ಸೇನೆ ಎಂಬುದು ‘ಚೆಕ್’ ಮತ್ತು ‘ಬ್ಯಾಲೆನ್ಸ್’ ಗಳ ಮೊತ್ತ

rajaram tallur low res profile

ರಾಜಾರಾಂ ತಲ್ಲೂರು

ಸಂವಿಧಾನ ನಿರ್ಮಾಪಕರಿಗದು ಚೆನ್ನಾಗಿ ಗೊತ್ತಿತ್ತು. ಹಾಗಾಗಿಯೇ ಅವರು ಭಾರತದ ಸೇನಾಪಡೆಗಳ ಸರ್ವೋಚ್ಛ ದಂಡನಾಯಕರ ಸ್ಥಾನವನ್ನು ರಾಷ್ಟ್ರಪತಿಗಳಿಗೆ ನೀಡಿದ್ದು. ಪ್ರಧಾನಮಂತ್ರಿ ಮತ್ತು ರಕ್ಷಣಾ ಸಚಿವಾಲಯಗಳು ಸೇನೆಯ ಆಗುಹೋಗುಗಳಿಗೆ ಜವಾಬ್ದಾರರಾದರೂ ಅವರ ನಿರ್ಧಾರಗಳಿಗೆ ಅಂತಿಮ ಸಹಿ ಹಾಕಬೇಕಾದವರು ರಾಷ್ಟ್ರಪತಿಗಳು. ಇಂತಹದೊಂದು ‘ಚೆಕ್ ಅಂಡ್ ಬ್ಯಾಲೆನ್ಸ್’ ಸಹಿತ ನಾಜೂಕಾದ ವ್ಯವಸ್ಥೆ ಇರುವುದರಿಂದಾಗಿಯೇ ದೇಶ ಇಂದಿಗೂ ಪ್ರಜಾಸತ್ತಾತ್ಮಕ ಹಾದಿಯಲ್ಲೇ ಉಳಿದಿದೆ.

avadhi-column-tallur-verti- low res- cropಸ್ವಾತಂತ್ರ್ಯದ ಬಳಿಕ ಯುದ್ಧಗಳ ಹೊರತಾಗಿಯೂ ಭಾರತೀಯ ಸೇನೆ ಸಾರ್ವಜನಿಕ ವಲಯದಲ್ಲಿ, ಮಾಧ್ಯಮಗಳಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಆಡಿಕೊಳ್ಳುವವರ ಬಾಯಿಗೆ ಸಿಕ್ಕಿರಲಿಲ್ಲ. ಸೇನೆಯ ಕಾರ್ಯಾಚರಣೆಗಳ ಗಾಂಭೀರ್ಯಕ್ಕೆ ಯಾವತ್ತೂ ಚ್ಯುತಿ ಬಂದಿರಲಿಲ್ಲ. ಈ ಸ್ಥಿತಿ ಬದಲಾದದ್ದು 1998ರಲ್ಲಿ ಅಂದಿನ ಪ್ರಧಾನಿ ವಾಜಪೇಯಿಯವರು ರಾಷ್ಟ್ರೀಯ ಭದ್ರತೆಗೆ ಸಲಹೆಗಾರರೊಬ್ಬರನ್ನು (NSA) ನೇಮಿಸುವ ಮೂಲಕ.

ಅಲ್ಲಿಯ ತನಕ ಪ್ರಧಾನಿಯ ಪ್ರಿನ್ಸಿಪಲ್ ಕಾರ್ಯದರ್ಶಿ ಮಾಡುತ್ತಿದ್ದ ಕೆಲಸಗಳನ್ನು, ಕಾರ್ಯಾಂಗದಿಂದ ಹೊರಗಿನ ವ್ಯಕ್ತಿಯೊಬ್ಬರಿಗೆ ವಹಿಸಿಕೊಡಲಾಯಿತು. RAW, IB ಸೇರಿದಂತೆ ಕೇಂದ್ರದ ಎಲ್ಲ ಗುಪ್ತಚರ ವಿಭಾಗಗಳು ಈ ಸಲಹೆಗಾರರಿಗೆ ವರದಿ ಮಾಡಬೇಕಿರುತ್ತದೆ. ಪ್ರಧಾನಿಗೆ ಮತ್ತು ದೇಶದ ರಾಷ್ಟ್ರೀಯ ಭದ್ರತಾ ಮಂಡಳಿಗೆ ಈ ಸಲಹೆಗಾರರು ತಮ್ಮ  ಸಲಹೆಗಳನ್ನು ನೀಡಬೇಕಿರುತ್ತದೆ.

ವಿದೇಶಾಂಗ ಕಾರ್ಯದರ್ಶಿ ಆಗಿದ್ದ ಬ್ರಜೇಶ್ ಮಿಶ್ರಾ ದೇಶದ ಮೊದಲ NSA. ಈ ಹುದ್ದೆ ಮಹತ್ವಪೂರ್ಣವಾದದ್ದಾಗಿದ್ದು, ಅದರ ಬಲುದೊಡ್ಡ ಮಿತಿ ಎಂದರೆ, ಅದು ಈಗ ರಾಜಕೀಯ ಆಯ್ಕೆ ಆಗಿ ಬದಲಾಗಿರುವುದು. ಅಂದರೆ ಕೇಂದ್ರ ಸರಕಾರ ಬದಲಾದಾಗಲೆಲ್ಲ, NSA ಬದಲಾಗಬಹುದು.

NSA ಹುದ್ದೆಯಲ್ಲಿ ಹಾಲೀ ಇರುವ ಅಜಿತ್ ದೋವಲ್ ಕೇರಳ ಕೆಡೇರ್ ನ ಪೊಲೀಸ್ ಸೇವೆ ಅಧಿಕಾರಿ ಆಗಿದ್ದು, IB ಮಹಾನಿರ್ದೇಶಕರಾಗಿ ನಿವ್ರತ್ತರಾದ ಬಳಿಕ ಬಲಪಂಥೀಯ ಸಿದ್ಧಾಂತಗಳಿಗೆ ಸಮೀಪವಿರುವ ಸಂಘಟನೆಯೊಂದನ್ನು ಕಟ್ಟಿಕೊಂಡು ಕೆಲಸ ಮಾಡುತ್ತಿದ್ದವರು.

ಗಡಿಯಲ್ಲಿ ಭಾರತ-ಪಾಕಿಸ್ಥಾನಗಳ ನಡುವೆ ಘರ್ಷಣೆಗಳು ಹೊಸದೇನಲ್ಲ. ಅದನ್ನು ಭಾರತೀಯ ಸೇನಾಪಡೆಗಳು ಸಮರ್ಥವಾಗಿಯೇ ಎದುರಿಸುತ್ತಲೂ ಬಂದಿವೆ. ಈ ವಿಚಾರ ಎಂದೂ ಸಾರ್ವಜನಿಕವಾಗಿ ವಿವಾದಕ್ಕೀಡಾದ ಹಿನ್ನೆಲೆ ಇಲ್ಲ. ಸೇನೆಯ ಕುರಿತಾದ ಖರೀದಿ-ಟೆಂಡರ್ ಗಳಂತಹ ವಿಚಾರಗಳಲ್ಲಿ ವಿವಾದಗಳು, ಹಗರಣಗಳಾಗಿದ್ದವೇ ಹೊರತು ಭಾರತೀಯ ಸೇನಾಪಡೆಗಳ ರಣತಂತ್ರಗಾರಿಕೆ, ಸಾಮರ್ಥ್ಯ, ನೆಲದ ಪ್ರೀತಿ ಇವೆಲ್ಲ ಎಂದೆಂದಿಗೂ ಪ್ರಶ್ನಾತೀತವೇ ಆಗಿದ್ದವು ಮತ್ತು ಸಾರ್ವಜನಿಕ ಚರ್ಚಾವಲಯದಿಂದ ಹೊರಗೇ ಇದ್ದವು.

ಮೊನ್ನೆ ಭಾರತೀಯ ಸೇನಾಪಡೆಗಳು ಗಡಿಯಲ್ಲಿ ನಡೆಸಿದ ಕಾರ್ಯಾಚರಣೆಗಳನ್ನು ಸರ್ಕಾರದ ಸಮರ್ಥಕರು ಅಜಿತ್ ದೋವಲ್ ನಿರ್ದೇಶಿತ ‘ಸರ್ಜಿಕಲ್ ಸ್ಟ್ರೈಕ್’ ಎಂದು ಸಾರ್ವಜನಿಕವಾಗಿ ವರ್ಣಿಸಹೊರಟಲ್ಲಿಂದ, ಕೇಂದ್ರ ಸಚಿವ ಸಂಪುಟ ಈ ಘಟನೆಯ ರಾಜಕೀಯ ಮೈಲೇಜ್ ಪಡೆಯಲು ಯತ್ನಿಸಿದಲ್ಲಿಂದ ಈಚೆಗೆ, ತೀರಾ ಕೀಳು ಮಟ್ಟದ ರಾಜಕೀಯ ಕೆಸರೆರಚಾಟ ಆರಂಭವಾಗಿದ್ದು, ಇದು ಅಂತಿಮವಾಗಿ ಹಾನಿ ಮಾಡಲಿರುವುದು ಭಾರತೀಯ ಸೇನಾಪಡೆಗಳ ಆತ್ಮಸ್ಥೈರ್ಯಕ್ಕೇ ಎಂಬುದನ್ನು ಎಲ್ಲರೂ ಮರೆತಂತಿದೆ. ದೇಶದ ಹಿತದ್ರಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆ ಅಲ್ಲ.

ಇಲ್ಲಿ ಗಮನಿಸಬೇಕಾದ ಇನ್ನೊಂದು ಸಂಗತಿ ಇದೆ. NDA ಸರಕಾರ ಬಂದ ಹೊಸದರಲ್ಲಿ ಪ್ರಧಾನಿ ಮೋದಿಯವರು ದಿಲ್ಲಿಯಲ್ಲಿ ರಕ್ಷಣಾ ಸಚಿವಾಲಯ ಇರುವ ನಾರ್ತ್ ಬ್ಲಾಕ್ ಗೆ ಮತ್ತು  ಸೇನಾ ಕಮಾಂಡ್ ಗಳಿಗೆ ಮಾಧ್ಯಮಗಳ ಪ್ರವೇಶವನ್ನು ಕಟ್ಟುನಿಟ್ಟಾಗಿ amul-surgical-strikes-lನಿರ್ಬಂಧಿಸಿದ್ದರು ಮತ್ತು ಎಲ್ಲ ಹೇಳಿಕೆಗಳೂ ಸರಿಯಾದ ಹಾದಿಯ ಮೂಲಕವೇ (ರಕ್ಷಣಾ ಸಚಿವರು ಅಥವಾ ಸೇನಾ ಸಾರ್ವಜನಿಕ ಸಂಪರ್ಕ ವಿಭಾಗ) ಮಾಧ್ಯಮಗಳನ್ನು ತಲುಪಬೇಕೆಂದು ನಿರ್ದೇಶಿಸಿದ್ದರು. ಅಲ್ಲಿಂದೀಚೆಗೆ ರಕ್ಷಣಾ ಖರೀದಿಗಳು, ಬೆಳವಣಿಗೆಗಳ ಬಗ್ಗೆ ಮಾಧ್ಯಮಗಳು ಕತ್ತಲಲ್ಲೇ ಇವೆ.

ಇದು ಎಷ್ಟರ ಮಟ್ಟಿಗೆಂದರೆ, ಮೊನ್ನೆ ರಫೇಲ್ ಯುದ್ಧವಿಮಾನಗಳ ಖರೀದಿ ಅಂತಿಮಗೊಂಡ ವಿಚಾರ ಮಾಧ್ಯಮಗಳ ಕೈಗೆ ಸಿಕ್ಕಿದ್ದು ಫ್ರೆಂಚ್ ಸಚಿವರು ಇಲ್ಲಿಗೆ ತಲುಪುವ ಒಂದು ದಿನ ಮೊದಲು! ಆ ಮೊದಲು, ಜಲಾಂತರ್ಗಾಮಿ ಮಾಹಿತಿ ಸೋರಿಕೆ ವಿಚಾರ ಮಾಧ್ಯಮಗಳಿಗೆ ದೊರೆತದ್ದು ಆಸ್ಟ್ರೇಲಿಯನ್ ಪತ್ರಿಕೆಯಿಂದ!!

ರಕ್ಷಣೆಯ ವಿಚಾರಕ್ಕೆ ಸಂಬಂಧಿಸಿ ಇಷ್ಟೊಂದು ಎಚ್ಚರ ವಹಿಸಿದವರು, ಸೇನೆಯು ಗಡಿಭಾಗದಲ್ಲಿ ನಡೆಸಿದ ಒಂದು ಕಾರ್ಯಾಚರಣೆಯ ಕ್ರೆಡಿಟ್ ಪಡೆಯಲು ಹೊರಟದ್ದು ಮತ್ತು ಅದರಿಂದ ಎದ್ದಿರುವ ಕೆಸರೆರಚಾಟ ನೇರವಾಗಿ ಸೇನೆಯ ಆತ್ಮಸ್ಥೈರ್ಯವನ್ನೇ ಕುಗ್ಗಿಸುವ ಮಟ್ಟಕ್ಕೆ ಹೋಗುತ್ತಿರುವುದು ಖಂಡಿತಾ ಒಳ್ಳೆಯ ಮೇಲ್ಪಂಕ್ತಿ ಅಲ್ಲ.

ಸೇನಾ ಕಾರ್ಯಾಚರಣೆ, ಸೇನಾ ತಂತ್ರಗಾರಿಕೆ – ಇವನ್ನೆಲ್ಲ ಸೇನೆಗೇ ಬಿಟ್ಟು, ಚಾಲ್ತಿ ರಾಜಕೀಯ ಕೆಸರೆರಚಾಟಕ್ಕೆ ಅವರನ್ನು ಎಳೆತರದೆ, ಸೇನಾಪಡೆಗಳ ಆವಶ್ಯಕತೆ ಪೂರೈಕೆ, ಅವರ ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸಗಳನ್ನಷ್ಟೇ ಸರಕಾರ ನಿಷ್ಠೆಯಿಂದ ಮಾಡಿದರೆ, ಅದೇ ದೊಡ್ಡ ದೇಶಸೇವೆ.

‍ಲೇಖಕರು Admin

October 7, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

4 ಪ್ರತಿಕ್ರಿಯೆಗಳು

  1. Guru

    1. The Press was kept out of North Block by Narendra Modi to avoid scams like Bofors, Augusta , Radia Gate and keep the Contracts out of Middleman and commission agents .
    2. Since Political will required to order a surgical strike against terrorist in our own territory occupied by Pakistan . taking credit for it is not bad ,and its provides confidence in the soldiers that their life matters .
    3. Ajith Doval affiliation to VIF is being highlighted here more than his carrier achievements .

    ಪ್ರತಿಕ್ರಿಯೆ
    • Rajaram Tallur

      1. ಚಪ್ಪಾಳೆ ಆಗಲು ಎರಡೂ ಕೈಗಳು ಬೇಕಾಗುತ್ತವೆ.
      2. ವಾಸ್ತವದಲ್ಲೀಗ ಭಾರತೀಯ ಸೇನೆ ಪಡೆದುಕೊಂಡದ್ದಕ್ಕಿಂತ ಕಳೆದುಕೊಂಡದ್ದೇ ಹೆಚ್ಚಾಗಿದೆ.
      3. RAW, IB, MI ವಿಭಾಗಗಳು ಸೇರಿದಂತೆ ಸಾವಿರಕ್ಕೂ ಮಿಕ್ಕಿ ಗೂಢಚರ ಆಪರೇಟಿವ್ ಗಳಿದ್ದಾರೆ. ಅವರು ಪ್ರತಿಯೊಬ್ಬರ ಬದುಕೂ ಒಬ್ಬರದಕ್ಕಿಂತ ಇನ್ನೊಬ್ಬರದು ರೋಚಕ. ದೇಶಸೇವೆಯಲ್ಲಿ ಅವರು ಯಾವ ಸೈನಿಕರಿಗೂ ಕಡಿಮೆ ಇಲ್ಲ. ಒಬ್ಬ ವ್ಯಕ್ತಿ ಮಾತ್ರ ಅಲ್ಲ; ಅಲ್ಲಿ ಪ್ರತಿಯೊಬ್ಬರೂ ಜೇಮ್ಸ್ ಬಾಂಡ್ ಗಳೇ!

      ಪ್ರತಿಕ್ರಿಯೆ
  2. M A Sriranga

    ರಾಜಕೀಯದ ಕೆಸರೆರಚಾಟ ಪ್ರಾರಂಭವಾಗಿದ್ದು ಯಾರಿಂದ? ಮೋದಿಯವರು ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ಕಟ್ಟುನಿಟ್ಟಾಗಿ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮಾತಾಡದಂತೆ ಅಪ್ಪಣೆ ಮಾಡಿದ್ದಾರೆ. ಆ ಬಗ್ಗೆ ‘ಯಾರು ಮಾತಾಡಬೇಕೋ ಅವರೇ ಮಾತಾಡಲಿ’ ಎಂದು ಹೇಳಿದ್ದಾರೆ. ಭಾರತದ ವಿರೋಧ ಪಕ್ಷಗಳ ನಾಯಕರ ಹೇಳಿಕೆಗಳನ್ನು ಪಾಕಿಸ್ತಾನದ ಪತ್ರಿಕೆಗಳು ಸ್ವಾಗತಿಸುತ್ತಿವೆ ಎಂದರೆ ಭಾರತದ ಮಾನ ಮರ್ಯಾದೆ ಹರಾಜಾಗುತ್ತಿದೆ ಎಂದು ಅರ್ಥವಲ್ಲವೇ? ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪುರಾವೆ ಕೊಡಿ ಎಂದರೆ ಅದೇನು ಬಾಲಿವುಡ್ ಸಿನಿಮಾಗಳ ಟ್ರೈಲರೇ? ಅದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರೆ ಪಾಕಿಸ್ತಾನದವರಿಗೆ ನಾವೇ ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡಂತಲ್ಲವೇ? ಅಧಿಕಾರದಲ್ಲಿರುವ ಪಕ್ಷ ಕಾಂಗ್ರೆಸ್, ಬಿಜೆಪಿ ಅಥವಾ ಇನ್ನ್ಯಾವುದೇ ಆಗಿರಲಿ ಅದರ ಎಲ್ಲಾ ನಡೆಗಳನ್ನೂ ಟೀಕಿಸುತ್ತಾ ಹೋಗಬಹುದು. ಕಷ್ಟವೇನಲ್ಲ. ರಾಜಕಾರಣ ಎನ್ನುವುದು ಮಾಧ್ಯಮಗಳು, ಅವುಗಳ ಪ್ಯಾನೆಲ್ ಚರ್ಚೆಗಳು ತಿಳಿದುಕೊಂಡಷ್ಟು ಸುಲಭವಲ್ಲ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: