ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈಗೀಗ ಕವಿತೆಗಳೇ ಹುಟ್ಟುತ್ತಿಲ್ಲ!

ಜಿತೇಂದ್ರ ಬೇದೂರು.


ಮನದ ಗರ್ಭದೊಳಗೆ,

ಭಾವ ಬೀಜ ಮೊಳೆತು,

ಪದದ ಭ್ರೂಣ ಬಲಿಯುವ

ಮೊದಲೇ ಗರ್ಭಪಾತ..

‘ಬಂಜೆ’ ಮನಕೆ ಒಂದೂ ಉಳಿಯಲಿಲ್ಲ,

ಈಗೀಗ ಕವಿತೆಗಳೇ ಹುಟ್ಟುತ್ತಿಲ್ಲ.

ಅಲ್ಲೇ ಮೂಲೆಯಲೆಲ್ಲೋ,

ಕೊಳಲಿನ ನಾದ,ಆಗೊಮ್ಮೆ ಈಗೊಮ್ಮೆ.

ಗೆಜ್ಜೆಯೂ ಅಲ್ಲೇ ಇದೆ

ಏನೋ ತಡೆ, ಹೆಜ್ಜೆ ಹಾಕಲು ಒಮ್ಮೆ

ನಾದ ಹೊಮ್ಮುತ್ತಿಲ್ಲ,

ಮೌನವಾಗಿದೆ ವೀಣೆ

ಬೆರಳುಗಳು ಬಂಧಿ,

ಯಾವುದೋ ಬಂಧನದೊಳಗೆ

ಮನದ ಪರದೆಯ ಮೇಲೆ

ಚಿತ್ತಾರವಿಲ್ಲ.

ಬಣ್ಣ ಮಾಸಿದ ನೂರಾರು ರೇಖೆಗಳು,

ಅವು ಅರ್ಥವಾಗುವುದಲ್ಲ

ಈಗಿಲ್ಲ,ಮೊದಲಿದ್ದ ಕಲ್ಪನಾವಿಲಾಸ,

ಒಣಗಿತೇಕೋ ಈಗೆಲ್ಲ ಭಾವರಸ?

ಈಗಿಲ್ಲ, ಭಾವನೆಗಳ ವಿದ್ಯುದಾಲಿಂಗನ,

ಪದದೊಡನೆ ಪದಗಳ ಆ ಸಮ್ಮಿಲನ

ಮೊದಲೆಲ್ಲ  ಗಾಳಿಯೂ

ಪದಗಳ ಹೊತ್ತು ಬರುತ್ತಿತ್ತು,

ಸಮಯದ ಅರಿವಿಲ್ಲದೆ ಸಾಲಾಗುತ್ತಿತ್ತು.

ಎಲ್ಲೋ  ಜಾರಿದೆ  ಆ ಸಮಯ,

ಮತ್ತೆ ಸಿಕ್ಕುತ್ತಿಲ್ಲ.

ಈಗೀಗ ಕವಿತೆಗಳೇ ಹುಟ್ಟುತ್ತಿಲ್ಲ

ಹಿತ್ತಲ ಮರ

ಹಿತ್ತಲ ಮರಕೀಗ ಇಳಿ ವಯಸು,

ಹಿಂದೊಂದು ಕಾಲದಲಿ,ಮರವೂ ನಳನಳಿಸುತಿತ್ತು,

ದಣಿವ ಮರೆಸಿತ್ತು ಹಸಿರು,ಹಣ್ಣು ಹಸಿವ ನೀಗಿಸಿತ್ತು

ಗೂಡು ಕಟ್ಟಿದ್ದವು ಹಲವು ಹಕ್ಕಿಗಳು,

ಎಲೆಮರೆಯ ಗೂಡಲ್ಲಿ ಹಲವು ಮೊಟ್ಟೆಗಳು,

ಕೊರಳೆತ್ತಿ ನೋಡುವ ಪುಟ್ಟ ಹಕ್ಕಿಮರಿಗೆ,

ತಾನೇ ತೊಟ್ಟಿಲಾಗಿ ತೂಗುತಿತ್ತು

ಬದಲಾಗಿದೆ ಈಗ,ಹಸಿರಿಲ್ಲ,ಕಂದು,

ಸವೆದು ಹೋಗಿದೆ ಚೆಲುವು ಕಾಲಚಕ್ರಕೆ ಸಿಲುಕಿ,

ಹಾರಿಹೋಗಿವೆ ದೂರ,ಎಲ್ಲಾ ಹಕ್ಕಿಗಳ ಹಿಂಡು,

ಬೋಳು ರೆಂಬೆಗೆ ನೆನಪುಗಳ ನೇತುಹಾಕಿ

ಬಂದು ಕೂರುತ್ತವೆ ಬೋಳು ರೆಂಬೆಯ ಮೇಲೆ,

ಆಗೊಮ್ಮೆ,ಈಗೊಮ್ಮೆ,ರೆಕ್ಕೆ ಸೋತಾಗ,

ಹಕ್ಕಿಮರಿಗಳಿಗಂತೂ,ಮರದ ನೆನಪಿಲ್ಲ ಬಿಡಿ,

ಅಗಾಧ ಅಗಸವೆ ಅವು ಕಣ್ಣು ಬಿಟ್ಟಾಗ

ಹಿತ್ತಲ ಮರಕೀಗ ಇಳಿ ವಯಸು

‍ಲೇಖಕರು Avadhi

12 September, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading