ಕೊಂಬಿನ ಕಥೆ

ಬ್ರಾಹ್ಮಣರ ಬೀದಿಯಲ್ಲಿದ್ದ ರಾಮಚಂದ್ರನ್ ಮತ್ತು ಅವರ ಶ್ರೀಮತಿಯವರು ನನಗೆ ಅತ್ಯಂತ ಆಪ್ತರಾಗಿದ್ದರು. ಅವರು ಬಹಳ ಪ್ರೀತಿಯಿಂದ ಹಸು ಎಮ್ಮೆಗಳನ್ನು ಸಾಕಿದ್ದರು. ಅವರಲ್ಲಿದ್ದ ನಾಟಿ ಹಸುಗಳು ಸೈತ ೫-೬ ಲೀಟರ್ ಹಾಲು ಕೊಟ್ಟು ಆಶ್ಚರ್ಯ ಹುಟ್ಟಿಸುತ್ತಿದ್ದವು.

ನಾನು ನೊಣವಿನಕೆರೆಗೆ ಹೋದ ಹೊಸತರಲ್ಲಿ ಅವರಲ್ಲೊಂದು ಅತ್ಯಂತ ಸುಂದರವಾದ ಎಚ್.ಎಫ್. ಹೆಣ್ಣು ಕರು ಇತ್ತು.

ಸುಮಾರು ಒಂದು ತಿಂಗಳ ಕರುವಾಗಿದ್ದರೂ ಮೂರು ತಿಂಗಳ ಕರುವಿನಷ್ಟು ದೊಡ್ಡದಿತ್ತು. ಈ ಕರುಗಳಿಗೆ ಕೊಂಬು ಬಾರದೇ ಇರಲಿ ಎಂದು ಎಳೆ ವಯಸ್ಸಿನಲ್ಲಿ ಕೊಂಬಿನ ಬುಗುಟುಗಳನ್ನು ಕಾದ ಕಬ್ಬಿಣದಲ್ಲಿ ಸುಡಲಾಗುತ್ತದೆ. ಈ ಕೆಲಸವನ್ನು ರಾಸಾಯನಿಕದಿಂದಲೂ ಮಾಡಬಹುದು. ಆದರೆ ಆ ರಾಸಾಯನಿಕ ಆಸ್ಪತ್ರೆಗೆ ಸರಬರಾಜಾಗದಿದ್ದಾಗ ಕಾದ ಕಬ್ಬಿಣವೇ ಸಾಕು.

ನಾನು ಇಲಾಖೆಯಲ್ಲಿ ಕೆಲಸ ಮಾಡಿದ ಸುಮಾರು ೩೫ ವರ್ಷಗಳಲ್ಲಿ ಒಮ್ಮೆಯೂ ಆ ರಾಸಾಯನಿಕ ಸರಬರಾಜಾಗಲಿಲ್ಲ. ಕಬ್ಬಿಣದಿಂದ ಸುಟ್ಟರೂ, ರಾಸಾಯನಿಕದಿಂದ ಸುಟ್ಟರೂ ಕರುವಿಗೆ ನೋವಾಗೇ ಆಗುತ್ತದೆ. ಕೊಂಬು ಬಂದ್ರೆ ಬರಲಿ ಬಿಡ್ರಿ ಅಂದರೆ ಕೆಲವು ಜಾನುವಾರು ಮಾಲೀಕರು ಒಪ್ಪದ ಕಾರಣ ನಾನು ಅನೇಕ ಸಲ ಕರುಗಳ ಕೊಂಬು ಸುಟ್ಟು ಹಾಕುವ ಪಾಪದ ಕೆಲಸವನ್ನು ಮಾಡಿದ್ದೇನೆ.

ಜಾನುವಾರುಗಳಲ್ಲಿ ಕೊಂಬುಗಳಿದ್ದರೆ ಕೊಟ್ಟಿಗೆಯಲ್ಲಿ ಜಾಸ್ತಿ ಜಾಗ ಆಕ್ರಮಿಸಿಕೊಳ್ಳಬಹುದು, ಹಾದಾಡಿಕೊಂಡು ಕೊಂಬುಗಳನ್ನು ಮುರಿದುಕೊಳ್ಳಬಹುದು ಅಥವಾ ಕೊಂಬಿನ ಕ್ಯಾನ್ಸರ್‌ನಿಂದ ನರಳಬಹುದು ಎಂದು ಕರುಗಳಿದ್ದಾಗಲೇ ಕೊಂಬಿನ ಬುಗುಟುಗಳನ್ನು ಸುಡಲಾಗುತ್ತದೆ. ಆದರೆ ನಾನು ಹಲವು ದಶಕಗಳಲ್ಲಿ ಕಂಡುಕೊಂಡ ಸತ್ಯವೇನೆಂದರೆ ಮಿಶ್ರತಳಿ ಹಸುಗಳಿಗೆ ಕೊಂಬು ಬಹಳ ಸಣ್ಣವಿರುತ್ತದೆ.

ಗೋಡೆಗೋ, ಗ್ವಾದಲಿಗೋ ತಗುಲಿಸಿಕೊಂಡು ಅಥವಾ ಬೇರೆ ದನಗಳ ಮೇಲೆ ಹಾದಾಡಿ ಕೊಂಬು ಮುರಿದುಕೊಂಡದ್ದನ್ನು ನಾನು ನೋಡಲೇ ಇಲ್ಲ. ಕೊಂಬು ಕ್ಯಾನ್ಸರ್ ಕೇಸುಗಳಂತೂ ಇಲ್ಲವೇ ಇಲ್ಲ ಎಂಬಷ್ಟು ಅಪರೂಪ. ೧೯೯೮ ರ ನಂತರ ಈ ಕೊಂಬು ಸೀಯುವಂಥ ನಿರರ್ಥಕ ಕಾರ್ಯಾಚರಣೆಯನ್ನು ನಾನು ನಿಲ್ಲಿಸಿಯೇ ಬಿಟ್ಟೆ.

ವಾಪಸ್ಸು ರಾಮಚಂದ್ರನ್‌ರ ಕರು ವಿಷಯಕ್ಕೆ ಬರೋಣ. ಅದೇ ಮೊದಲನೆ ಬಾರಿ ರಾಮಚಂದ್ರನ್ ಆಸ್ಪತ್ರೆಗೆ ಬಂದು ಕೊಂಬು ಸುಡಿಸಿದ ಅವರ ಕರುವಿಗೆ ಒಂದು ಕೊಂಬಿನಲ್ಲಿ ವಿಪರೀತ ರಕ್ತ ಸುರಿದು ಹೋಗುತ್ತಿದೆ ಎಂದು ಹೇಳಿದರು. ಆಗ ಸಮಯ ಸಂಜೆ ಆರು ಗಂಟೆಯಾಗಿತ್ತು. ಬೈಕಲ್ಲಿ ಅವರನ್ನು ಕೂರಿಸಿಕೊಂಡು ಔಷಧದ ಬ್ಯಾಗಿನೊಂದಿಗೆ ಅವರ ಮನೆ ಹಿತ್ತಲಿಗೆ ಹೋದೆ. ದೊಡ್ಡ ಗಾತ್ರದ ರಾಮಚಂದ್ರನ್ ಕೂತಷ್ಟೂ ಸಮಯ ನನ್ನ ಬೈಕ್ ಕಿರುಗುಟ್ಟಿ ಹೋಯಿತು.

ಮಹಾ ತಂಟೆಕೋರ ಆಗಿದ್ದ ಅವರ ಕರುವಿಗೆ ಒಂದು ವಾರದ ಕೆಳಗೆ ಕೊಂಬಿನ ಬುಗುಟು ಸುಡಿಸಿದ್ದರು. ಇನ್ನೇನು ಎಲ್ಲ ಒಣಗಿಹೋಯ್ತು ಅನ್ನುವಷ್ಟರಲ್ಲಿ ಕರು ಹಿತ್ತಲ ಗೋಡೆಗೆ ಹಣೆಯಿಂದ ಗುದ್ದಿ ಗುದ್ದಿ ಗಾಯವನ್ನು ಹೊಸದು ಮಾಡಿಕೊಂಡಿದೆ. ಕೊಂಬಿನ ಬುಗುಟಿನಲ್ಲಿದ್ದ ಒಂದು ರಕ್ತನಾಳ ತುಂಡಾಗಿ ಪಿಚಕಾರಿ ಹೊಡೆದಂತೆ ರಕ್ತ ಧಾರೆ ಧಾರೆಯಾಗಿ ಚಿಮ್ಮುತ್ತಿತ್ತು.

ರಕ್ತ ಸುರಿಯುತ್ತಿದ್ದ ಭಾಗಕ್ಕೆ ಒಣ ಹತ್ತಿಯನ್ನು ಒಂದೆರಡು ನಿಮಿಷ ಒತ್ತಿ ಹಿಡಿದೆ. ತುಂಡಾಗಿದ್ದ ರಕ್ತನಾಳ ಎಲ್ಲ ಸ್ಪಷ್ಟವಾಗಿ ಕಾಣಿಸಿತು. ಕರುವನ್ನು ಇಬ್ಬರು ಮೂವರು ಒತ್ತಿ ಹಿಡಿದರು. ಬ್ಯಾಟರಿ ಬೆಳಕಲ್ಲಿ ನಾನು ಆ ರಕ್ತನಾಳಕ್ಕೆ ಸರಿಯಾಗಿ Artery Forceps ಹಾಕಿ ಬಿಗಿ ಮಾಡಿದೆ. ಎಲ್ಲರಿಗೂ ಆಶ್ಚರ್ಯವಾಗುವಂತೆ ರಕ್ತ ಸೋರುವುದು ಒಮ್ಮೆಲೇ ನಿಂತು ಹೋಯಿತು. ಟಿಂಚರ್ ಅಯೋಡಿನ್ನಲ್ಲಿ ಅದ್ದಿದ್ದ ದಾರವನ್ನು ಆ ರಕ್ತನಾಳಕ್ಕೆ ಬಿಗಿದು Forceps ತೆಗೆದೆ. ಗಾಯಕ್ಕೆಲ್ಲ ಟಿಂಚರ್ ಹಾಕಿ, ನೋವು ಮತ್ತು ಸೋಂಕಿಗೆ ಇಂಜೆಕ್ಷನ್ ಮಾಡಿದೆ.

ರಾಮಚಂದ್ರನ್ ಅವರ ಶ್ರೀಮತಿಯವರು (ಅವರ ಹೆಸರೂ ಸಹ ಶ್ರೀಮತಿ ಎಂದೇ) ಮತ್ತು ಮೂವರು ಮಕ್ಕಳು ತಮಿಳಿನಲ್ಲಿ ಮಾತಾಡಿಕೊಳ್ಳುತ್ತ ಸಂಭ್ರಮಿಸಿದರು. ಡಾಕ್ಟರು ಹೊಸಬರಾದ್ದರಿಂದ ಅವರಿಗೆ ಅನುಭವವಿಲ್ಲ, ಬೇರೆಯವರಿಂದ ಚಿಕಿತ್ಸೆ ಕೊಡಿಸಿ ಎಂದು ಯಾರೋ ಅವರಿಗೆ ಹೇಳಿದ್ದರಂತೆ. ಆದರೂ ರಾಮಚಂದ್ರನ್ ನನ್ನ ಬಳಿ ಚಿಕಿತ್ಸೆಗೆ ಬಂದಿದ್ದರು.

ಅಷ್ಟು ಹೊತ್ತಿಗೆ ರಾತ್ರಿ ಏಳೂವರೆ ಆಗಿತ್ತು. ಮಕ್ಕಳೆಲ್ಲ ಓದಲು ಬರೆಯಲು ಕೂತರು. ಮೊದಲನೆಯ ಮಗಳು ಭಾರ್ಗವಿ ತಿಪಟೂರಿನ ಯಾವುದೋ ಕಾನ್ವೆಂಟ್ ಸ್ಕೂಲಿಗೆ ಹೋಗಿ ಬರುತ್ತಿದ್ದಳು. ಅವಳು ತನ್ನ ವಿಜ್ಞಾನದ ಪುಸ್ತಕ ತೆಗೆದು ಓದುತ್ತಿದ್ದಳು. ನಾನು ಕುತೂಹಲಕ್ಕೆ ಪುಸ್ತಕ ಇಸಿದುಕೊಂಡು ನೋಡತೊಡಗಿದೆ. ನನಗೇನೂ ಅವಸರವಿರಲಿಲ್ಲ. ಆಗಿನ್ನೂ ನನ್ನ ಮದುವೆಯಾಗಿರಲಿಲ್ಲ. ನೊಣವಿನಕೆರೆಯಲ್ಲಿಯೇ ಮನೆ ಮಾಡಿದ್ದೆ. ಸಂಜೀವರಾಯರ ಹೋಟೆಲಲ್ಲಿ ಊಟ. ಗುಂಡುಗೋವಿ ಥರ ಇದ್ದೆ.

ಆ ವಿಜ್ಞಾನ ಪುಸ್ತಕದಲ್ಲಿ  ‘Soil’ ಎಂಬ ಅಧ್ಯಾಯದ ಪ್ರಶ್ನೋತ್ತರವನ್ನು ಬರೆಯುತ್ತಿದ್ದ ಭಾರ್ಗವಿಗೆ Types of Soil, Properties of Soil ಮುಂತಾದ ವಿಷಯಗಳ ಬಗ್ಗೆ ಹೇಳಿಕೊಟ್ಟೆ. ಮಿಡ್ಲ್ ಸ್ಕೂಲಲ್ಲಿ ಓದುತ್ತಿದ್ದ ಭಾರ್ಗವಿ ಬಹಳ ಲವಲವಿಕೆಯಿಂದ ಪಾಠ ಕೇಳಿದಳು. ಆ ದಿನ ಹೋಮ್‌ವರ್ಕನ್ನೆಲ್ಲ ಬರೆದು ಮುಗಿಸಿದಳು.

ಈ ದಿನ ನಮ್ಮನೆಯಲ್ಲೇ ಊಟ ಮಾಡಿರೆಂದರು ರಾಮಚಂದ್ರನ್ ಮತ್ತು ಶ್ರೀಮತಿಯವರು. ಒಪ್ಪಿಕೊಂಡು ಮತ್ತೊಮ್ಮೆ ಕೈ ತೊಳೆದುಕೊಂಡು ನೆಲದ ಮೇಲೆ ಚಕ್ಕಳಬಕ್ಕಳ ಕೂತು ಊಟ ಮಾಡುತ್ತ Soil ಅಂದ್ರೇನು ಭಾರ್ಗವಿ ಕನ್ನಡದಲ್ಲಿ?’ ಅಂದೆ. ಪುಸ್ತಕಗಳನ್ನೆಲ್ಲ ತೆಗೆದು ಚೀಲಕ್ಕೆ ತುಂಬುತ್ತಿದ್ದ ಭಾರ್ಗವಿ ಹಿಂದುಮುಂದು ನೋಡದೆ ‘ಎಣ್ಣೆ’ ಅಂದಳು. ನಾನು ಅವಾಕ್ಕಾಗಿ ಕೂತೆ. Soil ಮತ್ತು Oil ಶಬ್ದಗಳು ಅವಳನ್ನು ಗಲಿಬಿಲಿಗೊಳಿಸಿದ್ದವು.

ಅವಳ ಮಾತೃಭಾಷೆ ತಮಿಳು. ಮನೆಯ ಹೊರಗೆ ಕನ್ನಡ. ಶಾಲೆಯಲ್ಲಿ ಎಂದೂ ಕೇಳದ ಆಡದ ಇಂಗ್ಲಿಷ್. Soil ಬಗ್ಗೆ ಏನು ಕೇಳಿದರೂ ಪಟಪಟನೆ ಇಂಗ್ಲೀಷಿನಲ್ಲಿ ಉತ್ತರಿಸುತ್ತಿದ್ದಳು. ಎಷ್ಟು ಸಲ ಓದಿದ್ದಳೋ ಏನೋ? ಕಂಠಪಾಠವಾದಂತಿತ್ತು. ಇದು ೧೯೮೪ ರಲ್ಲಿ ನಡೆದದ್ದು. ಅದಾಗಲೇ ನಮ್ಮ ಶಿಕ್ಷಣ ಪದ್ಧತಿ ದಿಕ್ಕುತಪ್ಪಿತ್ತು.

ಮಹಾ ಜಾಣೆಯಾಗಿದ್ದ, ಚೈತನ್ಯದಿಂದ ಪುಟಿಯುತ್ತಿದ್ದ ಭಾರ್ಗವಿ ಕಂಡು ಕೇಳರಿಯದ ಇಂಗ್ಲೀಷಿನಲ್ಲಿ ಕಲಿಯುತ್ತ, ಮೇಷ್ಟ್ರ ಹೆದರಿಕೆಗೂ, ಅಂಕ ರ‍್ಯಾಂಕುಗಳ ಆಮಿಷಕ್ಕೂ ಬಲಿ ಬಿದ್ದು ಎಲ್ಲವನ್ನೂ ಉರು ಹೊಡೆವ ಯಂತ್ರವಾಗಿದ್ದಳು. ಏನು ಓದುತ್ತಿದ್ದೇನೆಂಬ ಅರಿವು ಸಹ ಅವಳಿಗಿರಲಿಲ್ಲ.

‍ಲೇಖಕರು Avadhi

October 6, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. Dr.Devaraj MB.

    Very interesting episode but abruptly concluded. Thanks Basheer. I was just remembering you.

    ಪ್ರತಿಕ್ರಿಯೆ
  2. Sudhakara Battia

    Dr Bashir is an expert in drawing parallel lines in between domestic animals and human beings in his stories. The story demands our concern towards the society we live along.

    ಪ್ರತಿಕ್ರಿಯೆ
  3. Shyamala Madhav

    ನನ್ನ ಮೊಮ್ಮಗಳೊಡನೆ ರೈತ ಎಂದರೇನು, ಎಂದು ಕೇಳಿದೆ.
    ಅದು – ಕರ್ಡ್ ಹಾಕಿ ಮಾಡ್ತಾರಲ್ಲ, ಅದು , ಎಂದಳು!

    ಪ್ರತಿಕ್ರಿಯೆ
  4. ಪ್ರದೀಪ ಬಿ ಎಸ್

    ಸರ್.ನಿಮ್ಮ ಅನುಭವದ ಕಥೆಗಳು ಅದ್ಭುತ ವಾಗಿ ಮೂಡುತ್ತಿವೆ.ಸರಳ ಕನ್ನಡದ ನಿಮ್ಮ ಕಥೆಗಳು ಮನಸೂರೆಗೊಳ್ಳುತ್ತಿವೆ.

    ಪ್ರತಿಕ್ರಿಯೆ
  5. ಡಾ. ಎಸ್. ಬಿ. ರವಿ ಕುಮಾರ್

    ಡಾ. ಮಿರ್ಜಾ ಬಷೀರ್ ರವರ ಅನುಭವ ಕಥನ ಪಶು ವೈದ್ಯರ ಕೆಲಸದ ವೈಖರಿ, ಎಷ್ಟೇ ಸಣ್ಣ ಪ್ರಾಣಿಯಾದರೂ ಅದರ ಜೀವ ಉಳಿಸುವ ಕಾಳಜಿ, ಜನ ಸಾಮಾನ್ಯರೊಂದಿಗಿನ ಪಶುವೈದ್ಯರ ಆಪ್ತವಾದ ಸಂಬಂಧಗಳು ಮುಂತಾದುವುಗಳನ್ನು ಅನಾವರಣಗೊಳಿಸುವ ಜೊತೆಗೆ, ಸಮಾಜದ, ವ್ಯವಸ್ಥೆಯಲ್ಲಿನ ಕುಂದುಕೊರತೆಗಳ ಬಗೆಗಿನ ನಿರಾಸೆ ವಿಷಾದಗಳನ್ನು ಕಟ್ಟಿಕೊಡುತ್ತವೆ. ಸರಳವಾದ ಆಪ್ತವಾದ ಬರಹ.

    ಪ್ರತಿಕ್ರಿಯೆ
  6. Akthar Hussain

    Matter is clear, poet conved what he want to convey. But I feel story is incomplete…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: