ಇಲ್ಲಿ ಕಲಿಕೆಗೆ ‘ಕಸ್ತೂರಿ’ಯ ಘಮ…

‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ.

ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ.

ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ.

ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ ಸುಷ್ಮಿತಾ ‘ಮಣ್ಣಪಳ್ಳದ ಮೂಕಿಚಿತ್ರ’ದಲ್ಲಿ ಈ ಊರಿನ ಯಾರೂ ಕಾಣದ ಚಿತ್ರಗಳನ್ನು ಕಟ್ಟಿ ಕೊಡಲಿದ್ದಾರೆ.

ಮಣಿಪಾಲಕ್ಕೆ ಕರ್ನಾಟಕದ ಉತ್ತರದಿಂದ ಬದುಕು ಅರಸಿ ಬಂದ ಕುಟುಂಬಗಳ ಸಂಖ್ಯೆ ದೊಡ್ಡದು. ಬೇರೆ ಊರುಗಳಿಗೆ ಹೋಲಿಸಿದರೆ ಕೂಲಿ ಕೆಲಸಕ್ಕೂ ತಗಲಿ ಕೊಳ್ಳುವ ಒಂದಷ್ಟು ಸೌಕರ್ಯ, ಮತ್ತು ಯಾವ ಕಾಲಕ್ಕೂ ಮಣಿಪಾಲಕ್ಕೆ ನಾವು ಬೇಕು ಎನ್ನುವ ನಂಬಿಕೆ ಇಲ್ಲಿಗೆ ಅನೇಕರನ್ನ ಬರಮಾಡಿಕೊಂಡಿದೆ. ಇದು ಇಂದು ನಿನ್ನೆಯ ಕಥೆಯಲ್ಲ, ದಶಕಗಳ ಹಿಂದೆ ಇಲ್ಲಿಗೆ ಬಂದು ನೆಲೆ ನಿಂತವರಿಗೂ, ಇಲ್ಲಿಯೇ ಬಂದು ಜಗತ್ತು ಕಂಡ ಅವರ ಕೂಸುಗಳಿಗೂ ಮಣಿಪಾಲವೇ ಬದುಕು.

ಇವರ ಹೊಸತಲೆಮಾರಿನ ಮಕ್ಕಳೆಲ್ಲರೂ ಇಲ್ಲಿಯೇ ಸಿಕ್ಕಿದಷ್ಟು ಓದು, ಕೆಲಸ, ಬದುಕನ್ನು ಗಿಟ್ಟಿಸಿಕೊಂಡವರು. ಸುಮಾರು ಹುಡುಗರು ಅವರ ಅಪ್ಪ ಅಮ್ಮಂದಿರಿಗಿಂತ ಭಿನ್ನವಾಗದೆ ದಿನಗೂಲಿಯನ್ನೇ ಮುಂದುವರೆಸಿಕೊಂಡು ಬಂದಿದ್ದಾರೆ. ಅದರಲ್ಲೂ ಹೆಚ್ಚಿನವರ ಓದು ಪ್ರಾಥಮಿಕ ಹಂತವನ್ನೂ ದಾಟಿಲ್ಲ. ಆದರೆ ಕಸ್ತೂರಿ ಹಾಗಲ್ಲ. ಅವಳಿಗೆ ಎಲ್ಲರಂತಾಗದೆ ಬೇರೆ ನಿಲ್ಲುವುದೇ ಹಠ.

ಕಸ್ತೂರಿ ನನಗೆ ಅತೀ ಪರಿಚಿತಳು. ಯೂನಿವರ್ಸಿಟಿಯ ಲೈಬ್ರರಿಯಲ್ಲಿ ಕಾಫಿ ಮಷೀನಿನ ಹತ್ತಿರ ಸಂಜೆ ಹೊತ್ತು ಅವಳೇ ನಿಲ್ಲುತ್ತಿದ್ದದ್ದು. ಆ ಹೊತ್ತಲ್ಲಿ  ಲೈಬ್ರರಿಗೆ ಹೋದರೆ ಎದುರುಗೊಳ್ಳುವ ಅವಳ ನಗೆಯ ಘಮ ನನಗೆ ಕಸ್ತೂರಿಯೇ. ಅಲ್ಲಿ ಓದಿ ದಣಿಯುವವವರಿಗೆ, ಜೊತೆಗೆ ದುಡಿದು ದಣಿಯುವವವರಿಗೂ ಕಾಫೀ ಚಾ-ದ ಆತಿಥ್ಯ ಕಸ್ತೂರಿಯದ್ದೇ.

ಕಳೆದ ಆರೇಳು ವರ್ಷದಿಂದ ಕಸ್ತೂರಿಯ ಕಾಫಿ ಕಪ್ಪುಗಳೇ ಬಹು ಅಂತಸ್ತಿನ ಲೈಬ್ರರಿಯಲ್ಲಿ  ನಿದ್ದೆ ಕಣ್ಣಿನ ವಿದ್ಯಾರ್ಥಿಗಳನ್ನ ಎಚ್ಚರದಲ್ಲಿಟ್ಟಿದ್ದು. ಓದುವಾಗ ಎಚ್ಚರಿರುವುದಕ್ಕೆ ಕಾಫಿ ಮಷೀನಿನ ಬಳಿ ಬರುವ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಯಾಗಿರುವ ಹಂಬಲಕ್ಕೇನೇ ಕಾಫಿ ಮಶೀನ ಬಳಿ ನಿಲ್ಲುವ  ಕಸ್ತೂರಿ ಸಂಧಿಸುವುದು ಇಲ್ಲಿಯೇ.

ಕಸ್ತೂರಿಯ ಊರು ಗದಗದ ಬೆಳಗಟ್ಟಿ ಆದರೂ ಅವಳು ಸರಿಯಾಗಿ ಕಣ್ಣು ಬಿಡುವ ಮೊದಲೇ ಮಣಿಪಾಲ ಸೇರಿ ಬಿಟ್ಟಿದ್ದಳು. ಕೂಲಿ ಕೆಲಸವನ್ನು ನಂಬಿ, ನಾಲ್ಕು ಮಕ್ಕಳನ್ನ ಕಟ್ಟಿಕೊಂಡು ಅವಳ ಅಪ್ಪ-ಅಮ್ಮ ಮಣಿಪಾಲಕ್ಕೆ ಬಂದವರು.  ಬೆಳಗಟ್ಟಿ ಮೂಲವಾದರೂ, ಹೊಟ್ಟೆಗೆ ಹಿಟ್ಟೂ ಹುಟ್ಟದ ಊರನ್ನು ಅವರು ತಮ್ಮದು ಎಂದುಕೊಳ್ಳುವುದಾದರೂ ಹೇಗೆ? 

ಇಲ್ಲೇ ಬೆಳೆದ ಅಣ್ಣ, ಇಬ್ಬರು ಅಕ್ಕಂದರು ಮತ್ತು ಇಲ್ಲಿಗೆ ಬಂದ ಮೇಲೆ ಹುಟ್ಟಿದ ತಂಗಿ ಎಲ್ಲರಿಗೂ ಈ ಶಹರವೇ ಮನೆ. ನೂರಾರು ತಾತ್ಕಾಲಿಕ ವಸತಿಗಳ ಸಂದಿಯಲ್ಲೇ ತಮ್ಮಂತವರ ಒಟ್ಟಿಗೆ ಬೆಳೆದು ಬದುಕು ಕಟ್ಟಿಕೊಂಡಿರುವ ಇವರಿಗೆ ಮಣಿಪಾಲವೂ  ಇನ್ನೂ ಪೂರ್ತಿ ನೋಡದ ಜಗತ್ತು.

ಬೆಳಗಟ್ಟಿಯಲ್ಲೇ ಇದ್ದಿದ್ದರೆ ಹೊಸ ದಾರಿಯ ಆಯ್ಕೆಯೇ ಇಲ್ಲದೆ ಇರುವಾಗ, ಅವಳಿಗೆ ಹಾರುವುದಕ್ಕೆ ಆಸೆ ಹುಟ್ಟಿಸಿದ್ದೇ ಮಣಿಪಾಲ ಮತ್ತು ಪ್ರಪಂಚದ ಮೂಲೆ ಮೂಲೆಯಿಂದ ಇಲ್ಲಿಗೆ ಓದಲು ಬರುವ ವಿದ್ಯಾರ್ಥಿಗಳು ಅನ್ನೋದು ಅವಳ ಮಾತು. ಬೆಳಿಗ್ಗೆ ಎದ್ದು ದಿನಗೂಲಿಗೆ ಹೊರಡುವ ಎಲ್ಲರ ನಡುವೆ ಶಾಲೆ ಚೀಲ ಏರಿಸಿ ಹೊರಡುವ ಮಕ್ಕಳು ಇಲ್ಲಿ ಬೇರೆಯಾಗಿಯೇ ಕಾಣುವುದು.

ಇಂತಹ ಪರಿಸ್ಥಿತಿಯಲ್ಲಿ ಕಷ್ಟ ಪಟ್ಟು ಹತ್ತನೇ ತರಗತಿ ದಾಟುವುದೇ ಇವರ ಮಕ್ಕಳಿಗೆ ಸಾಧನೆ. ಅವತ್ತಿನ ಊಟದ ಬಗ್ಗೆಯಷ್ಟೇ ಚಿಂತಿಸಬಲ್ಲ ಮನೆಯಲ್ಲಿ ಇದನ್ನೆಲ್ಲಾ ಮೀರುವ ಹಠವನ್ನು ಹುಟ್ಟಿಸಿಕೊಳ್ಳುವುದು ಮತ್ತು ಕಾಪಾಡಿಕೊಳ್ಳುವುದು ಕಸ್ತೂರಿಗೂ ಸುಲಭವಲ್ಲ.

ಹತ್ತು ವರ್ಷದ ಹಿಂದೆ ಅಪ್ಪ ತೀರಿಕೊಂಡ ಮೇಲಂತೂ ಓದು ನಿಲ್ಲಿಸದೆ ಇರುವುದಕ್ಕೆ ಕಸ್ತೂರಿ ಪಟ್ಟು ಹಿಡಿದು ಕೂರದೆ ಇದ್ದಿದ್ದರೆ ಸಾಧ್ಯವಿರಲಿಲ್ಲ. ಹಾಗೋ ಹೀಗೋ ಪಿಯುಸಿ ವರೆಗೆ ದೂಡಿ, ಮುಂದಿನ ಓದಿಗೆ ಇನ್ನೇನಾದರೂ ಮಾಡಲೇಬೇಕು ಅಂದಾಗಲೇ ಸಂಜೆ ಹೊತ್ತು ಕಾಫಿ ಮಶೀನನ ಎದುರು ಕೂರುವ ಕೆಲಸಕ್ಕೆ ಒಪ್ಪಿಕೊಂಡಳು. ತನ್ನ ದೊಡ್ಡ ಕುಟುಂಬದ ಚಿಕ್ಕ ಮನೆ, ಮನೆ ದೂರ ಎನಿಸಿದಾಗ ಮಾಲಕರ ಮನೆ, ಬೆಳಿಗ್ಗೆ ಕಾಲೇಜು ಆದರೆ ಸಂಜೆ ಕೆಲಸ, ಇವೆಲ್ಲದರ ಮಧ್ಯೆಯೇ ಓದು ಇವೆಲ್ಲಕ್ಕೂ ಹೊಂದಿಕೊಂಡೇ ಅವಳು ಡಿಗ್ರಿಯ ವರ್ಷಗಳನ್ನ ಕಳೆದಿರೋದು.

ಮಣಿಪಾಲದ ಸುತ್ತಲೂ ಹಬ್ಬಿರುವ ಅತೀ ಸುವ್ಯವಸ್ಥಿತ ಶಿಕ್ಷಣ ವ್ಯವಸ್ಥೆಯಲ್ಲಿ ಅವಳನ್ನು ಹೊರಗಿನವಳಂತೆ ಕಂಡವರೂ ಇದ್ದಾರೆ, ಜೊತೆಗೆ ಅವಳ ಉತ್ಸಾಹವನ್ನು ನೋಡಿಯೇ ಬೆನ್ನಿಗೆ ನಿಂತವರು ಇದ್ದಾರೆ. ಕಲಿಕೆಯ ದಾರಿ ಅವಳಿಗೆ ಏಳು ಬೀಳುಗಳೇ. ಆದರೆ ಇದೆಲ್ಲದರ ಮಧ್ಯೆಯೂ ಸಿಕ್ಕಿದ ಎಲ್ಲ ಮಣಿಪಾಲಿಗರನ್ನು ತನ್ನವರನ್ನಾಗಿಸಿಕೊಂಡಿದ್ದಾಳೆ. ಕಾಫಿಯ ಮದ್ಯೆ ಮದ್ಯೆ ಅವರೆಲ್ಲರೂ ಬಿಟ್ಟು ಹೋಗುವ ಒಂದಿಷ್ಟು ಇಂಗ್ಲಿಷ್ ಪದಗಳನ್ನೂ ತನ್ನದಾಗಿಸಿಕೊಂಡಿದ್ದಾಳೆ.

ಇಷ್ಟು ವರ್ಷಗಳೂ ತನ್ನ ಶಿಕ್ಷಣದ ಖರ್ಚು ಹೊಂದಿಸುವುದು ಹೇಗೆ ಎಂಬ ಅಳುಕು ಅವಳನ್ನ ಅಲುಗಾಡಿಸಿಯೇ ಇಲ್ಲ. ಹೇಗಾದರೂ ಆದೀತು, ದುಡಿದು ಓದುತ್ತೇನೆ ಅಂತ ಹೊರಟವಳು ಈಗ ಸುಮಾರು ದೂರ ಮುಟ್ಟಿದ್ದಾಳೆ. ಎಲ್ಲಕ್ಕೂ ಹೊಂದಿಕೊಂಡು, ಹಠ ಬಿಡದೆಯೇ ಬಿ. ಎಡ್. ಮುಗಿಸಿಯೇ ಬಿಟ್ಟಿದ್ದಾಳೆ, ಹೆಚ್ಚು ಓದದ ಇಡೀ ಕುಟುಂಬದಲ್ಲಿ ಕಸ್ತೂರಿಯೇ ಹಠ ಕಟ್ಟಿ ಕಲಿತವಳು. ಈಗ ತನ್ನಂತ ಮಕ್ಕಳಿಗೆ ಕಲಿಸುವ ಕಸ್ತೂರಿ ಟೀಚರ್ .

ತನ್ನ ಎಳೆವೆಯಲ್ಲೇ ಬೆನ್ನಿಗೆ ಬಿದ್ದವರನ್ನು ಸಂಬಾಳಿಸೋದು ಅವಳಿಗೆ ಕರಗತ. ಐವತ್ತರ ಆಸು ಪಾಸಿನ ಅಮ್ಮ, ಟೈಲ್ಸ್ ಕೆಲಸಕ್ಕೆ ಹೋಗುವ ಅಣ್ಣ, ಮನೆ ಕೆಲಸಕ್ಕೆ ಹೋಗುವ ಗಂಡ ಇಲ್ಲದ ಅಕ್ಕ, ಮನೆಯಲ್ಲೇ ಇರುವ ಹಿರಿ ಅಕ್ಕ, ಅವರ ಪುಟ್ಟ ಮಕ್ಕಳು ಎಲ್ಲರೂ ಸೇರಿ ಉದ್ದಕ್ಕೆ ಎರಡೇ ಕೋಣೆಯ ಮನೆಯಲ್ಲಿ ಉದ್ದಕ್ಕೂ ಮಲಗಿರುವಾಗ ಎಲ್ಲರ ಮುಂದಿನ ಬದುಕಿನ ಬಗ್ಗೆ ಕಸ್ತೂರಿ ಯೋಚಿಸಿಯೇ ಯೋಚಿಸುತ್ತಾಳೆ. ಕಳೆದ ವರ್ಷ ತಂಗಿಯ ಮದುವೆ ಮುಗಿಸಿ, ಈ ವರ್ಷ ಅಣ್ಣನ ಮದುವೆಯೂ ಆಗೇ ಬಿಡಲಿ ಅನ್ನುವಾಗ ಅವಳು ಗಂಭೀರ ನಗು ಬೀರುತ್ತಾಳೆ.

ಬಿ ಎಡ್ ಮುಗಿಸಿದ ಮೇಲೆ ಎಲ್ಲೆಲ್ಲೋ ಓಡಾಡಿ ಸದ್ಯಕ್ಕೆ ಮಣಿಪಾಲದ ಒಂದು ಶಾಲೆಯಲ್ಲಿ  ತಾತ್ಕಾಲಿಕ ಟೀಚರ್ ಕೆಲಸ ಗಿಟ್ಟಿಸಿಕೊಂಡಿದ್ದಾಳೆ. ಕೆಲವೊಮ್ಮೆ ಯಾರಾದರೂ ಮಾತು ಮಾತಲ್ಲಿ ನಿನ್ನಮ್ಮ ಕೂಲಿ ಮಾಡಿಯಾದರೂ ನಿನಗಿಂತ  ಜಾಸ್ತಿ ದುಡೀತಾಳೆ ಅಂತಂದರೆ ನನಗೆ ಓದೋದು ಮತ್ತು ಓದಿಸೋದೇ ನೆಮ್ಮದಿ. ಸದ್ಯ ಆಡಿಕೊಳ್ಳುವವರಿಗೆ ಓದಿನ ಮಹತ್ವ  ಅರ್ಥ ಮಾಡಿಸೋದು ಸಾಧ್ಯವಿಲ್ಲ. ಒಂದಲ್ಲ ಒಂದು ದಿನ ನನ್ನ ನೋಡಿ ಅವರೂ ಕಲೀತಾರೆ ಅನ್ನುತ್ತಲೇ ಸಮಾಧಾನ ಪಟ್ಟುಕೊಳ್ಳುತ್ತಾಳೆ.

ಶಿಕ್ಷಣಕ್ಕಿಂತ ಬದುಕಿಗೆ ಬೇರೆ ಬೆಂಬಲವಿಲ್ಲ ಅನ್ನುವ ಕಸ್ತೂರಿ ಪಾಠ ಹೇಳುವದರ ಒಟ್ಟೊಟ್ಟಿಗೆ ಸಮಾಜಶಾಸ್ತ್ರದಲ್ಲಿ ಎಂ. ಎ ಕೂಡ ಓದುತ್ತಿದ್ದಾಳೆ. ಮಕ್ಕಳಿಗೆ ಕನ್ನಡ ಕವಿತೆಗಳನ್ನು ಓದಿಸುವಾಗ ನನ್ನನ್ನೇ ಹಿಂಬಾಲಿಸುವ ಅವರ ಧನಿ ನನಗೆ ಇನ್ನಷ್ಟು ಜವಾಬ್ದಾರಿ ಇದೆ ಅನ್ನೋದನ್ನ ನೆನಪಿಸುತ್ತದೆ. ಅವರೆಲ್ಲರಿಗೂ ಓದಿನ ದಾರಿ ನನಗಿಂತ ಸಲೀಸಾಗಬೇಕು ಅನ್ನುವ ದೃಢ ಮಾತು ಅವಳದ್ದು.

ನನ್ನ ಮನೇಲಿ ನನ್ನ ಅಕ್ಕಂದರ ಮಕ್ಕಳು ಚೆನ್ನಾಗಿ ಓದಬೇಕು. ನಮ್ಮ ಮನೇಲಿ ದಿನಗೂಲಿ ನಮ್ಮ ಕಾಲಕ್ಕೆ ನಿಲ್ಲಬೇಕು ನಿಲ್ಲಬೇಕು ಅಂತ ದೃಢ ಧನಿಯಲ್ಲಿ ಹೇಳಿ ಮುಗಿಸುವ ಅವಳು ಮೊನ್ನೆ ಸಿಕ್ಕಿದಾಗ, ಕಾಫಿ ಮಷೀನಿನ ಮಾಲಕರು ತೀರಿಕೊಂಡ ಮೇಲೆ ಲೈಬ್ರರಿ ಕಡೆಗೆ ಹೋಗುವುದನ್ನು ಬಿಟ್ಟಿದ್ದೇನೆ. ನಾನು ಟೀಚರ್ ಹೌದು.

ಆದರೆ ಸದ್ಯಕ್ಕೆ ನಮಗೆಲ್ಲ ಶಾಲೆಯಲ್ಲಿ ಸಂಬಳ ನಿಲ್ಲಿಸಿದ್ದಾರೆ, ಇನ್ನು ಮಕ್ಕಳು ಬಂದ ಮೇಲೆಯೇ ಶುರು ಅಂತೆ ಅದಕ್ಕೆ ಸಣ್ಣಕ್ಕನ ಒಟ್ಟಿಗೆ ನಾನೂ ಅಪಾರ್ಟ್ಮೆಂಟ್ ಕೆಲಸಕ್ಕೆ ಹೋಗೋಕೆ ಶುರು ಮಾಡಿದ್ದೀನಿ. ಎಂತಾದರೂ ದುಡಿಮೆ ಆಗಬೇಕಲ್ಲ ಅಂತ ಸಣ್ಣಗೆ ಹೇಳಿ “ರೆಕ್ಕೆ ಇದ್ದಾರೆ ಸಾಕೆ ಹಕ್ಕಿಗೆ ಬೇಕು ಬಾನು…” ಹಾಡಿ ಮುಗಿಸಿದಳು.

October 6, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: