ಎಚ್ ಆರ್ ರಮೇಶ ಕಂಡ ‘ಕೇಡುಗಾಲ’ದ ಕನ್ನಡಿ

ಎಚ್ ಆರ್ ರಮೇಶ

ಹೊರಗಿನ ಆಗು ಹೋಗುಗಳು ಈ ಕವಿಯನ್ನು ದಟ್ಟವಾಗಿ ಪ್ರಭಾವಿಸಿದ್ದಾವೆ, ಮತ್ತು, ಅವುಗಳಿಂದ ತುಂಬಾ ಡಿಸ್ಟರ್ಬ್‍ ಆಗಿ ಕವಿತೆಯ ಮೂಲಕ ಕವಿ ರಮೇಶ್ ಅರೋಲಿಯವರು ತಮ್ಮ ಇಂಗಿತವನ್ನು, ಪ್ರತಿಕ್ರಿಯೆಯನ್ನು ಅಭಿವ್ಯಕ್ತಿಸಿದ್ದಾರೆ. ಭಾಷೆಯ ಆಯ್ಕೆಯಲ್ಲಿ ಕವಿ ತುಸು ಗೊಂದಲಗೊಂಡವರಂತೆ ಕಾಣುತ್ತಾರೆ. ಯಾಕೆಂದರೆ ಜನಪದ ಭಾಷೆಯನ್ನು ಬಳಸುವುದರ ಜೊತೆಗೆ ಶಿಷ್ಟ ಭಾಷೆಯನ್ನು ಮತ್ತು ರಾಯಚೂರಿನ ಸುತ್ತಮುತ್ತಲಿನ ಪ್ರಾದೇಶಿಕ ಭಾಷೆಯನ್ನು ಬಳಸುವುದರ ಮೂಲಕ ತಮ್ಮದೇ ಆದಂತಹ ಒಂದು ನಿರ್ಧಿಷ್ಟ ಶೈಲಿಯನ್ನು ಕಾಣಿಸುವುದರಲ್ಲಿ ಕವಿ ಸಫಲವಾದಂತೆ ಕಾಣುವುದಿಲ್ಲ.

ಈ ಅಂಶವನ್ನು ಪಕ್ಕಕ್ಕೆ ಇಟ್ಟು ಈ ಕವಿತೆಗಳನ್ನು ನೋಡಿದಾಗ ಕವಿಯ ಭಾವಲೋಕ, ಸಂವೇದನೆಯನ್ನು ಕಾಣಬಹುದು. ಅದು ಸಮಾಜ ಮುಖಿ. ಸಮಾಜದ ಅವಾಂತರಗಳಿಗೆ ಮತ್ತು ಅನಿಷ್ಟಗಳಿಗೆ ಕವಿತೆಯ ಮೂಲಕವೇ ಪ್ರತಿಕ್ರಿಯಿಸಬೇಕು ಮತ್ತು ಕವಿತೆ ಮಾತ್ರ ಸಮಾಜದ ಓರೆಕೋರೆಗಳ ಮೇಲೆ ಬೆಳಕನ್ನು ಚೆಲ್ಲುತ್ತದೆ ಎಂದು ನಂಬಿ ಬರೆದಂತಿದೆ.

ಸಮಾಜವನ್ನು ಟೀಕಿಸುವುದೆಂದರೆ ಸಮಾಜದ ಮೌಲ್ಯಗಳನ್ನು, ಕಟ್ಟುಪಾಡುಗಳನ್ನು, ರೀತಿ-ರಿವಾಜುಗಳನ್ನು, ಹಾಗೂ ಇವುಗಳ ಅಗತ್ಯತೆಗಾಗಿ ರೂಪುಗೊಂಡಿರುವ ರಾಜಕೀಯ, ಪ್ರಭುತ್ವವನ್ನು ವಿಮರ್ಶಿಸುವುದೇ ಆಗಿದೆ. ಇಲ್ಲೊಂದು ತಕ್ಷಣಕ್ಕೆ ವ್ಯಂಗ್ಯ ಉತ್ಪತ್ತಿಯಾಗುತ್ತದೆ, ಅದು- ಮನುಷ್ಯ ತಾನು ‘ಮನುಷ್ಯ’ನಾಗಲು ಏನೆಲ್ಲಬೇಕೋ ಅದನ್ನು ಕಟ್ಟಿಕೊಂಡು ಮತ್ತು ಅದಕ್ಕೆ ವಿರುದ್ಧವಾಗಿ ನಡೆಯುವುದು.

ಪ್ರಭುತ್ವ, ರಾಜಕೀಯ, ಸಮಾಜ ಇವುಗಳಿಲ್ಲದೆ ಮಾನವರ ಬದುಕನ್ನು ಊಹಿಸಿಕೊಳ್ಳುವುದು ಕಷ್ಟ. ಇವುಗಳನ್ನು ಹುಟ್ಟುಹಾಕಿದ ಮನುಷ್ಯರೇ ಮತ್ತೆ ಅವುಗಳನ್ನು ಕೆಡವಿ ಅವಾಂತರಗಳನ್ನು ಸೃಷ್ಟಿಮಾಡುತ್ತಾರೆ. ಇದು ಮನುಷ್ಯನ ವೈರುಧ್ಯ ಮತ್ತು ವಾಸ್ತವವೂ ಸಹ. ಕವಿತೆ ಕೇವಲ ಸಮಾಜವನ್ನು ಕುರಿತು ಚಿತ್ರಿಸುತ್ತ, ವಿಮರ್ಶಿಸುತ್ತ ಹೋದರೆ ಕಲೆಯಾಗಿ ಉಳಿಯಲಾರದು. ಕಲೆಯಲ್ಲಿ ಸಮಾಜ ಮತ್ತು ಸೃಷ್ಟಿಯ ರಹಸ್ಯ ಮತ್ತು ಮನುಷ್ಯಲೋಕದ ಮನೋ ಇಂಗಿತಗಳು ಅಂತರ್ಗತವಾಗಿದ್ದು, ಇವುಗಳ ಮೂಲಕ ಬದುಕಿನ ಪರಿಯನ್ನು, ಸತ್ಯವನ್ನು ಇಮ್ಯಾಜಿನೇಷನ್ನಿನ ಬೆನ್ನೇರಿ ಕವಿ ತೋರಿಸಬೇಕಾಗಿದೆ.

ಅರೋಲಿಯವರ ‘ಬಿಡು ಸಾಕು ಈ ಕೇಡುಗಾಲಕ್ಕಿಷ್ಟು’ ಸಂಕಲನದ ಕವಿತೆಗಳಲ್ಲಿ ಈ ಸಂಕೀರ್ಣತೆಯನ್ನು, ಸಾವಯವಬಂಧವನ್ನುಕಾಣಲಾಗದು. ಬದಲಿಗೆ, ಕಂಡಿದ್ದರಲ್ಲಿ ಒಂದು ಕಪ್ಪು ಇದೆ ಇಲ್ಲ ಬಿಳಿ ಇದೆ ಎಂಬ ಧೋರಣೆ ಇದ್ದಂತಿದೆ. ವರ್ತಮಾನ ಪತ್ರಿಕೆಗಳಲ್ಲಿ ವರದಿಗೊಂಡಿದ್ದಕ್ಕೂ ಮತ್ತು ಇಲ್ಲಿ- ಈ ಕವಿತೆಗಳಲ್ಲಿ ಅಭಿವ್ಯಕ್ತಗೊಂಡಿದ್ದಕ್ಕೂ ಏನು ವ್ಯತ್ಯಾಸ ಎಂಬ ಪ್ರಶ್ನೆ ಮೂಡುತ್ತದೆ. ಅಂತರಂಗದ ಪಿಸುಮಾತು, ‘ಒಳನೋಟ’ಗಳಿಲ್ಲದಿದ್ದರೂ, ಇವು ಧಗಧಗಿಸುವ ವರ್ತಮಾನದ ಬೆಂಕಿಯೊಳಗೆ ನುಗ್ಗಿ ಬರೆದಂತಹ ಕವಿತೆಗಳಾಗಿರುವುದರಿಂದ, ಆ ಎಲ್ಲಾ ಅಡೆತಡೆಗಳನ್ನು ಮೀರಿ ಇವನ್ನು ಗಮನಿಸಬೇಕಾಗಿದೆ. ಹಾಗಾಗಿ ಕನ್ನಡದ ಮನಸ್ಸೊಂದು ಸದ್ಯದ ಗತಿ ಸ್ಥತಿಯನ್ನು ಹೇಗೆ ಅರಿಯಲು ಪ್ರಯತ್ನಿಸಿದೆ ಎನ್ನುವುದನ್ನು ತಿಳಿಯಲು ಈ ಸಂಕಲನವನ್ನು ಓದುವ ಅನಿವಾರ್ಯತೆ ಇದೆ.

ಬಿಡು ಸಾಕು ಈ ಕೇಡುಗಾಲಕ್ಕಿಷ್ಟು ಎಂದು ಹೇಳುವುದರಲ್ಲೇ ಕೋಪ, ಟೀಕೆ, ವ್ಯಂಗ್ಯ, ವಿಮರ್ಶೆಗಳು ವ್ಯಕ್ತವಾಗುತ್ತಿವೆ. ಸಾಮಾಜಿಕ ಮತ್ತು ರಾಜಕೀಯ ವಿಷಯಗಳನ್ನು ಕುರಿತು ಬರೆಯಲ್ಪಟ್ಟಿರುವ ಕವಿತೆಗಳಲ್ಲಿ ಅಥವಾ ಕಲೆಯಲ್ಲಿ ಇದು ಸಾಮಾನ್ಯ. ಹಾಗಂತ ಇಲ್ಲಿನ ಕವಿತೆಗಳು ಕ್ಲೀಷೆಗಳಾಗಿ ಕಾಣುವುದಿಲ್ಲ. ಮೊದಲ ಪದ್ಯ ನೆರಳಂತ ಕುಂತಾರೆ ನೇರಳೆ ಬಾಸಿಂಗ ದಲ್ಲಿ ಕವಿ ಗಿಳಿರಾಮನಿಗೆ ಅಡ್ರಸ್ ಮಾಡುತ್ತ ಬದುಕಿನ ಮಜಲುಗಳನ್ನು ಕಾಣಿಸುತ್ತಾರೆ.

ಇಡೀ ಕವಿತೆಯಲ್ಲಿ ಕವಿಯ ಡೌನ್ ಟು ಅರ್ಥ್ ಸಂವೇದನೆಯನ್ನು ನಿಚ್ಚಳವಾಗಿ ಕಾಣಬಹುದಾಗಿದೆ. ಮುಂಜಾಲೆ ಎದ್ದು ಮುಗಿಲಿಗೆ ಮುಗಿದೇನು/ಮರದಾಗ ಮಲಿಗೆದ್ದ ಗುಬ್ಬಿಗೆ ನಮಿಸೇನು/ಬೇರಿಗೆ ಬೆರಗಾದೆನೋ ಗಿಳಿರಾಮ/ ಚಿಗುರಿಗೆ ಋಣಿಯಾದೆನೋ ಗಿಳಿರಾಮ ಎಂದು ಪ್ರಾರಂಭವಾಗುವ ಕವಿತೆ ಮನುಷ್ಯನ ಮತ್ತು ಸಮಾಜದ ಆತ್ಮಘಾತುಕತನವನ್ನು ತೋರಿಸುತ್ತ ಸದ್ಯದ ಕಾಲವನ್ನು ಮಾರ್ಮಿಕವಾಗಿ ಚಿತ್ರಿಸಿದ್ದಾರೆ.

ಮನುಷ್ಯ ಪ್ರಕೃತಿಯನ್ನು ಹಾಳುಮಾಡುವುದೆಂದರೆ ಅದು ತನ್ನ ಬದುಕನ್ನೇ ಹಾಳುಮಾಡಿಕೊಂಡಂತೆ ಆಗಿದೆ. ಹಾಗು ತನ್ನ ಹರಿತವಾದ ವ್ಯಂಗ್ಯದ ಮೂಲಕ ಕವಿ ರಾಜಕೀಯವನ್ನು ಮತ್ತು ನಾಗರೀಕತೆಯನ್ನು ತೀವ್ರ ಟೀಕೆಗೆ ಗುರಿಮಾಡಿಸಿದಂತಿದೆ: ಊರ ಮ್ಯಾರಿಗೆಲ್ಲ ಉಕ್ಕಿನ ಗಿಡವಾಗಿ/ಗಾಳಿಯ ಅಲೆಯೆಲ್ಲ ಕಂಪನಿ ಅಡವಾಗಿ/ಚಿಲಿಪಿಲಿ ಸದ್ದಡಗಿತೋ ಗಿಳಿರಾಮ/ಚೀರಾದೋ ರದ್ದಾಯಿತೋ ಗಿಳಿರಾಮ.

ಹೀಗೆ ಹೊರಗಿನ ಸಮಾಜವನ್ನು ಚಿತ್ರಿಸುತ್ತ ಮುಂದಿನ ಕವಿತೆಯಲ್ಲಿ ಕವಿ, ತುಸು ಭಾವುಕನಾಗಿ ವೈಯಕ್ತಿಕವಾಗಿ ಆದ ವಿಷಾದ, ನೋವು, ನಿರಾಸೆಗಳನ್ನು ಅಲ್ಲಿ ಆ ತಿರುವಿನಲ್ಲಿ ಅರವಟ್ಟಿಗೆ ಮಡಿಕೆಯಲಿ/ಸ್ವರ್ಗದ ಶವಯಾತ್ರೆಗೆ ಹೂವು ಎತ್ತಿಟ್ಟಿರುವೆ/ಎಲೆ ಋತುವಿನ ಮಗಳೆ; ಸಿಕ್ಕರೆ ಅವನಿಗೂ ಸ್ವಲ್ಪ ಕೊಡು/ಹೋಗಿ ಬಾ ಇನ್ನು ನಿನಗೀಗ ವಿದಾಯ! ಎಂದು ಹೇಳುತ್ತಾರೆ. ಇಲ್ಲಿನ ಸುಮಾರು ಕವಿತೆಗಳಲ್ಲಿ ಅಭಿವ್ಯಕ್ತಿಸಿದಂತೆ ಕವಿ ಸಂಕಲನದ ಶೀರ್ಷಿಕೆ ಕವಿತೆಯಲ್ಲೂ  ನೋವು, ವಿಷಾದ, ಕೋಪ, ಟೀಕೆ, ನಿರಾಸೆ ಮತ್ತು ಭ್ರಮನಿರಸನವನ್ನು ‘ಹೇಳಿ’ದ್ದಾರೆ.

ಯಾವತ್ತಿಗೂ ‘ಸದ್ಯ/ವರ್ತಮಾನ/ವು ಕೇಡುಗಾಲವೇ ಆಗಿಹುದೇನೋ!? ಅದು ಎಂದಿಗೂ ಸುಭೀಕ್ಷೆಯಿಂದ ಇದ್ದಿರಲಾರದು; ಹಾಗಿದ್ದಿದ್ದರೆ ಅದು ಜಡವಾಗಿದ್ದಿರಬಹುದು. ಸದ್ಯದ ಆತಂಕಗಳನ್ನು ಮೀರಿಯೇ ಬದುಕಿನ ಸಮಗ್ರತೆಯನ್ನು ಪಡೆಯಬೇಕಿದೆ. ಅದರ ಜೊತೆಗೆ ಸಂಘರ್ಷ ಮತ್ತು ವಾಗ್ವಾದಗಳನ್ನು ಇಟ್ಟುಕೊಂಡೇ ಮುಂದು ಹೋಗಬೇಕು. ಮನುಷ್ಯ ತನ್ನ ಚೈತನ್ಯವನ್ನು ಕಾಣಬೇಕಿದೆ ಮತ್ತು ಕಾಣಿಸಬೇಕಿದೆ. ಸೆಷ್ಟಿಯನ್ನು ಅರಿಯಲಾಗದಿದ್ದರೂ ಸಮಾಜವನ್ನು ವಿಮರ್ಶೆಮಾಡಿಕೊಳ್ಳುತ್ತ ಬದುಕನ್ನು ಹಸನುಮಾಡಿಕೊಳ್ಳುವ ಅನಿವಾರ್ಯತೆ ಇದೆ.

ಈ ಕವಿತೆ ತುಂಬಾ ಗಮನಾರ್ಹ. ಯಾಕೆಂದರೆ ಯುಗಾದಿಯನ್ನು ರೊಮ್ಯಾಂಟಿಕ್ ಆಗಿ ಚಿತ್ರಿಸದೆ, ಯುಗಾದಿಯ ಮೂಲಕ ಬದುಕಿನ ದಾರುಣತೆ, ಅಸಮಾನತೆ, ಬಡತನ, ಸಮಾಜದ ಏಣಿ-ಶ್ರೇಣಿಗಳನ್ನು ಮುಖಕ್ಕೆ ರಾಚುವಂತಹ ವಾಸ್ತವವಾದಿ ನೆಲೆಯಲ್ಲಿ ಕವಿ ಚಿತ್ರಿಸಿದ್ದಾರೆ. ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬಂದರೂ ಅನೇಕರ ಬಾಳಿನಲ್ಲಿ ಹೊರ ಹರುಷ ಮತ್ತು ಹುರುಪು ಮತ್ತು ಚೈತನ್ಯಗಳನ್ನು ತರದೆ ಇರುವ ನಿಷ್ಠುರ ಸತ್ಯವನ್ನು ಕವಿ ಇಲ್ಲಿ ತೋರಿಸಿದ್ದಾರೆ: ಪಾವು ಸಗಣಿಗೂ ದರ ತಂದ ಈ ಶಿಥಿಲ ಚೈತ್ರಕ್ಕೆ/ಕೊಟ್ಟಿಗೆ ದನದ ಕತೆ ನೊಣ ಕೇಳದ ಗಲ್ಲಿಯಲ್ಲಿ/ಈ ಕಿವುಡರಿಬ್ಬರ ನುಡಿಗಳಾದರೂ ಚಿಗುರಿವೆಯಲ್ಲ/ಬಿಡು ಸಾಕು ಇಷ್ಟು ಈ ಕೇಡುಗಾಲಕ್ಕೆ!

ಸರದಾರನ ಎದೆಯಿರಿದವನ/ಸಮಾಧಿಯ ಮೇಲೆ ಹಲ್ಲು ಹುಟ್ಟಿ ನಕ್ಕಿತು! ಎನ್ನುವ ಪುಟ್ಟ ಕವಿತೆಯಲ್ಲಿ ಒಂದು ಮಾರ್ಮಿಕ ಸತ್ಯವನ್ನು ಹೇಳುವುದರ ಮೂಲಕ ಕವಿ ಓದುಗರಿಗೆ ಇಷ್ಟವಾಗುತ್ತಾರೆ. ಈ ಪುಟ್ಟ ಕವಿತೆ ಏಕಕಾಲದಲ್ಲಿ ರಾಜಕೀಯ ಮತ್ತು ಧರ್ಮಗಳನ್ನು ತೀಕ್ಷ್ಣವಾಗಿ ಟೀಕಿಸುತ್ತದೆ. ಕ

ನ್ನಡ ಕಾವ್ಯಪರಂಪರೆಗೆ ತಮ್ಮ ವಿಶಿಷ್ಟ ಸಂವೇದನೆಗಳ ಮೂಲಕ ಹೊಸ ಚೈತನ್ಯವನ್ನು ತಂದುಕೊಟ್ಟಂತಹ ಜಂಬಣ್ಣ ಅಮರಚಿಂತ ಅವರ ಕುರಿತು ಇರುವ ಕವಿತೆ ಕವಿಯ ವ್ಯಕ್ತಿತ್ವವನ್ನು ರೂಪುಗೊಳಿಸಿದ ಸಾಮಾಜಿಕ ಸನ್ನಿವೇಶ, ಪರಿಸ್ಥಿತಿಯನ್ನು ಎಲ್ಲಿಯೂ ಸಿಂಪಥೆಟಿಕ್ ಆಗಿ ಸದೆ ತುಂಬ ಧ್ವನಿಪೂರ್ಣವಾಗಿ ಚಿತ್ರಿಸುತ್ತಾರೆ. ಅದರ ಕೆಲವು ಸಾಲುಗಳು: ಮಕ್ತಾಲು ಪೇಟ್ಯಾಗ ಮುಕ್ಕಾಲು ಜೋಪಡಿ/ಸಾಲಿಗುಡಿ ಅದರಾಗ ಕಂದೀಲು ನಿಂಜೋಡಿ/ಅಚ್ಚರ ಎದೆಗಿಳಿದಾವೋ ಜಂಬಣ್ಣ/ಎಚ್ಚರ ಪದವಾದವೋ ಜಂಬಣ್ಣ. ಈ ಸಾಲುಗಳು ಜಂಬಣ್ಣ ಅವರ ಬಂಡಾಯದ ಮನೋದರ್ಮವನ್ನು ತುಂಬ ಸೂಕ್ಷ್ಮವಾಗಿ ಕಟ್ಟಿಕೊಡಲಾಗಿದೆ.

ಬಂಡಾಯ ಮತ್ತು ದಲಿತ ಚಳವಳಿಗಳು/ಸಾಹಿತ್ಯ ಕನ್ನಡ ಸಾಂಸ್ಕೃತಿಕ ಲೋಕದ ಸಾಕ್ಷಿಪ್ರಜ್ಞೆ ಹಾಗೂ ಸಾಮಾಜಿಕ ಅಸಮಾನತೆಗಳ ವಿರುದ್ಧ ಹೋರಾಡಲು ಚೈತನ್ಯ ಶಕ್ತಿಯಾಗಿಯೂ ಆಗಿವೆ. ಎಚ್ಚರ ಪದವಾದವೋ ಎಂದು ಹೇಳುವುದರ ಮೂಲಕ ಆ ಚಳವಳಿಯ ತಾತ್ವಿಕತೆ ಮತ್ತು ಬದ್ಧತೆಯನ್ನು ತೋರಿಸುತ್ತದೆ.  ಅಮರ ಚಿಂತರಂತಹ ಕವಿಗಳು ಚಳವಳಿಯಿಂದ ರೂಪುಗೊಂಡಿದ್ದಷ್ಟೇ ಅಲ್ಲ ಚಳವಳಿ ರೂಪುಗೊಳ್ಳಲು ಕಾರಣರಾದರು. ಅವರ ವ್ಯಕ್ತಿತ್ವವನ್ನು ತೋರಿಸುವ ಮತ್ತೊಂದಿಷ್ಟು ಸಾಲುಗಳು: ಪಟ್ಟಕ್ಕೆ ಪದವಿಗೆ ಕೈಯೆಂದು ಚಾಚದೆ/ಬೆಟ್ಟದ ಬಗಲಾಗ ಗುಟ್ಟಾಗಿ ಬದುಕಿದೆ/ ಬಂಡೆಗೆ ಕದವಾದೆಯೋ ಜಂಬಣ್ಣ/ಚೆಂಡು ಹೂವು ಬದುವಾದೆಯೋ ಜಂಬಣ್ಣ.

ಪ್ರೀತಿಸದೇ ಇರುವುದನ್ನು ಕಲಿಸಲಾಗಲಿಲ್ಲ ಎಂದು ಹೇಳುವ ಕವಿಯ ಆಂತರ್ಯದಲ್ಲಿ ಮನುಷ್ಯರ ಬದುಕನ್ನು ಹದಗೆಡಿಸುತ್ತಿರುವ ಎಲ್ಲ ರೀತಿಯ ದುಷ್ಟಶಕ್ತಿಗಳ ವಿರುದ್ಧ ಧಿಕ್ಕಾರವೂ, ಸಿಟ್ಟು ಕೋಪಗಳೂ ವ್ಯಕ್ತವಾಗಿರುವುದನ್ನು ಕಾಣುತ್ತೇವೆ.

ಇತ್ತೀಚೆಗೆ ಕವಿತೆಯ ಹೆಸರಿನಲ್ಲಿ ಏನೇನನ್ನೆಲ್ಲ ಬರೆಯುತ್ತಿರುವವರ ನಡುವೆ ರಮೇಶ್ ಅರೋಲಿಯವರು ತಮ್ಮ ಮೆಟಫರ್ , ಇಮೇಜ್ ಮತ್ತು ಸಮಾಜದಲ್ಲಿ ಏನೋ ಆಗ್ತಿದೆ, ಅದು ಮನುಷ್ಯಕುಲವನ್ನು ಹಾಳುಮಾಡುತ್ತಿದೆ, ಹಾಗಾಗಿ ನಾನು ಸುಮ್ಮನಿರಬಾರದು, ನನ್ನ ಕವಿತೆ ಅದನ್ನು ಜಗತ್ತಿಗೆ ತೋರಿಸಬೇಕು, ಅದು ನನ್ನ ಅನಿವಾರ್ಯ ತುರ್ತು ಮತ್ತು ದರ್ದು ಎನ್ನುವ ಸ್ಟಾಂಗ್ ಆದಂತಹ ಕನ್ವಿಕ್ಷನ್ ನಿಂದಾಗಿ ಭಿನ್ನವಾಗಿ ನಿಲ್ಲುತ್ತಾರೆ.

ಇವರ ಕವಿತೆಗಳಲ್ಲಿ ಅಭಿವ್ಯಕ್ತಗೊಂಡಿರುವ ಕೋಪ, ಟೀಕೆ, ವ್ಯಂಗ್ಯಗಳಲ್ಲಿ ಸಾತ್ವಿಕತೆ ಇದೆ. ಕವಿ ನಾನು ಸುಮ್ಮನಿರಲಾರೆ ಇಷ್ಟೊಂದೆಲ್ಲ ನನ್ನ ಕಣ್ಣಮುಂದೆ ನಡೆಯುತ್ತಿರುವಾಗ, ನನ್ನ ಕವಿತೆಯ ಅಂಕುಶದಿಂದ ಅದನ್ನು ನನ್ನಕೈಯಿಂದ ಎಷ್ಟು ಸಾಧ್ಯವಾಗುತ್ತೋ ಅಷ್ಟು ತಿವಿಯಲೇ ಬೇಕು, ಇಲ್ಲವೆಂದರೆ ಸಮಾಜವಷ್ಟೇ ಅಲ್ಲ ನಿಸರ್ಗವೂ ಅವಸಾನವಾದೀತು ಎನ್ನುವ ಸೀರಿಯಸ್ ಆದಂತಹ ಮನೋಭಿಲಾಷೆ ಈ ಕವಿತೆಗಳನ್ನು ಗಂಭೀರವಾಗಿ ಓದುವಂತೆ ಮಾಡುತ್ತದೆ.

ತಳ ಸಮುದಾಯ ಅನುಭವಿಸುವ ಸಾಮಾಜಿಕ ಅಸಮಾನತೆ, ಪ್ರಭುತ್ವ ನಾಜೂಕಿನಲಿ ಎಸಗುವ ಕ್ರೌರ್ಯ, ಹಿಂಸೆ ಮತ್ತು ಶಹರದ ಬಡವರ ದಾರುಣ ಬದುಕು ಹಾಗೂ ಮನುಷ್ಯ ಅನುಭವಿಸುವ ಮತ್ತು ಅವನಿಗೆ/ಳಿಗೆ ಆಗುವ ನೋವು, ಹತಾಶೆ, ಸಂಕಟಗಳನ್ನು ತಮ್ಮ ಕವಿತೆಯಲ್ಲಿ ಧ್ವನಿಸಲು ಪ್ರಾಮಾಣಿಕವಾಗಿ ಪ್ರಯತ್ನಪಟ್ಟಿರುವುದನ್ನು ಪ್ರತಿ ಕವಿತೆಯಲ್ಲೂ ಕಾಣಬಹುದು.

ರಾಚನಿಕವಾಗಿ ಒಂದು ಮಾತನ್ನು ಹೇಳುವುದಾದರೆ ಇಲ್ಲಿಯ ಕವಿತೆಗಳಲ್ಲಿ ಗೇಯತೆ ಹಾಸುಹೊಕ್ಕಾಗಿರುವುದು. ಆದರೆ ಈ ಗೇಯತೆ ಕವಿಯನ್ನು ಚರ್ವಿತ ಚರ್ವಣವಾಗಿ ಮತ್ತು ಕ್ಲೀಷೆಯಾಗಿ ಹೇಳುವಂತೆ ಮಾಡದೆ, ಕವಿಗೆ ಒಂದು ಐಡಿಂಟಿಟಿಯನ್ನು ತಂದು ಕೊಟ್ಟು, ಭಾಷೆ ಮತ್ತು ಅಭಿವ್ಯಕ್ತಿಯಲ್ಲಿನ ಅನೂಹ್ಯದಾರಿಗಳನ್ನು ತೋರಿಸಲಿ ಎಂದು ವೈಯಕ್ತಿಕವಾಗಿ ಭಾವಿಸುವೆ. ಮತ್ತೂ, ವಸ್ತು-ವಿಷಯಗಳನ್ನಾಧರಿಸಿಕೊಂಡು ಬರೆಯುವುದಕ್ಕಿಂತಲೂ ಮಿಗಿಲಾಗಿ ಕವಿತೆ ಸಹಜವಾಗಿ ಒಡಮೂಡಿ, ತಾನೇ ದಾರಿಯನ್ನು ಸೃಷ್ಟಿಮಾಡಿಕೊಂಡು, ಬದುಕಿನ ಆಂತರ್ಯ ಮತ್ತು ಒಳ ಅಲೆಗಳನ್ನು ತಾಗಲಿ.

ವ್ಯಂಗ್ಯದ ಜೊತೆ ಭಾಷೆಗೆ ಸಾಂದ್ರತೆ ಮತ್ತು ಅಭಿವ್ಯಕ್ತಿಗೆ ಪ್ರತಿಮಾ ಶಕ್ತಿ ಸಿಕ್ಕಿದ್ದಿದ್ದರೆ ಈ ಕವಿತೆಗಳ ಭಾರ ಇನ್ನಷ್ಟು ಹೆಚ್ಚಿನ ಪರಿಣಾಮಕಾರಿಯಾಗಿರುತ್ತಿದ್ದವು. ಈ ನಿರಾಸೆ ಅವರ ಮುಂಬರುವ ರಚನೆಗಳು ಪುನರಾವರ್ತನೆಗೊಳಿಸದಿರಲಿ. ಕೆಲವು ಕಾಡುವ ಸಾಲುಗಳು: ಊರಡವಿಸುತ್ತಿ ನಾವುದನ ಕಾಯ್ತೀವಿ/ ನೀವು ಗೋಪಾಲನ ವೇಷ ಹಾಕಿ ಬೆಣ್ಣೆ ಮೇಯ್ತೀರಿ/ಕೂಲಿನಾಲಿ ಇಲ್ದೆ ನಾವುಗುಳೆ ತಿರುಗಿವಿ/ ನೀವು ಬೆಳೆದ ಬೊಜ್ಜು ಕರಗಲಂತ ಗುಡಿ ತಿರುಗಿರಿ. ನಿಂತ ನೆಲ ನಿನ್ನದು ಕುಂತ ಹೊಲ ನಿನ್ನದು/ ಸ್ವಂತೆಂಬ ಸಂತೆಯ ಸರಕೆಲ್ಲ ನಿನಧಿರಲು/ ಮಾಗಿದೆಲೆಯನು ಬೀಳ್ಕೊಡಲು/ ಚಳಿಗಾಲದ ನಿನ್ನ ಗೌನು/ ಸಣ್ಣಗೆ ತೂಗಿ ತುಯ್ದಾಡಿದ ಪರಿಗೆ/ ಗೋಧಿ ತೆನೆ ಗರಿಕೆಯಾದದ್ದು/ಕಾಲಗ ಮಾರನು ಗುರುತಿಸಲೇಯಿಲ್ಲ.

ಹೊರಗೆ ಕಂಡದ್ದನ್ನು ಹೇಳುವುದಕ್ಕಿಂತ ಕವಿತೆ ಒಳಗಿಂದ ಒಡಮೂಡಿದರೆ ಹೊರಗಿನದು ಸಹಜವಾಗಿಯೇ ಮಿಳಿತಗೊಂಡು ಅದಕ್ಕೆ ಕಾಲಾದೇಶವನ್ನು ಮೀರಿ ಬೆಳಗುವ ಚೈತನ್ಯ ಸಿಗುತ್ತದೆ. ಆದರೆ ಹೀಗೆ ಆಗಲು ಸದ್ಯವನ್ನು ಮೀರ ಬೇಕಿದೆ, ಸದ್ಯವನ್ನು ಮೀರುವುದು ಅಷ್ಟು ಸುಲಭದ ಮಾತಲ್ಲ; ಮೀರದೇ ಇರುವಷ್ಟು ಕಷ್ಟವೂ ಅಲ್ಲ. ಸೃಷ್ಟಿ ಶಕ್ತಿಯ ಕವಿತೆಗೆ ಒಳದಾರಿಗಳು ಗೊತ್ತಿದೆ. ಯಾಕೆಂದರೆ ಕಾಲದ ಚರಿತ್ರೆಯನ್ನು ಕಾವ್ಯಕ್ಕಿಂತ ಮತ್ತಿನ್ಯಾವುದು  ದಾಖಲಿಸಬಲ್ಲದು? ಸದ್ಯಕ್ಕಂತೂ ಈ ಕವಿತೆಗಳು ಸದ್ಯದಲ್ಲಿದ್ದಾವೆ.

‍ಲೇಖಕರು Avadhi

May 25, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: