ನಾ ದಿವಾಕರ ನೇರನುಡಿ: ಪಕ್ಷಾಂತರಿಗಳ ಪ್ರಜಾತಂತ್ರದ ಸೋಗು

ಕರ್ನಾಟಕದ ರಾಜಕಾರಣದಲ್ಲಿ ಮೌಲ್ಯ ಎಂಬ ಪದಕ್ಕೆ ಬಹಳಷ್ಟು ಮಹತ್ವ ಇದ್ದ ಕಾಲ ಒಂದಿತ್ತು. ಮೌಲ್ಯಾಧಾರಿತ ರಾಜಕಾರಣ ಎಂದರೆ ಇಡೀ ದೇಶವೇ ಕರ್ನಾಟಕದತ್ತ ನೋಡುತ್ತಿದ್ದ ಕಾಲವೂ ಒಂದಿತ್ತು. ಭ್ರಷ್ಟಾಚಾರ, ಸ್ವಜನಪಕ್ಷಪಾತ, ರಾಜಕೀಯ ಅಸ್ಥಿರತೆ, ಅರಾಜಕತೆ, ಪಕ್ಷಾಂತರ ಈ ಎಲ್ಲ ಅನಿಷ್ಠಗಳು ರಾಜ್ಯ ರಾಜಕಾರಣವನ್ನು ಕಾಡುತ್ತಿದ್ದರೂ ಎಲ್ಲೋ ಒಂದು ಕಡೆ ರಾಜ್ಯದ ರಾಜಕೀಯ ಮುತ್ಸದ್ದಿಗಳಲ್ಲಿ ಹಲವರು ಮೌಲ್ಯಾಧಾರಿತ ರಾಜಕಾರಣಕ್ಕೆ ಜೋತು ಬಿದ್ದಿದ್ದರು. ಹಿಂದುಳಿದ ವರ್ಗಗಳ ಉದ್ಧಾರಕ, ಸಮಾಜ ಸುಧಾರಣೆಯ ಹರಿಕಾರ ಎಂದೆಲ್ಲಾ ಬಿರುದಾಂಕಿತರಾಗಿದ್ದ ದಿ. ದೇವರಾಜ ಅರಸು ಕಾಲದಲ್ಲಿ ರಾಜಕೀಯ ಮತ್ತು ಆಡಳಿತ ವರ್ಗಗಳ ಭ್ರಷ್ಟಾಚಾರ ಪರಾಕಾಷ್ಠೆ ತಲುಪಿದ್ದರೂ ಕೆಲವು ಮೌಲ್ಯಗಳು ಸ್ಥಿರವಾಗಿದ್ದವು. ಬಂಗಾರಪ್ಪ, ಗುಂಡೂರಾವ್, ಜೆ.ಹೆಚ್. ಪಟೇಲ್ ಮುಂತಾದವರು ಪಕ್ಷಾಂತರ ಮಾಡಿ ತಮ್ಮದೇ ಆದ ರಾಜಕೀಯ ನೆಲೆ ಕಂಡುಕೊಂಡರೂ ಜನತೆಯ ಒಳಿತಿಗಾಗಿ ಕಿಂಚಿತ್ತಾದರೂ ಶ್ರಮಿಸಿ ಸಮಾಜ ಸುಧಾರಣೆಯತ್ತ ಕೊಂಚ ಕಾಳಜಿ ವಹಿಸಿದ್ದುಂಟು. ಹಾಗಾಗಿಯೇ ಕರ್ನಾಟಕದ ರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷಗಳತ್ತ ಜನತೆ ಅಲ್ಪ ಸ್ವಲ್ಪ ಒಲವು ತೋರಿಸಲಾರಂಭಿಸಿದ್ದುಂಟು.
ಭಾರತದ ರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷ ರಚನೆ ಮತ್ತು ಪ್ರಾದೇಶಿಕ ರಾಜಕಾರಣದ ಹಿಂದೆ ಪ್ರಾದೇಶಿಕ ಅಥವಾ ಸಾಮುದಾಯಿಕ ಹಿತಾಸಕ್ತಿಗಳಿಗಿಂತಲೂ ಅಧಿಕಾರಗ್ರಹಣದ ಆಕಾಂಕ್ಷೆ ಮತ್ತು ನಿರ್ಧಿಷ್ಟ ಜಾತಿ ಸಮುದಾಯಗಳ ಕಾಳಜಿಗಳು ಪ್ರಮುಖ ಪಾತ್ರ ವಹಿಸಿವೆ. ಹಾಗೂ ಮಾತೃಪಕ್ಷಗಳಲ್ಲಿ ಅನುಭವಿಸಿದ ಅಸಮಾಧಾನ ಮತ್ತು ಅವಕಾಶ ವಂಚನೆಯಿಂದ ಪಕ್ಷಾಂತರ ಮಾಡಲಾಗದ ರಾಜಕೀಯ ನಾಯಕರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಪಕ್ಷಾಂತರ ಮತ್ತೊಂದು ಸ್ವರೂಪವಾಗಿ ಪ್ರಾದೇಶಿಕ ಪಕ್ಷವನ್ನು ರಚಿಸುವುದೂ ಒಂದು ವಿದ್ಯಮಾನವಾಗಿದೆ. ತುರ್ತುಪರಿಸ್ಥಿತಿಯ ಮುನ್ನ ಮತ್ತು ತದನಂತರದ ಕೆಲವು ವರ್ಷಗಳಲ್ಲಿ ರಚಿತವಾದ ಪ್ರಾದೇಶಿಕ ಪಕ್ಷಗಳಿಗೆ ರಾಷ್ಟ್ರೀಯ ದೃಷ್ಟಿಕೋನ ಮತ್ತು ರಾಷ್ಟ್ರ ಹಿತಾಸಕ್ತಿಗಳೂ ಒಂದು ಪ್ರಮುಖ ಆದ್ಯತೆಗಳಾಗಿದ್ದವು. ಸ್ವಾರ್ಥ ರಾಜಕಾರಣದ ಛಾಯೆ ಕಂಡುಬಂದರೂ ಕೊಂಚ ಮಟ್ಟಿಗಾದರೂ ಸಾಮುದಾಯಿಕ ಮತ್ತು ಸಾಮಾಜಿಕ ಕಳಕಳಿಯನ್ನು ಈ ನಾಯಕರಲ್ಲಿ ಕಾಣಬಹುದಿತ್ತು. ಆದರೆ 1991ರ ನವ ಉದಾರವಾದದ ಪ್ರವೇಶದ ನಂತರದಲ್ಲಿ ರಾಷ್ಟ್ರ ರಾಜಕಾರಣ ಕಾರ್ಪೋರೇಟ್ ಶಕ್ತಿಗಳ ಹಿಡಿತಕ್ಕೆ ಸಿಲುಕಿದಾಗ ರಾಜಕೀಯ ಕ್ಷೇತ್ರದ ಚಹರೆಯೇ ಬದಲಾಗತೊಡಗಿತ್ತು.
ಪ್ರಾದೇಶಿಕ ಹಿತಾಸಕ್ತಿಗಳು ಒಂದು ನಿರ್ಧಿಷ್ಟ ಪ್ರದೇಶದ ಪ್ರಜೆಗಳ ಬೇಕು ಬೇಡಗಳನ್ನು , ಒಳಿತು ಕೆಡಕುಗಳನ್ನು, ಒಂದು ಜನಸಮುದಾಯದ ಅಭ್ಯುದಯವನ್ನು ಪ್ರತಿನಿಧಿಸುವ ಬದಲು, ಆಯಾ ಪ್ರದೇಶದಲ್ಲಿ ಬಂಡವಾಳ ಹೂಡುವ ಕಾರ್ಪೋರೇಟ್ ಉದ್ಯಮಿಗಳ ಹಿತಾಸಕ್ತಿಗಳನ್ನು ಪ್ರತಿನಿಧಿಸಲಾರಂಭಿಸಿದವು. ಹಾಗಾಗಿ ಪಕ್ಷಾಂತರ ರಾಜಕಾರಣ ಮತ್ತು ಪ್ರಾದೇಶಿಕ ರಾಜಕೀಯ ಪ್ರಕ್ರಿಯೆಯ ಮೂಲ ಸ್ವರೂಪವೇ ಬದಲಾಗತೊಡಗಿತು. ಪಕ್ಷಾಂತರಿಗಳಲ್ಲೂ ಕ್ಷೀಣವಾಗಿ ಕಾಣಬಹುದಾಗಿದ್ದ ತತ್ವ ಸಿದ್ಧಾಂತಗಳು ಕ್ರಮೇಣ ಮಾರುಕಟ್ಟೆಯ ಸರಕುಗಳಾಗತೊಡಗಿದವು. ಪ್ರಾದೇಶಿಕ ಪಕ್ಷಗಳ ಸ್ಥಾಪನೆಗೆ ಬಂಡವಾಳ ಒದಗಿಸಲು ಔದ್ಯಮಿಕ ಕ್ಷೇತ್ರ ತನ್ನದೇ ಆದ ಜಾಲವನ್ನು ಹೆಣೆಯತೊಡಗಿತು. ಹಾಗಾಗಿ ಸ್ವ ಇಚ್ಚೆಯಿಂದ ಒಂದು ಪಕ್ಷವನ್ನು ತೊರೆದು ಮತ್ತೊಂದು ಪಕ್ಷದ ತತ್ವವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದ ಶಾಸಕ-ಸಂಸದರು ಮಾರುಕಟ್ಟೆಯ ಸರಕುಗಳಂತೆ ಮಾರಾಟವಾಗತೊಡಗಿದರು. ಆಯಾರಾಂ-ಗಯಾರಾಂಗಳ ಸ್ಥಾನವನ್ನು ಖರೀದಿ-ಮಾರಾಟಕ್ಕೊಳಪಡುವ ಮಾರುಕಟ್ಟೆಯ ಸರಕುಗಳು ಆಕ್ರಮಿಸಿಕೊಂಡವು. ಆಯ್ದ ಪ್ರತಿನಿಧಿಗಳು ಬಿಕರಿಯಾಗುವ ನಿಧಿಗಳಾಗಿ ಪರಿಣಮಿಸಿದರು. ಇದರ ನೇರ ದೃಷ್ಟ್ಯಾಂತವನ್ನು ಕನರ್ಾಟಕದ ಆಪರೇಷನ್ ಕಮಲ ಪ್ರಕ್ರಿಯೆಯಲ್ಲಿ ಕಾಣಬಹುದಾಗಿತ್ತು.
ಕರ್ನಾಟಕದ ರಾಜಕಾರಣವನ್ನೇ ಸೂಕ್ಷ್ಮವಾಗಿ ಅವಲೋಕಿಸಿದಾಗ ಈ ಸಂಗತಿ ಸ್ಪಷ್ಟವಾಗುತ್ತದೆ. ಇಂದು ರಾಜ್ಯದಲ್ಲಿ ಕರ್ನಾಟಕ ಜನತಾ ಪಕ್ಷ (ಕೆಜೆಪಿ) , ಬಿಎಎಸ್ಆರ್ ಕಾಂಗ್ರೆಸ್, ಕರ್ನಾಟಕ ಮಕ್ಕಳ ಪಕ್ಷ ಹೀಗೆ ಹಲವು ಪ್ರಾದೇಶಿಕ ಪಕ್ಷಗಳು ಹುಟ್ಟಿಕೊಂಡಿವೆ. ಕೆಜೆಪಿಯ ಸ್ಥಾಪನೆಗೆ ಮೂಲ ಕಾರಣ ಭ್ರಷ್ಟಾಚಾರ. ಬಿಎಸ್ಆರ್ ಕಾಂಗ್ರೆಸ್ ಸ್ಥಾಪನೆಯ ಮೂಲವು ಭ್ರಷ್ಟಾಚಾರ. ಅಶೋಕ್ ಖೇಣಿಯವರ ಕರ್ನಾಟಕ ಮಕ್ಕಳ ಪಕ್ಷದ ಭೂಮಿಕೆಯೇ ಭೂ ಸ್ವಾಧೀನದ ಭ್ರಷ್ಟ ನಿಧಿ. ಒಂದು ವೇಳೆ ಯಡಿಯೂರಪ್ಪ ಜನಾರ್ಧನರೆಡ್ಡಿಯ ಗಣಿ ಅಕ್ರಮಗಳಿಗೆ ಸಂಪೂರ್ಣ ರಕ್ಷಣೆ ಒದಗಿಸಿ ರಾಜಕೀಯ ಷಡ್ಯಂತ್ರ ರಚಿಸಿ ರಕ್ಷಿಸಿದ್ದರೆ ಬಿಎಸ್ಆರ್ ಕಾಂಗ್ರೆಸ್ ಅಸ್ತಿತ್ವಕ್ಕೆ ಬರುತ್ತಿರಲಿಲ್ಲ. ಹಾಗೆಯೇ ಒಂದು ವೇಳೆ ಬಿಜೆಪಿಯ ಕೇಂದ್ರ ನಾಯಕತ್ವ ಯಡಿಯೂರಪ್ಪನವರ ಎಲ್ಲ ಭ್ರಷ್ಟಾಚಾರಗಳನ್ನೂ ಮನ್ನಿಸಿ ಮುಖ್ಯಮಂತ್ರಿ ಪದವಿ ನೀಡಿದ್ದಲ್ಲಿ ಕೆಜೆಪಿ ಜನಿಸುತ್ತಿರಲಿಲ್ಲ. ಖೇಣಿಯವರಿಗೆ ದೇವೇಗೌಡರನ್ನು ಎದುರಿಸಿ ನಿಲ್ಲುವ ಅನಿವಾರ್ಯತೆ ಇಲ್ಲದಿದ್ದರೆ ಮಕ್ಕಳ ಪಕ್ಷ ಜನಿಸುತ್ತಿರಲಿಲ್ಲ. ಭೂ ಸ್ವಾಧೀನದಲ್ಲಿ ಮೇಲುಗೈ ಸಾಧಿಸಲು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ನಡೆಯಬೇಕಿದ್ದ ಜಟಾಪಟಿಯನ್ನು ರಾಜಕೀಯ ಕ್ಷೇತ್ರದಲ್ಲಿ ಕಾಣುತ್ತಿರುವುದು ಖೇಣಿಯವರ ಪಕ್ಷದ ಹುಟ್ಟಿನಲ್ಲಿ ಗುರುತಿಸಬಹುದು.
ತಮ್ಮ ಸರ್ಕಾರವನ್ನು ಶತಾಯ ಗತಾಯ ಉಳಿಸಿಕೊಳ್ಳಲು ರಾಜಕೀಯ ನಿಘಂಟಿನಲ್ಲಿರುವ ಎಲ್ಲ ಅಕ್ರಮ ಮಾರ್ಗಗಳನ್ನೂ ಅನುಸರಿಸಿ, ಆಪರೇಷನ್ ಕಮಲ ಎಂಬ ಶಾಸಕ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಿದ ಯಡಿಯೂರಪ್ಪ ಪಕ್ಷಾಂತರ ರಾಜಕಾರಣಕ್ಕೆ ಹೊಸ ಭಾಷ್ಯ ಬರೆದುದೇ ಅಲ್ಲದೆ ಅಧಿಕಾರ ದಾಹ ಸಹಜವಾಗಿಯೆ ಇರುವ ರಾಜಕಾರಣಿಗಳಿಗೆ ಜನರನ್ನು ತತ್ವ-ಸಿದ್ಧಾಂತಗಳ ಹೆಸರಿನಲ್ಲಿ ವಂಚಿಸಲು ಹೊಸ ಮಾರ್ಗದರ್ಶಿ ಸೂತ್ರವನ್ನು ಸಹ ಒದಗಿಸಿದ್ದರು. ತಾವು ಭ್ರಷ್ಟಾಚಾರದಲ್ಲಿ ತೊಡಗಿದ್ದರೂ ಸಹ ಆಲಿ ಬಾಬಾ ತಂಡದಲ್ಲಿ ತಾವೂ ಒಬ್ಬರು ಎಂದು ಬಿಂಬಿಸುತ್ತಾ ನಿರಪರಾಧಿಯಂತೆ ವರ್ತಿಸುವ ರಾಜಕಾರಣಿಗಳಿಗೆ ಆಪರೇಷನ್ ಕಮಲ ಪಕ್ಷಾಂತರ ಕಾಯ್ದೆಯಿಂದ ತಪ್ಪಿಸಿಕೊಳ್ಳಲು ನೆರವಾಯಿತು. ಆದರೆ ಈ ಪಕ್ಷಾಂತರಗಳಿಂದ ಉಂಟಾದ ಮರುಚುನಾವಣೆಗಳ ವೆಚ್ಚವನ್ನು ತೆರಿಗೆ ಪಾವತಿಸುವ ಸಾರ್ವಭೌಮ ಪ್ರಜೆಗಳು ಮೌನವಾಗಿಯೇ ಭರಿಸಿದ್ದು ಮಾತ್ರ ಅಚ್ಚರಿಯ ಅಂಶ.
ಈಗ ಕರ್ನಾಟಕದಲ್ಲಿ ಸ್ಥಾಪಿಸಲಾಗಿರುವ ಮೂರು ಹೊಸ ಪ್ರಾದೇಶಿಕ ಪಕ್ಷಗಳ ಧ್ಯೇಯಗಳಾದರೂ ಏನು ? ಮೂರೂ ಪಕ್ಷಗಳ ನೇತಾರರು ರಾಜ್ಯದ ನೈಸರ್ಗಿಕ ಸಂಪನ್ಮೂಲಗಳನ್ನು ಲೂಟಿ ಹೊಡೆದವರೇ ಮತ್ತು ಭೂ ಹಗರಣಗಳಲ್ಲಿ ಭಾಗಿಯಾದವರೇ. ತಮ್ಮ ಅಧಿಕಾರಾವಧಿಯಲ್ಲಿ ರಾಜ್ಯದ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆಯಲು ಮುಕ್ತ ಅವಕಾಶ ನೀಡಿ ಅದೇ ಬಂಡವಾಳದಿಂದಲೇ ಶಾಸಕ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಿದ ನಾಯಕರು ತಮ್ಮ ನೂತನ ಪ್ರಾದೇಶಿಕ ಪಕ್ಷದ ಮೂಲಕ ರಾಜ್ಯದ ಹಿತಾಸಕ್ತಿಯನ್ನು ಕಾಪಾಡಲು ಸಾಧ್ಯವೇ ? ಒಂದು ಇಡೀ ಜಿಲ್ಲೆಯನ್ನು ತಮ್ಮ ಸಾಮ್ರಾಜ್ಯವನ್ನಾಗಿ ಪರಿವರ್ತಿಸಿ ಅಲ್ಲಿನ ನಿಸರ್ಗದತ್ತ ಸಂಪನ್ಮೂಲಗಳನ್ನು ಬರಿದಾಗಿಸಿ, ಭೂತಾಯಿಯ ಒಡಲನ್ನು ಬರಡಾಗಿಸಿದ ಉದ್ಯಮಿಗಳು ರಾಜ್ಯದ ಜನತೆಯ ಅಭ್ಯುದಯಕ್ಕಾಗಿ ಹೋರಾಡುವುದು ಸಾಧ್ಯವೇ ? ನವ ಉದಾರವಾದದ ಪೋಷಕರಾಗಿ ತಮ್ಮ ಔದ್ಯಮಿಕ ಕೋಟೆಯನ್ನು ಭದ್ರಪಡಿಸಿಕೊಳ್ಳಲು ಸಹಸ್ರಾರು ಎಕರೆ ಭೂಮಿಯನ್ನು ಕಬಳಿಸಿ, ಲಕ್ಷಾಂತರ ಕುಟುಂಬಗಳನ್ನು ನಿರ್ಗತಿಕರನ್ನಾಗಿ ಮಾಡಿ, ಐಷಾರಾಮಿ ಜಗತ್ತಿಗೆ ಹಸಿರು ಕಂಬಳಿ ಹಾಸುವ ಉದ್ಯಮಿ ರಾಜ್ಯದ ಜನತೆಯ ಅಥವಾ ಮಕ್ಕಳ ಒಳಿತಿಗಾಗಿ ಶ್ರಮಿಸುವುದು ನಂಬಲರ್ಹವೇ ?
ಈ ಹಲವು ಪ್ರಶ್ನೆಗಳು ಮನದಾಳದಲ್ಲಿ ಉದ್ಭವಿಸಿದಾಗ ಇಂದಿನ ಪಕ್ಷಾಂತರ ಮತ್ತು ಪ್ರಾದೇಶಿಕ ರಾಜಕಾರಣದ ನೈಜ ಸತ್ವ ಮತ್ತು ಆಂತರ್ಯವನ್ನು ಅರಿಯುವುದು ಅನಿವಾರ್ಯವಾಗುತ್ತದೆ. ಆಪರೇಷನ್ ಕಮಲದಲ್ಲಿ ಬಲಿಯಾದ ಪಕಳೆಗಳು ಇಂದು ಪುನಃ ಮೂಲ ಬೇರುಗಳನ್ನು ಹುಡುಕಿಕೊಂಡು ಹೊರಟಿರುವುದನ್ನು ನೋಡಿದರೆ ರಾಜಕಾರಣಿಗಳ ಹೊಣೆಗೇಡಿತನ ಮತ್ತು ಲಜ್ಜಾಹೀನ ರಾಜಕಾರಣದ ವಿರಾಟ್ ಸ್ವರೂಪದ ದರ್ಶನವಾಗುತ್ತದೆ. ಪಕ್ಷಾಂತರ ನಿಷೇಧ ಕಾಯ್ದೆಯನ್ನು ನಿಷ್ಕ್ರಿಯಗೊಳಿಸಲು ರಾಜಕಾರಣಿಗಳು ಹೊಸೆದಿರುವ ಹೊಸ ತಂತ್ರಗಳನ್ನು ಗ್ರಹಿಸಿ ಪಕ್ಷ ರಾಜಕಾರಣಕ್ಕೆ ಸಂಹಿತೆಗಳನ್ನು ವಿಧಿಸುವ ತುರ್ತು ಅಗತ್ಯತೆ ಇಂದು ಹೆಚ್ಚಾಗಿದೆ. ಒಮ್ಮೆ ಆಯ್ಕೆಯಾದ ಜನ ಪ್ರತಿನಿಧಿಯ ಮುಂದುವರಿಕೆಯನ್ನು ನಿರ್ಧರಿಸುವ ಹಕ್ಕನ್ನು ಜನತೆಗೆ ನೀಡಬೇಕಿದೆ. ಆಗಲೇ ಪ್ರಜಾತಂತ್ರ ಉಳಿಯುವ ಸಾಧ್ಯತೆಗಳಿವೆ. ಇಲ್ಲವಾದರೆ ಪ್ರಜಾ+ಅತಂತ್ರ ವ್ಯವಸ್ಥೆ ಸದಾ ಜಾರಿಯಲ್ಲಿರುತ್ತದೆ.
 

‍ಲೇಖಕರು G

March 25, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: