ಎಚ್ ಎಸ್ ವಿ ಯವರ ’ಕುಮಾರವ್ಯಾಸ ಕಥಾಂತರ’ ಬಿಡುಗಡೆ ಆಗ್ತಿದೆ

ಎಚ್ ಎಸ್ ವೆಂಕಟೇಶಮೂರ್ತಿಯವರ ’ಕುಮಾರವ್ಯಾಸ ಕಥಾಂತರ’ ಅಭಿನವ ದ ಮೂಲಕ ಪುಸ್ತಕವಾಗಿ ಬರುತ್ತಿದೆ.

ಸಮಾರಂಭದ ಆಹ್ವಾನ ಪತ್ರಿಕೆ, ಎಚ್ ಎಸ್ ವಿ ಅವರ ನುಡಿ ಮತ್ತು ಬೆನ್ನುಡಿ ಅವಧಿ ಓದುಗರಿಗಾಗಿ.


 

ಫಲಶ್ರುತಿ
ವೇದಪಾರಾಯಣದ ಫಲ| ಗಂ
ಗಾದಿ ತೀರ್ಥ ಸ್ನಾನ ಫಲ| ಕೃ
ಚ್ಛ್ರಾದಿತಪಸಿನ ಫಲವು| ಜ್ಯೋತಿಷ್ಟೋಮ ಯಾಗಫಲ|
ಮೇದಿನಿಯನೊಲಿದಿತ್ತ ಫಲ| ವ
ಸ್ತ್ರಾದಿ ಕನ್ಯಾದಾನ ಫಲ|ವಹು
ದಾದರಿಸಿ ಭಾರತದೊಳೊಂದಕ್ಷರವ ಕೇಳ್ದರಿಗೆ||
ಭಾರತ ಪಾರಾಯಣದ ಪ್ರತಿ ಕೊನೆಗೂ (ಕೊನೆ ಕಡೆಯೂ ಹೌದು, ಆರಂಭವೂ ಹೌದು, ಕೊನೆ= ಚಿಗುರು) ಫಲಶ್ರುತಿಯ ಪದ್ಯವನ್ನು ಓದುವ ಸಂಪ್ರದಾಯ ಉಂಟು. ನಾವು ಯಾವುದೇ ಪರ್ವವನ್ನು ಓದಬಹುದು. ಆದರೆ ಆರಂಭ ಮಾತ್ರ ಶ್ರೀವನಿತೆಯರಸನೆ ಪದ್ಯದಿಂದ ಆಗಬೇಕು. ಮಂಗಲ ವೇದಪಾರಾಯಣದ ಫಲದಿಂದ ಆಗಬೇಕು. ಈಗ ಓದುವ ಎನ್ನುವ ಮಾತನ್ನು ಬಳಸಿದ್ದೇನೆ. ಓದುವವ ಒಬ್ಬ ಬೇಕೇ ಬೇಕು. ಆದರೆ ಭಾರತವು ಪ್ರಧಾನವಾಗಿ ಕೇಳುವ ಕಾವ್ಯವಾಗಿದೆ. ಕುಮಾರವ್ಯಾಸನು ಹಾಡುತ್ತಿರುವುದಾದರೂ ಕೇಳುಗರಿಗಾಗಿ! (ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು-ಕುವೆಂಪು). ಜಿ ಎಸ್ ಎಸ್ ಹೇಳುವಂತೆ ಬಹುಜನ ಅನಕ್ಷರಸ್ಥರ ಈ ಸಮಾಜದಲ್ಲಿ ಓದುವುದಕ್ಕಿಂತ ಕೇಳುವುದು ಬಹು ದೊಡ್ಡ ಮೌಲ್ಯವಾಗುವುದು ಅನಿವಾರ್ಯ. ಭಾರತದೊಳೊಂದಕ್ಷರವ ಕೇಳ್ದರಿಗೆ ಎನ್ನುವ ಕುಮಾರವ್ಯಾಸನ ಮಾತನ್ನು ಈ ಹಿನ್ನೆಲೆಯಲ್ಲೇ ನಾವು ಗ್ರಹಿಸಬೇಕಾಗಿದೆ.
ಹೇಳೀಕೇಳಿ ಕುಮಾರವ್ಯಾಸ ಭಾರತವು ಬಹು ದೊಡ್ಡ ವಿನಾಶದ ಕಥನವನ್ನು ಒಳಗೊಂಡಿದೆ. ಮೊದಲು ಸಂಭವ ಕಥನ; ಆಮೇಲೆ ಬದುಕಿನ ನಾನಾ ತಿರುವುಗಳಲ್ಲಿ ಪ್ರವಹನ; ಕೊನೆಗೆ ಮೃತ್ಯುವೆಂಬ ಮಾಹಾಬ್ಧಿಯಲ್ಲಿ ಸಮ್ಮಿಲನ. ಇದು ಮಹಾಭಾರತದ ಕಥನದ ಹರಿವು. (ಮಹಾಭಾರತ ತೀರ್ಥವಾಗುವುದೂ ಇದೇ ಕಾರಣಕ್ಕೆ. ಮಾಸ್ತಿಯವರ ಭಾರತ ಕುರಿತ ಕೃತಿಯ ಹೆಸರು ಭಾರತತೀರ್ಥ. ಕುಮಾರವ್ಯಾಸ ಆರಂಭದ ಪದ್ಯಗಳಲ್ಲೇ ಇದು ಬರಿಯ ತುಳಸಿಯ ಉದಕದಂತಿರೆ ಎಂದು ತೀರ್ಥದ ಕಲ್ಪನೆಯನ್ನು ಪರೋಕ್ಷವಾಗಿ ತಂದುಬಿಟ್ಟಿದ್ದಾನೆ. ಇಲ್ಲಿ ಅನೇಕ ತೀರ್ಥಕ್ಷೇತ್ರಗಳಿವೆ; ಅನಂತ ತೀರ್ಥಯಾತ್ರೆಗಳಿವೆ. ಕೊನೆಗೆ ಬರುವ ಮಹಾಪ್ರಸ್ಥಾನವೂ ಒಂದು ಮಹಾತೀರ್ಥಯಾತ್ರೆಯ ಉದ್-ಯೋಗವೇ ಆಗಿದೆ. ಯಾವುದೇ ತೀರ್ಥಯಾತ್ರೆಯೂ ನಿಷ್ಫಲವಾಗುವಂತಿಲ್ಲ. ಅದಕ್ಕಾಗಿಯೇ ಫಲಶ್ರುತಿಯ ಪ್ರಸ್ತಾಪವಾಗಿರುವುದು.
ತೀರ್ಥಯಾತ್ರೆ ಮಾಡತಕ್ಕದ್ದಾಗಿರುವಂತೇ ಕೇಳತಕ್ಕದ್ದೂ ಆಗಿದೆ. ತೀರ್ಥಯಾತ್ರಾಶ್ರವಣ ಎಂಬ ಮಾತು ನಮ್ಮಲ್ಲಿ ಚಾಲ್ತಿಯಲ್ಲಿದೆ. ಪ್ರವಾಸಕಥನ ಎಂಬುದು ಆಧುನಿಕ ಪರಿಭಾಷೆ.(ಕನ್ನಡದ ಮೊಟ್ಟಮೊದಲ ಪ್ರಾವಾಸಕಥನದ ಹೆಸರು: ಪಂಪಾಯಾತ್ರೆ-ವಿಸೀ ರಚನೆ). ಪ್ರವಾಸಕಥನದ ಮೂಲ ಕಲ್ಪನೆಯೂ ತೀರ್ಥಯಾತ್ರಾಶ್ರವಣವೇ! ಈಗಲೂ ಯಾತ್ರೆ ಮುಗಿಸಿಕೊಂಡು ಬಂದ ಯಾತ್ರಿಗಳು ತಮ್ಮ ಅನುಭವಗಳನ್ನು ಮನೆ ಮಂದಿಗೆ ಕಥನಮಾಡುವ ರೂಢಿ ನಮ್ಮಲ್ಲಿದೆ. ಹೀಗಾಗಿಯೇ ಕೃತಿಯು ಎಂತೋ ಅಂತೇ ಶ್ರುತಿಯೂ ಮುಖ್ಯವಾದುದಾಗಿದೆ. ಫಲ-ಶ್ರುತಿ ಎಂಬುದನ್ನು ಶ್ರುತಿ-ಫಲ ಎಂದು ಉಲ್ಟಾಮಾಡಿ ಓದಿಕೊಂಡರೂ ತಪ್ಪಾಗಲಿಕ್ಕಿಲ್ಲ. ಶ್ರುತಿ ಎನ್ನುವುದು ಹೀಗೆ ಕೇಳ್ಮೆಯ(ಇದು ಸಂಗೀತದ ಪರಿಭಾಷೆ. ಹೆಚ್ಚು ಸಂಗೀತ ಕೇಳಿದವನನ್ನು ಆತನ ಕೇಳ್ಮೆ ಬಲು ದೊಡ್ಡದು ಎಂದು ಶ್ಲಾಘಿಸುವುದುಂಟು) ಬಹುದೊಡ್ಡ ಮೌಲ್ಯ. ಯಾರು ಹೆಚ್ಚು ಕೇಳುತ್ತಾನೋ ಆತ ಬಹುಶ್ರುತ(ಜ್ಞಾನಿ). ಬಹುಕೃತ ಎನ್ನುವಂತೆ ಬಹುಶ್ರುತ ಎನ್ನುವುದೂ ಬಹು ಮುಖ್ಯವಾದ, ಕರ್ತೃತ್ವಕ್ಕೆ ಪರ್ಯಾಯವಾದ ಪರಿಕಲ್ಪನೆಯಾಗಿದೆ.ನಮ್ಮಲ್ಲಿ ಗುರುಶ್ರುಶ್ರೂಷೆ ಎಂಬ ಮಾತು ಉಂಟಲ್ಲ, ಅದನ್ನೀಗ ನಾವು ಗುರುಸೇವೆ ಎನ್ನುವ ಅರ್ಥದಲ್ಲಿ ಬಳಸುತ್ತಾ ಇದ್ದೇವೆ. ಆದರೆ ಶ್ರುಶ್ರೂಷೆ ಎಂಬ ಮಾತಿನ ಮೂಲಾರ್ಥ ಗುರುವಿನ ಮಾತನ್ನು ಶ್ರದ್ಧೆಯಿಂದ ಕೇಳಿಸಿಕೊಳ್ಳುವುದು ಎಂಬುದೇ ಆಗಿದೆ. ಶ್ರೋತುಮಿಚ್ಛಾ ಶುಶ್ರೂಷಾ (ಈ ಬಗ್ಗೆ ನನ್ನ ಗಮನ ಸೆಳೆದ ಡಾ|ಶ್ರೀರಾಮಭಟ್ಟರಿಗೆ ಆಭಾರಿಯಾಗಿದ್ದೇನೆ). (ಸ್ಮೃತಿ, ಶ್ರುತಿ ಎಂಬ ಮಾತುಗಳನ್ನೂ ಇಲ್ಲಿ ಸುಮ್ಮನೆ ನೆನೆಯಬಹುದು).
ತನ್ನ ಕೃತಿಯನ್ನು ಆದರಿಸಿ ಕೇಳ್ದವರಿಗೆ ಏನೇನು ಫಲಗಳು ದೊರೆಯುತ್ತವೆ ಎಂದು ಕುಮಾರವ್ಯಾಸ ಪಟ್ಟಿ ಮಾಡಿದ್ದಾನೆ. ಅವುಗಳಲ್ಲಿ ಮೇದಿನಿ ಮತ್ತು ವಸ್ತ್ರದಾನವು ಹೇಗೆ ಮಹಾಭಾರತದ ಕಥನದ ಸಂದರ್ಭದಲ್ಲಿ ಕವಿ ಎತ್ತಿ ಹಿಡಿಯುವ ಎರಡು ಬಹುಮುಖ್ಯವಾದ ಧನಾತ್ಮಕ ಮೌಲ್ಯಗಳಾಗಿವೆ ಎಂಬುದನ್ನು ಈಗಾಗಲೇ ಪ್ರಾಸ್ತಾಪಿಸಿದ್ದಾಗಿದೆ. ಕಂಡವರ ಭೂಮಿ, ಕಂಡವರ ಬಟ್ಟೆ ಇವುಗಳಿಗೆ ಬಗೆದ ದ್ರೋಹವೇ ಮಹಾಭಾರತದ ಮಹಾಕಥನದ ಮೂಲವಾಗಿದೆಯಲ್ಲವೆ? ಈ ಅಪಮೌಲ್ಯಗಳಿಗೆ ಒಡ್ಡಿದ ಎರಡು ಧನಾತ್ಮಕ ಪ್ರತಿಮೌಲ್ಯಗಳು-ಮೇದಿನಿಯನೊಲಿದೀವುದು(ಭೂದಾನ), ವಸ್ತ್ರದಾನ ಮಾಡುವುದು. ಒಂದು ತಿನ್ನುವ ಅನ್ನದ ಸಂಗತಿ; ಮತ್ತೊಂದು ಉಡುವ ಬಟ್ಟೆಯ ಸಂಗತಿ. ರಾಜ್ಯಾಪಹರಣ ಮತ್ತು ವಸ್ತ್ರಾಪಹರಣ ಮಹಾಭಾರತದಲ್ಲಿ ದುರ್ಯೋಧನ ಮಾಡಿರುವ ಎರಡು ಮಹಾಪರಾಧಗಳಾಗಿವೆ.
ಕುಮಾರವ್ಯಾಸ ಭಾರತವನ್ನು ಇಡಿಯಾಗಿ ಓದಬೇಕಾಗಿಲ್ಲ! ಆದರದಿಂದ ಒಂದಕ್ಷರವನ್ನು ಕೇಳಿದರೂ ಸಾಕು-ಎಂದು ಅರ್ಥಮಾಡಿಕೊಳ್ಳುವ ತಪ್ಪೋದಿನ ಸಾಧ್ಯತೆ ಇದ್ದೇ ಇದೆ!! ತೂಗಡಿಸುವವರಿಗೆ ಹಾಸಿಗೆ ಹಾಸಿಕೊಟ್ಟಂತೆ ಈ ಮಾತು. ಕುಮಾರವ್ಯಾಸನೇ ಹೇಳಿದ್ದಾನಲ್ಲ! ಒಂದಕ್ಷರ ಕೇಳಿದರೆ ಸಾಕು ಬಿಡಿ! ಯಾವುದು ಈ ಒಂದಕ್ಷರ? ಆ ಬಗ್ಗೆ ಸ್ವಲ್ಪ ಯೋಚನೆ ಮಾಡೋಣ.
ನಾನು ಮತ್ತೆ ಮತ್ತೆ ಪ್ರಸ್ತಾಪಿಸಿರುವಂತೆ ಮಹಾಭಾರತವು ಒಂದು ಮಹಾನಾಶದ ಕಥನವಾಗಿದೆ. ಆದರೆ ಎಲ್ಲವೂ ನಾಶವಾಗುವುದಾದರೆ ಭವಿಷ್ಯಕ್ಕೆ ಉಳಿಯುವುದಾದರೂ ಏನು? ಪುರಾಣದ ಕಲ್ಪನೆಯ ಪ್ರಕಾರ ಮಹಾಪ್ರವಾಹ ಎಲ್ಲವನ್ನೂ ಕೊಚ್ಚಿಕೊಂಡು ಹೋಗುವಾಗ ಒಂದು ಆಲದ ಎಲೆಯ ಮೇಲೆ ವಿಷ್ಣು ಬಾಲಮೂರ್ತಿಯಾಗಿ ತೇಲುವನಂತೆ. ಅವನ ನಾಭಿಯಿಂದ ಕಮಲ ಉದ್ಭವಿಸಿ, ಕಮಲದಲ್ಲಿ ಬ್ರಹ್ಮನು ಉದ್ಭವಿಸಿ, ಮತ್ತೆ ಸೃಷ್ಟಿಕಾರ್ಯವು ಮುಂದುವರೆಯುವುದಂತೆ. ( ಮನುವಿನ ತೆಪ್ಪ , ನೋಹನ ದೋಣಿಗಳು ಈಗ ಮನಶ್ಶರಧಿಯಲ್ಲಿ ತೇಲಿಹೋಗುತ್ತಾ ಇವೆ). ಒಟ್ಟಿನಲ್ಲಿ ಗ್ರಹಿಸಬೇಕಾದದ್ದು ಮಹಾಕ್ಷರದಲ್ಲೂ ಒಂದು ಅಕ್ಷರ ಉಳಿಯಲೇ ಬೇಕು. ನಶ್ವರದ ನಡುವೆಯೇ ಉಳಿಯುವ ಈ ಶಾಶ್ವತಿಯೇ ಕುಮಾರವ್ಯಾಸ ಹೇಳುವ ಒಂದಕ್ಷರವಾಗಿದೆ!
ಮಹಾಭಾರತದ ಈ “ಅ-ಕ್ಷರ” ಯಾವುದು? ಅಂದರೆ ಶಾಶ್ವತಿಯ ಅಂಶ ಯಾವುದು? ಕಾವ್ಯಾಂತ್ಯದಲ್ಲಿ ಉಳಿದದ್ದು ಏನು? ಧರ್ಮಾತ್ಮರು, ಮಹಾತ್ಮರು, ಮಹಾವೀರರು, ಲಕ್ಷಾಂತರ ಯೋಧರು, ಕುದುರೆ ಆನೆ ಮೊದಲಾದ ಎಲ್ಲವೂ ಕಾಲಾಬ್ಧಿಯಲ್ಲಿ ಮುಳುಗಿಹೋದವು. ಕೊನೆಗೆ ಮಹಾದೈವವಾದ ಶ್ರೀಕೃಷ್ಣನೂ. ಅಚ್ಯುತನೇ ದೇಹತ್ಯಾಗಮಾಡಿಬಿಟ್ಟನು. ಕೌರವರು, ನಾಲ್ವರು ಪಾಂಡವರೂ ನಾಶವಾದರು. ಕೊನೆಗೂ ಸಶರೀರನಾಗಿ ಉಳಿದವನು ಯುಧಿಷ್ಠಿರ ಮಾತ್ರ. ಅಂದರೆ ಉಳಿದದ್ದು ಎಲ್ಲವನ್ನೂ ಧರಿಸಬಲ್ಲ ಧರ್ಮ ಮಾತ್ರ. ಯುಧಿಷ್ಠಿರನ ಉಳಿವು ಭಾರತವು ಸೃಷ್ಟಿಸಿದ ಒಂದು ಮಹಾಪ್ರತೀಕವಾಗಿದೆ.ಯುಧಿಷ್ಠಿರ ಈ ತತ್ತ್ವದ ವ್ಯಕ್ತಿರೂಪವಷ್ಟೆ! ಮಾಸ್ತಿಯವರು ತಮ್ಮ ಭಾರತತೀರ್ಥ ಎನ್ನುವ ಉದ್ಗ್ರಂಥದಲ್ಲಿ ಚರ್ಚಿಸಿದ್ದಾರೆ. ತನ್ನ ಬದುಕಿನುದ್ದಕ್ಕೂ ಯುಧಿಷ್ಠಿರ ಆರಾಧಿಸಿದ ಧರ್ಮದ ಸ್ವರೂಪವೇನು? ಒಂದೇ ಮಾತಲ್ಲಿ ಅದನ್ನು ಸೂಚಿಸ ಬಹುದಾದರೆ-ಸರ್ವಭೂತ ಹಿತೇ ರತಃ. ( ದಯವಿರಲಿ ಸಕಲ ಪ್ರಾಣಿಗಳಲ್ಲಿ-ಬಸವಣ್ಣ. ಭೂತ ಶಬ್ದ ಒಳಗೊಳ್ಳುವ ಅರ್ಥಧ್ವನಿ ಇನ್ನೂ ವಿಶಾಲವಾದುದು. ಸಕಲ ಜೀವಿಗಳ ಜೊತೆಗೆ ಪಂಚಭೂತಗಳಾದ ಭೂಮಿ, ಆಕಾಶ, ಗಾಳಿ, ನೀರು ಮತ್ತು ಬೆಂಕಿಗಳೂ ಅದರಲ್ಲಿ ಸೇರುತ್ತವೆ. ಬೆಂಕಿಯೊಂದನ್ನು ಹೊರತು ಉಳಿದೆಲ್ಲ ಭೂತಗಳನ್ನೂ ನಾವು ಕುಲಗೆಡಿಸಿಬಿಟ್ಟಿದ್ದೇವೆ. ಸದಾ ನಮ್ಮ ಹಿತ ಕಾಯುವ ಅವುಗಳ ಹಿತ ಕಾಯುವ ಹೊಣೆಗಾರಿಕೆಯೇ ನಮಗೆ ಇಲ್ಲವಾಗಿದೆ. ಪರಿಸರ ಪ್ರಜ್ಞೆಯ ಅರಿವಿನಲ್ಲಿ ನಾವೀಗ ಸರ್ವಭೂತಹಿತೇ ರತಃ ಎಂಬ ಮಾತನ್ನು ಇನ್ನೂ ವಿಸ್ತೃತ ನೆಲೆಯಲ್ಲಿ ಅರ್ಥೈಸಿಕೊಳ್ಳಬೇಕಾಗಿದೆ).
ಸರ್ವಭೂತ ಹಿತದಲ್ಲಿ ಮನಸ್ಸನ್ನು ಪ್ರವೃತ್ತ ಗೊಳಿಸುವುದು-ಇದು ಧರ್ಮಾತ್ಮನ ಆತ್ಮಲಕ್ಷಣವೂ ಹೌದು. ಮಥಿತಾರ್ಥ ಇಷ್ಟೇ: ನಾವು ಮಾಹಾಭಾರತವನ್ನು ಕೇಳಿದ ಮೇಲೆ ಗ್ರಹಿಸಬೇಕಾದದ್ದು ಇಂಥ ಧರ್ಮದ ಸ್ವರೂಪವನ್ನು. ಧರ್ಮದ ಸ್ವರೂಪವೇನು, ಸೂಕ್ಷ್ಮವೇನು ಎಂಬುದನ್ನ ನಾವು ತನ್ಮಯನೆಲೆಯಲ್ಲಿ ಶೋಧಿಸಿಕೊಳ್ಳಬೇಕಾಗಿದೆ. ಇದು ಓದುವ, ಕೇಳುವ ಕ್ರಿಯೆಗಿಂತ ಮುಖ್ಯವಾದ ನಿಧಿಧ್ಯಾಸನದ ಸ್ಥಿತಿಗೆ ಶ್ರೋತೃಗಳನ್ನು ತೊಡಗಿಸುವ ಕವಿಯ ಹುನ್ನಾರವಾಗಿದೆ. ಕುಮಾರವ್ಯಾಸನ “ಅಕ್ಷರ”ವು ಧರ್ಮವೆಂಬ ಈ ಚಿರ ಮೌಲ್ಯವನ್ನು ಸೂಚಿಸುತ್ತಿದೆ ಎಂದು ಗ್ರಹಿಸುವುದು ಯುಕ್ತ. ಕಾವ್ಯದ ಅರ್ಥವೂ ಕೇವಲ ಕಾವ್ಯದಲ್ಲಿ ಇರುವುದಿಲ್ಲ. ಕಾವ್ಯ ಮತ್ತು ಓದುಗನ ಕರ್ಷಣದಲ್ಲಿ ಇರುತ್ತದೆ ಎಂಬುದನ್ನು ನಾವು ಮರೆಯಲಿಕ್ಕುಂಟೆ?
ಕುಮಾರವ್ಯಾಸ ಕಥಾಂತರ ಬೆನ್ನುಡಿ
ಕುಮಾರವ್ಯಾಸ ಕಥಾಂತರವು ಅಂತರವನ್ನು ಮಾತ್ರವಲ್ಲ, ಆಂತರ್ಯವನ್ನೂ ಲಕ್ಷಿಸುವ ಉದ್ದೇಶ ಹೊಂದಿದೆ. ಕಥೆಯಷ್ಟೇ ಕಥಾ ಸಂವಿಧಾನವೂ ನನಗೆ ಮುಖ್ಯ. ವ್ಯಾಸರು ಸೃಷ್ಟಿಸಿದ ಮಹಾಭಾರತವೆಂಬ ವಿಶಿಷ್ಟವಾದ ಸಾರ್ವತ್ರಿಕ “ಭಾಷೆಯ” ಮೂಲಕ, ಕುಮಾರವ್ಯಾಸನು ತನ್ನ ಅಂತರಂಗದ ಖಾಸಗಿ “ಮಾತನ್ನು” ಹೇಗೆ ಮೂಡಿಸಿ ಕೃತಾರ್ಥನಾದನು ಎಂಬುದನ್ನು ವಿಶ್ಲೇಷಿಸುವ ಯತ್ನ ಇಲ್ಲಿದೆ. ಭಾಷೆ ಸಮಷ್ಟಿಯದು; ಮಾತು ವ್ಯಷ್ಟಿಯದು ಎಂಬುದು ನನ್ನ ದೃಢವಾದ ನಂಬಿಕೆ. ಜೊತೆಗೆ ಕಾವ್ಯವೆನ್ನುವುದು ಮುಖ್ಯವಾಗಿ ಒಂದು ವಚನರಚನೆಯೆಂಬುದನ್ನು ಕುಮಾರವ್ಯಾಸನಂಥ ಕಾವ್ಯಯೋಗಿಯು ಮಾನ್ಯಮಾಡಿದ್ದಾನೆ ಎಂಬುದೂ ನನಗೆ ಅಷ್ಟೇ ಮುಖ್ಯ. ಆಶಯ ಮತ್ತು ಆಕಾರಗಳ ಅವಿನಾಸಂಬಂಧವನ್ನು ಕುಮಾರವ್ಯಾಸನ ಕಾವ್ಯಯೋಗವು ಹೇಗೆ ಸಾಧಿಸಿದೆ ಎಂಬುದನ್ನು ರಚನೆಗಳನ್ನು ಮುಟ್ಟಿ ಮುಟ್ಟಿ ಮನನ ಮಾಡಿಕೊಳ್ಳುವುದು ನನ್ನ ಈ ಕೃತಿಯ ಆಪ್ತ ಹವಣಿಕೆ.
-ಎಚ್ಚೆಸ್ವಿ
 

‍ಲೇಖಕರು avadhi

July 18, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: