ಉಷಾ ಪಿ. ರೈ ಅವರ ‘ಅನುಬಂಧ’

ಪ್ರಸನ್ನ ಸಂತೇಕಡೂರು

ಉಷಾ ಪಿ. ರೈ ಅವರು ಕನ್ನಡ ಸಾಹಿತ್ಯ ಲೋಕದ ಹಿರಿಯ ಲೇಖಕಿಯಾಗಿ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ. ಕನ್ನಡವಲ್ಲದೆ ತುಳು ಹಾಗೂ ಇಂಗ್ಲೀಷ್ ಭಾಷೆಗಳಲ್ಲೂ ತಮ್ಮ ಸಾಹಿತ್ಯ ಕೃಷಿಯನ್ನು ಮಾಡಿದ್ದಾರೆ. ಬಹುತೋಮುಖ ಪ್ರತಿಭೆಯಾಗಿರುವ ಇವರು ತಮ್ಮ ವೈವಿಧ್ಯಮಯ ಅಭಿರುಚಿಯಿಂದ ಸಾಹಿತ್ಯದ ಜೊತೆ ಕಸೂತಿ, ಸಮಾಜಸೇವೆ, ಚಿತ್ರಕಲೆ ಮುಂತಾದವುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಇವರು ಮೂಲತಃ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಅಂದರೆ ಇಂದಿನ ಉಡುಪಿಯಲ್ಲಿ ಮೇ 23 1945ರಲ್ಲಿ ಜನಿಸಿದವರು. ಆಗಿನ್ನೂ ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕಿರದ ಕಾರಣ ಉಡುಪಿ ಮದ್ರಾಸು ಪ್ರಾಂತ್ಯಕ್ಕೆ ಸೇರಿತ್ತು. ಇವರು ಎ೦.ಎ. ಪದವೀಧರೆಯಾಗಿದ್ದಾರೆ.

ಇವರ ತಂದೆ ಸ್ವಾತಂತ್ರ್ಯ ಹೋರಾಟಗಾರರು, ನವಯುಗ ಪತ್ರಿಕೆಯ ಸಂಪಾದಕ ಹಾಗು ಹಿರಿಯ ಪತ್ರಕರ್ತರಾಗಿದ್ದ ದಿ. ಕೆ ಹೊನ್ನಯ್ಯಶೆಟ್ಟಿಯವರು ಮತ್ತು ತಾಯಿ ಕೆ. ಪದ್ಮಾವತಿ ಶೆಟ್ಟಿಯವರು.

ಇವರ ಪತಿ ದಿವಂಗತ ಪ್ರಭಾಕರ ರೈಯವರು ಕೂಡಾ ತುಳು ಮತ್ತು ಕನ್ನಡ ಭಾಷೆಯಲ್ಲಿ ಸಾಹಿತ್ಯ ಕೃಷಿ ಮಾಡಿದ್ದಾರೆ. ಉಷಾ ಅವರು 1974ರಲ್ಲಿ ವಿಜಯಾ ಬ್ಯಾಂಕ್ ನಲ್ಲಿ ಅಧಿಕಾರಿಯಾಗಿ ಸೇರಿ 25 ವರ್ಷ ಸೇವೆ ಸಲ್ಲಿಸಿ ಈಗ ನಿವೃತ್ತಿಯಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಇವರ “ಅನುಬಂಧ” ಕಾದಂಬರಿ 1974ರಲ್ಲಿ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟವಾಗಿ ತುಂಬಾ ಜನಪ್ರಿಯತೆಯನ್ನು ಗಳಿಸಿತು. ಉಷಾ ಅವರು ಬರೆಯುವ ವೇಳೆಗಾಗಲೇ ತ್ರಿವೇಣಿ, ಎಂ.ಕೆ. ಇಂದಿರಾ, ಅನುಪಮಾ ನಿರಂಜನ ತುಂಬಾ ಜನಪ್ರಿಯತೆಯ ಉತ್ತುಂಗದಲ್ಲಿದ್ದರು.

ತ್ರಿವೇಣಿಯವರು ಆ ವೇಳೆಗಾಗಲೇ ನಿಧನ ಹೊಂದಿದ್ದರು. ಈ ಕಾದಂಬರಿ ಬಂದ ವೇಳೆಗಾಗಲೇ ನವ್ಯದ ಪ್ರಭಾವಕ್ಕೊಳಗಾದ ಬಹಳಷ್ಟು ಲೇಖಕಿಯರು ಸಾಹಿತ್ಯ ಕೃಷಿ ಮಾಡುತ್ತಿದ್ದರು. ರಾಜಲಕ್ಷ್ಮಿ ಎನ್. ರಾವ್, ವೀಣಾ ಶಾಂತೇಶ್ವರ ಅವರು ಆಗಾಗಲೇ ತುಂಬಾ ಪ್ರಸಿದ್ದರಾಗಿದ್ದರು.

ಈ ಕಾದಂಬರಿ ಪ್ರಕಟವಾಗಿದ್ದು ಒಂದು ಆಕಸ್ಮಿಕ ಎಂದು ಹೇಳಬಹುದು. ಬಹಳಷ್ಟು ಲೇಖಕರು ಹಾಗು ಲೇಖಕಿಯರೂ ತಾವು ಬರೆದ ಅದೆಷ್ಟೋ ಕೃತಿಗಳನ್ನ, ಕತೆಗಳನ್ನ ಕೆಲವು ದಿನ, ಕೆಲವು ವರ್ಷ, ಕೆಲವೊಮ್ಮೆ ಅವು ಪ್ರಕಟವಾಗದೆ ಅವರ ಸಾವಿನ ಜೊತೆ ಅವು ತೆರೆಮರೆಗೆ ಸರಿದಿರುತ್ತವೆ. ಇನ್ನು ಕೆಲವೊಮ್ಮೆ ಲೇಖಕ ಸತ್ತ ಮೇಲೆ ಅವರ ಸ್ನೇಹಿತರೋ, ಬಂಧುಗಳೋ ಅಥವಾ ಕುಟುಂಬದವರೋ ಆ ಸಾಹಿತ್ಯವನ್ನು ಪ್ರಕಟಿಸಿರುತ್ತಾರೆ.

ಹೆಸರಾಂತ ಲೇಖಕ ಫ್ರಾಂಜ್ ಕಾಫ್ಕನ ಬಹುಪಾಲು ಸಾಹಿತ್ಯವನ್ನು ಅವನು ಸತ್ತ ಮೇಲೆ ಸುಟ್ಟು ಹಾಕಲು ಹೇಳಿದ್ದ. ಆದರೆ, ಅವನ ಗೆಳೆಯ ಮ್ಯಾಕ್ಸ್ ಬ್ರಾಡ್ ಕಾಫ್ಕ ಸತ್ತ ನಂತರ ಅದನ್ನು ಪ್ರಕಟಿಸಿ ಜಗತ್ತಿಗೆ ಕಾಫ್ಕನ ಸಾಹಿತ್ಯವನ್ನು ಪರಿಚಯಿಸಿದ. ಇಂದು ಕಾಫ್ಕ ಜಗತ್ತಿನ ಶ್ರೇಷ್ಠ ಲೇಖಕರಲ್ಲಿ ಒಬ್ಬನೆಂದು ಪರಿಗಣಿಸಲ್ಪಟ್ಟಿದ್ದಾನೆ.

ಇಷ್ಟೆಲ್ಲಾ ಏಕೆ ಹೇಳುತ್ತಿದ್ದೇನೆಂದರೆ ಇಲ್ಲಿ ಉಷಾ ಅವರು ಈ ಕಾದಂಬರಿಯನ್ನು ಯಾವುದೋ ನೈಜ ಘಟನೆಯ ಆಧಾರದ ಮೇಲೆ ಅದಕ್ಕೊಂದು ಕತೆಯ ರೂಪ ಕೊಟ್ಟು ಬರೆದಿಟ್ಟಿದ್ದರು. ಅವರ ಗೆಳತಿಯೊಬ್ಬರು ಅದನ್ನು ಓದಲು ತೆಗೆದುಕೊಂಡು ಹೋಗಿ ಅದನ್ನು ಮೆಚ್ಚಿಕೊಂಡು ಅವರ ಪತಿಗೂ ಓದಲು ಕೊಟ್ಟಿದ್ದಾರೆ.

ಈ ಕಾದಂಬರಿಯನ್ನು ಹಸ್ತಪ್ರತಿಯ ರೂಪದಲ್ಲಿಯೇ ಓದಿದ ಗೆಳತಿಯ ಪತಿ ಹತ್ತಿರದಲ್ಲಿಯೇ ಇದ್ದ ಪ್ರಜಾಮತ ಮುದ್ರಾಣಾಲಯಕ್ಕೆ ತೆಗೆದುಕೊಂಡು ಹೋಗಿ ಕೊಟ್ಟಿದ್ದಾರೆ. ಅಲ್ಲಿ ಅದರ ಸಂಪಾದಕರಾಗಿದ್ದ ಶ್ರೀ. ಮ.ನ. ಮೂರ್ತಿಯವರು ಓದಿ ಉಷಾ ಅವರನ್ನು ಭೇಟಿ ಮಾಡಿ ಅದನ್ನು ಪ್ರಕಟಿಸಲು ಒಪ್ಪಿಗೆ ಪಡೆದು ಪ್ರಜಾಮತದಲ್ಲಿ ಧಾರಾವಾಹಿಯಾಗಿ ಪ್ರಕಟಿಸಿದ್ದಾರೆ.

ಇದು ಈಗಿನ ಕಾಲಕ್ಕೆ ಸಂಭವಿಸುವುದು ಸ್ವಲ್ಪ ಕಷ್ಟ ಎಂದು ಹೇಳಿದರೂ ಆ ಕಾಲಕ್ಕೆ ಇದೆಲ್ಲಾ ನಡೆಯುತಿತ್ತು. ಈ ರೀತಿ ಈ ಕಾದಂಬರಿ ಪ್ರಕಟವಾಗಿ ಓದುಗರ ಕೈ ಸೇರಿತು. ಇಲ್ಲಿ ಉಷಾ ಅವರು ಶ್ರೀ. ಮ.ನ. ಮೂರ್ತಿಯವರ ಒಳ್ಳೆಯ ಕಾರ್ಯದ ನೆನಪಿಗೆ ಈ ಕಾದಂಬರಿಯನ್ನು ಅವರಿಗೆ ಅರ್ಪಣೆ ಮಾಡಿದ್ದಾರೆ.

ಇಲ್ಲಿ ಮ.ನ. ಮೂರ್ತಿಯವರ ಬಗ್ಗೆಯೂ ಎರಡು ಮಾತು ಹೇಳಬೇಕು ಇವರು ಹಲವು ಸಾಮಾಜಿಕ ಕಾದಂಬರಿಗಳನ್ನು ಬರೆದಿದ್ದಾರೆ. ಇವರ ಸಂಪೂರ್ಣ ಹೆಸರು ಮಂದಲಹಳ್ಳಿ ನರಸಿಂಹ ಮೂರ್ತಿ. ಇವರು ಜನಿಸಿದ್ದು ಜೂನ್ 6, 1906ರಂದು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮಡಕಶಿರಾ ತಾಲ್ಲೂಕಿನ ಮಂದಲಹಳ್ಳಿ ಎಂಬಲ್ಲಿ, ಆಗ ಈ ಮಡಕಶಿರಾ ತಾಲ್ಲೂಕ್ ಕನ್ನಡ ನಾಡಿಗೆ ಸೇರಿತ್ತು. ಈಗಲೂ ಭೌಗೋಳಿಕವಾಗಿ ಮಡಕಶಿರಾ ತಾಲ್ಲೂಕ್ಕಿನ ಸುತ್ತ ಕನ್ನಡ ನಾಡೇ ಇದ್ದು ಒಂದು ಕಡೆ ಸ್ವಲ್ಪ ಮಾತ್ರ ಆಂಧ್ರ ಪ್ರದೇಶವಿದೆ.

ಶ್ರೀ. ಮ.ನ. ಮೂರ್ತಿಯವರು ರಾಜ್ಯಭಾಷೆ ಕನ್ನಡವಾಗಬೇಕೆಂದು ನಿರಂತರವಾಗಿ ಹೋರಾಟ ನಡೆಸಿದವರು. ಆದರೆ, ವಿಪರ್ಯಾಸವೆಂದರೆ ಅವರು ಜನಿಸಿದ ಊರೇ ಭಾಷಾವಾರು ಪ್ರಾಂತ್ಯವಿಂಗಡಣೆಯಲ್ಲಿ ಆಂಧ್ರ ಪ್ರದೇಶಕ್ಕೆ ಸೇರಿತು. ಇವರು ನಾಟ್ಯರಾಣಿ ಶಾಂತಲೆಯ ಬಗ್ಗೆ ಬರೆದ ಬೃಹತ್ ಕಾದಂಬರಿಯಲ್ಲದೆ ಇನ್ನು ಹಲವಾರು ಕಾದಂಬರಿಗಳನ್ನು ಬರೆದಿದ್ದಾರೆ. ಇವರ ‘ಬಿಳಿಯ ಹೆಂಡತಿ’ ಪುಟ್ಟಣ್ಣ ಕಣಗಾಲರ ನಿರ್ದೇಶನದಲ್ಲಿ ಚಲನಚಿತ್ರವಾಗಿ ಜನಪ್ರಿಯತೆಯನ್ನು ಗಳಿಸಿದೆ.

ಉಷಾ ಅವರ ಈ ಅನುಬಂಧ ಕಾದಂಬರಿ ನವ್ಯಕ್ಕಿಂತ ಪ್ರಗತಿಪರ ಅಥವಾ ನವೋದಯ ಸಾಹಿತಿಗಳ ಪ್ರಭಾವಕ್ಕೆ ಒಳಗಾಗಿದೆ ಎಂದು ಕಾಣಿಸುತ್ತದೆ. ಈ ಕಾದಂಬರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಸ್ನೇಹ ಮತ್ತು ಸಹನಾ ಎಂಬ ಇಬ್ಬರು ಬಾಲ್ಯದ ಗೆಳತಿಯರ ನಡುವೆ ಸಾಗುವ ಕತೆಯನ್ನು ಹೊಂದಿದೆ. ಸ್ನೇಹ ಬಡತನದಿಂದ ಬಂದ ಹುಡುಗಿ. ಅವಳ ತಂದೆ ತೀರಿ ಹೋಗಿದ್ದಾರೆ. ಅವಳಿಗೊಬ್ಬ ತಮ್ಮ ಮತ್ತು ಅಮ್ಮ ಇದ್ದಾರೆ. ಸಹನಾಳದು ಶ್ರೀಮಂತರ ಕುಟುಂಬ, ಅವಳ ತಂದೆ ತಾಯಿಯ ಜೊತೆ ತಮ್ಮನು ಇದ್ದಾನೆ.

ಸ್ನೇಹ ಮತ್ತು ಸಹನಾರದು ಅಪರೂಪದ ಗೆಳೆತನ. ಒಬ್ಬರಿಗೊಬ್ಬರು ಬಿಟ್ಟು ಇರಲಾರದಷ್ಟು ಸ್ನೇಹ. ಅವರ ಹೆಸರುಗಳು ಕೂಡ ಕಾದಂಬರಿಯ ಆಗುಹೋಗುಗಳಿಗೆ ಅನ್ವಯವಾಗುತ್ತವೆ. ಈಗ ಇರುವ ಹಾಗೆಯೇ ಆಗಲೂ ಕೂಡ ತಮ್ಮ ಹೆಣ್ಣು ಮಕ್ಕಳು ವಿದೇಶದಲ್ಲಿ ಅದರಲ್ಲೂ ಅಮೆರಿಕಾದಲ್ಲಿ ಇರುವ ವರನಾದರೆ ಒಳ್ಳೆಯದು ಎಂದು ಶ್ರೀಮಂತ ತಂದೆ ತಾಯಿಗಳ ಆಸೆ.

ಆ ಆಸೆಗೆ ಪೂರಕವೆಂಬಂತೆ ಆ ಕಾಲಕ್ಕೆ ತಕ್ಕಂತೆ ಇನ್ನು ಪ್ರೌಢಶಾಲೆ ಓದುತ್ತಿದ್ದ ಸಹನಾಳ ಮದುವೆ ಒಬ್ಬ ವೈದ್ಯವರನ ಜೊತೆ ನಿಶ್ಚಯವಾಗುವ ಹಂತಕ್ಕೆ ಹೋಗುತ್ತದೆ. ಅಲ್ಲಿ ಸಹನಾಳಿಗೂ ಆ ವರನಿಗೂ ಇಬ್ಬರಿಗೂ ಇಷ್ಟವಿದ್ದರೂ ಯಾರೋ ಮೂರನೆಯ ವ್ಯಕ್ತಿಯ ಮಾತಿನಿಂದ ಆ ಮದುವೆ ನಿಂತುಹೋಗುತ್ತದೆ. ಆ ನಂತರ ಸಹನಾಳ ಮದುವೆ ಅಮೆರಿಕಾದಲ್ಲಿ ನೆಲೆಸಿರುವ ಇನ್ನೊಬ್ಬ ವರನ ಜೊತೆ ಆತುರಾತುರವಾಗಿ ನಡೆದುಹೋಗುತ್ತದೆ.

ಇಲ್ಲಿ ವಧು ಮತ್ತು ವರ ಇಬ್ಬರ ನಡುವೆ ಯಾವುದೇ ಮಾತುಗಳು ಕೂಡ ಆಗಿರುವುದಿಲ್ಲ. ಆಮೇಲೆ ಆ ವರ ಸಹನಾಳ ಜೊತೆ ಎನನ್ನೂ ತಿಳಿಸದೆ ದೈಹಿಕ ಸಂಬಂಧವನ್ನು ಇಟ್ಟುಕೊಳ್ಳದೆ ಬಿಟ್ಟು ಮತ್ತೇ ಅಮೆರಿಕಾಗೆ ಹೋಗುತ್ತಾನೆ. ಇಲ್ಲಿ ಕಾದಂಬರಿ ಮಹತ್ತರವಾದ ತಿರುವನ್ನು ಪಡೆದುಕೊಳ್ಳುತ್ತದೆ.

ಆ ಮೇಲೆ ಸಹನಾಳ ಬದುಕು ಮುಳುಗಿ ಹೋಯಿತೇ ಅಥವಾ ಮೊದಲು ಅವಳನ್ನು ಮದುವೆಯಾಗಲು ಒಪ್ಪಿದ್ದ ವರ ಮತ್ತೇ ಅವಳ ಬದುಕಿಗೆ ಬರುತ್ತಾನೆಯೇ? ಅವಳ ಮದುವೆಯಾಗಿದ್ದ ವರನಿಗೆ ಮೊದಲೇ ಮದುವೆಯಾಗಿ ಕೆನಾಡದಲ್ಲಿ ಅವನಿಗೆ ಬಿಳಿಹೆಂಡ್ತಿ ಇರುತ್ತಾಳೆ. ಅವರಿಬ್ಬರಿಗೆ ಎರಡು ಮಕ್ಕಳು ಇರುತ್ತವೆ. ಆ ಗಂಡನನ್ನು ಸಹನಾ ಒಪ್ಪಿಕೊಳ್ಳುತ್ತಾಳೆಯೇ?

ಇಂದಿನ ಆಧುನಿಕ ಹುಡುಗಿಯರು ಆ ರೀತಿ ಪರಿಸ್ಥಿತಿ ಬಂದಾಗ ಯಾವರೀತಿ ಬದುಕನ್ನು ಎದುರಿಸುತ್ತಿದ್ದರು? ಕಾದಂಬರಿಯ ತಿರುವು ಓದುಗರನ್ನು ಅಚ್ಚರಿ ಮೂಡಿಸುತ್ತದೆ. ಕಾದಂಬರಿಯ ಕೊನೆಯ ತಿರುವಿನ ಆಧಾರದ ಮೇಲೆ ಹೇಳುವುದಾದರೆ ಲೇಖಕಿ ನವೋದಯ ಅಥವಾ ಪ್ರಗತಿಪರ ಸಾಹಿತ್ಯದ ಪ್ರಭಾವಕ್ಕೆ ಒಳಗಾಗಿದ್ದಾರೆ ಎಂದು ಹೇಳಬಹುದು.

ಅವರು ನವ್ಯದ ಪ್ರಭಾವಕ್ಕೆ ಒಳಗಾಗಿದ್ದರೆ ಕಾದಂಬರಿ ಬೇರೊಂದು ತಿರುವನ್ನು ಪಡೆದುಕೊಳ್ಳುತ್ತಿತ್ತು. ಉಷಾರವರು ಆಗ ನವ್ಯ ಸಾಹಿತ್ಯಕ್ಕೋ ಅಥವಾ ಬಂಡಾಯ ಸಾಹಿತ್ಯಕ್ಕೋ ಮಹತ್ತರ ಕೊಡುಗೆಯನ್ನು ಕೊಡಬಹುದಿತ್ತು. ಇದು ನೈಜ ಘಟನೆಯ ಆಧಾರವಾಗಿರುವುದರಿಂದ ಅದು ಉಷಾರವರಿಗೆ ಮಿತಿಯನ್ನು ನೀಡಿರಬಹುದು.

ಕಾದಂಬರಿ ತುಂಬಾ ಚೆನ್ನಾಗಿದೆ. ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ. ಹೊಸ ತಲೆಮಾರಿನ ಬಹಳಷ್ಟು ಜನರು ಈ ಕಾದಂಬರಿಯನ್ನು ಇನ್ನು ಓದಿರದಿದ್ದರೆ ಈಗಲಾದರೂ ಓದಬಹುದು. ಈಗ ಲೇಖಕಿ ಉಷಾರವರು ಹೊಸ ತಲೆಮಾರಿನ ಹುಡುಗಿಯರನ್ನು ನೋಡಿದ್ದಾರೆ. ಈಗ ಅವರು ಈ ಕಾದಂಬರಿ ಬರೆದಿದ್ದರೆ ಕಾದಂಬರಿಯ ತಿರುವು ಹೇಗಿರುತ್ತಿತ್ತು ಎಂದು ಕುತೂಹಲವಿದೆ.

ಇದಕ್ಕೆ ಅವರೇ ಉತ್ತರ ಹೇಳಬೇಕು. ಸಾಧ್ಯವಾದರೆ ಅವರು ಹೊಸ ಕಾದಂಬರಿಯನ್ನು ಬರೆಯುವುದರ ಮೂಲಕವೂ ಅಚ್ಚರಿ ಮೂಡಿಸಬಹುದು. ಇದಕ್ಕೆ ಕಾಲವೇ ಉತ್ತರಿಸಬೇಕು. ಕಾಯ್ದು ನೋಡೋಣ.

ಉಷಾ ಪಿ. ರೈ ಅವರು ಈಗಾಗಲೇ ಕನ್ನಡ ಸಾಹಿತ್ಯದ ಎಲ್ಲಾ ಪ್ರಾಕಾರಗಳಲ್ಲೂ ಸಾಹಿತ್ಯ ಕೃಷಿ ಮಾಡಿದ್ದಾರೆ. ಅವರಿಗೆ ಹಲವು ಪ್ರಶಸ್ತಿಗಳು ಬಂದಿವೆ.

ಅವುಗಳು ಕೆಳಗಿನಂತಿವೆ

ಅತ್ತಿಮಬ್ಬೆ ಗೊರೂರು ಪ್ರತಿಷ್ಠಾನ ಸುವರ್ಣ ಸ್ವಾತಂತ್ರ್ಯೋತ್ಸವ ಸನ್ಮಾನ

ಕುರುಂಜಿ ವೆಂಕಟರಮಣ ಪ್ರತಿಭಾ ಪುರಸ್ಕಾರ

ವಿಜಯಾ ಬ್ಯಾಂಕ್ ಕನ್ನಡ ಸಂಘದ ಗೌರವ

ಸಾಹಿತ್ಯ ಪರಿಷತ್ತಿನಿ೦ದ ಕೊಡಲಾಗುವ ಬಿ ಸರೋಜಾದೇವಿ ಸಾಹಿತ್ಯ ಪ್ರಶಸ್ತಿ – 2002

ಸಾಹಿತ್ಯ ಪರಿಷತ್ತಿನ ನೀಲಗ೦ಗಾ ದತ್ತಿನಿಧಿ ಬಹುಮಾನ (ಹಕ್ಕಿ ಮತ್ತು ಗಿಡುಗ ಕೃತಿಗೆ)

ಅಮ್ಮ ಪ್ರಶಸ್ತಿ (ಹಕ್ಕಿ ಮತ್ತು ಗಿಡುಗ ಕೃತಿಗೆ)

ತುಳುವೆರೆಂಕುಲು ಬೆಂಗಳೂರು(ರಿ)ಸಂಸ್ಥೆಯವರಿಂದ ‘ಬಲಿಯೇಂದ್ರ ಪುರಸ್ಕಾರ -2009

ಅವರಿಗೆ ಇನ್ನು ಹೆಚ್ಚು ಪ್ರಶಸ್ತಿಗಳು ಸಿಗಲಿ ಎಂದು ಶುಭ ಹಾರೈಸುತ್ತಿದ್ದೇನೆ. 

November 17, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: