-ಅಶೋಕ ಹೊಸಮನಿ
ಮೂಕ ಪರದೆಯ ಹೃದಯದ ಹೆಜ್ಜೆಗಳು
ಉಸಿರಿಲ್ಲದ ಮಡಿಕೆಯನ್ನು
ಹೊತ್ತೊಯ್ಯುತ್ತಿದ್ದೇನೆ
ಹಾಲ್ಗೆನ್ನಯ ತಿಳಿಗೊಳದ ಕಣ್ಣೀರು ಬತ್ತಿರುವಾಗ
ನಿಟ್ಟುಸಿರ ಚಿಮ್ಮುವ ತೊಟ್ಟಿಲ
ಕಣ್ಪಟ್ಟಿಯ
ಚೀತ್ಕಾರದಲಿ
ಉಸಿರಿಲ್ಲದ ಬಿಳಿ ಕಾಗದವ ಮಡಿಚಲೆತ್ನಿಸುತ್ತೇನೆ
ಬೆಂಕಿಯ ಬಲೆಯು ಗೊಣಗಾಡುತ್ತಿರುವಾಗ
ಸುಟ್ಟ ಅದೆಷ್ಟೋ ಮುಸ್ಸಂಜೆಗಳು ಕಂಗೆಟ್ಟಿರುವಾಗ
ಅದಾವ ಕಾಳ್ಗಿಚ್ಚು
ಆತ್ಮದ ಗೂಡುಗಳನ್ನು ಮುರುಟಿಹುದೋ
ಮಗುಚಿಹ ದೋಣಿಯ ನಿತ್ರಾಣ ಕನಸುಗಳು
ತಾಯ್ತನದ ಆದಿ ಅನಾದಿಯ ಮುನ್ನುಡಿಯ ಕಲಕುತ್ತಿರುವಾಗ
ನೆರಳುಗಳು ಒಂದೆಮ್ಮೆ ಭೇಟಿಗೆ
ಹಂಬಲಿಸುವ ಈ ಹೊತ್ತಿನಲ್ಲಿ
ಬಿಸಿಲಿನ ಗಾಯಗಳನ್ನು ಪೇರಿಸಿಟ್ಟು
ಬಿಸಿಲು ನುಡಿಸುವ ನುಡಿಗಳಲ್ಲಿ
ವಿದಾಯದ ರೇಖೆಗಳ ಗೀಚಲೆತ್ನಿಸುತ್ತೇನೆ
ಶೂನ್ಯದ ಮೆಟ್ಟಿಲುಗಳ ಮೇಲೆ
ಏದುಸಿರ ಬಿಂದುಗಳ ಅಂಟಿಸಲೆತ್ನಿಸುತ್ತ
ಇನ್ನಿಲ್ಲವಾಗುವ ಭವದ ಬಟ್ಟೆಗಳ
ಲೋಕದಾಚೆ ತೂರುತ್ತೇನೆ
ಕಡಲ ತಡಿಯ ಮರಳು ಮಮ್ಮಲ ಮರುಗುತ್ತಿರುವಾಗ
ಕತ್ತರಿಸಿಹ ಗರ್ಭದ ಬೇರುಗಳ
ಕಾಲದ ಕೊರಳ ಕವುಚಿ
ಅಲೆ ಅಲೆಯ ತಕ್ಕಡಿಯಲಿ
ಹಿಂಗಿಸಿಹ ತಣ್ಣನೆಯ ನೆತ್ತರವ ತೂಗುತ್ತ
ಮೂಕ ಪರದೆಯ
ಹೃದಯದ ಹೆಜ್ಜೆಗಳು
ಹೆಣವ ಹೊತ್ತೊಯ್ಯುವ
ರೇಖಾ ಚಿತ್ರಗಳಲಿ
ಮಿನುಗುತ್ತಿವೆ
ಕಿಂಬೊಟ್ಟೆಯ ಹಿಂಡುವ ಗಡಿಯಾರದ ಧಾವಂತದಲಿ
ಎನ್ನ ನಾಳೆಗಳ ಹೊತ್ತ ಹೆಗಲ ಪಲ್ಲಕ್ಕಿಯ ಪಡಿಯಲಿ
ಅದಾವ ಲೋಕದ ದೇವರುಗಳನ್ನ ಕೂಡ್ರಿಸಲಿ
ಬೆಟ್ಟದ ಬೇರುಗಳ ಕಂಪನದಲಿ
ದಿಡುಗುಗಳು
ಪಲ್ಲಟವಾಗಿರುವಾಗ
ಬಾಯಾರಿಹ
ಸರದಿ ಸಾಲುಗಳ ರುದ್ರಭೂಮಿ
ಅದಾವ ಕೆಂಡದ ಉಂಡೆಗಳ ನುಂಗುವುದೋ
ಬಲ್ಲವರಾರು ?
ಮುಂಡಗಳು ದಣಿದಿಹ
ಈ ಹೊತ್ತಿನಲ್ಲಿ






0 Comments