ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ವಿನೋದ್ ಕುಮಾರ್ ವಿ ಕೆ


ಕಾಡೆಂದರೆ ಮನೆಯ ಹಿತ್ತಿಲು, ಕಟ್ಟಿಗೆ ಸಿಗುವ ಸ್ಥಳ, ನೆಲ್ಲಿಕಾಯಿ, ನೇರಳೆ ಹಣ್ಣು, ಹುಳಿ ಹಣ್ಣು ಸಿಗುವ ಸ್ಥಳ, ಕಾಡೆಂದರೆ ಅದು ಪ್ರಾಣಿಗಳಿಗೆ ಇರುವ ಜಾಗ, ಕಾಡು ಮನುಷ್ಯರಿಗೆ ಅಪಾಯಕಾರಿ, ಕಾಡು ಅತಿ ಘೋರ..ಕಾಡಿನೊಳಗೆ ಯಾವ ಕಾರಣಕ್ಕೂ ಹೋಗಬಾರದು.. ಇದು ನನ್ನ ಬಾಲ್ಯದಲ್ಲಿ ಕಾಡಿನ ಮೇಲಿದ್ದ ಅಭಿಪ್ರಾಯ..

ಅಪ್ಪ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಕಾರಣದಿಂದ ಬಾಲ್ಯದಿಂದಲೂ ಕಾಡೆಂದರೆ ನಮ್ಮ ಮನೆಯ ಹಿತ್ತಿಲೇ ಹೌದು. ಆದರೆ ಕಾಡಿನೊಳಗೆ ಹೋಗಬೇಕೆನ್ನುವ ಕುತೂಹಲಕ್ಕೆ ಮಾತ್ರ ಅಮ್ಮನ ಕಡಿವಾಣ ವಿತ್ತು. ಆದರೂ ಕಾಡು ಹುಟ್ಟಿಸಿದ ಕುತೂಹಲ ಮಾತ್ರ ದಿನೇ ದಿನೇ ಬೆಳೆಯುತ್ತಲೇ ಇತ್ತು.

ಅಪರೂಪಕ್ಕೊಮ್ಮೆ ಅಪ್ಪ ಕಾಡಿಗೆ ಕರೆದುಕೊಂಡು ಹೋಗ್ತಿದ್ದರು. ಕಾಡಿನ ಮರಗಳು, ಬಿದಿರು, ಕಣಿಲೆ, ನೆಲ್ಲಿಕಾಯಿ ಮರದಲ್ಲಿನ ಗೊಂಚಲು, ನೇರಳೆ ಮರದ ಹಣ್ಣಿನ ಘಮ, ಆನೆ ಲದ್ದಿ, ಹುಲಿಯ ವಿಸರ್ಜನೆ, ಜಿಂಕೆಯ ಹಿಕ್ಕೆ, ಹೀಗೆ ಕಾಡಿನ ಮತ್ತೊಂದು ಮಜಲಿನ ಪರಿಚಯ ಮಾಡಿಕೊಟ್ಟದ್ದು ಅಪ್ಪನೇ.. ನಂತರ ಹೈಸ್ಕೂಲಿಗೆ ಬಂದಾಗ ನಮ್ಮ ಕೊಡಗಿನ ಶಾಲಾ ಟೀಚರ್ ಗಳು ಕಾಡು ಮತ್ತು ಕಾಡಿನ ಅನಿವಾರ್ಯತೆಯ ಬಗ್ಗೆ ಪಶ್ಚಿಮ ಘಟ್ಟದ ಮಹತ್ವದ ಬಗ್ಗೆ ಸಾಕಷ್ಟು ಮಾಹಿತಿ ಕೊಟ್ಟರು.

ಪಶ್ಚಿಮ ಘಟ್ಟದ ಮೇಲಿನ ಕುತೂಹಲ ಮತ್ತು ಬೆರಗು ಹುಟ್ಟಿಕೊಂಡದ್ದೇ ಆಗ. ಬುದ್ದಿ ಬೆಳೆಯುತ್ತಿದ್ದಂತೇ ಕಾಡು ನಮಗೆ ಅನಿವಾರ್ಯ ಅನ್ನುವುದು ಅರಿವಾಗತೊಡಗಿತು. ನಾವು ಉಸಿರಾಡುತ್ತಿರುವುದೇ ಕಾಡಿನಿಂದ ಎಂದು ಅರಿತಾಗಲೇ ಕಾಡು ನಮ್ಮ ಬದುಕಿನ ಒಂದು ಭಾಗ, ಕಾಡಿನಿಂದಲೇ ನಾವು ಅನ್ನುವ ಸತ್ಯದರ್ಶನವಾಗಿದ್ದು.

ನಂತರ ಕಾಡಿನ ಬಗ್ಗೆ ಕುತೂಹಲ ಹೆಚ್ಚಿಸಿದ್ದು ಕುವೆಂಪು, ಕಾರಂತರು ಮತ್ತು ಪೂಚಂತೇ. ಪುಸ್ತಕಗಳ ಓದು ನನ್ನನ್ನು ಕಾಡಿನೆಡೆಗೆ ಅತಿಯಾಗಿ ಸೆಳೆಯತೊಡಗಿತು. ಹೀಗಿರುವಾಗಲೇ ಅಪ್ಪನಿಗೆ ನಾಗರಹೊಳೆಗೆ ವರ್ಗಾವಣೆಯಾಯ್ತು, ಅಲ್ಲಿ ವನ್ಯಜೀವಿ ಛಾಯಾಗ್ರಹಣದ ದಿಗ್ಗಜರಾದ ಕೃಪಾಕರ ಸೇನಾನಿಯವರ ಭೇಟಿಯಾಯ್ತು. ಅವರ ವನ್ಯಜೀವಿ ಛಾಯಾಗ್ರಹಣದ ಕಾರ್ಯವೈಖರಿ, ಕಾಡಿನೆಡೆಗಿನ ಪ್ರೀತಿ ನನ್ನನ್ನೂ ಕಾಡಿನೆಡೆಗೆ ಮತ್ತು ಚಾಯಾಗ್ರಹಣದೆಡೆಗೆ ಸೆಳೆಯಿತು. ಜೊತೆಗೆ ಎಂ.ವೈ. ಘೋರ್ಪಡೆ ಯವರ ಪುಸ್ತಕ ಮತ್ತು ಚಾಯಾಚಿತ್ರಗಳೂ ನನ್ನನ್ನು ಕಾಡು ಮತ್ತು ವನ್ಯಜೀವಿಗಳ ಸಹವಾಸಕ್ಕೆ ಪ್ರೇರೇಪಿಸಿತು.

ನಂತರವೇ ಶುರುವಾಗಿದ್ದು ಕಾಡಿನೊಂದಿಗಿನ ನಂಟು, ಗೆಳೆತನ. ಕಾಡಿನೊಳಗೆ ನಡಿಗೆ, ಮರಗಳ ವೀಕ್ಷಣೆ, ಹಕ್ಕಿಗಳ ವೀಕ್ಷಣೆ ನನ್ನನ್ನು ಬೇರೆಯದೇ ಲೋಕಕ್ಕೆ ಕರೆದುಕೊಂಡು ಹೋಗಿದ್ದು ನಿಜ. ಕಾಡಿನೊಳಗೆ ಕ್ರೂರ ಪ್ರಾಣಿಗಳು ಮಾತ್ರವಲ್ಲ ಚಂದದ ಹಕ್ಕಿಗಳೂ ಇದಾವೆ, ಹಕ್ಕಿಗಳು ಮನುಷ್ಯರಿಗಿಂತಲೂ ಚಂದ ಹಾಡುತ್ತಾವೆ, ಮನುಷ್ಯನ ಕಣ್ಣಿಗೆ ನಿಲುಕುವ ಎಲ್ಲಾ ಬಣ್ಣಗಳನ್ನೂ ಮೀರಿದ ಬಣ್ಣಗಳು ಕಾಡಿನಲ್ಲಿವೆ, ಕಾಡು ಮನುಷ್ಯನಿಗೆ ಅದ್ಭುತ ಅನ್ನುವ ಆಶ್ರಯ ಕೊಡುತ್ತದೆ, ಆಹಾರ ಕೊಡುತ್ತದೆ, ನೆರಳು ನೀಡುತ್ತದೆ.. ಕಾಡೆಂದರೆ ಭಯವಲ್ಲ ಕಾಡೆಂದರೆ ಅದೊಂದು ಆಪ್ತತೆ, ಕಾಡೆಂದರೆ ನಮ್ಮ ನೈಜ ಸ್ಥಾನ, ಕಾಡೆಂದರೆ.. ಹುಹೂಂ…. ಕಲ್ಪನೆಗೆ ನಿಲುಕದ್ದು, ಕಾಡು ಅನೂಹ… ಕಾಡನ್ನು ಅರಿಯುವ ಪ್ರಯತ್ನ ಮಾಡಬಾರದು ಅನ್ನುವ ನಿರ್ಧಾರಕ್ಕೆ ಬಂದಾಗ ಮೀಸೆ ಬಲಿತಿತ್ತು..

ಕಾಡಿನೊಳಗಿನ ಅಷ್ಟೂ ಸಂಪತ್ತು ಮನುಷ್ಯನಿಗೇ ಸೇರಬೇಕು, ಅದರ ಮೇಲಿನ ಹಕ್ಕು ಮನುಷ್ಯರದ್ದೇ ಅನ್ನುವ ಮಾತುಗಳೇ ಅತೀ ಹೆಚ್ಚು ಕೇಳತೊಡಗಿದ್ದ ಕಾಲದಲ್ಲಿ ಅಪ್ಪ ಮಾತ್ರ ಕಾಡನ್ನು ಉಳಿಸಬೇಕು, ಮರಗಳನ್ನು ಬೆಳೆಸಬೇಕು, ಕಾಡು ನಾಶವಾದರೆ ಮನುಷ್ಯ ಭಯಾನಕ ಹಿಂಸೆಗೊಳಗಾಗ್ತಾನೆ, ಕಾಡಿಲ್ಲದಿದ್ದರೆ ಮನುಷ್ಯನಿಗೆ ಬದುಕೇ ಇಲ್ಲ ಅನ್ನುವ ಮಾತುಗಳನ್ನು ಆಡುತ್ತಿದ್ದರು.

ಕಾಡಿನೊಳಗೇ ವಾಸಿಸುವ ಬುಡಕಟ್ಟು ಜನಾಂಗದವರು ಶತಮಾನಗಳಿಂದಲೂ ಕಾಡಿನೊಳಗೇ ವಾಸಿಸುತ್ತಿದ್ದು, ಪೇಟೆಯ ಐಷಾರಾಮಿ ಬದುಕಿನ ಜನಗಳಿಗಿಂದ ಸಾವಿರ ಪಟ್ಟು ನೆಮ್ಮದಿ ಯಾಗಿರುತ್ತಿದ್ದುದ್ದು ಬಹಳಾ ಅಚ್ಚರಿ ಎನಿಸುತ್ತಿತ್ತು. ಆದರೆ ಕಾಡಿನ ಜನರಿಗೆ ಬೇಕು ಎನ್ನುವ ಪ್ರತಿಯೊಂದೂ ಕಾಡು ನೀಡುತ್ತಿತ್ತು, ಅದೂ ಉಚಿತವಾಗಿ ಅನ್ನುವ ಅರಿವಾದಾಗ ಮಾತ್ರ ಅದ್ಭುತ ಆಶ್ಚರ್ಯವಾಗಿದ್ದು ಹೌದು.

ಈಗಲೂ ಕಾಡಿನೊಳಗಿನ ಜನ ಪೇಟೆಯ ಜನರಿಗಿಂತ ನೆಮ್ಮದಿಯಾಗಿರುವುದು ನಿಜ. ಅಪರೂಪಕ್ಕೊಮ್ಮೆ ಕಾಡಿನೊಳಗಿನ ಪ್ರಾಕೃತಿಕ ವೈಪರೀತ್ಯಕ್ಕೋ, ವನ್ಯಪ್ರಾಣಿಗಳ ದಾಳಿಗೋ ಯಾರನ್ನೋ ಕಳೆದುಕೊಂಡರೂ.. ಅದು ತೀರಾ ಸಹಜ ಎನ್ನುವಂತೆ ಅದನ್ನು ಮರೆತು ಬದುಕು ಮುಂದುವರೆಸುವ ಕಾಡನ್ನು ಬೆಳೆಸುವ, ಪ್ರೀತಿಸುವ ಅವರ ಪರಿ ನಿಜಕ್ಕೂ ಅಚ್ಚರಿಯೇ ಹೌದು.

ಹೀಗೇ ಕಾಡಿನೆಡೆಗಿನ ಕುತೂಹಲ ನನ್ನನ್ನೂ ಒಂದು ದಿನ ಕ್ಯಾಮರಾ ಸಮೇತ ಕಾಡಿನೊಳಗೆ ಸೇರಿಸಿದ್ದು ವಿಶೇಷವೇನಲ್ಲ. ಕ್ಯಾಮರಾ ಹಿಡಿದು ಕಾಡಿನೊಳಗೆ ನುಗ್ಗಿದ ಮೇಲೆ ಕಂಡದ್ದೇ ಬೇರೆ.. ಕಾಡೆಂದರೆ ಬರೀ ಮರ ಗಿಡವಲ್ಲ, ಹಕ್ಕಿ, ಪ್ರಾಣಿ, ತೊರೆ, ಜಲಪಾತ.. ಇಷ್ಟೇ ಅಲ್ಲ.. ಕಾಡೆಂದರೆ ಪ್ರಕೃತಿಯ ಅನನ್ಯ ಸೃಷ್ಠಿ, ಕಾಡೆಂದರೆ ಭೂಲೋಕದ ಸ್ವರ್ಗ, ಮನುಷ್ಯ ಕಲಿಯಬೇಕಾದ ಅತೀ ದೊಡ್ಡ ವಿಶ್ವವಿದ್ಯಾಲಯ, ಕಾಡೆಂದರೆ ಜೀವ ಜಗತ್ತಿನ ಅನಿವಾರ್ಯ ಅನ್ನಿಸತೊಡಗಿತು.

ಕಾಡಿಗೆ ಕಾಡಿನದ್ದೇ ಆದ ಶಿಸ್ತಿದೆ. ಕಾಲಕಾಲಕ್ಕೆ ಸರಿಯಾಗಿ ಚಿಗುರುವ, ಬೆಳೆಯುವ, ಹಣ್ಣಾಗುವ, ನೆರಳಾಗುವ, ಉದುರುವ ಮತ್ತು ಬೆಳೆಸುವ ನಿಯತ್ತಿದೆ ಮತ್ತು ಅದ್ಭುತ ಶಕ್ತಿಯಿದೆ. ಕಾಡು ಅದರ ಪಾಡಿಗೆ ಅದು ಅದರ ಕೆಲಸ ನಿರ್ವಹಿಸುತ್ತಿದೆ, ಮನುಷ್ಯ ಅದನ್ನು ಬಳಸಿಕೊಳ್ತಿದಾನೆ ಅಷ್ಟೇ ಅನ್ನಿಸಿದ್ದು ನಿಜ.

ನಾಗರೀಕ ಮನುಷ್ಯ ಸಮಾಜದ ತುಂಬಾ ಅಸಮಾನತೆಯನ್ನು ಬಿತ್ತಿ ದ್ವೇಷವನ್ನು ಬೆಳೆಯುತ್ತಿರುವಾಗ ಕಾಡಿನೊಳಗಿನ ಸಮಾನತೆ ಯನ್ನು ಮನುಷ್ಯ ಯಾವ ಕಾಲಕ್ಕೂ ಸಾಧಿಸಿಕೊಳ್ಳಲಾರ ಅನಿಸುವುದು ನಿಜ.

ಕಾಡಿನ ಪ್ರತೀ ಜೀವಿಗಳ ಬದುಕುವ ರೀತಿ ನೀತಿ ಮನುಷ್ಯ ಸಾರ್ವಕಾಲಿಕವಾಗಿ ಪಾಲಿಸಬೇಕಾಗಿರುವುದು ಹೌದು.

ಕಾಡಿನೊಳಗಿನ ಹಕ್ಕಿಗಳದ್ದೇ ಒಂದು ವಿಭಿನ್ನ ಮತ್ತು ಆಶ್ಚರ್ಯಕರವಾದ ಬದುಕು. ಅವುಗಳು ಸಂಗಾತಿಯನ್ನು ಹುಡುಕಿಕೊಳ್ಳುವ ಪರಿ, ಗೂಡು ಕಟ್ಟುವ ಶೈಲಿ ಮೊಟ್ಟೆ ಇಟ್ಟು ಮರಿ ಮಾಡುವ ರೀತಿ ಮರಿಗಳಿಗೆ ತುತ್ತುಣಿಸಿ ಬೆಳೆಸಿ ಸ್ವತಂತ್ರವಾಗಿ ಬದುಕಲು ಕಲಿಸಿಕೊಡುವ ಪರಿ, ನಿಜಕ್ಕೂ ಯಾವ ವಿಶ್ವವಿದ್ಯಾಲಯಗಳೂ ಮನುಷ್ಯನಿಗೆ ಕಲಿಸಲಾರವು. ಪರಸ್ಪರ ಗೌರವ ಮತ್ತು ಮತ್ತೊಬ್ಬರನ್ನೂ ಬದುಕಲು ಬಿಡಬೇಕು ಅನ್ನುವ ಸಮಾನತೆಯ ನ್ಯಾಯ ಕಾಡಿನಲ್ಲಿ ಕಾಣುವಷ್ಟು ನಾಡಿನಲ್ಲಿ ಕಾಣಲಾರವೇನೋ.

ಹಕ್ಕಿ ಛಾಯಾಗ್ರಹಣ ಶುರು ಮಾಡಿದ ಮೇಲೆ ಕಾಡು ತುಸು ಹೆಚ್ಚೇ ಆಪ್ತವೆನಿಸ ತೊಡಗಿತು. ಸೂರ್ಯ ಹುಟ್ಟೊ ಮೊದಲೇ ಕಾಡಿನೊಳಗೆ ಹೋಗಿ ಕ್ಯಾಮರಾದೊಂದಿಗೆ ನಿಂತು ಕಾಯುವುದೇ ಸೊಗಸು. ಬೆಳ್ಳಂಬೆಳಿಗ್ಗೆ ಸೂರ್ಯನ ಮೊದಲ ಕಿರಣ ಕಾಡಿನೊಳಗೆ ಬೀಳುತ್ತಿದ್ದಂತೇ, ಕಾಡಿನ ಸೌಂದರ್ಯ ನಿಧಾನವಾಗಿ ಅನಾವರಣಗೊಳ್ಳುತ್ತೆ.

ಎಳೆ ಬಿಸಲಿಗೆ ಮಿರುಗುವ ಚುಗುರೆಲೆಗಳು, ಹೊಯ್ದಾಡುವ ಬಳ್ಳಿಗಳು ಆಹಾ ಅನ್ನಿಸದಿರದು. ಮರಿಗಳಿಗೆ ತುತ್ತುಣಿಸಲು ಆಹಾರ ಅರಸುವ ತಂದೆ-ತಾಯಿ ಹಕ್ಕಿಗಳ ಧಾವಂತ, ಒಬ್ಬರು ಹೋಗಿ ಬರುವರೆಗೂ ಮತ್ತೊಬ್ಬರು ಕಾಯುವ ದುಗುಡ. ಮರಿಗಳಿಗೆ ತುತ್ತುಣಿಸುವುದನ್ನು ನೋಡಿದ್ದಲ್ಲಿ, ಪ್ರತೀ ಮನುಷ್ಯನೊಳಗಿನ ತಂದೆಯ ಜವಾಬ್ದಾರಿ ಹೆಚ್ಚಾಗುವುದು ನಿಜ. ಅದನ್ನು ಕಣ್ಣಾರೆ ನೋಡಿಯೇ ಅನುಭವಿಸಬೇಕು. ಕಾಡಿನೊಳಗಿನ ಒಂದು ಇಡೀ ರಾತ್ರಿ ಮನುಷ್ಯನಿಗೆ ಅಮ್ಮನ ಗರ್ಭದೊಳಗಿನ ವಾಸವೆ ಸರಿ.. ಪದಗಳಲ್ಲಿ ವರ್ಣಿಸಲಸಾಧ್ಯ.

ನಾವು ಬೆರಳನಲ್ಲಿ ಹೊಸಕಿ ಹಾಕುವ ಸಣ್ಣ ಇರುವೆಯ ಅಗಾಧ ಶಕ್ತಿಯ ಬಗ್ಗೆ ತಿಳಿದಾಗ ಅಬ್ಬಾ ಅನಿಸಿದ್ದು ನಿಜ. ಒಂದು ಸಣ್ಣ ಚಿಗುರು ಕೂಡಾ ಯಾವುದೋ ಜೀವಿಗೆ ಆಶ್ರಯ ನೀಡಿ ಬೆಳೆಸುತ್ತದೆ. ಪ್ರತೀ ಜೀವಿಯೂ ಮತ್ತೊಂದಕ್ಕೆ ಆಹಾರವಾಗಿ ಜೀವಸರಪಳಿ ಯನ್ನು ಮುಂದುವರೆಯಲು ಅನುವು ಮಾಡಿಕೊಡುವುದು ಅತೀ ದೊಡ್ಡ ತ್ಯಾಗವೇ ಹೌದು.

ಕಾಡಿನೊಳಗೆ ನಡೆದಾಡಿದ್ದೇ ದಾರಿ. ಆದರೆ ಪ್ರತೀ ಹೆಜ್ಜೆಗೊಂದರಂತೆ ಬದುಕಿನ ಪಾಠಗಳನ್ನು ಕಾಡು ಕಲಿಸುವುದು ಕೂಡಾ ನಿಜ. ಮರಿಗಳಿಗೆ ಆಹಾರಕ್ಕಾಗಿ ಬೇಟೆಯಾಡುವ ತಾಯಿ ಹಕ್ಕಿಗಳ ದುಗುಡ ನೋಡಿದವರಿಗಷ್ಟೇ ಅರಿವಾಗುವುದು ಮಾತ್ರವಲ್ಲ ಕಣ್ಣು ಒದ್ದೆಯಾಗಿಸುವುದು ಕೂಡಾ ಹೌದು. ಬೇಟೆಯ ಯಶಸ್ಸಿಗೆ ಕಾಯುವ ತಾಳ್ಮೆ, ಬಳಸುವ ತಂತ್ರ, ಹೋರಾಟದ ಶಕ್ತಿ ಎಲ್ಲವೂ ಮನುಷ್ಯ ಬದುಕಿಗೆ ಪಾಠವೇ ಹೌದು.

ತಾಳ್ಮೆಯಿದ್ದಲ್ಲಿ ಮಾತ್ರ ಬದುಕಿನಲ್ಲಿ ಯಶಸ್ಸು ಅನ್ನುವುದು ಕಾಡು ಮತ್ತು ಪ್ರಾಣಿ ಪಕ್ಷಿಗಳು ಮನುಷ್ಯನಿಗೆ ಕಲಿಸುವ ಅತೀ ದೊಡ್ಡ ಪಾಠ. ಕಾಡಿನೊಂದಿಗಿನ ಸಂಬಂಧ ಕೊಡುವ ಆಪ್ತತೆ ತೀರಾ ಅಪರೂಪದ್ದು ಮತ್ತು ಗಟ್ಟಿಯಾದದ್ದು. ಯಾವುದೇ ನಿರೀಕ್ಷೆಗಳಿಲ್ಲದೆ ಮನುಷ್ಯನಿಗೆ ನಿರಂತರ ಪ್ರೀತಿ ಮತ್ತು ಬದುಕು ನೀಡುವ ಕಾಡನ್ನು ವರ್ಣಿಸಲು ಅಸಾಧ್ಯವೆ ಸರಿ.

ಇತ್ತೀಚೆಗೆ ನನಗೆ ಕಾಡು ಹೆಚ್ಚು ಆಪ್ತವಾಗತೊಡಗಿದೆ. ದಿನವಿಡೀ ಕಾಡಿನಲ್ಲೇ ಇದ್ದರೂ ಬೇಸರವಾಗದು, ಭಯವಾಗದು, ಹಸಿವಾಗದು..ಕಾಡೆಂದರೆ ಅಮ್ಮನ ಮಡಿಲಿನಷ್ಟೇ ಚಂದ ಮತ್ತು ನೆಮ್ಮದಿ. ಕಾಡೆಂದರೆ ಭೂಲೋಕದ ಆತ್ಮ. ಪ್ರತೀ ಭೇಟಿಯೂ ಕಾಡಿನಿಂದ ಹೊಸಾ ಪಾಠ ಹೊಸಾ ಅನುಭವ ಹೊತ್ತು ಮರಳುತ್ತೇನೆ.

ಕಾಡಿನೊಡಗಿನ ನನ್ನ ಬಾಂಧವ್ಯ ನನಗೆ ನನ್ನನ್ನೇ ಪರಿಚಯಿಸಿದೆ, ಅರಿವಾಗಿಸಿದೆ. ನನ್ನೊಳಗಿನ ಅಹಂ, ಒಣಪ್ರತಿಷ್ಠೆ, ದುರಹಂಕಾರ ಎಲ್ಲವನ್ನೂ ಮೆಟ್ಟಿ ನಿಂತು ತಾಳ್ಮೆ, ಜೀವನ ಪ್ರೀತಿ, ಸಮಾನತೆ ಮತ್ತು ಸಹೋದರತೆಯನ್ನು ಕಲಿಸಿದೆ.

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ, ಬದುಕಿನ ಒಂದು ಭಾಗ.

‍ಲೇಖಕರು Avadhi

August 30, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. JINESH PRASAD

    ವಿನೋದ್ ಕುಮಾರ್ ವಿ.ಕೆ ಅಭಿನಂದನೆಗಳು., ಚೆನ್ನಾಗಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: