ನುಗಡೋಣಿಯವರ `ಸವಾರಿ’ಯಲ್ಲಿ ಮಾನವ ಪ್ರೀತಿ

ರಾಜು ಎಂ ಎಸ್


ಅಮರೇಶ ನುಗಡೋಣಿಯವರ ಕಥಾಲೋಕದೊಳಗೆ ಇಳಿಯುವುದು ಎಂದರೆ, ನಮ್ಮ ಲೋಕಾನುಭವದ ಒಳನೋಟ ಬೀರಿ ಪಡೆವ ಅನುಭೂತಿ. ಇದು ನಿಜಕ್ಕೂ, ಬದುಕಿನ ಬಗೆಗೆ ನಮ್ಮ ವಿಚಾರ ಲಹರಿಯೋ, ಅಥವಾ ಕಥೆಗಳ ವೈವಿಧ್ಯ-ವಾಸ್ತವ ಚಿತ್ರಣಗಳಿಗೆ ಪ್ರತಿಸ್ಪಂದಿಸುವ ಭಾಷಾ ವ್ಯವಹಾರವೋ, ಎನ್ನಿಸುವಷ್ಟು ಒಮ್ಮೊಮ್ಮೆ ಅಚ್ಚರಿ ಮೂಡಿಸುತ್ತದೆ. ಭಾಷಾ ವ್ಯವಹಾರವೆಂದರೆ, ಈ ಲೋಕದ, ಇನ್ನೂ ಎಷ್ಟೋ ಅನ್ಎಕ್ಸ್ ಪ್ಲೋರ್ಡ್ ಡೈಮೆನ್ಶನ್ ಗಳನ್ನು ಹಿಡಿದಿರುವ ವ್ಯವಹಾರ. ಸವಾರಿ ಕಥಾಸಂಕಲನದ ಮುಖಾಂತರ, ಅಮರೇಶರು ಇಂಥದ್ದೊಂದು ಪ್ರಯತ್ನದಲ್ಲಿ ಒಂದು ಹೊಸ ಲೋಕವನ್ನೇ ನಿರ್ಮಿಸಿ ಬಿಟ್ಟಿದ್ದಾರೆ. ಕೆಲವು ಕಡೆ ಅಥೋರಿಯಲ್ ಇನ್ ಟೆನ್ಶನ್’ ನ ಮಾಪಕ ಕಣ್ಣಿಗೆ ರಾಚಿದರೂ ಅದನ್ನೂ ಮೀರಿ, ಒಬ್ಬ ಪ್ರಜ್ಞಾವಂತ ಓದುಗ ಅಮರೇಶರ ಸವಾರಿಯ ಸಂಗಾತಿಯಾಗಬಲ್ಲ.

ಈ ಪುಸ್ತಕದ ಮೊದಲ ಕಥೆ ಸವಾರಿ’ , ಮನುಷ್ಯ ಸಮಾಜದಲ್ಲಿ ಒಬ್ಬ ಇನ್ನೊಬ್ಬನ ಮೇಲೆ ನಡೆಸುವ ಸವಾರಿ. ಇದರಲ್ಲಿ ಮೂಡಿಬಂದಿರುವ ಪೊಲಿಟಿಕಲ್ , ಸೋಶಿಯಲ್, ಮಿಸ್ಟಿಕ್, ಫಿಲಾಸಫಿಕಲ್, ಹೈರಾರ್ಕಿಕ್ , ನ್ಯಾಚುರಲಿಸ್ಟಿಕ್ ಅಂಶಗಳಿಂದಾದ ಇದು ಒಂದು ಸದೃಢ ಕಥಾಕೋಶ. ರಷ್ಯಾದ ಲಿಯೋ ಟಾಲ್ಸ್ಟಾಯ್ ನ ಕಥೆ ‘ How much Land Does a Man Need’, ನಲ್ಲಿಯೂ ಇದೇ ರೀತಿಯ ಅಂಶಗಳು ಕಾಣಬರುತ್ತವೆ.

ಟಾಲ್ಸ್ಟಾಯ್ ಕಥೆಯಲ್ಲಿ ಇಡೀ ಭೂಮಿಗೆ ದೇವರು ಒಡೆಯ. ಸವಾರಿ ಕಥೆಯಲ್ಲಿ ಪೊಲಿಟಿಕಲ್ ಪವರ್ ಇರುವ ಮಿನಿಷ್ಟ್ರು ನಡೆಸುವ ಪ್ರಯತ್ನಗಳಿಗೆ, ಶಿವಪ್ಪಗೌಡನು ಜನರನ್ನ, ಸಮಾಜವನ್ನ, ಫ್ಯೂಡಲಿಸಂನ ಆಧುನಿಕ ಮಾದರಿಗೆ ಸಜ್ಜುಗೊಳಿಸುತ್ತಿದ್ದಾನೆ. ಇದು ಒಂದು ರೀತಿಯ ಸವಾರಿ. ಇನ್ನೊಂದು ರೀತಿಯ ಸವಾರಿ, ಸುಡುಗಾಡು ಸಿದ್ದನದು. ಇವನ ಒಡೆತನ ಬರೀ ಸ್ಮಶಾನಕ್ಕೆ ಸೀಮಿತ. ಇದರ ನಂತರದ power’ ಹೈರಾರ್ಕಿಕ್ ಸ್ತರದಲ್ಲಿ ವಜ್ರಪ್ಪ ಇದ್ದಾನೆ. ಇವನಿಗಿರುವುದು ಬರೀ ಹೆಣ ಹೂಳುವ ಜಾಗಕ್ಕಷ್ಟೇ ಸೀಮಿತವಾದ ಒಡೆತನ. ಸವಾರಿ ಇಲ್ಲಿವರೆಗೂ ಬಂತು. ಇಲ್ಲಿರುವ ಡಾರ್ಕ್ ಕಾಮಿಡಿಯಂತಹ ಕಠೋರ.

ಸನ್ನಿವೇಶವೊಂದು ಹೇಗಿದೆಯೆಂದರೆ : ಗೌಡಸಾನಿಯ ಹೆರಿಗೆ ನಂತರದ ಮಾಸ ಹೂಳಿದ ಜಾಗದ ಮೇಲೂ ವಜ್ರಪ್ಪ ಒಡೆತನ ಸಾಧಿಸಲು ಹೊರಟು, ಕ್ಲೈಮ್ ಮಾಡಲು ಹೋಗಿ, ಅವರ ಮನೆಯಿಂದ ಹೊರದಬ್ಬಿಸಿಕೊಳ್ಳುತ್ತಾನೆ. ಕಥೆಯ ಕೊನೆಗೆ, ಈ ತರಹದ ಎಲ್ಲಾ ಕ್ಲೈಮರ್ಸ್ ಸೋಲು ಕಾಣುತ್ತಾರೆ. ಶಿವಪ್ಪಗೌಡನ ಭೂ ಕಬಳಿಕೆಯ ತಯಾರಿಗೆ ಮಿನಿಸ್ಟ್ರು ಮತ್ತು ಕಂಪನಿ ಒಪ್ಪಂದ-ನಿಲುವಿಗೆ ಬಾರದೆ ಅವ ಸೋಲುಣ್ಣುತ್ತಾನೆ. ಸುಡುಗಾಡು ಸಿದ್ಧನ ಕಣ್ಣಿಗೆ ಕವಿದ ಮಾಯೆ ಕರಗಿ ಜ್ಞಾನ ಮೂಡಿ ತನ್ನ ಸೋಲಿನ ಅರಿವಾಗುತ್ತದೆ. ` ಆಮ್ಯಾಲೆ ಗವ್ವನೆ ಕತ್ತಲು ಸಣ್ಣಾಗಿ ಕರಗಿ ಕರಗಿ ಅದರಾಗೇ ಸಣ್ಣಾಗಿ ಮಾಯದ ತಿಳಿ ಬೆಳಕು ಮೂಡಿತು!" ಇಂತಿಲ್ಲಿಗೆ ಇನ್ನೊಂದೆಡೆ ವಜ್ರಪ್ಪ ಸಾಯುತ್ತಾನೆ.ಸವಾರಿ’ ಯ power dissipation ಆಗಿಬಿಡುತ್ತದೆ.

ದಿಲ್ ಮಾಂಗೇ ಮೋರ್’ ಕಥೆಯ ರಂಗಬಿರಂಗಿ ದುನಿಯಾ ಪ್ರಸ್ತುತ ಕಾಲದ ದೇಶದ ಪರಿಸ್ಥಿತಿಗೆ ಹಿಡಿದ ದರ್ಪಣ. ಟೆಲಿವಿಷನ್ ಎಂಬ ಮಾಯಾ ಕನ್ನಡಿಯ ಬಿಂಬ ಈ ಕಥೆಯಲ್ಲಿ ಪ್ರತಿಬಿಂಬಿತವಾಗಿದೆ. ಆಧುನಿಕೋತ್ತರವಾದವು ಎತ್ತಿಹಿಡಿಯುವ ಟಿವಿಯೊಳಗಿನ ಆಕೃತಿಗಳ ಹುಸಿತನ ಇಲ್ಲಿದೆ. ವಸಾಹತೋತ್ತರವಾದಂತಹ ಸಾಂಸ್ಕೃತಿಕ ವಿಸ್ಮೃತಿ ( cultural amnesia ) ಹಾಗೂ ಹಳ್ಳಿಗಳ ಇಂದಿನ ಜೀವನ, ಇವೇ ಇಲ್ಲಿ ಕಾಣಬರುವ ನೆರಳು ಬೆಳಕಿನಾಟ. 90ರ ದಶಕದ ಕ್ರಿಕೆಟ್, ಪೆಪ್ಸಿ, ಕಾರ್ಗಿಲ್, ಟಿವಿ, ಬೆಟ್ಟಿಂಗ್, ಸಿನಿಮಾ ಇವೆಲ್ಲದರ ನಡುವೆ ಕಳೆದುಹೋದ ಮಾನವನ ಅಂತರಂಗ; ಇದಿಷ್ಟೇ ಹ್ಯಾಂಗೋವರ್ ನಲ್ಲಿ ನಡೆಸುವ ರಾದ್ಧಾಂತಗಳು; ಇವಿಷ್ಟರ ನಡುವೆ ಶಾಂತಿ- ಗೋವಿಂದನ ಪ್ರೇಮಕಥೆ; ಹೀಗೆ ಹಳ್ಳಿ ಇಂದು ಪಡಕೊಂಡಿರುವ ರೂಪದ ಮುಂದೆ ಕಳಕೊಂಡದ್ದರ' ಚಿತ್ರಣವಿದೆ.ದಿಲ್ ಮಾಂಗೇ ಮೋರ್’ ಆದರೂ, ಆ ಅತೀಗಳ ಮುಂದೆ ಭಾರತದ ಹೃದಯ ಕಳಕೊಂಡದ್ದು ಬಹಳವಿದೆ. ಇದು ಇಲ್ಲಿನ ವೈರುಧ್ಯ.

ಕಣ್ಣು ಮುಕ್ಕಾದ ಬೀಜಗಳು’ ಒಂದು ಸಂಕೀರ್ಣ ಕಥಾಹಂದರ. ಇಲ್ಲಿ ಕೂಲಿಕಾರರ ಸಮಸ್ಯೆಗೆ ಪರಿಹಾರ ನೀಡಲು ಕೃಷಿಯ ಯಾಂತ್ರೀಕರಣ ದ ಪ್ರಸ್ತಾಪವಿದೆ. ಈ ಕೃಷಿಯ ಯಾಂತ್ರಿಕರಣ ಸಮಸ್ಯೆಯಿಂದ ಕೂಲಿಕಾರರು-ರೈತರ ನಡುವಿನ ಸಮಸ್ಯೆ; ಇದೆಲ್ಲದರಿಂದ ಸರ್ಕಾರ-ಬೆಂಬಲ ಬೆಲೆ-ನಡುವೆ ಏರ್ಪಡುವ ಸಂಕೀರ್ಣತೆಗಳು. ಇವೆಲ್ಲದರ ನಡುವೆ ರೈತ ಸಂಘ, ನಕ್ಸಲೈಟ್ ಹೋರಾಟಗಳು, ಸರ್ಕಾರ, ಪೊಲೀಸ್, ಜನಸಾಮಾನ್ಯರು ಇವರ ನಡುವಿನ ತಂತುಗಳು ಕಡಿದುಹೋದ ರೀತಿ-ನೀತಿಗಳು. ಒಟ್ಟಿನಲ್ಲಿ ಬೀಜ-ವೃಕ್ಷ ನ್ಯಾಯದಂತೆ ಇಲ್ಲಿ ಒಂದು ಸಮಸ್ಯೆಯ ಪರಿಹಾರಕ್ಕೆ ಇನ್ನೊಂದರ ಮೊರೆಹೋದರೂ ಪರಿಹಾರವೇ ಸಮಸ್ಯೆಯಾಗುವಂತಹ ಪರಿಸ್ಥಿತಿ.

ಮೀರುವ ಘನ ಒಂದು ಮಿಸ್ಟಿಕ್ ಆದಂತಹ ಇಣುಕು ನೋಟ - ಮಾನವನ ಆತ್ಮದಾಳಕ್ಕೆ! ಮಾನವನ ದೇಹ-ಆತ್ಮದ ಅವಿನಾ ಸಂಬಂಧದ ಮೆಟಾಫರಿಕ್ ಆದಂತಹ ನಿರ್ಮಿತಿ ಈ ಕಥೆಯಲ್ಲಿದೆ. ರೈಲು, ಪ್ರಯಾಣಿಕರು, ನೂಕುನುಗ್ಗಲು, ಜೀವನ ಪಯಣ, ಇಷ್ಟರ ನಡುವೆ… ಒಂದು ಜೀವ-ನ ಮೀರಿ ನಿಂತಜೀವ’ ರೈಲು ಬೋಗಿಯೊಳಗೆ, ಘನವಾಗಿ, ಮೀರಿ ಘನಿಸಿರುವುದು; ಎಲ್ಲವ ಮೀರಿ ನಿಂತ ಅವನ ಆಧ್ಯಾತ್ಮ ಇವೆಲ್ಲವೂ ಓದುಗನ ಲೋಕಜ್ಞಾನವನ್ನು ಡಿಕನ್ಸ್ಟ್ರಕ್ಟ್ ಮಾಡಿ ಹೊಸ ದಿಕ್ಕಿಗೆ ಕರೆದೊಯ್ಯುತ್ತದೆ.

ಜೋಗುಳ ನಿಂದಲ್ಲದೆ' ಕಥೆಯು ಮಾಯಪ್ಪನೆಂಬ ಯಕಃಶ್ಚಿತ್ ನ ಭ್ರಮೆ ಕಳಚುವ, ಮತ್ತು ಅವನ ಜ್ಞಾನ ಮಾರ್ಗದ ದಾರಿ ತೆರೆದುಕೊಳ್ಳುವವರೆಗಿನ ಅವನ ಹುಡುಕಾಟಗಳ ಸರಣಿ. ಇಡೀ ಕತೆಯ ಪರಿಸಮಾಪ್ತಿಯಲ್ಲಿಯೇ ಇದರ ಸತ್ವ ಕ್ರೋಢೀಕರಿಸಿದೆಯೇನೋ… "ಸಾಧನಕ್ಕೆ ದಾರಿ ಬೇಕಾದಷ್ಟು ಇದ್ದಾವ… ನಿನ್ನ ಸಾಧನೆಗೆ ನಿನ್ನ ಆತ್ಮ ತೃಪ್ತಿಗೆ ಅಂತ ನೀನು ತಿಳಕಂಡಿಲ್ಲ. ಆದರೆ ಸಂಸಾರದಾಗೂ ಇದ್ದು ಸಾಧನದ ಹಾದಿ ಕಂಡುಕೊಂಡ ನಿನ್ನ ಹೆಣ್ತಿಗೆ ನೀನು ಹೆಗಲುಕೊಡು". ಅಕ್ಕನ ಮಾತುಗಳ ಮೂಲಕ ಮಾಯಪ್ಪಆ ದನಿಯನ್ನು ಕೇಳುತ್ತಲೇ ಜಲದುರ್ಗದ ಕೋಟೆ ಗೋಡೆಯ ಬಾಗಿಲು ದಾಟಿ ಹೊರಬಿದ್ದು ನಡೆಯತೊಡಗಿದ’
ಇದಿಷ್ಟು ತುಂಬಾ ಅನುಭಾವಿಕತೆಯ ನರೇಟೀವ್.

ಒಬ್ಬ ಪ್ರಜ್ಞಾವಂತ ಕಥೆಗಾರ ತಾನು ಕಂಡುಕೊಂಡ ಅನುಭವಗಳಲ್ಲಿ ಇಂದಿನ ಜನಪ್ರಿಯ ಸಾಹಿತ್ಯ (popular culture) ಹಾಗೂ ಜಾನಪದ ಕಲೆ ( folk art) ನಡುವಿನ ಕೊಡು-ಕೊಳ್ಳು ಪೊಲಿಟಿಕ್ಸ್ ಅನ್ನು ಅರ್ಥಮಾಡಿಕೊಳ್ಳುವಂತಿದ್ದರೆದೈವಕ್ಕೆ ಮೊದಲು ಶರಣೆಂಬೆವು’ ಕಥೆಯಂತಹುದನ್ನು ತುಂಬಾ ಕಲಾವಂತಿಕೆಯಿಂದ ಹೆಣೆಯಬಲ್ಲ. ಅಮರೇಶರ ಈ ಪ್ರಯತ್ನ ಒಂದು ಕ್ರಿಟಿಸಿಸಂ ಆಗಿಯೂ, ಒಂದು ವ್ಯಂಗ್ಯ ಆಗಿಯೂ, ಒಂದು ಟ್ರ್ಯಾಜಿಕ್-ಕಾಮಿಕ್-ಐರನಿ: ಈ ವಿಶ್ವವಿದ್ಯಾನಿಲಯಗಳ ಮೇಲೆ, ಜಾನಪದ ವಿದ್ವಾಂಸರ ಮೇಲೆ. ಇದು ಕಥೆ ಬರೀ ಮಾದಪ್ಪ-ಪಾತವ್ವ ಎಂಬ ಪದಕಾರರ ಜೀವನ ಕಥೆ ಆಗಿಲ್ಲ. ಒಂದು ಸಂಕಥನ (discourse) ಆಗಿದೆ. ಹೇಗೆಂದರೆ, ಒಂದು ಸಮಾಜಶಾಸ್ತ್ರೀಯವಾದ:

ಜಾನಪದವನ್ನು ಅದು ಇರುವ ಪ್ರಪಂಚದಲ್ಲಿಯೇ ಬಿಟ್ಟು, ಅದಕ್ಕೆ ಯಾವ ಆಧುನಿಕ ಒತ್ತಡಗಳ ಕಲ್ಮಶಗಳನ್ನು ಸೋಂಕದಂತಿರಿಸಿ ಪೋಷಿಸಬೇಕೋ ಅಥವಾ ಅದನ್ನು ಆಧುನಿಕ ಪ್ರಪಂಚಕ್ಕೆ ಪರಿಚಯಿಸಬೇಕೋ? ಎನ್ನುವ ವಾದವನ್ನು ಪುನರ್ ವಿಮರ್ಶಿಸುತ್ತದೆ ಈ ಕಥೆ. ಹಾಗಾಗಿ ಒಂದು ಇಡಿಲಿಕ್ ವರ್ಲ್ಡ್ (idylic world) ಆದ ಪಾತಪ್ಪನಗುಡ್ಡೆ ಯಿಂದ ಹೊರಗಿನ ಪ್ರಪಂಚಕ್ಕೆ ಪರಿಚಯವಾದ ಪಾತಪ್ಪ ದೇವರ ಪದ, ಕೊನೆಗೂ ಆ ದೈವದ ಶಕ್ತಿಯ ಕಾರಣದಿಂದ ತನ್ನತನವನ್ನು , ಹರಸಾಹಸದಿಂದ ಕೊನೆಗೂ ಉಳಿಸಿಕೊಳ್ಳುವ ಆಶಾವಾದದಲ್ಲಿ ಕಥೆ ಮುಕ್ತಾಯವಾಗುತ್ತದೆ.

ಮಾರ್ಕ್ಸ್ ವಾದ, ವಾಣಿಜ್ಯಶಾಸ್ತ್ರದ ಎಲ್ಲಾ ಥಿಯರಿಗಳು, ರಾಜ್ಯಶಾಸ್ತ್ರದ ಪರಿಮಿತಿಗಳನ್ನೂ ಮೀರಿ , ನಿಲ್ಲುವ ಇಲ್ಲಿನ ಒಂದು ಕಥೆ- ಒಡಲುಗೊಂಡವರು’ – ಮನುಷ್ಯ ಜೀವನವನ್ನು ಅಣಕಿಸುವಂತಿದೆ. ಹರಿಶ್ಚಂದ್ರನ ತಾಯಿ ತೀರಿದ ನಂತರ ಅವಳನ್ನು ಮಣ್ಣು ಮಾಡಲು ಭೂಮಿ ಇಲ್ಲ. ಜನರ ಭೂಮಿ ಎಲ್ಲವೂ, ಇತರ ಜನರ ಭೂಮಿಯಂತೆಯೇ ಕಂಪನಿಗಳಿಗೆ ಮಾರಾಟವಾಗಿದೆ. ಸರ್ಕಾರ ನಾಮಕೆವಾಸ್ತೆ ಇದೆ. ರಾಜಕೀಯ ನಾಯಕರು ಜನರನ್ನು ಕಾಯುವುದು ಬಿಟ್ಟು ಸ್ವಹಿತಾಸಕ್ತಿ, ಕಂಪನಿಗಳ ಹಿತಾಸಕ್ತಿಗೆ ದುಡಿಯುತ್ತಿದ್ದಾರೆ. ಇವೆಲ್ಲ ಭ್ರಷ್ಟತೆ ಗಳ ಜೊತೆಗೆ ಮನುಷ್ಯನ ನೀಯತ್ತು ಭ್ರಷ್ಟವಾಗಿದೆ. ಇಷ್ಟೊಂದು ದೊಡ್ಡ ಸಾಮಾಜಿಕ ಭ್ರಷ್ಟತೆಯ ಎದುರಿಗೆ microcosm ನಂತೆ, ಹರಿಶ್ಚಂದ್ರ-ರೇಣುಕಾ ರ ಕಥಾ ಅಂತ್ಯದ ವಾಗ್ವಾದ ಸಾದೃಶ್ಯವನ್ನು ನೀಡುತ್ತದೆ.

ಈ ಕಥಾಸಂಕಲನದ ಇತರೆಲ್ಲಾ ಕಥೆಗಳಿಗಿಂತ ವಿಭಿನ್ನವಾಗಿ… ಬರೀ ಮನುಷ್ಯ ಜೀವನದ ವಿಚಿತ್ರ ಲಕ್ಷಣವನ್ನು ಎತ್ತಿಹಿಡಿದಿರುವ ಕಥೆ ಎಂದರೆ, ಕುಡಿ ಬಂದ ದೀಪಗಳು'. ಮನುಷ್ಯ ಸಹಜ ಭಾವನೆಗಳು, ಜೀವನ ಪ್ರೀತಿ, ಸಂಸಾರ ಸುಖ ಇವೆಲ್ಲವುಗಳಿಂದ ಒಂದು ಹೆಣ್ಣು ಹೇಗೆ ವಂಚಿತವಾಗಿದ್ದಾಳೆ, ಮತ್ತು ದೈವ ಸೃಷ್ಟಿ ಕ್ರಿಯೆಯಲ್ಲಿ ಆಗುವ ಸ್ಥಿತ್ಯಂತರಗಳ, ವಿಪರ್ಯಾಸಗಳ ಚಿತ್ರಣವಿದೆ ಇಲ್ಲಿ.ಹುಚ್ಚು ದೇವಿ’ ಎನ್ನುವ ಬುದ್ಧಿ ಮಾಂದ್ಯ ಹುಡುಗಿಯ ಮಾನಸಿಕ ಪದರುಗಳ ಒಳಗೂ ಇಣುಕಿ ನೋಡುವ ಗೌರಿಶಂಕರನ ಸಹೃದಯತೆ ಇದೆ. ಸಹಜ ನೈಸರ್ಗಿಕವಾಗಿ ಬೆಳೆದ ಗೌಡರ ಮಗಳು ಸಾವಿತ್ರಿಯಲ್ಲಿ ಬರುವ ಸಂಸಾರ-ಸಾಮರ್ಥ್ಯದ ಕೊರತೆಯ ವೈಚಿತ್ರತೆ ಇದೆ. ಇಲ್ಲಿ ಭೂಮಿಯ ಮೇಲೆ ಎಲ್ಲಾ ಪ್ರಶ್ನೆಗಳಿಗೂ, ದೈವ ನಿಯಮಗಳಿಗೂ ಉತ್ತರ ಹುಡುಕಲಾಗದ ಅಸಹಾಯಕತೆ ಈ ಕಥೆಯ ವೈಶಿಷ್ಟ್ಯ.

ಅತ್ಯಂತ ವಿಚಾರಶೀಲ, ಪ್ರೌಢ, ವಿವೇಚನಾತ್ಮಕ, ಸಂಕಥನ ಕಾಣಿಸುವುದು ಪಕ್ವಕ್ಕಲ್ಲದೆ ಪರಿಣಾಮ ಕಾಣಿಸದು' ಕಥೆಯಲ್ಲಿ. ಇಂದಿನ ಆಧುನಿಕ ಸಮಾಜದ ಜನರ ವಸ್ತುಸ್ಥಿತಿ, ಅವರ ಜೀವನದ ಸ್ಥಿತಿಗತಿಯ ಪ್ರಕ್ಟಿಕಲ್ ನಾಲೆಡ್ಜ್ ಇಲ್ಲವೆಂದೇ ಹೇಳಬಹುದಾದ ಸೋಕಾಲ್ಡ್ ನಕ್ಸಲೈಟ್ ಚಂದ್ರಪ್ಪ ಇನ್ನೂ ಅದೇ ಜಡ್ಡುಗಟ್ಟಿದ, ಭೂ ಮಾಲೀಕತ್ವದ ( ಜಮೀನ್ದಾರಿ ವ್ಯವಸ್ಥೆಯ) ವಿರುದ್ಧದ ಹೋರಾಟದಲ್ಲಿದ್ದಾನೆ. ಜಮೀನ್ದಾರ ಶರಭನ ಗೌಡ ಮಾತ್ರ ಅಪ್ಪಟ ದೇಶೀವಾದಿಯಂತೆ, ಗಾಂಧೀವಾದಿಯಂತೆ ಬೇವಿನ ಕಡ್ಡಿ ಬ್ರಷ್, ಹತ್ತಿ ಬಟ್ಟೆ ಉಡುಗೆ, ಮಜ್ಜಿಗೆ-ರೊಟ್ಟಿ ಊಟ, ಊರ ಕೇರಿಯ ಮಾದನ ಮೆಟ್ಟುಗಳನ್ನು ಬಳಸುತ್ತಾ ಅದಾವ ಆಧುನಿಕ ಸಮಾಜದ ಇಸಂ’ಗಳ ಹೋರಾಟಗಳ ಪ್ರಜ್ಞೆ ಇಲ್ಲದೆ ತನ್ನ ಪಾಡಿಗೆ ಜೀವನ ನಡೆಸಿದ್ದಾನೆ: ಟ್ರ್ಯಾಕ್ಟರ್-ಯಾಂತ್ರಿಕೃತ ಕೃಷಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು. ಗೌಡನ ಸಾವಯವ ಸಂಬಂಧ ಹಳ್ಳಿ ಜೀವನದಲ್ಲಿ ಹೊಂದಿಕೊಂಡು ನಡೆಯುತ್ತಿದೆ.

ಗೌಡನ ಪ್ರಾಂತದ ಹಳ್ಳಿ ಜನರಾದರೋ , ಸರ್ಕಾರದಿಂದ ಸಿಗುವ ತಿಂಗಳ ಹಣ, ಓದಿದ ಮಕ್ಕಳ ತಿಂಗಳು ಸಂಬಳ, ಸೊಸೈಟಿಯ ಕಡಿಮೆ ಬೆಲೆಯ ದವಸ-ಧಾನ್ಯ ಉಣ್ಣುತ್ತಾ, ರೋಡು ಕೆಲಸದಲ್ಲಿ ವಾರಕ್ಕೆ ಸಿಗುವ ಸಾವಿರ ರೂಗಳ ಪಗಾರದಲ್ಲಿ ಬದುಕುತ್ತಿದ್ದಾರೆ. ಗೌಡ ಭೂ-ದಾನ ನೀಡುತ್ತೇನೆಂದರೂ ಅವರಿಗೆ ಭೂಮಿಯ ಗೇಯ್ಮೆ ಮಾಡಲು ವ್ಯವಧಾನವಿಲ್ಲ. ಗೌಡನ ಖಾಸಾ ಆಳು ದಸ್ತಗಿರಿಗೂ ( ದಸ್ತಗೀರ್) ಸಹ ಈ ಜಮೀನು ಬೇಡ. ಶಹರದ ಜೀವನವೇ ಭೇಷು ಇವನಿಗೆ. ಗಾಂಧಿವಾದದ , ಹಳ್ಳಿ ಉದ್ಧಾರದ ಥಿಯರಿ ಬುಡಮೇಲು ಇಲ್ಲಿ. ಸಮಾಜಶಾಸ್ತ್ರಜ್ಞರ ಡಾಕ್ಯೂಮೆಂಟೇಶನ್ ನಲ್ಲಿ, ಥಿಯರಿಟಿಕಲ್ ಸ್ಟಡಿಗಳಲ್ಲಿ ಪೊಳ್ಳುತನ; ಹಾಗೂ ಇಂದಿನ ಪೊಲಿಟಿಕಲ್ ಸ್ಟೇಟ್ಮೆಂಟ್
ಗಳು, ಸರ್ಕಾರ ನಡೆಸುವವರ ಅಸ್ಸ್ಯುಂಮ್ಶನ್ ಗಳು ಇಷ್ಟು ಪೊಳ್ಳು ವಾಸ್ತವ ಪ್ರಜ್ಞೆಯ ಮೇಲೆ ನಡೆಯುತ್ತಿವೆ, ಎಂಬುದರ ಅಣಕ ಈ ಕಥೆಯಾಗಿದೆ.

ಈ ನಿಟ್ಟಿನಲ್ಲಿ , ಮನುಷ್ಯ ಸಮಾಜದ ಎಲ್ಲಾ ಮಗ್ಗಲುಗಳನ್ನೂ ವಿಮರ್ಶಾತ್ಮಕತೆಯಿಂದ ಶೋಧಿಸುವ ಒಂದು ಪ್ರಜ್ಞಾವಂತ ಹುಡುಕಾಟ ವಾಗಿದೆ ಸವಾರಿ. ಇದು ಹುಲಿ ಸವಾರಿಯೂ ಕೂಡ ಆಗಿದೆ. ಏಕೆಂದರೆ ಇವರು ಇಲ್ಲಿ ವಿಮರ್ಶಿ ಸುತ್ತಿರುವುದು ಯಾರದೋ ಒಬ್ಬರ, ಅಥವಾ ಒಂದು ಗುಂಪಿನ, ವರ್ಗದ ವ್ಯಕ್ತಿ/ ವ್ಯಕ್ತಿತ್ವಗಳನ್ನಲ್ಲ . ಇಡೀ ಸಮಾಜದ ಸಾವಯವಶೀಲತೆಯಲ್ಲಿ ಬಂಧಿಯಾಗಿರುವ ಯಕಃಶ್ಚಿತ್ ಮಾನವನು ಪ್ರಸ್ತುತ ಕಾಲಮಾನದಲ್ಲಿ ಎದುರಿಸುವ ಜೈವಿಕ, ನೈಸರ್ಗಿಕ, ಗ್ಲೋಬಲ್, ಪೊಲಿಟಿಕಲ್, ಎಕನಾಮಿಕಲ್, ಇಂಟಲೆಕ್ಚುಯಲ್ ಮಂಡೇನಿಟಿ (mundanity) ಅಂದರೆ ಅರ್ಥಗಳ ಹುಡುಕಾಟದಲ್ಲಿ ಯಾವುದೋ ಸವಾರಿಯ ಬೆನ್ನತ್ತಿ ದಾರಿ ಮರೆತ ಮಾನವ ಜೀವನ’. ಇಲ್ಲಿರುವ ಕಥಾಸಂಗತಿ ಇಡೀ ಮಾನವ ಜೀವನದ ವಿಮರ್ಶೆಯಾಗಿದೆ . ಇವಿಷ್ಟರ ಒಳಗೆ ಅಲ್ಲಲ್ಲಿ ಇಣುಕುಹಾಕುವ ಆ ಮಾನವ ಪ್ರೀತಿ, ಸತ್ಯದ ಸತ್ಯತೆಯನ್ನು ಅರಸುವ ಜೀವನಪ್ರೀತಿ ,ಅಮರೇಶರ ಕಥಾಸಂಕಲನದ ಕಲಾತ್ಮಕ ಅಭಿವ್ಯಕ್ತಿಯಾಗಿ ಮೆರೆಯುತ್ತದೆ.

‍ಲೇಖಕರು Avadhi

September 2, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಪ್ರದೀಪ ಬಳ್ಳಾರಿ

    ರಾಜು ಎಮ್ .ಎಸ್ ನಿಮ್ಮ ಈ ಲೇಖನವು ಸವಾರಿ ಎಂಬ ಪದ ಬೇರೆ ಬೇರ ಸಂದರ್ಬದಲ್ಲಿ ಪಡೆಯುವ ಬೇರೆ ಬೇರೆ ಅರ್ಥಗಳನ್ನು ಚನ್ನಾಗಿ ವಿವರಿಸುತ್ತದೆ. ಒಟ್ಟಿನಲ್ಲಿ ಉತ್ತಮ ಲೇಖನ ನಿಮ್ಮದಾಗಿದೆ….ನಿಮ್ಮಿಂದ ಇನ್ನು ಹೆಚ್ಚಿನ ಬರವಣಿಗೆಗಳು ಮೂಡಿ ಬರಲಿ……
    Best of luck….

    ಪ್ರತಿಕ್ರಿಯೆ
  2. Gurushanth C

    ಅಮರೇಶರ ಪುಸ್ತಕ ದ ಬಗ್ಗೆ ತುಂಬಾ ಅಚ್ಚುಕಟ್ಟಾದ ವಿಶ್ಲೇಷಣೆ ನೀಡಿದ್ದೀರಿ. Tolstoy ಕಥೆಯೊಂದಿಗಿನ comparative study ಸೂಕ್ತವೆನಿಸಿತು.

    ಒಟ್ಟಿನಲ್ಲಿ ಸೊಗಾಸಾದ ವಿಶ್ಲೇಷಣೆ ರಾಜು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: