ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಉದಯಕುಮಾರ ಹಬ್ಬು ಕವಿತೆ- ನನ್ನವಳು ಅತ್ತಾಗ…

ಉದಯಕುಮಾರ ಹಬ್ಬು

ನನ್ನವಳು ಅತ್ತಾಗ
ಜಂಘಾಬಲವೆ ಉಡುಗುವುದು
ಕಂಗಾಲಾಗಿ ಅತ್ತಿತ್ತ ಓಡಾಡುವೆ
ಪಂಜರದೊಳಗಣ ಇಲಿ
ಅಪ್ಪಿಕೊಳ್ಳ ಹೋದರೆ ಕೊಸರಿಕೊಳ್ಳುವಳು
ತಲೆಯನು ಕೈಮುಷ್ಟಿಯಲಿಟ್ಟು
ನಾ ನುಲಿವೆನು.

ಆಷಾಡದ ದಿನಗಳಲಿ
ಗಗನ ಘರ್ಜಿಸುವಾಗ
ಗುಡುಗು ಸಿಡಿಲುಗಳ ಖದೋಣಿ
ಧಡಧಡನೆ ಬಡಿವಾಗ ಎದೆಗೆ
ಇವಳು ನನ್ನ ಮೈಬಳ್ಳಿಯಾಗುವಳು
ನಾನಪ್ಪಿ‌ ಸಂತೈಸಿ ಮಗುವಿನಂತಾಗೆ
ನನ್ನ ಮನವೂ ಒದ್ದಾಡುವುದು
ಮುಂಗುಸಿಯ ಎದುರಿನಲಿ ಹಾವಿನಂತೆ

ಅವಳ ಅಳುವಿಗೆ ನಾನೆ ಕಾರಣವಾಗೆ
ಪಶ್ಚಾತ್ತಾಪ ದಳ್ಳುರಿ‌ ತನುಮನವ ಉರಿಸುವಾಗ್ಗೆ
ಕೈಮುಗಿದು ಕಾಲ್ಹಿಡಿದು
ಎಲ್ಲ ಮರೆತುಬಿಡು ಚಿನ್ನಾ ಎನ್ನುವಾಗ್ಗೆ
ಗುಡುಗು ಸಿಡಿಲಿನ ನಂತರ
ಮಳೆಯ ತಂಪ್ಹನಿ ಸಿಂಪಡಿಸಿ
ಪಾರಿಜಾತದ ಪರಿಮಳವು
ಮನೆ ತುಂಬ ಹರಡುವುದು.

ಈಗ ಅಳುವುದು ಕಡಿಮೆ
ನಾ ಅಳಿಸುವುದೂ ಕಡಿಮೆ
ನಾನು ಅವಳ ರಾಜ್ಯದ ಸಾಮಂತ
ಕಪ್ಪ ಕಾಣಿಕೆಗಳಿಗೇನೂ ಕಡಿಮೆ ಇಲ್ಲ
ಪ್ತೀತಿ ಅಂದರೆ ಇಷ್ಟೇನಾ?
ಎಂದು ಕೇಳುವಳು
ಇದನು ಎಲ್ಲ ಗಂಡದಿಂರೂ ಮಾಡುವರು
ಹೌದು, ಇನ್ನಾದರೂ ಹೆಚ್ಚೆಚ್ಚು
ಪ್ರೀತಿಸಬೇಕು
ಮಿಕ್ಕುಳಿದ ಸಮಯ ತುಂಬ ಕಡಿಮೆ
ಇನ್ನು ಅವಳು ಅಳುವುದಿಲ್ಲ
ಅಳದಂತೆ ನಾ ನೋಡಿಕೊಳುವೆ
ಯಮನೆ! ಸಮಯ ಕೊಡು.

‍ಲೇಖಕರು Admin

15 November, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading