ಊರ ಸುಟ್ಟು ಉಗಾದಿ ಮಾಡೋ ದಿನಗಳು

ಗುರುತು

ಉಗಾದಿ ಹೊತ್ಗೆ ಅಡ್ಡ ಮಳೆ ಹೂದ ವರ್ಶ ಬಾವಿಲಿ ನೀರು ಇಂಗತಿರಲಿಲ್ಲ. ಮಳೆ ಹುಯ್ಯದು ಮುಂದಕೋತು ಅಂದ್ರೆ ಉಗಾದಿ ರಾತ್ರಿ ಬೆಳಗೂವೆ ಊರು ಎಣ್ಣೆತಾನಕ್ಕೆ ಅಂತ ನೀರ ತೋಡಿ ತೋಡಿ ಪಾತಾಳ ಕಾಣಸಬುಡದು. ಕೆಸರಂಡಲ್ಲಿ ವರುಷ ಪೂರ್ತಿ ಬಾವಿಗೆ ಬಿದ್ದು ಹೂತೋಗಿರ ಕೊಡ ಬಿಂದಿಗೆಲ್ಲಾ ಈಚಿಗೆ ಬಂದು ಮೈ ಬುಟ್ಕಳವು. ಬಾವಿಗಿಳಿಯ ಶೂರ ಶಂಕ್ರಣ್ಣ  ಬಾವಿ ಹೂಳ ಮಂಕ್ರೀಲಿ ತುಂಬಿ ತುಂಬಸಕೊಡನು. ಬಾವಿಕಟ್ಟೇ ಮೇಲೆ  ನಿಂತ ಎರಡು ಮೂರುಡಗ್ರು ಅಳ್ಳಾಡದಿರ ರಾಟೆಯ ಅವರೆ ಹಿಡದಲುಗಸ್ತಾ, ತಿರುಗುಸ್ತಾ, ನಿಧಾನಕ್ಕೆ ಭೂಮಿತೂಕದ ಭಾರವ ಮೇಲಕ್ಕೆ ನಿಧಾನಕ್ಕೆ ಎಳ್ಕಳರು. ಚಟಕ ಪಟಕ ಚೆನ್ನೀರಂಗೆ ಮಾತಾಡೋ ಹೆಣ್ಣು ಹುಡ್ಲ ಕೈಲಿ ದಿನಾಲೂ ಅವರಂಗೆ ಮಾತಾಡಕಂಡು ಗಡಗಡಾಂತ ಸದ್ದು ಮಾಡಕಂಡು ಧಡ್ಗುಟ್ಕಂದು ಆಟ ಆಡೋ ಆ ರಾಟೆ ಈ ಗಂಡುಡ್ಲು ಅದರ ಮೇಲೆ ಹೇರಿದ ಭಾರಕ್ಕೆ ಹೇಸರಗತ್ತೆ ಹಂಗೆ ಮಾತ ಕಳಕಂದು ಮುಕ್ಕುರ್…..ದು, ಮಣ್ಣ….. ಎಳುದು ಎಳುದು ಆಚಿಗೆ ಹಾಕತಿರದು.

ಇದ ಕಂಡು ಗಂಗಮ್ಮ ಕಣ್ಣಾಲ್ಲಿ ಬುಳುಬುಳುನೆ ನೀರು ಉಕ್ಕುಸಿ ಹಂಗೇ ಹರಸಬುಡೋಳು. “ಮೊಲೆತೊಟ್ಟ ಬಾಯಗಿಟ್ಟು ಏಸು ಕುಡಿತೀಯ ಕುಡಿ ಅಂತ ತಾಯೀರು ಮಕ್ಕಳ ಬಾಯಿಗೆ ಹಾಲರ್ಸದಂಗೆ” ಮುಚ್ಚಿದ್ದ ಕಣ್ಣ ಬುಡುಸಿ ತನ್ನ ಕಣ್ಣ ಪೊರೆ ಹರದಂಥ ಆ ಮಕ್ಕಳ್ಗೆ ಕುಡಿಯೋ ನೀರ ಉಕ್ಕುಸಿ ಉಕ್ಕುಸಿ ಹರಿಬುಟ್ಬುಡೋಳು. ನೀರು ಮತ್ತೆ ತುಂಬಕತಾ ತುಂಬಕತಾ ಹೋಗದು. ಬಾವಿನೀರಿನ ಶುದ್ಧೀಗೆ ಅಂತ ಉಪ್ಪು ಸುಣ್ಣವ ಸೇರುಗಟ್ಟಲೆ ಅಳದು ದೊಡ್ಡವರು ಹೇಳದಷ್ಟ ತಂದು ಹುಡ್ಲು ಸುರಿತಿದ್ರೆ,  ಬಾಣತೀರು ಮಕ್ಳ ಹೊಟ್ಟೆ ಕೆಡಬಾರ್ದು ಅಂತ ಹಸ್ರೌಸ್ದಿಯ ಕಣ್ಮುಚ್ಚಿ ಕುಡದಂಗೆ ಗಂಗಮ್ಮತಾಯಿ ಅದ ಕುಡುಕಬುಡೋಳು. ಮುಗಿತು. ಇನ್ನ ಮತ್ತೆ ಮುಂದಿನ ಉಗಾದಿಗೆ ಬಾವಿ ಸೋಸದು ಬುಡು……ಅಂತವ ಆ ಸುಣ್ಣ ಉಪ್ಪಿನ ಉರಿಯ ತಡಕಂದು ನೀರ ಕುಡದು ತನ್ನೊಟ್ಟೆಯ ತಾನೇ ತಣ್ಣಗೆ ಮಾಡಕಳಳು.

ಇನ್ನ ಬಾವಿಯಿಂದ ಮೇಲೆದ್ದು ಹಳೆ ಓಬಿರಾಯನ ಕಾಲದ ಮಕ ಹೊತ್ಕಂಡು ಕೊಡಪಾನಗಳು ಆಚಿಗೆ ಬಂದು ಕುಂತಿರವಾ? ಏನೇ ವೇಶ ಹಾಕುದ್ರೂವೆ, ಹುಟ್ಟು ಬಣ್ಣ ಅಂತ ಒಂದಿರ್ತದಲ್ಲ ಗುರುತ ಹಿಡಿಯಾಕೆ. ಒಂದೊಂದಕ್ಕೂ ಒಂದೊಂದು ಬಣ್ಣ ಚಹರೆ ಇಲ್ಲದಿದ್ರೆ ಈ ಪರಪಂಚದಲ್ಲಿ ಗ್ವಾಡೆ ಅನ್ನೋದ ಏಳಸದಲೆ ಹಂಗೆ ಬಯಲಲ್ಲಿ ಮನುಷರು ಬದುಕ ಮಾಡಬುಡರೋ ಏನೋ? ಆದ್ರೆ…… ಮುಚ್ಚುಮರೆ ಮಾಡಿ ಅಚ್ಚಟೆ ಮಾಡಿದ್ರೆ ಅಲ್ಲವಾ? ಹುಟ್ಟುದ್ದ ಜೀವಕ್ಕೆ ಮನೆ ಮಠ ಮಕ್ಕಳು ನಂದು ಅನ್ನೋದು ಊರ್ಜಿತ ಆಗದು. ಹಿಂಗೆ ಬಾವಿ ತಳೂರದಲ್ಲಿ ಸಿಕ್ಕ ಬಿಂದ್ಗೇಗಳ ಇದು ಇವ್ರಿವ್ರದು ಅಂತ ಊರ ಕಣ್ಣು ಗುರುತು ಹಿಡಿಯದು.

ಊರಿನ ಮುಖದ ಗುರುತ್ನೂ ಊರಿಗೆ ಬಂದ ನೆಂಟರು ಹಿಂಗೇ ಕಂಡು ಹಿಡಿಯರು ಅನ್ನಿ…. ಈ ಊರಗಲ ಬಾಯಿರ ಮಗ ಗೋಪಾಲಂದು, ಈ ಕೊತ್ತಿಗಣ್ಣಿರೋದು ನೀಲಿ ಹುಡುಗನೇಯ, ಈ ಮಟ್ರ ಮೂಗು ಹೊಸಳ್ಳಿಲಿ ಯಾರ್ಗೂ ಇಲ್ಲ ಕನ್ರೋ. ಇದು ರಂಗಣ್ಣಿ ಹುಡ್ಗಿನೆಯ. ಅವರವ್ವ ಹೊಸೂರೋಳಲ್ವಾ? ಆ ಕಡೇರಿಗೆ ಕನೋ… ಮಟ್ರ ಮೂಗು. ಈ ಕೆಂಪನೆದು ಆಲೂರು ಹೊಲಗೇರಿ ದ್ಯಾವನ ಮನೆ ಹುಡುಗಿ ಅಲ್ವಾ? ಆ ಬಣ್ಣ ರೂಪ ನಮ್ಮೂರಲ್ಲಿ ಇನ್ನ್ಯಾರಿಗೀತೆ? ಅವನದ್ದೇಯಾ ಮಗ ಇದು ಬುಡು….. ಇಲ್ಲಿ ನಿಂತಿರೊ ಗಣೆಪ್ಯಾತಾಣನಂಗೆ ಇನ್ನ್ಯಾರಿದ್ದರೆ? ಆಟು ಉದ್ಕಿರೋರು ಸಂಜಣ್ಣನ ಮನೆ ಹುಡ್ಗೇಯಾ!

ಆ ಹುಡುಗಿ ಅತ್ಲಾಗೆ ಹೋದಮೇಲೆ  ಅಲ್ಲೇ ಹಟ್ಟಿಕಲ್ಲ ಮೇಲೆ ಕುಂತಿರೋ ಆಚೆ ಮನೆ ಅಜ್ಜಮ್ಮ ಒಗ್ಗರಣೆ ಹಾಕದು.

“ಹೆಣ್ಣು ಹುಡ್ಲು ಆಳತವಾಗಿರದೆ ಸರಿ ಕನಪ್ಪಾ…” ಅಂತವ.

“ತೀರಾ ಉದ್ದುಕೆ ಸಣ್ಣಕ್ಕಿದ್ರೆ ಒಳ್ಳೆ ಕಾಲ ಸಿಕ್ಕಾಕಂಡಂಗೆ ಕಾಣುಸ್ತವೆ ಹೆಣ್ಣುಹುಡ್ಲು. ವಯಸ್ಸಾದ ಮ್ಯಾಕೆ ಬೆನ್ನು ಬಗ್ಗೋತವೆ ಕಂಡ್ರೆ ಹುಡ್ಲೆ” ಅದುಕ್ಕೆ ಕಾರಣನೂ ಹೇಳದು.

ಅವರಿವರ ಮನೆ ಹುಡ್ಲ  ಗುರುತಾ ಊರ ನೆಂಟ್ರು ಕಣ್ಣ ಕಿರಿದು ಮಾಡಕಂಡು ಹಿಂಗೇ ಹಿಡಿತಾ ಅವರನ್ನೇ ಕೇಳೂ ಬುಡರು.

“ನೀನು ಇಂತೋರ ಮಗ ಅಲ್ವೇನೋ?” ಅಂತ ಕೇಳದಾಗ ಅವು “ಹೂಂ” ಕಂಡ್ರೆ ಅವರವರೆ…. ಅವರ ಕಣ್ಣ ಗುರುತಲ್ಲಿ ತಮ್ಮ ಒಳಗೆ ಹುದುಗೋಗಿರ ನೆಪ್ಪಿನ ಚಿಪ್ಪಿಂದ ಆಚಿಗೆ ಎಳೂದು ಮುಖದ ಚಹರೆ ಒಂದೆಳೆಯ ತನ್ನಕಂದು ತಮ್ಮ ಜಾಣತನಕ್ಕೆ ಹಂಗೇ ಬೀಗಿ ಬಿದ್ದು ತಲೆ ಬಗ್ಗಿಸಿ ನಿಂತಿದ್ರು..

ಹಿಂಗೆ ಅಲ್ಲಿ ಸುಳಿಬಾಳೆ ಒಂದು ಗಾಳೀಲಿ ತೂಗಾಡದಂಗೆ ಆಗಿ ಹಸಿರು ಸೀರೆ ಉಟ್ಟಿದ ಆಲೂರು ದ್ಯಾವನ ಹಿರಿ ಮಗಳು ಗುಡುಸ್ಲ ಬಾಗಲ ತಾವಳಿಂದ ಆಚಿಗೆ ಬಂದು ಬಾವಿಕಟ್ಟೇಲಿ ನಿಂತು ತನ್ನ ತಂತಿಯಂಗೆ ನುಲಕಂದಿರ ಕೂದಲ ಪಟ್ಟಪಟ್ಟನೆ ಬಡಿತಿದ್ದಂಗೆ ತಲೆತೂಗಿ ನಿಂತಿದ್ದ ಆ ನೆಂಟ್ರು ಕಣ್ಣಿಗೆ ಬಿದ್ದು ಅತ್ಲಾಗೆ ತಿರುಗಿದ ಅವರ ಕಣ್ಣು ವಸಿಹೊತ್ತು ಅಲ್ಲೇ ನೆಟ್ಕಂದ್ವು.

ಅವಳ ಕೆಂಪನೆ ಮಖದಲ್ಲಿ ನದಿ ಸುರುಳಿಗೆ ಹಸ್ರು ದಡ ಹಬ್ಬಕಂಡಂಗೆ ಅವಳ ಹಣೆ ಮೇಲೆ ಅಂಚುಕಟ್ಟಿದ್ದ ಕಪ್ಪು ಕೂದಲು ಸುರುಳಿ ಅನ್ನದು ಇಲ್ಲಿಗೂ ಬಂದು ಕಣ್ಣಿಗ್ ಹೊಡಿತಿತ್ತು. ತಂತಿಯಂಗಿರೋ ಕೂದುಲ ಬಡದು ಸುಧಾರಸನಾರದೆ ಬೆರಳಲ್ಲಿ ಬುಡಸಕಂತಾ ನಿಧಾನಕ್ಕೆ ಸಿಕ್ಕಣಿಗೇಲಿ ಸಿಕ್ಕು ಬುಡಸಿದರೂ ಸೈತಾ ಮತ್ತೆ ಹಗ್ಗದ ನಾರು ನುಲಕಂದು ಸುತ್ಕಂದಂಗೆ ಕೂದಲು ಉಡಕತಿತ್ತು. ಇಂಥ ಅಂಕೆಗೆ ಸಿಗದ ಕೂದಲ ಬಾಚಿ ಜಡೇ ಬಿಗದು ಟೇಪ ಹೆಣೆದು ಹೂವ ಮಾಡಿ ಹಿಂದಕ್ಕೆ ಎಸ್ಕಂದ್ರೂವೆ ಅದು ಪುಕ್ಕ ಕೆದ್ರಕಂದಿರ ನವುಲ ಪುಚ್ಚದಂಗೆ ಕಾಣತಿತ್ತು. ಈ ಗುಂಗ್ರು ಕೂದ್ಲ ಅಣೆ ಬರಹವೆ ಇಷ್ಟು ಅಂತ ಆ ಹುಡುಗಿ ಹೇರಪಿನ್ನ ಹಾಕಿ ಕಿವಿ ಮ್ಯಾಕೆ ಮೈ ಬುಟ್ಕಂದಿರ ಕೂದಲ ಅಂಕೆಲಿಟ್ಟು ಮರದ ಬಾಚಣಿಗೆ ತಕ್ಕಂಡು ಒಳಕ್ಹೋಯ್ತು.

“ಅದೂ ದ್ಯಾವನ ಹುಡ್ಗೇನೋ?” ಮಾತು ನಿಂತೋಗಿ ಬಾಯ ಕಳಕಂದು ಅದನ್ನ ನೋಡತಿದ್ದ ನೆಂಟ್ರು ಒಂದು ಅಣಿಮುತ್ತ ಉದ್ರುಸಿದ್ರು.

“ಹೂಂ, ಅದೆ ಮೊದಲ್ನೇದು. ಹೆಣ್ಣಾಗಿ ಈಗ ಮೂರು ತಿಂಗಳಾಗೀತೆ. ಇಲ್ಲಿ ನಿಂತಿತ್ತಲ್ಲ. ಅದು ಎರಡನೇದು.”

” ಏನೋ? ಆಚೆ ಬಿಸ್ಲಿಗೆ ಬಂದ್ರೆ ಕಣ್ಣು ಮಂಜಾಗ ಹಂಗೆ ಮಿಂಚು ಹೊಡಿತಾವೆ ಇವು. ಇವ ಸುಳಿ ಹೊಡ್ಯಾ…. ಅವ್ರವ್ವ ಅಪ್ಪನೂ ಹಂಗೆ ಅವ್ರಲ್ಲ.” ಅಂತ ಆ ರೂಪಕ್ಕೆ ಮರುಳಾದ ಅವ್ರ ಕಣ್ಣ ಅವರೇ ಸಂತೈಸಕಂದರು.

ಇದೇ ರೀತಿಲಿ ಹಗ್ಗದ ಕುಣಿಕೇ ತಪ್ಪಿ ನುಗುಚ್ಕಂದು ಕಳಚಿ ಬಾವಿಗೆ ಬಿದ್ದ ಕೊಡಪಾನಗಳು ಅವರವರ ಮನೆ ಗುರುತ ಹೊತ್ಕಂದು ಅವರವರ ಮನೆ ಸೇರಕಂಡವು.  ರುಶಿಮುನಿಗಳು ಕತ್ತಲ ಗವಿಲಿ ತಪಸ್ಸ ಮಾಡಿ ಈಚಿಗೆ ಬಂದು ಜನಗಳಿಗೆ ಅನುಕೂಲಕ್ಕೆ ಬರೋ ತಿಳುವಳಿಕೆಯ ಹೇಳಿಕೊಟ್ಟಂಗೆ, ತಮ್ಮ ನೀರವಾಸದಲ್ಲಿ ಮಾತಿಲ್ಲದೆ ಈಟುದಿನ ಯೋಸ್ನೇಲಿ ಮುಳುಗಿ ಕುಂತಿದ್ದ ಈ ಕೊಡಪಾನಗಳು ಸೈತಾ…. ಮೈಮೇಲಿದ್ದ ತಮ್ಮ ವನವಾಸದ ಮೇಲ್ಪದರವ ಹುಳಿಲೂ ಬೂದಿಲೂ ಉಜ್ಜುಸ್ಕಂದು ಎರಡು ಮೈ ನೀರಲ್ಲಿ ತೊಳಸಕಂಡು ಮಡಿಯಾಗಿದ್ದೆಯಾ…. ಊರ ನಾರೇರ ಕಡು ದುಖಃದ ಸಂಕಟಗಳ ಎದೆಗೆ ಇಳಿಸ್ತಾ ಬಾವಿ ಕುಣಿಕೇಲಿ ಕತ್ತ ಕಿವಚ್ಕಂದು ನೊಂದರೂ ಸೈತಾ ಬಾವೀಲಿ ಮುಳುಗಿ ನೀರಿನ ಅಂತರಾಳವ ತುಮ್ಬಕಂಡೂ….  ಹೆಣ್ಗಳು ಕೊರಳ ತಬ್ಬಿ ಸೊಂಟದಲ್ಲಿ ಇರಿಕ್ಕಾಂಡು ತಕಹೋಗುವಾಗ….  ಅವರ ಒಡನಾಟದಲ್ಲಿ ಈ ಕೊಡಗಳು ತಮ್ಮ ತುಂಬಿದ ಸಂತೋಷವ ಅವರ ಸೊಂಟಕ್ಕೆ ಇಳೇ ಬುಟ್ಟು…. ಅವರನ್ನ ತಣ್ಣಗೆ ಮಾಡಿದ ಮೇಲೆ ಸಮಾಧಾನ ಹೆಚ್ಚಾಗಿ ಅವೇ ಚೊಟಕ ಚೊಟಕನೆ ತುಳುಕಾಡತಿರವು.

ಅವ್ರು ಹಂಡೆ ತುಂಬಸಾದ ಮೇಲೆ ಅದರ ಅಂಡಿಗೆ ಇಟ್ಟ ಸಿಂಬಿ ಮೇಲೆ ತುಂಬಿದ ಕೊಡವ ಇಟ್ಟು ಅದರ ಬಾಯ ಮುಚ್ಚಿ ಗಿಡದಲ್ಲಿ ಕುಯ್ಕಬಂದಿರ ಇಳ್ಳೆದೆಲೆನೂ, ಮಲ್ಲಿಗೆ ಹೂವಿನ ಮಾಲೇನೂ ತಣ್ಣಗಿರಲಿ ಅಂತ ಹಂಡೆಕೊಡದ ಮೈಗೆ ತಾಕುಸಿ ಇಡರು. ಅದರ ಘಮನಕ್ಕೆ ಮನಸೋತ ಈ ಬಾವಿನೀರು ತಮ್ಮ ತಂದು ಹಿಂಗೆ ಪಾವನ ಮಾಡ ಈ ಕೊಡಪಾನದ ಒಳ ಮಯ್ಯ ಅಂಗೇ ತಬ್ಬಕಂದು ಮಲಿಕ್ಕಬುಡದು.

 

ಗಾಳಿಯ ತೂಗಾಲೆ

ಉಗಾದಿ ಬೆಳಿಗ್ಗೇಲಿ ಕಟ್ಟಿದ ಬೇವುಮಾವಿನ ಚಿಗುರು ಮನೆಬಾಗ್ಲ ಸಿಂಗಾರ ಮಾಡಿದ್ರೂವೆ ಆ ಉರಿಬಿಸಿಲ ಕಾವಿಗೆ ಹೊತ್ತೇರೋವತ್ತಿಗೇ ತೋರಣ ಬಾಡೋಗಿರದಾ?  ಮರದ ಹಸ್ರು ಹಂಗಲ್ಲ…. ಬಿಸಿಲು ಹೊಡೆತ ಬಿದ್ದಂಗೆ  ಬಿದ್ದಂಗೆ ಚಿಗುರು ರಂಗೇರತಿರದು. ಉಗಾದಿ ಹಬ್ಬದ ಎಣ್ಣೆ ನೀರ ಹುಯ್ಯಕಂಡು, ಒಬ್ಬಟ್ಟಿನೂಟ ಆಗೋ ಹೊತ್ಗೆ ಸುಮಾರಕ್ಕೆ ಇಳಿಹಗಲು ಮಂಡಿತಕೆ ಇಳಿಬಿದ್ದಿರದಾ? ಆಗ ಊರ ಬಾಗಲ ಅರಳಿ ಮರಕ್ಕೆ ಏಣಿನೂ ಸೇದ ಹಗ್ಗನೂ

ಜೋಡಿಸಿ ತುಂಡು ಹುಡ್ಲು ಮರ ಹತ್ತಿ…. ಪಟ್ಟು ಗೊತ್ತಿರೋರ ಹತ್ರ ಕೇಳಿ ಕಲ್ತಕಂದು ತೂಗಾಲೆ ಅನ್ನದ ಗಾಳೀಲಿ ತುಯ್ಯೋ ಹಂಗೆ ತೂಗಿ ಬುಟ್ಟಬುಡೋರು.

ಏಣಿ ತುಳಯಾಕೆ ಇಬ್ರು ಬಲವಾಗಿರರು ಅದರ ಮೇಲೆ ಹತ್ತಿ ಆ ಕಡೆ ಈ ಕಡೆ ತೂಗಿ ಬಿದ್ದಿರೊ ಹಗ್ಗ ಹಿಡದು ಎದ್ರುಬದ್ರಿಕೆ ನಿಲ್ಲರು. ಒಬ್ರು ಏಣಿ ಮೇಕೆ ಬಗ್ಗಿ ತಮ್ಮ ಕಾಯವ ತುಯ್ಯುದೇಟ್ಗೆ ಅದರ ಎದುರು ದಿಕ್ಕಿಗೆ ನಡು ಮಧ್ಯೆ   ಉಯ್ಯಾಲೆ ಏಣೀಲಿ ಕುಂತಿರರ ತೂರ್ಕಂದು ಇನ್ನೊಂದು ಕಡಿಕೆ ಕರಕ ಹೋಗದು. ಆಕಡೆ ಇರೋರು ಹಿಂಗೆ….. ಏಣಿ ಕಡೆಗೆ ತುಯ್ಯರು. ಆಗ ಮತ್ತೆ ಕುಂತಿರೋರ ತೂರಕಂದು ಈಕಡಿಕೆ ಕರಕ ಬರದು. ಇದು ಹಗ್ಗ ಹಿಡದು ನಿಂತಿರರ ಆಟ. ಮಧ್ಯೆ ಕುಂತಿರೋರು, ಉಯ್ಯಾಲೆ ಆಡುದ್ರೂವೆ ಲೆಕ್ಕಕ್ಕೆ ಇಲ್ಲದರಾಗಿರರು. ಅದ್ರೂ ಅವರ ಎದೆ ಢವಗುಡದು ಅವರ ಕಿವಿಗೇ ಹೊಡಿತಿರದು. ಎಡಕ್ಕೂ ಬಲಕ್ಕೂ ತುಯ್ಯೋ ಆ ಎರಡು ಆಳು ಆಡೋ ಆಟಕ್ಕೆ ನಾಮಕಾವಾಸ್ತೆಗೆ

ಮಧ್ಯದಲ್ಲಿ ತೂಕಕ್ಕೆ ಹಾಕ್ಕಂದು ಉಯ್ಯಾಲೆ ಮೇಲೆ ಕುಂತಿರೋರ ಪಾಡು ನಾಯಿ ಪಾಡಗಿಂತಲೂ ಕಡೆಯಾಗಿರದು. ಅಡಕತ್ತರೀಲಿ ಸಿಕ್ಕಂಗೆ. ಯಾಕಂದ್ರೆ… ಅವ್ರಿಬ್ಬರೂ ಆಟವ ನಿಲ್ಲುಸ್ಬೇಕು. ಇವ್ರು ಕೆಳೂಕೆ ಇಳೀಬೇಕು ಹಂಗಾಗಿರದು.

ಕಣದಲ್ಲಿ ತೂರು ಮೊರದಲ್ಲಿ ತೂರಕಂದು ಹೋಗೋಂಥ ಹೊಟ್ಟಿನ ಥರಕ್ಕೆ ನಡು ಮಧ್ಯ ಕುಂತಿರೋರ ಜೀವ ಅಳ್ಳಾಡಿ ತೂರಕ ಹೋಗಿ ಕಾಲೂರೋ ಭೂಮಿನೂ ಇಲ್ಲದೆ….. ಆ ಕಡಿಕೆ  ಹಿಡುಕೊಳ್ಳೋ ಮರನೂ ಇಲ್ಲದೆ……. ಹಿಡದ ಏಣಿ ಹಿಡತ ಹಿಡುದೇ ಇಲ್ಲ ಅನ್ನಿಸಿದ್ದೆ…. ಅಲ್ಲಿ ನಾವು ಕುಂತೇ ಇಲ್ಲ ಅಂತ ಜೀವ ಝಲ್ ಅನ್ನಿಸಿದ್ದೆ…. ತ್ರಿಶಂಖು ಸ್ವರ್ಗದಲ್ಲಿ ತೇಲದಂಗಾಗಿ…. ಅಬ್ಬಬ್ಬಾ! ನಾನೆಲ್ಲುದಿನಿ ಅನ್ನೂದೆ ತಿಳಿದೆಯ …..

“ನಿಲ್ಲುಸಿ, ನಿಲ್ಲುಸಿ, ಅವ್ವೇ, ಅಪ್ಪನೇ ನಿಲ್ಲುಸ್ರಪ್ಪೋ, ನಿಮ್ಮ ದಮ್ಮಾಯ್ಯ ಸತ್ತೋಗುಬುಡತೀನಿ ” ಅಮ್ತ ಗಾಳೀ ಹನುಮಂತರಾಯನ್ನ ನೆನಕಂದು ಹರಕೆ ಕಟ್ಟಾಕೂ ಗೊತ್ತಾಗದೇಯ ಹೆದ್ರುಕಂದು ಕಣ್ಮುಚ್ಚಿ ಕೂತುಬುಡರು.

ಹಳಬರು ಜತೆಲಿ ಕುಂತಿದ್ದೋರು ಅವರ ಭದ್ರಾಗಿ ಹಿಡಕಳರು, ಕೈ ಬುಟ್ಟಾರು ಅಂತವ. ಆ ನಿಮಿಷದಲ್ಲಿ ಅವರಿಗೆ ಚಳಿಜ್ವರೆಲ್ಲ ಏರಿ ಅಂಬಾರವ ತೋರಿ ಕೆಳಕ್ಕೆ ಇಳುದಾಗ ಪಾತಾಳಕ್ಕೆ ಕಾಲ ತಾಕುಸದಂಗೆ ಆಗದು.  ಆದ್ರೆ ಭೂಮತಾಯ ಮಣ್ಣಿಗೆ ಕಾಲು ಸೋಕದಾಗ ಗಾಳೀಲಿ ಹಾರಿಹೋಯತಾ ಇದ್ದ ಪ್ರಾಣ ವಾಪ್ಸು ಬಂದಂಗೆ ಆಗಿ ಏರಿದ್ದ ಚಳಿಜ್ವರ ನೆಲಕ್ಕೆ ಇಳದು ಹೋಗದು. ಹುಡುಗೀರು ಹತ್ತುದಾಗ ಅವ್ರು ಕಿರುಚುಕೊಳ್ಳೋದ ನೋಡಿ ಗಂಡು ಹುಡ್ಲು ವಸಿ ಮೋಜ ಮಾಡರು. ಹಂಗೇ ಊರಲ್ಲಿದ್ದ ಹೆಡ್ಡ ಸೋಮಪ್ಪನ್ನ ಹಿಡಕಬಂದು ಅದ್ರಲ್ಲಿ ಕೂರುಸಿ ಅದು ಪಶುವಿನ ಥರದಲ್ಲಿ ಅರಚ್ಕಳ್ಳದ ನೋಡಿ ಎಲ್ರು ಬಿದ್ದೂ ಬಿದ್ದೂ ನಗರು. ಆಗ ಅಲ್ಲಿಗೆ ಬಂದ ಅಜ್ಜಯ್ಯದಿರು

“ಥೂ! ಪಾಪ್ರ ನನ್ನ ಮಕ್ಕಳ…..ಅವ್ನ ಯಾಕ್ರೋ ಗೋಳು ಹುಯ್ಕತಿರ….ಹಸುಮಗಿನಂತನ. ಕಳ್ಳು ಚುರಕ್ ಅನ್ನಕುಲ್ವಾ ನಿಮ್ಗೆ? ಹೊಟ್ಟಿಗೆ ಏನ್ ತಿಂತೀರಿ ನೀವು ” ಅಂತ ಬಯ್ಯರು. ಆಗ ಊರು ಒಂದು ಹದಕ್ಕೆ ಬರದು. ಅಲ್ಲಿಗೆ ಮಕ್ಕಳ ಎತ್ತಕಂಡು ಬಂದ ಅಪ್ಪದೀರನಕ…. ಉಯ್ಯಾಲೇಲಿ ಕುಂತು ಆಕಾಷಕ್ಕೆ ಮಕ್ಕಳ ಹಾರುಸಿ ಹಾರುಸಿ ಒಂದೆರಡು ಗಳಿಗೇಲೆ “ಹಕ್ಕಿ ಹಾರೋ ದಿನಸು ಎಂಗಿರ್ತೀತೆ ನೋಡು ಮಗ” ಅಂತ ಅವಕ್ಕೆ ತೋರುಸ್ಕೊಟ್ಟುಬುಡರು. ಅವು ಮಂಗಪಿ ಮರಿ ಹಂಗೆ ಅವರಪ್ಪದೀರ ಬಿಗ್ಯಾಗಿ ಅವಚ್ಕಂಡಿರವು.

ಅದ ಕಂಡು ಅಲ್ಲಿ ನಿಂತಿರರು ಮುಂದಿನ ತಮ್ಮ ಮುಂದಿನ ಪೀಳಿಗೆ ಮರಿಗಳ ನೋಡಿ ಉಬ್ಬಿ ಊರಗಲ ನಗೆಯ ಮಖದಲ್ಲಿ ಅಳ್ಳುಸಕಂಡು…. ಊರಗಲ ಹಲ್ಲು ಬುಟಕಂದೇ ಹೇಳೋರು ಸೀಮೆಗಿಲ್ಲದ ಮಕ್ಕಳು ತಮ್ಮವು ಅಂತವ.

“ಆಲ್ನೋಡು ಅಲ್ನೋಡು. ಮಲ್ಲೇಶನ ಮಗ ಹೆಂಗೆ ತಬ್ಬಕಂಡೀತೆ ನೋಡು. ಕೋತಿ ತಿಮ್ಮಣ್ಣ ಮರದಿಂದ ಮರಕ್ಕೆ ನೆಗಿವಾಗ ಕಪಿಮರಿ ಹೊಟ್ಟೆಯ ಗಟ್ಟಯಾಗಿ ಅವಚ್ಕಂಡಂಗೆ” ಅಂತ ಮುಖದಲ್ಲಿ ಶುದ್ಧ ನಗೆಯ ತುಳುಕ್ಸರು.

ಹರೇದ ಹುಡ್ಲು ಮಾತ್ರವ ಭಯ ಆದ್ರೂವೆ ಅದವಾ…..ತಮ್ಮ ಬಿಸೆ ರಕ್ತದಲ್ಲಿ ಕರಗುಸ್ಕಂಡು ಜಯಿಸ್ಕಂಡು ಬೀಗಿ…. ಏನು ತಲೆಕೊಟ್ಟ ಎತ್ಕಂಡು ಯುದ್ಧ ಗೆದ್ದು ಬಂದಿರೋರಂಗೆ ಇಳಿಯರು. ಹಿಂಗೆ ಕತ್ಲು ಪೂರುತಿ ಬಂದು ಕಣ್ಣಿಗೆ ಕವುಚ್ಕಳವರ್ಗೂ ಉಯ್ಯಾಲೆ ಹಗ್ಗ ಅನ್ನದು ತೂಗುತಾಲೇ ಊರೋರ ತೂಗಿ ತೂರಿ ನೆಲಕ್ಕೆ ಅದು ಬುಡತಿರದು. ಆಗ ತೂಗೋ ಹಗ್ಗಕ್ಕೆ ಸರಿಸಾಟಿಯಾಗಿ ಇವರ ಮೈಗೆ ಗಾಳಿ ಸುಂಯ್ಸುಂಯ್ ಅನ್ನಕಂದು ಬಂದು ತಾಕತಿರದು.

“ಅಪ್ಪಾ ದೇವ್ರೇ….ಅಂಬಾರನೂ ಕಂಡ್ವಿ, ಪಾತಾಳನೂ ಕಂಡ್ವಿ ಕನಪ್ಪಾ….” ಅಂತ ಭೂಮಿ ಮ್ಯಾಲೆ ನಿಂತು ಇವ್ರು ಮಾತಾಡದ ಕೇಳುಸ್ಕತಾ ಚಿಕ್ಕಿ ತನ್ನ ಮೈತುಂಬಿ ನಗಾಡತಾ ಒಂದೊಂದೇ ಬಂದು ನಿಂತಕಂಡು ಇವರ ನೋಡತಾ ಮಿನುಗುಡತಾ ಕಣ್ಣ ಬಿಡತಿರವು.

ಆ ಚಿಕ್ಕಿ ನೋಡಿದ್ದೆ, ಆ ಚಂದ್ರ ಮೂಡ ಗೆರೆ ದಿಕ್ಕು ನೋಡಿದ್ದೆ  ಪಯ್ಯಣ್ಣರ ಮನೆ ಅಮ್ಮ ಹೊಲಗೇರಿ ಸೆಟ್ಟಿಚಿಕ್ಕ ಇಬ್ರೂವೆ ಬಂದು ನಿಂತಕಂದು ಅಂಗೇ ಲೆಕ್ಕಾಚಾರ ಹಾಕ್ಕಂದು ಮಳೆಗಾಲ ಈ ವರುಶದಲ್ಲಿ ಹೆಂಗೆಂಗೆ ಅಂತ ಹೇಳಬುಡರಾ? ಕುಟುಮ್ರೋರು ಅಣಿಮುತ್ತ ನುಡಿಯೋ ಹಂಗೆ ಅವರ ಮಾತು ಆ ವರುಶದಲ್ಲಿ ನಿಜ ಆಗೇಬುಡದು. ಅವರಿಬ್ರೂ ಯಾರ ಕುಟೂವೆ ಚಟಪಟನೆ ಎಚ್ಗೆ ಮಾತಾಡರೇ ಅಲ್ಲ. ಒಳೂಗೆ ಲೆಕ್ಕಾಚಾರ ಯಾವಾಗೂ ಅವರ್ಗೆ. ಮಾತಾಡುದ್ರೆ ಒಂದು ತೂಕ ಅನ್ನಿ. ಆ ಹೊತ್ತಿಗೆ ಏಣಿ, ಸೇದ ಹಗ್ಗಗಳು ಉಯ್ಯಾಲೆ ರೂಪವ ಕಳಕಂದಿರವು. ಆಟ ಮುಗುಸಿ ಮ್ಯಾಲೆ ಹತ್ತಕೆ ಏಣಿ….. ಪಾತಾಳಕ್ಕೆ ಇಳಿಯೋ ಹಗ್ಗದ ಸುರುಳಿಯಾಗಿ  ತಮ್ಮ ತೀರಲ್ಲೇ ಮನೆ ಕಡಿಕೆ ಹೊರಟಿರವು.

“ಮ್ಯಾಲೆ ಮೂಡ ಚಿಕ್ಕಿಚಂದ್ರಂಗೂ  ಹಿಂಗೆ ಗಾಳೀಲಿ ತೂಗಾಡಕಳಿ ಅಂತ ಯಾರಾದ್ರೂ ಕಾಣದಿರ ದಾರಗಳ ತಂದು ತೂಗುಬುಟ್ಟವರಾ?…..ಏನಪ್ಪಾ….” ಅಂತ ಒಂದು ಸಣ್ಣ ಬಾಲೆ ಯೋಚುಸ್ತಾ ತಲೆಯೆತ್ತಿ ಆಕಾಶ ನೋಡತಾ  ಅಲ್ಲೇ ನಿಂತಿರದು. ಅವರವ್ವಾರು ಕರದಿದ್ದ ನೋಡಿ ತಾನೂ ಆ ಗುಂಪಲ್ಲೇ ಮನೆ ಕಡಿಕೆ ಹೆಜ್ಜೆ ಹಾಕತು.

‍ಲೇಖಕರು avadhi

March 26, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: