ಎಡವಟ್ಟಣ್ಣಯ್ಯನ ಊರಿನಲ್ಲಿ…

ಬಿ ವಿ ಭಾರತಿ ಅವರ ʼಶೋವಾ ಎನ್ನುವ ಶೋಕ ಗೀತೆʼ ಅಂಕಣದಲ್ಲಿ ಪೋಲೆಂಡ್ ನಲ್ಲಿ ನಿಟ್ಟುಸಿರ ಪಯಣ ಕುರಿತ ಅನುಭವಗಳನ್ನು ಹಂಚಿಕೊಂಡಿದ್ದಾರೆ.

। ಕಳೆದ ಸಂಚಿಕೆಯಿಂದ ।

ಕ್ರಾಕೋವ್‌‌ ಅಂದರೆ ಸಣ್ಣ ಊರಿರಬಹುದೆಂದು ತಿಳಿದಿದ್ದು ತಪ್ಪಾಗಿತ್ತು. ರೈಲು ನಿಲ್ದಾಣನಲ್ಲಿ 6.30ಕ್ಕೆ ಇಳಿದಾಗ ಅದರ ವಿಸ್ತಾರ ಕಂಡು ಬೆರಗಾದೆ.

ಗಿಜಿಗುಡುವ ರೈಲ್ವೇ ಸ್ಟೇಷನ್‌ ನಲ್ಲಿ ಜನರ ಮಧ್ಯೆ ಜಾಗ ಮಾಡಿಕೊಂಡು ಹೊರಬಂದಾಗ ದೊಡ್ಡ ಸಾಹಸ ಮಾಡಿದಂತೆನಿಸಿತ್ತು. ನಮ್ಮ ಟ್ರಾವೆಲ್ಸ್‌ ನವರು ಅಲ್ಲೆಲ್ಲಾದರೂ ಬೋರ್ಡ್ ಹಿಡಿದು ನಿಂತಿರಬಹುದು ಎಂದೆಣಿಸಿ ನೋಡಿದರೆ ಯಾರ ಸುಳಿವೂ ಇಲ್ಲ.

ತೆಪ್ಪಗೆ ಅಲ್ಲೇ ನಿಂತು ಕಾಯಬೇಕು ತಾನೇ ನಾವು ಬೃಹಸ್ಪತಿಗಳು? ಮಹಾ ಸಮಯ ಉಳಿಸಿಬಿಡುವವರಂತೆ ‘ನಿಂತೇನು ಮಾಡುವುದು? ಹೆಜ್ಜೆ ಹಾಕೋಣ ಸ್ವಲ್ಪ’ ಎಂದುಕೊಳ್ಳುತ್ತ ನಡೆದೆವು.

ನಮ್ಮ ರೈಲು ನಿಲ್ಲಿಸಿದ ಪ್ಲ್ಯಾಟ್‌‌ ಫಾರಂ ಮುಗಿದು ಹೋಯಿತು. ಹಾಗೆಯೇ ಎಕ್ಸಿಟ್ ಬೋರ್ಡ್‌ನ ಜಾಡನ್ನು ಹಿಡಿದು ನಡೆಯಲು ಶುರು ಮಾಡಿದೆವು. ನನ್ನ ಗಂಡನಿಗೆ ಸ್ವಲ್ಪ ಆತುರ ಜಾಸ್ತಿ. ಕೊನೆಗೆ ಆ ಜಾಗ ಬಿಡುವುದು ನಮ್ಮ ಜೊತೆಗೇ ಎಂದು ತಿಳಿದಿದ್ದರೂ ಬುಡಬುಡನೆ ಓಡುತ್ತಿರುವುದು ಅವನ ಅಭ್ಯಾಸ. ಹಾಗೆಯೇ ಇವತ್ತೂ ಓಡಿದ.

ನಾವು ನಿಧಾನವಾಗಿ ಲಗೇಜ್ ಎಳೆಯುತ್ತ ಲಿಫ್ಟ್‌ನ ಬಳಿ ಬರುವುದರಲ್ಲಿ ನನ್ನ ಗಂಡ ಅದರಲ್ಲಿ ನುಸುಳಿ ಆಗಿತ್ತು. ಸರಿ, ನಾವು ಮುಂದಿನ ಸಲಕ್ಕೆ ಹೋದರಾಯಿತು ಎಂದೆಣಿಸಿ ಕಾಯುತ್ತ ನಿಂತೆವು. ಒಂದೆರಡು ನಿಮಿಷಗಳಲ್ಲಿ ಲಿಫ್ಟ್ ಬಂತು. ಹೆಣಭಾರದ ಲಗೇಜುಗಳನ್ನು ಅದಕ್ಕೆ ತುಂಬಿಸಿ ಒಂದು ಮಹಡಿ ಕೆಳಗಿಳಿದೆವು.

ಅದು ಗ್ರೌಂಡ್ ಫ್ಲೋರ್ ಎಂದು ತೋರಿಸುತ್ತಿತ್ತು. ಇಳಿದು ಆಚೆ ಬಂದು ಸುತ್ತ ಕಣ್ಣಾಡಿಸಿದರೆ ನನ್ನ ಗಂಡನ ಸುಳಿವೇ ಇಲ್ಲ. ಎಲ್ಲೋ ಅಲ್ಲೇ ಇರುತ್ತಾನೆ, ಬರುತ್ತಾನೆ ಎಂದು ಲಗೇಜ್ ಒಂದು ಕಡೆ ಇಟ್ಟು ನಿಂತೆವು. ಐದು ನಿಮಿಷವಾಯಿತು, ಹತ್ತು ನಿಮಿಷವಾಯಿತು, ಹದಿನೈದಾಯಿತು… ಆಸಾಮಿಯ ಸುಳಿವಿಲ್ಲ.

ನಮಗೆ ಸಣ್ಣ ಅಸಹನೆ ಶುರುವಾಯಿತು. ‘ತೆಪ್ಪಗೆ ನಮಗೆ ಕಾಯಲೇನು ಗುನುಗು?’ ಎಂದು ಬಯ್ದುಕೊಳ್ಳುತ್ತ ನಿಂತೆವು. ಸುಮಾರು ಅರ್ಧ ಘಂಟೆಯಾದರೂ ಬರದೇ ಹೋದಾಗ ನನ್ನ ಮಗ ನಮ್ಮನ್ನು ಅಲ್ಲೇ ನಿಂತಿರಲು ಹೇಳಿ ತಾನು ಅಪ್ಪನನ್ನು ಹುಡುಕಿ ಹೊರಟ. ನಾವು ಅಲ್ಲೇ ನಿಂತಿರದೇ ಇನ್ನೇನು ಓಡಿಹೋಗಲು ಸಾಧ್ಯವಾ ಆ ಲಗೇಜುಗಳನ್ನು ಹೊತ್ತುಕೊಂಡು?! ಎಂದು ಬಯ್ದುಕೊಳ್ಳುತ್ತಾ ಅಲ್ಲೇ ನಿಂತೆವು.

ಹಾಗೆ ಹೊರಟ ಮಗನದ್ದೂ ಸುಳಿವಿಲ್ಲ! ಐದು, ಹತ್ತು ನಿಮಿಷ ಕಳೆದರೂ ಅವನದ್ದೂ ಸುಳಿವಿಲ್ಲ. ಇದೇನು ನಡೆಯುತ್ತಿದೆ ಇಲ್ಲಿ ಎಂದು ಗಾಬರಿಯಾದೆವು. ಇವರಿಬ್ಬರನ್ನೂ ಹುಡುಕಿ ಇನ್ನು ನಾನು ಹೋಗಲೇಬಾರದು, ಏನಾದರೂ ಮಾಡಿಕೊಳ್ಳಲಿ ಎಂದು ಅಲ್ಲಿಯೇ ನಿಂತುಬಿಟ್ಟೆವು.

ಅದೆಷ್ಟು ಸಮಯ ಹಾಗೇ ನಿಂತಿದ್ದೆವೋ ಗೊತ್ತಿಲ್ಲ. ಇಬ್ಬರದ್ದೂ ಸುಳಿವಿಲ್ಲ. ಮೈ ಉರಿಯಲು ಶುರುವಾಯಿತು. ಇದೇನು ಕರ್ಮ ಎಂದು ಒದ್ದಾಡುವಾಗಲೇ ಎಲ್ಲೋ ಮಗನ ತಲೆ ಕಾಣಿಸಿತು! ಅವನಪ್ಪ ಸಿಕ್ಕಿರಬೇಕೆಂದು ಖುಷಿಯಾಗುವುದರಲ್ಲಿ ಹತ್ತಿರ ಬಂದ ಅವನು ‘ಅಪ್ಪ ಬಂತಾ?’ ಎಂದ!! ಕೈ ಆಡಿಸಿದೆವು ಇಲ್ಲ ಎನ್ನುವಂತೆ.

‘ಅಯ್ಯೋ ಮೆಟ್ಟಿಲ ಹತ್ತಿರ ನಿಂತಿದ್ದರೆ ಮೇಲಿನ ಫ್ಲೋರ್‌ ನಲ್ಲಿ ನಿಂತಿರತ್ತೆ. ಅಲ್ಲಿಗೆ ಓಡಿದರೆ ಅಲ್ಲಿ ಇರೋದೇ ಇಲ್ಲ. ಮತ್ತೆ ಸುತ್ತ ನೋಡಿದರೆ ಅದ್ಯಾವುದೋ ಲಿಫ್ಟ್ ಹತ್ತಿ ಹೋಗ್ತಿರತ್ತೆ. ಲಿಫ್ಟ್ ಹಿಡಿದು ಓಡಿದ್ರೆ ಅಲ್ಲಿಲ್ಲ. ಮತ್ತೆ ಎಲ್ಲಿ ಅಂತ ನೋಡಿದರೆ ಅಲ್ಲಿ ರೈಲಿಂಗ್‌ಗೆ ಒರಕ್ಕೊಂಡು ನಿಂತಿರತ್ತೆ. ಸಾಕಾಗೋಯ್ತು ಹಿಂದೆ ಓಡಿ ಓಡಿ’ ಅಂತ ಕೈ ಚೆಲ್ಲಿದ.

ಸರಿ ಇನ್ನೇನು ಮಾಡುವಂತಿದೆ, ಅವನು ಬರುವವರೆಗೆ ಇಲ್ಲೇ ನಿಂತಿರೋಣ ಎಂದುಕೊಂಡು ನಿಂತೆವು. ಮತ್ತೆ ಸ್ವಲ್ಪ ಹೊತ್ತು ಕಾದಾಗಲೂ ಅವನ ಸುಳಿವಿಲ್ಲದಾದಾಗ ಮಗ ಮತ್ತೆ ಹೊರಟ. ನಾವು ಎಂದಿನಂತೆ ಅಲ್ಲೇ ನಿಂತೆವು. ಸುಮಾರು ಹೊತ್ತು ಕಳೆದ ನಂತರ ಗಂಡ ಅಲ್ಲಿಗೆ ಬಂದು ಏನೋ ಆಶ್ಚರ್ಯವಾದದ್ದೇನೋ ಕಂಡಂತೆ ‘ಇದ್ಯಾಕೆ ಇಲ್ಲಿ ನಿಂತಿದೀರಾ’ ಎಂದ, ಏನೋ ಬೆಂಗಳೂರಿನ ಪರಿಚಿತ ರೈಲು ನಿಲ್ದಾಣದಲ್ಲಿ ಮೈಸೂರಿನ ಪ್ಲ್ಯಾಟ್‌ಫಾರಂ ಬದಲು ಹುಬ್ಬಳ್ಳಿಯದರಲ್ಲಿ ನಿಂತ ಹಾಗೆ.

ನಮಗೆ ಉರಿದುಹೋಗಿ ‘ಇಲ್ಲಿ ನಿಂತಿರದೇ ಇನ್ನೆಲ್ಲಿ ನಿಂತಿರಬೇಕಿತ್ತಪ್ಪಾ? ಕಾಯಲಾಗುವುದಿಲ್ಲವಾ ನಿನಗೆ ಬುಡಬುಡ ಓಡುತೀಯಲ್ಲ? ನಿನ್ನನ್ನು ಹುಡುಕಲು ನಿನ್ನ ಮಗ ಅಲೆದಾಡ್ತಿದ್ದಾನೆ ನಿಲ್ದಾಣದ ತುಂಬ’ ಎಂದು ಹರಿಹಾಯ್ದೆವು.

‘ಏ ನಾನೆಲ್ಲಿಗೆ ಹೋಗಲಿ? ಇಲ್ಲೇ ಸಿಮ್ ಕಾರ್ಡ್ ತರಕ್ಕೆ ಹೋಗಿದ್ನಪ್ಪ’ ಅಂದ ಕೂಲಾಗಿ. ‘ಸಿಮ್ ಕಾರ್ಡಾ! ನಾವಿಲ್ಲಿ ಸಾಯುತ್ತಿದ್ದರೆ ನೀನು ಸಿಮ್ ತೆಗೆದುಕೊಳ್ಳಲು ಹೋಗಿದ್ಯಾ’ ಅಂತ ಕೂಗಾಡಿದೆ. ‘ಅಯ್ಯೋ ಇದೊಳ್ಳೆ ಕತೆಯಾಯಿತಲ್ಲ! ಡ್ರೈವರನ್ನು ಸಂಪರ್ಕಿಸಲು ಫೋನ್ ಬೇಕಲ್ಲ, ಅದಕ್ಕೆ ಸಿಮ್ ತರಕ್ಕೆ ಹೋಗಿದ್ದು. ಇನ್ನೇನು ಹರಟೆ ಹೊಡೆಯೋದಿಕ್ಕಾ?’ ಎಂದು ಅವನೂ ಸಿಡುಕಿದ.

‘ಹೋಗಲಿ ಈಗ ಫೋನ್ ಆದರೂ ಸಿಕ್ಕಿತಾ’ ಎಂದರೆ ‘ಸಿಮ್ ಸಿಕ್ಕಿತು, ಇನ್ನೇನು ಆಕ್ಟಿವೇಟ್ ಆಗುವುದು ಬಾಕಿ’ ಎಂದು ಅದನ್ನೇನೋ ಮಾಡುತ್ತ ಕುಳಿತ. ನಮಗೂ ಸಿಮ್ ಬೇಕಿತ್ತು. ಆದರೆ ಮತ್ತೆ ನಾವು ಅತ್ತ ಕಡೆ ಹೋದರೆ ಮಗ ಇತ್ತ ಬಂದಾನು ಎನ್ನುವ ಆತಂಕಕ್ಕೆ ಅವನಿಗಾಗಿ ಕಾಯುತ್ತ ನಿಂತೆವು.

ಅದೆಷ್ಟೋ ಹೊತ್ತಿನ ನಂತರ ಬಸವಳಿದ ಮುಖದಲ್ಲಿ ಅವನು ಬರುವುದು ಕಾಣಿಸಿತು. ಅವನ ಅಪ್ಪನನ್ನು ಕಂಡ ಕೂಡಲೇ ‘ಅಲ್ಲಾ ಅದೆಲ್ಲಿ ಮರೆಯಾಗ್ತಿ ನೀನು ಪುಣ್ಯಾತ್ಮ? ಒಳ್ಳೆ ಸಿನೆಮಾದಲ್ಲಿ ದೆವ್ವಗಳು ತಂಗಾಳಿಯಲ್ಲಿ ನಾನು ತೇಲಿಬಂದೆ ಅಂತ ಹಾಡ್ತಾ ಕಾಣೆಯಾಗಿ, ಮಾಯವಾಗಿ ಹೋಗ್ತವಲ್ಲ ಆ ಥರ ಆಯ್ತು ನನ್ನ ಕತೆ. ನಿನ್ನ ಫಾಲೋ ಮಾಡಿ ಮಾಡಿ ಅಲೆದು ಸಾಕಾಗೋಯ್ತು’ ಅಂತ ಒಂದಿಷ್ಟು ಕೂಗಾಡಿದ.

ಅದಾದ ನಂತರ ನಮ್ಮ ಅಸಲಿ ಸಮಸ್ಯೆ ಈಗ ಡ್ರೈವರನ್ನು ಹುಡುಕುವುದು ಎಂದು ನೆನಪಾಯಿತು! ‘ಸರಿ ಇದು ಬಿಟ್ಟಾಕಿ. ಈಗ ಹೊರಬಾಗಿಲನ್ನು ಹುಡುಕಿ, ಅಲ್ಲಿ ಹೋಗಿ ನಿಲ್ಲೋಣ’ ಎಂದು ಎಲ್ಲರೂ ಲಗೇಜ್ ಎಳೆದುಕೊಂಡು ಅತ್ತ ಕಡೆ ಹೊರಟೆವು. ರೈಲ್ವೇ ಸ್ಟೇಷನಿನ್ನ ಆಚೆ ಕಾಲಿಟ್ಟರೆ ಪಕ್ಕದಲ್ಲೇ ಟ್ಯಾಕ್ಸಿ ಸ್ಟ್ಯಾಂಡ್ ಎಂದು ಬೋರ್ಡ್ ಕಾಣಿಸಿತು. ಓ ಇಲ್ಲಿಯೇ ನಿಂತಿರ್ತಾನೆ ಬಿಡು ಪ್ಲಕಾರ್ಡ್ ಹಿಡಿದುಕೊಂಡು ಅಂತ ನಿರ್ಧರಿಸಿ ಅತ್ತಿತ್ತ ಹುಡುಕಲಾರಂಭಿಸಿದೆವು.

ನಮ್ಮ ಊಹೆ ತಲೆಕೆಳಕಾಗುವಂತೆ ಅಲ್ಲೆಲ್ಲೂ ಅವನ ಸುಳಿವಿಲ್ಲ. ಮೊದಲೇ ಸುಸ್ತು. ಈ ಹುಡುಕಾಟದಲ್ಲಿ ಹತಾಶೆ-ಸಿಟ್ಟು ಎಲ್ಲವೂ ಒಟ್ಟೊಟ್ಟಿಗೇ ಬರಲಾರಂಭಿಸಿದವು. ನನ್ನ ಗಂಡ ಸಿಮ್ ಹಾಕಿ ಆಕ್ಟಿವೇಟ್ ಮಾಡಲು ಪ್ರಯತ್ನಿಸಿದರೆ, ಅದು ಕೂಡಾ ಸಾಧ್ಯವಾಗಲಿಲ್ಲ. ಅವನ ಹಳ್ಳಿಯ ಕಡೆಯ ಅಷ್ಟೂ ಆಯ್ದ ಬಯ್ಗುಳಗಳಿಂದ ಫೋನ್ ಕಂಪನಿಯನ್ನು ಪಾವನನಾಗಿ ಮಾಡಿದ ನನ್ನ ಗಂಡ!

ಆ ನಂತರ ಇದೆಲ್ಲ ವ್ಯರ್ಥ ಎಂದರಿವಾದ ಮೇಲೆ ಬಯ್ಯುವುದನ್ನು ನಿಲ್ಲಿಸಿ, ನನ್ನನ್ನು, ಅಪ್ಪನನ್ನು ಲಗೇಜ್ ಕಾಯಲು ನಿಲ್ಲಿಸಿ ಅವರಿಬ್ಬರೂ ಇಡೀ ರೈಲ್ವೇ ಸ್ಟೇಷನ್ನಿನ ಒಳಹೊರಗೆಲ್ಲ ತಡಕಾಡಲು ಶುರು ಮಾಡಿದರು. ಇವನು ಆ ಕಡೇಯಿಂದ ಹೋದರೆ ಅವನು ಈ ಕಡೆಯಿಂದ… ಮತ್ತೆ ಇವನು ಈ ಕಡೆಯಿಂದ, ಅವನು ಆ ಕಡೆಯಿಂದ… ಹೀಗೆ ಹತ್ತಾರು ಸಲ ಸುರುಳಿ ಸುತ್ತಿ ಸುತ್ತಿ ಅವರ ಹೆಣ ಬಿದ್ದುಹೋಯ್ತು.

ನಾವು ಅವರಿಬ್ಬರು ದೇವತೆಗಳಂತೆ ಪ್ರತ್ಯಕ್ಷರಾಗಿ ಅಂತರ್ಧಾನರಾಗುವ ಪರಿಯನ್ನು ನೋಡುತ್ತ ನಿಂತಿರುವಾಗಲೇ ನನಗೆ ಅಸಾಧ್ಯ ಕೆಮ್ಮು ಶುರುವಾಯಿತು. ಆಗ ಗಮನಿಸಿದರೆ ನಾವು ನಿಂತಿದ್ದೆಡೆಯಲ್ಲಿ ಎರಡು ಮೂರು ಕಸದ ಬುಟ್ಟಿಗಳು ಮತ್ತು ಅದರ ಸುತ್ತ ಸಿಗರೇಟು ಬುಸ ಬುಸ ಹೊಗೆ ಬಿಡುತ್ತ ನಿಂತ ಅಸಂಖ್ಯಾತ ಪ್ರಯಾಣಿಕರು!

ಅಲ್ಲಿನ ಚಳಿಗೆ ಅವರಿಗೆ ಸಿಗರೇಟು ಸೇದದೇ ಇರುವುದು ಅಸಾಧ್ಯ ಎನ್ನಿಸುತ್ತದೆ. ಹಾಗಾಗಿ ನೂರಾರು ಜನರ ಸಿಗರೇಟಿನ ಹೊಗೆ ತಡೆಯದ ನನ್ನ ಶ್ವಾಸಕೋಶ ಕೆಹೆ ಕೆಹೆ ಎಂದು ಕೆಮ್ಮಲಾರಂಭಿಸಿ ಕೊನೆಗದು ನಿಲ್ಲಲೇ ಇಲ್ಲ.

ಇದೊಂದು ಬಾಕಿ ಇತ್ತಪ್ಪ ದೇವರೇ ಎಂದು ಬಯ್ದುಕೊಂಡರೂ ಅಲ್ಲಿಂದ ನಾವು ಜರುಗಿ ಹೋಗುವಂತಿಲ್ಲ ಆ ಲಗೇಜುಗಳನ್ನು ಬಿಟ್ಟು. ಅಪ್ಪ ಒಬ್ಬರೇ ಎಲ್ಲವನ್ನೂ ಮ್ಯಾನೇಜ್ ಮಾಡುವುದು ಕಷ್ಟವಾಗಿತ್ತು. ಹಾಗಾಗಿ ಅಪ್ಪ, ಮಗ ಬಂದ ಕೂಡಲೇ ಇದು ಆಗದ ಹೋಗದ ಕೆಲಸ ಎಂದು ಹೇಳಿ ರೈಲ್ವೆ ಎನ್‌ಕ್ವೈರಿ ಹತ್ತಿರ ಹೋಗಿ ಹುಡುಕಿಸುವ ಪ್ರಯತ್ನ ಮಾಡಿಬರುವುದಾಗಿ ಹೇಳಿ ಅಲ್ಲಿಂದ ಹೊರಟೆ ಮಗನ ಜೊತೆ.

ಪುಣ್ಯಕ್ಕೆ ಅದು ಬೇಗನೇ ಸಿಕ್ಕಿತು. ಮತ್ತು ಅದಾಗಲೇ ಸಮಯ ಒಂಭತ್ತರ ಹತ್ತಿರವಾಗಿದ್ದರೂ ಅದು ತೆರೆದಿತ್ತು ಅನ್ನುವುದೇ ನಮ್ಮ ಆ ದಿನದ ಭಾಗ್ಯ! ಅಲ್ಲಿದ್ದ ಹೆಣ್ಣುಮಗಳ ಹತ್ತಿರ ಹೋಗಿ ದೈನ್ಯತೆಯಿಂದ ನಮ್ಮ ಕತೆ ಹೇಳಿ ‘ತಾಯಿ ನಿನ್ನ ಫೋನಿನಲ್ಲಿ ಈ ನಂಬರಿಗೊಂದು ಕರೆ ಮಾಡಿ ಕೊಡ್ತೀಯಾಮ್ಮ’ ಎಂದು ಬೇಡಿದೆವು.

ಅವಳು ನಗುಮುಖದಲ್ಲಿ ‘ನಾನಿರುವುದೇ ಅದಕ್ಕಲ್ಲವಾ’ ಎಂದು ಹೇಳಿ ತಕ್ಷಣವೇ ಫೋನ್ ಮಾಡಿ ನಮ್ಮ ಡ್ರೈವರನ್ನು ಅಲ್ಲಿಗೆ ಬರಲು ಹೇಳಿದಳು. ಮಗ ಹೋಗಿ ಅಪ್ಪ-ತಾತನನ್ನು ಕರೆ ತಂದ. ಅದಾದ ನಂತರ ನಾವು ಇನ್ನೇನು ಬಂದ… ಈಗ ಬಂದ… ಆಗ ಬಂದ ಎಂದು ಕಾದೇ  ಕಾದರೂ ಮತ್ತೆ ಅವನ ಸುಳಿವಿಲ್ಲ…

। ಮುಂದಿನ ವಾರಕ್ಕೆ ।

‍ಲೇಖಕರು ಬಿ ವಿ ಭಾರತಿ

October 6, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: