ಉಸ್ಮಾನ್ ಚಿಮ್ಮಲಗಿ ಓದಿದ- ‘ಬೆತ್ತಲೆ ಸಂತ’

ಸ್ವಾಭಿಮಾನದ ಬದುಕನ್ನು ಪ್ರತಿಪಾದಿಸುವ ‘ಬೆತ್ತಲೆ ಸಂತ’

ಉಸ್ಮಾನ್ ಚಿಮ್ಮಲಗಿ

ಈ ಸಂಕಲನದಲ್ಲಿ ನನಗೆ ತುಂಬಾ ಕಾಡಿದ ಕತೆಗಳೆಂದರೆ ಗುಲಾಬಿ ಹೂವಿನ ಫ್ರಾಕು, ಮುರಿದ ಕೊಳಲಿನ ನಾದ, ಬೀದಿಗೆ ಬಿದ್ದ ಬೀದಿ, ರೋಗಗ್ರಸ್ತ ಹಾಗೂ ಜಸ್ಟೀಸ್ ಫಾರ್ ದುರುಗಿ. ಇಲ್ಲಿನ ಬಹುತೇಕ ಕತೆಗಳು ಸಮಾನತೆಯ ಬದುಕನ್ನು ಪ್ರತಿಪಾದಿಸುತ್ತವೆ ಹಾಗೂ ಓದುಗರನ್ನು ಬಿಡದೆ ಕಾಡುತ್ತವೆ. ಪಾತ್ರಗಳ ಜೀವಂತಿಕೆ ವಿಭಿನ್ನ ಕಥಾ ವಸ್ತುಗಳು ಕತೆಗಾರನ ಪ್ರಾದೇಶಿಕ ಭಾಷೆಯ ಬಳಕೆ ಇಲ್ಲಿ ಗಮನ ಸೆಳೆಯಬಹುದಾದ ಅಂಶಗಳಾಗಿವೆ.

ಸಣ್ಣ ಸಣ್ಣ ವ್ಯಾಪಾರಿಗಳು ಅನುಭವಿಸುವ ಸಂಕಟಗಳ ಮೇಲೆ ಇಲ್ಲಿನ ಕತೆಗಳು ಬೆಳಕು ಚಲ್ಲುತ್ತವೆ. ಓದಿಯಾದ ಮೇಲೆ ನಮ್ಮದೆ ಬದುಕಿನ ಕತೆಗಳನ್ನು ಬರೆದಿದ್ದಾರೇನೋ ಎಂದು ಓದುಗನಿಗೆ ಅನಿಸದೆ ಇರದು. ಓದುಗನಿಗೆ ಹತ್ತಿರವಾದ ವಿಷಯ ವಸ್ತುಗಳನ್ನಿಟ್ಟುಕೊಂಡು ಅವನ ಮನಸ್ಸಿನಾಳಕ್ಕೆ ಇಳಿಯುವ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದಾರೆ. ಇಲ್ಲಿ ನಿರ್ಜೀವ ವಸ್ತುಗಳನ್ನು ಜೀವಿಗಳಂತೆ ಚಿತ್ರಿಸುವ ಅನೇಕ ರೂಪಕಗಳಿರುವುದು ವಿಶೇಷ. ಎಲ್ಲಾ ಕತೆಗಳು ಪ್ರಭುದ್ಧತೆಯೆಡೆಗೆ ಸಾಗುತ್ತಿವೆ ಎಂದೆಣಿಸುತ್ತದೆ.

ಇವರ ‘ಗುಲಾಬಿ ಹೂವಿನ ಫ್ರಾಕು’ ಮುಸ್ಲೀಂ ಮಹಿಳೆಯ ಸಂವೇದನೆಗಳನ್ನು ತೆರೆದಿಡುವ ಹಾಗೂ ಓದುಗನಿಗೆ ತುಂಬಾನೆ ಕಾಡುವ ಕತೆಯಾಗಿದೆ. ಕತೆಯಲ್ಲಿವಿಧವೆ ಪರ್ವಿನ್ ಳಿಗೆ ಬಕ್ ಬಾರ್ಲು ಬಿದ್ದಿದ್ದ ತನ್ನ ಬದುಕನ್ನು ಸೀದಾ ಮಾಡುವ ಅನಿವಾರ್ಯತೆ. ಮಗಳು ಹಸೀನಾಳಿಗೆ ಹೊಸ ಫ್ರಾಕು ಧರಿಸುವ ಕನಸು. ಇಬ್ಬರಿಗೂ ವ್ಯಾಪಾರ ಬಲಪಡಿಸಿ ಹಲ್ಕಟ್ ಭಾಡ್ಯಾ ಖಾದರನ ಸಾಲ ತೀರಿಸಿ ಅವನ ಕಿರುಕುಳದಿಂದ ತಪ್ಪಿಸಿಕೊಂಡು ಬದುಕು ಚಂದ ಮಾಡಬೇಕೆಂದು ಹೊರಟವರಿಗೆ ಇಂದಿನ ಸ್ಪರ್ಧಾ ಮಾರುಕಟ್ಟೆಯಲ್ಲಿ ಇವರ ವ್ಯಾಪಾರಕ್ಕೆ ನೆಲೆ ಇಲ್ಲದಂತಾಗಿ ಬದುಕು ಕತ್ತಲ ರಾಶಿಯಂತಾಗುತ್ತದೆ. 

ಕೊನೆಗೆ ಮಾನಕ್ಕಾಗಿ ಗಂಡನ ತಾಳಿ ಮಾರಿ ಅವನು ಉಸಿರಾಡಿದ ಮನೆಯಲ್ಲದ ಮನೆ ಉಳಿಸಿಕೊಳ್ಳಲು ಮತ್ತಷ್ಟು ಸಂಕಷ್ಟಗಳ ಸಂಕೋಲೆಯೊಳಗೆ ಬದುಕು ಸಿಲುಕಿಕೊಳ್ಳುತ್ತದೆ. ಸಂಕೋಲೆಯಿಂದ ಇವರು ಬಂಧಮುಕ್ತಗೊಳ್ಳುವರೋ? ಅಥವ ಇಲ್ಲವೋ? ಸದ್ಯ ನಾಳೆಯ ಹಬ್ಬಕ್ಕೆ ಮಗಳಿಗೆ ಹೊಸ ಫ್ರಾಕು ಧರಿಸಲಾಗದೆ ಅಪ್ಪ ಕೊಡಿಸಿದ ಗುಲಾಬಿ ಹೂವಿನ ಫ್ರಾಕು ಹಬ್ಬದ ಸಂಭ್ರಮ ತುಂಬುತ್ತದೆ. ಅಲ್ಲದೆ ಇಲ್ಲಿ ಪರ್ವಿನ್  ಸ್ವಾಭಿಮಾನದ ಬದುಕಿಗಾಗಿ ತಾಳಿಯನ್ನೆ ಮಾರಿ ಖಾದರ್ ನಂತಹ ಪುರುಷ ಸಮಾಜಕ್ಕೆ ದಿಟ್ಟ ಉತ್ತರ ಕೊಡುವುದರೊಂದಿಗೆ ಕತೆ ಮುಕ್ತಾಯಗೊಳ್ಳುತ್ತದೆ. ಕನಸುಗಳನ್ನು ಬಲಿಕೊಟ್ಟು ಜೀವನ ಗೆಲ್ಲಲು ತಾಯಿಗೆ ನೆರವಾಗುವ ಹಸೀನಾಳದ್ದು ಹೋರಾಟದ ಬದುಕೆನ್ನಬಹುದು. ವ್ಯಾಪಾರದಲ್ಲಿ ನೆಲೆ ಕಳೆದುಕೊಳ್ಳುವ ಸಣ್ಣ ಸಣ್ಣ ವ್ಯಾಪಾರಸ್ಥರು ಒಂದೆಡೆಯಾದರೆ ಅವರನ್ನು ಶೋಷಿಸುವ ಸಾಲಗಾರರು ಮತ್ತೊಂದೆಡೆ. 

ಈ ಸಂಕಲನದಲ್ಲಿ ಓದುಗನಿಗೆ ತುಂಬಾನೆ ಕಾಡುವ ಮತ್ತೊಂದು ಕತೆ ‘ರೋಗಗ್ರಸ್ತ’ ಕತೆಯಾಗಿದೆ. ಸಮಾಜದಲ್ಲಿ ಮನುಷ್ಯನಿಗೆ ನಿಜವಾಗಲೂ ಕಷ್ಟಕಾಲದಲ್ಲಿ ಸಂಬಂಧಗಳು ದೂರಾಗಿ ಹೇಗೆ ತಿರುಗಿ ಬೀಳುತ್ತವೆ ಎನ್ನುವುದನ್ನು ಕತೆಗಾರ ಈ ಕತೆಯ ಮೂಲಕ ಸೂಚ್ಯವಾಗಿ ತಿಳಿಸುವ ಪ್ರಯತ್ನ ಮಾಡಿದ್ದಾನೆ. ಮೇಲ್ನೋಟಕ್ಕೆ ಇದು ಕರೋನಾ ಕಾಲದ ಸಂಕಷ್ಟಗಳನ್ನು ಮುಸ್ಲೀಂ ಸಂವೇದನೆಗಳನ್ನು ಹೇಳಿದಂತೆನಿಸಿದರೂ ಆಳದಲ್ಲಿ ಎಲ್ಲಾ ಕಾಲದಲ್ಲೂ ಸಮಾಜದಲ್ಲಿರಬಹುದಾದ ಅಸಹಿಷ್ಣುತೆ ಜನಬಲ ಹೊಂದಿರುವವರ ದಬ್ಬಾಳಿಕೆಗಳನ್ನು ಸೂಚಿಸುತ್ತಿರುವಂತೆ ಕಾಣಿಸುತ್ತದೆ. ಬೀದಿಗೆ ಬಿದ್ದ ಕಾರ್ಮಿಕರ ನೋವುಗಳಿಗೆ ಸಮಾಜ ಕುರಾಡಾಗಿದೆ. ಇಲ್ಲಿ ಕತೆ ಓದುಗನ ಊಹೆ ಹುಸಿಗೊಳಿಸಿ ಅನಿರೀಕ್ಷಿತ ತಿರುವು ಪಡೆದುಕೊಳ್ಳುತ್ತದೆ, ಬದುಕಿಗೆ ಔಷದಿಯಾಗಬೇಕಾದ ಸಮಾಜವೇ ರೋಗಗ್ರಸ್ತಗೊಂಡಿದೆ ಎಂದು ಕತೆಗಾರ ಕಳವಳ ವ್ಯಕ್ತಪಡಿಸುತ್ತಾನೆ. ಸಮಾಜ ಹೀಗೆ ರೋಗಗ್ರಸ್ತಗೊಂಡಿರುವುದರಲ್ಲಿ ಮಾಧ್ಯಮಗಳ ಪಾತ್ರ ತುಂಬಾನೆ ಇದೆ.

‘ಬೆತ್ತಲೆ ಸಂತ’ ಕತೆಯಲ್ಲಿ ಶಂಕ್ರ ಒಬ್ಬ ಏಕಾಂಗಿ ಹಾಗೂ ಮೌನಿ. ಆತನ ಹೆಂಡತಿ ಪದ್ಮಾ ಸಿಡುಕಿ ಹಾಗೂ ಅತೃಪ್ತ ಮನಸಿನವಳು. ಆತನಿಗೆ ಆಗಾಗ ಬೆತ್ತಲೆ ಸಂತನ ಕನಸು ಬೀಳುತ್ತಿರುತ್ತದೆ. ಯಾರಿಗೂ ಬೀಳದ ಕನಸು ಇವನಿಗೆ ಮಾತ್ರ ಬಿದ್ದು ಅದರಿಂದ ತುಂಬಾ ಸಂಕಟಗಳನ್ನೂ ಸುಖಗಳನ್ನೂ ಅನುಭವಿಸುತ್ತಾನೆ. ಆ ಕನಸಿನಲ್ಲಿ ಆಗಂತುಕನೊಬ್ಬ ಶಂಕ್ರನನ್ನು ಕರೆದಂತೆನಿಸುತ್ತದೆ. ಯಾಕೊ ಆತನು ಎಚ್ಚರಿದ್ದಾಗ ಗೋಡೆ ಮೇಲಿನ ಗಡಿಯಾರದ ಮುಳ್ಳುಗಳನ್ನು ಯಾರೊ ಹಗ್ಗ ಕಟ್ಟಿ ಎಳೆದಂತೆ, ಮಾನವರೆಲ್ಲರೂ ಯಂತ್ರಗಳಂತೆ ಜಗತ್ತು ಮೂಕನಂತೆ ಕಾಣತೊಡಗುತ್ತಾರೆ.

ಸಂಸಾರದಲ್ಲಿ ಸಿಗದ ಸಂತಸ ಮೌನದಲ್ಲಿ ಅನುಭವಿಸುತ್ತಾನೆ. ಬೆತ್ತಲಾಗುವುದೆಂದರೆ ಬರಿ ಬಟ್ಟೆ ಬಿಚ್ಚುವುದಲ್ಲ ಮನಸ್ಸಿಗಂಟಿದ ಪ್ರಾಪಂಚಿಕ ಬಟ್ಟೆಯನ್ನು ಕಳಚಿ ಬೆತ್ತಲಾಗಬೇಕು. ತನ್ನನ್ನು ತಾನು ಅರ್ಥಮಾಡಿಕೊಂಡವನೇ ಸಂತ. ಇಲ್ಲಿ ಲೌಕಿಕ ಜೀವನದ ಜಂಜಾಟಗಳಿಂದ ಬೇಸತ್ತು ಮನಸ್ಸಿಗಂಟಿದ ಪ್ರಾಪಂಚಿಕ ಬಟ್ಟೆಯನ್ನು ಕಳಚಿ ತನ್ನನ್ನು ತಾನು ಅರ್ಥಮಾಡಿಕೊಂಡಿದ್ದಕ್ಕಾಗಿ ಆ ಕನಸು ಬೀಳುತ್ತಿರಬಹುದೇ? ಇದನ್ನು ಬದುಕಿನ ಸೋಲೆನ್ನಬೇಕೊ? ಅಥವ ಗೆಲುವೆನ್ನಬೇಕೊ? ಈ ಬೆತ್ತಲೆ ಸಂತನ ಪಯನ ಹೊರಟಿದ್ದಾದರೂ ಎಲ್ಲಿಗೆ ? ಈ ಕತೆ ಬಾಹ್ಯದಲ್ಲಿ  ಪ್ರಾಪಂಚಿಕ ಖಾಲಿತನ ಹೇಳತೊಡಗಿದರೂ ಅಂತರ್ಯದಲ್ಲಿ ಏನನ್ನೊ ಹೇಳಲು ಹೊರಟಂತಿದೆ.

‘ಜಸ್ಟೀಸ್ ಫಾರ್ ದುರುಗಿ’ ಕತೆಯಲ್ಲಿ ಜಮೀನಿನ ಕಾರಣಕ್ಕಾಗಿ ಹಳ್ಳಿಯ ಗೌಡರು ತಮ್ಮ ಮನೆಯ ಜೀತದಾಳುಗಳಾಗಿದ್ದ ಈರಪ್ಪ ಹಾಗೂ ಅವನ ಹೆಂಡತಿ ಮಾದಿಯನ್ನು ಕೊಂದು ಮಗಳು ದುರುಗಿಯ ಮೇಲೆ ಅತ್ಯಾಚಾರಮಾಡಿ ಚಿತ್ರಹಿಂಸೆ ನೀಡಿ ಕೊಲ್ಲುತ್ತಾರೆ. ಇದು ತಲತಲಾಂತರಗಳಿಂದ ಸರ್ವವ್ಯಾಪಿಯಾಗಿ ದಲಿತರ ಮೇಲೆ ಆಗುತ್ತಲೇ ಇರುವ ಶೋಷಣೆ ಕ್ರೌರ್ಯಗಳನ್ನು ಚಿತ್ರಿಸಿದೆ ಹಾಗೂ ಆ ಹೀನ ಕೃತ್ಯಗಳು ಈಗಲೂ ಮುಂದುವರೆದಿವೆ ಎನ್ನುವುದೇ ಖೇಧಕರ. 

ಜಾತಿ ಹಾಗೂ ರಾಜಕೀಯ ಬಲದಿಂದ ಬಲವಂತರು ರಾಜಾರೋಷವಾಗಿ ಇದೆಲ್ಲವನ್ನೂ ಮಾಡುತ್ತಾರೆ ಇದಕ್ಕೆ ಆಡಳಿತ ಹಾಗೂ ಸಮಾಜ  ಕುರುಡಾಗಿ ವರ್ತಿಸುತ್ತದೆ. ದುರುಗಿಯ ನ್ಯಾಯಕ್ಕಾಗಿ ಹೋರಾಡುವ ಸಂಘಟನೆಗಳ ಪ್ರಯತ್ನ ಇಲ್ಲಿ ದಲಿತರ ಬದುಕಿಗೆ ಸಣ್ಣ ಆಶಾಕಿರಣದಂತೆ ಕಾಣುತ್ತದೆ. ಇದು ಎಲ್ಲಿಯವರೆಗೆ ಹೀಗೆಯೇ ಮುಂದುವರೆಯುತ್ತದೆಯೊ ಗೊತ್ತಿಲ್ಲಾ. ಈ ಕತೆಯಲ್ಲಿ ಜಮೀನಿನಲ್ಲಿ ಬೇಸಾಯ ಮಾಡಲು ಹಪಿಹಪಿಸುವ ಈರಪ್ಪ ದುರುಗಿಯನ್ನು ನೋಡಿದರೆ  ಶಿವರಾಮ ಕಾರಂತರ ಚೋಮನ ದುಡಿ ಕಾದಂಬರಿ ನೆನಪಿಗೆ ಬರುತ್ತದೆ. ಇಲ್ಲಿ ಈರಪ್ಪ ಹಾಗೂ ದುರುಗಿ ಸಮಾನತೆಯ ಸ್ವಾಭಿಮಾನದ ಬದುಕನ್ನು ಪ್ರತಿಪಾದಿಸುತ್ತಾರೆ.

‘ಮುರಿದ ಕೊಳಲಿನ ನಾದ’ ಕತೆಯಲ್ಲಿ ಜಾತ್ರೆಯಲ್ಲಿ ಕೊಳಲು ಮಾರುವ ಗವಿಸಿದ್ಧ ಹೂ ಮಾರುವ ಹುಲಿಗೆಮ್ಮಳನ್ನು ಪ್ರೀತಿಸಿ ಮದುವೆಯಾಗಿ ಎಲ್ಲರಿಂದಲೂ ದೂರಾಗಿ ಬದುಕು ಸಾಗಿಸುತ್ತಿರುತ್ತಾನೆ. ಸತಿಯನ್ನು ಕಣ್ಣೊಳಗಿಟ್ಟು ಜತನಮಾಡುವ ಗವಿಸಿದ್ಧ ಅವರಿವರ ಮಾತು ಕೇಳಿ ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಹೋಗಿ ಯಾವುದೊ ಕಾರಣದಿಂದ ಮೈ ಮುರಿಸಿಕೊಂಡು ಬಂದು ಮನೆ ಸೇರುತ್ತಾನೆ. ಇಲ್ಲಿ ಅವನಿಗಾದ ಗಾಯ ಕಳ್ಳತನಕ್ಕೊ ಅಥವ ಜಾತಿಯ ಕಾರಣಕ್ಕೊ ಎಂಬ ಸಂದೇಹ ಓದುಗನಲ್ಲಿ ಮೂಡುತ್ತದೆ. ಗರ್ಭಿಣಿ ಹೆಂಡತಿಗೆ ಅವನನ್ನು ಜತನ ಮಾಡುವುದರೊಂದಿಗೆ ಹೊಟ್ಟೆಯಲ್ಲಿನ ಕೂಸನ್ನು ಜತನ ಮಾಡಿ ಬದುಕು ಗೆದ್ದು ತೋರಿಸಬೇಕಾಗಿದೆ. ಇಲ್ಲಿ ಬದುಕನ್ನು ಗೆದ್ದು ತೋರಿಸಬೇಕೆಂದು ಊರುಬಿಟ್ಟು ಹೋಗುವ ಅನೇಕರು ಹೇಗೆ ಕಷ್ಟಗಳಿಗೊಳಗಾಗಿ ಕೊನೆಗೆ ಬೇರೆಯವರಿಗೆ ಭಾರವಾಗುತ್ತಾರೆಂಬುದು ಈ ಕತೆಯಲ್ಲಿ ವ್ಯಕ್ತವಾಗಿದೆ.

‘ಬೀದಿಗೆ ಬಿದ್ದ ಬೀದಿ’ ಕತೆಯಲ್ಲಿ ತನ್ನ ಹಳ್ಳಿ ನಗರೀಕರಣಗೊಂಡು ಪರಿವರ್ತನೆಯಾದ ಕಾರಣಕ್ಕೆ ಚಿಂತಿತಗೊಂಡ ನಿಂಗಪ್ಪ ರಸ್ತೆ ಅಗಲೀಕರಣದ ವಿಚಾರ ಕೇಳಿ ಮತ್ತಷ್ಟು ಕಳವಳಗೊಳ್ಳುತ್ತಾನೆ. ಏನಾದರೂ ಮಾಡಿ ತಡಿಬೇಕು ಎಂದವನಿಗೆ ಹೆಂಡತಿಗೆ ಆರೋಗ್ಯ ತಪ್ಪಿ ದಾವಾಖಾನೆಯಲ್ಲಿ ಎರಡು ದಿನ ಉಳಿದು ಹಿಂದಿರುಗುವ ಹೊತ್ತಿಗೆ ಅಂಗಡಿ ಮರಗಳು ರಸ್ತೆ ಅಗಲೀಕರಣಕ್ಕೆ ಬಲಿಯಾಗಿರುವುದನ್ನು ನೋಡಿದಾಗ ಅವನ ಜೀವವೆ ಕಳೆದುಕೊಂಡಂತಾಗುತ್ತದೆ.

ವ್ಯಾಪಾರದಲ್ಲಿ ಸ್ಫರ್ಧೆ, ಪರಿಸರ ನಾಶ, ರಸ್ತೆ ಅಗಲೀಕರಣದಿಂದಾಗುವ ಮರಗಳ ಕಡಿತ, ಅಂಗಡಿಗಳ ನೆಲಸಮ, ಹಳ್ಳಿಗಾಡು ಮರಗಳಲ್ಲಿ ಉಸಿರಿಟ್ಟುಕೊಂಡಿರುವ ಕಥಾನಾಯಕನ ಪರಿತಾಪ ಇವೆಲ್ಲವೂ ಇಲ್ಲಿ ವ್ಯಕ್ತವಾಗಿವೆ. ಸಣ್ಣ ಸಣ್ಣ ವ್ಯಾಪಾರಸ್ಥರು ಅನುಭವಿಸುವ ನಷ್ಟಗಳು ಇಲ್ಲಿ ಕತೆಗಾರನಿಗೆ ಕಾಡಿವೆ ಎಂದೆನಿಸುತ್ತದೆ. ಬೀದಿಯಲ್ಲಿರುವ ಹಲವಾರು ಅಂಗಡಿಗಳು ಮರಗಳು ರಸ್ತೆ ಅಗಲೀಕರಣದ ಕಾರಣಕ್ಕೆ ಬೀಳಿಸಲಾಗಿ ಅಲ್ಲಿನ ವ್ಯಾಪಾರಸ್ಥರೆಲ್ಲರ ಬದುಕುಗಳು ಬೀದಿಗೆ ಬಿದ್ದು ಬೀದಿಯೆ ಬಿದ್ದಂತೆ ಬೋಳಾಗಿ ಕಾಣುತ್ತದೆ. ಬದುಕು ಕಳೆದುಕೊಂಡವರಿಗೆ ಜೀವಗಳೆ ಕಳೆದು ಹೋದಂತಾಗಿವೆ.

‘ಬಹಿಷ್ಕಾರ’ ಕತೆಯಲ್ಲಿ ಜಾತಿ ಮೋಹ, ನಾಯಕನ ಅಂಧಾನುಕರಣೆ, ಪಕ್ಷಗಳ ಮೇಲಿರುವ ಬದ್ಧತೆ ಹಾಗೂ ರಾಜಕೀಯ ತಂತ್ರ ಕುತಂತ್ರಗಳು ಊರಿನ ನೈಜ ಸಮಸ್ಯೆಗಳನ್ನು ಮರೆಮಾಚುವುದನ್ನು ಈ ಕತೆ ತೋರಿಸುತ್ತಿದೆ. ಹಾಗೂ ಸಮಸ್ಯೆಗಳ ನಿವಾರಣೆಗಾಗಿ ನಡೆಯುವ ಯಾವುದೇ ಹೋರಾಟ ಮುಷ್ಕರಗಳಿಗೆ ಮೇಲಿನ ಅಂಶಗಳು ತಡೆಗೋಡೆಗಳಾಗುತ್ತವೆ. ಆಗಾಗ ಸಮಾಜದಲ್ಲಿ ಹೋರಾಟದ ಪ್ರಯತ್ನಗಳು ನಡೆಯುವುದು ಅವುಗಳನ್ನು ಅಧಿಕಾರದಿಂದ ರಾಜಕಾರಣಿಗಳು ಹತ್ತಿಕ್ಕುವುದು ಕತೆಯಲ್ಲಿ ವ್ಯಕ್ತವಾಗಿದೆ. ಇದಕ್ಕೆ ಫಕೀರಜ್ಜರಂತಹ ಹಿರಿಯರು ನೀಲ ವೆಂಕ ಬಾಷಾ ನಾಗನಂತಹ ಅನೇಕ ಯುವಕರು ಬಲಿಯಾಗುತ್ತಲೇ ಇರುತ್ತಾರೆ.

‘ಚಾಕೋಲೇಟು’ ಕತೆಯಲ್ಲಿ ಹಳ್ಳಿಯಿಂದ ನಗರ ಪ್ರದೇಶದ ಆಂಗ್ಲ ಮಾಧ್ಯಮ ಶಾಲೆಗೆ ವಿದ್ಯಾಭ್ಯಾಸಕ್ಕೆ ಹೊರಡುವ ಶಿವಾನಂದನಿಗೆ ಹಳ್ಳಿ ಹಾಗೂ ನಗರ ಪ್ರದೇಶದ ಶಾಲೆಗಳ ಮಕ್ಕಳಿಗೂ ಕನ್ನಡ ಮಾಧ್ಯಮ ಹಾಗೂ ಆಂಗ್ಲಮಾಧ್ಯಮ ಶಾಲೆಗಳಿಗೂ ಇರುವ ವ್ಯತ್ಯಾಸ ಅನುಭವಕ್ಕೆ ಬರುತ್ತದೆ. ಹಣವಿದ್ದರೆ ಆಂಗ್ಲ ಮಾಧ್ಯಮ ಇಲ್ಲದಿದ್ದರೆ ಕನ್ನಡ ಮಾಧ್ಯಮ. ಹುಟ್ಟುಹಬ್ಬಕ್ಕೆ ಚಾಕೋಲೇಟು ಹಂಚುವ ಕನಸಿಗೆ ಬಡತನ ಅಡ್ಡಿಯಾಗಿ ಬೆಲ್ಲ ಹಂಚಿ ಅವಮಾನ ಅನುಭವಿಸಿ ಸಮಾಜದೊಂದಿಗೆ ಹೊಂದಿಕೊಳ್ಳಲಾಗದೆ ಏಕಾಂತಕ್ಕೆ ಮಾರುಹೋಗುತ್ತಾನೆ. ಇಂದಿನ ಶಿಕ್ಷಣ ಪದ್ಧತಿ ಶ್ರೀಮಂತರ ಹಾಗೂ ಬಡವರ ನಡುವೆ ಕಂದಕ ಸೃಷ್ಠಿಸುತ್ತಿರುವುದು ವಿಪರ್ಯಾಸ.

ಇಲ್ಲಿನ ಕತೆಗಳು ಒಟ್ಟಾರೆಯಾಗಿ ಮಹಿಳಾ ಸಂವೇದನೆಗಳು ದಲಿತ ಸಂವೇದನೆಗಳು ಮುಸ್ಲೀಂ ಸಂವೇದನೆಗಳು ಹಾಗೂ ಕಾರ್ಮಿಕರ ನೋವುಗಳನ್ನು ಹಿಡಿದಿಟ್ಟಿವೆ. ಇಸ್ಮಾಯಿಲ್ ತಳಕಲ್ ರವರ ಕತೆಗಳ ಕುರಿತು ಕೊನೆಯದಾಗಿ ಹೇಳುವುದಾದರೆ ಇಲ್ಲಿನ ಕತೆಗಳಲ್ಲಿ ನ್ಯೂನತೆಗಳೇ ಇಲ್ಲವೆಂದರೆ ತಪ್ಪಾಗುತ್ತದೆ. ಸಣ್ಣಪುಟ್ಟ ಕೊರತೆಗಳಿದ್ದರೂ ಕೂಡ ಇವರ ಕೆಲವು ಕತೆಗಳು ಶ್ರೇಷ್ಠ  ಕತೆಗಳ ಸಾಲಿಗೆ ಸೇರಬಹುದಾದವುಗಳಾಗಿವೆ. ಕತೆಗಾರನ ಓದು ಹಾಗೂ ಬರೆವಣಿಗೆಯ ಗಂಭೀರತೆ ಹೀಗೆಯೇ ಮುಂದುವರೆದು ಮುಂದಿನ ದಿನಗಳಲ್ಲಿ ಇನ್ನೂ ವಿಭಿನ್ನವಾದ ಉತ್ತಮ ಸೃಜನಶೀಲ ಕತೆಗಳನ್ನು ನೀಡುವಂತಾಗಲಿ ಎಂದು ಬಯಸುತ್ತೇನೆ.

‍ಲೇಖಕರು Admin

November 9, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: