ಮನರಂಜನೆಯ ಮತ್ತೊಂದು ಮಗ್ಗಲು..

ಸಂಗಮೇಶ ಸಜ್ಜನ

ಬಾಲ್ಯದಲ್ಲೆಲ್ಲ ಈ ಕ್ರಿಕೆಟ್ ಬಗ್ಗೆ ಸ್ವಲ್ಪವೂ ಗೊತ್ತಿರದ ನನಗೆ, ಅಪ್ಪ ಮತ್ತು ಅಣ್ಣ, ಅಂದ್ರೆ ನನ್ನ ದೊಡ್ಡಪ್ಪನ ಮಗ. ಇವರುಗಳ ಅತಿ ವೀಕ್ಷಣೆಯಿಂದ ನಾನು ಕೂಡ ಕೆಲವೊಮ್ಮೆ ನೋಡಲಾರಂಭಿಸಿದೆ.

ಅದಿನ್ನೂ IPLನ ಶುರುವಿನ ದಿನಳಗಳಷ್ಟೇ, ಆವತ್ತು CSK & MIನ ಮ್ಯಾಚ್ ಇತ್ತು, ಆದಿನ CSKಗೆದ್ದು MIಸೋತಿತ್ತು. ರಾತ್ರಿ ಮಲಗಲಿಕ್ಕೆ ತಡವಾದುದ್ದರಿಂದ ಬೆಳಗ್ಗೆ ನಾನು ಸ್ವಲ್ಪ ತಡವಾಗೇ ಎದ್ದಿದ್ದೆ. ಅಪ್ಪ ದಿನಂಪ್ರತಿ ಕೆಲಸದತ್ತ ಹೊರಹೋಗಿ ಮನೆಗೆ ಬಂದಾಗ ಅಮ್ಮ ಬಟ್ಟೆ ಒಗೆಯಲೆಂದು ಭಾವಿಕಟ್ಟೆಯ ಹತ್ತಿರ ಇದ್ದಾಗ, ಆಗೊಂದು ಜೋರಾದ ಅಳುವಿನ ಶಬ್ದಗಳ ಜೊತೆಗೆ ಬೈಗುಳಗಳ ಸರಮಾಲೆಯೇ ಕೇಳಿಬರುತ್ತಿತು.

ನಮ್ಮದು ವಠಾರ. ಅಲ್ಲಿ ನಾವೆಲ್ಲಾ ಎಲ್ಲರೂ ಒಂದೇ ಪರಿವಾರದವರಾಗಿ ಇದ್ದವರು, ಹೀಗಾಗಿ ಅಲ್ಲಿ ಅಷ್ಟಕ್ಕೂ ಬೇಧ-ಭಾವ ಅನ್ನೋದು ನಾವು ಕಂಡೆ ಇರ್ಲಿಲ್ಲ. ಅವರು ಅಳೋದು ಬೈಯ್ಯೋದು ನೋಡಲಾರದ ನಮ್ಮಜ್ಜಿ ಮತ್ತು ಮೂಲಿಮನಿ ಗುಣವಂತಿ ಅಜ್ಜಿ ಕೇಳಿಯೇ ಬಿಟ್ರು ಯಾಕ್ರೆ ಅಂಬು ಏನಾಯಿತು…! ರಾತ್ರಿಯೆಲ್ಲ ಛಲೊನೆ ಇದ್ರಲ್ಲ… ಒಮ್ಮಿಂದೊಮ್ಮೆ ಈಗೇನಾತು..?

ಅತ್ತಿ… ಏನ್ ಹೇಳ್ಲಿ.. ಏನ್ ಹೇಳ್ಲಿ.. ಅನ್ಕೊಂತ ಅಂಬು ಆಂಟಿ ಮತ್ತಷ್ಟು ಜೋರೇ ಅಳ್ಲಿಕ್ ಹತ್ತಿದ್ರು. ಭಾವಿಕಟ್ಟೆಯ ಹತ್ತಿರವಿದ್ದ ನನ್ನಮ್ಮ ಧಾವಂತದಿಂದ ಅಂಬು ಆಂಟಿಯಾ ಮನೆಯೊಳಗೇ ಹೋದವರೇ ಅವರ ಮಗಳಾದ ಪಲ್ಲವಿಗೆ ಕೇಳೇ ಬಿಟ್ರು. ಯಾಕೆ ಪಲ್ಲು ಏನಾತು..? ಎಲ್ರು ಹೀಂಗ್ಯಾಕ್ ಅಳ್ಳತಿರಿ..! ಅವಾಗ ಪಲ್ಲವಿ ಅಕ್ಕ ಹೇಳಿದ್ದು, ಕಾಕಿ ಕಪನೂರ ಮಾಮ ಅಂದ್ರ ಮಹದೇವ್ ಮಾಮಗ್ ನಿನ್ನೆ ರಾತ್ರಿ ಯಾರೋ ಕೋರಂಟಿ ಗುಡಿ ಬಲ್ಲಿ ಹೊಡದಾಕ್ಯಾರ… 

ಇಷ್ಟು ಕೇಳಿದ ನಮ್ಮಮ್ಮ ಹೊರ ಬಂದು ತಾನು ದುಃಖಿಸಲಾರಂಭಿಸಿದಳು. ಅಷ್ಟೊತ್ತಿಗೆ ವಠಾರದವರೆಲ್ಲ ಸೇರಿದ್ರು. ಎಲ್ರಿಗೂ ಸುದ್ಧಿ ತಿಳೀತು.. ಎಲ್ರೂ ಸೀರಿ ಬಾಯಿಗ್ ಹಚ್ಕೊಂಡು ದುಃಖಿಸಲಾರಂಭಿಸಿದರು. 

ಅಂಬು ಆಂಟಿಗೆ ಇದ್ದಿದ್ದು ಒಬ್ಬನೇ ಸಹೋದರ, ಇವರು ೩/೪ ಜನ ಸಹೋದರಿಯರಿದ್ರು, ಅಣ್ಣನೆಂದರೆ ಬಹು ಪ್ರೀತಿ ಮತ್ತು ಕಾಳಜಿ. ಅವನು ಅಷ್ಟೇ ಅಂಬು ಆಂಟಿಯ ಮನೆಗೆ ಬಂದಾಗಲೆಲ್ಲ ವಠಾರದ ಎಲ್ಲರ ಮನೆಗೆ ಭೇಟಿ ಕೊಡದೆ ಹೋಗುತ್ತಿರಲಿಲ್ಲ. 

ಸಂಜೆ ಆಗುತ್ತಾ ಬಂದಾಗ ವಿಷಯ ಗೊತ್ತಾಯಿತು. ಈ ಹಾಳಾದ IPLನಲ್ಲಿ ಬೆಟ್ಟಿಂಗ್ ಕಟ್ಟಿ ಸೋತಿದ್ದಲ್ಲದೆ ತುಂಬಾ ಸಾಲ ಕೂಡ ಆಗಿತ್ತಂತೆ. ಸಾಲಗಾರರೇ ಆ ರಾತ್ರಿ ಹೆದರಿಸಿದ್ದಲ್ಲದೆ ಮಧ್ಯ ರಾತ್ರಿ ಮಹಾದೇವ ಮಾಮನ ಹತ್ಯೆನು ಮಾಡಿದ್ರು. 

ಇವತ್ತಿಗೂ IPL ಬಂದ್ರೆ ಜೀವ ತಳಮಳಿಸುತ್ತೆ, ಆಗಷ್ಟೇ ಮದುವೆಯಾಗಿದ್ದ ಮಹಾದೇವ ಮಾಮನಿಗೆ ೧೦ತಿಂಗಳ ಮಗುವಿತ್ತು, ಪಾಪ ಆ ಸಣ್ಣ ವಯಸ್ಸಿನ ಹೆಂಡತಿಯಾದರು ಏನು ಮಾಡಿಯಾಳು. ಇಷ್ಟೆಲ್ಲಾ ಆದ್ರೂ, ಆ ಸಾಲಗಾರರು ಮನೆಗೆ ಬರೋದು ನಿಲ್ಲಿಸಲೇ ಇಲ್ಲ.

ಮಹಾದೇವ ಮಾಮ ಅವರ ಮನೆಯಲ್ಲಿ ಇದ್ದಿದ್ದು ತುಂಬಾ ಕಡಿಮೆ. ನಮ್ದು ಶಹರವಾದುದ್ದರಿಂದ ನಮ್ಮಲ್ಲೇ ಬೆಳೆದು ದೊಡ್ಡವನಾದದ್ದು. 
ಕೊನೆಗೊಮ್ಮೆ ಸಾಲಗಾರರ ಕಾಟಕ್ಕೋ, ಅವರುಗಳ ಮನೆಯ ಪ್ರತಿಷ್ಠೆಗೋ, ಅಂಬು ಆಂಟಿ ನಮ್ಮ ವಠಾರ ಬಿಟ್ಟು ದೂರದ ಕಾಲೋನಿಗೆ ಹೋದರಂತೆ. 

ಈ IPLನ ವಿಷಯದಲ್ಲಿ, ಬರಿ ಆ ಮಹಾದೇವ ಮಾಮ ಅಷ್ಟೇ ಅಲ್ಲ, ಈ ದೇಶದಲ್ಲಿ ತುಂಬಾ ಜನ ಬಲಿಯಾಗಿದ್ದಾರೆ, ಬಲಿಯಾಗುತ್ತಲೇ ಇದ್ದಾರೆ. ಅದೊಂದು ಕ್ರೀಡೆಯಾಗಿ ನಮಗೆ ಎಷ್ಟು ಮನರಂಜನೆ ಕೊಡುತ್ತೋ ನಮ್ಮ ಪರಿವಾರದವರಿಗಾಗಲಿ ಅಥವಾ ನಮ್ಮ ಆಗಿನ ವಠಾರದವರಿಗಾಗಲಿ ತುಂಬಾ ನಷ್ಟವನ್ನೇ ಉಂಟು ಮಾಡಿದೆ ಅಂದ್ರೂ ತಪ್ಪಾಗ್ಲಿಕ್ಕಿಲ್ಲ.

‍ಲೇಖಕರು Avadhi

November 17, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: