ನೂತನ ದೋಶೆಟ್ಟಿ ಕಂಡಂತೆ ‘ಕ್ಲಬ್ ಹೌಸ್’

‘ಕ್ಲಬ್ ಹೌಸ್’ ಮೂಲಕ ಶ್ರವ್ಯ ಮಾಧ್ಯಮಕ್ಕೆ ಜಗತ್ತು

ನೂತನ ದೋಶೆಟ್ಟಿ

ಮನುಷ್ಯ ಜೀವಿಯ ಬೆಳವಣಿಗೆ ಭೂಮಿಯ ಮೇಲೆ ಆದಾಗಿನಿಂದಲೂ ಅವನ ಪಂಚೇಂದ್ರಿಯಗಳಲ್ಲಿ  ಕಣ್ಣು ಹಾಗೂ ಕಿವಿಗೆ ಮಹತ್ವದ ಸ್ಥಾನವಿದೆ. ತನ್ನ ಸುತ್ತಲ ಪರಿಸರವನ್ನು ನೋಡುತ್ತ, ಅಲ್ಲಿನ ಶಬ್ದಗಳನ್ನು ಕೇಳುತ್ತ, ಅವುಗಳ ಅನುಕರಣೆ ಮಾಡುತ್ತ ಅವನು ಎಲ್ಲವನ್ನೂ ಕಲಿತ. ಹಾಗೆ ಕಲಿತದ್ದರಲ್ಲಿ ಮುಖ್ಯವಾದದ್ದು ಮಾತು. ನೋಡಿ ಗ್ರಹಿಸಿದ್ದನ್ನು ಸನ್ನೆಯ ಮೂಲಕ ಆರಂಭಿಸಿದ ಅವನ ಅಭಿವ್ಯಕ್ತಿ ಧ್ವನಿಯನ್ನು ಹೊರಡಿಸುವ ಮೂಲಕ ಮಾತಿನ ಬೆಳವಣಿಗೆಗೆ ದಾರಿಯಾಯಿತು. ಸಂವಹನಕ್ಕೆ ಅತ್ಯಂತ ಅವಶ್ಯವಿರುವ ಮಾತು – ಭಾಷೆ, ಸಾಹಿತ್ಯ, ಸಂಗೀತ, ಜಗಳ, ಪೈಪೋಟಿ, ಕ್ರಾಂತಿ, ಯುದ್ಧಗಳಿಗೂ ಕಾರಣವಾಗಿದ್ದು ತಿಳಿದಿರುವುದೆ. 

ಇಂದಿನ ಅತ್ಯುನ್ನತ ಅಭಿವೃದ್ಧಿಗೆ ಮಾತೇ ಮೂಲ ಎನ್ನುವುದು ಉತ್ಪ್ರೇಕ್ಷೆಯಲ್ಲ. ಇದು  ವ್ಯಾಪಾರ-ವಾಣಿಜ್ಯ  ವ್ಯವಸ್ಥೆಯ ಜೊತೆಜೊತೆಗೇ ಸಂವಹನ ವ್ಯವಸ್ಥೆಗೂ ನಾಂದಿ ಹಾಡಿತು. ಇದರ ಭಾಗವಾಗಿಯೇ ಮೊದಲು ಶ್ರವ್ಯ ಮಾಧ್ಯಮಗಳು ನಂತರದಲ್ಲಿ ದೃಶ್ಯ ಮಾಧ್ಯಮಗಳು ಹುಟ್ಟಿಕೊಂಡವು. 1920ರ  ಆಸುಪಾಸಿನಲ್ಲಿ ಹುಟ್ಟಿದ ಶ್ರವ್ಯ ಮಾಧ್ಯಮ ಸುಮಾರು 6 ದಶಕಗಳ ಕಾಲ ವಿಶ್ವವನ್ನೇ ಆಳಿತು. ಆನಂತರ ದೃಶ್ಯ ಮಾಧ್ಯಮ ಆ ಸ್ಥಾನವನ್ನು ಪಡೆಯಿತು ಎನ್ನಬಹುದು. ಭಾರತದಲ್ಲಿ ಶ್ರವ್ಯ ಮಾಧ್ಯಮದ ಸ್ಥಾನ ಇನ್ನೂ ವಿಸ್ತರಿಸಿ ಕಳೆದ ದಶಕದವರೆಗೂ ಅದು ಉಚ್ಛ್ರಾಯ ಸ್ಥಿತಿಯಲ್ಲಿಯೇ ಇತ್ತು. 

ಭಾರತಕ್ಕೆ ಟಿವಿಯ ಪಾದಾರ್ಪಣೆ 70ರ ದಶಕದಲ್ಲೇ ಆಗಿದ್ದರೂ ಒಂದು ದಶಕದ ನಂತರ ಬಣ್ಣದ ಟಿವಿ, ಆನಂತರದ ಒಂದು ದಶಕದ ನಂತರ ಅನೇಕ ವಾಹಿನಿಗಳ ಹುಟ್ಟು ಹೀಗೆ ಅದರ ಬೆಳವಣಿಗೆಯ ಗತಿ ಕೊಂಚ ನಿಧಾನವಾಗಿತ್ತು. ಆದರೂ 1990ರ ಇಸವಿಯ ನಂತರ ಶ್ರವ್ಯ ಮಾಧ್ಯಮದಿಂದ ಜನರ ವಾಲುವಿಕೆ ದೃಶ್ಯ ಮಾಧ್ಯಮದತ್ತ ಸಾಗಿ ಇಸವಿ 2000 ದಿಂದ ಅದಕ್ಕೆ ಬಹುತೇಕವಾಗಿ ಅಂಟಿಕೊಂಡಿತು. ಸುಮಾರು ಎರಡು ದಶಕಗಳ ಕಾಲ ದೃಶ್ಯ ಮಾಧ್ಯಮ ಅಬ್ಬರಿಸಿತು ಎಂತಲೇ ಹೇಳಬಹುದು. 

ಆದರೆ  ತೀರ ಒಂದು ತಿಂಗಳ ಹಿಂದಷ್ಟೇ ಆರಂಭವಾದ ‘ಕ್ಲಬ್ ಹೌಸ್’ ಎಂಬ ಶ್ರವ್ಯ ಮಾಧ್ಯಮಕ್ಕೆ ಸಿಗುತ್ತಿರುವ ಅಪೂರ್ವ ಸ್ವಾಗತ ಹಾಗೂ ಪ್ರತಿಕ್ರಿಯೆ ಜಗತ್ತು ಮತ್ತೆ ಶ್ರವ್ಯ ಮಾಧ್ಯಮಕ್ಕೇ ಹಿಂತಿರುಗುತ್ತಿರುವ ಎಲ್ಲ ಸೂಚನೆಗಳನ್ನು ದಟ್ಟವಾಗಿ ನೀಡುತ್ತಿದೆ. ಕೊರೊನಾ ಸಂದರ್ಭದಲ್ಲಿ ಓಡಾಟ, ಕಾರ್ಯಕ್ರಮ ಆಯೋಜನೆಗಳಿಗೆ  ಕಡಿವಾಣವಾಗಿ  ಸಾಮಾಜಿಕ ಹಾಗೂ ಸಾಂಸ್ಕೃತಿಕ ಜೀವನಕ್ಕೇ ಬ್ರೆಕ್ ಬಿದ್ದಿದ್ದು ಅದನ್ನೆಲ್ಲ ಒಂದೇ ಹೊಡೆತಕ್ಕೆ ಬ್ರೆಕ್ ಮಾಡುವ ಸಾಮರ್ಥ್ಯವನ್ನು ಹೊಂದಿದ ಈ ಕ್ಲಬ್ ಹೌಸ್ ಏಕಾಏಕಿ ಜನಪ್ರಿಯವಾಗುತ್ತಿದೆ.

ಪ್ರಪಂಚದ ಯಾವುದೇ ಮೂಲೆಯಿಂದಲಾದರೂ ಒಂದು ವೇದಿಕೆಯಲ್ಲಿ ಸೇರಬಹುದಾದ, ಇತರ ಸಾಮಾಜಿಕ ಮಾಧ್ಯಮಗಳಂತೆ ಸಂಖ್ಯೆಯ ಮಿತಿಯನ್ನು ಮೀರಿದ ಕ್ಲಬ್ ಹೌಸ್ ಸಧ್ಯಕ್ಕೆ ಸಾಹಿತ್ಯ, ಸಂಗೀತ, ಆರೋಗ್ಯಕರ ಚರ್ಚೆಗೆ ಉತ್ತಮ ವೇದಿಕೆಯಾಗುತ್ತಿದೆ. ಸಮಾನ ಮನಸ್ಕರು ತಾವು ಇರುವ ಕಡೆಯಿಂದಲೇ ಭಾಗವಹಿಸಬಹುದಾಗಿದೆ. ತಮ್ಮ ದಿನನಿತ್ಯದ ಕೆಲಸಗಳನ್ನು ಮಾಡುತ್ತಲೇ ಕೇಳಿಸಿಕೊಳ್ಳಬಹುದಾಗಿದೆ. ಕಮರ್ಷಿಯಲ್ ಬ್ರೆಕ್ ನಡುವೆ ಹೋಗಿ ಕೆಲಸ ಪೂರೈಸಿ ಬರಬೇಕಾದ ದರ್ದೂ ಇಲ್ಲದ ನಿರಾಳತೆ ಇದರ ಒಂದು ಪ್ಲಸ್ ಪಾಯಿಂಟ್. 

ಸಧ್ಯಕ್ಕೆ ಇದರ ಒಂದು ಅವಗುಣವೆಂದರೆ ಭಾರತದಲ್ಲಿ ಅಂತರ್ಜಾಲ ಸಂಪರ್ಕದ ಕೊರತೆ ಸಣ್ಣ ಪಟ್ಟಣ, ಹಳ್ಳಿಗಳಲ್ಲಿ ಹೆಚ್ಚಿರುವುದರಿಂದ ಇದು ನಗರ ಕೇಂದ್ರಿತವಾಗುತ್ತಿರುವುದು. ಇದರ ಜನಪ್ರಿಯತೆ ಹೆಚ್ಚಿದಂತೆ ಅಂತರ್ಜಾಲ ಸಂಪರ್ಕ ವ್ಯವಸ್ಥೆಯೂ ಉತ್ತಮವಾಗುವ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ. ಹೇಗೆ ಸಾಗಾಟ ವ್ಯವಸ್ಥೆ ವಿಶ್ವವನ್ನು. ‘ಗ್ಲೋಬಲ್ ವಿಲೆಜ್’ ಆಗಿ ಮಾಡಿತ್ತೋ ಹಾಗೆಯೇ ಈ ಕ್ಲಬ್ ಹೌಸ್ ಎಂಬ ಮಾಧ್ಯಮ ವ್ಯವಸ್ಥೆ ಮತ್ತೊಮ್ಮೆ ವಿಶ್ವವನ್ನು ಪುಟ್ಟ ಹಳ್ಳಿಯಾಗಿಸಬಹುದು. ಇದು ಆರಂಭದಲ್ಲಿ ಕಾಣಿಸುತ್ತಿರುವ ಭರವಸೆ. 

ಇದರ ಇನ್ನೊಂದು ಮಗ್ಗುಲನ್ನು ನೋಡುವುದಾದರೆ ಇದು ಬೌದ್ಧಿಕ ಮೇಲಾಟಗಳ ತಾಣವಾಗಬಹುದು. ನಂಬರ್ 1 ಸ್ಥಾನದ ಬಗ್ಗೆ ಈಗಾಗಲೇ  ಮಾತುಗಳು ಕೇಳಿ ಬರುತ್ತಿವೆ. ಇಂಥ ಅನಗತ್ಯ ಪೈಪೋಟಿಯನ್ನು ಕ್ಲಬ್ ಹೌಸ್ ಸಂಘಟಕರು ಮರೆಯುವುದು ಈ ಮಾಧ್ಯಮಕ್ಕೆ ಶ್ರೇಯಸ್ಕರ. ಇಲ್ಲವಾದರೆ ಕ್ರಮೇಣ ಇದೂ ಸಹ ಪೈಪೋಟಿಗಿಳಿದಿರುವ ಈಗಿನ ಸಾಮಾಜಿಕ ಮಾಧ್ಯಮಗಳಂತೆ ಗೀಳು-ಗೋಳು ಎರಡೂ ಆಗಬಹುದು.

ಜಾತಿ, ಮತ, ಪಂಥಗಳ, ಗುಂಪುಗಾರಿಕೆಯ‌ ಆಡುಂಬೋಲವಾಗಬಹುದು. ಕೆಲವರು ಮಾತ್ರ ಮುನ್ನೆಲೆಗೆ ಬಂದು ಹೆಚ್ಚು ಬಲಾಢ್ಯರಾಗಬಹುದು.  ಒಟ್ಟಾರೆ ಹೇಳಬಹುದಾದರೆ ಉಳಿದ ಮಾಧ್ಯಮಗಳಂತೆಯೇ ಜನರನ್ನು ಕಾಡಿಸಿ, ಕಂಗೆಡಿಸಿ ಜನ ರೋಸಿ ಹೋಗುವಂತೆ ಮಾಡಬಹುದು. ಇದಕ್ಕೆ ಮುಂಬರುವ ಕಾಲವೇ ಸಾಕ್ಷಿಯಾಗಬೇಕಷ್ಟೆ.

ಸದ್ಯಕ್ಕಂತೂ ಕ್ಲಬ್ ಹೌಸ್ ಹಣ, ಸಮಯ, ಓಡಾಟದ ಪರದಾಟ ಎಲ್ಲವನ್ನೂ ಉಳಿಸುತ್ತಿರುವ ಅನನ್ಯತೆಯನ್ನು ಹೊಂದಿದೆ! ಕಣ್ಣೆದುರು ಎಲ್ಲವನ್ನೂ ನಿಚ್ಚಳವಾಗಿ ಕಂಡು ಕಲ್ಪನೆಗಳನ್ನು, ಊಹೆಗಳನ್ನು, ಭಾವನೆಗಳನ್ನೇ ಕಳೆದುಕೊಂಡ ಮನಸ್ಥಿತಿಯಿಂದ ಕೊಂಚ ಬಿಡುಗಡೆ ನೀಡುತ್ತಿದೆ. ಸಂಜೆಯಾದ ಕೂಡಲೇ ಮನೆಯ ಹಿರಿಯರೆಲ್ಲ ಜಗುಲಿಯಲ್ಲಿ ಸೇರಿ ಮಾತುಕತೆ ನಡೆಸುತ್ತಿದ್ದರೆ, ಅದನ್ನು ಮೈಯೆಲ್ಲ ಕಿವಿಯಾಗಿ ಮಕ್ಕಳು ಕೇಳಿಸಿಕೊಳ್ಳುತ್ತಿದ್ದ  60-70ರ ದಶಕದ ಭಾರತವನ್ನು ಈ ಕ್ಲಬ್ ಹೌಸ್ ಮತ್ತೊಮ್ಮೆ ತನ್ನ ಆಧುನಿಕ ಅಂದಾಜಿನಲ್ಲಿ  ಕಟ್ಟುತ್ತಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಕೇಳುವ ಸಂಸ್ಕ್ರತಿಯನ್ನು ಬೆಳೆಸುತ್ತ ಸಹನೆ, ಶಾಂತಿ, ಸಮಾಧಾನವನ್ನು ಬೆಳೆಸುತ್ತಿದೆ. ಇಂಥ ಒಳಿತುಗಳನ್ನು ಒಡಲಲ್ಲಿ ಅಡಗಿಸಿಕೊಂಡು ಸಧ್ಯದ ಜನಪ್ರಿಯ ಸಂವಹನ ಮಾಧ್ಯಮವಾಗಿ ಹೊಮ್ಮಿರುವ ಕ್ಲಬ್ ಹೌಸ್, ಅದರ ಅಂತರ್ಗತ ಕೆಡುಕುಗಳಲ್ಲಿ ದಾರಿ ತಪ್ಪದಂತೆ ನೋಡಿಕೊಳ್ಳುವುದು ಇದರ ನಿರ್ವಹಣೆಗಾರರ ಮೇಲಿರುವ ಗುರುತರ ಜವಾಬ್ದಾರಿ. 

‍ಲೇಖಕರು Admin

August 7, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: