ಎಂ ಎಸ್ ಆಶಾದೇವಿ ಓದಿದ ‘ಗಾಳಿಗೆ ತೊಟ್ಟಿಲ ಕಟ್ಟಿ’

ಹೊಣೆಗಾರಿಕೆ ಹೊರುವ ಧೈರ್ಯದ ಕಾವ್ಯ‌

ಎಂ ಎಸ್ ಆಶಾದೇವಿ

ದೇವು ಮಾಕೊಂಡ ಅವರ ‘ಗಾಳಿಗೆ ತೊಟ್ಟಿಲ ಕಟ್ಟಿ’ ಕವನ ಸಂಕಲನವು ಇಡಿಯಾಗಿ ಸಾಮಾಜಿಕ ನೆಲೆಯದ್ದು. ಕಾವ್ಯವೆನ್ನುವುದು ಲೋಕಧ್ವನಿಯಾಗಬೇಕು ಎನ್ನುವ ಹಂಬಲ ಮತ್ತು ನಂಬಿಕೆಗಳೇ ಇಲ್ಲಿನ ಕವಿತೆಗಳನ್ನು‌ ಸೃಷ್ಟಿಸಿವೆ ಎಂದರೂ ನಡೆಯುತ್ತದೆ. ಕಾವ್ಯವು ವರ್ತಮಾನದ ವಾಸ್ತವಗಳಿಗೆ ಹಿಡಿಯುವ ಕನ್ನಡಿಯಾಗಬೇಕಾಗಿರುವುದೇ ಕಾವ್ಯದ ಆದ್ಯ ಕರ್ತವ್ಯ ಎನ್ನುವ ದಲಿತಕಾವ್ಯದ ಮುಂದುವರಿಕೆಯಂತಎ ಈ ಕವಿತೆಗಳಿವೆ.

ಯಾವೆಲ್ಲ ಹೋರಾಟ ಮತ್ತು ನಿರಂತರ ಪ್ರಯತ್ನಗಳ ನಡುವೆಯೂ ಭಾರತೀಯ ಸಾಮಾಜಿಕ ಸಂರಚನೆಯಲ್ಲಾಗಲೀ ಸಾಂಸ್ಕೃತಿಕ ವಿನ್ಯಾಸದಲ್ಲಾಗಲೀ ನಿಶ್ಚಿತವಾದ ಬದಲಾವಣೆಗಳು ಆಗದೇ ಇರುವುದಕ್ಕೆ ಕಾರಣಗಳನ್ನು ಇಲ್ಲಿನ ಕವಿತೆಗಳು ಹುಡುಕುತ್ತಿವೆ. ಪ್ರಭುತ್ವ ಮತ್ತು ಅಧಿಕಾರಶಾಹಿಗಳ ಮೇಲೆ ಈ ಆರೋಪವನ್ನು ಸಾಧ್ಯವೆ? ಸಾಧುವೆ? ಕೇವಲ ರಾಜಕೀಯ ಇಚ್ಚಾಶಕ್ತಿಯಿಂದ ಸಮುದಾಯದ ಕ್ರಮ ವಿಪರ್ಯಯ ಮಾಡುವುದು ಸಾಧ್ಯವೆ ಎನ್ನುವ ಗಂಭೀರವಾದ ಪ್ರಶ್ನೆಯೂ ಇಲ್ಲಿನ ಕವಿತೆಗಳ ಹಿಂದೆ ಕೆಲಸ ಮಾಡಿದೆ.

ಕಾವ್ಯದಲ್ಲಿ ಸಾಮಾಜಿಕತೆಯ ಸ್ಥಾನವನ್ನು ಎಂದೂ ಪ್ರಶ್ನಿಸಲಾಗದು. ಸಾಮಾಜಿಕ ಸೂಕ್ಷ್ಮತೆ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಹೊರದ ಬರೆಹಗರರನ್ನು ಸಮಕಾಲೀನ ಸಂದರ್ಭದಲ್ಲಿ ಗಂಭೀರವಾಗಿ ಪರಿಗಣಿಸಲಾಗುವುದೂ ಇಲ್ಲ. ಹೀಗೆನ್ನುತ್ತಿರುವಾಗ ಹಲವು ಪ್ರಶ್ನೆಗಳು ನಮಗೆ ಎದುರಾಗುತ್ತವೆ. ಸಾಮಾಜಿಕತೆಯಾಗಲಿ, ಸಾರ್ವಜನಿಕ ಸಂಗತಿಗಳೇ ಆಗಲಿ, ಕಾಡುವ ಜ್ವಲಮ್ತ ಸವಾಲುಗಳೇ ಆಗಿರಲಿ, ಯಾವುದನ್ನೇ ವಸ್ತುವಾಗಿ ಹೊಂದಿದರೂ ಅದನ್ನು ಕಾವ್ಯವಾಗಿಸುವ ಜವಾಬ್ದಾರಿಯನ್ನೂ ಕವಿಯಾದವನು/ಳು ಹೊರಲೇಬೇಕು. ಇದೇ ಕವಿಗಳ ನಿಜವಾದ ಸವಾಲು. ಸಾರ್ವಜನಿಕ ಕವಿಯಾಗುವುದು, ಆ ಕಾರಣಕ್ಕೆ ಜನಪ್ರಿಯ ಕವಿಯೂ ಆಗುವುದು ಅಷ್ಟರ ಮಟ್ಟಿಗೆ ಸುಅಭವೂ ಹೌದು. ಸಮಕಾಲೀನ ಸಂಗತಿಗಳನ್ನು ಉದ್ದೇಶಿಸಿ ಬರೆದು ತತ್ಕಾಲಕ್ಕೆ ಜನರನ್ನು ತಲುಪುವುದು ಕಷ್ಟವೇನಲ್ಲ. ಆದರೆ ಅದನ್ನುಎಲ್ಲ ಕಾಲಕ್ಕೂ ಉಳಿಯುವ ಕಾವ್ಕಾವ್ಯವಾಗಿಸುವುದು ಅಪ್ಪಟ ಕಾವ್ಯದ ಸವಾಲು.

ದೇವು ಮಾಕೊಂಡ ಅವರ ಈ ಸಂಕಲನವನ್ನು ಈ ಭಿತ್ತಿಯಲ್ಲಿಟ್ಟೇ ಚರ್ಚಿಸುವುದು ಅನಿವಾರ್ಯ. ದೇವು ಮಾಕೊಂಡ ಅವರು ಭಾರತೀಯ ಸಮಾಜವನ್ನು ಸ್ಪಷ್ಟವಾದ ವಾದಿ ಪ್ರತಿವಾದಿಗಳ ನೆಲೆಯಲ್ಲಿಯೇ ಗ್ರಹಿಸುತ್ತಿದ್ದಾರೆ. ಶೋಷಕ ಮತ್ತು ಶೋಷಿತ ಎನ್ನುವ ವರ್ಗೀಕರಣದಲ್ಲಿ ನೋಡಿದರೂ ತಪ್ಪಾಗಲಾರದು ಎನ್ನುವಷ್ಟು ಪರಸ್ಪರ ವಿರುದ್ಧವಾದ ಧ್ರುವಗಳಲ್ಲಿ ಇವರು ನೋಡುವುದರಿಂದ ಕಾವ್ಯದ ಸ್ವರೂಪವು ಸಹಜವಾಗಿಯೇ ಸಂಘರ್ಷಪೂರ್ಣವೂ, ವಕಾಲತ್ತಿನ ಧೋರಣೆಯದ್ದೂ, ವಿಷಾದ ಮತ್ತು ವ್ಯಗ್ರತೆಗಳ ಸಂಗಮವೂ ಆಗಿದೆ.

ಈ ಸಂಕಲನ ನಮ್ಮಲ್ಲಿ ಕುತೂಹಲ ಹುಟ್ಟಿಸುವುದು, ನಾನು ಆರಂಭದಲ್ಲಿ ಹೇಳಿದಂತೆ ಸಾಮಾಜಿಕತೆ ಮತ್ತು ಕಲಾತ್ಮಕತೆಯನ್ನು ಬೆಸೆಯುಬ ಹವಣಿನಲ್ಲಿವೆ ಎನ್ನುವುದರಲ್ಲಿ.
‘ದೊರೆಗೊಂದು ಪತ್ರ’ ಕವಿತೆಯಿಂದಲೇ ಚರ್ಚೆಯನ್ನು ಆರಂಭಿಸಬಹುದು.

ಪ್ರಿಯ ದೊರೆಯೆ,
ಈಗ ನೀನು ಚೆನ್ನಾಗಿದ್ದೀಯ
ಕಟ್ಟುಮಸ್ತು
ಖಾದಿವರ್ದು ದಗಾಕೋರರ
ಕುಶಲೋಪರಿ ಹಂಚಿಕೊಂಡು

ಎಂದು ಆರಂಭದಲ್ಲಿಯೇ ತನ್ನ ಇರಾದೆಯನ್ನು ಸ್ಪಷ್ಟಪಡಿಸುತ್ತದೆ.

ಒಡೆದ ದುರ್ಲಭ ನೆಲದಲ್ಲಿ
ಕಾಗದದ ಮೇಲೆ ಗೀಚಿದ
ಪ್ರಾರ್ಥನೆ ದೊಡ್ಡದಲ್ಲ
ಮೆಗಾಸಿಟಿ
ಟೆಕ್ನಾಲಜಿ
ವಿಷ್ಣು ಪರಾಶರ
ರಾಜತ್ವ
ಪೌರೋಹಿತ್ಯ
ಕಾಗದದ ಮೇಲಿನ ಕರ್ತೃ ಶಾಸನಗಳು

ಈ ಮಾತುಗಳು ಸಮಕಾಲೀನ ಭಾರತದ ಸವಾಲುಗಳನ್ನು, ಅವುಗಳ ಸಂಕೀರ್ಣತೆಯನ್ನು ಕವಿತೆಯನ್ನು ಆರಂಭಿಸಿದ ಅದೇ ವ್ಯಂಗ್ಯದ ಧರ್ತಿಯಲ್ಲಿಯೇ ಮುಂದುವರೆಸುತ್ತದೆ, ಬಲು ಸಮರ್ಥವಾಗಿ. ಮೂಲಭೂತವಾದ ಮತ್ತು ಆಧುನಿಕ ತಂತ್ರಜ್ಞಾನಗಳು ಭಾರತವನ್ನು ಎರಡೂ ಕಡೆಗಳಿಂದ ಕಾಡುತ್ತಿರುವ ವಾಸ್ತವವನ್ನು ಕವಿ ಇಲ್ಲಿ ಗುರುತಿಸುತ್ತಿದ್ದಾರೆ. ಮೂಲಭೂತವಾದವು ಭಾರತದ ಆತ್ಮವನ್ನೇ ನಾಶ ಮಾಡುತ್ತಿದ್ದರೆ, ತಂತ್ರಜ್ಞಾನವು ಹಿಂದೆಂದಿಗಿಂತ ಭೀಕರವಾಗಿ ಸಮುದಾಯವನ್ನು ಆರ್ಥಿಕ ಶ್ರೇಣೀಕರಣಕ್ಕೆ ಒಳಗು ಮಾಡಿ ಅವರಲ್ಲಿ ವಿಘಟನೆಯನ್ನು ತರುತ್ತಿದೆ. ಈಗಾಗಲೇ ಒಡೆದಿರುವ ಭಾರತವನ್ನು ನುಚ್ಚು ನೂರಾಗಿಸುವಲ್ಲಿ ಈ ಎರಡರ ಪಾತ್ರ ನಿರ್ಣಾಯಕವಾದುದು.

ಇವುಗಳನ್ನು ನಿಯಮ್ತ್ರಿಸಿ, ಭಾರತವನ್ನು ಉಳಿಸಬಹುದಾದ ದೊರೆಯ ವಿವೇಕವೇ ನಾಶವಾಗಿದೆ. ಪ್ರಭುತ್ವವೇ ಇವುಗಳ ಜೊತೆ ಕೈಜೋಡಿಸಿಬಿಟ್ಟರೆ ದೇಶಕ್ಕೆ ಭವಿಷ್ಯವಿರಲು ಸಾಧ್ಯವೆ? ಹತಾಶೆಯ, ಅಸಹಾಯಕತೆಯ ಅಳಲನ್ನು ಬಿಟ್ಟರೆ, ಎಲ್ಲೋ ದೂರದಲ್ಲಿ ಬೆಳಗಬಹುದಾದ ದೂರದ ಸಾಧ್ಯತೆಯನ್ನು ಸ್ವಗತದಲ್ಲಿಯೋ ಆಶಾವಾದದಲ್ಲಿಯೋ ಕನವರಿಸುವುದನ್ನು ಬಿಟ್ಟರೆ ಬೇರೇನುಂಟು ಕವಿಗೆ?

ಪ್ರಿಯ ದೊರೆಯೆ
ಈ ಪತ್ರವನ್ನೊಮ್ಮೆ ಓದಿ ಬಿಡು
ಉತ್ತರ ಬರೆಯಬೇಕೇಂದೇನೂ ಇಲ್ಲ
ಮನಸು ಬದಲಿಸಿದರೂ ಸಾಕು

ಈ ಕವಿತೆಯ ಮುಂದುವರಿಕೆಯಂತೆಯೇ ಕಾಣಿಸುವುದು ‘ಚರಿತ್ರೆಯ ಚಿರನಿದ್ರೆ’ ಕವಿತೆ.

ರಾತ್ರಿ ಹೆದರುತ್ತದೆ ಹೊರಬರಲು
ಹಗಲ ಬಯಲ ನರ್ತನಕ್ಕೆ
ಅನುಗಮನ ನಿಗಮದರಿವು
ಏಕಮುಖಗೊಂಡಿದೆ ಗೊಂದಲ ಜಗದಿ

ಇದಕ್ಕಿಂತ ದಾರುಣವಾದ ಸತ್ಯವೆಂದರೆ,
ದಿನದಿನ ನಂಬಿಕೆಗಳ ಬೋಣಿಗೆ ಮಾಡುವಾಗ
ಬೋಧಿಗೆ ಶಾಸನ
ಮೌನ ಮಾತಾಗಿದೆ
ಮಹಾಸತಿ ಕಲ್ಲುಗಳು ಮನಸು ತೇವ ಮಾಡಿ ನಕ್ಕು
ಮತ್ತೆ ಮತ್ತೆ ಶರಣಾಗುತ್ತಿವೆ

ಸದಾ ಅಳಲುವುದೇ ದಮನಿತರ ಪಾಡೆ ಹಾಗಿದ್ದರೆ ಎನ್ನುವ ಉತ್ತರವಿಲ್ಲದ ಪ್ರಶ್ನೆ ಈ ಕವಿತೆ. ಚರಿತ್ರೆಯ ಚಿರನಿದ್ರೆಯು ವರ್ತಮಾನದ ಮತ್ತು ಭವಿಷ್ಯದ ಚಿರನಿದ್ರೆಯೂ ಹೌದಲ್ಲವೆ ಎನ್ನುವ ಸತ್ಯದ ಸಾಕ್ಷಾತ್ಕಾರವಾದಂತೆ ಕವಿ ಬಿಡುವ ನಿಟ್ಟುಸಿರಿನ ಝಳ ಓದುಗರಿಗೂ ತಾಕುತ್ತದೆ.

ಮೌಲ್ಯವ್ಯವಸ್ಥೆಯಲ್ಲಿರುವ ಮೂಲಭೂತ ದೋಷವನ್ನು, ಅನ್ಯಾಯವನ್ನು ಶತಮಾನಗಳ ಹೋರಾಟದ ನಂತರವೂ ನಿರ್ಮೂಲನ ಮಾಡಲಾಗುವುದೆಂದರೆ , ಮುಂದೇನು ಎನ್ನುವ ಪ್ರಶ್ನೆ ನಮ್ಮನ್ನು ಕಂಗಾಲುಗೊಳಿಸುತ್ತದೆ. ಫ್ಯೂಡಲ್ ವ್ಯವಸ್ಥೆ, ಜಾತಿ, ವರ್ಗಗಳೆನ್ನುವ , ಗಂಡಾಳಿಕೆಯೆನ್ನುವ ಉಡದ ಹಿದಿತವನ್ನು ತುಸು ಸಡಿಲಿಸಿದಂತೆ ಮಾಡಿ ಮರು ಗಳಿಗೆಯಲ್ಲೇ ಹಿಡಿತವನ್ನು ಇನ್ನೂ ಬಿಗಿ ಮಾಡುತ್ತಾ ಹೋಗುತ್ತಲೇ ಇದೆ.

ಕೊಲ್ಲುವ ನೂರು ದಾರಿಗಳನ್ನು ಅದು ಹುಡುಕುವುದರಲ್ಲಿ ಎಂದೂ ಸೋತಿಲ್ಲ. ಅಷ್ಟೇಕೆ, ಎಷ್ಟೋ ಬಾರಿ ಅದು ಕೊಲೆ ಎನ್ನುವುದೇ. ಶೋಷಣೆ ಎನ್ನುವುದೇ ನಮಗೆ ತಿಳಿಯುವುದಿಲ್ಲ. ಹೊದಿಸುತ್ತಿರುವ ಶಾಲೇ ನೇಣಾಗಿ ಬಿಡುವ ವಿಪರ್ಯಾಸ ಇದು. ಕವಿಯಾಗಿ ಮಾಕೊಂಡರನ್ನು ಕಾಡುತ್ತಿರುವ ಸಂಗತಿ ಇದು. ನಿದ್ದೆ ಎಚ್ಚರಗಳಲ್ಲಿ ತಮ್ಮನ್ನು ಕಾಡುತ್ತಿರುವ ಇದರಿಂದ ಹೊರಗೆ ಬರುವ ದಾರಿಯೇ ಗೊತ್ತಿಲ್ಲದಷ್ಟು ದುಃಹ ಮತ್ತು ವಿಷಾದ ಇಲ್ಲಿನ ಕವಿತೆಗಳಲ್ಲಿ ಮಡುಗಟ್ಟಿದೆ. ಆದ್ದರಿಂದಲೇ ಇವು ವಿಷಾದ ಯೋಗದ ಕವಿತೆಗಳ ಹಾಗೆ ನನಗೆ ಕಾಣಿಸುತ್ತದೆ.

ಕೊನೆಯಲ್ಲಿ ಹೇಳಲೇ ಬೇಕಾದ ಮಾತುಗಳು ಕೆಲವಿವೆ. ದೇವು ಮಾಕೊಂಡರಲ್ಲಿ ನಿಜಕ್ಕೂ ಕವಿ ಪ್ರತಿಭೆ ಇದ್ದೇ ಇದೆ. ಅದನ್ನು ಇನ್ನಷ್ಟು, ಮತ್ತಷ್ಟು ಸಾಣೆ ಹಿಡಿದರೆ ಅದು ಇನ್ನೂ ಉಜ್ವಲವಾಗಿ ಬೆಳಗುತ್ತದೆ. ಕವಿಗೆ ಬೇಕಾದ ಎಲ್ಲ ತಯಾರಿಗಳೂ ಇವರಲ್ಲಿ ಇವೆ. ಓದು, ಸೂಕ್ಷ್ಮತೆ, ಪ್ರಾಮಾಣಿಕತೆ, ಮುರಿದು ಕಟ್ಟುವ ಭಾಷೆ, ಹೀಗೆ ಎಲ್ಲವೂ ಇವರಲ್ಲಿ ಇದೆ. ಆದ್ದರಿಂದ ಕನ್ನಡ ಕಾವ್ಯದಲ್ಲಿ ಇವರಿಗೆ ಅತ್ಯುತ್ತಮ ಭವಿಷ್ಯ ಇದೆ ಎನುವುದು ನನ್ನ ಭವಿಷ್ಯವಾಣಿ! ದೇವು ಮಾಕೊಂಡರಿಗೆ ಎಲ್ಲ ಶುಭವನ್ನೂ ನಾನು ಹಾರೈಸುತ್ತೇನೆ. ಕನ್ನಡ ಲೋಕ ಇವರ ಕಾವ್ಯವನ್ನು ಪ್ರೀತಿಯಿಂದ ಸ್ವಾಗತಿಸಲಿ.

‍ಲೇಖಕರು Admin

August 7, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: