–ಸಾಮಂತ್ರಿ ಜ್ಯೋತಿ
ಯಾವುದಕ್ಕೂ ಸರ್ಕಾರಕೊಂದು
ಅರ್ಜಿ ಬರೆಯಬೇಕು
ದಾಖಲೆಗಳ ಗೋಳು ಮುಗಿವವರೆಗೂ
ಯಾರು ಸತ್ತರೂ
ಸರ್ಕಾರಿ ಶವಾಗಾರದಲ್ಲೊಂದು
ಜಾಗ ಕೊಡಿರೆಂದು..
ಅಥವಾ
ಉಸಿರುಗಟ್ಟುವ ಮುನ್ನ
ಗುರುತಿಗಂಟಿದ ಬ್ಯಾಂಕಾದಿಗಳ
ಬಾಗಿಲುತಟ್ಟಿ ಬರಬೇಕು
ದಾಖಲೆ ಪತ್ರಗಳಾದಿಯಾಗಿ
ಖಚಿತ ಪಡಿಸಬೇಕು..
ಅಥವಾ
ಹೊಂಟವರ ಕೊನೆಮಾತುಗಳ ಕೇಳದೆ
ಕೊಡು-ಕೊಂಡುದರ ಬಗೆಗೆ ವಿಚಾರಿಸಬೇಕು
ಇದು ದುರಿತ ಕಾಲನೋಡಿ…
ಬಡತನ ಬದುಕಿಗಷ್ಟೆ ಅಲ್ಲ..
ಸಾವಿಗೂ
ಸಾವಿನಾಚೆಗೂ..
ಹೋದವರು ಸಾಲ ಪಡೆದಿದ್ದರಾದರೆ
ಚಿಂತೆಯಿಲ್ಲ..
ವಾರಸುದಾರನ ಹುಡುಕಿ
ಅಚ್ಚುಕಟ್ಟಾಗಿ ಬರುತ್ತವೆ ನೋಟೀಸುಗಳು..
ಮನೆಬಾಗಿಲಿಗೆ..
ದಿವಂಗತರ ಗುರುತಿನ ಬಲದಿಂದ
ದೇಶವಾಳಬಹುದು..
ಆದರೆ,
ಮೈಮುರಿದು ಕೂಡಿಟ್ಟ
ಕಾಸನ್ನ ಪಡೆಯಲಾಗದು..
ನಾಗರಿಕತೆಗೆ ಅಡಿಗಲ್ಲಿಟ್ಟದಿನ
ಕಟ್ಟಿದ ಸಮಾಧಿಯ ಅಗಿಯಬೇಕಿದೆ
‘ಮನುಷ್ಯತ್ವ’ ಮಲಗಿರಬಹುದು ಅಲ್ಲಿ
ಕನಿಷ್ಟ ಅದರ ಮೂಳೆಗಳ ತಂದು
ಜಗತ್ತನ್ನ ಮತ್ತೆ ಬದುಕಿಸಬೇಕಿದೆ..






0 Comments