ಶ್ಯಾಮಲಾ ಮಾಧವ ಕಥೆ: ನನ್ನಣ್ಣ

ಹಿಂದಿ ಸಾಹಿತಿ ಶಿವಾನಿ ಅವರ ‘ಮೇರಾ ಭಾಯಿ’ ‘ನನ್ನಣ್ಣ’ನಾಗಿ ಕನ್ನಡಕ್ಕೆ ಬಂದಿದ್ದಾರೆ. ಕರೆ ತಂದಿದ್ದು…

 ಶ್ಯಾಮಲಾ ಮಾಧವ

ಈ ಬಾರಿ ಲಖನೌಗೆ ಹಿಂದಿರುಗಿದ ಮರುದಿನವೇ ಈದ್ ಹಬ್ಬ. ಬಹಳ ಹೊತ್ತಿನವರೆಗೆ ನಾನು ಅವರಿಗಾಗಿ ಕಾದೆ. ಹೀಗೆ ನನಗೆ ಈದಿ ಕೊಡಲೆಂದು ಅವರು ಬರದೆ ಹೋದ ದಿನ ಎಂದಾದರೂ ಇದೆಯೇ? ಬರುವಾಗ ರುಮಾಲಿನಲ್ಲಿ ಸುತ್ತಿದ ಶೇವಿಗೆಯ ಕಠೋರಿ ಯಾವಾಗಲೂ ಜೊತೆಯಲ್ಲಿರುತ್ತಿತ್ತು. ಅವರಿದ್ದಲ್ಲಿ ಒಲೆ ಉರಿಯುತ್ತಿತ್ತೆಲ್ಲಿ? ಹೊಟೇಲಿನಲ್ಲಿ ಇರುತ್ತಿದ್ದ ಅವರು ತಮಗೆಂದು ಇಷ್ಟಮಿತ್ರರು ತರುತ್ತಿದ್ದ ಶೇವಿಗೆಯಲ್ಲಿ ನನ್ನ ಪಾಲನ್ನು ಕಠೋರಿಯಲ್ಲಿ ತೆಗೆದಿಡುತ್ತಿದ್ದರು. ಮನೆ ಮನೆಯ ವಿಭಿನ್ನ ರುಚಿ, ಬಣ್ಣ, ರಸಮಿಶ್ರಣದ ಈ ದುರ್ಲಭ ಶೇವಿಗೆ ಹೀಗೆ ಯಾರಿಗೆ ಸೇರೀತು? ಈ ಬಾರಿ ಅವರು ಬರಲಿಲ್ಲ. ಮುಂಬೈಯಿಂದ ನಾನು ಬರೆದಿದ್ದ ಪತ್ರಕ್ಕೆ ಅವರಿಂದ ಉತ್ತರವೂ ಬಂದಿರಲಿಲ್ಲ. ತಲೆ ಸಿಡಿಯತೊಡಗಿತು. ಪರಿಚಿತ ಮಿತ್ರರೊಬ್ಬರಿಗೆ ಫೋನ್ ಕರೆ ಮಾಡಿದೆ.

“ಅರೇ! ನೀವು ಕೇಳಿಲ್ಲವೇ? ಮೇ ತಿಂಗಳಲ್ಲೇ ಅವರು ಹೋಗಿ ಬಿಟ್ಟರು. ಮಲಗಿದ್ದರು, ಅಷ್ಟೇ. ಮತ್ತೆ ಏಳಲಿಲ್ಲ.” ಗಹನವಾದ ಅಪರಾಧೀ ಭಾವವು ದಿನವಿಡೀ ನನ್ನನ್ನು ಕ್ಷೋಭೆಗೆ ಒಳಗಾಗಿಸಿತು. ಒಂದೇ ಪತ್ರ ಬರೆದು ನಾನೂ ಸುಮ್ಮನಾಗಿ ಬಿಟ್ಟಿದ್ದೆ. ಇನ್ಯಾರಿಗಾದರೂ ಬರೆದು ಅವರ ಯೋಗಕ್ಷೇಮದ ಬಗ್ಗೆ ವಿಚಾರಿಸಿಕೊಳ್ಳಬಹುದಿತ್ತು. ಸಹೋದರನಲ್ಲದಿದ್ದರೂ ಜಗದಲ್ಲಿ ನನ್ನ ಪಾಲಿಗೆ ಅಮೂಲ್ಯ ಅಣ್ಣನಾಗಿದ್ದ ಜೀವ! ನನ್ನ ಅಣ್ಣ ಹೊರಟು ಹೋದ! ನಿಷ್ಠಾವಂತ ಮುಸ್ಲಿಮನಾಗಿದ್ದೂ ಪ್ರತೀ ಹೋಳಿಯಲ್ಲೂ ನನ್ನಲ್ಲಿಗೆ ಹೋಳಿಯ ಗುಝಿಯಾ ತಿನ್ನಲು ತಪ್ಪದೆ ಬರುತ್ತಿದ್ದ ಜೀವ! ಹಿಂದೂಗಳ ಈ ಹಬ್ಬದ ಬಗ್ಗೆ ಸಿಟ್ಟಾಗುತ್ತಿದ್ದರೂ, “ಅಲ್ಲಾ ರಕ್ಷಿಸಲಿ! ಎಂಥಾ ಕೆಲಸಕ್ಕೆ ಬಾರದ ಹಬ್ಬ ಇದು, ನೀವು ಹಿಂದೂಗಳದ್ದು! ಇಷ್ಟು ಬಿಳಿಯ ಕುರ್ತಾ, ಶೇರ್‍ವಾನಿ ತೊಟ್ಟಿರುವುದನ್ನು ನೋಡಿಯೂ ಹೀಗೆ ಬಣ್ಣ ಹಾಕಿಯೇ ಬಿಟ್ರು, ಹಾಳಾದವ್ರು! ಖುದಾ ಇವರ ನಾವೆಯನ್ನು ಮುಳುಗಿಸಿ ಬಿಡಲಿ!” ಎಂದನ್ನುತ್ತಿದ್ದರು.

ನನ್ನವರ ಅನಾರೋಗ್ಯದ ಸಮಯ ದಿನವೂ ಬಂದು ಅವರ ತಲೆದಿಸೆಯಲ್ಲಿ ಕೂತಿರುತ್ತಿದ್ದರು. “ಹೋಗು, ನಿನ್ನ ಕೆಲಸ ಏನುಂಟೋ ಮುಗಿಸಿ ಬಾ; ನಾನಿಲ್ಲಿದ್ದೇನೆ”, ಎನ್ನುತ್ತಿದ್ದರು. ಹಲವೊಮ್ಮೆ ಗಂಟೆಗಳ ವರೆಗೆ ನಾನವರನ್ನು ಅಲ್ಲಿ ಬಿಟ್ಟು ಹೋಗುವುದಿತ್ತು. ಕೆಲವೊಮ್ಮೆ ಔಷಧ ತರುವುದಿರುತ್ತಿತ್ತು. ಅದೂ ಎಂತಹ ದುರ್ಲಭ ಔಷಧ! ಆಯುರ್ವೇದದ ಕಷ್ಟಸಾಧ್ಯ ಚಿಕಿತ್ಸೆಗಾಗಿ ಬೇವಿನ ಕಡ್ಡಿಯ ತೊಗಟೆ, ಪುನರ್ನವ, ಅಶ್ವಗಂಧ – ಹೀಗೆಲ್ಲ. ಇವುಗಳನ್ನರಸುತ್ತಾ ಕೆಲವೊಮ್ಮೆ ಗಂಟೆಗಳೂ ಕಳೆಯುವುದಿತ್ತು. ಈ ಗಿಡಮೂಲಿಕೆಗಳಿಗಾಗಿ ಕೆಲವೊಮ್ಮೆ ರಕಾಬ್‍ಗಂಜ್ ವರೆಗೂ ಹೋಗಬೇಕಾಗುತ್ತಿತ್ತು. ಅವಸರದಿಂದ ಹಿಂದಿರುಗಿ ನೋಡಿದರೆ, ರುಗ್ಣಶಯ್ಯೆಯಲ್ಲಿ ಮಲಗಿದ್ದ ನನ್ನವರ ತಲೆಯ ಬಳಿ ಹಾಮಿದ್‍ಭಾಯಿ ಋಷಿಮುನಿಗಳಂತಹ ಸ್ಥೈರ್ಯದಿಂದ ಕುಳಿತಿದ್ದುದು ಕಾಣುತ್ತಿತ್ತು. ಆದರೆ ಈ ಸಂಜೀವಿನಿ ಮೂಲಿಕೆಗಳೂ ಯಮನನ್ನು ಸೋಲಿಸಲು ಅಶಕ್ಯವಾದಾಗ, ಅಂಧಕಾರಪೂರ್ಣ ಭವಿಷ್ಯವು ನನ್ನ ಧೈರ್ಯದ ಮೇರುಸ್ತಂಭವನ್ನೇ ಅಲುಗಾಡಿಸಿ ಬಿಟ್ಟಿತ್ತು. ರಸ್ತೆಚೌಕದಲ್ಲಿ ಮಂಗನಾಟ ನೋಡಲು ಸೇರಿದ ಜನರು, ಹಣ ನೀಡುವ ಕ್ಷಣ ಬಂದೊಡನೆ ಮುಕ್ತಿಗಾಗಿ ವೇಗದಿಂದ ಮಾಯವಾಗುವಂತೆ ಬಂಧು ಬಾಂಧವರು ತಮ್ಮ ದಾರಿ ಹಿಡಿದರು. ವಿಪತ್ತಿನ ಆ ಘಳಿಗೆಯಲ್ಲಿ ಹಾಮಿದ್ ಭಾಯಿ ಒಬ್ಬರೇ ನನ್ನೊಡನೆ ನಿಂತವರು. “ನೋಡು ಮಗೂ”, ನನ್ನ ಹೆಗಲ ಮೇಲೆ ಕೈಯಿಟ್ಟು ಅವರಂದಿದ್ದರು, “ಧೈರ್ಯಗೆಟ್ಟೆಯಾದರೆ ಕೆಲಸ ನಡೆಯದು. ಸೊಂಟಕಟ್ಟಿ ಮುಂದೆ ನಡೆ. ಅಲ್ಲಾನ ಇಚ್ಛೆಯಿದ್ದರೆ ಅವನೇ ಕೈನೀಡಿ ನಡೆಸಿಯಾನು.”

ಕೆಲವೊಮ್ಮೆ ಅನಿಸುತ್ತದೆ, ಸಂಕಷ್ಟಗಳೊಡನೆ ಹೋರಾಡುವ ಯುಧ್ಧಕವಚವನ್ನು ನಾನು ಹಾಮಿದ್ ಭಾಯಿಯಿಂದ ಪಡೆದೆ, ಹಾಗೂ ಆಯುಧವನ್ನು ನಾಗರ್‍ಜೀ ಅವರಿಂದ ಎಂದು. ನಾಗರ್‍ಜೀ ಅಂದಿದ್ದರು, “ತಂಗೀ, ದುಃಖಾಗ್ನಿಯಿಂದ ನೀನು ಗೆದ್ದು ಬರುವುದನ್ನು ನಾವು ನೋಡ ಬಯಸುತ್ತೇವೆ, ದ್ರವಿಸುವುದನ್ನಲ್ಲ!” ಧೈರ್ಯದ ಮಂಜೂಷವನ್ನು ಕೈಗಿಟ್ಟವರು, ಗುರುವರ ಹಜಾರೀಪ್ರಸಾದ್‍ಜೀ ಅವರು. ಸ್ವತಃ ಅವರ ಕಣ್ಣುಗಳಿಂದ ಕಣ್ಣೀರು ಹರಿಯುತ್ತಿದ್ದರೂ, ಆ ಗುರುಗಂಭೀರ ಕಂಠಸ್ವರದಿಂದ ಹೊರಟ ನುಡಿಮುತ್ತೇ ನನ್ನ ದಾರಿಯ ಬುತ್ತಿಯಾಗಿತ್ತು. ಹಾಮಿದ್‍ಭಾಯಿ ಎಂದರೆ ಮೊದಲಾಗಿ ರಾಮ್‍ಪುರ ನೆನಪಾಗುತ್ತದೆ. ರಾಮ್‍ಪುರ! ನನ್ನ ಬಾಲ್ಯದ ನೆನಪುಗಳ ಸುವರ್ಣಮುದ್ರೆಯ ನಗರಿ. ಅಲ್ಲಿ ಸ್ಥಿರವಾಗಿ ನಿಂತಿದೆ, ಖಾಸ್‍ಬಾಗ್, ಮುಸ್ತಫಾ ಲಾಜ್, ರೋಸ್‍ವಿಲ್ಲಾ, ಮೀನಾ ಬಾಜಾರ್, ಡೌನ್, ಬಲಿ ಅಹದ್‍ನಿಂದ ಕೂಡಿದ ಕಾಣಿಕೆ; ನೌಕರ ಆರ್ದಲೀ ಚಮದ್ ಖಾನ್, ಮುನ್ನೇ ಖಾನ್ ಸಿಕಂದರ್ ಮಿಯಾ, ಜುಮ್ಮನ್ ಮತ್ತು ಮುಹಮ್ಮದ್ ಅಲೀ ಪೇಶ್‍ಕರ್, ತಂದೆಯವರ ಸ್ಟೆನೋ ಆಗಿದ್ದ ಅಲ್ವೀ ಸಾಹಬ್; ಮದರಂಗಿ ಹಾಗೂ ಶಮಾ ತುಲಂಬರ್‍ನ ಸುವಾಸನೆ! ಬುರ್ಕಾದ ರೇಶ್ಮೆ ಜಾಲಿಯೊಳಗಿಂದ ಸ್ನೇಹ ಸೂಸುವ ಆ ಕಾಡಿಗೆ ಕಣ್ಗಳಲ್ಲಿ ದ್ವೇಷವಾಗಲೀ, ತಿರಸ್ಕಾರವಾಗಲೀ ಇರದೆ ಕೇವಲ ಪ್ರೀತಿ ತುಂಬಿ ತುಳುಕುತ್ತಿತ್ತು.

ನಮ್ಮ ಕೋಠಿ ಮುಸ್ತಫಾ ಲಾಜ್ ಮಹೋನ್ನತ ಪ್ರತಿಷ್ಠೆಯ ಕಟ್ಟಡವಾಗಿದ್ದು, ನಮ್ಮ ತಂದೆ ಸಂಸ್ಥಾನದ ಮೊದಲ ಹಿಂದೂ ಗೃಹಮಂತ್ರಿಯಾಗಿದ್ದರು. ಹಾಮಿದ್‍ಭಾಯಿಯ ಚಾಚಾ ಸರ್ ಅಬ್ದುಲ್ ಸಮದ್ ಖಾನ್‍ರ ಕೋಠಿ ರೋಸ್ ವಿಲ್ಲಾ ನಮ್ಮ ಕೋಠಿಯಿಂದ ಒಂದು ಗಜದಷ್ಟು ಅಂತರದಲ್ಲಿತ್ತು. ಅವರ ಸೋದರ ಅಬ್ದಲ್ ಹಾಮಿದ್ ಖಾನರ ಮಕ್ಕಳಲ್ಲಿ ನಡುವಿನವರಾಗಿದ್ದ ಹಾಮಿದ್ ಅವರಿಗೆ ತಂಗಿಯರಿರಲಿಲ್ಲ. ಇದರಿಂದಾಗಿಯೇ ನಾವು ಸೋದರಿಯರಲ್ಲಿ ಅವರಿಗೆ ಅನನ್ಯ ಸ್ನೇಹವಿತ್ತು. ಆಗ ನಾನು ಎಂಟೋ ಹತ್ತೋ ವರ್ಷದವಳಿದ್ದೆ. ರಜೆಯಲ್ಲಿ ಬಂದಾಗಲೆಲ್ಲ ನನಗಾಗಿ ಒಂದಿಲ್ಲೊಂದು ಕಾಣಿಕೆ ತಪ್ಪದೆ ತರುತ್ತಿದ್ದರು. ಫ್ರಾಕ್ ಇಲ್ಲವೇ ದೊಡ್ಡ ದೊಡ್ಡ ಬೊಂಬೆ, ಕೆಲವೊಮ್ಮೆ ಆರ್ಮಿ, ನೇವಿ ಸ್ಟೋರ್‍ನಿಂದ ದೊಡ್ಡ ದೊಡ್ಡ ಪಟಾಕಿ – ಎರಡೂ ಬದಿಯಿಂದ ಸೆಳೆದಾಗ ಖಂಡಿತವಾದ ಶಿವಧನುಸ್ಸಿನಂತೆ ಗರ್ಜಿಸಿ ನಮ್ಮ ಎಳೆಯ ಹೃದಯಗಳನ್ನು ನಡುಗಿಸುತ್ತಿದ್ದ ಪಟಾಕಿ! ಕೆಲವೊಮ್ಮೆ ಉಂಗುರಗಳಾದರೆ ಮತ್ತೆ ಕೆಲವೊಮ್ಮೆ ಹೊಳೆವ ಪದಕಗಳೂ ನಮ್ಮ ಕೈಸೇರುತ್ತಿದ್ದುವು.

ಈದ್ ಹಬ್ಬದಲ್ಲಂತೂ ಹೇಳುವುದೇನಿದೆ? ಅವರು ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ಅವರಿಂದ ಬರುತ್ತಿದ್ದ ಹತ್ತು ರೂಪಾಯಿಗಳ ಮನಿ ಆರ್ಡರ್ ನನ್ನನ್ನು ಹೇಗಾದರೂ ತಲುಪಿಯೇ ಬಿಡುತ್ತಿತ್ತು. ಅಂದಿನ ದಿನಗಳಲ್ಲಿ ಅವರ ಪದವಿಯಂತೇ ಅವರ ವರ್ಚಸ್ಸು ಕೂಡಾ ಇತ್ತು. “ಶಾಹ್‍ಜಾದಾ ಸಾಹಬ್ ತಶ್‍ರೀಫ್ ಲಾ ರಹೇ ಹೇ” ಎಂಬ ಸೂಚನೆ ಸಿಗುತ್ತಲೇ ನಮ್ಮ ಮನೆಯಲ್ಲಿಡೀ ಅಲ್ಲೋಲ ಕಲ್ಲೋಲವಾಗುತ್ತಿತ್ತು. “ನೋಡು, ಚಾ ಕಳಿಸುವಾಗ ಪಧ್ಧತಿಯಂತೆ ಕಳಿಸು; ಹಾಮಿದ್ ಈಗಷ್ಟೇ ವಿಲಾಯತ್‍ನಿಂದ ಹಿಂದಿರುಗಿದ್ದಾನೆ. ಸಾಹಬ್ ಅವ್ನು!” ಎಂದು ಅಮ್ಮನಿಗೆ ತಂದೆಯವರು ಹೇಳುತ್ತಿದ್ದರು. ಹಾಮಿದ್‍ಭಾಯಿಯ ತಂದೆ ನೋಡುವಂತಿದ್ದರು. ಅದೇ ಹಾಮಿದ್ ತದ್ವಿರುಧ್ಧವಿದ್ದರು. ಕಪ್ಪು ಬಣ್ಣ, ಬಹಳ ಉದ್ದ ಮೂಗು, ತುಂಬಿಕೊಂಡ ಗಲ್ಲ, ಸದಾ ಅರ್ಧ ನಿಮೀಲಿತ ದೊಡ್ಡ ದೊಡ್ಡ ಕಣ್ಗಳು, ದಪ್ಪವಾಗಿ ಕೆಳಗೆ ಜಗ್ಗಿದ ತುಟಿಗಳು. ಗೇಣುದ್ದ ಶರೀರ ಬಹಳ ಸ್ಥೂಲವಿತ್ತು. ಕುಳಿತರೆ ಸೋಫಾ ಜಗ್ಗಿ ಹೋಗುತ್ತಿತ್ತು. ನಕ್ಕರೆ ಕೋರಾ ಬಟ್ಟೆಯ ಹಾಳೆ ಹರಿದಂತೆ ಅನಿಸುತ್ತಿತ್ತು. ಅವರ ಮಾರಿಸ್
ಮೈನರ್ ಸದಾ ಕನ್ನಡಿಯಂತೆ ಫಳ ಫಳ ಹೊಳೆಯುತ್ತಿತ್ತು. ಒಡೆಯನಂತೇ ಚಾಲಕನ ಸಮವಸ್ತ್ರವೂ ಠಾಕುಠೀಕಾಗಿರುತ್ತಿತ್ತು.

ಒಂದಿನ ಅದೇ ಕಾರಿನಲ್ಲಿ ನಮ್ಮನ್ನು ಕುಳ್ಳಿರಿಸಿಕೊಂಡು ವಿಲಾಸ್‍ಪುರ್ ತಹಸೀಲ್‍ಗೆ ತಿರುಗಾಡಿಸಲೆಂದು ಕರೆದೊಯ್ದರು. ಜೊತೆಯಲ್ಲಿ ಹಲವು ಅಂಕಣಗಳ ಟಿಫಿನ್ ಕ್ಯಾರಿಯರ್. ಕೊಕ್ಕರೆಗರಿಯಂತಹ ಶುಭ್ರ ನ್ಯಾಪ್ಕಿನ್. ಹೊಳೆವ ಕಟ್ಲರಿಯಲ್ಲಿ ಮುಖ ನೋಡಿಕೊಳ್ಳಬಹುದಿತ್ತು. ತಿನ್ನಲು ಕುಳಿತಾಗ ಫೋರ್ಕ್ ಹಿಡಿಯುವಲ್ಲಿ ತಪ್ಪಾಗದಂತೆ ನಾವು ಎಚ್ಚರ ವಹಿಸುತ್ತಿದ್ದೆವು. ಕಣ್ಣ ಕೊನೆಯಿಂದ ಹಾಮೀದ್‍ಭಾಯಿ ಫೋರ್ಕ್ ಉಪಯೋಗಿಸುವುದನ್ನು ಗಮನಿಸುತ್ತಾ ಅನುಕರಣೆ ಮಾಡುತ್ತಿದ್ದೆವು. ಕೊನೆಗೊಮ್ಮೆ ಇವೇ ಕಣ್ಗಳಿಂದ ಆ ಪ್ರಖರ ಸೂರ್ಯನ ಅವಸಾನವನ್ನೂ ಕಂಡೆವು. ಲಖನೌನ ಬರ್ಲಿಂಗ್‍ಟನ್ ಹೋಟೆಲ್‍ನ ಆ ಎರಡನೇ ನಂಬರ್ ಕೋಣೆಯಲ್ಲಿ ಬಂಧಿತರಂತಿದ್ದ ಆ ಶಾಹಜಹಾನ್‍ರನ್ನು ಕಂಡಾಗಲೆಲ್ಲ ನನ್ನ ಮನ ತಳಮಳಿಸುತ್ತಿತ್ತು. ಗೋಡೆಯಲ್ಲೆದ್ದ ಪ್ಲಾಸ್ಟರ್, ದೀಪವಲ್ಲರಿಯಿಂದ ಇಳಿಬಿದ್ದ ಜೇಡನ ಬಲೆಯ ಜಾಲರಿ, ಉಯ್ಯಾಲೆಯಂತಾದ ಮಂಚ, ಅದರ ಮೇಲೆ ಹೇಗೋ ಹರವಿಕೊಂಡಿದ್ದ ಎರಡೂವರೆಗಜದ ಹೊದಿಕೆ, ಹಾಗೂ ಕೋಣೆ ತುಂಬಿದ ಉಸಿರುಗಟ್ಟಿಸುವ ಅಶುಭ ಭಾವನೆ! ಒಮ್ಮೆ ಅಲ್ಲಿಗೆ ಹೋದಾಗ ಅವರ ಊಟ ಸಾಗಿತ್ತು. ಮಾಸಿದ ಪಿಂಗಾಣಿ ತಟ್ಟೆಯಲ್ಲಿ ಒಣಗಿದ ಚರ್ಮದಂತಹ ಚಪಾತಿ, ಪುಟ್ಟ ಗಿಂಡಿಗಳಲ್ಲಿ ಪಲ್ಯ, ಬೇಳೆ, ನೀರು ಬೇರಾದ ಬೇಳೆ ಸಾರು!
ಅವರ ಡೈರಿಯ ಆ ಭಾಗವನ್ನು ಕೆಲದಿನಗಳ ಮೊದಲಷ್ಟೇ ಓದಿದ್ದೆ:

“ಬೆಳ್ಳಿಯ ಕಾಲ್ಗಳ ಪಲ್ಲಂಗದಲ್ಲಿ ಸ್ವಯಂ ನವಾಬ್ ಸಾಹಿಬ್ ಕುಳಿತಿದ್ದರು. ಆಮಂತ್ರಿತನಾದ ಪ್ರತಿಯೋರ್ವ ಸದಸ್ಯನ ಸ್ಥಾನ ಪೂರ್ವ ನಿರ್ಧರಿತವಿರುತ್ತಿತ್ತು. ನನ್ನ ಮಾಮೂ ಜನರಲ್‍ನ ಸ್ಥಾನ ಸರ್ವ ಪ್ರಥಮವಿರುತ್ತಿತ್ತು. ಬೆಳ್ಳಿಯ ಗೋಲಾಕಾರದ ತಟ್ಟೆಗಳಲ್ಲಿ ಜೋಡಿಸಿಟ್ಟ ಭೋಜನ ಆಕರ್ಷಕವಾಗಿರುತ್ತಿತ್ತು. ಮೊದಲಲ್ಲಿ ಎರಡು ತರಹದ ಪಲ್ಯ, ಕರಿದ ಕಬಾಬ್, ಪುಲಾವ್, ಸಿಹಿ ಅನ್ನ ಮತ್ತು ಫಿರ್ನೀ. ನೀರಿನವರು ಸಾಲಾಗಿ ಕೆಂಪು ವಸ್ತ್ರದಿಂದ ಮುಚ್ಚಿದ ಬೆಳ್ಳಿಯ ಹೂಜಿಗಳನ್ನು ಹೊತ್ತು ನಿಂತಿರುತ್ತಿದ್ದರು. ನವಾಬ್ ಸಾಹಬ್ ನೀರು ಕೇಳಿದಂತೆಲ್ಲ ಪ್ರತಿಬಾರಿಯೂ ಮಂತ್ರಿಯವರು ಎದ್ದು ನಿಂತು ಹೊಸದೊಂದು ಹೂಜಿಯ ಮೊಹರು ಒಡೆಸುತ್ತಿದ್ದರು. ಪ್ರತಿಬಾರಿಯೂ ನೀರಿನ ಹೊಸಗುಟುಕು ನವಾಬ್ ಸಾಹಬ್‍ರ ತುಟಿ ಸೋಂಕಿದೊಡನೆ ಮುಖ್ಯಸ್ಥನ ಸ್ವರ ಮೊಳಗುತ್ತಿತ್ತು.

“ಬಿಸ್ಮಿಲ್ಲಾಹಿರ್ರಹಮಾನಿರ್ರಹೀಂ!”

ಇಂಥ ಶಾಹೀಭೋಜನಗಳ ನೆನಪನ್ನು ಸಹಜವಾಗಿ ಹಾಮಿದ್‍ಭಾಯಿ ಮರೆಯಲು ಶಕ್ಯರಾಗಿದ್ದರೇ? “ಉಣ್ಣುವೆಯೇನು?” ಕೇಳಿದ ಅವರು ನಿಟ್ಟುಸಿರೊಂದನ್ನು ಬಿಟ್ಟುನುಡಿದರು, “ಅಲ್ಲಾಹ್! ಕೃಪೆಯಿರಲಿ! ಯಾವ ಮುಖದಿಂದ ಈ ಒಣಹುಲ್ಲು ತಿನ್ನುವಂತೆ ಹೇಳಲಿ ಮಗೂ?” ಪ್ರತೀ ರವಿವಾರ ಅವರು ನನ್ನಲ್ಲಿಗೆ ಮಧ್ಯಾಹ್ನದೂಟಕ್ಕೆ ಬರುತ್ತಿದ್ದರು. ಪರ್ವತ ಪ್ರದೇಶದಲ್ಲಿದ್ದುದರಿಂದ ಅಲ್ಲಿನ ಭೋಜನ ಅವರಿಗೆ ಪ್ರಿಯವಾಗಿತ್ತು. ಬಿಸಿ ಭೋಜನ – ಬಿಸಿ ಪೂರಿ, ಹಳದಿ ಆಲೂಗಡ್ಡೆಯ ವ್ಯಂಜನ, ಹಳದಿ ರಾಯತ ಅವರಿಗೆ ಇಷ್ಟವಾಗುತ್ತಿತ್ತು. ಮೆಲ್ಲಮೆಲ್ಲನೆ ಶರೀರದ ಶಕ್ತಿ ಕುಂದುತ್ತಾ ಬಂದಿತು. ಹೃದಯ ಜೀರ್ಣವಾಗುತ್ತಾ ಬಂದಿತು. ಮೊಣಕಾಲ್ಗಳಲ್ಲಿ ನೀರು ತುಂಬುತ್ತಾ ಬಂದಿತು. ಮೊದಲೇನೋ ಬೀಳುತ್ತೇಳುತ್ತಾ ನನ್ನ ಮನೆಯ ಮೆಟ್ಟಲುಗಳನ್ನೇರುತ್ತಿದ್ದರು. ಮತ್ತೆ ರಿಕ್ಷಾದಿಂದ ಇಳಿಯುವುದೂ ದುರ್ಭರವಾಯ್ತು. ಅನೇಕ ಆಘಾತಗಳಿಂದ ಅವರು ಜರ್ಝರಿತರಾಗಿದ್ದರು. ಅಣ್ಣನ ಮಕ್ಕಳನ್ನು ನೈನಿತಾಲ್‍ನ ದುಬಾರಿ ಶಾಲೆಗಳಲ್ಲಿ ಓದಿಸಿದ್ದರು. ಅವರೆಲ್ಲ ಈಗ ರೆಕ್ಕೆ ಬಲಿತು ಪುರ್ರೆಂದು ಹಾರಿ ಹೋಗಿದ್ದರು. ದುರ್ಘಟನೆಯೊಂದರಲ್ಲಿ ತಂದೆ ತೀರಿಕೊಂಡಿದ್ದರು. ವರ್ಷಗಳಿಂದ ಉನ್ಮಾದಗೃಹದಲ್ಲಿ ಬಂಧಿಯಾಗಿದ್ದ ಚಿಕ್ಕ ತಮ್ಮನನ್ನೂ ಮೃತ್ಯು ಸೆಳೆದೊಯ್ದಿತು. ಇಷ್ಟು ವಿಶಾಲ ಪ್ರಪಂಚದಲ್ಲಿ ತಾನು ಇದ್ದಕ್ಕಿದ್ದಂತೆ ಏಕಾಂಗಿಯಾಗುಳಿದಂತೆ ಅವರಿಗನಿಸತೊಡಗಿತು.

ಎಲ್ಲರೂ ಅವರನ್ನು ಉಪಯೋಗಿಸಿಕೊಂಡಿದ್ದರು. ಕೆಲಸಕ್ಕಾಗುವಾಗ ಒಬ್ಬೊಬ್ಬರೇ ಮಾಯವಾದರು. ಮನವನ್ನು ಚುಚ್ಚಿದ ಈ ಮುಳ್ಳೇ ಅಂತಿಮ ದಿನಗಳಲ್ಲಿ ಅವರನ್ನು ಮನುಷ್ಯದ್ರೋಹಿಯಾಗುವಂತೆ ಮಾಡಿತು. ಕುಳಿತಿದ್ದಷ್ಟು ಹೊತ್ತೂ ಒಬ್ಬೊಬ್ಬರನ್ನೇ ಆರಿಸಿಕೊಂಡು ಬೈಗಳ ಮಳೆ ಸುರಿಸುತ್ತಿದ್ದರು. “ಅಲ್ತಾ ನಮ್ಮನ್ನು ಮದುವೆಯೂಟಕ್ಕೆ ಕರೆದೊಯ್ಯಲಿಲ್ಲ. ನಮ್ಮ ಪತ್ರಕ್ಕೆ ಉತ್ತರವನ್ನೂ ನೀಡಲಿಲ್ಲ. ಫಲಾಂ ಚಾಚಿ ಲಖನೌಗೆ ಬಂದೂ ನಮ್ಮನ್ನು ಸಿಗದೆ ಹೊರಟು ಹೋದಳು. ಅಣ್ಣನ ಮಗ ಬರೆಯುತ್ತಿದ್ದ, “ಚಚಾ ಜಾನ್, ನೀವು ನಮ್ಮೊಡನೆ ಬಂದಿರಿ; ಟಿಕೆಟ್ ಕಳಿಸ್ತೇನೆ. ಈ ನಾಡು ಸ್ವರ್ಗದಂತಿದೆ, ಬಂದು ನೋಡಿ – ಹೀಗೆ ಮೂರು ವರ್ಷವಾಯ್ತು. ಟಿಕೆಟ್ ಇನ್ನೂ ಬರುವುದರಲ್ಲೇ ಇದೆ. ಹೌದು, ಹೇಗೆ ಕಳಿಸಿಯಾನು? ಹೆಂಡತಿ ಫಿರಂಗಿಯವ್ಳು. ಇಂಥಾ ಇಪ್ಪತ್ತಿಪ್ಪತ್ತು ಟಿಕೆಟ್ ನಾವೀಗ್ಲೇ ಖರೀದಿಸಿ ಹರಿದು ಹಾಕಿಯೇವು.” ಹಗ್ಗ ಸುಟ್ಟರೂ ಗಂಟು ಮುರಿಯಲಿಲ್ಲ. ಯಾಕಲ್ಲ?

ಅವರ ಡೈರಿಯ ಪುಟಗಳನ್ನು ಪುನಃ ತೆರೆಯುತ್ತೇನೆ:
“1857ರ ದಂಗೆಯಲ್ಲಿ ಜಲಾಲುದ್ದೀನ್ ಖಾನ್ ಮತ್ತು ಸಾದುಲ್ಲಾ ಖಾನ್‍ರನ್ನು ಸ್ವತಂತ್ರರಾದ ಅಪರಾಧಕ್ಕಾಗಿ ಗೋಲಿಯಿಂದ ಹೊಡೆದುರುಳಿಸಲಾಯ್ತು. ಇದೇ ಸಾದುಲ್ಲಾ ಖಾನ್ ನನ್ನ ಅಜ್ಜನಾಗಿದ್ದರು. ಅಜ್ಜನಿಗೆ ಮರಣದಂಡನೆ ಆದ ಮೇಲೆ ಕುಂದಸಿಯಾ ಬೇಗಂ ನಮ್ಮನ್ನು ಕರಕೊಂಡು ರಾಮ್‍ಪುರಕ್ಕೆ ಬಂದರು. ರಾಮ್‍ಪುರ ಹವೇಲಿಯೇ ಅವರ ತವರಾಗಿತ್ತು. ಆದರೆ ಆಗ ಅಲ್ಲಿನ ಯೂಸುಫ್ ಖಾನ್‍ರಿಗೆ ಆಂಗ್ಲರಾಳ್ವಿಕೆಯ ಮೆಚ್ಚಿನ ಪದವಿಯೂ ಪ್ರಾಪ್ತವಾಗಿತ್ತು. ಬ್ರಿಟಿಶ್ ಸರಕಾರದ ಮಹಾಕೃಪೆಗೆ ಅವರು ಪಾತ್ರರಾಗಿದ್ದರು. ಹಾಗಿರುವಾಗ ನಮ್ಮಂತಹ ವಿದ್ರೋಹೀ ಪಠಾಣ ಪರಿವಾರಕ್ಕೆ ಆಶ್ರಯ ಕೊಡುವರೆಂತು? ಕುಂದಸಿಯಾ ಬೇಗಂ ಮಹಾ ನೀತಿಕುಶಲ ಮಹಿಳೆಯಾಗಿದ್ದಳು. ತವರಿನ ವಿಮುಖತೆಯನ್ನು ಅರ್ಥೈಸಿಕೊಂಡು ನಮ್ಮನ್ನು ಮುರಾದಾಬಾದಿಗೆ ಕರಕೊಂಡು ಬಂದು ಬಿಟ್ಟರು.’
ವಿದ್ರೋಹಿ ಸಾದುಲ್ಲಾ ಖಾನ್‍ನ ಅದೇ ರಕ್ತ ಹಾಮಿದ್ ಭಾಯಿಯ ನರಗಳಲ್ಲೂ ಹರಿಯುತ್ತಿತ್ತು. ಆಜನ್ಮ ಬ್ರಹ್ಮಚಾರಿಯಾಗಿರುವ ವ್ರತವನ್ನು ಅವರು ಕೈಗೊಂಡರೇಕೆಂದು ನಾನು ಅರಿತಿದ್ದೆ. ಅವರು ವಿವಾಹವಾಗಬಯಸಿದಾಕೆ, ಅವರೇ ಅನ್ನುವಂತೆ – ಅವರನ್ನು ಡಿಚ್ ಮಾಡಿ – ಹೊರಟು ಹೋಗಿದ್ದಳು. ಅವರನ್ನೇ ವಿವಾಹವಾಗುವ ಆಶ್ವಾಸನೆಯಿತ್ತು ಮತ್ತೆ ಒಮ್ಮಿಂದೊಮ್ಮೆಲೆ ಬೇರಾರದೋ ಬೇಗಂ ಆಗಿ ಪಾಕಿಸ್ತಾನಕ್ಕೆ ತೆರಳಿದ್ದಳು. ಹಾಮಿದ್ ಭಾಯಿಯ ಅಂತಿಮ ದಿನಗಳಲ್ಲಿ ಈ ವ್ಯರ್ಥ ಪ್ರೇಮದ ಸ್ಮತಿಯು ಉರುಳಿನಂತೆ ಪೀಡಿಸತೊಡಗಿತ್ತು. ಬಹಳ ವರ್ಷಗಳ ಬಳಿಕ ಒಂದಿನ ಯಾವುದೇ ಸೂಚನೆ ನೀಡದೆ ಆಕೆ ಅವರನ್ನು ಭೇಟಿಯಾಗಲೆಂದು ಬಂದಳು. ಆಕೆಯನ್ನು ಬೀಳ್ಕೊಟ್ಟು ಅವರು ನೇರವಾಗಿ ನನ್ನ ಬಳಿಗೆ ಬಂದಿದ್ದರು.

“ಮಗೂ, ಇವತ್ತು ಅವಳು ಬಂದಿದ್ದಳು.”
“ಯಾರು?” ನಾನು ಕೇಳಿದೆ. ಅವರ ಸುಕ್ಕಾದ ಗಲ್ಲಗಳು ಕ್ಷಣಮಾತ್ರ ರಂಗೇರಿದುವು.
“ಇನ್ಯಾರು?” ನಕ್ಕು ಅವರಂದರು:
“ಯೌವನ ಸಂದಿತು, ಆದರೂ,
ಪ್ರಣಯ ವೇದನೆಯ ಈ ಕುಟುಕು
ಎಲ್ಲಿ ಅನುಭವವಾಗುತ್ತಿತ್ತೋ
ಅಲ್ಲೇ ಅನುಭವವಾಗುತ್ತಿದೆ.
ಅವಳೇ – ಈಗ ತಿಳಿಯಿತೇ? ಪಾಕಿಸ್ತಾನದಿಂದ ಬಂದಿದ್ದಳು.”

ನನಗೆಂತು ತಿಳಿಯದಿದ್ದೀತು? “ನೀವು ತಡೆದು ನಿಲ್ಲಿಸಿಕೊಳ್ಳಲಿಲ್ಲವೇಕೆ, ಹಾಮಿದ್ ಭಾಯಿ? ಈಗ ಅವರ ಪತಿಯೂ ಇಲ್ಲವೆಂದು ಕೇಳಿದೆ?” “ಮಗೂ, ನಮ್ಮ ದನಿ ಗಡುಸಾಗಿದ್ದು, ಹೃದಯ ತುಡಿಯುತ್ತಿದ್ದಾಗಲೇ ನಾವು ಅವಳನ್ನು ತಡೆಯಲು ಶಕ್ತವಾಗಿರಲಿಲ್ಲ. ಮತ್ತಿನ್ನು ಈಗ ಹೇಗೆ ತಡೆವಂತಿದ್ದೆವು? ದನಿಯ ಗಡಸುತನವನ್ನಂತೂ ನೀನು ಕಾಣುತ್ತಿದ್ದೀಯೆ. ಈಗ ನಮ್ಮ ಸ್ವರವೇ ನಮಗೆ ಕೇಳಿಸುತ್ತಿಲ್ಲ. (ಇತ್ತೀಚೆಗೆ ಅವರಿಗೆ ಕಿವಿ ದೂರವಾಗಿತ್ತು.) ಹೃದಯದ ಬಡಿತವನ್ನು ನಾವು ಮನ್ಸೂರ್‍ನ ಕೈಗೆ ಒಪ್ಪಿಸಿ ಬಿಟ್ಟಿದ್ದೇವೆ. (ಲಖನೌನ ಪ್ರಖ್ಯಾತ ಹೃದಯತಜ್ಞ ಡಾ. ಮನ್ಸೂರ್ ಅವರ ಚಿಕಿತ್ಸೆ ನೋಡುತ್ತಿದ್ದು, ಊಟ ತಿಂಡಿಗಳ ಬಗ್ಗೆ ಕಠಿಣ ನಿರ್ಬಂಧ ಹೇರಿದ್ದರು.) ನಮಗೆ ಅಭಿರುಚಿ ಇದ್ದುದು ಈ ಮೂರರಲ್ಲೇ. ಒಳ್ಳೆಯ ಊಟ, ಒಳ್ಳೆಯ ಪಾನೀಯ ಮತ್ತು ಒಳ್ಳೆಯ ತೊಡುಗೆ.” ಅವರ ಈ ಮೂರೂ ಅಭಿರುಚಿಗಳಿಗೆ ನಾನು ಸಾಕ್ಷಿಯಾಗಿದ್ದೆ. ಕುಡಿಯುವುದನ್ನು ಬಹಳ ಹಿಂದೆಯೇ ಬಿಟ್ಟು ಬಿಟ್ಟಿದ್ದರು. ತಿನ್ನುವುದನ್ನು ಮನ್‍ಸೂರ್‍ಮಿಯಾ ಬಿಡಿಸಿದ್ದರು. ಮತ್ತು ತೊಡುಗೆಯನ್ನು ಕೈಯ ಕೊರತೆಯೇ ನಿಯಂತ್ರಿಸಿತ್ತು.

ಮದುಮಗನಂತೆ ಸಿಂಗಾರವಾಗಿ, ಸಿದ್ಧವಾಗಿ ಹೊರಡುತ್ತಿದ್ದ ಅದೇ ಹಾಮಿದ್ ಭಾಯಿ ಇವರೆಂದು ಯಾರು ತಾನೇ ಹೇಳಬಹುದಿತ್ತು? ಹೊರಹೋಗುವಾಗೆಲ್ಲ ಸರಕಾರೀ ನೌಕರನೊಬ್ಬ ಚರ್ಮದ ಚೀಲದಲ್ಲಿ ಬ್ರಶ್, ಪಾಲಿಶ್ ಸಮೇತ ಹಿಂದೆ ಹಿಂದೆ ಓಡಿಕೊಂಡು ಬರುತ್ತಿದ್ದ. ಹತ್ತು ಹೆಜ್ಜೆ ನಡೆವಷ್ಟರಲ್ಲಿ ಪುನಃ ಪಾದರಕ್ಷೆಯನ್ನು ಕನ್ನಡಿಯಂತೆ ಹೊಳಪಿಸಲಾಗುತ್ತಿತ್ತು. ಆಫ್ಟರ್‍ಶೇವ್ ಲೋಶನ್‍ನ ಪರಿಮಳ ಬಹಳ ದೂರದಿಂದಲೇ ಅವರ ಆಗಮನದ ಸೂಚನೆಯನ್ನು ನೀಡುತ್ತಿತ್ತು. ಮತ್ತು ಈಗ? ಹರಿದ ಕಾಲ್ಚೀಲ ಪುರಾತನತೆಯನ್ನು ಸಾರುವಂತೆ ಐದರಲ್ಲಿ ಮೂರು ಕಾಲ್ಬೆರಳುಗಳು ಹೊರಗಿಣುಕುತ್ತಿದ್ದುವು. ಹೊಸತನ್ನು ಹೆಣೆದುಕೊಟ್ಟರೆ ಅದನ್ನೆಲ್ಲೋ ಕಳೆದು ಬಂದರು. ಆ ವಿರಾಟ್ ಶರೀರವು ಐದೈದು ಸೇರಿನ ಹತ್ತಿ ಹಾಸಿಗೆ, ಗೋದಡಿ, ದಾರದುಂಡೆಗಳನ್ನು ಹೋಲ್ಡಾಲ್‍ನಲ್ಲಿ ತುಂಬಿದಂತೆ ರಿಕ್ಷಾದಲ್ಲಿ ತುರುಕಿದಂತಿರುತ್ತಿತ್ತು. ಚಿಂದಿಯಂತೆ ಕೊರಳಿಗೆ ಸುತ್ತಿದ ಮಫ್ಲರ್. ಅರ್ಧ ಮಲಗಿದ ಭಂಗಿಯಲ್ಲಿ ರಸ್ತೆಯಿಂದಲೇ ಕೂಗುತ್ತಿದ್ದರು, “ಏನು ಮಗೂ, ಮನೆಯಲ್ಲಿ ಇದ್ದೀಯಾ?”

ಈಗೊಂದು ವರ್ಷದಿಂದ ರಿಕ್ಷಾದಿಂದ ಇಳಿಯುವುದೂ ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಬಟ್ಟಲಲ್ಲಿ ಬಡಿಸಿ ಅಲ್ಲಿಗೇ ಒಯ್ಯುತ್ತಿದ್ದೆ, ನಾನು. ತುತ್ತು ಬಾಯಿಗೆತ್ತಿಕೊಳ್ಳುವ ಶಕ್ತಿಯೂ ಅವರಲ್ಲಿರಲಿಲ್ಲ. ನನ್ನ ಬಾಗಿಲಲ್ಲೇ ಇವರಿಗೇನಾದರೂ ಸಂಭವಿಸಿದರೆ ನಾನೇನು ಮಾಡಲೆಂಬ ಚಿಂತೆಯಿಂದ ನಾನು ಭೀತಳಾಗುತ್ತಿದ್ದೆ. ಅವರ ನೆನಪು ಶಕ್ತಿಯೂ ಗೋಜಲಾಗಿತ್ತು. ವರ್ಷಗಳ ಹಿಂದೆಯೇ ಇಲ್ಲವಾದವರನ್ನು
ನೆನಸಿಕೊಳ್ಳುತ್ತಿದ್ದರು. “ತ್ರಿಭೀ ಎಲ್ಲಿ? ಶುಕದೇವ್ ಎಲ್ಲಿ? ಹೋಗು, ಅವರನ್ನು ಕರೆ ತಾ. ನಾವು ಇಷ್ಟು ದೂರದಿಂದ ಬಂದಿದ್ದೇವೆ; ಅವರೋ ಅಲ್ಲಿ ಅಂತಃಪುರದಲ್ಲಿ ಪರದೆಯ ಮರೆಯಲ್ಲಿ ಹುದುಗಿದ್ದಾರೆ”. ಅವರು ಕರೆಯುತ್ತಿರುವ ನನ್ನ ದೊಡ್ಡಣ್ಣ ಮತ್ತು ನನ್ನವರು ಎಂದೋ ಹೋಗಿಯಾಗಿದೆ ಎಂದು ನಾನಂದರೆ, “ಎಲ್ಲಿಗೆ ಹೋಗಿದ್ದಾರೆ? ನೀನು ಹೋಗಿ ಅವರನ್ನು ಕರೆಯುವುದಿಲ್ಲವೇಕೆ?”ಎನ್ನುತ್ತಿದ್ದರು.

“ನಾನು ಹೋಗುವಂತಿದ್ದರೆ …!”
“ನಾನು ಆಜ್ಞೆ ಮಾಡುತ್ತಿದ್ದೇನೆ.” ಪಠಾಣೀ ರಕ್ತ ಅವರ ನರಗಳಲ್ಲಿ ಪುನಃ ನುಗ್ಗಲಾರಂಭಿಸುತ್ತಿತ್ತು.
“ಅಲ್ಲಿ ಯಾರ ಆಜ್ಞೆಯೂ ನಡೆಯುವುದಿಲ್ಲ, ಹಾಮಿದ್ ಭಾಯಿ! ಆಂಗ್ಲ ಸಾರ್ವಭೌಮತ್ವದ ನಿಷ್ಠಾವಂತ ಪುತ್ರನದೂ ನಡೆವಂತಿಲ್ಲ.”
ನನಗೆ ನಗು ಬಂತು. ಅವರು ಸಿಟ್ಟಾದರು.
“ನಗುತ್ತೀಯಾ? ಹಲ್ಲು ಮುರಿಯುತ್ತೇನೆ ನೋಡು! ಹೋಗು, ಅವರನ್ನು ಕರೆ ತಾ”, ಅವರು ಗರ್ಜಿಸುತ್ತಿದ್ದರು. ಹಾಗೂ ಅಕ್ಕಪಕ್ಕದ ಕಿಟಿಕಿಗಳಿಂದ ಕುತೂಹಲದ ಕಣ್ಗಳು ಇತ್ತ ಇಣುಕುತ್ತಿದ್ದುವು. ಮತ್ತೆ ಅವರ ಬೈಗುಳ ಪ್ರಾರಂಭವಾಗುತ್ತಿತ್ತು. ಭೂಮಿ ಒಡೆದು ನನ್ನನ್ನು ನುಂಗಬಾರದೇ ಎಂದು ನನಗನಿಸುತ್ತಿತ್ತು. ಈ ವಯಸ್ಸಿನಲ್ಲಿ ಹೀಗೆ ರಸ್ತೆ ಮಧ್ಯದಲ್ಲಿ ವಿವಶಳಾಗಿ ನಿಂತು ದುರ್ವಾಸನಂತಹ ಹಾಮಿದ್ ಭಾಯಿಯ ಬೈಗುಳಗಳನ್ನು ಸಹಿಸುತ್ತಿದ್ದೇನೆ! ನನ್ನ ಪಾಲಿಗೇನೋ ಅವರ ಈ ಬೈಗುಳು ಆ ಪರಮ ಫಕೀರನ ಬೈಗುಳಗಳಂತೆ ಆಶೀರ್ವಚನ ಸ್ವರೂಪವಾಗಿ ಅದೃಷ್ಟವನ್ನೇ ತಂದರೂ, ಜನರಿಗೇನು ಗೊತ್ತು? ಕೆಲವೊಮ್ಮೆ ರಿಕ್ಷಾವಾಲನೂ ದುಃಖಿತನಾಗಿ ನುಡಿಯುತ್ತಿದ್ದ, “ಏನು ಹೇಳುವುದು, ಬಹೂಜೀ? ಸಾಹಬ್‍ಜಾದಾ ಸಿಟ್ಟಿನಿಂದ ಹುಚ್ಚಾಗಿದ್ದಾರೆ. ಈಗಿನ್ನು ಅಲ್ಲಾಮಿಯಾ ಇವರನ್ನು ಕರೆಸಿಕೊಂಡರೆ ಸಾಕು!”

ಬಹಳ ಹಿಂದಿನಿಂದಲೂ ಅವರ ರಿಕ್ಷಾವಾಲಾನಾಗಿದ್ದ ಆತ, ಅವರೇ ಅನ್ನುವಂತೆ ಅವರ ಫ್ರೆಂಡ್, ಫಿಲಾಸಫರ್, ಗೈಡ್ ಆಗಿದ್ದ.
“ನನಗಂತೂ ತುಂಬ ಒಳ್ಳೆಯದು ಮಾಡಿದ್ದಾರೆ, ಇಪ್ಪತ್ತೈದು ಬಾರಿ ಪಾಕೀಜಾ ಚಿತ್ರ ತೋರಿಸಿದ್ದಾರೆ, ಬಹೂ, ತಮ್ಮೊಡನೇ ಕುಳ್ಳಿರಿಸಿಕೊಂಡು. ಲಖನೌನ ಒಂದು ಚಿತ್ರವೇ ಇವರೊಡನೆ ಮುಗಿದಂತೆ!”
ಒಂದೊಮ್ಮೆ ದಿನದ ಮೂರೂ ಪ್ರದರ್ಶನಗಳನ್ನು ಅವರು ನೋಡುವುದಿತ್ತು. ಚಿತ್ರದ ಮೋಹ ತೊರೆದೊಡನೆ ತಿರುಗಾಡುವ ಫಕೀರರಾದರು. ಇದೇ ರಿಕ್ಷಾದಲ್ಲಿ ಕುಳಿತು ಲಖನೌನ ಗಲ್ಲಿ ಗಲ್ಲಿಗಳನ್ನೂ ತಿರುಗುತ್ತಿದ್ದರು. ಮಹಾನಗರ್, ನಿಶಾನ್‍ಗಂಜ್, ನಖಾಸ್, ಅಮೀನಾಬಾದ್ – ಹೀಗೆಲ್ಲ ನಗರದ ಮೂಲೆ ಮೂಲೆಯಲ್ಲೂ ಅವರ ಪರಿಚಿತರಿದ್ದರು. ಕೊನೆಗೊಮ್ಮೆ ಅಲ್ಲಿಂದಲೂ ದೂರಾದರು. ಒಮ್ಮೆ
ನನ್ನಲ್ಲಿಗೆ ಬಂದಾಗ ನಾನು ಪೂಜೆಯಲ್ಲಿದ್ದೆ. ಹೊರಬರಲು ತಡವಾಯ್ತು. ಸಿಟ್ಟಾಗುವರೆಂಬ ಭಯ ಕಾಡಿತ್ತು. ಆದರೆ ಅಂದೇನೋ ಬೆಂಕಿಯ ಹೊಳೆ ಹಿಮದ ಮಾಲೆಯಾದಂತಿತ್ತು. ಇಳಿದು ಹೋದ ಅವರ ಮುಖ, ಕಣ್ಣೀರು ತುಂಬಿದ ಆ ಕಣ್ಗಳನ್ನು ಕಂಡು ಅಪರಾಧೀ ಭಾವದಿಂದ ನನ್ನ ಬಗ್ಗೆ ನನಗೇ ಜಿಗುಪ್ಸೆ ಅನಿಸಿತು. ಒಂದು ದಿನ ಪೂಜೆಯನ್ನು ಸಂಕ್ಷಿಪ್ತಗೊಳಿಸಿದ್ದರೇನಾಗುತ್ತಿತ್ತು? ಒಂದೊಮ್ಮೆ ಅವರ ಹಾರ್ನ್‍ನ ಶಬ್ದ ಕೇಳಿದರೆ ಸಾಕು, ಓಡುತ್ತಾ ಮೆಟ್ಟಲಿಳಿದು ಅವರನ್ನು ಆತುಕೊಂಡು, “ಏನು ತಂದಿದ್ದೀರಿ, ಹಾಮಿದ್ ಭಾಯಿ? ನನಗೋಸ್ಕರ ಏನು ತಂದಿದ್ದೀರಿ?” ಎಂದು ಕೇಳುತ್ತಿದ್ದ ನಾನೇ ಇಂದು ಆ ಹಿರಿಯರನ್ನು ಇಷ್ಟು ಹೊತ್ತು ರಸ್ತೆಯಲ್ಲಿ ನಿಲ್ಲಿಸಿದೆನೇ! “ಕ್ಷಮಿಸಿ, ಹಾಮಿದ್ ಭಾಯಿ, ಪೂಜೆ ಮಾಡುತ್ತಿದ್ದೆ”, ಅಂದೆ. ಅವರು ಏನೂ ನುಡಿಯಲಿಲ್ಲ.

ನಾನು ಬಳಿ ಹೋದೊಡನೆ ನನ್ನ ಕೈ ಹಿಡಿದರು. ಅದುವರೆಗೆ ಗಂಟಲಲ್ಲಿ ತಡೆದಿದ್ದ ದುಃಖಭರವು ಕಣ್ಗಳಲ್ಲಿ ಇಳಿದು ಬಂತು. ಹೀಗೆ ಮಕ್ಕಳಂತೆ ಅವರು ಅಳುವುದನ್ನು ನಾನೆಂದೂ ನೋಡಿರಲಿಲ್ಲ. ಏನೋ ಆಳವಾದ ಪೆಟ್ಟು ತಿಂದಂತೆ ಭಾಸವಾಗುತ್ತಿತ್ತು.
“ಕ್ಷೇಮವಿಲ್ಲವೇ, ಹಾಮಿದ್ ಭಾಯಿ? ಏನಾಯಿತು?” ನಾನು ಕೇಳಿದೆ.
“ಏನು ಹೇಳಲಿ, ಮಗೂ? ಒಂದು ನಿನ್ನ ಮನೆ, ಇನ್ನೊಂದು ಚಾಚೀ ಮನೆ – ಎರಡೇ ಉಳಿದಿತ್ತು, ನಮ್ಮ ಪಾಲಿಗೆ. ಇಂದು ಅಲ್ಲಿಂದಲೂ ದುರ್ದಾನ ಸಿಕ್ಕಿತು. ಹಾಮಿದ್, ಇನ್ನು ಇಂತಹ ಸ್ಥಿತಿಯಲ್ಲಿ ಇಲ್ಲಿಗೆ ಬರಬೇಡ’, ಅಂತ ಅಂದುಬಿಟ್ಟರು, ಚಾಚಿ!”
ಅವರಿಗೆ ಪ್ರಿಯಳಾಗಿದ್ದ ಚಿಕ್ಕಪ್ಪನ ಮಗಳೊಬ್ಬಳು ಕೆಲದಿನಗಳ ಹಿಂದೆಯೇ ಪತ್ರ ಬರೆದಿದ್ದಳು, “ನೀನಿನ್ನು ಅಲೀಗಡ್‍ಗೆ ಬರಬೇಡ, ಹಾಮಿದ್. ರೈಲಿನಲ್ಲೇ ಏನಾದರೂ ಸಂಭವಿಸಿದರೆ! ಒಂದುವೇಳೆ ಬಂದರೂ ನಾನೀಗ ನಿನ್ನನ್ನು ನೋಡಿ ಕೊಳ್ಳಲಾರೆ. ನಿನಗೆ ಗೊತ್ತು, ನನ್ನ ರೋಗಿಗಳಿಂದಾಗಿ ನನಗೆ ಬಿಡುವೇ ಸಿಗುವುದಿಲ್ಲ. ಇನ್ನೊಬ್ಬ ರೋಗಿಯನ್ನು ನೋಡಿಕೊಳ್ಳುವುದು ಅಸಾಧ್ಯ!”
“ನೋಡು, ನನ್ನ ತಂಗಿಗೂ ನಾನು ಇನ್ನೊಬ್ಬ ರೋಗಿಯಾದೆನಷ್ಟೇ!” ಆಹತನಾಗಿದ್ದರೂ ಅವರು ತಮ್ಮ ವಿನೋದಪ್ರಿಯತೆಯನ್ನು ಬಿಡಲಿಲ್ಲ.
ಹಸಿಮಣ್ಣ ಗೋಡೆಯಿದು ಬಿದ್ದುದೇ ತಡ,
ನನ್ನಂಗಳದಿ ಜನರು ಕಾಲ್ದಾರಿ ಎಬ್ಬಿಸಿದರು!

ಪಾಕಿಸ್ತಾನದ ವಿದೇಶ ಸಚಿವ ಸಾಹಬ್‍ಜಾದ್ ಯಾಕೂಬ್‍ಖಾನ್ ಅವರ ಚಿಕ್ಕಪ್ಪನ ಮಗನಾಗಿದ್ದರು. ಒಂದಿನ ನಾನೆಂದೆ, “ಎಷ್ಟೊಂದು ನಿಮ್ಮಂತೆಯೇ ಇದ್ದಾರವರು! ನಿನ್ನೆ ಟೆಲಿವಿಶನ್‍ನಲ್ಲಿ ನೋಡಿದೆ.”
“ರೂಪದಲ್ಲಷ್ಟೇ ಹೋಲಿಕೆಯಿದೆ, ಮಗೂ; ಅದೃಷ್ಟದಲ್ಲಲ್ಲ.!”

ನಾನು ಲಖನೌನಿಂದ ದೂರ ಹೊರಟಾಗಲೆಲ್ಲ ಅವರು ಖಿನ್ನರಾಗುತ್ತಿದ್ದರು. “ನೀನು ಹೊರಟರೆ ನಮಗೆ ತುಂಬ ಏಕಾಕಿಯಾದಂತೆ ಅನಿಸುತ್ತದೆ. ನಮಗೇನಾದರೂ ಆದರೆ ನಮ್ಮನ್ನು ಕಬರಸ್ಥಾನಕ್ಕೆ ತಲುಪಿಸುವವರು ಯಾರು?”
ನಾನು ನಕ್ಕು ಅವರನ್ನು ಛೇಡಿಸಿದ್ದೆ. ಹಾಮಿದ್ ಭಾಯಿ, ನಾನು ನಿಮ್ಮನ್ನು ಚಿತೆವರೆಗೆ ಮಾತ್ರ ತಲುಪಿಸ ಬಲ್ಲೆ. ನಾನು ಹಿಂದೂ, ನೀವು ಮುಸಲ್ಮಾನರೆಂದು ನೀವು ಮರೆಯುತ್ತೀರಿ!”
ಅವರು ಲಾಹೌಲ್ ಉಚ್ಚರಿಸಿ ನನ್ನನ್ನು ಗದರಿದ್ದರು, “ಮತ್ತೆ ಅದೇ ಅಶಿಷ್ಟ ಮಾತು! ನೀನು ಹಿಂದೂ ಅಲ್ಲ, ನಾನು ಮುಸಲ್ಮಾನನಲ್ಲ; ಮಂದಿರ ನಿನ್ನದಲ್ಲ, ಮಸ್‍ಜಿದ್ ನನ್ನದಲ್ಲ. ಇಷ್ಟೇ ನೆನಪಿಟ್ಟುಕೋ ಮಗೂ, ನೀನು ನಮ್ಮ ತಂಗಿ; ನಾನು ನಿನ್ನಣ್ಣ. ನಮ್ಮ ನಡುವೆ ಇರುವುದು ಇದೇ ಒಂದು ಸಂಬಂಧ; ಎಂದಿಗೂ ಇರುವಂತಹುದು.”

ಆ ಸಂಬಂಧವನ್ನು ಅವರು ಸಾಯುವ ಘಳಿಗೆಯ ವರೆಗೂ ಪಾಲಿಸಿದರು. ನನ್ನ ಹೆಣ್ಮಕ್ಕಳೆಲ್ಲರ ಮದುವೆಗೂ ಬಂದಿದ್ದರು. ನನ್ನ ಅಳಿಯಂದಿರೆಲ್ಲರೂ ಅವರ ಚರಣಸ್ಪರ್ಶ ಮಾಡಿ ನಮಸ್ಕರಿಸಿದರು. ನನ್ನ ಮಗನಿಗಂತೂ ಸ್ವಂತ ಮಾವನಂತಿದ್ದರು, ಅವರು. ಸೊಸೆಯಂತೂ ಸರಿ, ಸೊಸೆಯ ತಾಯಿಯೂ ಅವರಿಗಾಗಿ ಕುರಿ ಉಣ್ಣೆಯ ಬೆಲೆಬಾಳುವ ಸ್ವೆಟರ್ ಕಳಿಸಿದಾಗ ನಿಷ್ಕಪಟ ಅಶ್ರುಜಲದಿಂದ ಅವರ ಕಣ್ಗಳು ಹೊಳೆದಿದ್ದುವು. ಇದೇ ಮಾರ್ಚ್‍ನಲ್ಲಿ ಅವರು ನನ್ನನ್ನು ಕಾಣಲೆಂದು ಬಂದಾಗ, ಎರಡೂ ಪಾದಗಳು ಬಾತಿದ್ದುದನ್ನು ಕಂಡೆ. ಅಸಂಬಧ್ಧ ಮಾತುಗಳ ನಡುವೆ ಅತೀತದ ನೆನಪುಗಳು ಚಾಟಿಯೇಟಿನ ಬಿಸಿ ತಾಕಿದಂತೆ ಅವರನ್ನು ಸಚೇತನರಾಗಿಸುತ್ತಿತ್ತು. “ಮಗೂ. ಇದು ನಮ್ಮ ಕೊನೆಯ ಭೇಟಿ; ಇನ್ನೆಂದೂ ನಾವು ನಿನ್ನನ್ನು ಕಾಣೆವು.”

ಬಳಿಕ ನನ್ನ ಕೈಯನ್ನು ತಮ್ಮ ಬಾತುಹೋದ ಬೆರಳುಗಳಿಂದ ಹಿಡಿದು ಹಣೆಗೊತ್ತಿಕೊಂಡರು. ಶಬ್ದಗಳು ನನ್ನ ಗಂಟಲಲ್ಲಿ ಹೂತು ಹೋಗಿದ್ದುವು. ಆದರೂ ಸಾವರಿಸಿಕೊಂಡು ನುಡಿದೆ, “ಏನು ಮಾತೂಂತ ಆಡ್ತಾ ಇದ್ದೀರಿ, ನೀವು? ನೋಡುತ್ತಿರಿ, ಈದಿ ತೆಗೆದುಕೊಳ್ಳಲು ಸರಿಯಾದ ಸಮಯದಲ್ಲಿ ಬಂದು ಮುಟ್ಟುವೆ.” ಆದರೆ ನಾನೆಲ್ಲಿ ಬರಲು ಶಕ್ಯಳಾಗಿದ್ದೆ? ಒಮ್ಮೆ ಅವರಂದಿದ್ದರು, “ಮರಣಕ್ಕೆ ಎಂದೂ ಹೆದರಬೇಡ. ನಮ್ಮನ್ನು ನೋಡು, ಎಂದಿನಿಂದಲೂ ಎರಡು ಕಾಲು ಗೋರಿಯಲ್ಲಿ ಇಳಿ ಬಿಟ್ಟು ಕುಳಿತಿದ್ದೇವೆ. ಅಲ್ಲಾಮಿಯಾ ಕರೆದಾಕ್ಷಣ ಗೋರಿಗಿಳಿಯುತ್ತೇವೆ. ನೆನಪಿಡು; ಹೇಡಿಗಳನ್ನು ಮಾತ್ರ ಸಾವು ಪೀಡಿಸಿ ಕೊಲ್ಲುತ್ತದೆ. ಇಲಿ ತನಗೆ ಹೆದರುತ್ತದೆಂದೇ ಬೆಕ್ಕು ಅದನ್ನು ಆಡಿಸಿ ಆಡಿಸಿ ಕೊಲ್ಲುತ್ತದೆ. ಸಾವಿಗೆ ಹೆದರದವರನ್ನು ಸಾವು ಭುಜದ ಮೇಲೆ ಹೊತ್ತು ಕೊಂಡೊಯ್ಯುತ್ತದೆ.”

ನಿಜ! ಸಾವು ಅವರನ್ನು ಹೆಗಲ ಮೇಲೆ ಹೊತ್ತೇ ಒಯ್ದಿತು. ಲಖನೌನ ಯಾವ ಗಲ್ಲಿಯ ಎರಡು ಗಜ ಭೂಮಿಯಲ್ಲಿ ಆ ನನ್ನಣ್ಣ ಚಿರನಿದ್ರೆಯಲ್ಲಿ ಒರಗಿದ್ದಾರೋ ಏನೋ! ಎಂದಾದರೊಂದು ದಿನ ಆ ಸ್ಥಳವನ್ನು ಹುಡುಕಿಯೇ ತೀರುತ್ತೇನೆ. ಆ ದೇವದೂತನ ಸಮಾಧಿಯಿಂದ ಸದಾ ಇದೇ ಮಾತು ಧ್ವನಿಸುತ್ತದೆಂದೂ ಬಲ್ಲೆ: “ನೀನು ಹಿಂದೂ ಅಲ್ಲ, ನಾನು ಮುಸಲ್ಮಾನನಲ್ಲ. ಮಂದಿರ ನಿನ್ನದಲ್ಲ, ಮಸ್‍ಜಿದ್ ನನ್ನದಲ್ಲ. ಇಷ್ಟು ನೆನಪಿಟ್ಟುಕೋ ಮಗೂ: ನೀನು ನಮ್ಮ ತಂಗಿ, ನಾವು ನಿನ್ನಣ್ಣ. ಇದೊಂದೇ ಸಂಬಂಧ ನಮ್ಮದು; ಮತ್ತು ಎಂದೆಂದಿಗೂ ಇರುವುದು.”

‍ಲೇಖಕರು nalike

May 29, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. hanumakshi gogi

    ಹೃದಯಸ್ಫರ್ಶಿ ಕಥೆ. ಸದ್ಯದ ಕೋಮುವಾದಿತ್ವಕ್ಕೆ ಸಮರ್ಥ ಉತ್ತರ

    ಪ್ರತಿಕ್ರಿಯೆ
  2. T S SHRAVANA KUMARI

    ತುಂಬಾ ಚೆಪ್ನಾಗಿದೆ
    ಹೃದಯ ತುಂಬಿ ಬಂತು.

    ಪ್ರತಿಕ್ರಿಯೆ
  3. na. damodara shetty

    ಇಲ್ಲಿರುವ ಅಣ್ಣ ತಂಗಿಯರ ಸಂಬಂಧ ಅನ್ಯಾದೃಶ.ಸಾವಿನ ಪರಿಕಲ್ಪನೆ ಕೂಡ. ಸುಲಲಿತ ಅನುವಾದ!

    ಪ್ರತಿಕ್ರಿಯೆ
  4. Purushothama Bilimale

    ಕನ್ನಡದ ಕತೆಗಳಿಗಿಂತ ಎಷ್ಟೊಂದು ಭಿನ್ನ! ಅನುವಾದವೂ ಸೊಗಸಾಗಿದೆ. ಆರ್ದ್ರಗೊಳಿಸಿತು

    ಪ್ರತಿಕ್ರಿಯೆ
    • Shyamala Madhav

      ಥ್ಯಾಂಕ್ಯೂ ಸರ್. ಸಂಸ್ಕೃತಿ ಸಂಪನ್ನವದು, ಅಲ್ಲೇ?

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: