ನಂದಿನಿ ಹೆದ್ದುರ್ಗ
ಅಚಾನಕ್ಕು ತುಳುಕುತ್ತದೆ
ಪ್ರೀತಿಬಿಂದಿಗೆ
ಕದ ಮುಚ್ಚಿ
ಕನ್ನಡಿಯ ಸಖ್ಯ
ಬೆಳೆಸುವ
ಹೊತ್ತಿನಲ್ಲಿ
ಗೋಡೆಗಳ ಅಸ್ವಸ್ಥ
ಚರ್ಚೆ
ಹಾಸಿನ ಹೂವು
ನೇವರಿಸುತ್ತ
ಬಾಚದ ಹೆರಳೆತ್ತಿ
ಮೇಲೆ ಬಿಗಿಯುತ್ತೇನೆ
ಚೆಲ್ಲಾಪಿಲ್ಲಿ
ಪುಸ್ತಕಗಳಲ್ಲಿ
ಅಕ್ಷರಗಳು ನಿದ್ದೆ ಹೋಗಿವೆ
ಕತ್ತಲು ಹೆಚ್ಚಿದಂತೆ
ಚಂದ್ರಮಲ್ಲಿಗೆ
ಹೂ
ಪಕಳೆ ತೆರೆದು
ಪರಿಮಳವ
ಚೆಲ್ಲುತ್ತಿದೆ
ದೂರದಲ್ಲೆಲ್ಲೋ
ಇರುಳ ಹಕ್ಕಿಯ
ವಿರಹದ ಹಾಡು
ದಾರಿಯುದ್ದಕ್ಕೂ
ಚೆಲ್ಲಿ ಮೊಳೆತ
ಕನಸು
ಯಾರ ಮಿಲನವೋ
ಏನೋ
ಹರಿದ ಲಾವ
ಸುರಿವ ಮಳೆ ದಾರ
ಲೋಕವ
ಬೆಸೆದು
ಹೊಲೆಯುತ್ತಿದೆ
ನನ್ನ ಈ
ಪುಟ್ಟ ಜಗದ
ಸುತ್ತ ಘಟಿಸುತ್ತಿದೆ
ಒಳಿತು
ಬೆಳಗಿನಿಂದಲೂ
ಶುಭದ ಶಕುನಗಳು
ಆಗ!!
ಯಾರಿಗೂ ತಿಳಿಯದಂತೆ
ಕಿರಣವೊಂದು ಬಾಗಿ
ನನ್ನ ಹೃದಯ
ತಲುಪುತ್ತದೆ
ನಾನು ಮುಗುಳ್ನಗುತ್ತೇನೆ
0 ಪ್ರತಿಕ್ರಿಯೆಗಳು