ಕಾಡುವ ಮಂಜುಳಾ ಡಿ ಕೃತಿಗಳು

ಸುಮತಿ ಶೆಣೈ

ಕಾವ್ಯಸ್ಫುರಣ ಸಂವೇದನೆಗಳನ್ನೇ ಜೀವಾಳವಾಗಿಸಿದಂಥ ಲೇಖಕಿ ಡಿ. ಮಂಜುಳಾರವರ ಗದ್ಯ ಬರಹ‌  ‘ನಿನಾದವೊಂದು..’ ಮತ್ತು   ‘ಜೋಡಿಸಿಡಲು ಪ್ರಯತ್ನಿಸುತ್ತಿದ್ದೇವೆಂದರೆ ಒಡೆದು ಹೋಗಿತ್ತು ಎಂದೇ ಅರ್ಥವಲ್ಲವೇ’ ಎಂದು ತಮ್ಮ ‘ ಆಸೆಯ ಕಂದೀಲು’ ಕವನ ಸಂಕಲನದ ಚುಟುಕದಲ್ಲಿ ಕೇಳುವ ಕವಯಿತ್ರಿಯ ಎಲ್ಲ ಪುಟ್ಟ ಪುಟ್ಟ ಸೊಲ್ಲುಗಳಲ್ಲಿ ಗದ್ಯಪ್ರೇರಿತ ತರ್ಕವೊಂದು ಯಾವಾಗಲೂ ಪ್ರವಹಿಸುತ್ತಿರುತ್ತದೆ.

ಬಹು ದೀರ್ಘ ಶೀರ್ಷಿಕೆಗಳಿಂದ ಗಮನ ಸೆಳೆಯುವ ಕಥಾನಕಗಳು ಒಮ್ಮೆಲೆ ನಮ್ಮನ್ನು ರಾಷ್ಟ್ರ, ಅಂತರ ರಾಷ್ಟ್ರೀಯ ಮಟ್ಟದಿಂದ, ನಮ್ಮವರೇ ಆದ ಸ್ಥಳೀಯ ಮಟ್ಟದವರೆಗಿನ ಸಾಧಕರ ಸಾಹಸಮಯ ಬದುಕನ್ನು ಸವಿವರವಾಗಿ ಪರಿಚಯಿಸುತ್ತಾ ಓದುಗರನ್ನು ಅಚ್ಚರಿಗೊಳಿಸುವ ಪರಿ ವಿಶೇಷ.

ಕುಂಕುಮದ ಡಬ್ಬಿಯ ಮುಚ್ಚಳ ಉರುಳಿ ಬಿದ್ದಾಗ ಹಿರಿಯ ಮಹಿಳೆಯೊಬ್ಬರ ಪ್ರತಿಕ್ರಿಯೆ ಆ ಕಥಾನಕವನ್ನು ಓದಿ ಅದೆಷ್ಟೋ ಹೊತ್ತಿನವರೆಗೆ ನನ್ನಲ್ಲಿ ಕೌಟುಂಬಿಕ ನೆಲೆಯ ಸುರುಳಿ ನೆನಪುಗಳಲ್ಲಿ ತೇಲಿಸಿದ ಒಂದು ಸರಳ ವಿಚಾರ. ತಮ್ಮ’ ಆಸೆಯ ಕಂದೀಲು’ ದಲ್ಲಿ ಎಂದಿನ ಪ್ರೇಮ ಪ್ರಣಯ ತೀವ್ರತೆಯ ಹೊಳಹುಗಳೊಂದಿಗೇ ಪುಟ್ಟ ಕೀಟ, ಹುಳುಗಳೂ ತಮ್ಮ ‘ಕಂಫರ್ಟ್ ಝೋನ್’ನಲ್ಲಿ ಆನಂದಿಸುವ, ಬವಣೆ ಪಡುವ ನಿಸರ್ಗದ ಚಿತ್ರಣವು ಬೆಳಕು- ಕತ್ತಲ- ಛಾಯೆ ಮಾಯೆಯಲ್ಲಿ ಸಾಗುತ್ತಿರುತ್ತದೆ.

ಮೇಲ್ನೋಟಕ್ಕೆ ಕಾಶ್ಮೀರದ ಕಣಿವೆಯ ಪೃಕೃತಿಯ ಸೋಜಿಗವನ್ನು ಪರಿಚಯಿಸುವ ಲೇಖಕಿಯ ಕಾಳಜಿ ಇರುವುದು ಅಲ್ಲಿಯ ಸೈನಿಕನ ಪರಿಸ್ಥಿತಿಯ ಬಗ್ಗೆ‌. ದಟ್ಟ ಭಾವಸಾಂದ್ರತೆಯ ಸಾಲುಗಳನ್ನು ಓದುವಾಗ  ಯಾವುದೋ ವಿಷಾದ ಭರಿತ ಮುಖವೊಂದು ನಮ್ಮೆದುರು ಹಾದು ಹೋದಂತೆ ಭಾಸವಾಗುವುದು. ಅನೇಕ ಬರಹಗಳಲ್ಲಿ ಇಷ್ಟೊಂದು ಭಾವುಕವಾಗುವ ಅಗತ್ಯವೇ ಇಲ್ಲ, ತುಸು ಹೆಚ್ಚಾಯಿತೇನೋ ಅನ್ನುವಂಥ ಹಲವಾರು ಸಾಲುಗಳೂ ಅವರ ಒಟ್ಟು ಸಾಹಿತ್ಯದಲ್ಲಿ ಅಲ್ಲಲ್ಲಿ ನುಸುಳುತ್ತದೆ. 

ಹೌದು, ಆದರೆ ನಿರ್ದಿಷ್ಟ ಅಳತೆಗಳಲ್ಲಿ ಭಾವನೆಗಳನ್ನು ತೋರ್ಪಡಿಸಲಾಗದು. ತನ್ನ ಮೇಲೆ ಪ್ರಭಾವ ಬೀರಿದ ಸಾಧಕ ಚೇತನಗಳ ಬಗ್ಗೆ ಇನ್ನಷ್ಟು ಮೊಗೆದು ಪ್ರೀತಿಯ ಓದುಗರಿಗೆ ಸ್ಪೂರ್ತಿಬಿಂದುಗಳನ್ನಾಗಿ ನೀಡಬೇಕೆನ್ನುವ ಲೇಖಕಿಯ ತವಕ ಗಮನಾರ್ಹ.

ಸೆಣಸಾಟದ ಜೀವನ, ಹೋರಾಟದ ಸಾಧನೆ, ಯಾತನಾಮಯ ಅನುಭವಗಳನ್ನು ಮೀರಿ ನಿಲ್ಲುವ ಸವಾಲುಗಳ ಕಥನಗಳ ಮೂಲ ಧ್ವನಿ ಯನ್ನು  ಮನಸ್ಸಿಗೆ ಆಪ್ತವಾಗುವ ಹಿಂದಿ- ಕನ್ನಡ ಸಿನೆಮಾಗಳ ಜನಮನ ಸೂರೆಗೊಂಡ  ಹಾಡಿನ ಸಾಲು, ನವಿರಾದ ಗಝಲ್ ಗಳ ಸರಳ ಪಕ್ವತೆ ಮೂಲಕ  ನಮಗೆ ಲೇಖಕಿ  ತಿಳಿಸುವುದು ಆಸಕ್ತಿದಾಯಕ. 

ಮಂಜುಳಾರವರ ಜಲವರ್ಣ ಚಿತ್ರದ ಬಗ್ಗೆ  ಬರೆದ ಕವಿತೆಯ ಸತ್ವ ನನ್ನಷ್ಟು ಎಷ್ಟು ಸೆಳೆದಿತ್ತು ಎಂದರೆ ಎಲ್ಲ ಕವನಗಳನ್ನು ಬೇಗ ಓದಬೇಕು ಅಂತ ಪ್ರೇರೆಪಿಸಿದ್ದು ಜಲವರ್ಣ ಚಿತ್ರದಲ್ಲಿನ ಬಂಗಲೆಯ ಮುಂದಿನ ಗಣಪ, ಮೇರಿಯಮ್ಮನ ಗುಡಿಯ ಶಿಲುಬೆ, ಅಲ್ಲಾನ ಗೋಡೆಯ ಚೂರು- ಇವುಗಳಿಗೆಲ್ಲ ಒಂದೇ ಹರಿವಿರುವ ಬಗೆಯನ್ನು ಹೇಳುವ ಅವರ ಕವನದ ಚರಣದ ಸ್ವಾದವೇ ಬೇರೆ.

ದಿಗಂತವನ್ನು ನೋಡುತ್ತಾ ಅಲೆಗಳ ತೀರ ವಿಸ್ತಾರದಲ್ಲಿ, ಲಿಫ್ಟ್ ನೊಳಗಿನ ಸಣ್ಣ ನಿರ್ವಾತದಲ್ಲಿರಲ್ಲಿ ಲೇಖಕಿಯ ಧ್ಯಾನಸ್ಥ   ಮನದಲ್ಲಿ ಏಕಾಂಗಿತನದ ವೇದನೆ ಗೋಚರಿಸುತ್ತದೆ. ಅದೆಷ್ಟೋ ಲೇಖನದಲ್ಲಿ ಅದನ್ನು ಮರೆಯುವ, ಮೀರಿ ನಿಲ್ಲುವ ಪ್ರಯತ್ನ ಇದ್ದೇ ಇರುತ್ತದೆ.   ಆದರೆ ಯಾವುದೇ ತಾತ್ವಿಕ ಕ್ಲಿಷ್ಟತೆಯ ಗೋಜಿಗೆ ಹೋಗದೇ ಮನದಿಂದ ಮನಕ್ಕೆ ಯೋಚನೆಗಳನ್ನು ತಲುಪಿಸುವುದು ಮಂಜುಳಾರ ಶೈಲಿ. ಲೇಖಕಿಯ ದೃಶ್ಯ- ಶ್ರವಣ- ಪತ್ರಿಕಾ  ಮಾಧ್ಯಮಗಳ ಕಲಾತ್ಮಕ ಅಂಶಗಳ ಗ್ರಹಿಕೆಯು ಮುದ ನೀಡುತ್ತವೆ.‌

ಬಹುಶ: ಆಧುನಿಕತೆಯ ಸೋಪಾನದಲ್ಲಿ ಬದುಕುವ ನಮ್ಮೆಲ್ಲರ ಮನಸ್ಥಿತಿಗೆ ಇಂಬು ನೀಡುವಂಥದ್ದೇ ಈ ಮಾಧ್ಯಮಗಳು. ಅವುಗಳಲ್ಲಿರುವ ಕೆರಳಿಸುವ ವಿಚಾರಗಳನ್ನು ಬದಿಗೊತ್ತಿ, ಮನವರಳಿಸುವ ವಿಷಯಗಳ ಮೂಲಕ ಜೀವನದ ಸವಾಲುಗಳಿಗೆ, ವೇದನೆಗಳಿಗೆ- ನಮಗೆ ನಾವೇ ಸಂತೈಸಿಕೊಳ್ಳಬಹುದಾದ ಸಾಧ್ಯತೆ ಮಂಜುಳಾರವರ ಬಿಡಿ‌ಬರಹಗಳ‌ ಆಳವಾದ ಓದಿಗೆ ಕಾಣುವ, ಅವರ ಬರವಣಿಗೆಯಲ್ಲಿ ಗಾಢವಾಗಿ ಅಡಕವಾಗಿರುವ ಧನಾತ್ಮಕ‌ ಮೌಲ್ಯವೆನ್ನಬಹುದು.

‍ಲೇಖಕರು Avadhi

September 2, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: