ಎರಡು ಕೆಂಪು ದಾಸಾಳ ಹೂಂಗು

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ..

ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ ನಮಗೆ ‘ಮೀನುಪೇಟೆಯ ತಿರುವಿನಲ್ಲಿ’ ಸಿಗುತ್ತಿದ್ದರು. ಇನ್ನು ಮುಂದೆ ಪ್ರತಿ ಶುಕ್ರವಾರ ‘ಅವಧಿ’ಯ ‘ನನ್ನ ಶಾಲ್ಮಲೆ’ ಅಂಕಣದಲ್ಲಿ ಸಿಗಲಿದ್ದಾರೆ.

ನಮ್ಮೂರ ಕಡೆ ವಿಶೇಷವಾಗಿ ಚಳಿಗಾಲದಲ್ಲಿ ಹುಲಿ, ಚಿರತೆಗಳು ಊರುಕೇರಿಯಿಂದ ಸ್ವಲ್ಪ ದೂರ ಬೇಣದ ಜಾಗದಲ್ಲಿ ಮನೆ ಕಟ್ಟಿಕೊಂಡಿರುವ ನಮ್ಮಂತವರ ಮನೆಯ ಆಸುಪಾಸು ರಾತ್ರಿ ಬೆಟ್ಟ ಇಳಿದು ಬಂದು ಸುಳಿದಾಡುವುದು ಸಾಮಾನ್ಯ. ಹಗಲಿಡೀ ಮಲಗಿರುವ ನಾಯಿಗಳು ರಾತ್ರಿ ಸಣ್ಣ ಸದ್ದಿಗೂ ಮನೆಯ ಹಿಂದೂ ಮುಂದೂ ಓಡಾಡುತ್ತ ಬೊಗಳುತ್ತಿರುತ್ತವೆ. ಕಟ್ಟಿಟ್ಟ ನಾಯಿಗಳೆಂದರೆ ತಟ್ಟೆ ಇಟ್ಟು ಊಟಕ್ಕೆ ಕರೆದ ಹಾಗೆ ಚಿರತೆಗಳಿಗೆ.

ಮೊನ್ನೆಯಷ್ಟೇ ನಾನು ಶಾಲೆಗೆ ಹೋಗುವ ಕುರುಚಲು ಕಾಡಿನ ಒಳರಸ್ತೆಯ ಚಿಪ್ಪಿ ಫ್ಯಾಕ್ಟರಿ ಸಮೀಪ ಕಲ್ಲುಕಣಿ ಮೋನಪ್ಪನಿಗೆ ಸೈಕಲ್ ಮೇಲೆ ಹೋಗುವಾಗ ಸಂಜೆ ಏಳುಗಂಟೆಗೇ ಸಾದ್ರಾಣ ಗಾತ್ರದ ಪಟ್ಟೆ ಹುಲಿ ಕಂಡು ಊರು ತುಂಬ ಗುಲ್ಲಾಗಿದೆ. ಅಲ್ಲೆಲ್ಲಾದರು ತುಸು ನಿಂತು ಗೇರುಹಣ್ಣು ಹುಡುಕಿ ಶಾಲೆ ಮಕ್ಕಳಿಗೆ ಪೊಟ್ಲೆಕಟ್ಟಿಕೊಂಡು ಹೋಗುತ್ತಿದ್ದ ನಾನು ಈಗ ಜಪ್ಪಯ್ಯ ಅಂದರೂ ಅಲ್ಲಿ ನಿಲ್ಲುವುದಿರಲಿ ತೆರಗಣ್ಣು ಕೂಡ ಹಾಕುವುದಿಲ್ಲ.

ಈಗ ಅಲ್ಲಿಂದ ಹಾಯುವಾಗ ಎಕ್ಸಲೇಟರ್ ಜೋರಾಗುತ್ತದೆ ನನ್ನ ಸವಾರಿಯದ್ದು. ನಮ್ಮೂರ ಹುಲಿದೇವನ ಗುತ್ತಿಗೆ ‘ಕಾಪಾಡಪ್ಪಾ ಹಣ್ಣುಕಾಯಿಗೆ ನಾಡಿದ್ದು ಬರ್ತೆ. ಈ ಸಲ ನಿನ್ನ ಆಚಣಿ (ಅನ್ನಪ್ರಸಾದ) ಮಾಡಿಸಿಕೊಡೋ ‘ಜಬುದಾರಕಿ’ ನಾನೇ ಹೊರ್ತೆ’ ಎಂದು ಕರೆಹೋಗುತ್ತದೆ. ಊರಿಗೂ ಕೆಳಗೆ, ಗದ್ದೆಗಳಿಗೂ ಮೇಲೆ ಬಾಯಿತೆರೆದು ನಿಂತ, ಅನಾದಿಕಾಲದಿಂದಲೂ ಪೂರ್ವಿಕರಿಂದ ಪೂಜೆಗೊಳ್ಳುತ್ತ ಬಂದಿರುವ ಹುಲಿದ್ಯಾವ್ರನ್ನು ನೀವು ನಮ್ಮ ಅಂಕೋಲೆಯ ಪ್ರತಿ ಊರಲ್ಲೂ ಸಾಮಾನ್ಯವಾಗಿ ನೋಡಬಹುದು.

ಹಾಗೇ ಕೃಷಿದೈವ ಗುಡ್ಡದ ಬೊಮ್ಮಯ್ಯ (ಭೂಮ್ತಾಯಿ ಎಂದು ಕರೆಯಲ್ಪಡುವ ಶಾಂತಾದುರ್ಗೆಯ ಅಣ್ಣ) ಹೊಲಿಯಟ್ರ, ಬೀರ, ಜಟಗ, ಸಣ್ಣಮ್ಮ, ನಾಸ, ಚೌಡಿ, ರಾಕೇಸ, ಹೊನ್ನ, ಕನ್ನೆಮ್ಮ, ಮಾಸ್ತಿ, ಮಾರಿ, ಬೇಡ, ಜಾಡ, ಬೇತಾಳ ಮುಂತಾದ ಇನ್ನೂ ಗ್ರಾಮೀಣರ ವಶದಲ್ಲೇ ಇದ್ದು ಜನಪದ ದೈವಗಳಾಗೇ ಇರುವ ಶಿಷ್ಟ ಸಂಪ್ರದಾಯದ ಕಡೆಗೆ ವಾಲದ, ಕುಂಬಾರ, ಹಾಲಕ್ಕಿ, ನಾಡವ ಮುಂತಾದ ಲೋಕಲ್ ಸಮುದಾಯದವರಿಂದಲೇ ಪೂಜೆಗೊಳ್ಳುವ ಹಲವು ಕರಾಮತಿ ಊರ ದೇವರುಗಳನ್ನು ನಾವು ನಂಬಿ ಮೂಲದಲ್ಲೇ ಕಾಪಾಡಿಕೊಂಡು ಬಂದಿದ್ದೇವೆ. 

ಭಯಭಕ್ತಿಯಿಂದ ಅವನ್ನು ಪೂಜಿಸುವಷ್ಟೇ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಅವು ನಮ್ಮ ಬಯ್ಗುಳಕ್ಕೂ ಕೊಟ್ಟಿವೆ. ದೇವರ ಅಣಕು ಕಳಸ ಮಾಡಿ ನಾವು ಆಡುಕಟ್ಟೆಯ ಹಗ್ರಾಣದಲ್ಲಿ ದೇವರೆದುರಿಗೇ ಅವನನ್ನು ಆಡಿಕೊಂಡು ನಗುತ್ತೇವೆ. ‘ನೋಡ್ ತಾಯೇ.. ಕೇಳ್ ತಾಯೇ ಇದು ನನ್ನ ಬೇಡಿಕೆ. ನೀ ಇದನ್ನ ನಡೆಸಿಕೊಡ್ಲೇ ಬೇಕು.. ಇಷ್ಟು ದಿನ ನಿನ್ನ ಬಿಟ್ಟು ಬ್ಯಾರೋರನ್ನ ನಂಬದೇ ನಿಂಗೇ ನಡಕಂತ ಬಂದೇವೆ.. ನೀ ನನ್ನ ಕೈ ಬಿಟ್ರೆ ನಿನ್ನ ಸ್ಥಾನಕ್ಕೆ ನಾ ಇನ್ನು ಮುಂದೆ ಕಾಲ್ ಹಾಕುದಿಲ್ಲ.

ನಿನ್ನ ಮೊಕ ನೋಡುದಿಲ್ಲ. ನಿನ್ನ ದಿಕ್ಕಿಗೆ ತಲೆ ಹಾಕಿ ಮಲಗುದೂ ಇಲ್ಲ ‘ಎಂಬುದಾಗಿ ಪುಡವಿ ಪ್ರಸಾದ ಕೇಳುವಾಗ, ಬಾಗಿಲು ಕಟ್ಟುವಾಗ ದೊಡ್ಡ ದ್ವನಿಯಲ್ಲೇ ಏಕವಚನದಲ್ಲಿ ತಾಕೀತು ಕೊಡುತ್ತೇವೆ. ಅವು ನಮ್ಮ ನಂಬುಗೆಗೆ, ನಿಷ್ಠೆಗೆ, ಸತ್ಯತನಕ್ಕೆ ಬೆಕ್ಕ್ ಬೆರಗಾಗಿ ಬಾಯಿ ಮುಚ್ಚಿಕೊಂಡು ನಮ್ಮನ್ನು ಪೊರೆಯುತ್ತವೆ. ಒಂದು ಕೊಡ ನೀರಿನಲ್ಲಿ ಮೀಯಿಸಿ ಎರಡು ಕೆಂಪು ದಾಸಾಳ ಹೂಂಗನ್ನು ಅವಕ್ಕೆ ಮುಡಿಸಿಬಿಟ್ಟರೂ ಸಾಕು. ವರ್ಷಪೂರ್ತಿ ಊರಿನ ದೇಖರೇಖಿ ಮಾಡುತ್ತವೆ.

ಕಾರವಾರದಿಂದ ಹೊನ್ನಾವರ ಸೀಮೆಯವರೆಗಿನ ಕರಾವಳಿಯಲ್ಲಿ ತ್ಯಾಗ, ಬಲಿದಾನ ಹಾಗೂ ಜಾನಪದ ಸಂಸ್ಕ್ರತಿಯ ಮಿಳಿತದೊಂದಿಗೆ ಸುಮಾರು ಹಳ್ಳಿಗಳಲ್ಲಿ ಬಂಡಿಹಬ್ಬವೆಂಬ ವಿಶಿಷ್ಟ ಜನಪದ ಹಬ್ಬವನ್ನು ಮೇ ತಿಂಗಳಲ್ಲಿ ಆಚರಿಸುತ್ತಾರೆ. ಗ್ರಾಮದೇವತೆ ಭೂಮಿ ತಾಯಿ ಯ ಹೆಸರಲ್ಲಿ ನಮ್ಮ ಅಂಕೋಲೆಯಲ್ಲಿ ನಡೆಯುವ ಬಂಡಿಹಬ್ಬ ನಮ್ಮ ನಾಡಿನಲ್ಲೆಲ್ಲ ಬಲು ಅಸಾಧಾರಣವಾದುದು ಹಾಗೂ ಪ್ರಸಿದ್ಧವಾದುದು.

ಅಕ್ಷಯ ತೃತೀಯದಂದು ಸೇಸೆ ಹಾಕುವುದರಿಂದ ಶುರುವಾದ ಇದು ಹನ್ನೆರಡನೆಯ ದಿನ ವೈಶಾಖ ಶುದ್ಧ ಬುದ್ದಪೂರ್ಣಿಮೆಯ ಪಾಡ್ಯದಂದು ಮುಗಿಯುತ್ತದೆ. ಈ ಹನ್ನೆರಡು ದಿನದಲ್ಲೂ ಗ್ರಾಮದ ರಕ್ಷಣೆ ಮಾಡಿದ ವೀರ, ಮಹಾಸತಿಯ ತ್ಯಾಗ, ಕೃಷಿಗೆ ಸಂಬಂಧಿಸಿದ ಆಚರಣೆಗಳು, ಆರಾಧನೆಗಳು ನಡೆದುಕೊಂಡು ಬರುತ್ತವೆ. ಇದರ ಕುರಿತಾಗಿಯೇ ನಾನೀಗ ಹೇಳಲು ಹೊರಟಿರುವುದು.

ಏನಿದು ಬಂಡಿಹಬ್ಬ..?
‘ಗಾಣಗುದಿಗೆ ಜ್ವರ (ಪ್ಲೇಗು,ಕಾಲರಾ) ಬಂದಾಗ ಇಂತಹ ದೊಡ್ಡ ರೋಗಕ್ಕೆ ತುತ್ತಾಗಿ ಬದುಕಿಬಂದ್ರೆ ದೇವಿಯ ಸಿಂಗಾರ ಮಾಡಿದ ಬಂಡಿಯ ಶೂಲಕ್ಕೆ ಬೆನ್ನಿನ ಮಾಂಸಖಂಡ ಸಹಿತದ ಚರ್ಮವನ್ನು ಸಿಕ್ಕಿಸಿಕೊಂಡು ಅಂಕೋಲೆಯ ಬಬ್ರುವಾಡದ ಬಂಡಿಕಟ್ಟೆಯಿಂದ ಈಗಿನ ಬಂಡಿ ಬಜಾರದ ಬಂಡಿಗದ್ದೆಯವರೆಗೆ ಗಾಡಿಯನ್ನು ಎಳೆಯುವ ಹರಕೆ ಹೊರುತ್ತಿದ್ದರು ಜನ. ಅವರಿಗೆ ಬಲಿಮಕ್ಕಳು ಅನ್ನುತ್ತಿದ್ದರು.

ಆಗಿನ ಬ್ರಿಟೀಷ್ ಸರ್ಕಾರ ಇದನ್ನು ಅಮಾನವೀಯ ಎಂದು ಪರಿಗಣಿಸಿ ನಿಷೇಧ ಮಾಡಿದ ಮೇಲೆ ಇದು ನಿಂತಿತು ರೇಣುಕಾ. ಆದರೆ ಈಗಲೂ ಹಲವು ರೋಗಗಳಿಂದ ಮುಕ್ತರಾಗಲು ಹರಕೆ ಹೊತ್ತವರು ಬಲಿ ಮಕ್ಕಳಾಗಿ ಅಬ್ಬಲಿಗೆ ಮಾಲೆ ಧರಿಸಿ ವೃತಧಾರಿಗಳಾಗಿ ಬಂಡಿಹಬ್ಬದಲ್ಲಿ ಈಗಿನ ಕಾಲಮಾನಕ್ಕೆ, ಶಕ್ತಿಗೆ ತಕ್ಕಂತೆ ಸೇವೆ ಸಲ್ಲಿಸುತ್ತಾರೆ. ಆಗಿನ ಘೋರ ಪದ್ದತಿ ಈಗಿಲ್ಲ.

ಆದರೆ ಆಗಿನ ಕಾಲದಲ್ಲಿ ಬೆನ್ನಿನ ಶೂಲದ ನೋವು ತಾಳಲಾರದೇ ‘ಅಯ್ಯಯ್ಯೋ ಅಯ್ಯಯ್ಯೋ’ ಅನ್ನುತ್ತ ಬಲಿಮಕ್ಕಳು ಕೂಗುವ ಕೂಗನ್ನು ರಿವಾಜಿನ ರೀತಿಯಲ್ಲಿ ನಂಬಲಾಗಿತ್ತು. ಅದನ್ನು ಈಗಿನ ಹರಕೆ ಹೊತ್ತವರು ಕೂಡ ಕಣ್ಣಿಗೆ ಕಾಡಿಗೆ ಬಳಿದುಕೊಂಡು ಕೇದಿಗೆ ಹೂವಿನ ಕಿರೀಟ ಕಟ್ಟಿಕೊಂಡು ‘ಅಯ್ಯಯ್ಯೋ’ ಹಾಕುತ್ತ ಕಳಸದ ಬೆನ್ನಿಗೆ ಓಡಿಬರುವ ನೇಮದ ರೀತಿ ಪಾಲಿಸಿಕೊಂಡು ಬಂದಿದಾರೆ’ ಅಂತ ವಂದಿಗೆಯ ದಿ| ವಿ ಜೆ ನಾಯಕರು ನನ್ನ ಕುತೂಹಲಕ್ಕೆ ಉತ್ತರವಾಗಿ ಆಗಾಗ ಹೇಳುತ್ತಿದ್ದ ಮಾತು..

ಒಂದ್ಹೊತ್ತಿಗೆ ಹೇಳುವುದು
ಊರ ಗಾಂವಕಾರ, ಪೂಜೆ ಮಾಡುವರು, ದೇವಸ್ಥಾನದ ಮೊಕ್ತೇಸರರು ಒಂದು ದಿನ ಕೂಟ ಮಾಡಿ ಬಂಡಿಹಬ್ಬ ನಡೆಸುವ ದಿನ ನಿಶ್ಚಯಿಸಿ ಊರಿನವರಿಗೆ ಸುದ್ದಿ ತಿಳಿಸುತ್ತಾರೆ. ಇದನ್ನು ‘ಒಂದು ಹೊತ್ತಿಗೆ ಹೇಳುವುದು’ ಎನ್ನುತ್ತಾರೆ. ಅಂದರೆ ದೇವಕಾರ್ಯಕ್ಕೆ ಸಂಬಂಧಿಸಿದವರಿಗೆ ಈ ದಿನ ಒಂದೇ ಊಟ  ಮತ್ತು ಈ ದಿನ ದೇವರಿಗೆ ತುಸು ವಿಶೇಷ ಪೂಜೆ ಮತ್ತು ಉಪಾರ (ಉಪಹಾರ).

ಆಗಲೇ ಹೇಳಿದಂತೆ ಅಕ್ಷಯ ತೃತೀಯದಂದು ಸೇಸೆ ಹಾಕಿ ಹಬ್ಬ ಆರಂಭಿಸುವ ಕೆಲ ದಿನ ಮೊದಲೇ ಒಂದು ‘ಅವಲಹಬ್ಬ’ ಎಂಬ ವಿಶೇಷ ಹಬ್ಬ ಮಾಡಿ ಮುಗಿದಿರಬೇಕು ಎಂಬ ಪದ್ಧತಿ ಇದೆ. ಒಂದು ವೇಳೆ ಇದನ್ನು ಅನಿವಾರ್ಯ ಕಾರಣದಿಂದ ಮಾಡಲಾಗದೇ ಹೋಗಿದ್ದರೆ ಒಂದು ಹೊತ್ತಿಗೆ ಹೇಳಿದ ಮರುದಿನ ಅಂದರೆ ಸೇಸೆ ಹಾಕುವ ಪೂರ್ವದಲ್ಲಿ ಅವಲ ಹಬ್ಬ ಮಾಡಿ ಅದರ ನಂತರ ಸೇಸೆ (ಅಕ್ಷತೆ) ಹಾಕುತ್ತಾರೆ. ಅಂದಿನಿಂದ ಹಬ್ಬ ಅಧಿಕೃತವಾಗಿ ಆರಂಭವಾಯ್ತೆಂದು ಲೆಕ್ಕ..

ಈ ಸೇಸೆ ಹಾಕಿದ ದಿನದಿಂದ ಬಂಡಿಹಬ್ಬದ ದಿನದ ಹಿಂದಿನ ದಿನದವರೆಗೆ (ಜಾಗರದ ದಿನದವರೆಗೆ) ದಿನಾ ಸಂಜೆ ತಲೆಮೇಲೆ ಕಳಶ ದೇವರನ್ನು ಹೊತ್ತುಕೊಂಡು ಗುನಗನು ವಾದ್ಯ, ಕಟಗಿದಾರ, ಮೊಕ್ತೇಸರ, ಭಕ್ತಾದಿಗಳೊಂದಿಗೆ ಕಳಸ ದೇವಸ್ಥಾನದಿಂದ ಹೊರಟು ಅಮ್ಮ, ಬೀರ, ಬೊಮ್ಮಯ್ಯ ಮುಂತಾದ ದೇವಸ್ಥಾನಕ್ಕೆ ಹೋಗಿ ತದನಂತರದಲ್ಲಿ ಆಡುಕಟ್ಟೆಗೆ ಬರುತ್ತಾನೆ. ಕಲಶ ಹೊರುವವರು ಪೂಜೆ ಮಾಡುವ ಗುನಗರು ಕುಂಬಾರ ಮತ್ತು ಹಾಲಕ್ಕಿಗಳಾದರೆ ವಾದ್ಯದವರು ಆಗೇರ ಮತ್ತು ಹಳ್ಳೇರ ಎಂಬ ಪರಿಶಿಷ್ಟ ಜನಾಂಗದವರು.. 

ಆಡುಕಟ್ಟೆಯಲ್ಲಿ ಕಳಶವನ್ನಿಟ್ಟು ಪೂಜೆ ಮಾಡಿದ ನಂತರ ಕಟ್ಟಗಿದಾರರು ಅದರ ಮುಂದೆ ಗೋಲಾಕಾರವಾಗಿ ಚಲಿಸುತ್ತ ತಮ್ಮ ಕೈಯಲ್ಲಿರುವ ಬೆಳ್ಳಿ ಕವಚದ ಕಟ್ಟಿಗೆಯಿಂದ ಅದಕ್ಕೆ ಗೌರವ ಸಲ್ಲಿಸುತ್ತಾರೆ. ಇದಾದ ಮೇಲೆ ಕಟ್ಟಿಗೆಯಿಂದ ಮಾಡಿದ ವಿವಿಧ ಊರದೇವತೆಗಳ ಬಣ್ಣದ ಮುಖವಾಡಗಳನ್ನು ಒಂದೊಂದಾಗಿ ಧರಿಸಿ ಗುನಗನೊಬ್ಬ ವಾದ್ಯದೊಂದಿಗೆ ಮುಂದೆ ಹಿಂದೆ ಲಯಬದ್ಧವಾಗಿ ಚಲಿಸಿ ‘ಮೊಖಾಡ್ಸು’ತ್ತಾನೆ.. ಆತನ ಬಲಗೈಯ ಸಣ್ಣ ಬೆಳ್ಳಿಕಟ್ಟಿಗೆ ಕೂಡ ಈ ಸಮಯದಲ್ಲಿ ತಿರುಗುತ್ತಿರುತ್ತದೆ.

ಹನ್ನೆರಡು ದಿನದ ಈ ಕಾರ್ಯಕ್ರಮಗಳಲ್ಲಿ ದಿನದಿಂದ ದಿನಕ್ಕೆ ಆಡಿಸುವ ಮುಖವಾಡಗಳ ಸಂಖ್ಯೆ ಹೆಚ್ಚುತ್ತ ಹೋಗುತ್ತದೆ. ಆಯಾ ದಿನಕ್ಕೆ ಇಂತಿಷ್ಟು ಮುಖವಾಡ ಅಂತಿರುತ್ತದೆ.. ಒಂದು ಮುಖವಾಡ ಆಡಿಸುವುದಕ್ಕೂ ಇನ್ನೊಂದು ಆಡಿಸುವುದಕ್ಕೂ ನಡುವೆ ‘ಹಗ್ರಾಣ’ ( ಹಗರಣ ) ಎಂಬ ಯಾರು ಯಾರನ್ನಾದರೂ ಗೇಲಿ ಮಾಡುವ ಆಚರಣೆ ನಡೆಯುತ್ತದೆ. ಅಂದಿನ ಎಲ್ಲ ಹಗ್ರಾಣ ಮುಗಿದವು ಎಂದಾದ ಮೇಲೆ ಆ ದಿನದ ಕೊನೆಯ ಮುಖವಾಡ ಆಡಿಸುತ್ತಾರೆ. ಈ ಹಗ್ರಾಣ ಪ್ರತಿದಿನ ರಾತ್ರಿಯೂ ಅಂದರೆ ಸೇಸೆ ಹಾಕಿದ ಮರು ದಿನದಿಂದ ಬಂಡಿಹಬ್ಬದ ಮೊದಲನೆಯ ದಿನದ ತನಕವೂ ನಡೆಯುತ್ತದೆ.. ಆಡಿಸುವ ಮುಖಗಳು ದಿನದಿನಕ್ಕೂ ಹೆಚ್ಚುತ್ತ ಹೋಗುತ್ತವೆ. 

ಏನಿದು ಹಗ್ರಾಣ…? ಮುಂದಿನವಾರ ನೋಡುವ

|ಮುಂದಿನ ಸಂಚಿಕೆಯಲ್ಲಿ|

February 26, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Dr.Vishnudas Gunaga

    ಮೇಡಮ್, ಗುನಗರನ್ನು ಸರ್ಕ್ಕಾರ ಗುನಗ ಜಾತಿಗೆ ಸೇರಿಸಿ ದಶಕಗಳೇ ಆಗಿಹೋಗಿದೆ. ಪದೇ, ಪದೇ, ಗುನಗರನ್ನು ಕುಂಬಾರರೆಂದು ಬರೆಯುವದು ಸರಿಯಲ್ಲ ಎಂದು ನನ್ನ ಅನಿಸಿಕೆ. ಗುನಗತನಕ್ಕಾಗಿಯೇ ಇರುವ ಜಾತಿ, ಗುನಗಾ ಜಾತಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: