ಹತ್ರಾಸ್ ಅತ್ಯಾಚಾರ ಪ್ರಕರಣದ ಸುತ್ತಮುತ್ತ…..

ಮ ಶ್ರೀ ಮುರಳಿ ಕೃಷ್ಣ

ನ್ಯಾಶನಲ್ ಕ್ರೈಂ ರೆಕಾರ್ಡ್ ಬ್ಯೂರೊ ಅನ್ವಯ ನಮ್ಮ ದೇಶದಲ್ಲಿ ಕಳೆದ ವರ್ಷ ಪ್ರತಿ ದಿನ ಸರಾಸರಿ ಹತ್ತು ದಲಿತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಜರುಗಿದೆ. ರಾಜಾಸ್ಥಾನ, ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶ ರಾಜ್ಯಗಳಲ್ಲಿ ಕ್ರಮವಾಗಿ 554, 537 ಮತ್ತು 510 ಇಂತಹ ಪ್ರಕರಣಗಳು ನಡೆದಿವೆ ಎಂದು ವರದಿಯಾಗಿದೆ. 

2019ರಲ್ಲಿ ಮಹಿಳೆಯರ ಮೇಲಿನ ಅಪರಾಧಗಳ ಸಂಖ್ಯೆ 4 ಲಕ್ಷಕ್ಕಿಂತಲೂ ಹೆಚ್ಚಿದ್ದವು.  ಅದರ ಹಿಂದಿನ ವರ್ಷ ಈ ಸಂಖ್ಯೆ 3.78 ಲಕ್ಷದಷ್ಟಿದ್ದವು.  ಅಂದರೆ ಒಂದು ವರ್ಷದಲ್ಲಿ ಶೇ 7.3 ರಷ್ಟು ಹೆಚ್ಚಳ ಕಂಡು ಬಂದಿರುವುದು ಒಂದು ಕಳವಳಕಾರಿ ಸಂಗತಿಯೇ ಸರಿ.

ಹತ್ರಾಸ್ ಸಮೀಪದ ಬೂಲ್ಗರ್ಹಿ ಹಳ್ಳಿಯಲ್ಲಿ ಸೆಪ್ಟಂಬರ್ 14ರಂದು ಜರುಗಿದ ವಾಲ್ಮೀಕಿ ದಲಿತ ಸಮುದಾಯದ 19 ವರ್ಷದ ಯುವತಿಯ ಮೇಲೆ ಜರುಗಿದ ಅತ್ಯಾಚಾರದ (ಮಾಧ್ಯಮದಲ್ಲಿ ವರದಿಯಾದಂತೆ) ವಿರುದ್ಧ ಅಲ್ಲಲ್ಲಿ ಪ್ರತಿಭಟನೆಗಳ ಧ್ವನಿಗಳು ಎದ್ದಿವೆ. ದೇಶದಾದ್ಯಂತ ಅವು ಕೇಳಿ ಬಂದಿಲ್ಲ. 

ಇದಕ್ಕೆ ಕಾರಣ-ಕೊರೋನಾ ರೋಗಾಣು ಉಂಟುಮಾಡಿರುವ ದುರಿತ ಕಾಲದ ಪರಿಣಾಮವಿರಬಹುದೇ? ಅಥವಾ ಇಲ್ಲೂ ಜಾತಿಯ ಆಯಾಮ ಕೆಲಸ ಮಾಡಿರಬಹುದೇ? ಈ ತರಹದ ಪ್ರಕರಣ ನಮ್ಮ ದೇಶದ ದೊಡ್ಡ ಮೆಟ್ರೋಪಾಲಿಟನ್ ನಗರಗಳಲ್ಲಿ ಜರುಗಿದ್ದರೇ, ಬೇರೆ ತೆರನಾದ ಸ್ಪಂದನ ದೊರಕುತ್ತಿತ್ತೇ? 

ಸುಮಾರು ಹದಿನಾಲ್ಕು ವರ್ಷಗಳ ಹಿಂದೆ ಮಹಾರಾಷ್ಟ್ರದ ಖೈರ್‍ಲಾಂಜಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಭೊಟ್‍ಮಾಂಗೆ  ಕುಟುಂಬಕ್ಕೆ ಸೇರಿದ ತಾಯಿ, ಮಗಳು ಮತ್ತು ಅಪ್ರಾಪ್ತ ವಯಸ್ಸಿನ ಇಬ್ಬರು ಗಂಡು ಮಕ್ಕಳನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಲಾಯಿತು. ನಂತರ ಗಂಡು ಮಕ್ಕಳು ತಮ್ಮ ತಾಯಿಯ ಮೇಲೆ ಅತ್ಯಾಚಾರ ಮಾಡುವಂತೆ ಬಲಾತ್ಕರಿಸಲಾಯಿತು. ಇದಕ್ಕೆ ಅವರು ಸೊಪ್ಪು ಹಾಕಲಿಲ್ಲ. 

ನಾಲ್ವರ ಮರ್ಮಾಂಗಳ ಮೇಲೆ ಪ್ರಹಾರ ಮಾಡಲಾಯಿತು. ಅವರು ಮಾರಣಾಂತಿಕ ಹಲ್ಲೆಗೆ ಒಳಪಟ್ಟರು. ತರುವಾಯ ಅವರ ದೇಹಗಳನ್ನು ಸಮೀಪದಲ್ಲಿದ್ದ ನಾಲೆಯೊಳಗೆ ಎಸೆಯಲಾಯಿತು.  ನಂತರ 2012ರಲ್ಲಿ ದೆಹಲಿಯಲ್ಲಿ ನಿರ್ಭಯಾ ಗ್ಯಾಂಗ್ ರೇಪ್ ಕೇಸ್ ಜರುಗಿತು. ಆದರೆ ವರ್ಷದಿಂದ ವರ್ಷಕ್ಕೆ ಮಹಿಳೆಯರ ಮೇಲೆ ಅದರಲ್ಲೂ ದಲಿತ ಮಹಿಳೆಯರ ಮೇಲೆ ಅತ್ಯಾಚಾರಗಳು ವೃದ್ಧಿಸುತ್ತಲೇ ಇವೆ.

ಕೆಲವು ಸಾಮಾಜಿಕ ವಿಶ್ಲೇಷಣಾಕಾರರು ಮಹಿಳೆಯರ ಮೇಲೆ ಜರಗುವ ಅತ್ಯಾಚಾರಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಕೆಲವು ಕಾರಣಗಳನ್ನು ನೀಡುತ್ತಾರೆ: ಅ)ಇವು ಮೇಲ್ವರ್ಗದ ದಮನಕಾರಿ ಮನೋಭಾವದಿಂದ ಜರಗುತ್ತವೆ.  ನಮ್ಮ ದೇಶದ ಅನೇಕ ಭಾಗಗಳಲ್ಲಿ ಪ್ರಸ್ತುತ ಕಾಲದಲ್ಲೂ ಅರೆ-ಊಳಿಗಮಾನ್ಯ ವ್ಯವಸ್ಥೆಯಿದೆ.  ಇದರಲ್ಲಿ ನಡೆಯುವ ವರ್ಗ ಸಂಘರ್ಷಗಳ ಕಾರಣದಿಂದ ತಳಸ್ತರದ ಮಹಿಳೆಯರ ಮೇಲೆ ಅತ್ಯಾಚಾರಗಳು ಜರಗುತ್ತವೆ. ಆ) ಜಾತಿ ಶ್ರೇಣಿಕರಣ/ಶ್ರೇಷ್ಠತೆಯ ದಬ್ಬಾಳಿಕೆಯ ಪ್ರವೃತ್ತಿಯಿಂದ ಇವು ಜರಗುತ್ತವೆ. 

ದಲಿತ ಹೆಣ್ಣು ಮಕ್ಕಳ ಮೇಲೆ ನಡೆಯುವ ಹೆಚ್ಚಿನ ಅತ್ಯಾಚಾರಗಳು ಇದೇ ಬಗೆಯವು. ಆದರೆ ಇವುಗಳಲ್ಲಿ ವರ್ಗದ ಆಯಾಮವೂ ಇರುತ್ತದೆ ಇ) ಪುರುಷಾಧಿಪತ್ಯದ, ಪಿತೃಪ್ರಧಾನತೆಯ ಹಿನ್ನೆಲೆಯಲ್ಲಿ ಅತ್ಯಾಚಾರಗಳು ಜರಗುತ್ತವೆ.  ಈ) ನಮ್ಮ ದೇಶದಲ್ಲಿ ಕಂಡು ಬರುವ ತೀವ್ರ ಅಸಮಾನತೆ(ವಿವಿಧ ರೀತಿಗಳ)ಯ ಕಾರಣದಿಂದ ಅತ್ಯಾಚಾರಗಳು ನಡೆಯುತ್ತವೆ.  ಉ) ಮನೋವೈಜ್ಞಾನಿಕ ಸಮಸ್ಯೆಗಳಿಂದ ಕೂಡ ಇವು ಜರಗುತ್ತವೆ.

ನಮ್ಮ ಸಾಮಾಜಿಕ ಸಂರಚನೆಯಲ್ಲಿ ದಲಿತರು ಅತ್ಯಂತ ಕೆಳಗಿನ ಹಂತದಲ್ಲಿದ್ದಾರೆ.  ಗ್ರಾಮೀಣ ಮತ್ತು ನಗರ ಪ್ರದೇಶಗಳ ದಲಿತರು ಎದುರಿಸುತ್ತಿರುವ ಬಗೆ ಬಗೆಯ ಶೋಷಣೆಗಳಲ್ಲಿ ವ್ಯತ್ಯಾಸಗಳಿವೆ.  ಗ್ರಾಮೀಣ ಪ್ರದೇಶಗಳಲ್ಲಿ ದಲಿತರು ಒಂದು ಹಂತದ ಆರ್ಥಿಕ ಪ್ರಗತಿಯನ್ನು ಪಡೆದು, ಭೂಒಡೆಯರಾದರೇ ಅವರ ಮೇಲೆ ಮೇಲ್ವರ್ಗದ, ಮೇಲ್ಜಾತಿ ಮಂದಿಯ ಕೆಂಗಣ್ಣು ಬೀರಲ್ಪಡುತ್ತವೆ; ಶೋಷಣೆ ಶುರುವಾಗುತ್ತದೆ. 

ಇದಕ್ಕೆ ಸಂಬಂಧಿಸಿದ ಕಾರ್ಯಾಚರಣೆಗಳಲ್ಲಿ ಅತ್ಯಾಚಾರ ಒಂದು ಪ್ರಬಲ, ಅಮಾನವೀಯ ಅಸ್ತ್ರವನ್ನಾಗಿ ಬಳಸಲಾಗುತ್ತದೆ. ಒಂದು ವರದಿಯ ಅನ್ವಯ ಹತ್ರಾಸ್‍ನಲ್ಲಿ ಜರುಗಿದ ಅತ್ಯಾಚಾರ ಪ್ರಕರಣದ ಹಿಂದೆ ಇದೇ ಕಾರಣವಿದೆ.

ಹತ್ರಾಸ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಸ್ವಾನುಭವದ ವೃತ್ತಾಂತವನ್ನು ತಿಳಿಸುತ್ತೇನೆ. 

ನನಗೆ ಪರಿಚಯವಿರುವ ಒಬ್ಬ ಸುಶಿಕ್ಷಿತ ಉಪನ್ಯಾಸಿಕಿಗೆ ಈ ವಿಷಯದಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಿದೆ:  “ಹತ್ರಾಸ್, ಬಲರಾಂಪುರ್ ಇತ್ಯಾದಿ ಸ್ಥಳಗಳಲ್ಲಿ ದಲಿತ ಹೆಣ್ಣು ಮಕ್ಕಳ ಮೇಲೆ ಬರ್ಬರವಾಗಿ ಅತ್ಯಾಚಾರಗಳಾಗಿವೆ. ಇವುಗಳ ಬಗೆಗೆ ನಿಮ್ಮ ನಿಲುವೇನು? ಇಂತಹ ವಿಷಯಗಳ ಬಗೆಗೆ ಹೇಗೆ ಪ್ರತಿಕ್ರಿಯಿಸುವಿರಿ? ಇದುವರೆಗೆ ಇಂತಹ ಅಮಾನವೀಯ ಘಟನೆಗಳ ವಿರುದ್ಧದ ಸಾಮೂಹಿಕ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದೀರಾ? ಆಗಾಗ್ಗೇ ನೀವು ಹೇಳುವ ಭಾರತಾಂಬೆಯ ಮೇಲೆ ಎರಚುವ ಕರಿ ಮಸಿಯಲ್ಲವೇ ಇಂತಹ ಘಟನೆಗಳು?”

ಅವರ ಉತ್ತರ: “ ಹಿಂದೂ(ದಲಿತರು +ಇತರರು) ಮುಗ್ಧ ಹೆಣ್ಣು ಮಕ್ಕಳ ಅತ್ಯಾಚಾರ, ಇಂತಹವರಿಗೆ ಆಮಿಷವನ್ನು ಒಡ್ಡಿ, ಮಗು ಮಾಡುವ ಯಂತ್ರಗಳನ್ನಾಗಿ ಮಾಡಿ, ವರಾತದಿಂದ ಭೋಗವಸ್ತುಗಳಾಗಿ ಮಾರ್ಪಾಡು ಮಾಡುತ್ತಿರುವುದರ ಹಿಂದೆ ಒಂದು ಬಲವಾದ ಕೈವಾಡವಿದೆ!  ಇದನ್ನು ಬುಡ ಸಮೇತ ತೆಗೆದು, ದಹನ ಮಾಡಬೇಕು, ಇದರಲ್ಲಿ ಎಲರ ಜವಾಬ್ದಾರಿಯೂ ಇದೆ…” ಎಂದರು.

ನಾನು ಪ್ರತಿಕ್ರಿಯಿಸುತ್ತ “ ಮೇಡಂ, ನೀವು ನನ್ನ ಪ್ರಶ್ನೆಗಳಿಗೆ ಪೂರ್ಣವಾಗಿ ಉತ್ತರವನ್ನು ನೀಡಿಲ್ಲ..ಇರಲಿ..ನಿಮ್ಮ ಅಂಬೋಣ..…ಹಿಂದೂ ಹೆಣ್ಣು ಮಕ್ಕಳ ಅತ್ಯಾಚಾರ…ನಿಮ್ಮ ಪ್ರಕಾರ ಬರಿ ಇವರು ಮಾತ್ರ ಅತ್ಯಾಚಾರಕ್ಕೆ ಒಳಗಾಗುತ್ತಿರುವರೇ? ಬೇರೆ ಮತದವರ ಮೇಲೂ ಆಗುತ್ತಿಲ್ಲವೇ? ಮುಗ್ಧ ಹೆಣ್ಣು ಮಕ್ಕಳಿಗೆ ಆಮಿಷವನ್ನು ಒಡ್ಡುವುದು ಎಂದರೆ ಏನು?” ಎಂದು ಪ್ರಶ್ನಿಸಿದೆ.

“ಅಸಹಾಯಕ ಹಿಂದೂ ಹೆಣ್ಣು ಮಕ್ಕಳಿಗೆ ಧನದ, ಪ್ರೀತಿ, ಪ್ರೇಮವೆಂಬ ಆಮಿಷವನ್ನು ಒಡ್ಡಿ ಕಾಮುಕ ಜಾಲಕ್ಕೆ ಎಳೆಯುತ್ತಿರುವ ಇಂತಹ ಘಟನೆಗಳು, ಅತ್ಯಾಚಾರಗಳು, ಎಲ್ಲದರ ಹಿಂದೆ ಒಂದು ದೊಡ್ಡ ವ್ಯೂಹವೇ ಇದೆ.  ಅದನ್ನು ಬುಡ ಸಮೇತ ಕಿತ್ತೊಗೆಯಬೇಕು.. ಬೇರೆಯವರ ಮೇಲೂ ಆಗಿರಬಹುದು.!  ಆದರೆ ಅತಿ ವಿರಳ..ಬೆರಳೆಣಿಕೆಯಷ್ಟು ಇರಬಹುದು..! ’’ ಎಂದು ಸ್ಪಷ್ಟೀಕರಣವನ್ನು ನೀಡಿದರು! 

ತರುವಾಯ, ನಾನು ಅವರನ್ನು ನೇರವಾಗಿ ಪ್ರಶ್ನಿಸಿದೆ “ ಇಲ್ಲಿ ನೀವು ಲವ್ ಜಿಹಾದ್ ಪ್ರಸ್ತಾಪವನ್ನು ಪರೋಕ್ಷವಾಗಿ, ಬೇಕಂತಲೇ ಮಾಡುತ್ತಿರುವರೇನೋ? ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೊದ ವರದಿಗಳನ್ನು ಪರಾಂಬರಿಸಿ… ಬೇರೆಯವರ ಮೇಲೆ ಬೆರಳೆಣಿಕೆಯಷ್ಟು ಇರಬಹುದು ಎಂದಿರಿ.  ಇದಕ್ಕೆ ನಿಮ್ಮ ಬಳಿ ಆಧಾರ ಏನಾದರೂ ಇದ್ದರೇ, ತಿಳಿಸಿ…”.  ಇದಕ್ಕೆ ಬಂದ ಉತ್ತರ “ ಅಂಗೈ ಹುಣ್ಣಿಗೆ ಕನ್ನಡಿ ಬೇಕೇ?”.  ಇಲ್ಲಿಗೆ ವಾಟ್ಸಪ್ಪ್‍ನಲ್ಲಿ ನಡೆದ ಈ ಸಂಭಾಷಣೆ ಮುಗಿಯಿತು.

ಮೇಲೆ ಪ್ರಸ್ತಾಪಿಸಿರುವ ಈ ಮೇಲ್ವರ್ಗದ, ಮೇಲ್ಜಾತಿಯ  ಉಪನ್ಯಾಸಕಿ ಕಂಫರ್ಟ್ ಝೋನ್‍ನಲ್ಲಿ ಇರುವಾಕೆ. ಯಾವ ಬಗೆಯ ಸಮಷ್ಠಿ ಹಿತದ ಹೋರಾಟಗಳಲ್ಲಿ/ಪ್ರತಿಭಟನೆಗಳಲ್ಲಿ ಆಕೆ ಭಾಗವಹಿಸಿಲ್ಲ. ಇಂತಹ ಅಸಂಖ್ಯಾತ ಮಂದಿ ನಮ್ಮ ನಡುವೆ ಇದ್ದಾರೆ.  ಇವರ ವಿವೇಚನಾರಹಿತ ದೃಷ್ಟಿಕೋನಗಳು, ದಿವ್ಯ ಮೌನ ಇತ್ಯಾದಿ ಅತ್ಯಾಚಾರಗಳಂತಹ ಅಮಾನವೀಯ ಕೃತ್ಯಗಳಿಗೆ ಒಂದರ್ಥದಲ್ಲಿ ಕುಮ್ಮಕ್ಕು ನೀಡುವುದಿಲ್ಲವೇ?

ನಮ್ಮಲ್ಲಿ ಎಂದು ಪ್ರಜ್ಞಾವಂತ, ಆತ್ಮಾವಲೋಕನ ಮಾಡುವ ನಾಗರಿಕರ ಸಂಖ್ಯೆ ಹೆಚ್ಚಾಗುತ್ತದೆಯೋ, ಅಂದು ಮಹಿಳೆಯರ ಮೇಲಿನ ಅತ್ಯಾಚಾರಗಳಂತಹ ಹೀನ ಕೃತ್ಯಗಳು ಕಡಿಮೆಯಾಗುವುದೇನೋ?

‍ಲೇಖಕರು Avadhi

October 13, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಚಂದ್ರಪ್ರಭ ಕಠಾರಿ

    ದೇಶವನ್ನು ಬೆಚ್ಚಿ ಬೀಳಿಸಿದ ಮತ್ತೊಂದು ಹೆಣ್ಣಿನ ಮೇಲಿನ ಅತ್ಯಾಚಾರ ಹತ್ರಾಸ್ ಪ್ರಕರಣ. ಲೇಖನ ಪ್ರಸ್ತುತವಾಗಿದೆ ಮತ್ತು ಲೇಖಕರರು ಹೇಳಿದಂತೆ ದೇಶಾದ್ಯಾಂತ ಭುಗಿಲೇಳ ಬೇಕಿದ್ದ ಪ್ರತಿಭಟನೆಗಳು ಅಷ್ಟಾಗಿ ಕಾಣಲಿಲ್ಲ. ಕೊರೊನಾ ಒಂದು ಕಾರಣವಿರಬಹುದಾದರೂ, ಆಳುವ ಸರ್ಕಾರವನ್ನು ಅಪ್ಪಿ ಕೊಂಡ ಜನರ ಚರ್ಮ ದಪ್ಪದಾಗಿರಬಹುದು ಅಥವಾ ಅತ್ಯಾಚಾರಕ್ಕೊಳಗಾದ ಮುಗ್ಧ ಹುಡುಗಿ ದಲಿತಳು ಎನ್ನುವ ಕಾರಣವನ್ನು ಅಲ್ಲಗೆಳೆಯುವಂತಿಲ್ಲ. ಅದಕ್ಕೆ ಲೇಖಕರು ಸಂವಾದಿಸುವ ಮೇಲ್ವರ್ಗದ, ಸುಶಿಕ್ಷಿತ ಮಹಿಳೆಯ ದೃಷ್ಟಿಕೋನವೇ ಸಾಕ್ಷಿ ಮತ್ತು ಅದು ಭಾರತದ ಸುಶಿಕ್ಷಿತ ಮಧ್ಯಮವರ್ಗವನ್ನು ಪ್ರತಿನಿಧಿಸುವಂತಿದೆ. ಬೇಟಿ ಬಚಾವ್ ಬೇಟಿ ಪಡಾವ್ ಎಂದು ಹೆಣ್ಣುಮಕ್ಕಳ ಬಗ್ಗೆ ಭಾರೀ ಕಾಳಜಿಯಿದೆಯೆಂದು ಕೋಟಿಗಟ್ಟಲೆ ಜನರ ದುಡ್ಡನ್ನು ಪ್ರಚಾರಕ್ಕಾಗಿ ಖರ್ಚು ಮಾಡುವ ಆಳುವ ಕೇಂದ್ರ ಸರ್ಕಾರ, ತನ್ನದೇ ಬಿಜೆಪಿ ಪಕ್ಷದ ಯೋಗಿ ಸರ್ಕಾರದ ಬಗ್ಗೆ ಚಕಾರವೆತ್ತದಿರುವುದು, ಅದರ ಅಷಾಢಭೂತಿತನವನ್ನು ಎತ್ತಿ ತೋರಿಸುತ್ತಿದೆ. ಅಲ್ಲದೆ ಆರೋಪಿಗಳನ್ನು ಶತಾಯಗತಾಯ ಬಚಾವು ಮಾಡಲು ಪಣ ತೊಟ್ಟಂತೆ ಘಟನೆಗಳು ನಡೆಯುತ್ತಿರುವುದನ್ನು ನೋಡಿದರೆ, ಹೆಣ್ಣಿನ ಬಗ್ಗೆ ಪೂಜ್ಯ ಭಾವನೆ, ಲೊಟ್ಟೇ ಲೊಸಕು ಹೇಳುವ, ನಮ್ಮ ದೇಶ ಸಾಗುತ್ತಿರುವ ದಿಶೆ ನೋಡಿದರೆ ಆತಂಕಕಾರಿಯಾಗಿದೆ. ಲೇಖಕರು ಹೇಳಿರುವಂತೆ ಎಲ್ಲಿಯವರೆಗೂ ಪ್ರಜ್ಞಾವಂತ, ಸುಶಿಕ್ಷಿತ ಎನಿಸಿಕೊಂಡ ನಾಗರೀಕರು ಸಂವೇದನಾಶೀಲರಾಗುವುದಿಲ್ಲವೋ ಮತ್ತು ಜಾತಿ, ಮತ, ವರ್ಗಗಳ ಪೂರ್ವಾಗ್ರಹಗಳಿಂದ ಆಚೆ ಬಂದು ಯಾವುದೇ ಹೆಣ್ಣಿನ ಅತ್ಯಾಚಾರವನ್ನು ತಮ್ಮ ಮನೆಯ ಹೆಣ್ಣುಮಕ್ಕಳಿಗಾದ ಪ್ರಕರಣವೆಂದು ಪರಿಗಣಿಸಿ ಪ್ರತಿಭಟಿಸುವುದಿಲ್ಲವೋ ಅಲ್ಲಿಯವರೆಗೂ ಮೈ ಮೇಲೆ ಎಚ್ಚರವಿದ್ದರೂ ಮಲಗಿದಂತೆ ನಟಿಸುತ್ತಿರುವ ಸರ್ಕಾರದಿಂದ ಏನನ್ನು ನಿರೀಕ್ಷಿಸಲಾಗದು….

    ಪ್ರತಿಕ್ರಿಯೆ
  2. ಮ ಶ್ರೀ ಮುರಳಿ ಕೃಷ್ಣ

    ನನ್ನ ಬರಹವನ್ನು ಪ್ರಕಟಿಸಿದ್ದಕ್ಕೆ ಹಾರ್ದಿಕ ಧನ್ಯವಾದಗಳು…

    ಪ್ರತಿಕ್ರಿಯೆ
  3. ಮ ಶ್ರೀ ಮುರಳಿ ಕೃಷ್ಣ

    ಧನ್ಯವಾದ ಕಠಾರಿಯವರೇ…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: