ಇವರು ಶಶಿಧರ ಅಡಪ..

ಎನ್ ಆರ್ ವಿಶುಕುಮಾರ್

ಖ್ಯಾತ ರಂಗಕರ್ಮಿ, ಚಲನಚಿತ್ರ ಕಲಾ ನಿರ್ದೇಶಕ ಶಶಿಧರ ಅಡಪ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ವಾರ್ತಾ ಮತ್ತು ಪ್ರಚಾರ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿದ್ದ ಎನ್ ಆರ್ ವಿಶುಕುಮಾರ್ ಅವರು ಅವರೊಂದಿಗಿನ ತಮ್ಮ ಗೆಳೆತನವನ್ನು ನೆನಪಿಸಿಕೊಂಡಿದ್ದಾರೆ.

ಶಶಿಧರ ಅಡಪ.. ಮೊದಲು ರಂಗಕರ್ಮಿ. ನಂತರ ಚಲನಚಿತ್ರ , ಜಾಹಿರಾತು ಚಲನಚಿತ್ರಗಳ ಕಲಾ ನಿರ್ದೇಶಕ, ಸ್ತಬ್ದಚಿತ್ರಗಳ ವಿನ್ಯಾಸಕಾರ, ವಸ್ತು ಪ್ರದರ್ಶನ ಮಳಿಗೆಗಳ ನಿರ್ಮಾಣಕಾರ, ಧ್ವನಿ ಬೆಳಕು ಕಾರ್ಯಕ್ರಮದ ವಿನ್ಯಾಸಕ, ಬೊಂಬೆಯಾಟದ ಅನ್ವೇಷಕ, ಜನಪರ ಹೋರಾಟಗಳ ಸಂಘಟಕ… ಇದರ ಜೊತೆಗೆ ಅವರವರ ಪರಿದಿಗೆ ಬಂದಂತೆ ನೀವು ಇನ್ನೂ ಹಲವು ಕ್ಷೇತ್ರಗಳನ್ನು ಅವರ ಹೆಸರಿನ ಜೊತೆ ಸೇರಿಸಿಕೊಳ್ಳಬಹುದು.

ಶಶಿಯನ್ನ ಮೊದಲು ಭೇಟಿ ಮಾಡಿದ್ದು ಎಲ್ಲೆಂದು ಸರಿಯಾಗಿ ನೆನಪಿಗೆ ಬರುತ್ತಿಲ್ಲ. ಆದರೆ ಶಶಿ ಮತ್ತು ಕಲಾವಿದ ಸುದೇಶ್ ಮಹಾನ್ ಅವರ ಜೊತೆ ಪ್ರಥಮ ಬಾರಿಗೆ 2000 ನೇ ಇಸವಿಯಲ್ಲಿ ದೆಹಲಿಯ ಗಣರಾಜ್ಯೋತ್ಸವ ಪೆರೇಡಿ ನಲ್ಲಿ ಕರ್ನಾಟಕ ರಾಜ್ಯದ ಯಕ್ಷಗಾನ ಸ್ತಬ್ದಚಿತ್ರವನ್ನು ನಿರ್ಮಿಸಿದ ದಿನಗಳಂತೂ ನೆನಪಿನ ಕೋಶದಲ್ಲಿ ಬಲವಾಗಿ ನೆಲೆಯೂರಿವೆ.

ಯಕ್ಷಗಾನ ಸ್ತಬ್ಧಚಿತ್ರ ನಿರ್ಮಿಸಿದಾಗ ನಾನು ವಾರ್ತಾ ಇಲಾಖೆಯಲ್ಲಿ ಉಪ ನಿರ್ದೇಶಕನಾಗಿದ್ದೆ. ನಂತರ ಇಲಾಖೆಯ ನಿರ್ದೇಶಕನಾಗಿ ಒಂದೂವರೆ ವರ್ಷದ ಹಿಂದೆ ನಿವೃತ್ತಿ ಆಗುವ ತನಕ ಶಶಿಧರ ಅಡಪ ಅವರ ಜೊತೆ ನಿರಂತರ ಒಡನಾಟವಿತ್ತು.

2000 ನೇ ಇಸವಿಯಿಂದ ಇಲ್ಲಿಯವರೆಗೆ ಸತತವಾಗಿ ದೆಹಲಿಯ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಕರ್ನಾಟಕದ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ ಹೆಗ್ಗಳಿಕೆ ಶಶಿಗೆ ಇದೆ. ಸ್ತಬ್ಧಚಿತ್ರದ ಗುಣಮಟ್ಟ ನಿರ್ಧರಿಸಿ ಆಯ್ಕೆ ಮಾಡುವ ಸಮಿತಿಯವರಂತೂ ಕರ್ನಾಟಕದ ಸ್ತಬ್ಧಚಿತ್ರ ವಿನ್ಯಾಸವನ್ನು ನೋಡಿದ ಕೂಡಲೇ ” ಚಲೋ ಚಲೋ ಆಪ್ ಅಚ್ಚಾ ಸಬ್ಜೆಕ್ಟ್ ಬನಾಯ ಹೈ .. ಇಸ್ ಮೇ ತೋಡಾ ಚೇಂಜ್ ಕರ್ಕೆ ಅವೋ .. ಬಸ್ ” ಎಂದು ಹೇಳುವುದಕಷ್ಟೇ ಅವರ ಸಲಹೆ ಸೀಮಿತವಾಗುತ್ತಿತ್ತು.

ನಮ್ಮ ರಾಜ್ಯದ ಸ್ತಬ್ಧಚಿತ್ರ ನಿರ್ಮಾಣ ಕೌಶಲದ ಬಗ್ಗೆ ಕೂಡಾ ಬಹಳ ಒಳ್ಳೆಯ ಮೆಚ್ಚುಗೆ ದೆಹಲಿಯಲ್ಲಿ ವ್ಯಕ್ತವಾಗುತ್ತಿತ್ತು. ಇದಕ್ಕೆ ವಾರ್ತಾ ಇಲಾಖೆಯ ಅಧಿಕಾರಿಗಳು ಮತ್ತು ಶಶಿಧರ ಅಡಪ ಅವರ ನಿರ್ಮಾಣ ಸಂಸ್ಥೆ ಪ್ರತಿರೂಪಿ ಜೊತೆಗಿನ ಸಮನ್ವಯವೇ ಮುಖ್ಯ ಕಾರಣವಾಗಿತ್ತು. ನಾವೆಂದೂ ಅಧಿಕಾರ ದರ್ಪದಿಂದ ಅವರೊಡನೆ ನಡೆದುಕೊಂಡಿಲ್ಲ. ಶಶಿಧರ ಅಡಪ ಕೂಡಾ ಇದೊಂದು ಸರ್ಕಾರೀ ಕೆಲಸ ಎಂದು ಉದಾಸೀನ ಮಾಡಿದ್ದಿಲ್ಲ.

ಇದು ನಮ್ಮ ರಾಜ್ಯವನ್ನು ದೆಹಲಿಯಲ್ಲಿ ಬಿಂಬಿಸುವ ಹೆಮ್ಮೆಯ ಕಾರ್ಯ ಎಂದೇ ಕೆಲಸ ಮಾಡುತ್ತಿದ್ದರು. ಈ ಅರ್ಪಣಾ ಮನೋಭಾವನೆಯ ಕಾರಣದಿಂದಲೇ ಕರ್ನಾಟಕದ ಸ್ತಬ್ದ ಚಿತ್ರಕ್ಕೆ ಹಲವಾರು ಬಾರಿ ಪ್ರಶಸ್ತಿಗಳು ದಕ್ಕಿವೆ. ವಾರ್ತಾ ಇಲಾಖೆಯ ವಸ್ತು ಪ್ರದರ್ಶನ ಮಳಿಗೆಗಳಿಗೆ ವಿಶೇಷ ಮೆರಗು ನೀಡುವಲ್ಲಿ ಶಶಿಯ ಕಲಾ ನೈಪುಣ್ಯತೆ ಅಪಾರ. ನಮ್ಮ ಪರಿಕಲ್ಪನೆಯನ್ನು ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡು ಅದಕ್ಕೆ ಕಲಾವಂತಿಕೆಯ ರೂಪ ನೀಡುವಲ್ಲಿ ಪ್ರತಿರೂಪಿ ಸಂಸ್ಥೆ ಎಂದೂ ಎಡವಿದ್ದಿಲ್ಲ.

ವಾರ್ತಾ ಇಲಾಖೆಯ ಪ್ರತಿಷ್ಠಿತ ಧ್ವನಿ -. ಬೆಳಕು ಕಾರ್ಯಕ್ರಮಗಳಾದ ” ಮನುಷ್ಯ ಜಾತಿ ತಾನೊಂದೇ ವಲಂ ” ಮತ್ತು ” ಭಾರತ ಭಾಗ್ಯ ವಿದಾತ ” ಇವುಗಳಿಗೆ ರಂಗ ವಿನ್ಯಾಸ ಮಾಡಿಕೊಟ್ಟ ಹೆಮ್ಮೆಯೂ ಶಶಿಧರ ಅಡಪ ಅವರಿಗಿದೆ.

‍ಲೇಖಕರು avadhi

September 2, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: