ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ರಾತ್ರಿ ನನ್ನದಲ್ಲ…

ಅಂಜಲಿ ಬೆಳಗಲ್

ಅಲ್ಲಿ ಹೈವೇ ರೋಡು ಗಜಿಬಿಜಿ ಎನ್ನುವ ಗಾಡಿಗಳ ಜಾಡು
ಪಕ್ಕದಲ್ಲೊಂದು ಸಾಲು ಸಾಲು ಜೋಪಡಿಗಳ ಶೆಡ್ಡು
ಕೊಂಕುಳದಲ್ಲೊಂದು ಕೂಸು ಕೈಯಲ್ಲೊಂದು ಚೀಲ
ಇಡಿ ದಿನಾ ಬೇಡುತ್ತಾ ನನ್ನದೆ ಹಗಲನ್ನು ಸಂಭ್ರಮಿಸುತ್ತಿದ್ದ ಕ್ಷಣ,
ದಿನ ದಿನ ಇಳಿಸಂಜೆ ಕತ್ತಲು ಆವರಿಸಿಕೊಂಡಾಗ
ಹೃದಯದ ಬಡಿತ ಏರಿಳಿತ
ಮನದಲ್ಲಿ ಗುಡುಗುವ ನಾದ ಈ ರಾತ್ರಿ ನನ್ನದಲ್ಲ, ಎಂದೂ

ಅವನೊಬ್ಬ ಬಂದು ಹೊಟ್ಟೆ ಹಸಿದಿದೆ ಉಣಿಸುವೆಯಾ ಎಂದಾಗ,
ಪಾತ್ರೆಯೊಳಗಿನ ಅನ್ನ ಖಾಲಿಯಾಗಿದೆ ಎಂದು ತಪ್ಪಿಸಿಕೊಳ್ಳುತ್ತಿದ್ದೆ,
ಕೈಯಲ್ಲಿ ಮಲ್ಲಿಗೆ ಬಾಯಲ್ಲಿ ಸಾರಾಯಿ ಹಿಡಿದುಕೊಂಡು
ಬಂದ ನಾಯಿಗಳೆಷ್ಟೊ ಗಲ್ಲಿಯೊಳಗೆ,
ಒಮ್ಮೊಮ್ಮೆ ಈ ಕತ್ತಲನ್ನು ಕೊಲ್ಲಬೇಕು ಎನ್ನುವಷ್ಟು ಸಿಟ್ಟು,
ಆದರೂ ಹೃದಯದೊಳಗೆ ಗಟ್ಟಿ ನಿರ್ದಾರ ಸಮರ್ಥಿಸಿಕೊಳ್ಳುತ್ತಿದ್ದೆ ಈ ರಾತ್ರಿ ನನ್ನದಲ್ಲ, ಎಂದೂ

ಅಂತೂ ಕತ್ತಲು ಸರಿದು ನನ್ನ ಪಾಲಿನ ಸೂರ್ಯ ಬಂದುಬಿಟ್ಟ
ಮತ್ತೆ ಹಗಲನ್ನು ಹೆಗಲಿಗೆ ಹಾಕಿಕೊಂಡು ಹೋಗುವ ನಿತ್ಯ ಕಾಯಕಕ್ಕೆ ಮುನ್ನ,
ಜೋಪಡಿಗೊಂದು ನಾಮ ಫಲಕ ಹಾಕಿಬಿಟ್ಟೆ ‘ನಾಳೆ ಬಾ ‘ಎಂದೂ
ಇರುಳಲಿ ಮೂಸುತ್ತಿರುವ ನಾಯಿಗಳ ಕಾಲುಗಳು ಫಲಕ ನೋಡಿ ಪಕ್ಕಕ್ಕೆ ಸರಿಯುತ್ತಿದ್ದವು
ದಿನಕ್ಕೊಂದು ನೆಪದ ಇನಾಮು ಪಡೆದುಕೊಳ್ಳುತ್ತಿದ್ದ
ನನಗೆ ಮತ್ತೆ ಈ ರಾತ್ರಿ ನನ್ನದಲ್ಲ, ಎಂದೂ ನಿಟ್ಟುಸಿರು ಬಿಟ್ಟೆ,

ನಿತ್ಯ ನಶೆಯ ನಿದ್ದೆಯಲ್ಲಿ ಹರಿಯುತ್ತಿದ್ದ ನನ್ನಕ್ಕ ತಂಗಿಯರ ಚೋಲಿಗಳು
ಹೊಲೆಸಲಾಗುತ್ತಿರಲಿಲ್ಲ,
ದಿನೆ ದಿನೇ ಅವರನ್ನು ನೋಡಿ ನೋಡಿ
ನಿತ್ಯ ಕಪ್ಪು ಕೆಂಡಕಾರಿಕೊಳ್ಳುತ್ತಿರುವಾಗ,
ಸೂಟು ಕೋಟುಗಳು ಬಂದು ತಿಂದು ತೇಗಿಹೊಗುವ ತಟ್ಟೆಯಲ್ಲಿ
ಸತ್ತ ನೊಣದಂತೆ ಕಂಡರು ನೀರೆಯರು,
ನನಗೆ ನಾನು ಕೊಲ್ಲುತ್ತಿದ್ದೆ ಈ ಹಾವಳಿ ನಿಲ್ಲುತ್ತಿಲ್ಲ ಎಂದೂ
ಮತ್ತೆ ಬದುಕಳಿದೆ ಎಂಬ ನಿಟ್ಟುಸಿರು ಈ ರಾತ್ರಿ ನನ್ನದಲ್ಲ, ಎಂದೂ

ರೋಡು ಶೆಡ್ಡುಗಳ ನಡುವೆ ಜೋಪಡಿಗಳು ದಲ್ಲಾಳಿಗಳದ್ದೆ ದರ್ಬಾರು,
ಸಿಲಿಕಾನ್ ಹೈವೆಯಲ್ಲಿ ನನ್ನದೊಂದೆ ಮಾತ್ರ ನಾಳೆ ಬಾ ಎನ್ನುವ ಸೂರು,
ಹಗಲಿಗೊಂದು ಸಲಾಮು ಹೇಳುತ್ತಾ ನನಗೆ ನಾನೆ ಮುಲಾಮು ಹಚ್ಚಿಕೊಳ್ಳುತ್ತಾ
ಜೋಪಡಿಯ ಕತ್ತಲಲಿ ಕಾಡುವ ಕಾಮುಕರೊಂದಿಗೆ ತಪ್ಪಿಸಿಕೊಳ್ಳುತ್ತಾ
ಬದುಕ ನೇಯತೊಡಗಿದೆ ಹಗಲನ್ನು ಹೆಗಲುಮಾಡಿಕೊಂಡು
ಈ ರಾತ್ರಿ ನನ್ನದಲ್ಲ ನಾಳೆ ಬಾ ಎಂದೂ,

‍ಲೇಖಕರು Admin

21 October, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading