ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ಬೇಸಿಗೆ ದಿನಗಳಲ್ಲಿ..

ಕೊಟ್ರೇಶ್ ಅರಸೀಕೆರೆ

ಈ ಬೇಸಿಗೆ ದಿನಗಳಲ್ಲಿ ಕಪ್ಪು ಟಾರಿನ ಹೆದ್ದಾರಿಗಳು ಕರಗುತ್ತಿಲ್ಲ
ಸೂರ್ಯ ಕಿರಣಗಳ ಶಾಖವೆಲ್ಲಾ
ಕಾರ್ಮಿಕರ ಕಣ್ಣೀರ ಹನಿಯ ಆವಿ
ಯಾಗಿಸುವುದರಲ್ಲೇ ದಿನ ತಳ್ಳುತ್ತಿದೆ!

ಮತ್ತಷ್ಟು ಗಾಢ,ಮತ್ತಷ್ಟು ಗಾಢ ಕಪ್ಪು
ಬಣ್ಣ
ಒಂದೊಂದು ಬೆವರ ಹನಿ, ಪಾದಕಂಟಿದ
ರಕ್ತ
ನಡೆದು ನಡೆದು …ಕಡುಗಪ್ಪು ಹೆದ್ದಾರಿ

ಆಕಾಶದಲಿ ಹಾರುತ ಕಪ್ಪು ಸಾಸರಲಿ ಸಕ್ಕರೆ
ರಹಿತ ಕಾಫಿ ಹೀರಿ ಬಂದ ಆತ್ಮಗಳ ದುರ್ಗಂಧಕೆ
ಎಷ್ಟು ಜೀವಗಳು ಕಪ್ಪಾದವು ಹೆದ್ದಾರಿಯ ವಿಷ
ವರ್ತುಲದಲಿ ಸಾಗಿ ಸಾಗಿ ಕಡುಗಪ್ಪು ರಕ್ತದಲಿ!

ತಮ್ಮದೇ ಕಲ್ಯಾಣ ನಿಧಿಯ ಸಹಸ್ರಾರು ಕೋಟಿ
ಎಲ್ಲಿ ಕಣ್ಣರೆಯಾದವೋ
ಭುವಿಯ ಉದ್ದುದ್ದ ಅಂತಸ್ತುಗಳ ಕಟ್ಟಿದ ಕೈಗೆ
ಬರಿಗಾಲ ಪಾದಸೇವೆ, ಅರೆಹೊಟ್ಟೆ ಯಾತ್ರೆ
ಯಾವ ಭೂ ಗರ್ಭಗುಡಿಯಲ್ಲಡಗಿದೆಯೋ ಕಲ್ಯಾಣ ನಿಧಿ ಕೊಪ್ಪರಿಗೆ!

ಮತ್ತೆಷ್ಟು ಹೆದ್ದಾರಿಗಳು ಕಡುಗಪ್ಪು ರಕುತಗಳಲಿ
ಮುಳುಗೇಳಬಹುದು
ರಕ್ಕಸರೆಲ್ಲಾ ಬಾಗೀನ ಬಿಡುವ ತವಕದಲಿ ಗುದ್ದಾಟ
ಕೆಂಪು ಬಾವುಟ ವಿಮಾನದೆತ್ತರಕ್ಕೆ ಏರಿಸಿ
ದವನಿಗೆ ಔತಣ ತಮ್ಮ ಹೆಸರಿನ ಆಹಾರ
ಕಿಟ್ಟುಗಳಲಿ
ಹಂಚುವಾಗ ಸೋರಿದನ್ನು ಬಾಚಿಕೊಂಡವನಿಗೆ
ಅದೇ ಮೃಷ್ಟಾನ್ನ

ಅವರು ಕಪ್ಪು ಹೆದ್ದಾರಿ ಸವೆಸಿ ಬರುವಷ್ಟರಲ್ಲಿ
ಇಲ್ಲಿ ಕೆಂಪು ಸಾರಿಗೆ ಸಿದ್ಧವಾಗುತ್ತಿದೆ ಹೆಣಹೊರಲು ಶುಲ್ಕದೊಂದಿಗೆ

ಚರಿತ್ರೆ ಪುಟಗಳು ಮತ್ತಷ್ಟು ಪುಟಗಳ ತಮ್ಮ
ಖಾತೆಗೆ ಸೇರಿಸಿಕೊಳ್ಳಬಹುದು
ಮತ್ತಷ್ಟು ಕಪ್ಪು ಮಸಿ ಸಿದ್ಧವಾಗಬಹುದು ರಕ್ತ
ಬಸಿದ ದೇಹಗಳಿಂದ ಪ್ರಜಾಪ್ರಭುತ್ವ ಘನತೆಗೆ!

ಪ್ರಭುತ್ವದ ಕಣ್ಣುಗಳಲ್ಲಿ ಕಪ್ಪು ಕಾಡಿಗೆ ಕಂಡೆ
ಕಣ್ಣು ತೆರೆಯದಷ್ಟು ಮಟ್ಟಿಗೆ!

‍ಲೇಖಕರು avadhi

29 May, 2020

3 Comments

  1. Kotresh T A M

    ಅವಧಿಗೆ ಧನ್ಯವಾದಗಳು

  2. Santhosh Undadi

    ಸಮಕಾಲೀನ ವಿಷಯವನ್ನು ಆಯ್ದುಕೊಂಡು ವ್ಯವಸ್ಥೆಯ ಹುಳುಕುಗಳನ್ನು ಮತ್ತು ನೊಂದವರ ನೋವನ್ನು ಚೆನ್ನಾಗಿ ಚಿತ್ರಿಸಿದ್ದಿರಿ. ಪ್ರಭುತ್ವ ಸಾಮಾನ್ಯರ ಮಟ್ಟಿಗೆ ಯಾವಾಗಲೂ ಕುರುಡು. ಒಳ್ಳೆಯ ಕವಿತೆ.

  3. Kotresh T A M Kotri

    ಧನ್ಯವಾದಗಳು ಸಂತೋಷ್ ಸರ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading