ಉದಯಕುಮಾರ್ ಹಬ್ಬು ಅವರ ‘ದ್ರೋಣ ಲವ್ಯ’

ಜಯಂತ

ಸನಾತನ, ಶಾಸ್ತ್ರ ಪುರಾಣ ಕರ್ತೃಗಳ ಹೆಗ್ಗಳಿಕೆ ಎಂದರೆ, ಲೋಕ ಕಲ್ಯಾಣ ವೊಂದೇಕೃತಿ ರಚನೆಯ ಉದ್ದೇಶವಾಗಿತ್ತು. ಬದುಕಿಗೆ ಬೇಕಾದ ಜ್ಞಾನದ ಬೆಳಕನ್ನು ಪಸರಿಸುವ, ಒಳಿತು ಮಾಡುವ ಧ್ಯೇಯದಿಂದಲೇ ಪ್ರಾಚೀನ ಋಷಿ ಮುನಿಗಳು, ಜ್ಞಾನಿಗಳಿಂದ ಮಹಾಗ್ರಂಥಗಳು ಸೃಷ್ಟಿಸಲ್ಪಟ್ಟವು. ಪಂಚಮ ವೇದವೆಂದೇ ಕರೆಯಲ್ಪಡುವ ‘ಮಹಾಭಾರತ,’ ಕತೆಯಷ್ಟೆ ಅಲ್ಲದೆ ಅಪಾರ ಜ್ಞಾನ ಭಂಡಾರ. ಹಾಗಾಗಿಯೇ ‘ವ್ಯಾಸೋಚ್ಛಿಷ್ಟಂ ಜಗತ್ಸರ್ವಂ’ ಎಂದಿದ್ದಾರೆ.

ಮಹಾಭಾರತದಲ್ಲಿ ಕರ್ತೃ ವ್ಯಾಸ ಮುನಿಗಳು ಹೇಳದೆ ಬಿಟ್ಟಿರುವುದು ಏನೂ ಇಲ್ಲ. ಜಗತ್ತಲ್ಲಿ ಏನೇ ಜ್ಞಾನವಿದ್ದರೂ ಅದನ್ನು ವ್ಯಾಸರು ಆಗಲೇ ಹೇಳಿಯಾಗಿದೆ! ಎಂದರ್ಥ. ನಾನು ಇತ್ತೀಚೆಗೆ ಓದಿದ ಉತ್ತಮ ಸುಂದರ ಪುಸ್ತಕ, ಪ್ರಖ್ಯಾತ ಸಾಹಿತಿ, ಚಿಂತಕ, ವಿಮರ್ಶಕ, ಸಹೃದಯಿ ಮಾನ್ಯ ಉದಯ ಕುಮಾರ ಹಬ್ಬು ರವರ ಕೃತಿ ‘ದ್ರೋಣ ಲವ್ಯ’.

ಈ ಕೃತಿಯಲ್ಲಿ ಲೇಖಕರು ಕತೆಯನ್ನು ಮನ ಮುಟ್ಟುವಂತೆ ಸುಂದರವಾಗಿ ಸಿಂಗರಿಸಿದ್ದಲ್ಲದೆ ಮದ್ಯೆ ಮದ್ಯೆ ಸಂದರ್ಭಕ್ಕೆ ತಕ್ಕಂತೆ ವೇದ ಪುರಾಣಗಳ ಅಣಿ ಮುತ್ತುಗಳಂತಹ ಸೂಕ್ತಿಗಳನ್ನು ಅಲ್ಲಲ್ಲಿ ಅಲಂಕರಿಸಿದ್ದಾರೆ. ಶ್ರೀಹರಿಗೆ ಸಮರ್ಪಿಸುವ ಸುಗಂಧಿತ ಸುಮಸರದಲ್ಲಿ ತುಳಸಿಯನ್ನು ಜತೆ ಯಾಗಿ ಹೆಣೆದು, ಸರದ ಸೌಂದರ್ಯವನ್ನು ಪಾವಿತ್ರ್ಯವನ್ನು ಹೆಚ್ಚಿಸಿದಂತೆ ಈ ಕೃತಿಯಲ್ಲಿ ತತ್ವ ತುಳಸಿಯ ಘಮ ಕೃತಿಯ ಘನತೆಯನ್ನು ನೂರ್ಮಡಿಗೊಳಿಸಿದೆ. ‘ದ್ರೋಣ ಲವ್ಯ’, ದ್ರೋಣರೆಂದರೆ ಶಸ್ತ್ರ-ಶಾಸ್ತ್ರ, ಪಾಂಡಿತ್ಯ, ಮಹತ್ತುಗಳಲ್ಲಿ ಮಹಾಪರ್ವತವೇ. ಏಕಲವ್ಯ ಎಂದರೆ ‘ಲವ’ ದಂತೆ ಚಿಕ್ಕ ಹುಡುಗ, ದಲಿತ!.

ಸೃಷ್ಟಿಯಲ್ಲಿ, ಮಾನವನಚರಿತ್ರೆಯಲ್ಲಿ, ದೊಡ್ಡದು ಇನ್ನೂ ದೊಡ್ಡದಾಗುವ ಪ್ರಕ್ರಿಯೆ ಯಲ್ಲಿ ಸಹಸ್ರ ಸಣ್ಣವು ಹೊಸಕಿ ಹೋಗಿವೆ ಅದು ಆಗಲು, ಈಗಲೂ ಕೂಡ. ಇದಕ್ಕೊಂದು ಉದಾಹರಣೆಯಾಗಿ, ಪಾರ್ಥನ ಮಹತ್ವಾಕಾಂಕ್ಷೆಗಾಗಿ, ಬಡ ಬಾಲಕನ ಭವಿಷ್ಯವೇ ಬಲಿಯಾಗಬೇಕಾಯಿತು. ಬೆರಳನ್ನು ದಕ್ಷಿಣೆಯಾಗಿ ಬೇಡಿದ ದ್ರೋಣರೇ ಇದಕ್ಕೆ ಹೊಣೆಯೆಂದು ಹೊರ ನೋಟಕ್ಕೆ ಅನಿಸುತ್ತದೆ. ಆದರೆ ಲೇಖಕರು ದ್ರೋಣರ ಧರ್ಮಸಂಕಟವನ್ನು ಮನ ಮುಟ್ಟುವಂತೆ, ಹೃದಯಂಗಮವಾಗಿ ವಿವರಿಸಿದ್ದಾರೆ.

ಆಚಾರ್ಯ ದ್ರೋಣರು ಏಕಲವ್ಯನನ್ನು ಶಿಷ್ಯನಾಗಿ ಸ್ವೀಕರಿಸಲು ಮನಸು ಮಾಡದಿರಲು ಕಾರಣ ಅವರು ಸಂವೇದನಾರಹಿತ ರೆಂದಲ್ಲ, ದಲಿತನೆಂಬ ಕೀಳು ಭಾವವೂ ಅವರಲ್ಲಿಲ್ಲ, ಅರ್ಜುನನಿಗೆ ಕೊಟ್ಟ ವಾಗ್ದಾನ, ತನ್ನ ಜೀವನದ ಧ್ಯೆಯವೇ ಆದ ‘ಶಪಥ’ವನ್ನು ಪೂರೈಸಿದ ಪ್ರಿಯ ಶಿಷ್ಯನ ಅಭೀಷ್ಟವನ್ನು ಮೀರಲಾರದ, ಮೀರಬಾರದ ಧರ್ಮ ಸಂಕಟ ಅವರನ್ನು ಕಟ್ಟಿ ಬೀಳಿಸಿತ್ತು.ಆಚಾರ್ಯರ ಪುತ್ರ ಅಶ್ವತ್ಥಾಮನ ಪ್ರೀತಿ ಸಂಪಾದಿಸಿದ ಏಕಲವ್ಯನಿಗೆ, ಪುತ್ರಪ್ರೇಮಿಯಾದ ಗುರುಗಳ ಹೃದಯದಲ್ಲಿ ತನಗಾಗಿ ಪ್ರೇಮ ಮೂಡಿಸುವ ಮಾರ್ಗ ಸುಗಮವಾಯಿತು.

ಪುರಾಣ ಕತೆಗಳಲ್ಲಿನ, ಲೋಹಿತಾಶ್ವ, ಪ್ರಹ್ಲಾದ, ದ್ರುವಕುಮಾರ ಇವರುಗಳು ರಾಜಕುಮಾರರಾಗಿದ್ದುದ್ದರಿಂದಲೇ ಜೀವನದಲ್ಲಿ ಕಡು ಕಷ್ಟಗಳನ್ನು ಅನುಭವಿಸಬೇಕಾಯಿತು. ಆದರೆ ಏಕಲವ್ಯನ ಕತೆ ಹಾಗಲ್ಲ ಅವನು ರಾಜಕುಮಾರನಲ್ಲದಿದ್ದುದೇ ಶೋಷಣೆಗೆ ಕಾರಣ.ಏಕಲವ್ಯನ ಅನನ್ಯ ಶ್ರದ್ಧೆ ಮತ್ತು ಪರಿಶ್ರಮ ಅವನನ್ನು ಅಪ್ರತಿಮ ಬಿಲ್ವಿದ್ಯಾ ಪ್ರವೀಣನನ್ನಾಗಿ ಮಾಡಿತು. ಇದರಲ್ಲಿ ಗುರು ದ್ರೋಣಾಚಾರ್ಯರ ಪಾತ್ರವೇನಿಲ್ಲ. ಅಸಾದೃಶ ಗುರುಭಕ್ತಿಯಿಂದಾಗಿಯೇ ವಿದ್ಯೆ ಕೈವಶವಾಗಿತ್ತು. ಆದರೂ ತನ್ನ ಅನನ್ಯ ಗುರುಭಕ್ತಿಯ ಪರಿಣಾಮದಿಂದ ಅಂಜದೆ, ಅಳುಕದೆ, ಗುರುದಕ್ಷಿಣೆಯಾಗಿ ತನ್ನ ಪ್ರಾಣವನ್ನು ಕೊಡುವುದಾದರೂ ಅದು ತನ್ನ ಮಹಾ ಭಾಗ್ಯವೆಂದ.

ರೂಡಿಗತ ಪದ್ಧತಿಯಂತೆ, ರಾಜ ಕುಟುಂಬದ ಪರಂಪರಾನುಗತ ನಿರ್ದೇಶನದಂತೆ ರಾಜಕುಮಾರರ ಹೊರತಾಗಿ ಅನ್ಯರಿಗೆ ರಾಜಗುರುಗಳು ಶಾಸ್ತ್ರ, ಶಸ್ತ್ರ ಅಭ್ಯಾಸ ಮಾಡಿಸುವಂತಿಲ್ಲ ಅದೂ ಅಲ್ಲದೆ ರಾಜಾಜ್ಞೆಯನ್ನು ಯಾವ ವಿವೇಕಿಯು ಮೀರುತ್ತಿರಲಿಲ್ಲವೆಂದ ಮೇಲೆ ದ್ರೋಣಾಚಾರ್ಯರು ಹೃದಯಸ್ಥ ಶಿಷ್ಯ ಪಾರ್ಥನ ಅಪೇಕ್ಷೆಯನ್ನು ಈಡೇರಿಸಲು, ಸಂಕಟದಿಂದ ಅನಿವಾರ್ಯವಾಗಿ ಗುರುದಕ್ಷಿಗೆ ಪಡೆಯಲುಧ್ಯುಕ್ತರಾದರು. ಏಕೋ ದೃಢಸಂಕಲ್ಪಿತನಾದ ಏಕಲವ್ಯ ಜೀವನ ಸಾಧನೆಯ ಮಹಾಫಲವನ್ನೆ ಬೆರಳಿನ ರೂಪದಲ್ಲಿ ಗುರುದಕ್ಷಿಣೆಯಾಗಿ ಬಲಿ ಕೊಡುತ್ತಾನೆ. ಇದನ್ನು ಕೃತಿಯಲ್ಲಿ ಉದಯ ಕುಮಾರರು ಅತ್ಯಾಪ್ತವಾಗಿ ಕಟ್ಟಿಕೊಟ್ಟಿದ್ದಾರೆ. ಯಾರೇ ಪಂಡಿತರಿರಲಿ ಮಹನೀಯರಿರಲಿ ಪ್ರಭುತ್ವದ ಆದೇಶಕ್ಕೆ ತಲೆ ಬಾಗಲೇಬೇಕು ರೂಢಿಗತ ನೀತಿ ನಿಯಮಗಳನ್ನು ಪಾಲಿಸಲೇ ಬೇಕು.

ಪ್ರತಿಯೊಬ್ಬ ವ್ಯಕ್ತಿಯೂ ಕಾಲನ ಕೈಗೊಂಬೆಯಲ್ಲವೇ? ಪ್ರಿಯ ಶಿಷ್ಯ ಪಾರ್ಥನ ದೃಷ್ಟಿಯಲ್ಲಿ ಮಾತು ತಪ್ಪಿ, ಮಹತ್ವ ಕಳೆದುಕೊಳ್ಳಲಿಚ್ಚಿಸಲಿಲ್ಲ ಆಚಾರ್ಯರು. ಸಮನಾದ ರೇಖೆಗಳೆರಡರಲ್ಲಿ ಒಂದನ್ನು ಬೆಳೆಸಲು ಮತ್ತೊಂದನ್ನು ಮುರಿದಂತೆ, ಅರ್ಜುನನನ್ನು ಅದ್ವಿತೀಯನನ್ನಾಗಿಸಲು ಏಕಲವ್ಯನ ಬೆರಳು ಕತ್ತರಿಸಿದ್ದು, ಪ್ರತಿಭೆಯ ಕತ್ತು ಹಿಸುಕುವ ಪಟ್ಟಭದ್ರರ ಸ್ವಾರ್ಥಕ್ಕೆ ಸರ್ವಕಾಲಿಕ ಸಂಕೇತವಾದಂತಾಯ್ತು!. ಪ್ರತಿಭಾಹನನ ಅಂದಿನಿಂದ ಇಂದೂವರೆಗೂ ಅವ್ಯಾಹತವಾಗಿ ನಡೆಯು ತ್ತಲೇ ಇದೆಯಲ್ಲವೆ?. ಕುಂಟನನ್ನು ಓಟದಲ್ಲಿ ಮೊದಲಿಗನನ್ನಾಗಿಸಲು ಓಡುವ ವೇಗಿಯ ಕಾಲು ಕಟ್ಟಿರಿಸುವುದು!. ವೈದಿಕ ಪರಂಪರೆಯ ಸಾಮಾಜಿಕ ವ್ಯವಸ್ಥೆ ಎಂದರೆ, ವೇದ ಶಾಸ್ತ್ರಗಳ ನಿಯಮಗಳ ಪ್ರಕಾರ ಶಾಸನ ಮಾಡಿ ಆಳುವುದೇ ಅಲ್ಲವೆ? ಇದು ಯಾವ ಕಾಲಘಟ್ಟದಲ್ಲಿ ಪ್ರಚಲಿತವಿತ್ತು?.

ಯಜಮಾನಿಕೆ ಎಂದರೆ ಮನೆಯ ಅಥವಾ ರಾಜ್ಯದ ಆಡಳಿತ ವ್ಯವಸ್ಥೆಯ ಸಂಪೂರ್ಣ ತನ್ನ ನಿಯಂತ್ರಣದಂತೆ ನಡೆಸುವುದು, ಈ ಅರ್ಥದಲ್ಲಿ ಬಾಹ್ಮಣ್ಯದ ಅಥವಾ ವೇದ ಶಾಸ್ತ್ರಗಳ ಕರ್ತೃಗಳ ಯಜಮಾನಿಕೆ ಯಾವುದಾದರೂ ಕಾಲದಲ್ಲಿ ಇತ್ತೆ? ವೇದ ಶಾಸ್ತ್ರಗಳು ಕೇವಲ ದರ್ಶನಗಳಷ್ಟೇ ಶಾಸನವಲ್ಲ!, ಋಷಿಮುನಿಗಳು ಕಂಡುಕೊಂಡ ಜ್ಞಾನ. ಆಳುವ ರಾಜರು ತಮ್ಮ ಸಂವಿಧಾನ ವೆಂದು ಅಂಗೀಕರಿಸಿದರೆ ಮಾತ್ರ ಅದು ಶಾಸನವಾಗಿ ಜನರ ಮೇಲೆ ಹೇರಲ್ಪಡುತ್ತದೆಯಲ್ಲವೇ?. ಕಾನೂನಿಗೆ ತಲೆಬಾಗಿ ಬದುಕು ನೆಡೆಸದ ಉದ್ಧಟತನದ ಉದಾಹರಣೆಗಳು ಕಣ್ಣೆದುರೇ ಕುಣಿಯುತ್ತಿರುವಾಗ, ಯಾರೋ ಬಡ ಬ್ರಹ್ಮಜ್ಞಾನಿಗಳ ಬರಹಕ್ಕೆ ಬಾಗಿ ಬದಲಾಗುವರೇ ನಮ್ಮ ಜನರು? ಇನ್ನು ಬ್ರಾಹ್ಮಣ್ಯದ ಯಜಮಾನಿಕೆಯೇ ಮೆರೆದು ಅವರ ಪ್ರಭಾವವೇ ಪ್ರಚಲಿತವಿದ್ದರೆ, ತನ್ನವರಾದ ಒಬ್ಬ ದೇವರನ್ನೂ ಸೃಷ್ಟಿಸಿಕೊಳ್ಳಲಾಗದಿದ್ದುದ್ದೇಕೆಂದು ಕಂಡುಹಿಡಿಯಬೇಕಿದೆ!?

‘ಮಹಾಬ್ರಾಹ್ಮಣ’ನನ್ನು ಕೊಂದ ಕ್ಷತ್ರೀಯ ಶ್ರೀರಾಮ ನಮ್ಮ ದೇವರು!, ಗೊಲ್ಲ ಕೃಷ್ಣ, ಸ್ಮಶಾನವಾಸಿ S C, S T ಹರಿಹರರು ನಮ್ಮ ಸಾರ್ವಕಾಲಿಕ ಪೂಜನೀಯ ಪರಮಾತ್ಮರು!, ಇಲ್ಲಿ ಯಾವ ಬ್ರಾಹ್ಮಣ್ಯದ ಯಜಮಾನಿಕೆಯ, ವೇದ ಪರಂಪರೆಯ, ಸಾಮಾಜಿಕ ವ್ಯವಸ್ಥೆ ತನ್ನ ಸರ್ವಾಧಿಕಾರ ಮೆರೆದಂತೆ ಕಾಣುತ್ತಿದೆ?ಬ್ರಾಹ್ಮಣನಾದ ರಾವಣ, ಗುಣದಲ್ಲಿ ತಾಮಸ ಪ್ರವೃತ್ತಿಯವನು, ಸಂಹಾರವಾಗಬೇಕಾಯ್ತು.

ಯಾವುದೇ ‘ರಾಜ’ ಕಾರಣದ, ಹಣದ ಪ್ರಭಾವವಿಲ್ಲದ ಶ್ರೀಕೃಷ್ಣ ಗುಣಕ್ಕಾಗಿ ನಮ್ಮ ದೇವರು, ಶಿವನ ಕಷ್ಟ ಸಹಿಷ್ಣುತೆ, ತಪಸ್ಸು, ತ್ಯಾಗದಿಂದ ನಮಗೆ ಅನವರತ, ಅನನ್ಯ ಪೂಜನೀಯ ದೈವ… ಸೃಷ್ಟಿಯ ಸರ್ವ ಜೀವಿಗಳಲ್ಲಿ ‘ಬಲ’ ದುರ್ಬಲವನ್ನು ಆಳುತ್ತದೆ, ಅಳಿಸುತ್ತದೆ, ಅಳಿಸುತ್ತಿರುತ್ತದೆ… ಇದರ ಜೊತೆಗೆ ನಾಗರಿಕ ಮಾನವನ ಜೀವನದಲ್ಲಿ, ನಾವು ಕಟ್ಟಿಕೊಂಡ ಹಣ ಮದ, ಅಧಿಕಾರದ ದರ್ಪದಿಂದ ಜನಸಾಮಾನ್ಯರನ್ನು ಶೋಷಿಸಲು ಸಾಧ್ಯವಾಗುತ್ತದೆ, ಇದು ಸರಳ ಸ್ಪಷ್ಟವಾಗಿ ಅರಿವಿಗೆ ಬರುವ ವಿಚಾರ.

ಮಾನವ ಪ್ರಪಂಚದಲ್ಲಿ ಅದು ದೇಶ ಯಾವುದೇ ಇರಲಿ ‘ಬ್ರಾಹ್ಮಣ್ಯ’ವೇ ಶಿರದಂತೆ ಇದೆ. ಅದಕ್ಕೆ ರಕ್ಷಣೆಯಾಗಿ ಬಲ ಕೊಡುವ ತೋಳುಗಳಂತೆ ಕ್ಷಾತ್ರತೇಜಸ್ಸು. ವಾಣಿಜ್ಯ ವ್ಯಾಪಾರಗಳು ಸಮಾಜ ಸದನದ ದೃಢವಾದ ಸ್ತಂಭಗಳು. ಶ್ರಮಿಕರು ಸಮಾಜ ಸದನದ ಭದ್ರ ಅಡಿಪಾಯ, ಎಲ್ಲರಿಗೂ ಎಲ್ಲಕ್ಕೂ ಆಧಾರ, ಇಂದಿಗೂ ಅವರೇ ಪ್ರತಿಶತ ಐವತ್ತಕ್ಕಿಂತಲೂ ಜಾಸ್ತಿ ಇದ್ದಾರಲ್ಲ!. ಬದಲಿಸ ಲಾಗಲಿಲ್ಲವೇಕೆ?. ಒಬ್ಬ ಶಿಕ್ಷಕ, ನ್ಯಾಯಾದೀಶರು … ಇವರಂತೆ ವಿದ್ಯೆ ಅಥವಾ ಜ್ಞಾನವನ್ನು ಪಡೆದವರು ಇಂದಿನ ಸಮಾಜದಲ್ಲಿಯೂ ಉನ್ನತ ಗೌರವಕ್ಕೆ ಪಾತ್ರರಾಗುತ್ತಾರೆ, ಇವರು ‘ಬ್ರಾಹ್ಮಣ್ಯ’ ವರ್ಗದವರು. ರಕ್ಷಣೆ ಮಾಡುವವರು ಕ್ಷಾತ್ರ ವರ್ಚಸ್ಸು, ಯೋಧರು, ಪೋಲಿಸರು ಇವರೆಲ್ಲಾ ಸಮಾಜದ ರಕ್ಷಾ ಕವಚ .ವ್ಯಾಪಾರವೇ ‘ವೈಶ್ಯ’ ತನ, ಶ್ರಮ ಜೀವನದವರು ಶೂದ್ರ ಬಲದವರು.

ಸಮಾಜ ವ್ಯವಸ್ಥೆಯಲ್ಲಿ ಈ ಅನುಕ್ರಮವನ್ನು ಬದಲಿಸಿ ಯಾರಾದರೂ ಹೊಸ ಸಮತಾ ಸಮಾಜ ಸೃಷ್ಟಿಸಲು ಸಾಧ್ಯ ವಾದರೆ ಅವರು ದೇವರೇ ಸರಿ. ಸಾವಿರಾರು ವರ್ಷಗಳ ಕಾಲ ನಮ್ಮನ್ನಾಳಿ ಕ್ರೂರವಾಗಿ, ಪ್ರಾಣಿಗಳಿಗಿಂತ ಹೀನಾಯವಾಗಿ ಕಂಡ ಪರ ದೇಶಿಗಳೊಡನೆ ನಾವು ಸಹಾರ್ಧ ಸಂಬಂಧವಿಟ್ಟುಕೊಂಡಿಲ್ಲ ವೆ?. ಈಗ ಅವರ ಪೂರ್ವಿಕರ ಕರ್ಮಕ್ಕೆ ಇವರ ಮೇಲೆ ಪ್ರತಿಕಾರ ಮಾಡಲಾಗಬಹುದೆ?… ಗ್ರಾಮೀಣರಲ್ಲಿ ಗರತಿಯರಿಗೆ ಗಂಡನೆದುರಾಡಾಲಾರದ ಅಸಹಾಯಕತೆಯಿಂದಾಗಿ, ಮುದ್ದು ಮಕ್ಕಳ ಮೇಲೆ, ಹಸು ಕರು, ಪ್ರೀತಿಯ ಸಾಕುಪ್ರಾಣಿಗಳ ಮೇಲೆ ಸಿಡುಕುವುದುಂಟು.

ಇದೇ ಮಾನಸಿಕತೆಯಿಂದ ಪುರುಷರು ಹೀಗೆ ಮಾಡಿದರೆ ಅವರ ಶೂರತನಕ್ಕೆ ಶೋಭೆ ತರಲಾರದಲ್ಲವೆ?. ಹಸಿರಿರುವ ಹಾವನ್ನು ಹಿಡಿದು ಆಡಿಸಿ ಆನಂದ ಪಡೆಯುವುದು ಚಿಕ್ಕಂದಿನಲ್ಲಿ ಆಟವಾಗಿತ್ತು, ಅದಕ್ಕೆ ಧೈರ್ಯವೆಂದರೆ ಅದು ವಿಷಕಾರಿಯಲ್ಲ, ಕಚ್ಚುವುದಿಲ್ಲವೆಂದು. ಈ ಕಾರಣಕ್ಕಾಗಿಯೇ ಹಿರಿಯರೂ ಬೇಡವೆನ್ನುತ್ತಿರಲಿಲ್ಲ ವೇನೋ!. ನಾಗರ ಕಂಡರೆ ಮಾತ್ರ  ಕೈ ಮುಗಿದು ದೂರ ವಿರುವಂತೆ ಸೂಚಿಸುತ್ತಿದ್ದರು.

ದುಷ್ಟತನಕ್ಕೆ ಜೀವ ಭಯದಿಂದ ದೂರವಿರುವ ಅಭ್ಯಾಸ ಅನಾದಿಯಿಂದಲೇ ರಕ್ತ ಗತವಾಗಿ ರೂಢಿಯಾಗಿದೆ!? ನಾವು ಮರೆಯಬಾರದು, ಸಾತ್ವಿಕ ಋಷಿಮುನಿಗಳ ಬದುಕಿಗೆ ಭಂಗ ತಂದು ಹರ್ಷಿಸುವ ರಾಕ್ಷಸರ ಕತೆಗಳನ್ನು ನಾವು ಓದಿದ್ದೆವೆ… ಸರಳ, ಸಾತ್ವಿಕ ಸಜ್ಜನಿಕೆಯ ಜೀವನ ನೆಡೆಸುವವರೆ ಸ್ವಸ್ಥ ಸಮಾಜದ ಸಂಪತ್ತು, ಅವರ ಮೇಲೆ ಸವಾರಿ ಮಾಡಿದರೆ ಅದು ನಾಗರೀಕತೆಯಲ್ಲ, ರಾಕ್ಷಸೀ ತನವಾಗುತ್ತದೆ.

ಸಾಧ್ಯವಾದರೆ, ಕ್ರೌರ್ಯದ, ಕಾ’ಮದ’, ಭ್ರಷ್ಟತನದ ಮೇಲೇರಿ ಸೊಕ್ಕು ಮುರಿಯಬೇಕು, ಸಾಧ್ಯವೆ?. ‘ದ್ರೋಣ ಲವ್ಯ’ ಕಿರು ಕಾದಂಬರಿಯಲ್ಲಿ ಶ್ರೀ ಯುತ ಹಬ್ಬು ರವರು ದ್ರೋಣಾಚಾರ್ಯ ಏಕಲವ್ಯನ ಕತೆಯ ಜತೆಗೇ ಮಹಾಭಾರತದ ಅನೇಕ ಬೆಳಕಿನ ಕಿರಣಗಳನ್ನು ಸಂದರ್ಭೋಚಿತ ಹಾಯಿಸಿ ಕೃತಿಯರುಚಿ ಹೆಚ್ಚಿಸಿ, ತತ್ವ ಶಾಸ್ತ್ರ, ಭಾರತೀಯ ಮೂಲ ಚಿಂತನೆಗಳ ಬಗೆಗೆ ಆಸಕ್ತಿ ಚಿಗುರುವಂತೆ ಚೆಂದವಾಗಿ ಬರೆದು, ಮಾನವೀಯತೆಯೇ ಮಹೋನ್ನತ್ಯವೆಂದು ಈ ಕೃತಿಯಲ್ಲಿ ಸಾಧಾರ ಸ್ಪಷ್ಟ ಚಿತ್ರಿಸಿದ್ದಾರೆ.

ಇಲ್ಲಿ, ಸನಾತನ ಹಿಂದೂ ಧರ್ಮದ ಕೃತಿಗಳ ಬಗೆಗೆ ಅರಿವ ಆಸಕ್ತಿ ಇರುವವರಿಗೆ ಅಲ್ಲದೆ ಬೇಕೆಂದೇ ‘ದೋಷೈಕ ದೃಷ್ಟಿ’ಯಿಂದ ಹುಳುಕು ಹುಡುಕುವವರಿಗೂ ವೇದ ಪುರಾಣಗಳ ಅಮೂಲ್ಯ ವಾಖ್ಯ ಗಳನ್ನು ಉದ್ಧರಿಸಿ ಉಪಕರಿಸಿದ್ದಾರೆ. ಅಂದಿನ ಸಾವಿರಾರು ವರ್ಷಗಳ ವಿದ್ಯಮಾನಗಳನ್ನು ಜೀವನ ವಿಧಾನಗಳನ್ನು ಈಗಿನ ಸಾಮಾಜಿಕ ದೃಷ್ಟಿಕೋನದಿಂದ ತುಲನೆ ಮಾಡಿ ಸಮಾಧಾನವಾಗು ವಂತಹ ಸಮತಾವಾದ ಮಂಡಿಸಿದಂತಿದೆ.

ಆದರಂತೆ ಏಕಲವ್ಯ ದಲಿತ, ದ್ರೋಣಾಚಾರ್ಯ ಮೇಲ್ವರ್ಗದ ಪ್ರತಿನಿಧಿ, ಈ ನೆಲೆಯಲ್ಲಿ ಕಥಾಹಂದರವನ್ನು ಈಗಿನ ಮನಸ್ಥಿತಿಗೆ ಮನದಟ್ಟಾಗು ವಂತೆ ಸರಳಸುಂದರವಾಗಿ ಸೂಕ್ತ ಉದಾಹರಣೆಯೊಂದಿಗೆ ಚಿತ್ರಿಸಿ, ಸಾಹಿತ್ಯಾಸಕ್ತರಿಗೆ ಸವಿ ನೀಡಿದ್ದಾರೆ ಲೇಖಕರು. ದೀಪದ ಬುಡ ಕತ್ತಲಿರುವಂತೆ, ನಮ್ಮ ಬೆನ್ನು ನಮಗೆ ಕಾಣದಿರುವಂತೆ, ಈಗಿನ ನಮ್ಮ ತಪ್ಪುಗಳು ನಮಗೆ ಅರಿವಿಗೆ ಬರಲಾರದು. ಮುಂದಿನ ಇತಿಹಾಸಕಾರರಿಗೆ ಅದು ಗೋಚರಿಸುವುದು.

ನಮಗೆ ಈಗ ಅಂದಿನವರ ತಾರತಮ್ಯ, ದೊಡ್ಡವರ ಸಣ್ಣತನ ಸುಸ್ಪಷ್ಟವಾಗಿ ಅರಿವಾಗುತ್ತದೆ! ಇಂದು ನಾಗರೀಕರಾಗಿ ಮುಂದುವರಿದಿರುವ ನಾವು ಒಬ್ಬ ಮೇಲಧಿಕಾರಿಯಾಗಿ ಕೆಳಗಿನವನನ್ನು, ವಿದ್ಯಾವಂತನಾಗಿ ಶ್ರಮಿಕನನ್ನು, ಶ್ರೀಮಂತನಾಗಿ ಬಡವವನ್ನು ಗೌರವಿಸುವ, ವಿಶ್ವಾಸದಿಂದ ಸಮಾನವಾಗಿ ನೋಡುವ ಸಂಸ್ಕಾರವನ್ನು ಹೊಂದಿದ್ದರೆ ಹಿಂದಿನವರ ದೋಷಗಳನ್ನು ದೂರುವ ಯೋಗ್ಯತೆ ಬರುತಿತ್ತೇನೋ. ಅಷ್ಟೇ ಏಕೆ, ಮೇಲುವರ್ಗದವರ ಮೇಲಾಟದ ಬಗ್ಗೆ ಭಾಷಣ ಬಿಗಿಯುವ ವಿಚಾರವಾದಿಗಳು ಒಂದು ಮೀಸಲು ಅವಕಾಶದಿಂದ ಮಂತ್ರಿ ಸ್ಥಾನವನ್ನೋ, ಅಧಿಕಾರವನ್ನೋ ಪಡೆದುಕೊಂಡು ತನ್ನ ವರ್ಗದವರೇ ಆದ ಇತರರನ್ನು ಸಮಾನವಾಗಿ ಕಂಡು, ಅವರನ್ನು ಬೆಳೆಸುವ ಮಾನವತ್ವವನ್ನು ಮೆರೆದ  ಉದಾಹರಣೆ ಇನ್ನೂ ಕಂಡು ಬಂದಿಲ್ಲ, ಈಗ ಯಾರು ಯಾರ ಶೋಷಕರು? ಪ್ರಸ್ತುತ ಒಬ್ಬ ಏಕಲವ್ಯ ನನ್ನನಲ್ಲ, ಯಾವುದೋ ಒಂದು ಕಾರಣಕ್ಕಾಗಿ ಒಂದು ವರ್ಗದಲ್ಲಿ ಹುಟ್ಟಿದ್ದದ್ದಕ್ಕಾಗಿ ಸಾಮೂಹಿಕವಾಗಿ ಎಷ್ಟೊಂದು ಪ್ರತಿಭಾವಂತರ ಬದುಕನ್ನೆ ಕತ್ತರಿಸಿಲ್ಲ?.

ಇಂದಿನ ವ್ಯವಸ್ಥೆಯ ವಾಸ್ತವ ಇದು, ಇಂದಿನ ಅವಿವೇಕಿ ತನದ ಬಗ್ಗೆ ಮುಂದಿನ ಇತಿಹಾಸಕಾರರು ವಿಷದವಾಗಿ ವಿವರಿಸುತ್ತಾರೆ! ‘ದ್ರೋಣಲವ್ಯ’ ಕಿರು ಕಾದಂಬರಿಯ ಓದು ನನಗೆ ಓದಿನ ಸಂತೃಪ್ತಿ ಯೊಂದಿಗೆ ಹೊಸ ಹೊಸ ವಿಚಾರದ ಹೊಸ ಬೆಳಕನ್ನು ನೀಡಿ ಚಿಂತನೆಗೆ ಗ್ರಾಸ ಒದಗಿಸಿತು. ಉತ್ತಮ ಕೃತಿಯೊಂದನ್ನು ಕನ್ನಡ ಸಾಹಿತ್ಯ ಲೋಕಕೆ ನೀಡಿದ ಮಾನ್ಯ ಉದಯ ಕುಮಾರ ಹಬ್ಬುರವರು ಅಭಿನಂದನಾರ್ಹರು. ಈ ಸಾರಸ್ವತ ರಿಂದ ಸವಿಗನ್ನಡ ಸಾಹಿತ್ಯ ಲೋಕಕ್ಕೆ ಮೈಲಿಗಲ್ಲಾಗಬಲ್ಲ ಉತ್ತಮ ಕೃತಿಗಳು ಮೂಡಿ ಬರಬಲ್ಲದೆಂಬ ಬರವಸೆಯಿದೆ

‍ಲೇಖಕರು Avadhi

April 1, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: