ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಚ್ ಆರ್ ರಮೇಶ ಹೊಸ ಕವಿತೆ- ಸಾವಯವ

ಎಚ್ ಆರ್ ರಮೇಶ 

ಸಂಜೆ ಅಣಿಯಾಗುತ್ತಿದೆ ಪ್ರಜ್ಞಾಹೀನವಾಗಲು, ಸೂರ್ಯ 

ಸಾಯುತ್ತಿರುವುದನ್ನು ಸಾಯುತ್ತಿರುವ ಎಲ್ಲವೂ ನೋಡುತ್ತಿವೆ;

ಪುನರ್ಜನ್ಮವೆನ್ನುವುದು ಪುರಾಣದಲ್ಲಿಯೇ ಇರಲಿ,

ಇಲ್ಲಿ ಈಗ ಒಂದು ಪಕ್ಷಿ

ಹಣ್ಣನ್ನು ತಂದಿದೆ;

ಮತ್ತು ಗೂಡಿಗೆ ಹಾರುತ್ತಿದೆ,

ಇನ್ನೊಂದು ಹಣ್ಣು ಇಲ್ಲವೆಂಬಂತೆ ಇದೆ ಒಳಗೆ,

ಸಾವೆನ್ನುವುದು ಸಾವಯವ;

ಪ್ರತಿ ತಂತುವಿನಲ್ಲೂ,

ಪ್ರತಿ ಅಣುವಿನಲ್ಲೂ;

ಸಂಜೆ ಅಣಿಯಾಗುತ್ತಿದೆ ಪ್ರಜ್ಞಾಹೀನವಾಗಲು, ಅಂದರೆ: ಜೀವಂತವಾಗಿ

ಮತ್ತೆ ಪ್ರಜ್ಞೆ ಬರುವ ತನಕ ಸತ್ತು ಹಗೂರವಾಗುವುದು,

ಎಲ್ಲದರ ನಡುವೆ ಎಲ್ಲವ ಕಳೆದುಕೊಂಡು (ಇದು ಲೋಕದ ಮಾತು, ಕಳೆದು ಕೊಳ್ಳುವುದಕ್ಕೆ ನಮ್ಮದೇನಿದೆ),

ಆದರೂ, 

ಎಲ್ಲೆಲ್ಲಿಂದಲೋ ಬೆಳಕಿನ ಕೋಲುಗಳು ತೂರಿ ಬರುತ್ತವೆ, 

ಅಲ್ಲಿ,

ಅಣು ಕಣಗಳು ದೂರದ ನಕ್ಷತ್ರಗಳು;

ಒಂದೇ ಸಮ ಹೋಗುತ್ತಿವೆ, ಬರುತ್ತಿವೆ, ಏರುತ್ತಿವೆ, ಇಳಿಯುತ್ತಿವೆ,

ಸೃಷ್ಟಿ ಒಮ್ಮೊಮ್ಮೆ ಗುಟ್ಟು ಬಿಡುವುದು,

ಕನಸಲ್ಲಿ ಹಾಲುಗಲ್ಲದ ಕಂದ ನಕ್ಕಂತೆ;

ಆದರೆ-

ರಟ್ಟಾದ ಗುಟ್ಟು ಗುಟ್ಟಾಗಿರುವುದಿಲ್ಲ,

ಕಂದ ನಕ್ಕಿದ್ದು ಕನಸಿನಿಂದಾಗಿಯೇ,

ಗೊತ್ತಿಲ್ಲ.

‍ಲೇಖಕರು Avadhi

25 February, 2021

1 Comment

  1. Siraj Ahmed

    Beautiful …Ramesh

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading