ಅಚ್ಛೋದ ಸರೋವರದಂಥ ಕೆರೆ ಮತ್ತು ನಾನಲ್ಲದ ನಾನು…

ಸಿದ್ಧರಾಮ ಕೂಡ್ಲಿಗಿ

ನಿನ್ನೆ ಕಾಲೇಜಿಗೆ ರಜೆ. ಮಧ್ಯಾಹ್ನದವರೆಗೂ ನೆಮ್ಮದಿಯಾಗಿದ್ದ ಮನಸು ನಂತರ ಕಾಲು ಕೆರೆಯತೊಡಗಿತು. ಈ ಮನಸಿನ ಭಾವಗಳೇ ವಿಚಿತ್ರ. ಇನ್ನೇನು ನೆಮ್ಮದಿಯಾಗಿದೆ ಬಿಡು ಅನ್ನೋದರೊಳಗೇ ಏನಾದರೊಂದು ಬಯಕೆಯ ಪುಟ್ಟಿಯನ್ನು ಹೊತ್ತು ‘ನಡೆ ನಡೆ ಹೋಗೋಣ’ ಅನ್ನುತ್ತಿರುತ್ತೆ.

ಇನ್ನು ಮನಸು ಕಾಲು ಕೆರೆಯತೊಡಗಿದೊಡನೆ, ತಲೆಯೆಂಬೋ ತಲೆ ‘ಹೊರಡು ಹೊರಡು’ ಅಂತ ಕಾಯ್ದ ಕುಲುಮೆಯಂತಾಗತೊಡಗಿತು. ಇನ್ನೇನಿದೆ. ಕೆಮರಾ ಹೆಗಲಿಗೇರಿಸಿಕೊಂಡು ಸಿದ್ಧನಾದೆ. ಆದರೆ ಎಲ್ಲಿಗೆ ಎಂಬುದು ಇನ್ನೂ ನಿರ್ಣಯವೇ ಆಗಿರಲಿಲ್ಲ. ‘ಅಲ್ಲಿ ಹೋದರೆ ಹೇಗೆ ? ಇಲ್ಲಿ ಹೋದರೆ ಹೇಗೆ ?’ ಬರೀ ಇದೆ. ಒಮ್ಮೆ ಸಂಡೂರಿನ ಕಾಡಿನ ಕಡೆ ಮನಸು ಎಳೆದರೆ, ಅದರದೇ ಒಂದು ಭಾಗ ‘ಅಲ್ಲಿ ಇಲ್ಲಿ ಯಾಕಪ್ಪ ಇಲ್ಲೇ ಕೂಡ್ಲಿಗಿ ಹೊರವಲಯದಲ್ಲಿರೋ ದೊಡ್ಡ ಕೆರೆಗೆ ಹೋಗೋಣ’ ಅಂತ, ಇನ್ನೊಂದು ಭಾಗ ಇಣುಕಿ ಹಾಕಿ ‘ಇಲ್ಲ ಇಲ್ಲ ನೆಟ್ಟಗೆ ಬಳ್ಳಾರಿ ರಸ್ತೆಗೆ ಹೋದರೂ ಕಾಡಿದೆ ಅಲ್ಲೇ ಎಲ್ಲಾದರೂ ಹೊಕ್ಕರೆ ಸಾಕು’ ಅಂತ, ಮಗದೊಂದು ಪಕ್ಕದಲ್ಲಿ ನುಸುಳಿ ‘ಇಲ್ಲ ಬೇಡ ಉಜ್ಜಿನಿ ಕಾಡಿಗೆ ಹೋಗದೆ ಬಹಳ ದಿನಗಳಾದವು ನಡೆ’ ಅಂತ.

ಹೀಗೇ ಎಲ್ಲವು ಮುತ್ತಿ ತಲೆ ಜೇನುಹುಟ್ಟಿನಂತಾಗಿ ಗುಂಯ್ ಗುಡತೊಡಗಿತು. ನೋಡೋಣ ಎಲ್ಲಿಗಾಗುತ್ತೋ ಅಲ್ಲಿಗೆ ಅಂತ ಕಾರ್ ನ್ನು ಗುರುಗುಟ್ಟಿಸಿದೆ. ದಿಕ್ಕೆ ತಿಳಿಯದಂತಾಗಿದ್ದ ನನಗೆ ನೆಟ್ಟಗೆ ಪಟ್ಟಣದ ರಸ್ತೆ ಹಿಡಿದು ಹೊರಟೆ. ಅಲ್ಲಿನ ಸರ್ಕಲ್ ನಲ್ಲಿ ಒಂದೇ ಒಂದು ನಿಮಿಶ ಯೋಚಿಸಿದೆ, ಒಂದು ಉಜ್ಜಿನಿ ಕಡೆ ಹೋಗುವ ರಸ್ತೆ ಮತ್ತೊಂದು ಹೊಸಪೇಟೆ ಕಡೆ ಹೋಗುವ ರಸ್ತೆ, ಏನು ಮಾಡುವುದು ಅನ್ನೋದರೊಳಗೆ ಧುತ್ತೆಂದು ಅದೆಲ್ಲಿತ್ತೋ ಮನಸಿನಾಳದಿಂದ ಒಂದು ಯೋಜನೆ ಪ್ರತ್ಯಕ್ಷವಾಗಿಬಿಟ್ಟಿತು ‘ನಡೆ ಹೊಸಪೇಟೆ ರಸ್ತೆಯಲ್ಲಿ ಒಂದು ಕೆರೆ ಇದೆಯಲ್ಲ ಅಲ್ಲಿಗೇ ಹೋಗೋಣ’ ಅಂತ. ಕಣ್ಣುಮುಚ್ಚಿ ತೆರೆಯುವುದರಲ್ಲಿ ಕಾರಿನ ಸ್ಟೇರಿಂಗ್ ಹೊಸಪೇಟೆ ರಸ್ತೆಯ ಕಡೆ ತಿರುಗಿಸಿಬಿಡ್ತು. ನನಗೀಗಲೂ ಅಚ್ಚರಿ ಅದು ಹೇಗೆ ಕ್ಷಣಾರ್ಧದಲ್ಲಿ ಹೀಗೆ ನಿರ್ಧರಿಸಿ ಆ ಮಾರ್ಗಕ್ಕೆ ಹೊರಟೆನೋ ಅಂತ.

ಅಂತೂ ಇಂತೂ ಹೊಸಪೇಟೆ ರಸ್ತೆ ಹಿಡಿದು ರಾಷ್ಟ್ರೀಯ ಹೆದ್ದಾರಿಯೆಂಬೋ ನಿಟಾರಾದ, ಕುಡಿದ ನೀರು ಅಲುಗಾಡದ ರಸ್ತೆಯಲ್ಲಿ ಕಾರಿನ ಚಕ್ರ ತಿರುಗತೊಡಗಿದವು. ಅಕ್ಕಪಕ್ಕದಲ್ಲಿರುವ ವಾಹನಗಳನ್ನೇ ಗಮನಿಸುತ್ತ ಹೊರಟೆ. ಸುಮಾರು 15 ಕಿ.ಮೀ ದೂರದಲ್ಲಿ ಈ ಕೆರೆ ಇದೆ. ಮೊದಲೆಲ್ಲ ನೇರ ರಸ್ತೆಯಿಂದ ಕೆರೆಗೆ ಇಳಿದು ಹೋಗಿಬಿಡಬಹುದಿತ್ತು. ಪಕ್ಕದಲ್ಲಿಯೇ ಈ ಕೆರೆ ಎಷ್ಟೊಂದು ವಿಹಂಗಮವಾಗಿ ಕಾಣುತ್ತಿತ್ತೆಂದರೆ, ನೋಡಿದೊಡನೆ ಇಳಿದುಹೋಗಿಬಿಡೋಣ ಅನ್ನುವಷ್ಟು. ಯಾವಾಗ ಈ ರಾಷ್ಟ್ರೀಯ ಹೆದ್ದಾರಿ ಆಯ್ತೋ, ಕೆರೆ ರಸ್ತೆಯಿಂದ ಕಾಣದಾಗಿ, ರಸ್ತೆಗೆ ಅದರ ಮೇಲೆ ಓಡಾಡುವ ಭಾರಿ ವಾಹನಗಳಿಗೆ ಹೆದರಿ ಎಲ್ಲೋ ಅವಿತುಕೊಂಡಿದೆಯೇನೋ ಎಂಬಂತಾಗಿಬಿಟ್ಟಿದೆ. ಹಾಗೂ ಹೀಗೂ ನೋಡಿ ನಾನು ಪ್ರತಿಸಲವೂ ಇಳಿದುಹೋಗುವ ಜಾಡನ್ನು ನೋಡಿ ಒಂದೆಡೆ ಕಾರನ್ನು ನಿಲ್ಲಿಸಿದೆ.

ಆಗಲೇ ಮಧ್ಯಾಹ್ನ ಹೊತ್ತು ಮಗ್ಗಲು ಬದಲಿಸಿ ಸಂಜೆಯ ಕಡೆ ಮುಖ ಮಾಡಿತ್ತು. ಸೂರ್ಯ ‘ನಾನಿನ್ನೂ ನಿನ್ನ ಬೆವರು ಇಳಿಸ್ತೀನಿ ಯೋಚಿಸಬೇಡ’ ಎಂಬಂತೆ ಉರಿಕಾರುತ್ತಿದ್ದ. ಕಾಯ್ದ ನೆಲದ ಮೇಲೆ ನಿಧಾನವಾಗಿ ಆಚೀಚೆ ನೋಡುತ್ತ ಹೊರಟೆ. ಈಗ ಅಲ್ಲಿ ಹೆಚ್ಚು ಯಾರೂ ತಿರುಗಾಡದ ಕಾರಣವೋ ಏನೋ ಗಿಡಮರ, ಪೊದೆಗಳೆಲ್ಲ ಹುಲುಸಾಗಿ ದಟ್ಟವಾಗಿ ಬೆಳೆದು ಕೆರೆ ಪೂರ್ತಿ ಹಿಂಭಾಗಕ್ಕೆ ಸರಿದಂತಾಗಿದೆ. ಅಕ್ಕಪಕ್ಕದ ಪೊದೆಗಳನ್ನು ಬಳಸಿ ನೇರ ಬಂಡೆಗಲ್ಲುಗಳಿರುವ ಕೆರೆಯ ದಡಕ್ಕೆ ಬಂದೆ. ಅಲ್ಲೇ ನೆತ್ತಿಯ ಮೇಲೆ ದೊಡ್ಡ ಮರಗಳು, ಅದರ ನೆರಳು ಉದ್ದಕೆ ಚಾಚಿಕೊಂಡಿತ್ತು. ಅಲ್ಲಿಯೇ ಬೇಕಾದಷ್ಟು ಕೂಡಲು ಬಂಡೆಗಲ್ಲುಗಳು. ಒಂದೆಡೆ ಸುಮ್ಮನೆ ಕುಳಿತೆ.

ಎದುರಿಗೆ ಕೆರೆ, ಕಳೆದುಹೋಗಿದ್ದ ನಾನಲ್ಲದ ನಾನು ಅಷ್ಟೆ. ನೀಲಾಗಸ ಹಾಗೂ ಕೆರೆಯ ನೀರಿನ ಮಧ್ಯೆ ಒಂದು ಸರಳ ರೇಖೆ ಎಳೆದಂತೆ ಭೂಪ್ರದೇಶ. ಅದರ ಮೇಲೆ ಪುಟ್ಟ ಬಂಡೆಗಲ್ಲು, ಗಿಡಮರಗಳು. ನಾನು ಕುಳಿತ ಸ್ಥಳ ಹೇಗಿತ್ತೆಂದರೆ ಸುತ್ತಲೂ 180 ಡಿಗ್ರಿ ಕೋನದಿಂದ ನೋಡಿದಂತೆ ಕಾಣುವ ಸ್ಥಳವಾಗಿತ್ತು.

ಪರಿಶುಭ್ರವಾದ ನೀಲಾಗಸದಲ್ಲಿ ಕಂಡೂ ಕಾಣದಂತೆ ತೆಳುವಾದ ಮೋಡ ಯಾರೋ ಹಿಂಜಿ ಇಟ್ಟಂತಿತ್ತು. ಕೆಳಗೆ ಹಚ್ಚ ಹಸಿರಿನ ಗಿಡಮರಗಳು, ಅದರ ಕೆಳಗೆ ನೀಲಾಗಸವನ್ನು ಕನ್ನಡಿಯಾಗಿ ಪ್ರತಿಫಲಿಸುತ್ತಿರೋ ಕೆರೆ. ಒಂದು ಕ್ಷಣ ನನ್ನನ್ನೇ ನಾನು ಮೈಮರೆತೆ. ಬಾಣನ ‘ಕಾದಂಬರಿ’ಯಲ್ಲಿ ಬರುವ ‘ಅಚ್ಛೋದ ಸರೋವರ’ದಂತೆಯೇ ಈ ಕೆರೆ ಕಂಡಿದ್ದರಲ್ಲಿ ಆಶ್ಚರ್ಯವೇನಿಲ್ಲ. ನೀವೂ ನೋಡಿದ್ದರೆ ನೀವೂ ಇದೇ ಮಾತನ್ನೇ ಹೇಳುತ್ತಿದ್ದಿರೇನೋ ಹಾಗಿತ್ತು ಆ ಪರಿಸರ.

‍ಲೇಖಕರು Admin

November 9, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: