’ಈ ಹೊತ್ತಿಗೆ’ಯಲ್ಲಿ ಚೇಳು!

 

– ಎನ್ ಸಂಧ್ಯಾರಾಣಿ

ಈ ಹೊತ್ತಿಗೆಯ ಈ ಸಲದ ಪುಸ್ತಕ ವಸುಧೇಂದ್ರ ಅವರು ಬರೆದ ಚೇಳು.

’ನಮ್ಮಮ್ಮ ಅಂದ್ರೆ ನಂಗಿಷ್ಟ’ ಅನ್ನುವ ಸರಳ ವಾಕ್ಯ ಮತ್ತು ಹಾಗೇ ಸರಳವಾದ ಮತ್ತು ಸರಳತೆಯಿಂದಲೇ ನಮಗೆ ಹತ್ತಿರವಾಗುವ ಪ್ರಬಂಧಗಳ ಮೂಲಕ ವಸುಧೇಂದ್ರ ನಮಗೆ ಪರಿಚಿತರಾದರು.  ಸಾಫ್ಟ್ ವೇರ್ ಲೋಕದ ಬಗ್ಗೆ ಒಂದು ಸ್ಟೇಟ್‍ಮೆಂಟ್ ಅನ್ನುವ ಕಥೆಗಳನ್ನು ಮಾತ್ರ ಓದಿದ್ದವರಿಗೆ ಆ ಲೋಕದ ನೋವು, ನಲಿವು, ಒತ್ತಡ, ದೊಡ್ಡ ಮೊತ್ತದ ಹಣ, ಅದು ಕೊಡುವ ಸ್ವಾತಂತ್ರ್ಯ ಮತ್ತು ಬಂಧನ ಎಲ್ಲಾ ಇವರ ಕಥೆಗಳ ಮೂಲಕ ದಕ್ಕುತ್ತಾ ಹೋದವು.

’ಈ ಹೊತ್ತಿಗೆ’ಯಲ್ಲಿ ಇಂದು ನಾವೆಲ್ಲರೂ ಓದಿದ, ಮಾತಾಡಿದ ಪುಸ್ತಕ ವಸುಧೇಂದ್ರ ಅವರ ಚೇಳು. ಇಲ್ಲಿ ಏಳು ಕಥೆಗಳಿವೆ. ಅದರಲ್ಲಿ ಮೂರು ಕಾರ್ಪೋರೇಟ್ ಬದುಕಿನ ತಲ್ಲಣಗಳ ಬಗ್ಗೆ ಹೇಳಿದರೆ, ಇನ್ನು ಮೂರು ಮಾನವ ಸಂಬಂಧಗಳ ಬಗ್ಗೆ ಹೇಳುತ್ತವೆ. ಮತ್ತೊಂದು ಮಾನವ ಸಂಬಂಧಗಳ ಬಗ್ಗೆ ಹೇಳುವುದರ ಜೊತೆಗೆ ಅಲ್ಲಿಯವರೆಗೂ ಕನ್ನಡ ಕಥೆಗಳಲ್ಲಿ ಚರ್ಚಿತವೇ ಆಗಿಲ್ಲದ ಮತ್ತು ಅಲ್ಲಿಯವರೆಗೂ ಬಹುಮಟ್ಟಿಗೆ ಒಂದು ವಿಕೃತ ಎಂದೇ ಕರೆಯಲ್ಪಡುತ್ತಿದ್ದ ಸಲಿಂಗ ಕಾಮದ ಬಗ್ಗೆ ಸಹಾನುಭೂತಿಯ ನೋಟ ಹೊತ್ತು ಹೊರಬಂದಿತ್ತು. ಆ ಕಥೆಯ ಹೆಸರು ’ಅನಘ’ – ಕಥೆಗಾರರೇ ಹೇಳಿದಂತೆ ಅ-ನಘ, ’ಅಘ’ ಎಂದರೆ ಪಾಪ, ಅನಘ ಎಂದರೆ ಪಾಪವಲ್ಲದ್ದು – ಹಾಗೆಂದ ಮಾತ್ರಕ್ಕೆ ಅದು ಪುಣ್ಯ ಅಂತಲ್ಲ, ಪಾಪವಲ್ಲದ್ದು ಅಷ್ಟೆ.

ಇಲ್ಲಿನ ಎಲ್ಲಾ ಕಥೆಗಳಲ್ಲೂ ಒಂದಲ್ಲ ಒಂದು ರೂಪದಲ್ಲಿ ಕಾಣಿಸಿಕೊಳ್ಳುವುದು ಜಾಗತೀಕರಣ ಮತ್ತು ಅದರ ಕಬಂಧ ಬಾಹು. ಜಾಗತೀಕರಣ ಇಲ್ಲಿ ವೈಯಕ್ತಿಕ ಮಟ್ಟದಲ್ಲಿ ಮತ್ತು ಸಾಮಾಜಿಕ ಮಟ್ಟದಲ್ಲಿ, ಎರಡೂ ಕಡೆ ಪರಿಣಾಮ ಬೀರುತ್ತಿದೆ.  ವ್ಯಕ್ತಿಯನ್ನು ತನಗೆ ಅಗತ್ಯವಿದ್ದಾಗ ಕಬ್ಬಿನಂತೆ ಉಪಯೋಗಿಸಿಕೊಂಡು, ಕಬ್ಬಿನ ಜಲ್ಲೆಯಲ್ಲಿ ರಸ ತೀರಿದ ಮರುಕ್ಷಣ ಅದನ್ನು ತಿಪ್ಪಿಗೆಸೆಯುವ ಜಾಗತೀಕರಣದ ಗುಣದ ಬಲಿಪಶುಗಳು ಇಲ್ಲಿ ವೆಂಕಮ್ಮ, ನರಸಕ್ಕ ಆದರೆ, ಸಮಾಜದ ಮಟ್ಟದಲ್ಲಿ ಜಾಗತೀಕರಣದ ಕ್ರೌರ್ಯ ಇನ್ನೂ ದೊಡ್ಡದು. ಅದಕ್ಕೆ ಚೇಳಿನ ಔಷಧಿ ಇಳಿಸಿದರೆ ಸಾಲದು, ಅದನ್ನು ನಿರ್ವಂಶವಾಗಿಸಿ ಬಲಿಹಾಕಿದರೇನೆ ಸಮಾಧಾನ.  ತನ್ನ ಲಾಭಕ್ಕಾಗಿ ಒಂದು ಜೀವಂತ ಸಂಸ್ಕೃತಿಯನ್ನು ಇನ್ನೊಂದು ಯೋಚನೆಯಿಲ್ಲದೆ ಹೊಸಕಿ ಹಾಕುವ ಜಾಗತೀಕರಣದ ತಣ್ಣನೆಯ ಕ್ರೌರ್ಯ ಇಲ್ಲಿನ ಎಲ್ಲಾ ಕಥೆಗಳ ಸ್ಥಾಯೀಭಾವ.

ವಸುಧೇಂದ್ರರ ಬಹುಮಟ್ಟಿನ ಕಥೆ – ಕಾದಂಬರಿಗಳಲ್ಲಿ ಹೆಣ್ಣಿನ ಪಾತ್ರ ಯಾವಾಗಲೂ ಸಶಕ್ತವಾಗಿರುತ್ತದೆ. ಲಂಕೇಶರ ಅವ್ವನಂತೆ, ಇಲ್ಲಿ ಹೆಣ್ಣು ಜಗಳವಾಡುತ್ತಾಳೆ, ಹಟ ಮಾಡುತ್ತಾಳೆ, ತನ್ನತನವನ್ನು ಹೇಗಾದರೂ ಹುಡುಕಿಕೊಳ್ಳುತ್ತಾಳೆ ಮತ್ತು ತನ್ನ ವ್ಯಕ್ತಿತ್ವದ ಶಕ್ತಿಯ ಪಾತಳಿಯಲ್ಲೇ ಉಳಿದದ್ದಕ್ಕೆಲ್ಲಾ ನೆಲೆ ಒದಗಿಸಿಕೊಡುತ್ತಾಳೆ. ಚೇಳು ಕಥೆಯ ವೆಂಕಮ್ಮನ ಹಾಗೆ. ತನ್ನ ತಪ್ಪೇನೂ ಇಲ್ಲದೆ ಆಕೆ ಬಂಜೆ ಎನ್ನುವ ಹಣಿಪಟ್ಟಿ ಕಟ್ಟಿಕೊಳ್ಳಬೇಕಾಗುತ್ತದೆ, ಕಡೆಗೆ ಗಂಡನ ಬಲವಂತದಿಂದಲೇ ಒಬ್ಬ ಬಾಬಾನ ಬಳಿ ಇರುಳು ಪೂಜೆಗೆಂದು ಹೋಗುತ್ತಾಳೆ. ನಿರೀಕ್ಷಿತವಾಗಿಯೇ ಅಲ್ಲಿ ಆ ಸನ್ಯಾಸಿ ಅವಳನ್ನು ಬಲಾತ್ಕಾರದಿಂದ ತನ್ನವಳಾಗಿಸಿಕೊಳ್ಳುತ್ತಾನೆ. ಮರುದಿನ ಹೋಗಲೂ ಆಕೆ ತಕರಾರು ಮಾಡುತ್ತಾಳೆ, ಮತ್ತೆ ಗಂಡ ಬಲವಂತ ಮಾಡುತ್ತಾನೆ, ಈಕೆ ಹೋಗುತ್ತಾಳೆ. ಗಂಡನಿಗೆ ಯಾಕೋ ಅನುಮಾನ ಬಂದು ಅವಳನ್ನು ಹಿಂಬಾಲಿಸಿ ಬಂದಾಗ ವಿಷಯ ಅರಿವಾಗುತ್ತದೆ, ಆಕೆ ಅಪರಾಧಿಯಾಗುತ್ತಾಳೆ.  ಗಂಡನಿಂದ, ಊರಿನಿಂದ ಬಹಿಷ್ಕೃತೆಯಾಗಿ ಒಂಟಿಯಾಗಿ ಕೂತ ಈಕೆಯನ್ನು ನೋಡಲೆಂದು ಬಂದ ಅಮ್ಮ, ’ಯಾಕೇ ಹೀಗೆ ಮಾಡಿದೆ’ ಅನ್ನುತ್ತಾಳೆ. ’ಹೆಂಗೋ …ನನಗೂ ಮಕ್ಕಳು ಅಂತ ಆದರೆ ಸಾಕು ಅನ್ನಿಸಿತ್ತವ್ವ’ ಅಂದುಬಿಡುತ್ತಾಳೆ ಈಕೆ. ತನ್ನ ಗಂಡ ಬಲವಂತ ಮಾಡಿ ಕಳಿಸಿದ ಅನ್ನುವುದಿಲ್ಲ, ಬಾಬ ಬಲಾತ್ಕಾರ ಮಾಡಿದ ಅನ್ನುವುದಿಲ್ಲ …. ತನ್ನ ಸತ್ಯವನ್ನು ನಿಸ್ಸೂರಾಗಿ ಹೇಳಿ ಬಿಡುತ್ತಾಳೆ. ಆ ನಿಯತ್ತು ಮತ್ತು ಘನತೆ ಅವಳ ಬದುಕಿನಲ್ಲೇ ಅಲ್ಲ, ಸಾವಿನಲ್ಲೂ ಕಾಣಿಸುತ್ತದೆ.  ಇದು ಒಂದು ಉದಾಹರಣೆ ಮಾತ್ರ, ಇವರ ಕಥೆಗಳ ಬಹುಪಾಲು ಹೆಣ್ಣು ಮಕ್ಕಳು ಹೀಗೆ, ಆಕೆ ಕ್ಷಿತಿ ಆಗಿರಬಹುದು, ಸೂಗವ್ವ ಆಗಿರಬಹುದು, ನರಸಕ್ಕ ಆಗಿರಬಹುದು ಅಥವಾ ಪರಮ ಮುಗ್ಧೆ ಶ್ರೀದೇವಿ ಆಗಿರಬಹುದು. ಬಹುಷಃ ವಸುಧೇಂದ್ರರ ’ಅಮ್ಮ’ ಎಲ್ಲಾ ಕಥೆಗಳ ಸ್ತ್ರೀ ಪಾತ್ರಗಳಿಗೂ ತನ್ನ ವ್ಯಕ್ತಿತ್ವದ ಒಂದೊಂದು ಎಳೆ ಒದಗಿಸಿದ್ದಾರಾ ಅನ್ನಿಸಿಬಿಡುತ್ತದೆ.

ಒಂದು ಮಾತಿದೆ, ’You can take the person out of the village, but you cannot take the village out of a person’ ಅಂತ.  ಅಂದರೆ ವ್ಯಕ್ತಿಯ ಊರು, ಬೆಳೆದ ಪರಿಸರ, ಕಲಿತ ಮೌಲ್ಯಗಳು ಎಲ್ಲವೂ ವ್ಯಕ್ತಿಯ ವ್ಯಕ್ತಿತ್ವದಲ್ಲಿ ಇದ್ದೇ ಇರುತ್ತವೆ. ಹಾಗೆ ಒಂದು ಮಧ್ಯಮ ವರ್ಗದ, ಬ್ರಾಹ್ಮಣ ಕುಟುಂಬದ ಪರಿಸರದಲ್ಲಿ ಬೆಳೆದ ವಸುಧೇಂದ್ರರ ಎದೆಯಲ್ಲಿ ಆ ಪರಿಸರ, ಆ ಮೌಲ್ಯಗಳು ಇನ್ನೂ ಹಾಗೇ ಇರುವುದು ಅವರ ಕಥೆಗಳಲ್ಲಿ ಕಾಣುತ್ತದೆ.  ಒಂದು ಸಂಸ್ಥೆಯ ಆಡಳಿತದ ಭಾಗವಾಗಿ, ಆಡಳಿತದ ನಿರ್ಧಾರಗಳನ್ನು ಎದುರು ಮಾತನಾಡದೆ ಒಪ್ಪಿಕೊಂಡಾಗ, ತನ್ನ ಕಂಪನಿಯನ್ನು ಒಂದು ಫೋನ್ ಸೆಕ್ಸ್ ಕಾಲ್ ಸೆಂಟರ್ ಆಗಿಸುವಾಗ ಇಲ್ಲಿ ಪಾತ್ರ ದಂಗೆ ಏಳುವುದಿಲ್ಲ, ವಿರೋಧಿಸುವುದಿಲ್ಲ, ಮಧ್ಯಮ ವರ್ಗದ ಸ್ವಭಾವ ಜನ್ಯವಾದ ತಾಳ್ಮೆಯಿಂದ ಒಪ್ಪಿಕೊಂಡು, ಹೊಂದಿಕೊಂಡು ಹೋಗುತ್ತದೆ, ಆದರೆ ಅದೇ ಸಮಯಕ್ಕೆ ’ತಪ್ಪು-ಸರಿ’ಗಳ ದ್ವಂದ್ವ ಮತ್ತು ಆ ಮೂಲಕ ಜನಿಸುವ ತಪ್ಪಿತಸ್ಥ ಭಾವದಿಂದಲೂ ಅವರ ಪಾತ್ರಗಳು ತಪ್ಪಿಸಿಕೊಳ್ಳುವುದಿಲ್ಲ.

ಈ ಸಂವಾದಕ್ಕೆ ಕರೆದೊಡನೆ ಪ್ರೀತಿಯಿಂದ ಬಂದು ಭಾಗವಹಿಸಿ, ತಮ್ಮ ಕಥೆಗಳ, ಅದರ ಪಾತ್ರಗಳ ಬಗ್ಗೆ ವಸುಧೇಂದ್ರ ಅವರು ಮಾತನಾಡಿದ್ದು ಒಂದು ಬೋನಸ್!

ಕೊನೆ ಕುಟುಕು : ಅವರು ಬೆಳೆದ ಪರಿಸರ ಅವರ ಕಥೆಗಳಲ್ಲಿ ಅವರಿಗೇ ಅರಿವಿಲ್ಲದಂತೆ ಮೂಡಿಬಿಡುವುದನ್ನು ಸಂವಾದದಲ್ಲಿ ಭಾಗಿಯಾಗಿದ್ದವರು ಒಂದು ಸಣ್ಣ ತಮಾಷೆಯೊಂದಿಗೆ ಗುರುತಿಸಿದ್ದು ಹೀಗೆ, ” ’ಅಕ್ಕ ಪಕ್ಕದ ಗಾಡಿಗಳಿಗೆ ತಾಕದಂತೆ ಮಡಿಯಲ್ಲಿ ಗಾಡಿಯನ್ನು ಓಡಿಸಿ……’, ಇದು ನೋಡಿ ಪಕ್ಕಾ ಬ್ರಾಹ್ಮಣ್ಯದ ಸಾಲು!”

ಸಂವಾದದ ದೃಶ್ಯಗಳು ನಿಮಗಾಗಿ :

ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :

‍ಲೇಖಕರು avadhi

March 25, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Ishwara Bhat K

    ವಸುಧೇಂದ್ರರು ಎಲ್ಲರೊಂದಿಗೆ ಬೆರೆಯುತ್ತಾರೆ, ಅವರ ಕೃತಿಗಳೂ ಅಂತೆಯೇ, ಎಲ್ಲರಿಗೂ ಆಪ್ತವಾಗಿದೆ.
    ನಿಮ್ಮ ಈ “ಚೇಳು’ಕುರಿತ ಸಂವಾದ ಯಶಸ್ವಿಯಾಗಿದ್ದು ಖುಷಿಯಾಯ್ತು. ಮುಂದೆಯೂ ಇಂತಹ ಸಂವಾದಗಳು ನಡೆಯಲಿ. ಜೊತೆಗೆ ನಮ್ಮಂತೆ ಬರಲಾಗದಿದ್ದವರಿಗೆ ಇಂತಹಾ ಹೊಟ್ಟೆಯುರಿಸುವ ಕೆಲ್ಸವನ್ನೂ ಮುಂದುವರೆಸಿ.
    ಪ್ರೀತಿಯಿಂದ,

    ಪ್ರತಿಕ್ರಿಯೆ
  2. c.suseela

    Dear Readers ,
    Doing very good job.Reading a book, buying it, discussing about it,& inviting the writer discussing about the stories with him/her is very appreciative.Persons who did not read the book , they will also come to know about it.Sandhya vaidhehi’s Akku story I translated it into telugu.Once karnataka govt. arranged 10 days anuvaada kammata. I did 5 stories from kannada to telugu.with best wishes

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: