ಸಾಹಿರರ ಹಾಡುಗಳ ಭೋರ್ಗರೆತ ನನ್ನೊಳಗೆ..

ಮತ್ತೆ‌ ಬರುವೆ ‌ನಿನ್ನ ಬಳಿಗೆ…

ಗಿರಿಜಾ ಶಾಸ್ತ್ರಿ

ಈ ವರುಷ ಸಾಹಿರ್ ಲೂಧಿಯಾನ್ವಿಯವರ ಜನ್ಮ ಶತಾಬ್ದಿ (೮/೩/೧೯೨೧-೨೫/೧೦/ ೧೯೮೦) ಎಂದು ಹಿರಿಯ ಕವಿಗಳಾದ ಆನಂದ ಝುಂಜರವಾಡರು ಹೇಳಿದಾಗಿನಿಂದ ಸಾಹಿರರ ಹಾಡುಗಳ ಭೋರ್ಗರೆತ ನನ್ನೊಳಗೆ. ಯೂಟ್ಯೂಬ್ ಹೊಕ್ಕರೆ ನೂರಾರು ಹಾಡುಗಳು. ಆ ಹಾಡುಗಳಲ್ಲೆಲ್ಲಾ ಇರುವುದು ನಿಜವಾಗಿ ‘ಅಮೃತ’ ಧಾರೆಯೇ!

ಲಾಹೋರಿನ ಕವಿಗೋಷ್ಠಿಯೊಂದರಲ್ಲಿ (೧೯೪೪) ಯುವಕ ಸಾಹಿರ್ ನನ್ನು, ಎರಡು ಮಕ್ಕಳ ತಾಯಿಯಾದ ಅಮೃತಾ ಕಂಡರು. ಅಮೃತಾಳ ರೂಪ, ಮಾತು ಮತ್ತು ಪ್ರತಿಭೆ ಸಾಹಿರ್ ಅವರನ್ನು ಸೆಳೆದರೆ, ಸಾಹಿರ್ ಅವರ ಆದರ್ಶ ಮತ್ತು ಕಾವ್ಯೋತ್ಕಟತೆ ಅಮೃತಾರನ್ನು ಸೆಳೆಯಿತು. ಸಿನಿಮೀಯವಾಗಿ ಪ್ರೇಮಾಂಕುರವಾಯಿತು. ಆದರೆ‌ ಆಲದ ಮರದ ಹಾಗೆ ಬೆಳೆಯಿತು.

ಕವಿತೆಯ ರೂಪದಲ್ಲಿ ಅಮೃತಾ ಸಾಹಿರ್ ಅವರೆಡೆಗೆ ಹಾರಿದರೆ, ಹಾಡಿನ ರೂಪದಲ್ಲಿ ಸಾಹಿರ್ ಅಮೃತಾಳೆಡೆಗೆ ಹಾರುತ್ತಿದ್ದರು. ಇವರಿಬ್ಬರ ಕಾವ್ಯ ಸಂವಾದಗಳು ಯೂಟ್ಯೂಬ್ ನಲ್ಲಿ ದೊರೆಯುತ್ತವೆ

ಸಾಹಿರ್ ಸಿನಿಮಾ ರಂಗಕ್ಕೆ ಮುಂಬಯಿಗೆ ಬರುವ ಕಾಲಕ್ಕಾಗಲೇ ಅಮೃತಾಳನ್ನು ‘ದೂರಬಿಟ್ಟು’ ಬಂದಿದ್ದರು. ಇದಕ್ಕೆ ಸಾಹಿರ್ ಅವರ ತಾಯಿಯ ಮಡಿವಂತಿಕೆಯೇ ಕಾರಣವಾಗಿತ್ತು. ಆದರೂ ಸಾಹಿರ್ ಮನದೊಳಗಿಂದ ಅಮೃತಾ ಮರೆಯಾಗಲೇ ಇಲ್ಲ. ‘ನಾನು ತೀವ್ರವಾದ ನಿನ್ನ ಹುಡುಕಾಟದಲ್ಲಿ ಹೊರಟಾಗ ನೀನು ಸಿಗದೇ ಹೋಗುವುದೇ ಪ್ರೇಮೋತ್ಕಟತೆಯ ಮಾನದಂಡ’ ಎನ್ನುತ್ತಾರೆ ಅಮೃತಾ. ಅವರ ಪ್ರೇಮ ಅಮರವಾದುದಕ್ಕೆ ಅವರು ‌ಪರಸ್ಪರ ಸಿಗದೇ ಹೋದುದೇ ಕಾರಣವಿರಬೇಕು.

ಲೈಲಾ ಮಜ್ನು, ಸಲೀಂ ಅನಾರ್ಕಲಿಯಂತಹ ಜಗತ್ತಿನ ಅಮರ ಪ್ರೇಮಿಗಳ ಸಾಲಿನಲ್ಲಿ ನಿಲ್ಲುವ ಹೆಸರುಗಳೆಂದರೆ ಅಮೃತಾ ಮತ್ತು ಸಾಹಿರ್ . ಕೂಡಿಯೂ ಕೂಡಲಾರದ ಸಂಕಟ ಅವರ ಹಾಡುಗಳಲ್ಲಿ, ಕವಿತೆಗಳಲ್ಲಿ ಬೆಳೆಯಿತು ಅವರ ಪ್ರೇಮ ವಿರಹ ಪ್ರತೀಕ್ಷೆ, ಹತಾಶೆ….
ಅಮೃತಾ ಅವರಿಗೆ ಸಿಗರೇಟು ಸೇದುವ ಚಟವೇನೂ ಇರಲಿಲ್ಲ. ಆದರೆ ಸಾಹಿರ್ ಅವರು ಸೇದಿ ಎಸೆದು ಹೋದ ತುಂಡು ಸಿಗರೇಟುಗಳನ್ನು ಸೇದಲು ಮಾತ್ರ ಅಮೃತಾ ಜೀವ ಬಿಡುತ್ತಿದ್ದರಂತೆ. ಸಾಹಿರ್ ಎಂದರೆ ಅಂತಹ ಉನ್ಮಾದ ಅವರಿಗೆ.

ಸಾಹಿರ್ ಅವರ ಹಾಡುಗಳನ್ನು ಕೇಳುತ್ತಿದ್ದರೆ ಈ ಹಾಡುಗಳು ಅಮೃತಾಳಿಗೇ ಬರೆದಂತಿವೆ. ಅಷ್ಟು ತೀವ್ರವಾದ ಆತ್ಮನಿವೇದನೆಗಳು ಅವು. ಅಮೃತಾ ತನ್ನ ಪತಿಯನ್ನು ಬಿಟ್ಟು ಪ್ರೇಮಿಯಾದ ಸಾಹಿರ್ ಅವರನ್ನೂ ಬಿಟ್ಟು ಚಿತ್ರ ಕಲಾವಿದ ಇಮ್ರೋಜ್ ನೊಂದಿಗೆ ಲಿವ್ ಇನ್ ಸಂಬಂಧದೊದಳಗೆ ತಮ್ಮ ಕೊನೆಯವರೆಗೆ ಬದುಕಿದ್ದರು. ಆದರೆ ಪ್ರೇಮಿಸಿದ್ದು ಸಾಹಿರ್ ಅವರನ್ನು. ಇಮ್ರೋಜ್ ಅವರಿಗೆ ಅಮೃತಾ ಮತ್ತು ಸಾಹಿರರ ಪ್ರೇಮದ ಬಗ್ಗೆ ಯಾವ ಆಕ್ಷೇಪವೂ ಇರಲಿಲ್ಲ. ‘ಮೇ ತೆನು ಫಿರ್ ಮಿಲಾಂಗಿ’ ಎನ್ನುವ ಪಂಜಾಬಿ ಕವಿತೆ (‘ಮೇ ತುಜೇ ಫಿರ್ ಮಿಲೂಂಗಿ’) ಅಮೃತಾ, ಸಾಹಿರ್ ಅವರಿಗೆ ಬರೆದ ಕೊನೆಯ ಕವಿತೆ/ ಪತ್ರವೆಂದು ಹೇಳಲಾಗುತ್ತದೆ.

ಮೇಲುನೋಟಕ್ಕೆ ಇದು ಇಮ್ರೋಜ್ ಗೆ ಬರೆದ ಕವಿತೆಯಂತೆ ಕಂಡರೂ ಇದು ಸಾಹಿರ್ ಬಗೆಗೆ ಬರೆದ ಕವಿತೆಯನ್ನಾಗಿಯೂ ಅರ್ಥಮಾಡಿಕೊಳ್ಳಬಹುದು. ಹೀಗೆ ಯೋಚಿಸಲು ಒಂದು ಕಾರಣವಿದೆ. ಒಮ್ಮೆ ಇಮ್ರೋಜ್ ನ ಹಿಂದೆ ಕುಳಿತು ಅಮೃತಾ ಸ್ಕೂಟರ್ ನಲ್ಲಿ ಹೋಗುತ್ತಿದ್ದರು. ಆಗ ಇಮ್ರೋಜ್ ನ ಬೆನ್ನಮೇಲೆ ಬೆರಳಿನಿಂದ ಸಾಹಿರ್ ನ ಹೆಸರು ಬರೆದರು. ನಿನಗೇನೂ ಬೇಸರವಾಗಲಿಲ್ಲವೇ ಎಂದು ಇಮ್ರೋಜ್ ನನ್ನು ಅಮೃತಾ ಕೇಳಿದಾಗ, ‘ನನ್ನ ಬೆನ್ನೂ ನಿನ್ನದೇ ಸಾಹಿರನೂ ನಿನ್ನವನೇ ನಾನೇಕೆ ಬೇಸರ ಮಾಡಿಕೊಳ್ಳಲಿ’ ಎಂದನಂತೆ. ಇದು ವಿಭಿನ್ನ ಮನೋ ವ್ಯಾಪಾರಗಳು ಒಂದರೊಳಗೊಂದು ಹೊಕ್ಕು ಹೊರಬರುವ ಕವಿತೆಯ camouflage ನ ಗುಣವೂ ಆಗಿದೆ. ಭೌತಿಕ ಪ್ರಪಂಚದ ಮಿತಿಗಳನ್ನು ಮೀರುವ ಹಂಬಲವಾಗಿಯೂ ಇದನ್ನು ನೋಡಬಹುದು.

ಈ ಕವಿತೆ ಅಮೃತಾ ಅವರ ಬದುಕಿನ ಪ್ರೇಮ ಸಂಘರ್ಷದ ಕವಿತೆಯೂ ಆಗಿದೆ. ‘ಕಭೀ ಕಭೀ ಮೇರೆ ದಿಲ್ ಮೆ ಖಯಾಲ್ ಆತಾ ಹೈ’, ‘ಕಭಿ ಖುದ್ ಪೇ ಕಭಿ ಹಾಲಾತ್ ಪೆ ರೋನಾ ಆಯಾ’ ಎನ್ನುವ ಸಾಹಿರರ ಪ್ರಸಿದ್ಧ ಹಾಡಿನ ಸಾಲುಗಳು ಅಮೃತಾ ಮತ್ತು ಸಾಹಿರ್ ಅವರ ನಡುವಿನ ಕಾವ್ಯ ಸಂವಾದಗಳಲ್ಲಿ ಸಿಗುತ್ತವೆ. ಸಂಬಂಧಗಳು ಕವಲೊಡೆಯುವುದು ಅನಿವಾರ್ಯವಾದರೆ ಅದಕ್ಕೆ ಒಂದು ಸುಂದರ ತಿರುವನ್ನು ಕೊಡುವುದೇ ಒಳ್ಳೆಯದು ಎನ್ನುವ ‘ಚಲೋ ಇಕ್ ಬಾರ್ ಫಿರ್ ಸೆ ಅಜನಬಿ ಬನ್ ಜಾಯೆ ಹಮ್ ದೋನೋ’ ಎನ್ನುವ ‘ಗುಮರಾಹ್’ ಸಿನಿಮಾದ ಸುಂದರವಾದ ಹಾಡು ಅವರಿಬ್ಬರ ಬದುಕಿನ ತಿರುವನ್ನೇ ಪ್ರತಿನಿಧಿಸುತ್ತದೆ.

ಸಾಹಿರರ ಹಾಡುಗಳಲ್ಲಿ ಮಾಲಾ ಸಿನ್ಹ, ಮಧುಬಾಲ, ಮೀನಾಕುಮಾರಿ, ವೈಜಯಂತಿಮಾಲ ಮುಂತಾದ ಅಪ್ರತಿಮ ನಾಯಕಿಯರಾಗಲೀ ಸುನಿಲ್ ದತ್, ಗುರುದತ್, ದಿಲೀಪ್ ಕುಮಾರ್, ದೇವಾನಂದ್,ರಾಜ್ ಕುಮಾರ್, ಅಶೋಕ್ ಕುಮಾರ್ ಮುಂತಾದ ಸೂಪರ್ ಸ್ಟಾರ್ ಗಳಾಗಲೀ ಸುಳಿಯುವುದಿಲ್ಲ. ಬದಲಾಗಿ ಕಣ್ಣಮುಂದೆ‌ ಬರುವುದು ಅಮೃತಾ ಪ್ರೀತಮ್ ಮತ್ತು ಸಾಹಿರ್ ಲೂಧಿಯಾನ್ವಿ ಹಾಗೂ ‘ಬರಸಾತ್ ನ ರಾತ್ರಿ’ ಗಳಂತೆ ಕಾಡುವ ಅವರ ಹಾಡುಗಳು.

‘ಮೆ ತೆನು ಫಿರ್ ಮಿಲಾಂಗಿ’ ಎನ್ನುವ ಪಂಜಾಬಿ ಕವಿತೆಯ ಹಿಂದಿ ಅನುವಾದ ‘ಮೇ ತುಝೆ ಫಿರ್ ಮಿಲೂಂಗಿ’. ಅದರ ಕನ್ನಡ ರೂಪಾಂತರ :

ಮತ್ತೆ ಬರುವೆ ನಿನ್ನ ಬಳಿಗೆ
ಎಲ್ಲಿ ? ಹೇಗೆ
ಗೊತ್ತಿಲ್ಲ ನನಗೆ.

ನಿನ್ನ ಕ್ಯಾನ್ವಾಸಿನ ಮೇಲೆ
ಕಲ್ಪನೆಗಳ ಪ್ರೇರಣೆಯಾಗಿ
ಅದರೊಳಗೊಂದು ನಿಗೂಢ
ರೇಖೆಯಾಗಿ
ಮಾತುಗೆಟ್ಟು ನಿನ್ನ
ನೋಡುತ್ತಲೇ ಇರುವೆ

ಮತ್ತೆ ಭೇಟಿಯಾಗುವೆ
ಎಲ್ಲಿ? ಹೇಗೆ
ಗೊತ್ತಿಲ್ಲ ನನಗೆ

ರವಿಕಿರಣವಾಗಿ ನಿನ್ನ
ಬಣ್ಣಗಳೊಡನೆ ಬೆರೆತು ಹೋಗುವೆ
ನಿನ್ನ ಕ್ಯಾನ್ವಾಸಿನ ತುಂಬಾ
ರಂಗು ರಂಗಿನ ಮೆರವಣಿಗೆ

ಗೊತ್ತಿಲ್ಲ ನನಗೆ
ಹೇಗೆ ? ಎಲ್ಲಿ?
ಆದರೂ ಅವಶ್ಯ
ಭೇಟಿಯಾಗುವೆ ನಿನ್ನ

ಝರಿಯೊಳಗಿನ ಹನಿಯಾಗಿ
ನಿನ್ನ ಮೊಗದ ಮೇಲೆ ಮುತ್ತಾಗುವೆ
ತಂಪಾದ ಅನುಭವವಾಗಿ
ನಿನ್ನೆದೆಯೊಳಗೆ
ಅಡಗಿಕೊಳ್ಳುವೆ

ನನಗೆ ಹೆಚ್ಚೇನೂ ಗೊತ್ತಿಲ್ಲ ಮತ್ತೆ
‘ಸಮಯ’ ಸಾಧಿಸಿದೆ ನನ್ನ ಮೇಲೆ
ಆದರೂ ಸಧ್ಯ ಸಾಗಿದೆ
ನನ್ನ ಜೊತೆಯಲೇ

ಮುಗಿದು ಹೋಗುತ್ತದೆ ಕೊನೆಗೆ
ಎಲ್ಲ ಈ ಶರೀರದ ಜೊತೆಗೇ
ನೆನಪಿನ ತಂತುಗಳಿಂದ
ದೇಶಕಾಲದ ಕ್ಷಣಗಳನ್ನು
ಹೆಕ್ಕಿ ಪೋಣಿಸುವೆ
ಮತ್ತೆ ನಿನ್ನ ಸೇರುವೆ
ಎಲ್ಲಿ ? ಹೇಗೆ?
ಗೊತ್ತಿಲ್ಲ ನನಗೆ
ಆದರೂ ಅವಶ್ಯ ಬರುವೆ
ನಿನ್ನ ಬಳಿಗೆ

(ಕಭೀ ಕಭೀ ಮೇರೆ ದಿಲ್ ಮೇ ಸಾಹಿರ್ ಅವರ ಮೂಲ ಹಾಡಿನ ಕೊಂಡಿ)

‍ಲೇಖಕರು Admin

October 21, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: