ಒಲಿಂಪಿಕ್ ಬೆಳ್ಳಿ ಪದಕ ಕೊರಳಲ್ಲಿದ್ದೂ, ಹೀಗೆ ಅತ್ತ ಪೈಲ್ವಾನ್​ನನ್ನ ನಾನು ನೋಡಿಲ್ಲ..

ರಮಾಕಾಂತ್‌ ಆರ್ಯನ್

ಒಲಿಂಪಿಕ್ ಬೆಳ್ಳಿ ಪದಕ ಕೊರಳಲ್ಲಿದ್ದೂ, ಹೀಗೆ ಅತ್ತ ಪೈಲ್ವಾನ್​ನನ್ನ ನಾನು ನೋಡಿಲ್ಲ! ಅವನು ರವಿಕುಮಾರ್ ದಹಿಯಾ, ಕುಗ್ರಾಮದಿಂದ ಬಂದು ವಿಶ್ವವನ್ನಾಳಿದ! ರವಿ ದಹಿಯಾ ಎಂಬ ಕುಗ್ರಾಮವೊಂದರ ಪೈಲ್ವಾನ್ ಕಥೆ ಇದು. ಒಲಿಂಪಿಕ್​ ಕುಸ್ತಿಯಲ್ಲಿ ಜಿದ್ದಿಗೆ ಬಿದ್ದವನಂತೆ ಅಖಾಡದಲ್ಲಿ ಅಡ್ಡಾಡಿ, ತನ್ನ ಪಟ್ಟುಗಳಿಂದಲೇ ಎದುರಾಳಿಯನ್ನ ಅಡ್ಡಾದಿಡ್ಡಿಯಾಗುವಂತೆ ಮಾಡಿದ ಹುಡುಗನ ಕಥೆ.

ಈ ಹುಡುಗ ಈಗ ತೊಡೆತಟ್ಟಿದರೆ ಊರಲ್ಲಿ ನೂರು ಹುಡುಗರು ಪೈಲ್ವಾನ್​ರಾಗುತ್ತಾರೆ. ಅದು ಒಲಿಂಪಿಕ್ ಎಂಬ ಜಗಜಟ್ಟಿಗಳ ಕಾಳಗದಲ್ಲಿ ಬೆಳ್ಳಿಗೆದ್ದ ಹುಡುಗನ ಪವರ್. ನಾನು ರವಿಯನ್ನ ಅಭಿನಂದಿಸುವ ಮೊದಲು, ತಡಮಾಡದೇ ಅವರ ತಂದೆ ರಾಕೇಶ್ ದಹಿಯಾಗೆ ಒಂದು ಮನದುಂಬಿದ ಪ್ರಣಾಮ ಹೇಳಿಬಿಡುತ್ತೇನೆ. ಇದು ರವಿ ಗೆದ್ದ ಬೆಳ್ಳಿಯಲ್ಲ, ಅವರಪ್ಪ ಕಷ್ಟದ ಕುಲುಮೆಯಲ್ಲಿ ಕಡೆದ ಬಂಗಾರ!

ಅಪ್ಪ, ಭತ್ತದ ಗದ್ದೆಯಲ್ಲಿ ಬಾಡಿಗೆಗೆ ದುಡಿಯುತ್ತಿದ್ದ ರೈತ. ಅಂದರೆ ಸ್ವಂತ ಜಮೀನು ಇಲ್ಲ. ಆದರೂ ದಂಗಲ್ ಬಗ್ಗೆ ಅದೆಂಥದ್ದೋ ಒಂದು ವಿಶೇಷ ಪ್ರೀತಿ. ಮಗನನ್ನ, ಜಗವನ್ನೇ ಗೆಲ್ಲುವ ಮಲ್ಲನನ್ನಾಗಿ ಮಾಡಬೇಕೆಂಬ ಹೆಬ್ಬಯಕೆ. ಅದೇ ಕಾರಣಕ್ಕೆ ತನ್ನ ಜೀವನವನ್ನೇ ಧಾರೆಯೆರೆದು ದಹಿಯಾಗೆ ಬೆಂಬಲವಾಗಿ ನಿಂತರು, ರಾಕೇಶ್ ದಹಿಯಾ !

ನಿಮಗೆ ಗೊತ್ತಿರಲಿ, ರವೀ ಹರ್ಯಾಣದ ನಾಹ್ರಿ ಹಳ್ಳಿಯವನು. ಅಲ್ಲಿಂದ ಛತ್ರಸಾಲ್ ಎಂಬಲ್ಲಿ ಕುಸ್ತಿ ಕಲಿಯುವುದಕ್ಕೆ, ಅಪ್ಪ ಕಳಿಸಿಕೊಟ್ಟಿದ್ದರು. ಕಳಿಸಿಕೊಟ್ಟು ಸುಮ್ಮನೇ ಕುಳಿತಿರಲಿಲ್ಲ. ಅಪ್ಪನ ಬಳಿ ಎಷ್ಟೋ ದಿನ ಬಿಡಿಗಾಸು ಇರುತ್ತಿರಲಿಲ್ಲ. ಆದರೆ ತನ್ನ ಮಗ ಜಗವನ್ನೇ ಗೆಲ್ಲುತ್ತಾನೆ, ಗೆದ್ದೇ ಗೆಲ್ಲುತ್ತಾನೆ ಒಂದು ದಿನ ಎನ್ನುವ ಹಂಬಲದಲ್ಲಿ ಹೇಗೋ ಹಣ ಹೊಂದಿಸುತ್ತಿದ್ದರು. ಪ್ರತೀ ದಿನವೂ ಮಗನಿಗೆ ಹಣ್ಣು, ಹಾಲು, ಆಹಾರ ಕೊಡಲೆಂದೇ ಒಟ್ಟು 70 ಕಿಮೀ ಹೋಗಿ ಬರುತ್ತಿದ್ದರು.

ಈ ರೀತಿ 10 ವರ್ಷಗಳ ವರೆಗೆ ಆ ತಂದೆ ಹಣ್ಣು, ಹಾಲು ಹೊತ್ತಿದ್ದಾರೆ. ಯೋಚನೆ ಮಾಡಿ ಒಟ್ಟು ಹತ್ತು ವರ್ಷಗಳು, ಈ ಒಂದೇ ಒಂದು ಒಲಿಂಪಿಕ್ ಪದಕಕ್ಕಾಗಿ! ಮಗನ ಬಳಿ ಮನೆಯ ಯಾವ ಕಷ್ಟವನ್ನೂ ಹೇಳಿಕೊಳ್ಳುತ್ತಿರಲಿಲ್ಲ. ತಾನು ಹಸಿದಿದ್ದರೂ ಪರವಾಗಿಲ್ಲ, ದಂಗಲ್​ನಲ್ಲಿ ಮಗ ಸೊರಗಬಾರದೆಂಬ ಕಾರಣಕ್ಕೆ ನಿತ್ಯವೂ ತೊತ್ತಿನಂತೆ ತುತ್ತು ಹೊತ್ತ ತಂದೆ ಅವರು. ಅವರ ಮನಸ್ಸಿನಲ್ಲಿ ಒಲಿಂಪಿಕ್​ನ ಪದಕ ಆಗಲೇ ಉಸಿರಾಡುತ್ತಿತ್ತು. ಅಪ್ಪನೆಂದರೆ ಹಾಗೇ ತಾನು ಮಾಡದ ಸಾಧನೆಯನ್ನ ಮಗ ಮಾಡಬೇಕೆಂಬ ನಿಸ್ವಾರ್ಥ ಜೀವಿ ಅದು!

ಒಬ್ಬ ಕುಸ್ತಿ ಮಲ್ಲನ ದೇಹದಾರ್ಢ್ಯ ಹದಗೊಳ್ಳುವುದೇ ಈ ಹಣ್ಣು ಹಾಲಿನಿಂದ. ಇದಕ್ಕೇ ಒಂದೇ ಒಂದು ದಿನವೂ ಕೊರತೆಯಾಗದಂತೆ ನೋಡಿಕೊಂಡವರು ರವೀ ತಂದೆ. ಒಲಿಂಪಿಕ್ನಲ್ಲಿ ಬೆಳ್ಳಿ ಚುಂಬಿಸುವ ಮೊದಲು ಇದೇ ರವೀ 2019ರ 57 ಕೆಜಿ ವಿಭಾಗದ ವಿಶ್ವ ಚಾಂಪಿಯನ್​ಷಿಪ್​ನಲ್ಲಿ ಕಂಚಿಗೆ ಕೊರಳೊಡ್ಡಿದ್ದ. ಇದೇ ಟೂರ್ನಿ ಟೋಕ್ಯೋ ಒಲಿಂಪಿಕ್ಸ್​ಗೆ ಟಿಕೆಟ್ ಕೊಡಿಸಿದ್ದು!

2019ರ Pro wrestling league ನಲ್ಲಿ ರವೀ, ಟೈಟಲ್ ಗೆದ್ದ ಹರ್ಯಾಣ ಹ್ಯಾಮರ್ಸ್ ತಂಡದ ಮುಖ್ಯ ಭಾಗವಾಗಿದ್ದರು. ಒಂದೇ ಒಂದು ಪಂದ್ಯದಲ್ಲಿ ರವೀ ಸೋತಿರಲಿಲ್ಲ. ಅಪ್ಪನ ಕನಸಿನಂತೆ ಪಳಗಿದ ಪೈಲ್ವಾನ್ ರವಿ. 2020 ಮತ್ತು 2021 ರಲ್ಲಿ ಇಡೀ ಏಷ್ಯಾ ಖಂಡದಲ್ಲಿಯೇ ರವಿಯನ್ನ ಸೋಲಿಸಿದ ಇನ್ನೊಬ್ಬ ಮಲ್ಲನಿಲ್ಲ. ಎರಡು ಬಾರಿಯೂ ರವಿಯ ಕೊರಳು, ಚಿನ್ನವನ್ನ ಅಲಂಕರಿಸಿದೆ! ಇವತ್ತಿಗೂ ರವಿಯ ಹಳ್ಳಿಗೆ ಸರಿಯಾದ ವಿದ್ಯುತ್ ಸಂಪರ್ಕವಿಲ್ಲ. ಆ ಕತ್ತಲೆಗೆ ಇಡೀ ಹಳ್ಳಿಯೇ ವರ್ಷಗಟ್ಟಲೇ ಶಾಪ ಹಾಕಿದೆ. ರವೀ ಆ ಊರಿಗೆ ಬೆಳಕಾಗಿದ್ದಾನೆ ಅಷ್ಟೇ.

ಇಂದಿಗೂ ಈ ಹಳ್ಳಿಗೆ ಸರಿಯಾದ ರಸ್ತೆ ಇಲ್ಲ. ಈಗಲಾದರೂ ಈ ಹಳ್ಳಿಗೆ ಒಳ್ಳೆಯ ರಸ್ತೆ ಮತ್ತು ನಿರಂತರ ವಿದ್ಯುತ್ ಸಿಗುವಂತಾದರೆ ಸಾಕು ಎನ್ನುತ್ತಾರೆ ರಾಕೇಶ್ ದಹಿಯಾ. ಮಗ, ಇಂದಲ್ಲಾ ನಾಳೆ ಚಿನ್ನ ತಂದೇ ತರುತ್ತಾನೆ ಎನ್ನುವ ನಂಬಿಕೆ ತಂದೆಯದ್ದು. ಅವರ ಹಳ್ಳಿಗರು ಈ ಮನೆಮಗನ ಪಂದ್ಯ ನೋಡಲು ಅದೆಷ್ಟು ಒದ್ದಾಡಿದ್ದಾರೆ ಗೊತ್ತಾ! ಅವರ ಹಳ್ಳಿ ನಾಹ್ರಿಯಲ್ಲಿ ಬೆಳಿಗ್ಗೆ 2 ಗಂಟೆ, ಸಂಜೆ 6 ಗಂಟೆಗಳ ಕಾಲ ಮಾತ್ರ ವಿದ್ಯುತ್. ಮಗನ ಮ್ಯಾಚ್ ಇರುತ್ತಿದ್ದದ್ದು ಹೆಚ್ಚೂ ಕಡಿಮೆ ಮಧ್ಯಾಹ್ನದ ಹೊತ್ತು. ಅದರಲ್ಲೂ ಮಗನಾಡಿದ ಸೆಮಿಫೈನಲ್ ಪಂದ್ಯ ಮಧ್ಯಾಹ್ನವೇ ಇತ್ತು. ಮನೆಯಲ್ಲಿ ಪವರ್ ಇಲ್ಲ. ಸ್ಥಳೀಯ ಆಡಳಿತಕ್ಕೆ ಕಾಡಿ ಬೇಡಿದ ಮೇಲೆ Uninterrupted ವಿದ್ಯುತ್ ಸಂಪರ್ಕ ಸಿಕ್ಕಿತು. ರವೀ, ಸೆಮಿಫೈನಲ್​ ಗೆದ್ದಿದ್ದ! ಊರು ಬೆಳಕಾಗಿತ್ತು!

ರಾಕೇಶ್ ದಹಿಯಾ ಅದೆಂಥ ಆಶಾವಾದಿಯೆಂದರೆ, ಭಾರತದ ಬಾಕ್ಸರ್ ಲವ್ಲೀನಾ ಬೋರ್ಗೋಹೈನ್ ಪದಕ ಗೆದ್ದ ಮೇಲೆ ಅಸ್ಸಾಂನ, ಅವಳ ಹಳ್ಳಿಯ ಚಿತ್ರಣವೇ ಬದಲಾಗಿದೆ. ನೆಟ್ಟಗೆ ಒಂದು ರಸ್ತೆಯೂ ಇರದಿದ್ದ ಕುಗ್ರಾಮ ಅವಳದ್ದು. ಲವ್ಲೀನಾಳ ಒಂದು ಪದಕ ಅವಳ ಊರಿನ ಹಾಳುಬಿದ್ದ ರಸ್ತೆಗೆ ಸಿಮೆಂಟ್ ಹರಿಸಿದೆ. ಅಂದಹಾಗೆ ಅವಳ ಊರು ಅಸ್ಸಾಂನ ಗೋಲಾಘಾಟ್ ಜಿಲ್ಲೆಯ ಬಾರೋಮುಖಿಯಾ! ಅಸ್ಸಾಂನಲ್ಲಿ ಆ ಹಳ್ಳಿ, ಹೀಗೆ ಬದಲಾಗುವುದಾದರೆ ನನ್ನ ಮಗನೂ ಪದಕ ಗೆದ್ದಿದ್ದಾನಲ್ಲಾ, ಹಾಗಾಗಿ ನನ್ನ ಹಳ್ಳಿಗೂ ಸಿಮೆಂಟ್ ರಸ್ತೆಯನ್ನ ಹರ್ಯಾಣ ಸರ್ಕಾರ ಮಾಡಲಿದೆ ಎಂದು ನಂಬಿದ್ದಾರೆ. ನಮ್ಮಲ್ಲಿ ಒಂದು ಒಲಿಂಪಿಕ್ ಪದಕದ ತೂಕವೆಂದರೆ ಹಳ್ಳಿಯೊಂದಕ್ಕೆ ಒಂದು ರಸ್ತೆ!

ರವೀ, ಈಗ ಬೆಳ್ಳಿ ಗೆದ್ದು ಬರುತ್ತಿದ್ದಾನೆ. ಮುಂದಿನ ಪ್ಯಾರಿಸ್ ಬೇಸಿಗೆ ಒಲಿಂಪಿಕ್ಸ್​ನಲ್ಲಿ ಚಿನ್ನ ತರುವ ಹುಡುಗನಾಗಲಿ. ನಮ್ಮ ದೇಶದಲ್ಲಿ ಶೂಟಿಂಗ್, ಗಾಲ್ಫ್ , ಕ್ರಿಕೆಟ್ ನಂತ ಕ್ರೀಡೆಗಳಲ್ಲಿ ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡವರು ಸಿಗಬಲ್ಲರು. ಒಲಿಂಪಿಕ್​ನಂತ ಕ್ರೀಡೆಗಳಲ್ಲಿ ಪದಕ ಗೆದ್ದ ಬಹುತೇಕರು, ಗುಡ್ಡಗಾಡು, ಹಳ್ಳಿಗಳಿಂದ ಎದ್ದು ಬಂದವರು. ಗೆದ್ದು ತಂದವರು. ಗೆದ್ದೇ ಗೆಲ್ಲುವೆ ಒಂದು ದಿನ, ಗೆಲ್ಲಲೇ ಬೇಕು ಬಡತನ ಎಂದು ನಂಬಿದವರು.

ರವೀ ಮನೆಗೆ ಬರುವುದನ್ನೇ ಅವರ ತಾಯಿ, ಊರ್ಮಿಳಾ ದಹಿಯಾ ಕಾಯುತ್ತಿದ್ದಾರೆ. ರವಿಗೆ ಪ್ರೀತಿಯಾದ ಚುರ್ಮಾ, ಖೀರ್ ಮತ್ತು ಹಲ್ವಾ ತಯಾರಿಸಿ ಕಾಯುತ್ತಿದ್ದಾರೆ. ಬಡತನದ ಪ್ರೀತಿಗೆ ಸಿಹಿ ಜಾಸ್ತಿ!

ಒಲಿಂಪಿಕ್​ನಲ್ಲಿ ಚಿನ್ನ ತರಬೇಕೆಂಬುದು ರವಿ ತನಗೆ ತಾನೇ ಮಾಡಿಕೊಂಡ ಶಪಥ. ಆದರೆ ರಷ್ಯನ್ ಹುಡುಗನಿಗೆ ಈ ಬಾರಿ ಚಿನ್ನ ಸಿಕ್ಕಿದೆ. ಚಿನ್ನ ಸಿಗಲಿಲ್ಲವೆಂಬ ಕಾರಣಕ್ಕೆ ರವಿ ಕಣ್ಣಾಲಿಗಳು ತುಂಬಿಬಂದಿದ್ದವು. ಬೆಳ್ಳಿ ಸ್ವೀಕರಿಸುವ ಮನಸ್ಸಿರಲಿಲ್ಲ. ನೆನಪಿರಲಿ ರವೀ, ನೀನು ಪೈಲ್ವಾನ್, ಮುಂದಿನ ಚಿನ್ನದ ಮೇಲೆ ನಿನ್ನ ಹೆಸರು ಬರೆದಿದೆ ಮತ್ತು ಅದು ನಿನ್ನದೇ. ಚೆನ್ನಾಗಿ ಆಡಿದೆ ರವೀ. ಬೆಳ್ಳಿ ಕಡಿಮೆ ಸಾಧನೆಯಲ್ಲ. ಯಾರೊಂದಿಗೂ ಹೆಚ್ಚು ಮಾತನಾಡದ ನಿನ್ನ ಮೌನ ಬಂಗಾರ. ಮುಂದಿನ ಬಾರಿ ಇದು ನಿನಗೆ ಹಾರವಾಗಲಿ

‍ಲೇಖಕರು Admin

August 7, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: