರವೇನೆಂದರೆ ವಿಚಿತ್ರ ಆಕಾರದ ತಾರಸಿ. ಯಾವುದೋ ಮೆಟ್ಟಿಲುಗಳ ಕೆಳಗೆ ರೂಮ್ ಕಟ್ಟಲ್ಪಟ್ಟಿರುವಂತೆ ಓರೆ ಕೋರೆ ತಾರಸಿ! ಅಂಚುಗಳಲ್ಲಂತೂ ನಾನು ದೇಹವನ್ನು ಅರ್ಧ ಭಾಗ ಬಾಗಿಸಿ ನಡೆಯಬೇಕು ಅಷ್ಟು ಇಳಿಜಾರು! ಹೋಗಲಿ, ರೂಮಾದರೂ ದೊಡ್ಡದಿದೆಯಾ ಅಂದರೆ ಅದೂ ಇಲ್ಲ.

ಅಲ್ಲಿದ್ದ ಆ ಕಿಷ್ಕಿಂದೆಯಲ್ಲಿ ಡಬಲ್ ಬೆಡ್ ಒಂದು. ಅದರಲ್ಲಿ ತಲೆ ಇಡುವ ಭಾಗಕ್ಕೆ ದಿಂಬನ್ನು ಒರಗಿಸಿ ಕುಳಿತುಕೊಳ್ಳುವಷ್ಟೂ ಜಾಗವಿಲ್ಲ… ತಲೆಗೆ ತಾರಸಿ ಬಡಿಯುತ್ತದೆ! ಈ ಕಡೆ ಪಕ್ಕದಲ್ಲೊಂದು ಕಾಫಿ ಟೇಬಲ್, ಇದ್ದ ಆ ಜಾಗದಲ್ಲಿ ಒಂದು ಕುರ್ಚಿ… ನಾವು ಈ ಥರದ ರೂಮನ್ನು ಜೀವಮಾನದಲ್ಲೇ ನೋಡಿರಲಿಲ್ಲ.

ಇಲ್ಲಿ ಹೇಗೆ ಜೀವಿಸುವುದು, ಅದೂ ಈ ಆಕಾರದ ನಾವು! ಐದೂ ಮುಕ್ಕಾಲು ಅಡಿಯ ನಾನು ಮತ್ತು ಆರು ಅಡಿಯ ನನ್ನ ಮಗ! ನಮ್ಮ ದೇಹ ಬಾಗಿಸಿ ನಡೆದು ಸೊಂಟವೇ ಮುರಿದು ಹೋಗಬಹುದು! ಬಾತ್‌ರೂಮ್ ಬಗ್ಗಿ ನೋಡಿದೆ… ಅದು ಮಾತ್ರ ಮಾಮೂಲು ತಾರಸಿ ಮತ್ತು ತಕ್ಕ ಮಟ್ಟಿಗೆ ದೊಡ್ಡದಾಗಿಯೂ ಇತ್ತು.

ಮತ್ತೆ ರೂಮ್ ಯಾಕೆ ಹೀಗಿದೆ ಶಿವಾ ಎಂದು ಹಿಂಸೆಯೆನಿಸಿತು. ಈ ರೂಮ್ ಕೊನೆಯದ್ದಿದ್ದುಇಷ್ಟು ಕೆಟ್ಟದಾಗಿದೆಯೇನೋ, ಇರು ಇನ್ನೊಂದು ರೂಮ್ ನೋಡೋಣ ಎಂದು ಅಲ್ಲಿಗೆ ಹೋದರೆ ಅದೂ ಇದೇ ಕತೆ. ಆ ಊರಿನಲ್ಲಿ ನಾವು 3 ದಿನ ಇರಬೇಕಿತ್ತು ಬೇರೆ. 3 ದಿನ ಆ ರೂಮ್‌ಲ್ಲಿರಬೇಕಾ! ಯೋಚನೆ ಬಂದಿದ್ದೇ ತಡ, ದಡದಡನೆ ಸೂಟ್‌ ಕೇಸ್‌ಗಳನ್ನೆಲ್ಲ ಹೊರತಳ್ಳಿ ಮತ್ತೆ ಲಾಕ್ ಮಾಡಿ ಕೆಳಗಿಳಿದು ಅವನೆದುರು ಕೀ ಇಟ್ಟು ‘ಆ ರೂಮ್ ಆಗಲ್ಲ ಕಣ್ರೀ ಬೇರೆ ರೂಮ್ಕೊಡಿ’ ಎಂದೆ.

ಅವನು ತುಂಬ ಶಾಂತವಾಗಿ ‘ಬೇರೆ ರೂಮ್ ಇಲ್ಲ ಮೇಡಂ. ಅದೇ ಇರೋದು’ ಎಂದ. ನಾನು ‘ಹೆಚ್ಚಾದ ಹಣ ನಾನು ಕೊಡ್ತೀನಿ. ಆದರೆ ಬೇರೆ ರೂಮ್ ಕೊಡು’ ಎಂದೆ.

ಅವನು ಮತ್ತಿಷ್ಟು ಶಾಂತವಾಗಿ ‘ಇಲ್ಲ, ಬೇರೆ ರೂಮ್ ಇದ್ದರಲ್ಲವಾ ಕೊಡೋದಿಕ್ಕೆ. ಎಲ್ಲವೂ ಬುಕ್ ಆಗಿದೆ. ಇದರಲ್ಲೇ ಇರಬೇಕು’ ಅಂದ.

ನನಗೆ ಸಿಟ್ಟು ನೆತ್ತಿಗೇರಿ ಬಿಟ್ಟಿತು…

ಈ ರೂಮಲ್ಲಿ ಹೇಗಯ್ಯಾ ಇರೋದು

ನನ್ನ ಸೊಂಟ ಮುರಿದೋಗತ್ತೆ

ಅಷ್ಟು ಕೆಟ್ಟದಾಗಿದೆ ಅಷ್ಟು ಚಿಕ್ಕದಾಗಿದೆ

ಏನು ಕಡಿಮೆ ದುಡ್ಡಾ ತಗೊಂಡಿದೀಯಾ

ಆಗಲ್ಲ ಅಂದ್ರೆ ಆಗಲ್ಲ

ಬೇರೆ ಕೊಡು ಕೂಗಾಡಿದೆ…

ಆಡಿದೆ… ಆಡಿದೆ…

ಅವನು ಎಲ್ಲ ಮುಗಿದ ಮೇಲೆ ಅತ್ಯಂತ ಶಾಂತನಾಗಿ ‘ನಿಮ್ಮ ಸಮಸ್ಯೆ ಎಲ್ಲ ಅರ್ಥವಾಗ್ತದೆ, ಆದರೆ ಬೇರೆ ರೂಮ್ ಇಲ್ಲ ಮೇಡಂ’ ಎಂದ! ಜ್ವರ ಬೇರೆ ಸಣ್ಣಗೆ ಶುರುವಾಗಿತ್ತು. ಹಸಿವು ಬೇರೆ.

ಎಲ್ಲ ಸೇರಿಕೊಂಡು ‘ನಿಮ್ಮ ಮ್ಯಾನೇಜರ್ ನಂಬರ್ ಕೊಡು’ ಅಂದೆ. ‘ಅವರು ಊರಲ್ಲಿಲ್ಲ’ ಎಂದ.

ಅಯ್ಯೋ ಮೈ ಪರಚಿಕೊಳ್ಳುವಂತಾಯ್ತು. ‘ನೋಡು ಅದ್ಯಾರಿಗೆ ಹೇಗೆ ಕೇಳ್ತೀಯೋ ನನಗೆ ಗೊತ್ತಿಲ್ಲ. ಒಟ್ಟಿನಲ್ಲಿ ನನಗೆ ಬೇರೆ ರೂಮ್ ಬೇಕು. ಇಲ್ಲಿರಕ್ಕಾಗಲ್ಲ. ಆಗಲ್ಲ ಅಂದರೆ ಹೇಳು ಬೇರೆ ಕಡೆ ಹೋಗ್ತೀನಿ ನಾನು ರೂಮ್ ಮಾಡ್ಕೊಂಡು’ ಅಂತ ಆವಾಜ಼್ಹಾಕಿ ಅಲ್ಲಿದ್ದ ಸೋಫಾ ಮೇಲೆ ಕುಳಿತುಬಿಟ್ಟೆ ‘ಮಾತಾಡಿ ಹೇಳು ಅಲ್ಲಿಯವರೆಗೂ ಇಲ್ಲೇ ಇರ್ತೀನಿ’ ಎಂದು ವಾರ್ನಿಂಗ್ ಕೊಟ್ಟು.

ಏನು ನಮ್ಮೂರು ನೋಡಿ ಆ ರಾತ್ರಿಯಲ್ಲಿ ಬೇರೊಂದು ಹೋಟೆಲ್ ಹುಡುಕಕ್ಕೆ! ಆದರೂ might is right ಅನ್ನುವ ನನ್ನ ಎಂದಿನ ಉಪಾಯ ಅನುಸರಿಸಿ ಕುಳಿತುಬಿಟ್ಟೆ. ನಾನು ಈ ರೀತಿ ಭಂಡತನ ತೋರಿಸಿ ಸಾಕಷ್ಟು ಕಡೆಯಲ್ಲಿ ಗೆದ್ದಿರುವುದರಿಂದ ಇಲ್ಲಿಯೂ ಜಯ ಸಿಕ್ಕೇ ಸಿಗುತ್ತದೆ ಅನ್ನುವಭರವಸೆ ಇತ್ತು…

। ಮುಂದಿನ ವಾರಕ್ಕೆ ।

‍ಲೇಖಕರು ಬಿ ವಿ ಭಾರತಿ

October 13, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: