ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ಬಿಸಿಲಾದರೊ ಗೋಗರೆದಿತ್ತೇನೊ…

ಅಶೋಕ ಹೊಸಮನಿ

ಈ ಕಡು ಬಿಸಿಲ ಕಣ್ಣಾದರೊ ಬುದ್ಧನಾಗಬೇಕಿತ್ತು
ಕಾಲ್ಕೀಳುವ ಹೊತ್ತಿಗಾದರೊ ಹಾಜರಿರಬೇಕಿತ್ತು

ಈ ಹಿಡಿ ಮಾಂಸ ಮಜ್ಜೆಯಾದರೊ ಹೂವಾಗಬೇಕಿತ್ತು
ಹಣ್ಣೊಂದಾದರೊ ತಾಯಿಯಾಗಬೇಕಿತ್ತು

ಈ ಜಗವಾದರೊ ಹುಟ್ಟಬಾರದಿತ್ತು
ಮನುಷ್ಯನಾದರೊ ಬೇಡವಾಗಿತ್ತು

ಈ ನೇತಾಡೊ ದನಿಯಾದರೊ ಕವಿತೆಯಾಗಬೇಕಿತ್ತು
ಕಂಪನದ ಪರ್ವತವಾದರೊ ರೂಢಿಯೊಳಿರಬೇಕಿತ್ತು

ಈ ಕಣ್ಣೀರಲಿ ನೆಂದ ಬಟ್ಟೆಗಾದರೊ ರೂಪವಿರಬೇಕಿತ್ತು
ಲೋಕಕ್ಕಾದರೊ ತಥಾಗತನಂಥ ಕೀಲಿಕೈ ಬೇಕಿತ್ತು

ಈ ತನುವನ್ನಾದರೊ ಚಾಚುತ್ತಲೇ ಬೆಂಕಿಗೀಡಾಗಬೇಕಿತ್ತು
ಕಡು ಕೋಟೆಯಾದರೊ ಅಟ್ಟಹಾಸಗೈಯಬೇಕಿತ್ತು

ಈ ವಜ್ಜೆಕಲ್ಲಲ್ಲಾದರೊ ಕಾರುಣ್ಯವಿರಬೇಕಿತ್ತು
ಮುರಿದಿಹ ಬೆರಳಾದರೊ ದೂಡಬೇಕಿತ್ತು

ಈ ಕಾಲಾಳುಗಳೊ ಹಕ್ಕಿಗಳಾಗಬೇಕಿತ್ತು
ತುಂಡರಿಸಿಹ ಮರಗಳಿಗಾದರೊ ಜೀವವಿರಬೇಕಿತ್ತು

ಈ ಬಿಸಿಲ ಬುದ್ಧನಾದರೊ ಧಾವಿಸಬೇಕಿತ್ತು
ಚಿಟಿಕೆ ಅಸ್ಥಿಯನ್ನಾದರೊ ಚುಂಬಿಸಬೇಕಿತ್ತು
ಹೃದಯಕ್ಕಾದರೊ ಮದ್ದು ಅರಿಯಬೇಕಿತ್ತು

ಈ ಗೂಢ ಕಟ್ಟುಗಳನ್ನಾದರೊ ತೆರೆಯಲು
ಉರಿ ಬಿಸಿಲ ಬೆರಳುಗಳಾದರೊ ಬೇಕಿತ್ತು

ಈ ಕಡು ಗಾಳಿಯಾದರೊ ಕಾಮನಬಿಲ್ಲಂತಾಗಬೇಕಿತ್ತು
ಹೆಜ್ಜೆಗಳಲ್ಲಾದರೊ ಚಿಟ್ಟೆಗಳ ಕಲರವವಿರಬೇಕಿತ್ತು

ಈ ಬಿಸಿಲಾದರೊ ಗೋಗರೆದಿತ್ತೇನೊ
ಜಮ್ಮನ್ನಲಿಲ್ಲವೇನೊ
ಕಡು ಬುದ್ಧನಾದರೊ

‍ಲೇಖಕರು Admin

24 May, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading