ನಟೋರಿಯಸ್ ಕೈದಿಗಳ ಜೊತೆಯಲ್ಲಿ..

ಹುಲುಗಪ್ಪ ಕಟ್ಟೀಮನಿ

ಸೆಪ್ಟೆಂಬರ್‍ 19 ಬಿ.ವಿ.ಕಾರಂತರ ಜನ್ಮದಿನ. ರಂಗಭೂಮಿಯಲ್ಲಿರುವವರಿಗೆ ಕಾರಂತರ ನೆನಪೇ ಒಂದು ರೋಮಾಂಚನ. ಅವರ ನೆನಪಿಗೆ ಮತ್ತು ಗೌರವಕ್ಕೆ ಸಲ್ಲಿಸಿದ ನುಡಿ ನಮನ ಇಲ್ಲಿದೆ.

ನಾನು ಮೂಲತಃ ನಟ. ನನ್ನ ಗುರು ಬಿ.ವಿ ಕಾರಂತರು. ಇವರು ಭಾರತೀಯ ಆಧುನಿಕ ರಂಗಭೂಮಿಯ ಆದಿ ಪುರುಷರಲ್ಲೊಬ್ಬರು.

ನಟನೆ ಎಂದರೆ ಬರೆದ ಸಾಲುಗಳನ್ನು ಉರುಹಚ್ಚಿ ಹೇಳುವುದಲ್ಲ. ಅದು ಆದ ಅನುಭವದಿಂದ ಅರಳಬೇಕು. ನಟನೆ ಅದು ನಿತ್ಯದ ಬದುಕಿನ ಕನ್ನಡಿ. ನಟನಿಗೆ ಬೇಕಾಗುವ ಕಚ್ಚಾ ಮಾಲು ಸಿಕ್ಕುವುದು, ಅವನು ಸುತ್ತ  ಕಟ್ಟಿಕೊಂಡ ಜಂಜಾಟದ ಬದುಕಿನಲ್ಲಿ .ನಟನೂ ಈ ಸಮಾಜದ ಒಂದು ಭಾಗವಾದರೂ ತನ್ನ ಕಣ್ಣು , ಕಿವಿ ,ಮನಸ್ಸನ್ನು ಸದಾ ತೆರೆದಿಟ್ಟುಕೊಂಡು, ಗುಬ್ಬಚ್ಚಿ ತನ್ನ ಕತ್ತೊರಳಿಸಿ , ಕತ್ತೊರಳಿಸಿ ತನ್ನ ಆಹಾರ ಹುಡುಕುವಂತೆ  ತನ್ನ ಕಚ್ಚಾ ಮಾಲಿಗಾಗಿ ಜೋಳಿಗೆ ಹಿಡಿದು ಅಲೆದಾಡಬೇಕು.

ನಟನ ಸ್ವಂತ ಖಾಸಗೀ ಜೀವನದಲ್ಲಿ ಆದ ಅನುಭವದಿಂದ  ಘಮಘಮಿಸಿ ರಂಗದ ಮೇಲೆ ಅರಳುವುದಕ್ಕೆ  “ನಟನೆ” ಅನ್ನುತ್ತಾರೆ, ಪರರ  ನೋವನ್ನೇ …ತನ್ನ ನೋವೆಂಬಂತೆ  ಅಳುವ ಸೋಗು ಹಾಕುವುದಕ್ಕೆ  “ಅನುಕರಣೆ ” ಅನ್ನುತ್ತಾರೆ.ಈ ಎರಡರ ವ್ಯತ್ಯಾಸ ನಟ ಅರಿಯಬೆರಕು. ಅದಕ್ಕೆ king lear ವೇಷವನ್ನು 60 ವರ್ಷದ ನಂತರವೇ ತೊಡಬೇಕು.

ಈ ಸತ್ಯವನ್ನು ನಮ್ಮ ಗುರುಗಳು ರಂಗಾಯಣದ 25 ಕಲಾವಿದರಿಗೆ ಮನನ ಮಾಡಿಸಿದರು. ಗುರು ಕಾರಂತರು ಹಲವು ವರ್ಷ National School of Drama ದ ನಿರ್ದೇಶಕರಾಗಿ , ಹಲವು ವರ್ಷ ಮಧ್ಯ ಪ್ರದೇಶದ ಭೂಪಾಲಿನಲ್ಲಿ ರಂಗಮಂಡಲವನ್ನು ಕಟ್ಟಿ ಬೆಳೆಸಿ ನಂತರ 1989 ರಲ್ಲಿ ಕರ್ನಾಟಕದಲ್ಲಿ  ರಂಗಾಯಣವನ್ನು ಕಟ್ಟಿದರು. ಮೇಲಿನ ಸತ್ಯದ ಮನವರಿಕೆಗಾಗಿ  ನಮ್ಮ ಮೇಷ್ಟ್ರು ನಮ್ಮನ್ನೆಲ್ಲ ವಾರಕ್ಕೆ ಒಂದು ದಿನ ಹೊರಗಡೆ  Bus – Stand ,Market place, Railway station ಗೆ ಕರೆದೊಯ್ದು ,ಜನರ ನಿತ್ಯದ ಜೀವನವನ್ನು ಗಮನಿಸಿ ಎಂದು ನಮ್ಮನ್ನು ಬಿಟ್ಟುಬಿಡುತ್ತದ್ದರು.ಅಲ್ಲಿ ನಾವೆಲ್ಲ ಚದುರಿ ಕಳೆದುಹೋಗುತ್ತಿದ್ದೆವು. ನಂತರ ಜನರ “ಹಾವ – ಭಾವ” “ನಡೆ – ನುಡಿ” ಗಳನ್ನು ಹೆಕ್ಕಿ , ಹೆಕ್ಕಿ ಜೋಳಿಗೆ ಭರ್ತಿ ಮಾಡುತ್ತಿದ್ದೆವು. ಚಿಂದಿ ಆಯುವ ಬದುಕಿನಂತೆ.

ಹೀಗೆ  ನಾವು ಯಾವುದೇ ಊರಿನಲ್ಲಿ ಪ್ರದರ್ಶನಕ್ಕೆ ಹೋದಾಗ ಅಲ್ಲಿಯ ವಿಷೇಶತೆಯನ್ನು ಗಮನಿಸುತ್ತಿದ್ದೆವು. ಕೊನೆ ಪಕ್ಷ ಅಲ್ಲಿಯ ಸಾಹಿತಿ , ಕಲಾವಿದರನ್ನು ಭೇಟಿ ಮಾಡಿ ಮಾತಾಡಿಸಿ, ಅವರ ಅನುಭದ ಮಾತುಗಳನ್ನು ನಮ್ಮ ಜೋಳಿಗೆಯಲ್ಲಿ ತುಂಬಿಸುತ್ತಿದ್ದೆವು.

ಹೀಗಿರುವಾಗ, 1997 ರ ಆರಂಭದಲ್ಲಿ ನನ್ನ ಬಳ್ಳಾರಿ ಜಿಲ್ಲೆಗೆ ರಂಗಾಯಣವು ಒಂದು ವಾರದ camp ಮಾಡಿತು. ಬಳ್ಳಾರಿ ಕಡು ಬಿಸಿಲಿಗೆ ಹಾಗೂ ಕಠಿಣ ಶಿಕ್ಷೆಯ ಜೈಲಿಗೆ ಹೆಸರಾಗಿತ್ತು .( ಕರ್ನಾಟಕದ ಇತರ ಕಾರಾಗೃಹಗಳಲ್ಲಿ ಪ್ರಶ್ನೆ  ಮಾಡುವ  , ಎದುರು ಮಾತನಾಡುವ ನಟೋರಿಯಸ್ ಕೈದಿಗಳನ್ನು ರಾತ್ರೋ ರಾತ್ರಿ ಬಳ್ಳಾರಿ ಜೈಲಿಗೆ ಕರೆದುಕೊಂಡು ಹೋಗಿಬಿಡುತ್ತಾರೆ. ಒಂದರ್ಥದಲ್ಲಿ ಎತ್ತಿಕೊಂಡೇ ಹೋಗುತ್ತಾರೆ.ಅಲ್ಲಿ ಎಂತಹ ಪುಂಡಾಟದವನೂ ಮೆತ್ತಗಾಗುತ್ತಾನೆ.)ಅಂತೆಯೇ ನಮ್ಮ ಕಲಾವಿದರ ತಂಡವು ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ಅಲ್ಲಿಯ ಅಧಿಕಾರಿಯ ಅನುಮತಿ ಯೊಂದಿಗೆ ಒಳ ಕಾಲಿಟ್ಟಿತ್ತು.

ಅಲ್ಲಿಯ ವರೆಗೂ ನಮಗೆಲ್ಲ ಜೈಲೆಂದರೆ , ಕೈದಿಗಳೆಂದರೆ, ಚಲನ ಚಿತ್ರಗಳಲ್ಲಿ ಬಿಂಬಿಸಿದಂತೆ ಕೈದಿಗಳ ಕೈ ಕಾಲುಗಳಿಗೆ ಸರಪಳಿ ತೊಡಿಸಿ ,ಕಂಬಿಗಳ ಹಿಂದೆ ನಿಲ್ಲಿಸಿ,ಅವರಿಂದ ಬಂಡೆ ಒಡೆಸುವುದು , ಮಣ್ಣು ಹೊರಿಸುವುದು ಇತ್ಯಾದಿ ಚಿತ್ರಗಳೇ ತುಂಬಿದ್ದವು. ಆದರೆ ಒಳ ಹೋದಾಗ ಬೇರೆಯೇ ಚಿತ್ರಣ  ಕಂಡಿತು. ಅಲ್ಲಿಯೂ ಚಿಕ್ಕ ಚಿಕ್ಕ ಮಂದಿರ , ಮಸೀದಿ , ಚರ್ಚ್ ಗಳಿದ್ದವು. ಅಪರಾಧಿಗಳು ಎಲ್ಲ ಧರ್ಮಗಳಲ್ಲೂ ಇರುವುದರಿಂದ. ಅಲ್ಲಿ ಮರಗೆಲಸ , ಕೈ ಮಗ್ಗ , ಟೈಲರಿಂಗ್, ತೋಟಗಾರಿಕೆ  ಹೀಗೆ ಸಣ್ಣ ಸಣ್ಣ  ಉದ್ಯೋಗ ಮಾಡ ಬಹುದಾಗಿತ್ತು. ಒಟ್ಟಿನಲ್ಲಿ  ಅದೊಂದು ಬಡಾವಣೆಯೇ ಎನ್ನುವಂತಿತ್ತು. ಆ ಹೊತ್ತಿಗೆ “ಬಂಧಿಕಾನೆಗಳು ಪರಿವರ್ತನ ಆಶ್ರಮಗಳಾಗ ಬೇಕು” ಯಾರೋ ಆಡಿದ ಮಾತಿನ ತುಣುಕುಗಳು ನೆನಪಾದವು.

ಜೊತೆಗೆ ನಮ್ಮ ಗುರುಗಳು ಮಧ್ಯ ಪ್ರದೇಶದ ರಂಗ ಮಂಡಲದಲ್ಲಿದ್ದಾಗ ಯಾವುದೋ ಕಾರಣ ಕ್ಕೆ ಅವರು ಎರಡು ತಿಂಗಳು ಜೈಲಿನಲ್ಲಿರುವ ಪ್ರಸಂಗ  ಬಂದಿತ್ತು. ಆ ಸಮಯದಲ್ಲಿ ಅವರು ಜೈಲಿನ ಅಧಿಕಾರಿಗೆ ನನಗೊಂದು ಹಾರ್ಮೋನಿಯಂ  ಕೊಡಿ  ಇವರಿಗೆ ಒಂದು ನಾಟಕ ಕಲಿಸುತ್ತೇನೆ ಎಂದಿದ್ದರಂತೆ. ಹಾಗೆಂದು ನಮ್ಮ ಬಳಿ ಅವರ ರಂಗದ  ಅನುಭವವನ್ನು ಹೇಳುತ್ತ… ಹೇಳುತ್ತ…ಇದನ್ನೂ ಹೇಳಿದ್ದರು. ಅವರ ಈ ಮಾತೇ ಈ ಕೆಲಸಕ್ಕೆ ಸ್ಪೂರ್ತಿಯಾಯಿತು. 

ಆ ಹೊತ್ತಿಗೆ ; ಯಾಕೆ ಇವರಿಂದ ಒಂದು ನಾಟಕ ಆಡಿಸಬಾರದು?  ಈ ಆಲೋಚನೆ ನನ್ನೊಳಗೆ ಹುಟ್ಟಿ ,ನನ್ನ ಹೆಂಡತಿ (ರಂಗಾಯಣದ ಕಲಾವಿದೆ,  ಪ್ರಮೀಳ ಬೆಂಗ್ರೆ) ಅವಳಲ್ಲಿ ಹೇಳಿ ಕೊಂಡೆ. Macbeth ಯುದ್ಧ ಗೆದ್ದು ಮನೆಗೆ ಬರುವಾಗ ದಾರಿಯಲ್ಲಿ ಸಿಕ್ಕ ಮೂರು ಜಕ್ಕಿಣಿಯರು ಆಡಿದ ಮಾತುಗಳನ್ನು ತನ್ನೊಳಗೆ ಇಟ್ಟು ಕೊಳ್ಳಲಾರದೆ ತನ್ನ ಹೆಂಡತಿಯೊಂದಿಗೆ ಹಂಚಿಕೊಳ್ಳುವಂತೆ…ಹಂಚಿಕೊಂಡೆ. ನನ್ನಲ್ಲಿ ಹುಟ್ಟಿದ ಎಲ್ಲ ಆಲೋಚನೆಗಳು ನನ್ನ ಹೆಂಡತಿಯಲ್ಲಿ ರೂಪ ಪಡೆಯುತ್ತಿದ್ದವು. ಅವಳೆಂದಳು “ಉತ್ತಮ ಕೆಲಸ ಹಾಗೂ ಮಹತ್ವ ಪೂರ್ಣದ್ದು. ಆದರೆ ಸಾಧ್ಯವೇ ? ಆಗುವುದಾದರೆ ಹೇಗೆ ಸಾಧ್ಯ? “

   ನಾನು ಈ ವಿಚಾರದ ಬೆನ್ನ ಹತ್ತಿದೆ. ಜೈಲಿನ ಕೈದಿಗಳಿಂದ ಮಾಡಿಸುವುದಾದರೆ ಯಾವ ನಾಟಕ ?  ಅದು ಹೇಗಿರಬೇಕು ? ಯಾರನ್ನು ಭೇಟಿ ಯಾಗ ಬೇಕು ?ಹೇಗೆ? ಸಾಧ್ಯವೇ ? ಅದು   ಜೈಲು – ಜೈಲಿನ ಕೈದಿಗಳು . ನಾನೋ… ನಾನೊಬ್ಬ ಸಾಮಾನ್ಯ  ಕಲಾವಿದ ಅಷ್ಟೆ. ಹುಟ್ಟಿಕೊಂಡ ಆಲೋಚನೆ ನಾನಾ ರೂಪ ಪಡೆಯುತ್ತಲೇ ಇತ್ತು.  ಹುಡುಕಾಡುವ ಬಳ್ಳಿ ಕಾಲಿಗೇ ತೊಡರಿದಂತೆ , ತಂದೆ – ತಾಯಿಯ  ಪುಣ್ಯ ಎನ್ನತ್ತಾರಲ್ಲ ಹಾಗೆ ಬಳ್ಳಾರಿ ಜಿಲ್ಲೆಯ ಪೋಲಿಸ್ ವರಿಷ್ಠಾಧಿಕಾರಿಗಳು (police superentendent) ಗೋಪಾಲ್ ಹೊಸೂರು ಸಿಕ್ಕರು. ಅವರಲ್ಲಿ ಬಡ ಬಡಿಸುತ್ತ ಈ ಆಲೋಚನೆ ಹಂಚಿಕೊಂಡೆ. ಅವರು ಚೆಂದದಿಂದ ಕೇಳಿಸಿ ಕೊಂಡರು. ಬೆರಗು, ಕೌತುಕ ದಿಂದ ಕೇಂದ್ರ ಕಾರಾಗೃಹ ಬಳ್ಳಾರಿಯಲ್ಲಿ ಕೈದಿಗಳಿಗಾಗಿ ಮನ: ಪರಿವರ್ತನ ರಂಗ ಶಿಬಿರಕ್ಕೆಚಾಲನೆ ಕೊಡಿಸಿದರು .

ಕಾರಾಗೃಹದಲ್ಲಿ ನಾವು ರಂಗಭೂಮಿಯನ್ನು ವಿಲಾಸಕ್ಕಾಗಿ , ಮೋಜಿಗಾಗಿ ,ಮನರಂಜನೆಗಾಗಿ ಮಾಡುತ್ತಿಲ್ಲ. ಅದಕ್ಕಾಗಿ ಹೊರಗಡೆ ಹವ್ಯಾಸಿ ತಂಡಗಳಿವೆ ,ನಟರಿದ್ದಾರೆ ಆ ವಿಚಾರ ಬೇರೆಯೆ. ಆದರೆ ಜೈಲೊಳಗೆ ನಾನು ನನ್ನ ಹೆಂಡತಿ ಮಕ್ಕಳೊಂದಿಗೆ ಕಾಲಿಟ್ಟದ್ದು ಒಂದು ನಿರ್ದಿಷ್ಟ ಗುರಿಯೊಂದಿಗೆ.ಇಲ್ಲಿ ನಾವು ಆಯ್ಕೆ ಮಾಡಿಕೊಂಡ ನಟರು ಸಾಮಾನ್ಯದವರಲ್ಲ. ಇವರೆಲ್ಲ  ಅಪರಾಧದ ಹಿನ್ನೆಲೆಯಿಂದ ಜೈಲಿಗೆ ಬಂದವರು. ಕಳ್ಳರು , ದರೋಡೆಕೋರರು , ಅತ್ಯಾಚಾರಿಗಳು, ಕೊಲೆಪಾತಕರು.  ಇವರು ಮಾಡಿದ ಅಪರಾಧಕ್ಕೆ ಶಿಕ್ಷೆಯೆಂದು ನ್ಯಾಯಾಲಯವು ಇಂತಿಷ್ಟು ವರ್ಷಗಳ ವರೆಗೆ ಜೈಲಿನಲ್ಲಿ ಕಾಲ ಕಳೆಯುವಂತೆ , ಅಲ್ಲಲ್ಲ “ಕೊಳೆಯುವಂತೆ”  ಮಾಡುತ್ತದೆ. 

ಅಲ್ಲಿ ಸತ್ತುವರೆದ ಮಹಾ ಗೋಡೆಗಳ ಮಧ್ಯೆ ,ಅಳತೆಯ  ಅನ್ನ ತಿಂದು ,ನಿರ್ಧಿಷ್ಟ ಪಡಿಸಿದ ಜಾಗದಲ್ಲಿಯೇ ಓಡಾಡಿ , ತನ್ನವರಿಂದ ದೂರಾಗಿ ಸೆರೆವಾಸಿ ಅಕ್ಷರಸಹ  ಒಂಟಿಯಾಗುತ್ತಾನೆ. ಅಲ್ಲಿರುವ ಪ್ರತಿಯೊಬ್ಬರೂ ಅವನಂತೆಯೇ. ಯಾರೂ ತಮ್ಮ ಗೋಳನ್ನು , ನೋವನ್ನು ಯಾರ ಹತ್ತಿರವೂ ಯಾರೂ ಹೇಳಿ ಕೊಳ್ಳುವುದಿಲ್ಲ. ಯಾರ ನೋವು ಯಾರಿಗೂ ಬೇಡವಾಗಿರುತ್ತದೆ. ಮನುಷ್ಯನ ಎದೆ ಭಾರವಾದಾಗ ಅದು ಹಗುರಾಗುವುದು ಮತ್ತೊಬ್ಬರ ಬಳಿ ಹಂಚಿಕೊಂಡಾಗಲೇ ಆದರೆ ಅಲ್ಲಿ ಅದು ಸಾಧ್ಯವಾಗದೆ  , ಸೂಕ್ಷ್ಮ ಮನಸ್ಸಿನವನು ಮಾನಸಿಕವಾಗಿ ಬಳಲುತ್ತಾನೆ. “ಮಾನಸಿಕ ರೋಗಿ “ಎಂದು ಘೋಷಿಸಲ್ಪಡುತ್ತಾನೆ.

ಸುತ್ತುವರಿದ ಗೋಡೆಯ ಮಧ್ಯೆ  ಮತ್ತೊಂದು ಗೋಡೆಯನ್ನು ತನ್ನ ಸುತ್ತ   ತಾನೇ ನಿರ್ಮಿಸಿಕೊಂಡು, ಜೈಲಿನ ಏಕತಾನತೆಯ ಬದುಕಿನಿಂದ ಮತ್ತು  ಮಾನಸಿಕ ಅಸ್ವಸ್ಥರಾಗುತ್ತಾನೆ. ಬಹುತೇಕ ಅಂತವರಿಂದಲೇ ಜೈಲು ತುಂಬಿರುತ್ತದೆ. ಎಲ್ಲರೂ ಒಂದಲ್ಲಾ  ಒಂದು ಕಾರಣದಿಂದ ಅಸ್ವಸ್ಥರಾದವರೆ . ಯಾರ ಮುಖದಲ್ಲೂ ಗೆಲುವಿರುವುದಿಲ್ಲ. ವಿಳಸ ವಿಲ್ಲದ ಮುಖಗಳು.

  ಜೈಲುಗಳು ಪರಿವರ್ತನ ಆಶ್ರಮಗಳಾಗಬೇಕೆಂಬುದು ನಮ್ಮ   ಮೂಲ ಕಲ್ಪನೆ. ಸಮಾಜದ ಮೂಲದಲ್ಲಿ  ಅದರ ಕಲ್ಪನೆ ಹಾಗೇ ಇದೆ. ಒಬ್ಬ ಅಪರಾಧಿ ತಾನು ಮಾಡಿದ ತಪ್ಪಿಗೆ ಶಿಕ್ಷೆ ಆಗಲೇಬೇಕು. ಆದರೆ ಆ ಶಿಕ್ಷೆ ಎಡವಿ ಬಿದ್ದು ಮಾಡಿಕೊಂಡ ಗಾಯಕ್ಕೆ “ಮುಲಾಮು” (ಔಷಧಿ )ಹಚ್ಚುವಂತಿರಬೇಕು. ಅವನು ಬಿದ್ದದ್ದು  “ಆಕಸ್ಮಿಕ” ಎನ್ನುವುದನ್ನು ನೆನಪಿನಲ್ಲಿಡಬೇಕು. ಈ ಶಿಕ್ಷೆ ಚಿಕಿತ್ಸೆಯ ರೂಪದಲ್ಲಿಬೇಕು.

ಅಪರಾಧದ ಮೂಲ ಕಾರಣವನ್ನು (ಮನಸ್ಸನ್ನು ) ಗುರುತಿಸಿ ಅವನನ್ನು ಪರಿವರ್ತಿಸಬೇಕು. ಅದು  ಅಳುವ ಮಗುವಿಗೆ  ಜೋಗುಳ ದಂತೆ . ಪ್ರೀತಿಯಿಂದ ಗೆಲ್ಲಲಾಗದ್ದು ಯಾವುದೂ ಇಲ್ಲ. ಕ್ಷಣಿಕದ ಆವೇಷಕ್ಕೆ ಒಳಗಾಗಿ , ಸಂಯಮವನ್ನು ಕಳೆದುಕೊಂಡು ಮಾಡಿದ ತಪ್ಪಿಗೆ , ಜೈಲಿಗೆ ಕಾಲಿಟ್ಟ ದಿನವೇ ಈ ತಪ್ಪು ಮಾಡ ಬಾರದಿತ್ತು ಎಂದು ಗೊಳಾಡುವವರೂ  ಇದ್ದಾರೆ . ಇವರೆಲ್ಲ ಸಾಮಾನ್ಯವಾಗಿ ಹಳ್ಳಿಯವರೆ. ಸರಿಯಾದ ಮಾರ್ಗದರ್ಶನ ಇಲ್ಲದವರು.

‍ಲೇಖಕರು Avadhi

September 14, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: