ಬಾಲಗಂಗಾಧರ್ ಮತ್ತು ತಂಡಕ್ಕೆ ಕೆಲವು ಪ್ರಶ್ನೆ ಮತ್ತು ಕೆಲವು ಉತ್ತರಗಳು – ಜಿ ಎನ್ ನಾಗರಾಜ್

ವಚನಗಳ ಸರ್ವಾಂಗವೂ ಜಾತಿ ವ್ಯವಸ್ಥೆಯ ವಿರೋಧ ಹಾಗೂ ಮಹಿಳಾ ಸಮಾನತೆಯ ಪ್ರತಿಪಾದನೆಯೇ

(ಭಾಗ ೩)

(ಭಾಗ ೨ ಓದಲು ಇಲ್ಲಿ ಕ್ಲಿಕ್ಕಿಸಿ)

ಕನ್ನಡದ ಜನಪ್ರಿಯ ದಿನ ಪತ್ರಿಕೆ ಪ್ರಜಾವಾಣಿಯಲ್ಲಿ ವಚನ ಚಳುವಳಿಯ ಬಗ್ಗೆ ಒಂದು ದೀರ್ಘ ಚರ್ಚೆ ನಡೆಯುತ್ತಿದೆ. ಅದರಲ್ಲಿ ಬಾಲ ಗಂಗಾಧರ್ ಎಂಬ ಜರ್ಮನಿಯ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕರೊಬ್ಬರ ಜೊತೆಗೂಡಿರುವ ಬುದ್ಧಿಜೀವಿಗಳ ತಂಡವೊಂದು ಭಾರತದಲ್ಲಿ ಜಾತಿ ವ್ಯವಸ್ಥೆ ಎಂಬುದೇ ಇಲ್ಲ. ಅದೆಲ್ಲವೂ ಬ್ರಿಟಿಷರ ಸೃಷ್ಠಿ.  ವಚನ ಚಳುವಳಿ ಜಾತಿ ವ್ಯವಸ್ಥೆಯ ವಿರುದ್ಧ ದನಿಯೆತ್ತಿದೆ ಎಂಬುದು ಕೂಡ ಬ್ರಿಟಿಷರ ಹಾಗೂ ಅವರ ತೀರ್ಮಾನಗಳನ್ನು ಕುರುಡಾಗಿ ಅನುಸರಿಸುತ್ತಿರುವ ಕನ್ನಡ ವಿದ್ವಾಂಸರ ತಪ್ಪು ತಿಳುವಳಿಕೆ ಎಂದು ಬಲವಾಗಿ ವಾದಿಸುತ್ತಿದ್ದಾರೆ. ಇವುಗಳಿಗೆ ಉತ್ತರವಾಗಿ ಬರೆದ ಲೇಖನದ ಕೆಲ ಭಾಗಗಳನ್ನು ಇಲ್ಲಿ ನೀಡಲಾಗಿದೆ.

ವಚನಗಳಲ್ಲಿ ಕೇವಲ 458 ಮಾತ್ರ ಜಾತಿ,ಕುಲಗಳ ಬಗ್ಗೆ ಪ್ರಸ್ತಾಪಿಸುವಂತೆ ತೋರುತ್ತಿವೆ. ಅದರಲ್ಲಿ ಕೇವಲ 72 ಮಾತ್ರ ಜಾತಿ ವಿರೋಧದ ವಿಚಾರಗಳನ್ನು ಮಂಡಿಸುತ್ತವೆ ಎಂಬ ಬಗ್ಗೆ ಎರಡೂ ಕಡೆಯಿಂದ ಸಾಕಷ್ಟು ಚರ್ಚೆಯಾಗಿದೆ. ಆದರೆ ಈ 458 ವಚನಗಳು ಯಾವುವು ? ಅದನ್ನು ಯಾವ ಮಾನದಂಡಗಳಿಂದ ಆಯ್ಕೆ ಮಾಡಲಾಗಿದೆ ಎಂಬ ವಿವರಗಳು ನಮಗೆ ಲಭ್ಯವಿಲ್ಲ. ಅದನ್ನು ಎಲ್ಲರಿಗೂ ತನಗೆ ತಾನೆ ಗೊತ್ತಾಗುವ ವಿಷಯವೆಂಬಂತೆ ಪರಿಗಣಿಸಲಾಗುವುದಿಲ್ಲ. ಏಕೆಂದರೆ ಅನೇಕ ವಚನಗಳು ಜಾತಿ, ಕುಲದ ಪ್ರಸ್ತಾಪವನ್ನೇ ಮಾಡದೆ ಜಾತಿ ಬೇಧದ ಆಚರಣೆ, ಹಾಗೂ ಅದರ ಹಿಂದಿರುವ ವಿಚಾರ ಭಿತ್ತಿಯನ್ನು ಪ್ರಖರವಾಗಿ ವಿರೋಧಿಸಿವೆ. ಜಾಗದ ಮಿತಿಯಿಂದಾಗಿ ಕೆಲವೇ ಉದಾಹರಣೆಗಳಿಗೆ ಸೀಮಿತವಾಗುತ್ತೇನೆ.
ವಚನ ಸಾಹಿತ್ಯದಲ್ಲಿ ಇದು ಸಾಮಾಜಿಕ ವ್ಯವಸ್ಥೆಗೇನೂ ಸಂಬಂಧವಿಲ್ಲದ ಆಧ್ಯಾತ್ಮವೆಂಬಂತೆ ಕಾಣಿಸುವ ಹಲವು ಪರಿಕಲ್ಪನೆಗಳಿವೆ. ಷಟ್ಭ್ರಮೆ, ಬತ್ತೀಸ ಪಾಶ ಭ್ರಮೆ, ಪಂಚ ಸೂತಕ, ಪಂಚ ಮಹಾ ಪಾತಕ, ಪೂರ್ವ ಸೂತಕ , ಸೂತಕ, ಪೂರ್ವ ಗುಣ , ಪೂರ್ವಾಶ್ರಯ, ಚತುರ್ವಿಧ ಪೂರ್ವಾಶ್ರಯ, ಆಶ್ರಯ , ಪೂರ್ವಾಚಾರ, ಶಿವಾಚಾರ, ಸದಾಚಾರ, ಭೃತ್ಯಾಚಾರ, ತ್ರಿವಿಧಾಚಾರ, ಶೀಲಗಳು, 64 ಶೀಲಗಳು, ಅಷ್ಟ ಮದ, ಅಜಾತ, ಪುನರ್ಜಾತ ಹೀಗೆ ವಚನ ಸಾಹಿತ್ಯದಲ್ಲಿ ನಿರ್ದಿಷ್ಠ  ಅರ್ಥವುಳ ಹತ್ತು ಹಲವು ಪದಗಳಿವೆ. ಈ ಎಲ್ಲ ಪದಗಳಿಗೂ ವಚನಗಳಲ್ಲಿ, ಅಥವಾ ವಚನ ಸಾಹಿತ್ಯದಲ್ಲಿ ವಾಖ್ಯೆಗಳಿವೆ, ಇಲ್ಲಿ ಮೇಲೆ ಹೆಸರಿಲಾದ ಪ್ರತಿಯೊಂದು ಪರಿಕಲ್ಪನೆ, ಹಾಗೂ ಪದಕ್ಕೆ ಜಾತಿ, ಕುಲ ವಿರೋಧಿಯಾದ ಅರ್ಥಗಳಿವೆ.
ಷಟ್ ಭ್ರಮೆ ಯೆಂದರೆ ಜಾತಿ ಭ್ರಮೆ, ಕುಲ ಭ್ರಮೆ, ವರ್ಣ ಭ್ರಮೆ, ಸೇರಿದಂತೆ ಆರು ಭ್ರಮೆಗಳನ್ನು ಶರಣನಾದವನು ನಿವಾರಿಸಿಕೊಳ್ಳಬೇಕು ಎಂದು ಶಿವಶರಣರನೇಕರು ಒತ್ತಾಯಿಸಿದ್ದಾರೆ. ಈ ಆರು ಸೇರಿದಂತೆ 33 ಭ್ರಮೆಗಳ ಒಂದು ಪಟ್ಟಿ ಯೇ ಬತ್ತೀಸ ಪಾಶ ಭ್ರಮೆ. ಇನ್ನು ಸೂತಕಗಳ ಬಗ್ಗೆ ಬಹಳ ವ್ಯಾಪಕವಾಗಿ ವಚನಕಾರರು ಪ್ರಸ್ತಾಪಿಸಿದ್ದಾರೆ. ಸೂತಕ ಅಥವಾ ಪಂಚ ಸೂತಕವೆಂದರೆ ಜನನ ಸೂತಕ, ರಜಸ್ಸೂತಕಗಳ ಜೊತೆಗೆ ಜಾತಿ ಸೂತಕ, ಕುಲಸೂತಕ, ಪ್ರೇತ ಸೂತಕ ಗಳೂ ಸೇರಿದಂತೆ ಇವುಗಳನ್ನು ತ್ಯಜಿಸದವರು ಶರಣರೇ ಅಲ್ಲ ಎಂದು ಪದೇ ಪದೇ ಘೋಷಿಸುತ್ತಾರೆ. ಇನ್ನು ಶಿವಾಚಾರ ವೆಂದರೆ ಜಾತಿಯನ್ನು ಗಣಿಸದೇ ಅಂಗದ ಮೇಲೇ ಲಿಂಗವಿದ್ದವರೆಲ್ಲಾ ಒಂದೇ ಎಂದು ಭಾವಿಸುವುದು ಎಂದು ಅರ್ಥೈಸಿದ್ದಾರೆ. ಭೃತ್ಯಾಚಾರವೆಂದರೆ ಗುರು, ಜಂಗಮರ ಜಾತಿಯನ್ನು ಪರಿಗಣಿಸದೇ ಅವರ ಸೇವೆ ಮಾಡುವುದು. ಹಾಗೆ ಮಾಡದಿದ್ದವರನ್ನು ವಿಧ ವಿಧವಾಗಿ ಟೀಕಿಸಲಾಗಿದೆ.
ಈ ಅನೇಕ ವಚನಗಳು ಕೇವಲ ಜಾತಿ ವಿರೋಧ ಮಾತ್ರವೆ ಅಲ್ಲ ಮಹಿಳೆಯರ ಸಾಮಾಜಿಕ ಭಾಗವಹಿಸುವಿಕೆಗೆ ಅಡ್ಡಿಯಾಗಿದ್ದ ಕಂದಾಚಾರದ ಕಟ್ಟುಪಾಡುಗಳನ್ನೂ ಏಕಕಾಲಕ್ಕೆ ನಿರ್ಮೂಲ ಮಾಡುವ ವಿಚಾರಗಳಿಗೆ ನಾಂದಿ ಹಾಡಿವೆ.
ತಟ್ಟು, ಮುಟ್ಟು, ತಾಗು ನಿರೋಧ ವೆಂಬುದು  ಈ ಮೇಲೆ ಹೇಳಲಾಗಿರುವ ಪಂಚಸೂತಕಗಳಲ್ಲಿನ ಜನನ ಸೂತಕ, ರಜಸ್ಸೂತಕಗಳೊಡನೆ ಜೋಡಿಸಿ ನೋಡಿದರೆ ಮಹಿಳೆಯರನ್ನು ಮೈಲಿಗೆ ಎಂದು ಪರಿಗಣಿಸಿ ಎಲ್ಲ ಸಾಮಾಜಿಕ , ಧಾರ್ಮಿಕ ಕಾರ್ಯಗಳಿಂದ ಹೊರ ಹಾಕಲು ಕಾರಣವಾಗಿದ್ದ ಮೂಲ ಜೈವಿಕ ಕ್ರಿಯೆಗಳ ಮೇಲಿನ ಆರೋಪವನ್ನು ಒಮ್ಮೆಗೇ ತೊಡೆದು ಹಾಕಿರುವುದು ಕಾಣುತ್ತದೆ.
ಇಷ್ಠ ಲಿಂಗ,ಕಾಯಕವೇ ಕೈಲಾಸ,ದೇಹವೇ ದೇಗುಲ, ಗುರು,ಲಿಂಗ, ಜಂಗಮ, ಲಿಂಗಾಂಗ ಸಾಮರಸ್ಯ, ಪಂಚ ವಿಂಶತಿ ತತ್ವಗಳು ಎಂಬ ಆಧ್ಯಾತ್ಮ ವಿಚಾರಗಳು.
ದೊಡ್ಡ ಸಂಖ್ಯೆಯಲ್ಲಿ ವಚನಗಳು ಆಧ್ಯಾತ್ಮ ವಿಚಾರಗಳಿಗೆ ಮಹತ್ವ ನೀಡಿವೆ ಎಂಬ ಈ ತಂಡದ ವಾದ ಸರಿಯಾದದ್ದೇ. ಆದರೆ ಅವರು ತಮ್ಮ ಸಂಶೋಧನೆಯಲ್ಲಿ ಮುಗ್ಗರಿಸಿರುವುದು ಈ ವಿಷಯದ ಬಗ್ಗೆ ಸಂಶೋಧಕರು ತೋರಬೇಕಾದ ಬೇಕಾದ ವಸ್ತುನಿಷ್ಠತೆ , ಎಚ್ಚರವನ್ನು ಕಾಯ್ದುಕೊಳ್ಳದಿರುವುದರಿಂದಲೇ. ಭಾರತದಲ್ಲಿ ಜಾತಿವ್ಯವಸ್ಥೆ ಎಂಬುದು ಇಲ್ಲವೇ ಇಲ್ಲ. ಅದು ಕೇವಲ ಬ್ರಿಟಿಷರ, ಪಾಶ್ಚಾತ್ಯ ಪ್ರಾಟೆಸ್ಟೆಂಟ್ ದೃಷ್ಠಿಕೊನ, ಈ ಪೂರ್ವಾಗ್ರಹಕ್ಕೆ ಭಾರತೀಯ ಸಂಶೋಧಕರೂ ಬಲಿಯಾಗಿದ್ದಾರೆ ಎಂದು ಆರೋಪಿಸುವ ಅವರು ಅದೇ ರೀತಿ ಭಾರತದಲ್ಲಿ ಜಾತಿವ್ಯವಸ್ಥೆಯೇ ಇಲ್ಲ ಎಂಬ ತಮ್ಮ ಪೂರ್ವಾಗ್ರಹವನ್ನು ಸತ್ಯವೆಂದು ಸಾಧಿಸುವ ಅವಸರಕ್ಕೆ ಬಿದ್ದಿದ್ದಾರೆ.  ಅದರಿಂದಾಗಿ ಅವರು ವಚನಗಳ ತಾತ್ವಿಕ (ಆಧ್ಯಾತ್ಮ ) ಚಿಂತನೆಯ ಒಳಗನ್ನು ಅರ್ಥ ಮಾಡಿಕೊಳ್ಳುವ ಗೋಜಿಗೇ ಹೋಗಿಲ್ಲ. ವಚನಗಳ ಜಾತಿ ವ್ಯವಸ್ಥೆಯ ಕಟು ವಿರೋಧಕ್ಕೂ ಅವರ ತಾತ್ವಿಕ ಚಿಂತನೆಗೂ ಇರುವ ಅವಿನಾಭಾವ ಸಂಬಂಧದ ಬಗ್ಗೆ ಅವರು ಕುರುಡಾದರು. ಈ ಸಂಬಂಧ ಕಣ್ಣಿಗೆ ಹೊಡೆದಂತೆ ಎತ್ತಿ ತೋರುತ್ತಿದ್ದರೂ ಜಾತಿಯ ಬಗ್ಗೆ ಆಧ್ಯಾತ್ಮಿಕ ದೃಷ್ಠಿಯ ಕೆಲ ಟೀಕೆಗಳಿವೆಯಷ್ಟೆ ಹೊರತು ಜಾತಿ ವ್ಯವಸ್ಥೆಯ ವಿರೋಧ ಇಲ್ಲ. ಅದೂ ಕೂಡ ಕೆಲ ಸಾಧಕರಿಗೆ ಉದ್ದೇಶಿಸಿದ್ದಷ್ಟೇ, ಇಡೀ ಜನ ಸಮುದಾಯಕ್ಕಲ್ಲ ಎಂಬ ಆಧಾರವಿಲ್ಲದ ತೀರ್ಮಾನಕ್ಕೆ ಬಂದರು.
ಇಷ್ಟ ಲಿಂಗವೇ ಮೊದಲಾದ ಮೇಲೆ ಹೆಸರಿಸಲಾದ ಪರಿಕಲ್ಪನೆಗಳು ಹಾಗೂ ಜಾತಿ ವಿರೋಧ, ದೇವಾಲಯ ವಿರೋಧ,ಹಾಗೂ ಮಹಿಳಾ ಸಮಾನತೆಯ ಜೊತೆಗೆ ಬೇರ್ಪಡಿಸಲಾಗದಂತೆ ಹೆಣೆದುಕೊಂಡ ಒಂದು ತಾತ್ವಿಕ ಸಮಷ್ಠಿ

ಇಷ್ಟ ಲಿಂಗದ ಪರಿಕಲ್ಪನೆ ಲಿಂಗಾಯತ ಧಾರ್ಮಿಕ ಆಚಾರದ ಜೀವಾಳ ಎಂಬುದನ್ನು ಅವರು ನಿರಾಕರಿಸುತ್ತಾರೆಯೇ ? ಇದು ಕೇವಲ ಸಾಧಕರಿಗೆ ಮಾತ್ರ ಸೀಮಿತಗೊಳಿಸಿದ ಆಚರಣೆಯೇ ಅಥವಾ ಈ ಮಾರ್ಗವನ್ನು ಅನುಸರಿಸಿದ ಎಲ್ಲರಿಗೂ ಅನ್ವಯವಾಗುವ ಆಚರಣೆಯೇ ? ಇಂದು ಲಿಂಗಾಯತರೆನಿಸಿಕೊಳ್ಳುವ ಎಲ್ಲಜನ ಸಾಮಾನ್ಯರೂ ಕಡ್ಡಾಯವಾಗಿ ಧರಿಸುವ ಇಷ್ಟ ಲಿಂಗದ ಪರಿಕಲ್ಪನೆ. ಇಡೀ ದೇಶದಲ್ಲಿ ಎಲ್ಲಿಯೂ ಇಲ್ಲದ ಒಂದು ಅತ್ಯಂತ ಮಹತ್ವದ ಸಾಮಾಜಿಕ ಬದಲಾವಣೆಯ ಸಾಧನವೆಂಬುದನ್ನು ತಮ್ಮ ಸಂಶೋಧನೆ ಗಳಲ್ಲಿ ಆಳವಾದ ವಿಶ್ಲೇಷಣೆಗೆ ಒಳಪಡಿಸಿಲ್ಲ ಮಾತ್ರವಲ್ಲ ಒಂದು ರೀತಿಯಲ್ಲಿ ಹೇಳುವುದಾದರೆ ಮರೆಮಾಚಿದ್ದಾರೆ. ವಚನಗಳ ಮಾರ್ಗವನ್ನು ಒಪ್ಪುವವರೆಲ್ಲರೂ ಅವರು ಯಾವುದೇ ಜಾತಿಯರಾಗಿರಲಿ, ಅತ್ಯಂತ ಕೀಳು ಅಸ್ಪೃಶ್ಯ ಜಾತಿಗಳವರಿರಲಿ ತಮ್ಮ ದೇಹದ ಮೇಲೆ ಲಿಂಗವನ್ನು ಧರಿಸಬಹುದೆಂಬ ಯೋಚನೆಯೇ ಅಂದಿನ ಸಮಾಜವೇಕೆ ಇಂದು ಕೂಡ ಎಲ್ಲರನ್ನೂ ಬೆಚ್ಚಿ ಬೀಳಿಸುವಂತಹದು.
ಸ್ಥಾವರವಾದ ದೇವಾಲಯಗಳಲ್ಲಿ ಬ್ರಾಹ್ಮಣರ ಹೊರತಾಗಿ ಬೇರೆಯವರಿಗೆ ದೇವರ ಬಳಿ ಗರ್ಭಗುಡಿಯ ಒಳಗೆ ಪ್ರವೇಶ ಕೂಡ ಇಲ್ಲ. ಇತರೆಲ್ಲ ಜಾತಿಯವರಿಗೆ-ದೈವಾಂಶ ಸಹಿತರಾದ ರಾಜರೂ ಸೇರಿದಂತೆ ಹೊರಗಡೆಯೇ ಅವರವರ ಜಾತಿಗನುಗುಣವಾದ ದೂರದಲ್ಲಿ. ಅಸ್ಪೃಶ್ಯರಂತೂ ದೇವಾಲಯದ ಹೊರಗೇ ಎಂಬುದನ್ನು ಬಹಳ ವಿವರಿಸಬೇಕಿಲ್ಲ. ಇಂತಹ ಸಮಾಜದಲ್ಲಿ ಅಸ್ಪ್ರಶ್ಯರೂ ಸೇರಿದಂತೆ ಎಲ್ಲರೂ ದೇವರ ರೂಪವನ್ನು ದೇಹದ ಮೇಲೆಯೆ ಧರಿಸಬಹುದು ಅದನ್ನೇ ಕೈಯಲ್ಲಿಟ್ಟುಕೊಂಡೇ ಪೂಜಿಸಬಹುದು ಎನ್ನುವುದು ಜಾತಿ ವ್ಯವಸ್ಥೆಯ ಕಂದರಗಳನ್ನು ಒಂದೇ ನೆಗೆತದಲ್ಲಿ ದಾಟುವ ಅಪೂರ್ವ ಆಚರಣೆ. ಆದ್ದರಿಂದಲೇ ಇಷ್ಟ ಲಿಂಗ ಧಾರಣೆ ಹಾಗೂ ಪೂಜೆಯ ಬಗ್ಗೆ ಆ ಪರಿ ಒತ್ತು. ಇದಕ್ಕೆ ಸಂಬಂಧಿಸಿದಂತೆ ದೇವಾಲಯ ನಿರಾಕರಣೆ, ದೇಹವೇ ದೇಗುಲ ಎಂಬ ಪರಿಕಲ್ಪನೆಗಳನ್ನು ವಚನ ಧರ್ಮ ರೂಪಿಸಿತು.
ಇಷ್ಟ ಲಿಂಗ ಪರಿಕಲ್ಪನೆ ಕೇವಲ ಜಾತಿ ವ್ಯವಸ್ಥೆಯ ನಿರ್ಮೂಲನದ ಸಾಧನ ಮಾತ್ರವೇ ಆಗಿರಲಿಲ್ಲ. ಅದು ಮಹಿಳೆಯರಿಗೆ ಸಮಾನತೆಯನ್ನು ಸಾರುವ ಆಚರಣೆಯೂ ಆಗಿತ್ತು, ಇಡೀ ಜೀವಜಾಲದ ಹುಟ್ಟಿಗೇ ಕಾರಣವಾದ ಅವರ ನೈಸರ್ಗಿಕ ದೇಹ ಧರ್ಮವನ್ನೇ – ಮಾಸಿಕ ಅಂಡ ವಿಸರ್ಜನೆಯನ್ನೇ ಅವರನ್ನು ಕೀಳ್ಗಳೆಯುವ, ಪುರುಷಾಧೀನವಾಗಿಸುವ ಸಾಧನವನ್ನಾಗಿ ಮಾಡಿದ ಸನಾತನ ಧರ್ಮದ ಧಿಕ್ಕಾರವೂ ಆಗಿತ್ತು. ಮಹಿಳೆಯರ ಸಮಾನತೆಯನ್ನು ಪ್ರತಿಪಾದಿಸುವ ವಚನಗಳು ಕೂಡ ಜಾತಿ ವ್ಯವಸ್ಥೆಯ ವಿರೋಧದೊಂದಿಗೆ ಈ ಮೂಲಕ ಅಂತರ್ಸಂಬಂಧ ಹೊಂದಿವೆ, ಮೇಲೆ ವಿವರಿಸಿದ ಪಂಚ ಸೂತಕಗಳು – ಜಾತಿ ಸೂತಕ, ರಜಸ್ಸೂತಕ,ಜನನ ಸೂತಕಗಳ ಬಗ್ಗೆ ಒಂದೇ ರೀತಿ ವಿರೋಧಿಸುತ್ತವೆ. ಹಾಗೆಯೇ ಮುಟ್ಟು, ತಟ್ಟು ತಾಗು ನಿರೋಧಗಳು ಜಾತಿ ಬೇಧ, ಲಿಂಗ ಬೇಧಗಳನ್ನು ಅವುಗಳ ನಡುವೆ ವ್ಯತ್ಯಾಸನ್ನು ಎಣಿಸದೆ ಏಕ ಕಾಲಕ್ಕೆ ತೊಲಗಿಸುವ ಪರಿಕಲ್ಪನೆಗಳು. ವ್ರತ,ಉಪವಾಸಗಳನ್ನು ವಿರೋಧಿಸಿದ್ದು ಇದೇ ರೀತಿ ಮಹಿಳೆಯರ ಸಮಾನತೆಯನ್ನು ಪ್ರತಿಪಾದಿಸುವುದರ ಭಾಗವೇ ಆಗಿದೆ. ಪುರುಷ-ಸ್ತ್ರೀಯರಿಗೆಲ್ಲರಿಗೂ ಒಂದೇ ರೀತಿಯ ಲಿಂಗ ಧಾರಣೆ, ಪೂಜಾ ವಿಧಾನಗಳು.
ಇನ್ನು ಏಕ ದೇವೋಪಾಸನೆ, ವಿಷ್ಣು ಮೊದಲಾದ ಮೇಲ್ಜಾತಿಯ ದೇವರುಗಳನ್ನು ಪೂಜಿಸುವುದನ್ನು ವಿರೋಧಿಸಿದ್ದು, ಕೀಳು ದೈವಗಳ ಪೂಜೆಯನ್ನು ಭಂಗಿಸಿದ್ದು ಕೂಡ ಸಮಾಜದಲ್ಲಿ ಜಾತಿಯನ್ನು ಮೀರಿದ ಸಮಾನತೆಯನ್ನು ಸಾಧಿಸುವುದರ ಭಾಗವೇ ಆಗಿದ್ದುವು.

ಇನ್ನು ಬಾಲಗಂಗಾಧರ್ ತಂಡದವರು ಆಧ್ಯಾತ್ಮ ಎನ್ನುವುದರಲ್ಲಿ ಏನೇನನ್ನು ಸೇರಿಸಿಕೊಳ್ಳುತ್ತಾರೋ ಅವರಿಗೇ ಗೊತ್ತು. ‘ ಕಾಯಕವೇ ಕೈಲಾಸ ‘ ಎಂಬುದಂತೂ ಎಲ್ಲ ತತ್ವದ ತಳಪಾಯ ಎಂಬುದು ವಚನಗಳಲ್ಲಿ ಮತ್ತೆ ಮತ್ತೆ ಎತ್ತಿ ತೋರಿಸಿದ ತತ್ವ. ಇದೂ ಕೂಡ ಜಾತಿಗಳ ನಡುವೆ ಸಮಾನತೆಯನ್ನು ಪ್ರತಿಪಾದಿಸುವ ತತ್ವ ಎಂದು ಈಗಾಗಲೇ ಸಾಹಿತಿಗಳು ಈ ಚರ್ಚೆಯಲ್ಲಿ ಮಂಡಿಸಿದ್ದಾರೆ. ಆದರೆ ಕೀಳು ಕರ್ಮಗಳು ಎಂದು ವೈದಿಕ ಧರ್ಮ ಪ್ರತಿಪಾದಿಸಿದ ಅನೇಕ ಕುಶಲ ಕರ್ಮಗಳ ಉಪಕರಣಗಳೇ ಪೂಜೆಯ ಹಾಗೂ ವಚನಗಳ ತತ್ವಗಳನ್ನು ಸಾರುವ ಸಾಧನಗಳಾದವು. ನಾ ತಿರುಹುವ ರಾಟೆಯ ಕುಲ ಜಾತಿಯ ಕೇಳಿರಣ್ಣಾ ಅಡಿಯ ಹಲಗೆ ಬ್ರಹ್ಮ, ತೋರಣ ವಿಷ್ಣು, ನಿಂದ ಬೊಂಬೆ ಮಹಾರುದ್ರ ಎಂದು ವರ್ಣಿಸುವ ಕದಿರ ರೆಮ್ಮವ್ವೆ ಅದನ್ನು ಸುತ್ತುವುದೇ ಪೂಜೆ ಎಂಬ ಭಾವವನ್ನು ಬಿಂಬಿಸುತ್ತಾಳೆ. ಮಾದಾರ ಚೆನ್ನಯ್ಯನೂ ತನ್ನ ವಚನವೊಂದರಲ್ಲಿ
ಆಗು ಚೇಗೆಯೆಂಬ ದಡಿಗೋಲಿನಲ್ಲಿ
ಅಗಡದ ಎಮ್ಮೆಯಚರ್ಮವ ತೆಗೆದು,
ಉಭಯನಾಮವೆಂಬ ನಾರಿನಲ್ಲಿ ತಿತ್ತಿಯನೊಪ್ಪವ ಮಾಡಿ
ಭಾವವೆಂಬ ತಿಗುಡಿನಲ್ಲಿ ಸರ್ವಸಾರವೆಂಬ ಖಾರದ ನೀರ ಹೊಯಿದು,
ಅತ್ಯಂತ ಕೀಳು ಎಂದು ಭಾವಿಸಲಾದ ಚರ್ಮ ಅದರಲ್ಲಯೂ ಎಮ್ಮೆಯ ಚರ್ಮ ಹದಮಾಡುವ ಕಾಯಕದ ರೂಪಕಗಳನ್ನೇ ಉಪಯೋಗಿಸಿ ತಾನು ಅರಗಿಸಿಕೊಂಡ ವಚನ ಚಳುವಳಿಯ ತತ್ವಗಳನ್ನು ಮುಂದಿಡುತ್ತಾನೆ. ಇಂತಹದೊಂದು ಸಂಭವ ಬೇರೇ ಯಾವ ಆಧ್ಯಾತ್ಮದ ಮಾರ್ಗಗಳಲ್ಲಿಯಾದರೂ ಕಾಣಬಹುದೇ ? ಈ ವಚನ ಖಂಡಿತವಾಗಿಯೂ ಈ ತಂಡದ ಲೆಕ್ಕಾಚಾರಕ್ಕೆ ಒಳಪಡುವುದಿಲ್ಲ ಏಕೆಂದರೆ ಇಲ್ಲಿ ಜಾತಿ, ಕುಲ ಎಂಬ ಶಬ್ದಗಳೂ ಇಲ್ಲ ಜಾತಿ ವಿರೋಧ ಎಂಬ ಭಾವವೂ ಇಲ್ಲ ಆದರೂ ಇದು ಜಾತಿ ವಿರೋಧದ ಬಗೆಗಿನ ಪ್ರಬಲ ರೂಪಕವಾಗುತ್ತದೆ. ಸಿಪ್ಪೆಯ ಲೆಕ್ಕಾಚಾರ ಮಾಡಿ ತಿರುಳನ್ನು ಎಸೆಯುವವರಿಗೆ ಇದು ಅರ್ಥವಾಗುವ ಬಗೆ ಹೇಗೆ ? ಅವರು ಸಿಪ್ಪೆಯನ್ನೇ ತಾವೂ ತಿಂದು ನಮಗೂ ತಿನ್ನಿಸ ಬಯಸಿ ಈ ಹಣ್ಣು ಕಳಪೆ ಎಂದು ಹೆಸರಿಡಬಯಸುವವರು ಎಂದೇ ಅರ್ಥ ಮಾಡಿಕೊಳ್ಳಬೇಕಾಗುತ್ತದೆ.
(ಮುಂದುವರೆಯುತ್ತದೆ…)
 

‍ಲೇಖಕರು avadhi

July 18, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

10 ಪ್ರತಿಕ್ರಿಯೆಗಳು

  1. ಕೊನಿಕಾ

    ಈ ಬರಹವನ್ನು ಸ್ವಲ್ಪ ಹೊತ್ತಿನ ಹಿಂದೆ ನೋಡಿದಾಗ ಅಮರೇಶ್ ಹಾಗೂ ಸಹನಾ ಎಂಬ ಓದುಗರ ಚಿಂತನೆಗೆ ಒಡ್ಡುವ ಸಕಾರಾತ್ಮಕ ಪ್ರತಿಕ್ರಿಯೆಗಳು ಕಂಡಿದ್ದವು. ಈಗ ಅವು ಕಾಣುತ್ತಿಲ್ಲ. ಅವುಗಳನ್ನು ತೆಗೆದುದದ್ದು ಏಕೆ ಅಂತ ಸಂಪಾದಕರರೇ ಬಲ್ಲರು! ದಯವಿಟ್ಟು ಹೀಗೆ ಮಾಡಬೇಡಿ ಮೋಹನ್ ಸರ್!

    ಪ್ರತಿಕ್ರಿಯೆ
    • G

      ಕಾಮೆಂಟ್ಗಳು ಕಾಣೆಯಾಗಿವೆ. ತಾಂತ್ರಿಕ ದೋಷದಿಂದ.
      ಹಾಗಾಗಿ ಇಲ್ಲವಾದ ಎರಡೂ ಕಾಮೆಂಟ್ ಗಳನ್ನೂ ಮತ್ತೆ ಹಾಕುವ ಉದ್ಹೇಶದಿಂದ ಇಬ್ಬರಿಗೂ ಅದನ್ನು ಮತ್ತೆ ಕಳಿಸುವಂತೆ ಮೇಲ್ ಮಾಡಲಾಗಿದೆ.
      ಈ ಪೈಕಿ ಒಂದು ಮೇಲ್ ಐ ಡಿ ಅಸ್ತಿತ್ವದಲ್ಲಿಲ್ಲ. ಇನ್ನೊಂದರ ಬಗ್ಗೆ ಗೊತ್ತಾಗಿಲ್ಲ
      ವಿವರ ಇಲ್ಲಿ ಕೊಡಲಾಗಿದೆ:
      Delivery to the following recipient failed permanently:
      [email protected]
      Technical details of permanent failure:
      Google tried to deliver your message, but it was rejected by the server for the recipient domain mailcity.com by mx.lycos.com.cust.b.hostedemail.com. [64.98.36.4].
      The error that the other server returned was:
      554 5.7.1 : Recipient address rejected: user [email protected] does not exist
      —– Original message —–
      DKIM-Signature: v=1; a=rsa-sha256; c=relaxed/relaxed;
      d=gmail.com; s=20120113;
      h=mime-version:date:message-id:subject:from:to:content-type;
      bh=3ElYbNDKyXFHFVSSJOpu59Tiw35yvz8PSurU2D+TuiE=;
      b=us39EFecUj3DfhsTuDGY2jiGIPH/2lpP0VmECUf2/wL88CAxq3L1zY3QYNBkor8++P
      FwHADSHFWKWCxrIa7c0BDDwNVPmCS6I+Hn+F/An/aAAZuRsT7e2V2GWx5/5qwg9lhn+T
      f564cbCvRoxlirEy1ZfHKWbsRWrYanKnAddK9syGsoeeHHXg3IPhuNCQxpPmpe/jxjUk
      uq1BK7lWJTeaEoUKZPsMD/tJeINodX8LK5p5OzFxjOknPXD4Ie80CFui4Pzo3EOnqrOW
      MQZhoLlcyjR8mWXuS3DDqLS9DlOmdf5DzV4Gre0nidkNTIOcG+xjof5Upj+z+8tTQXEg
      m7CA==
      MIME-Version: 1.0
      X-Received: by 10.68.162.97 with SMTP id xz1mr9949326pbb.166.1374118282806;
      Wed, 17 Jul 2013 20:31:22 -0700 (PDT)
      Received: by 10.68.127.70 with HTTP; Wed, 17 Jul 2013 20:31:22 -0700 (PDT)
      Date: Thu, 18 Jul 2013 09:01:22 +0530
      Message-ID:
      Subject: comments
      From: Avadhi Mag
      To: [email protected], [email protected]
      Content-Type: multipart/alternative; boundary=047d7bacb84a204c5004e1c0d846
      c an u please resend ur comments again??

      ಪ್ರತಿಕ್ರಿಯೆ
  2. Madhav Radder

    ‘ಜಾಗದ ಮಿತಿ’ ಎಂದು ನೀವು ಪದೇ ಪದೇ ಹೇಳುತ್ತಿದ್ದೀರಿ! ಈ ಬರಹಗಳ ಸರಣಿ ಪುಸ್ತಕವಾಗಿ ಹೊರಬರಬೇಕು. ಜಾಗದ ಮಿತಿಯಿಂದ ನಿಮ್ಮನ್ನು ನೀವು ಕಟ್ಟಿ ಹಾಕಿಕೊಳ್ಳಬೇಡಿ!

    ಪ್ರತಿಕ್ರಿಯೆ
  3. ಸಹನಾ

    my comment was:
    ಜಿ. ಎನ್. ನಾಗರಾಜ್ ರವರು ತಾವು ಯಾವುದರ ವಿಮರ್ಶೆ ಎಂದು ಬರೆಯುತ್ತಿದ್ದೀರೋ ಅದನ್ನು ಮೊದಲು ಸರಿಯಾಗಿ ಗ್ರಹಿಸಿ ನಂತರ ಪ್ರಶ್ನೆಗಳೆನ್ನಿತ್ತಿದರೆ ಜಿಜ್ಞಾಸೆ ನಡೆಯಬಹುದೇನೋ!! ಇಲ್ಲದಿದ್ದರೆ ಬರೀ ಕೆಸರೆರಚಾಟವಷ್ಟೇ!!…. ಬೆಲ್ಜಿಯಂ ವಿವಿಯ (ಜರ್ಮನಿ ಅಲ್ಲ!!!) ಬಾಲಗಂಗಾಧರರ ತಂಡ “ಜಾತಿವ್ವಸ್ಥೆ” ಇಲ್ಲ ಅಂದರೆ ಏನನ್ನು ಇಲ್ಲ ಎನ್ನುತ್ತಿದ್ದಾರೆ ಅನ್ನುವುದೇ ನಿಮಗೆ ಸ್ಪಷ್ಟವಿಲ್ಲ ಎನಿಸುತ್ತದೆ.
    nilume.net/2013/05/26/ಜಾತಿವ್ಯವಸ್ಥೆ-ಇಲ್ಲ-ಎಂದರೆ/
    note: please don’t disclose our email id in public forum

    ಪ್ರತಿಕ್ರಿಯೆ
    • Amaresh

      ಹೌದು, ಈಗಾಗಲೇ ಅವಧಿಯಲ್ಲೇ ನಮ್ಮನ್ನು ಬೆದರಿಸುತ್ತಿರುವ ಶ್ರೀಕಂಠ ಸ್ವಾಮಿ ತರಹದ ಜನರು ಈಮೈಲ್ ಐಡಿ ನೋಡಿ ದಿನಬೆಳಗೆ ಬೆದರಿಕೆಯ ಈಮೈಲ್ ಕಳುಹಿಸದರೆ ನಾವು ಏನು ಮಾಡಬೇಕು ಸಂಪಾದಕರೆ?

      ಪ್ರತಿಕ್ರಿಯೆ
  4. rangaswamy mookanhalli

    ಹುಟ್ಟು ಅನಿರೀಕ್ಷಿತ ,ನಮಗೆ ಗೊತ್ತಿರುವುದಿಲ್ಲ ನಮ್ಮ ಆಗಮನದ ಬಗ್ಗೆ , ಸಾವು ಅಷ್ಟೇ ಆಕಸ್ಮಿಕ , ಮಧ್ಯ ಉಳಿದ ದಿನಗಳ ಕಳೆಯಲು ಬಗೆ ಬಗೆ ಯ ಆಟ , ಎಲ್ಲರಿಗೂ ಗೊತ್ತು ನಾವ್ಯಾರೂ ಇಲ್ಲಿ ಪರ್ಮನೆಂಟ್ ಅಲ್ಲ ಅಂತ ಹಾಗಿದ್ರೂ ನಾನು/ನೀನು ,ಆ ಜಾತಿ /ಈ ಜಾತಿ , ಧರ್ಮ , ಹೆಣ್ಣು/ಗಂಡು ,ಇನ್ನೂ ಏನೇನೋ ಕ್ಷುಲುಕ ಕಾರಣಗಳಿಗೆ ಪ್ರಾಮುಖ್ಯತೆ ಕೊಡುವುದು , ನಗು ಬರುತ್ತೆ .
    ಗುರುತ್ವಾಕರ್ಷಣೆಯಿಂದ ಬಿಡುಗಡೆ ಗೊಂಡು ಕಕ್ಷೆ ಸೇರಿದರೆ ,ಕಮ್ಮಿ ಶಕ್ತಿಯಲ್ಲಿ ಹೆಚ್ಚು ಹೊತ್ತು ಇರಬಹುದು ,ಹಾಗೆ ಎಲ್ಲಾ ಗೊಂದಲಗಳಿಂದ ಮುಕ್ತ ಮನಸ್ಸು ಮಾತ್ರ ಆರೋಗ್ಯವಾಗಿ ಚಿಂತಿಸಬಲ್ಲದು.ಹೆಚ್ಚು ತಿಳಿದವರಿಗೆ ,ಹೆಚ್ಚು ಹೇಳುವ ಅಗತ್ಯವಿಲ್ಲ 🙂

    ಪ್ರತಿಕ್ರಿಯೆ
  5. Amaresh

    ಕೊನಿಕಾ ಮೇಡಂ, ಧನ್ಯವಾದ! ನಾನು ಬರೆದದ್ದು ಇಷ್ಟೇ:
    ಬಾಲಗಂಗಾಧರ ಅವರ ಸಂಶೋಧನಾ ತಂಡದವರು ಭಾರತದಲ್ಲಿ ಜಾತಿವ್ಯವಸ್ಥೆ ಇಲ್ಲ ಅಂದುದಕ್ಕೆ ಪ್ರಜಾವಾಣಿಯಲ್ಲಿ ಎಷ್ಟೋ ಜನ ಜಾತಿಯೇ ಇಲ್ಲ, ಜಾತಿ ಪ್ರೇರಿತ ತಾರತಮ್ಯ ಇಲ್ಲ ಅಂತ ಇವರು ಹೇಳಿದ್ದಾರೆ ಅಂತ ಬೇಸರ ಮಾಡಿಕೊಂಡು ಖಾರವಾಗಿ ಪ್ರತಿಕ್ರಿಯಿಸಿದ್ದರು. ಆದರೆ ಟೀಕೆ ಭಾವನಾತ್ಮಕತವಾಗಿರದೇ ವಸ್ತುನಿಷ್ಠವಾಗಿ ಆಧಾರಬದ್ಧವಾಗಿದ್ದರೆ ಮಾತ್ರ ಅದಕ್ಕೆ ಬೆಲೆ ಅಲ್ಲವೇ?
    ಜಾತಿವ್ಯವಸ್ಥೆ ಇಲ್ಲ ಅಂದರೆ ಏನು ಅಂತ ಡಾ. ಪ್ರವೀಣ ಹಾಗೂ ಡಾ. ಷಣ್ಮುಖ ಅವರು ಎಲ್ಲರಿಗೂ ಅರ್ಥವಾಗುವಂತಹ ಲೇಖನ ಬರೆದಿದ್ದಾರೆ. ಬಹುಶ ನಾಗರಾಜ್ ಸರ್ ಅವರು ಅದನ್ನು ನೋಡಿಲ್ಲ. ಆ ಲೇಖನವನ್ನೊಮ್ಮೆ ಓದಿಕೊಂಡರೆ ನಾಗರಾಜ್ ಸರ್ ಅವರ ಕೆಲವು ಸಂಶಯಗಳು ಹಾಗೂ ತಪ್ಪು ಗ್ರಹಿಕೆಗಳು ದೂರವಾಗಬಹುದು ಅಂತ ನನಗೆ ಪ್ರಾಮಾಣಿಕವಾಗಿ ಅನ್ನಿಸುತ್ತದೆ. ಡಾ. ಪ್ರವೀಣ ಹಾಗೂ ಡಾ. ಷಣ್ಮುಖ ಅವರ ಲೇಖನವನ್ನು ಇಲ್ಲಿ ನೋಡಬಹುದು:
    http://nilume.net/2013/05/26/%e0%b2%9c%e0%b2%be%e0%b2%a4%e0%b2%bf%e0%b2%b5%e0%b3%8d%e0%b2%af%e0%b2%b5%e0%b2%b8%e0%b3%8d%e0%b2%a5%e0%b3%86-%e0%b2%87%e0%b2%b2%e0%b3%8d%e0%b2%b2-%e0%b2%8e%e0%b2%82%e0%b2%a6%e0%b2%b0%e0%b3%86/

    ಪ್ರತಿಕ್ರಿಯೆ
    • Amaresh

      Nagaraj Sir, please confirm that you have read the article by Dr. Shanmukha and Dr. Praveen whose link I gave.

      ಪ್ರತಿಕ್ರಿಯೆ
  6. Santhosh Shetty

    <>>
    ಒಂದಕ್ಕೊಂದು ವಿರುದ್ದವಾದ ಸ್ಟೇಟ್ ಮೆಂಟ್ ಗಳನ್ನು ಕಾಣಬಹುದು. ಮೊದಲ ಸಾಲಿನಲ್ಲಿ ವಚನಗಳಲ್ಲಿ ಸಾಮಾಜಿಕ ವ್ಯವಸ್ಥೆಗೆ ಸಂಬಂಧವಿಲ್ಲದ ಪರಿಕಲ್ಪನೆಗಳಿವೆ ಎಂದು ಹೇಳುತ್ತಾರೆ, ಅಂತೆಯೇ ಕಡೆಯ ಸಾಲಿನಲ್ಲಿ ಪ್ರತಿಯೊಂದು ಪರಿಕಲ್ಪನೆ ಜಾತಿ ಮತ್ತು ಕುಲ ವಿರೋಧಿಯಾದ ಅರ್ಥಗಳಿವೆ ಎಂದು ಲೇಖಕರು ಹೇಳುತ್ತಾರೆ. ಇದು ಮೊದಲಿನ ಸಾಲಿಗೆ ವಿರುದ್ದವಾದ ನಿರ್ಣಯ ಕೊನೆಯ ಸಾಲಿನಲ್ಲಿ ಇರುವುದು ತೋರಿಸುತ್ತದೆ. ಆ ವಿರುದ್ಧಾರ್ಥವನ್ನು ನಿಜ ಎಂದು ಇಟ್ಟುಕೊಂಡರೆ ಈ ಮುಂದಿನ ಪ್ರಶ್ನೆಗಳು ಏಳುತ್ತವೆ.
    ೧. ಜಾತಿ ಕುಲಗಳು ಸಾಮಾಜಿ ವ್ಯವಸ್ಥೆ ಅಲ್ಲ ಎಂದು ಲೇಖಕರು ವಾದಿಸುತ್ತಿದ್ದಾರೆಯೆ?
    ೨.ಆಧ್ಯಾತ್ಮಿಕ ಪರಿಕಲ್ಪನೆಗಳಿಗೂ ಸಾಮಾಜಿಕ ಪರಿಕಲ್ಪನೆಗಳಿಗೂ ವ್ಯತ್ಯಾಸವೇ ಇಲ್ಲವೆ?
    ಇನ್ನು ಲೇಖನದ ಕುರಿತು ಕೆಲವು ಪ್ರಶ್ನೆಗಳು
    ೧. ಇಷ್ಟಲಿಂಗವನ್ನು ಎಲ್ಲಿರಿಗೂ ಕಟ್ಟಿಕೊಳ್ಳಲು ಹೇಳಿದರೆ ಕಟ್ಟಿಕೊಂಡವರು ಶರಣ ಸಂಪ್ರದಾಯಕ್ಕೆ ಸೇರುತ್ತಾರೆಂಬ ಭಾವನೆಯೋ ಅಥವಾ ಅಸಮಾನತೆಯನ್ನು ತೊಡೆದುಹಾಕಿದ್ದೇವೆಂಬ ಭಾವನೆಯೋ? ಕೆಲವು ಕಚೇರಿಗಳಲ್ಲಿ ಎಲ್ಲರೂ ಗುರುತಿನ ಚೀಟಿ ಧರಿಸಬೇಕೆಂದರೆ ಅದು ಅಸಮಾನತೆಯನ್ನು ಹೋಗಲಾಡಿಸಲು ಮಾಡುವ ನಿಯಮವೋ ಅಥವಾ ಕಚೇರಿಯ ಶಿಸ್ತನ್ನು, ಬ್ರಾಂಡ್ ನ್ನು, ಮತ್ತು ಆ ಕಚೇರಿಗೆ ಸೇರಿದವರು ಎಂದು ಗುರುತನ್ನು ಪಡೆಯಲು ಹಾಕುತ್ತಾರೆಯೊ?
    ೨.ವಚನ ಸಾಹಿತ್ಯ ಆಧ್ಯಾತ್ಮದ ಚಳುವಳಿಯಾದ್ದರಿಂದಲೆ ಜಾತಿ ಕುಲ ಲಿಂಗದ ಬೇಧವಿಲ್ಲದೆ ಎಲ್ಲರೂ ಸೇರಬಹುದಾಗಿತ್ತು. ಏಕೆಂದರೆ ಅದು ಯಾವುದೋ ಸಂಘ ಸಂಸ್ಥೆಯನ್ನು ಕಟ್ಟುವ ಉದ್ದೇಶ ಹೊಂದಿರಲಿಲ್ಲ. ಆಸಕ್ತರು ಯಾರಿದ್ದರೂ ಹೋಗಬಹುದಿತ್ತು. ಆದರೆ ಹಾಗೆ ಜನರು ಭಾಗವಹಿಸುವುದನ್ನೇ ಮಹಿಳಾ ಸಮಾನತೆ ತಂದರು ಎಂದು ಕತೆ ಹೇಳಿದರೆ ವಚನಗಳ ಆಶಯ ನಿಜವಾಗಿಯೂ ಅರ್ಥವಾಗುತ್ತದೆಯೆ?
    ೩.ವಚನಗಳು ಜಾತಿವ್ಯವಸ್ಥೆಯ ವಿರುದ್ಧ ನಡೆದ ಚಳುವಳಿ ಎಂದು ವಾದಿಸುವವರು ಯಾರೂ ಸಹ ವಚನಗಳನ್ನು ಸಮಗ್ರವಾಗಿ ಪರಿಶೀಲನೆ ಮಾಡುವ ಗೌಜಿಗೆ ಹೋಗುತ್ತಿಲ್ಲ. ಅಲ್ಲಿ ಇಲ್ಲಿ ಒಂದೊಂದು ವಚನಗಳನ್ನು ಹೆಕ್ಕಿ ತಂದು ಪಾಂಡಿತ್ಯ ಪ್ರದರ್ಶನ ಮಾಡುತ್ತಿದ್ದಾರೆ. ಇಡೀ ವಚನಗಳ ಆಶಯವು ಜಾತಿವ್ಯವಸ್ಥೆಯ ವಿರುದ್ಧವೇ ಇದ್ದಿದ್ದೇ ಹೌದಾದರೆ, ಅದನ್ನು ಸಮಗ್ರವಾಗಿ ಅರ್ಥೈಸಿಕೊಳ್ಳುವ ರೀತಿಯ ವಿವರಣೆ ಲೇಖಕರು ನೀಡಬಹುದಲ್ಲವೆ?
    ೪.ಕಾಯಕವೇ ಕೈಲಾಸ ಎಂಬುದು ಸಮಾನತೆಯ ತತ್ವದ ಅಡಿಪಾಯ ಎಂದು ಹೇಳುತ್ತಿದ್ದೀರಿ. ಆದರೆ ಕಾಯಕವೇ ಕೈಲಾಸ ಎಂಬದು ತನ್ನ ಕಾಯಕದಲ್ಲಿಯೇ ಮಗ್ನನಾಗಿ ಅದರಲ್ಲೇ ಆನಂದ ಹೊಂದಬಹುದು ಎಂಬ ಅರ್ಥವನ್ನು ಸೂಚಿಸುತ್ತದೆ ಅಲ್ಲವೆ? ಹಾಗಾದರೆ ಬೇರೆ ಬೇರೆ ಜಾತಿಯವರು ಬೇರೆ ಬೇರೆ ಉದ್ಯೋಗ/ಕಸುಬು ಮಾಡುವುದನ್ನೇ ಜಾತಿವ್ಯವಸ್ಥೆಯ ಕ್ರೌರ್ಯ ಎಂದು ಎಲ್ಲರೂ ಬೊಬ್ಬೆ ಹಾಕುತ್ತಿದ್ದಾರೆ, ಅವರವರ ಕಾಯಕ ಅಂದರೆ ಕೆಲಸ ಮಾಡಿದರೆ ಕೈಲಾಸ ಸಿಗುವುದಾದರೆ, ಸಾಹಿತಿಗಳು ಜಾತಿಯಾಧರಿತ ವೃತ್ತಿಯನ್ನು ಅಸಮಾನತೆ/ಅವಕಾಶ ವಂಚನೆ ಎಂದು ಟೀಕೆ ಮಾಡುವುದೇಕೆ? ಒಂದು ಕಡೆ ಜಾತಿಯಾಧರಿತ ವೃತ್ತಿಯನ್ನು ಟೀಕೆ ಮಾಡಿ, ಮತ್ತೊಂದು ಕಡೆ ಕಾಯಕವೇ ಕೈಲಾಸ ಎಂಬುದು ಸಮಾನತೆಯ ತತ್ವ ಎಂದು ವಾದಿಸುವುದು ಅಸಂಬದ್ದತೆಯ ಪ್ರದರ್ಶನವಲ್ಲವೆ? ವೃತ್ತಿಯನ್ನೇ ಕಾಯಕ ಎಂದು ಶರಣರು ಹೇಳಿದ್ದರೆ, ಜಾತಿಯ ಕಸುಬುಗಳನ್ನೆ ಮುಂದುವರೆಸಿ ಅದರಲ್ಲೇ ಕೈಲಾಸ ಕಾಣಿರಿ ಎಂದು ಹೇಳಿದ್ದಾರೆಯೆ? ಒಂದೊಮ್ಮೆ ಶರಣರು ಹಾಗೆ ಹೇಳಿರದ ಪಕ್ಷದಲ್ಲಿ ಸಾಹಿತಿಗಳು ಇನ್ಯಾವ ಅರ್ಥದಲ್ಲಿ ಅದನ್ನು ಹೇಳಿದ್ದಾರೆ?
    ೫. ವೈವಿದ್ಯಮಯ ದೇವೋಪಾಸನೆಯನ್ನು ವಚನಕಾರರು ತಿರಸ್ಕರಿಸಿ ಜಾತಿಯ ಅಸಮಾನತೆಯನ್ನು ತರುವ ಉದ್ದೇಶ ಹೊಂದಿದ್ದರೆ ಒಬ್ಬೊಬ್ಬ ವಚನಕಾರನು ಒಬ್ಬೊಬ್ಬ ದೇವನ ಉಪಾಸಕನಾಗಿ ಇರಲು ಹೇಗೆ ಸಾಧ್ಯ? ಬಸವಣ್ಣ ಕೂಡಲ ಸಂಗಮನನ್ನು, ಅಲ್ಲಮ ಪ್ರಭು ಗುಹೇಶ್ವರನನ್ನು, ಅಕ್ಕ ಚೆನ್ನಮಲ್ಲಿಕಾರ್ಜುನನ್ನು ಹೀಗೆ ಹತ್ತು ಹಲವು ದೇವರ ನಾಮಾಂಕಿತಗಳನ್ನು ಏಕೆ ಇಟ್ಟುಕೊಂಡಿದ್ದರು, ಅವರೂ ದೇವರ ಉಪಾಸನೆಯನ್ನು ವೈವಿದ್ಯಮಯ ದೇವರುಗಳನ್ನು ಹೊಂದಿದ್ದರು ಎಂದರೆ ಅವರೂ ಜಾತಿಯ ಅಸಮಾನತೆಯನ್ನು ಆಚರಿಸುತ್ತಿದ್ದರು ಎಂದು ಅರ್ಥವೆ?

    ಪ್ರತಿಕ್ರಿಯೆ
  7. ಕೃಷ್ಣಪ್ರಕಾಶ ಬೊಳುಂಬು

    “ಈ ಆರು ಸೇರಿದಂತೆ 33 ಭ್ರಮೆಗಳ ಒಂದು ಪಟ್ಟಿ ಯೇ ಬತ್ತೀಸ ಪಾಶ ಭ್ರಮೆ”
    ~ ಈ ಹೇಳಿಕೆ ತಪ್ಪು. ಬತ್ತೀಸ ಎಂದರೆ ಮೂವತ್ತೆರಡು.
    “ದೇವಾಲಯಗಳಲ್ಲಿ ಬ್ರಾಹ್ಮಣರ ಹೊರತಾಗಿ ಬೇರೆಯವರಿಗೆ ದೇವರ ಬಳಿ ಗರ್ಭಗುಡಿಯ ಒಳಗೆ ಪ್ರವೇಶ ಕೂಡ ಇಲ್ಲ ”
    ~ ನಾನು ಕಂಡ ದೇವಾಲಯಗಳ ಗರ್ಭಗುಡಿಯ ಒಳಗೆ ಅರ್ಚಕರ ಹೊರತು ಇನ್ನಾರಿಗೂ ಪ್ರವೇಶವಿಲ್ಲ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: