ಎಚ್ ಎಸ್ ವಿ ಕಾಲಂ: ಗಮನಿಸಬೇಕಾದ್ದು ಅರ್ಥವನ್ನಲ್ಲ, ಅಂತರಾರ್ಥವನ್ನ!

ತಾವರೆಯ ಬಾಗಿಲು-೩
ಎಚ್.ಎಸ್.ವೆಂಕಟೇಶ ಮೂರ್ತಿ

ಕಾವ್ಯಕ್ಕೆ ಅರ್ಥದ ಹಂಗೇ ಇಲ್ಲ ಎಂದವರು ಬೇಂದ್ರೆ.

“ಕಥೆ”ಯ ಭೂಮಿಕೆಯಿಂದ ಕವಿತೆಯ “ಭಾವ”ವನ್ನು ಬಿಡಿಸಿಕೊಂಡು ಅದನ್ನು ಅಲಾಯದ ಅರಳಿಸಿ ಅವರು ಅದ್ಭುತವೆನಿಸುವ ಭಾವಗೀತೆಗಳನ್ನು ಬರೆದರು.

coupleಅರ್ಥವಿಲ್ಲ, ಸ್ವಾರ್ಥವಿಲ್ಲ, ಬರಿಯ ಭಾವಗೀತಾ ಎಂಬ ಅವರ ಹೇಳಿಕೆ ರಸಿಕಜನಜನಿತ. ಅವರ ಭಾವಗೀತೆಯನ್ನು ಗ್ರಹಿಸಲು ಓದುಗ ಹೊಸ ಉಪದ್ವ್ಯಾಪಕ್ಕೇ ತೊಡಗಬೇಕಾಯಿತು. ಕವಿತೆಯ ಹಿಂದೆ ಒಂದು ಸಂದರ್ಭವಿರುತ್ತದೆ. ಅದನ್ನು ಬಹಳ ಸಾರಿ ಕವಿಯೇ ಅಡಿ ಟಿಪ್ಪಣಿಯಾಗಿ ಕಟ್ಟಿಕೊಟ್ಟಿರುವುದೂ ಉಂಟು.

ಈ ಸಂದರ್ಭಸೂಚಿ ಬೇಂದ್ರೆ ಕಾವ್ಯದ ವಿಶೇಷ. ಅದು ಕವಿತೆಯ ಗ್ರಹಿಕೆಗೆ ನೀಡಲಾಗುವ ಉತ್ತರಣಪೀಠ (ಲಾಂಚಿಂಗ್ ಪ್ಯಾಡ್). ಆದರೆ ಅದು ಕವಿತೆಯ ಭಾಗವಲ್ಲ. ಕವಿತೆಯೆಂಬುದೋ ಒಂದು ಭಾವದ ಅನನ್ಯವಾದ ಪ್ರಸ್ತುತಿ. ಆ ಅಪರೂಪದ ಭಾವವನ್ನು ಗ್ರಹಿಸುವುದಾದಲ್ಲಿ ನಾವು ಕೃತಕೃತ್ಯರು.

ಈ ಹಿನ್ನೆಲೆಯಲ್ಲಿ ಬೇಂದ್ರೆ ಅವರ ಒಂದು ಕಾಡುವ ಭಾವಗೀತೆಯನ್ನು ಈವತ್ತು ನಾವು ಧ್ಯಾನಿಸೋಣ.

ಇದು ಈವತ್ತಿನ ಧ್ಯಾನ ಮಾತ್ರ. ನಾಳೆಯ ಧ್ಯಾನ ನಮಗೆ ಆ ಕವಿತೆಯ ಇನ್ನೊಂದು ತೀರ ವಿಭಿನ್ನವಾದ ದೈವವನ್ನೇ ತೆರೆದೀತು. ಅಂದರೆ ಇದೊಂದು ಪರಾಗಸ್ಪರ್ಶದ ಅತೀಂದ್ರಿಯ ಉದ್ಯಮ. ಕವಿ ಮತ್ತು ಓದುಗ (ಬೇಂದ್ರೆ ತನ್ನ ಓದುಗನನ್ನು ರಸಿಕ ಎಂದು ಗುರುತಿಸುತ್ತಾರೆ) ಇವರಿಬ್ಬರೂ ಕೂಡಿ ದಕ್ಕಿಸುವಂಥದ್ದು ಕವಿತೆಯ ಅಂದಂದಿನ ಭಾವಕೋಶ. ಇದು ಬೇಂದ್ರೆಯನ್ನು ಒಳಗುಮಾಡಿಕೊಳ್ಳಬೇಕಾದ ವಿಕ್ರಮ.

“ಗಮ ಗಮಾ ಗಮಾಡಸ್ತಾವ ಮಲ್ಲಿಗಿ”(ಗಂಗಾವತರಣ-೧೯೫೧)  ಬೇಂದ್ರೆ ರಚಿಸಿರುವ ಕಾಡುವ ಕವಿತೆಗಳಲ್ಲಿ ಒಂದು. ಈ ಕವಿತೆಗೆ- “ಒಂದು ಗೀತಕಥೆಯಲ್ಲಿ ಬರಬೇಕಾದ ಹಾಡು” ಎಂಬ ಸಂದರ್ಭ ಸೂಚಿಯುಂಟು. ಇದೊಂದು ನಾಟ್ಯಗೀತೆ ಎಂಬ ಸೂಚನೆಯೂ ಉಂಟು.

ಕವಿತೆಯು ಒಂದು ರಾಗಭೂಮಿಕೆಯನ್ನು ಸೃಷ್ಟಿಸಿದೆ. ರಾಗಜಗತ್ತು ಬಯಸುವ ಸಾಮಗ್ರಿಗಳೆಲ್ಲಾ ಅಲ್ಲಿವೆ. ಗಮಗಮಾ ಗಮಾಡಿಸುತ್ತಿರುವ ಮಲ್ಲಿಗಿ. ಕನ್ನಡಿ ಹರಳಿನಂತಿರುವ ಚಂದ್ರಾಮನನ್ನು ಬೆರಳು ಚಾಚಿ ತೋರಿಸುತ್ತಿರುವ ನಕ್ಷತ್ರಗಳು, ಹೊಳೆಯುವ ಬೆಳ್ದಿಂಗಳ ಮಾದಕ ಇರುಳು, ತಬ್ಬುವಿಕೆ, ತೆಕ್ಕೆ, ಬೆಳದಿಂಗಳು. ಈ ಜಗತ್ತನ್ನು ಸ್ವಾದ್ಯಗೊಳಿಸುವ ರಸ ಸಾಮಗ್ರಿಗಳಿಂದ ಇಡಿಕಿರಿದ ಮನಮೋಹಕ ಪಾತಳಿಯಿದು. ಇದನ್ನು ಮಾಯಾಜಗತ್ತು ಅನ್ನಬಾರದು; ಮಾಯಕ ಜಗತ್ತು ಅನ್ನಬೇಕು. ಗಂಡು ಹೆಣ್ಣನ್ನು ಆವರಿಸಿರುವ ಬೆಳ್ದಿಂಗಳು ಅವರಿಬ್ಬರು ಒಂದಾದ ಪರಿಣಾಮವಾಗಿ ಹುಟ್ಟಿರುವ ಹಾಡು (ಬೆಳ್ದಿಂಗಳ ನೋಡಾ, ಇದು ಅಂಬಿಕಾತನಯನ ಹಾಡ.. ಎಂಬ ಸಾಲುಗಳು ನೆನಪಾಗುತ್ತಿವೆ). ಇಷ್ಟೆಲ್ಲದರ ಮಧ್ಯೆ ಇದ್ದಕ್ಕಿದ್ದಂತೆ ಒಂದು ಭಾವಪರಿವರ್ತನೆ.

ಬಂತ್ಯಾಕ ನಿಮಗ ಇಂದ ಮುನಿಸು
ಬೀಳಲಿಲ್ಲ ನಮಗ ಇದರ ಕನಸು
ರಾಯಾ ತಿಳಿಯಲಿಲ್ಲ ನಿಮ್ಮ ಮನಸು
ನೀವು ಹೊರಟಿದ್ದೀಗ ಎಲ್ಲಿಗೆ?||

ಇದೊಂದು ಕಾಲಾತೀತ ಭಾವದ ತುಡಿತ. ಒಂದು ಇರುಳು ಸಿದ್ಧಾರ್ಥನೂ ಹೀಗೇ ಯಶೋಧರೆಯನ್ನು, ಅರಮನೆಯ ರಾಗಜಗತ್ತನ್ನು ತೊರೆದು ವಿರಾಗದ ಹಾದಿ ಹಿಡಿದ. ರಸವು ಹೀಗೆ ಒಮ್ಮೆಗೇ ವಿರಸದ ನೆಲೆಗೆ ಹೊರಳುವ ಸಂದರ್ಭಗಳು ಅದೆಷ್ಟೋ!

ಬುದ್ಧ ಎಂಬ ಕವಿತೆಯಲ್ಲಿ ಇದೇ ಭಾವದ ಹೊರಳು ಪುರುಷನ ನೆಲೆಯಿಂದ ನಿರೂಪಿತವಾಗಿದೆ. ಅದೇ ಭಾವ ಜಗತ್ತು ಇಲ್ಲಿ ಸ್ತ್ರೀಯ ನೆಲೆಯಿಂದ ಅಭಿವರ್ಣಿತ. ಮೂಲ ಭಾವ ಅದೇ. ಹೀಗಾದೀತೆಂದು ಕನಸಿನಲ್ಲಿಯೂ ನಾಯಕನಾಗಲೀ ನಾಯಕಿಯಾಗಲೀ ಕಲ್ಪಿಸಿದ್ದಿಲ್ಲ. ಇಂಥ ಅಖಂಡ ಹೊರಳು ಒಮ್ಮಿಂದೊಮ್ಮೆಗೆ ಸಂಭವಿಸಿದ್ದು. ಹಿಂದಾ ನೋಡದ ಕವಿತೆಯ ಜಗತ್ತೂ ಇದೇ. (ಅಡಿಗರ ಯಾವ ಮೋಹನ ಮುರಲಿ ಇದೇ ಭಾವದ ವಿಭಿನ್ನ ಭಾಷಿಕ ಶೋಧ).

coupleಸರಸದ ಮಡಿಲಲ್ಲೇ ಒಮ್ಮೆಗೇ ಆಸ್ಫೋಟಿಸಿದ ವಿರಸ ಅಥವಾ ಲೌಕಿಕ ವಿಮುಖತೆ ಅಲೌಕಿಕವೊಂದರ ಸೆಳೆತದ ಪರಿಣಾಮವೇ? ಖಚಿತವಾಗಿ ಹೇಳುವಂತಿಲ್ಲ. ಹೆಣ್ಣಿನ ದೃಷ್ಟಿಯಲ್ಲಿ ವಿಮುಖತೆಗೆ ಪುರುಷನಲ್ಲಿ ಒಮ್ಮೆಗೇ ಸ್ಫುರಣಗೊಂಡ ಮುನಿಸು ಕಾರಣವಿರಬಹುದೆಂಬ ಸೂಚನೆ ಇದೆ. ಮಲ್ಲಿಗೆಯ ವಾಸನಾ ಜಗತ್ತು ಪುರುಷನನ್ನು ಹೆಣ್ಣಿನ ಸಾಮೀಪ್ಯದಲ್ಲಿ ಹಿಡಿದಿಡಲು ಅಸಮರ್ಥವಾಗಿದೆ. ಆ ವಿರಸದ ಸೂಚನೆ ಇಬ್ಬರಿಗೂ ಇರಲಿಲ್ಲ. (ಬೀಳಲಿಲ್ಲ ನಮಗ ಇದರ ಕನಸು).

ನಮ್ಮ ನಿಮ್ಮ ಒಂದತನದಾಗ
ಹಾಡುಹುಟ್ಟಿ ಒಂದು ಮನದಾಗ
ಬೆಳದಿಂಗಳಾತು ಬನದಾಗ
ನೀವು ಹೊರಟಿದ್ದೀಗ ಎಲ್ಲಿಗೆ?

ಅನ್ಯೋನ್ಯತೆಯನ್ನೂ ಸೂಚಿಸುವ ಈ ಜಗತ್ತು ಎರಡು ಹೋಳಾಗಿ ಒಮ್ಮೆಗೇ ತೆಕ್ಕೆಬಿಚ್ಚಿಕೊಂಡಾಗ, ಹೆಣ್ಣಿನ ತಳಮಳ ಉತ್ತರ ದಕ್ಕದ ಒಂದು ಪ್ರಶ್ನೆಯಾಗಿಯಷ್ಟೇ ಉಳಿಯಬಲ್ಲುದು. ಅದಕ್ಕೇ ಪ್ರತಿ ಚರಣದ ಕೊನೆಯ ಪಂಕ್ತಿಯೂ ನೀವು ಹೊರಟಿದ್ದೀಗ ಎಲ್ಲಿಗೆ? ಎಂಬ ಪ್ರಶ್ನೆಯನ್ನು ಮತ್ತೆ ಮತ್ತೆ ಎತ್ತುತ್ತಾ ಇದೆ.

ಇದೊಂದು ತಾತ್ಕಾಲಿಕ ವಿಚ್ಛೇದವೋ? ಅಥವಾ ಮಹಾ ಅನ್ವೇಷಣೆಯ ಅಲೌಕಿಕ ನಡೆಯೋ? ನಕ್ಷತ್ರಗಳು ಚಂದ್ರನನ್ನು ಬೆರಳಿಟ್ಟು ತೋರಿಸಿದರೂ, ಬೆಳ್ದಿಂಗಳಾಚೆಗಿನ ಬಯಲಕಡೆ ಹೊರಟ ಯಾನವೇ ಇದು? ತೀರ ಸರಳವಾಗಿ ನಮ್ಮಲ್ಲಿ ಹುಟ್ಟುವ ಪ್ರಶ್ನೆ ಪುರುಷನ ಅನಿರೀಕ್ಷಿತ ಮುನಿಸಿಗೆ ಏನು ಕಾರಣ? ( ಇಂದು ಯಾವುದು ಬೇಸರ?….ಅಡಿಗರ ಸಾಲು ಇದೇ ಭಾವದ ಪುನರ್ಯೋಜನೆಯೇ?). ಎಲ್ಲವೂ ನಿರುತ್ತರದ ನಿಗೂಢ ನೆಲೆಯಲ್ಲೇ ಉಳಿದು ಬಿಡುತ್ತದೆ.

ಪದ್ಯದಲ್ಲಿ ಉದ್ದಕ್ಕೂ ಅಲವತ್ತುಕೊಳ್ಳುತ್ತಿರುವುದು ಹೆಣ್ಣು. ಯಾವ ಉತ್ತರವನ್ನೂ ಕೊಡದೆ ಪುರುಷ ಎಲ್ಲಿಗೋ (ಎಲ್ಲಿಗೆ? ಹೊರಟದ್ದೀಗ ಎಲ್ಲಿಗೆ?) ಹೊರಟು ಹೋಗುತ್ತಿದ್ದಾನೆ- ತಾವೇ ಒಂದು ಮನದಾಗ ನಿರ್ಮಿಸಿದ್ದ ಬೆಳ್ದಿಂಗಳ ಜಗತ್ತನ್ನು ತೊರೆದು. ಯಾಕೆ ಎಂಬುದಕ್ಕೆ ಉತ್ತರವಿಲ್ಲ.

ನಾಯಕಿಯ ಮಾತಿನ ಸುತ್ತಾ ನಿರ್ಮಿತವಾಗಿರುವ ಭೂಮ್ಯಾಕಾಶಗಳ ಮೋಹಕ ಜಗತ್ತು ತನ್ನ ಪಾಡಿಗೆ ತಾನು ಒಂದು ಮೂಕಾಭಿನಯದಲ್ಲಿ ತೊಡಗಿದಂತಿದೆ. (ಚಿಕ್ಕಿ ತೋರಿಸ್ತಾವ ಚಾಚಿ ಬೆರಳ; ನೆರಳಲ್ಲಾಡತಾವ ನೆಲದ ಬುಡಕ; ತೆರಿ ತೆರಿ ನೂಗತಾವ ದಡಕ; ಬಾಯಿಬಿಟ್ಟವಲ್ಲ ಮಲ್ಲಿಗೆ). ಮಲ್ಲಿಗೆ ಬಾಯಿಬಿಟ್ಟರೂ ಅದೊಂದು ಮಾತಿಲ್ಲದ ಮೌನ ಭಾಷೆ. ಚಿಕ್ಕಿ ಮೂಕ ಸನ್ನೆ ಮಾಡುತ್ತವೆ. ಜೊಂಪು ಕವಿಯುತ್ತಿರುವ ಅರೆಮಂಪರಿನ ಸ್ಥಿತಿ ಬೇರೆ. ಮರದ ಬುಡದ ನೆರಳ ಅಲ್ಲಾಟ ಯಾವ ಮಿಡಿತದ ಅಭಾಷಿಕ ಅಭಿವ್ಯಕ್ತಿ? ಯಾವ ದಡಕ್ಕೆ ತೆರಿ ತೆರಿಯ ನೂಕುತ್ತಿರುವುದು? ಇದೆಲ್ಲವೂ ಒಂದು ಅವಾಂಗ್ಮಯ ಮೂಕ ಸನ್ನೆಗಳ ಜಗತ್ತು. ಈ ಹಿನ್ನೆಲೆಯಲ್ಲಿ ಹೆಣ್ಣಿನ ಹಾಡು ಇನ್ನಷ್ಟು ದಾರುಣವಾಗುತ್ತಿದೆ. ಅವಳು ಏನನ್ನು ಕಂಡರೂ ಆ ಕಾಣುವಿಕೆಯ ಕೊನೆಯ ಅನುರಣನ ಒಂದೇ: “ನೀವು ಹೊರಟಿದ್ದೀಗ ಎಲ್ಲಿಗೆ?”

ಈ ಕಾಡುವ ಭಾವದ ಆಲಾಪವೇ ಈ ಕವಿತೆಯ ಭಾವಾನುರಣನ. ನಲ್ಲ ಮತ್ತು ನಲ್ಲೆಯರ (ರಾಯಾ ತಿಳಿಯಲಿಲ್ಲ ನಿಮ್ಮ ಮನಸು ಎಂಬ ಉಕ್ತಿಯಿಂದ ಈ ಗ್ರಹಿಕೆ) ನಡುವೆ ಅವರ ಬೇರ್ಪಡುವಿಕೆಯಿಂದಲೇ ಜನ್ಮ ತಾಳುವ ಈ ಅಗಲಿಕೆ ನಮ್ಮನ್ನು ಕಾಡುವ “ತಬ್ಬಲಿ ಭಾವ”. ಆ ಭಾವ ರಸಿಕರ ಎದೆಹೊಕ್ಕು ಕೈಕಾಲಾಡಿಸುತ್ತಾ ಕಂಪಿಸತೊಡಗಿತೆಂದರೆ ಈ ಕವಿತೆಯ ಈವತ್ತಿನ ಒಂದು ಅನುಸಂಧಾನ ನಮಗೆ ಯಥಾಮತಿ ದಕ್ಕಿದ ಹಾಗೆ.

‍ಲೇಖಕರು Admin

October 7, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

3 ಪ್ರತಿಕ್ರಿಯೆಗಳು

  1. S.p.vijaya Lakshmi

    ಮೆಲ್ಲಗೆ ಮಲ್ಲಿಗೆ ರಾಶಿರಾಶಿ ಅರಳಿ ನಕ್ಕಂತಿದೆ…..

    ಪ್ರತಿಕ್ರಿಯೆ
  2. .ಮಹೇಶ್ವರಿ.ಯು

    ಮಾಧುರ್ಯದ ಖನಿಯಂತಿರುವ ಕವಿತೆ. ಅದನ್ನು ಎಚ್.ಎಸ್.ವಿ ಯವರು ವಿಶ್ಲೇಷಿಸಿದ ಬಗೆಯೂ ಮಧುರ.

    ಪ್ರತಿಕ್ರಿಯೆ
  3. Sarojini Padasalagi

    ತಾವರೆಯ ಬಾಗಿಲನ್ನು ನಯವಾಗಿ ತೆರೆಯುವಂತೆ ,ಇಲ್ಲಿ ಹೆಣ್ಣಿನ ಅಂತರಾಳದ ಭಾವನೆಗಳನ್ನು ನವಿರಾಗಿ ,ಕೋಮಲವಾಗಿ ಬಿಡಿಸಿಟ್ಟಿದ್ದಾರೆ .ಮಲ್ಲಿಗೆ ಘಮಾಘಮಾಡಿಸಿ ಕರೆಯುತ್ತಿದ್ದರೂ ಸಿಟ್ಟಯಾಕೋ ಸಿಡಕ್ಯಾಕೋ. ನನ ಜಾಣಾ. ಅಂತ ಕೇಳಿದಂತಿರುವ ಹೆಣ್ಣಿನ. ಧ್ವನಿಯ ಮಾರ್ದವತೆ ಎಚ್ .ಎಸ್ವಿಯವರ ವಿಶ್ಲೇಷಣೆಯಲ್ಲಿ ಮನದಲ್ಲಿ ಮಧುರ ಭಾವ ತರಂಗಗಳನ್ನೆಬ್ಬಿಸುತ್ತದೆ .ತಿಳಿಯ ಬೇಕಾಗಿರುವುದು ಅರ್ಥವನ್ನಲ್ಲ ಅಂತರಾರ್ಥವನ್ನು .ಎಷ್ಟು ನಿಜವಲ್ಲ !! ಕವನ ,ಕಾವ್ಯಗಳನ್ನು ಓದಲು ಉತ್ತಮ ಮಾರ್ಗದರ್ಶನಕೋಮಲ ಭಾವ ಭರಿತ ಲೇಖನ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: