ಊರು ಬಾ ಎಂದು…

ಸುಮಿತ್ ಮೇತ್ರಿ ಹಲಸಂಗಿ

ಊರ ಹತ್ತಿರದ ಹಳ್ಳ ಬತ್ತಿದೆ, ಬಾವಿಗಳಿಗೆ ನೀರು, ಮಳೆ ಇಲ್ಲ ಅಂದರೆ ಇಲ್ಲಿ ಎದೆಯ ಅಂಗಳ ಒಣಗಿದಂತೆ ಭಾಸವಾಗುತ್ತದೆ. ಅಪ್ಪ ಸತ್ತ ಮೇಲೆ, ಅಮ್ಮನನ್ನು ಮಗುವಿನಂತೆ ಜೋಪಾನವಾಗಿ ಕಾಪಿಟ್ಟುಕೊಂಡು ಬದುಕುತ್ತಿದ್ದೇನೆ. ಇದೆಲ್ಲ ನನ್ನ ಊರಿನ ಮಣ್ಣಿನ ಸಂಸ್ಕಾರ ಅಂತಲೇ ಹೇಳಬಹುದು ಎನ್ನುತ್ತಾರೆ ಮಧುರ ಚೆನ್ನರ ಊರಿನವರಾದ ಸುಮಿತ್ ಮೇತ್ರಿ ಹಲಸಂಗಿ.

ನನ್ನೊಳಗೆ ಯಾವ ಮೋಹವು ಉಳಿದಿಲ್ಲ. ಊರು ಹೋಗು ಅಂತದೆ; ಕಾಡು ಬಾ… ಅಂತದೆ, ಅಂತ ಅಲ್ಲ. ಯಾಕೋ ಇತ್ತೀಚಿಗೆ ಊರು ತುಂಬಾ ಕಾಡುತ್ತಿದೆ. ಹೊತ್ತಲ್ಲದ ಹೊತ್ತಲ್ಲಿ ಧುತ್ತನೆ ನೆನಪಾಗುತ್ತದೆ. ಕಣ್ಣಲ್ಲಿನ ನೀರು ಕೆನ್ನೆಗೆ ಸರಬರಾಜು ಆಗುತ್ತದೆ. ಊರಲ್ಲಿ ಇರಬೇಕು. ಅಲ್ಲೇ ಇರಬೇಕು ಅಂತ ಯಾವುದೋ ಅಮೂರ್ತ ಭಾವವೊಂದರ ಒತ್ತಡ. ಅನೇಕ ಪ್ರಶ್ನೆಗಳನ್ನು ಕೇಳಲು, ಮಾತು ಬೇಡ ಎಂಬಂತೆ ಮೌನಕ್ಕೆ ಜಾರುತ್ತೇನೆ.

ಊರು ಬದಲಾಗಿದೆಯಾ?

ಇಲ್ಲ.

ಜನರು ಬದಲಾಗಿರಬಹುದು.

ಎಲ್ಲರೂ ದುಡ್ಡಿನ ಬೆನ್ನು ಹತ್ತಿದ್ದಾರಾ?

ಇಲ್ಲ. 

ಕೆಲಸದ ಒತ್ತಡದಲ್ಲಿ ಇರಬಹುದು.

ಪೂರ್ವಿಕರು ಬಾಳಿ-ಬದುಕಿದ ಮನೆಗಳು. ಓದಿದ ಶಾಲೆಗಳು. ಸ್ಮೃತಿಗಳನ್ನು ಠೇವಣಿ ಇಟ್ಟುಕೊಂಡ ಜಾತ್ರೆ, ಮೊಹರಂ, ಕಾರ್ತಿಕ್ ಮಾಸ, ಹಬ್ಬಗಳ ಆಚರಣೆಗಳು. ಆಶ್ರಮದ ಪ್ರಶಾಂತ ವಾತಾವರಣ. ಅರಳುವ ನಿತ್ಯ ಮಲ್ಲಿಗೆ ಹೂವುಗಳು. ಇನ್ನೂ ಪ್ರತಿ ಗುರುವಾರದ ಸಂತೆ. ಹೀಗೆ ಈ ಹಾಳಾದ ಮನಸ್ಸು ಒಂದೇ ಸವನೆ ಊರಿನ ಕುರಿತಾದ ನೆನಪಿನ ಅಲೆಗಳ ಭೋರ್ಗರೆತಕ್ಕೆ ಸಿಲುಕಿದೆ.

ಸಾಲು ಸಾಲು ಮಣ್ಣಿನ ಮನೆಗಳು. ಮೊದಲು ಮನೆ ಮನೆಗಳ ತುಂಬಾ ಬಡತನ. ಖಾಲಿ ಹೊಟ್ಟೆಗಳ ಧರಣಿ. ಮಳೆ ಇಲ್ಲ, ಬೆಳೆ ಇಲ್ಲ. ಶೇಂಗಾ ತಿಂದು ಹೊಟ್ಟೆ ತುಂಬಿಸಿಕೊಳ್ಳುವ ಮಂದಿ. ಅಲ್ಲಿ ಇಲ್ಲಿ ನಿಂಬೆ, ಕಬ್ಬು ಬೆಳೆಯುವ ರೈತ. ಇಂದು ಭಾಗಶಃ ಬಾರಿ ಹಣ್ಣು, ದ್ರಾಕ್ಷಿ, ಹಲಸಿಣ, ರೇಷ್ಮೆ, ಹೀಗೆ ಅನೇಕ ಬಗೆಯ ಹಣ್ಣು, ತರಕಾರಿ, ಹೂವು ಬೆಳೆಯುತ್ತಿದ್ದಾರೆ. ಕಾರುಣ್ಣಿಮೆ ದಿನ ಸಂಭ್ರಮವೇ ಸಂಭ್ರಮ. ಎತ್ತುಗಳ ಘಲ್ ಘಲ್ ಘಂಟೆ ಸದ್ದು. ಇಂದು ಟ್ರ್ಯಾಕ್ಟರ್ ಗಳು ಬಂದಿವೆ. ಅದರಲ್ಲಿ ಅನುಕೂಲಕ್ಕೆ ಒದಗುವ ಚಿಕ್ಕ ಟ್ರ್ಯಾಕ್ಟರ್ ಗಳು. ಕಾಂಕ್ರೀಟ್ ಬಿಲ್ಡಿಂಗ್ ಗಳು.

ಊರಿನ ಹತ್ತಿರ ಬಂದ  ಪೆಟ್ರೋಲ್ ಬಂಕ್ ಗಳು, ದುರಸ್ತಿ ಆದ ರಸ್ತೆಗಳು. ದುರಂತವೆಂದರೆ ಅಪಘಾತದಲ್ಲಿ ಮೃತಪಟ್ಟ ಗೆಳೆಯರ ನತದೃಷ್ಟತನ ನನ್ನೊಳಗೆ ಅಪಾರವಾಗಿ ವೇದನೆಗೆ ದೂಡುತ್ತದೆ. ಆಧುನಿಕ ಶೈಲಿಗೆ ಪ್ರಭಾವಿತರಾದ ಯುವಕರ ಕುರುಚಲ್ ಗಡ್ಡ, ತರಹೇವಾರಿ ಕಟಿಂಗ್, ಕಣ್ಣಿಗೆ ಚಸ್ಮಾ, ಅಂಟಿಸಿಕೊಳ್ಳುವ ಸುಗಂಧ ದ್ರವ್ಯದ ಘಾಟು. ನಾಡಿನಾದ್ಯಂತ ಓದಲು ಹೋದ ಯುವಕ-ಯುವತಿಯರು ಬೆನ್ನಿಗೆ ಲ್ಯಾಪ್-ಟಾಪ್ ಅಂಟಿಸಿಕೊಂಡು, ಕಾಲಿಗೆ ಬಂಡೆಯಂತ ಬೂಟುಗಳನ್ನು ಹಾಕಿಕೊಂಡು ಆಗಾಗ ಊರಿಗೆ ಬಂದು ಹೋಗುವವರ ಖಯಾಲಿ ಮಾತ್ರ ಸೆಳೆಯುವಂತದ್ದು. ಅಂಗೈಯಲ್ಲಿ ಸ್ಮಾರ್ಟ್ ಫೋನ್ ಗಳ ಸಖ್ಯ. ಆಧುನಿಕ ಬಗೆಯ ವ್ಯಾಪಾರ, ವ್ಯವಹಾರಗಳು. ಬದಲಾದ ರಾಜಕೀಯ, ರಾಜಕೀಯ ರೀತಿ, ರಿವಾಜುಗಳು.

ಆಧ್ಯಾತ್ಮಿಕ ಬೆಳಕನ್ನು ಚೆಲ್ಲಿದ ಸಾಧಕರು. ಜನಪದ, ಲಾವಣಿ, ಹಂತೀ ಪದಗಳು, ಗಿಗೀ ಪದಗಳು, ಡೊಳ್ಳಿನ ಹಾಡುಗಳು, ಅಲಾಯಿ ಪದಗಳು, ರಿವಾಯಿತ್ ಪದಗಳು, ಭಜನೆ ಮಂಡಳಿ, ನಾಟಕ ಹೀಗೆ ಅನೇಕ ಮಹಾಕಾವ್ಯಗಳು ಕಟ್ಟಿ ಹಾಡಿದ ಸಾಮಾನ್ಯರು, ಅಸಾಮಾನ್ಯರು. ಊರ ಗೆಳೆಯರ ಬಳಗ, ಊರನ್ನು ಸುತ್ತುವರೆದ ಐತಿಹಾಸಿಕ ಕೋಟೆ, ನಾಡತಾಯಿ ಹಬ್ಬದ ಆಚರಣೆ. ನವಿಲುಗಳ ಕೂಗು, ಶ್ರೀಗಂಧದ ಬೀಡು. ಊರಿಗೆ ಬರಲು ಕಾತುರದಿಂದ ಕಾಯುತ್ತಿದ್ದ, ಸಾಕಷ್ಟು ದಿನ ನೆಲೆಸಿದ ಪ್ರಖ್ಯಾತ ಸಾಹಿತಿಗಳು. ದ. ರಾ. ಬೇಂದ್ರೆ, ಶಿವರಾಂ ಕಾರಂತ, ಹ. ಮಾ. ನಾಯಕ್, ಸಿಂಪಿ ಲಿಂಗಣ್ಣ, ಮುಗಳಿ, ಗೋಕಾಕ ಹೀಗೆ ಅನೇಕ ದಿಗ್ಗಜರನ್ನೆಲ್ಲ ಸೋಜಿಗದಂತೆ ಸೆಳೆದ ಊರು. ಅಲ್ಲದೆ ಎಂದೋ ಬಂದು ಹೋದ ಚಿತ್ರನಟ ಅನಂತನಾಗ್ ಅವರ ಬಗ್ಗೆ ನನ್ನ ಅಜ್ಜಿ ಅದ್ಭುತವಾಗಿ ಕತಿ ಮಾಡಿ ಹೇಳುತ್ತಿದ್ದಳು.

ಇಡೀ ನಾಡಿನ ಗಮನ ಸೆಳೆದ ಮಧುರಚೆನ್ನರು (ನನ್ನ ನಲ್ಲ, ಆತ್ಮಶೋಧ), ಸಿಂಪಿ ಲಿಂಗಣ್ಣ (ಜನಜೀವನ, ಮುಗಿಲ ಜೇನು), ಪಿ. ಧೂಲಾ, ಮಾದಣ್ಣ ಓಲೇಕಾರ, ಕಾಪಸೆ ರೇವಪ್ಪ, ಜೀವರಾಜ್ ಜೋಶಿ, ಗುರುಪಾದಪ್ಪ ಜೀರಂಕಲಗಿ, ಶಿವಲಿಂಗಪ್ಪ ಗುಣಕಿ, ಅಂಕಲಗಿ ದುಂಡಪ್ಪ, ಖಾಜಾಬಾಯಿ, ರಾಮಚಂದ್ರ ವಾಲಿಕಾರ್, ಸರಿಯಾಗಿ ನನ್ನ ಮನೆಯ ಮುಂದಿನ ಮನೆಯಲ್ಲಿ ಇದ್ದ, ನನ್ನ ಪಾಲಿನ ಅಥವಾ ಊರ ಗಾಂಧೀ ರಾಘಣ್ಣ ಸುರಪುರ, ಇತ್ತೀಚೆಗೆ ನಮ್ಮನ್ನು ಅಗಲಿದ ನನ್ನ ಗುರುದೇವ ಪುರುಷೋತ್ತಮ ಗಲಗಲಿ, ಗೆಳೆಯರ ಬಳಗ, ಸಾಹಿತ್ಯ, ಜನಪದ ಸಾಹಿತ್ಯ ( ಜನಪದ ಸಾಹಿತ್ಯ ಸಂಗ್ರಹ – ಗರತಿ ಹಾಡು/ ಜೀವನ ಸಂಗೀತ/ ಮಲ್ಲಿಗೆ ದಂಡೆ) ಈಗಲೂ ತಮ್ಮ ತಾಜಾತನದಿಂದ ಗಮನ ಸೆಳೆಯುತ್ತವೆ.

1944 ರಲ್ಲಿ ರಬಕವಿಯಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನ ಜನಪದ ಸಾಹಿತ್ಯ ಗೋಷ್ಠಿಯ ಅಧ್ಯಕ್ಷರಾಗಿ ಸಿಂಪಿ ಲಿಂಗಣ್ಣನವರು ಆಯ್ಕೆಯಾದದ್ದು ಮತ್ತು 1992 ರಲ್ಲಿ ಕೊಪ್ಪಳದಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮನ್ನಣೆ ಪಡೆದಿದ್ದು, ಹೀಗೆ ಒಟ್ಟು ಸಾಧನೆಗೆ ಊರಿನ ಗೌರವಕ್ಕೆ ದೊರೆತ ಮನ್ನಣೆಯಾಗಿದೆ.

ಇನ್ನೂ ದಶಕಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ ವಡಗೇರಿ ಮಾಸ್ತರ ( ನಬಿ ಪಟೇಲ್ ವಡಗೇರಿ). ಜಾತಿ, ಮತ, ಧರ್ಮಗಳ ಭೇದವಿಲ್ಲದ ಊರಿನಲ್ಲಿ ವಡಗೇರಿ ಮಾಸ್ತಾರರನ್ನು, ಮಲ್ಲಯ್ಯನ ಗುಡಿಯಲ್ಲಿ ತುಲಾಭಾರ ಮಾಡಿದ್ದು ಭಾವೈಕ್ಯತೆಗೆ ಸಾಕ್ಷಿಯಾಗಿದೆ ಮತ್ತು ವಿದ್ಯಾರ್ಥಿಗಳು ತಮ್ಮ ಗುರುವನ್ನು ತೂಗಿದ್ದು ಇತಿಹಾಸದಲ್ಲಿ ಇದೇ ಮೊದಲೇನೊ?!. (ಆ ಕಾಲದಲ್ಲಿ ಅಂದರೆ 1963 ದಿಲ್ಲಿ ಇಂದಿರಾಗಾಂಧಿ ಮತ್ತು ಎಸ್. ನಿಜಲಿಂಗಪ್ಪನವರನ್ನು ಬಂಗಾರದಿಂದ ತೂಗಿದರಂತೆ ವಿಜಯಪುರ ಜನತೆ) ತುಲಾಭಾರ ಮಾಡಿ ಸಂಭ್ರಮ ಪಟ್ಟ ಊರಿನ ಜನಕ್ಕೆ ಆಶ್ಚರ್ಯ ಕಾದಿತ್ತು.

ತುಲಾಭಾರದಲ್ಲಿನ ಹಣವನ್ನು ಮುಟ್ಟದೆ ಪ್ರತಿ ವರ್ಷ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ಕೊಡಿ ಎಂದು ಮರಳಿ ಕೊಟ್ಟು ಧನ್ಯರಾದರು. ಈ ಗುಣ ಕಲಿಸಿದ್ದು ಇದೆ ಊರು ಎಂದು ಗದ್ಗದಿತರಾದದ್ದು ಆದರ್ಶವಾಗಿದೆ. ಇದಕ್ಕೆ ಮೂಕವಿಸ್ಮಯರಾದವರು ವಿಜಯಪುರದ ಸಿದ್ದೇಶ್ವರ ಸ್ವಾಮೀಜಿಗಳು, ಗುರುಲಿಂಗಪ್ಪ ಕಾಪಸೆ ಮತ್ತು ಊರ ಜನತೆ. ಎಲ್ಲೋ ಜನ ಸಂದಣಿಯ ಮೂಲೆಯಲ್ಲಿ ಮೂಗು ಒರೆಸಿಕೊಳ್ಳುತ್ತಾ, ಇದ್ದ ಒಂದೇ, ಹರಿದ ಖಾಕಿ ಚಡ್ಡಿ ಮೇಲೆ ಏರಿಸಿಕೊಳ್ಳುತ್ತಾ ನಿಂತ, ಎಳೆಯ ಕಣ್ಣುಗಳಲ್ಲಿ ಅಸ್ಪಷ್ಟ ಚಿತ್ರಣವನ್ನು ತುಂಬಿಕೊಂಡ ಕ್ಷಣಗಳು ಇನ್ನೂ ನನ್ನ ಅಕ್ಷಿಪಟಲದಲ್ಲಿ ಜೀವಂತವಾಗಿ ಅಚ್ಚಾಗಿವೆ.

ಅರವಿಂದರ ಆಶ್ರಮ, ಶ್ರೀ ಅರವಿಂದ ಕಾಲೇಜು, ಸಾಂಸ್ಕೃತಿಕ ಕಾರ್ಯಕ್ರಮಗಳು. ಒಂದೇ ಎರಡೇ. ಗುರುಗಳು, ಹಿರಿಯರು, ಸಾಧಕರು… ಏನು ಅಂತ ಹೇಳಲಿ, ಎಷ್ಟು ಅಂತ ಹೇಳಲಿ, ಅವ್ಯಕ್ತ! ಊರು ಇನ್ನಿಲ್ಲದಂತೆ ಕೈ ಬೀಸಿ ಕರೆಯುತ್ತದೆ. ಹುಚ್ಚತನವೂ? ಹಚ್ಚಿಕೊಂಡವನೋ? ತಿಳಿಯುತ್ತಿಲ್ಲ. ” ಯಾರು ನಮ್ಮ ಜೊತೆ ಇರುತ್ತಾರೆ; ಅವರೇ ನಮ್ಮವರು. ಎಲ್ಲಿ ಇರುತ್ತೇವೆ; ಅದೇ ನಮ್ಮ ಊರು ” ಅಂತ ಎಷ್ಟೇ ಸಮಾಧಾನ ಹೇಳಿದರು, ಕೇಳದ ಮನಸ್ಸಿಗೆ ಹೇಗೆ ಹೇಳಲಿ?

ಊರ ಹತ್ತಿರದ ಹಳ್ಳ ಬತ್ತಿದೆ, ಬಾವಿಗಳಿಗೆ ನೀರು, ಮಳೆ ಇಲ್ಲ ಅಂದರೆ ಇಲ್ಲಿ ಎದೆಯ ಅಂಗಳ ಒಣಗಿದಂತೆ ಭಾಸವಾಗುತ್ತದೆ. ಅಪ್ಪ ಸತ್ತ ಮೇಲೆ, ಅಮ್ಮನನ್ನು ಮಗುವಿನಂತೆ ಜೋಪಾನವಾಗಿ ಕಾಪಿಟ್ಟುಕೊಂಡು ಬದುಕುತ್ತಿದ್ದೇನೆ. ಇದೆಲ್ಲ ನನ್ನ ಊರಿನ ಮಣ್ಣಿನ ಸಂಸ್ಕಾರ ಅಂತಲೇ ಹೇಳಬಹುದು. ಇಲ್ಲಿ ಯಾವ ದೊಡ್ಡತನ ಮತ್ತು ಸ್ವಾರ್ಥವಿಲ್ಲ. ಎಲ್ಲರನ್ನೂ, ಎಲ್ಲವನ್ನೂ  ಗೌರವಿಸುವಂತೆ ಕಲಿಸಿದ ಪುಣ್ಯ ಭೂಮಿ ನಮ್ಮೂರು. ಆದರೆ ಎಲ್ಲೇ ಹೋದರು, ಏನೇ ಮಾಡಿದರೂ ಸಮಾಧಾನವೇ ಇಲ್ಲ. ಹುಟ್ಟಿದ, ಬಾಲ್ಯ ಕಳೆದ ಊರು ಬಿಟ್ಟು ಬದುಕುವುದು ಅರ್ಥವಿಲ್ಲ ಎನಿಸುತ್ತಿದೆ.  ಅಂತರ್ಮುಖಿಯಾಗಿ ಹೀಗೆಲ್ಲ ಯೋಚಿಸಿದರೆ ಸರಿ ಆದರೆ ಪ್ರಜ್ಞಾವಂತ ಸ್ಥಿತಿಯಲ್ಲೇ ಭಾವುಕನಾಗುತ್ತೇನೆ. ಊರಿನಲ್ಲಿ ಪೂರ್ವಿಕರ ಊಸಿರಿದೆ. ಮಾತೇ ಆಡಲು ಆಗದಷ್ಟು ಪುರಾವೆಗಳು ಧ್ಯಾನಸ್ಥ ಮಟ್ಟಕ್ಕೆ ಉಸಿರು ತುಂಬುತ್ತವೆ. 

ಸುಮ್ಮನೆ ಮಳೆ ದಿಟ್ಟಿಸುತ್ತಾ ಕುಳಿತವನ ಕಣ್ಣುಗಳಲ್ಲಿ ನೀರು ತುಂಬಿ ಹಜಾರವೆಲ್ಲ ಕಲಸಿಕೊಂಡಂತೆ ಕಾಣುತ್ತಿದೆ. ಊರು ಬಾ ಎಂದು ಕರೆಯುತ್ತಿದೆ. ಮನ ಕರಗಿದೆ.

‍ಲೇಖಕರು Avadhi

September 14, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Mehaboob Mathad

    ವಾಹ್!

    ನಿಮ್ಮೂರ ಬಗ್ಗೆ ಓದುತ್ತ ಓದುತ್ತ ಭಾವುಕನಾದೆ.

    ತುಂಬ ರಚನಾತ್ಮಕ ಮತ್ತು ಸಾಂಸ್ಕೃತಿಕ ಬರೆಹ.

    ನನಗೂ ನನ್ನೂರ ಬಗ್ಗೆ ಬರೆಯುವಂತೆ ಪ್ರೇರೇಪಿಸಿತು.

    ‘ಜೋಗಿ’ ಅವರ “ಗುರುವಾಯನಕೆರೆ” ನೆನಪಾಯಿತು.

    ಧನ್ಯವಾದಗಳು ಸರ್.

    ಮೆಹಬೂಬ್ ಮಠದ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: