ಇಲ್ಲಿ ರಾಮನೇ ನಿತ್ಯದುಸಿರು..

ಮಧ್ಯ ಭಾರತದಲ್ಲೊಂದು ಓರ್ಛಾ ಎಂಬ ರಾಮರಾಜ್ಯ

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ.

ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಮಹಿಳಾ ಸ್ವಾವಲಂಬನೆ ವಿಭಾಗದಲ್ಲಿ ಗ್ರಾಮೀಣ ಮಹಿಳೆಯರಿಗೆ ಕಲಾ ತರಬೇತಿ ನೀಡುತ್ತಿರುವುದು ತೃಪ್ತಿಕೊಟ್ಟಿದೆ.

ತಿರುಗಾಟ ಹುಚ್ಚು. ಸ್ಟ್ರೆಂತೂ, ವೀಕ್ನೆಸ್ಸುಗಳೆರಡೂ ಹಿಮಾಲಯವೇ. ಬದುಕಿನ ಚಿಕ್ಕ ಚಿಕ್ಕ ಸಂಗತಿಗಳು ಕ್ಯಾಮರಾ ಫ್ರೇಮಿನೊಳಗೆ ಇಳಿವಾಗ ಅವುಗಳು ರೂಪಾಂತರ ಹೊಂದುವ ಅದ್ಭುತ ಸಾಧ್ಯತೆಗಳ ಬಗ್ಗೆ ಸದಾ ಬೆರಗು.

ಕೆಲವೊಂದು ಪ್ರಯಾಣಗಳು ಜೀವನ ಪರ್ಯಂತ ನೆನಪಿನಲ್ಲಿಡಲು ಕಾರಣಗಳಿರುತ್ತವೆ. ಎಲ್ಲಿಗೋ ಹೊರಟು, ಮಧ್ಯದಲ್ಲೆಲ್ಲೋ ಉಳಿದುಕೊಳ್ಳಬೇಕಾದ ಅನಿವಾರ್ಯ ಕಾರಣಕ್ಕೆ ಉಳಿದುಕೊಂಡು, ಉಳಿದುಕೊಂಡದ್ದಕ್ಕೆ ಸುಖಾಸುಮ್ಮನೆ ತಿರುಗಾಡಿ ಕೊನೆಗೆ, ಹೋದ ಜಾಗಕ್ಕಿಂತಲೂ ಈ ಮಧ್ಯದ ಜಾಗವೇ ಹೆಚ್ಚು ಕಾಡಿದಾಗ ಆ ತಿರುಗಾಟಕ್ಕೊಂದು ಅರ್ಥ ಬರುತ್ತದೆ. ನನ್ನ ಈ ಬಾರಿಯ ಕಥೆಯೂ ಅಂಥದ್ದೇ ಒಂದು.

ನಾವು ಭಾರೀ ಪ್ಲಾನು ಮಾಡಿಕೊಂಡೆಲ್ಲ ಎಲ್ಲಿಗೂ ಹೊರಡುವವರಲ್ಲ. ಉಳಿದುಕೊಳ್ಳಲು ಮುಂಗಡ ಬುಕ್ಕಿಂಗ್‌ ಕೂಡಾ ಅಪರೂಪವೇ. ಪರ್ವತ ಕಣಿವೆಗಳಿಂದ ಮೊದಲ್ಗೊಂಡು ಅದ್ಯಾವುದೋ ಹೆಸರೇ ಮುಖ್ಯವಲ್ಲದ ಗಿಜಿಗಿಜಿ ಪೇಟೆಯ ಇನ್ಯಾವುದೋ ಮೂಲೆಯವರೆಗೆ ಎಲ್ಲವೂ ಅನುಭವವೇ. ಪ್ರತಿ ಊರೂ ಕೂಡಾ ತನ್ನ ಒಡಲೊಳಗೆ ಕಥೆಯೊಂದನ್ನು ಹುದುಗಿಸಿಟ್ಟುಕೊಂಡಿರುತ್ತದೆ. ಸುಮ್ಮನೆ ಕೂತು ಕೇಳುವ ವ್ಯವಧಾನ ನಮ್ಮಲ್ಲಿದ್ದರೆ ಮಾತ್ರ ಅದು ಕಥೆಯಾಗಿ ಕಾಣುತ್ತದೆ, ಕಾಡುತ್ತದೆ.

ಹೊರಟದ್ದು ಮಧ್ಯಪ್ರದೇಶದ ಖಜುರಾಹೋ. ದೆಹಲಿಯಿಂದ ಹತ್ತಿರ ಹತ್ತಿರ ೭೦೦ ಕಿಮೀ. ದಾರಿ ಮಧ್ಯ ಒಂದಿರುಳು ಸುಮ್ಮನೆ ಉಳಿದುಕೊಂಡು ಹಾಗೇ ತಿರುಗಾಡಿಕೊಂಡು ಹಾಯಾಗಿ ನಿಧಾನಕ್ಕೆ ಹೋಗೋಣವೆಂದು ನಾವು ನಿಲ್ಲಿಸಿದ್ದು ಓರ್ಛಾದಲ್ಲಿ. ಓರ್ಛಾ ಎಂಬೀ ಐತಿಹಾಸಿಕ ಪಟ್ಟಣದ ಬಗ್ಗೆ ಅಲ್ಲಿಲ್ಲಿ ಅಷ್ಟಿಷ್ಟು ಓದಿ ಗೊತ್ತಿತ್ತು. ಆದರೆ, ಅದೇ ಗುರಿಯಾಗಿರಲಿಲ್ಲ. ಹೇಗೂ ಅದೇ ದಾರೀಲಿ ಹೊರಟಿದ್ದೇವೆ, ಒಂದಿರುಳು ಕೂತು ನೋಡಿದರಾಯಿತು ಎಂದು ನಿಲ್ಲಿಸಿದ್ದು. ಕೊನೆಗೆ ಈ ಓರ್ಛಾವೇ ಈ ಪರಿಯಾಗಿ ಮನಸ್ಸಲ್ಲಿ ಉಳಿದುಬಿಟ್ಟೀತೆಂದು ನಾನಂದುಕೊಂಡಿರಲಿಲ್ಲ. ಅಂಥ ಓರ್ಛಾ ನೆನಪಿಗೊಂದು ಕಥೆಯ ನೆಪವಿದೆ. ಹಾಗಾಗಿ ಮೊದಲು ಕಥೆಯಿಂದ ಶುರು ಮಾಡುವೆ!

ಅದು ೧೬ನೇ ಶತಮಾನ. ಆಗಿನ ಬುಂದೇಲ್‌ ಖಂಡದೊಳಗೆ ಬರುವ ಈ ಓರ್ಛಾ ಎಂಬೂರಿಗೊಬ್ಬ ರಾಜ ಮಧುಕರ್‌ ಷಾ ಜೂ ದೇವ್‌. ಈತ ಬಾಂಕೇ ಬಿಹಾರಿಯ (ಕೃಷ್ಣ) ಮಹಾಭಕ್ತ. ಈತನ ರಾಣಿ ಗಣೇಶ ಕುಮಾರಿ (ಕಮಲಾ ದೇವಿ) ರಾಮ ಭಕ್ತೆ. ಒಂದು ದಿನ ಇಬ್ಬರೂ ಜೊತೆಯಾಗಿ ಕೃಷ್ಣ ದೇವಾಲಯಕ್ಕೆ ಭೇಟಿಕೊಡುತ್ತಾರೆ. ಆದರೆ ಅಲ್ಲಿ ತಲುಪಿದಾಗ ದೇವಸ್ಥಾನದ ಬಾಗಿಲು ಮುಚ್ಚಿಯಾಗಿತ್ತು. ವಾಪಸ್ಸು ಹೋಗಿಬಿಡುವ ದೊರೆಯೇ ಅಂತ ರಾಣಿಯೆಂದರೆ, ರಾಜ ಮಾತ್ರ ಕೃಷ್ಣನ ದರ್ಶನವಾಗದೆ ಹೋಗಲು ಸಿದ್ಧನಿಲ್ಲ.

ಇಬ್ಬರೂ ಅಲ್ಲೇ ಪಕ್ಕದಲ್ಲಿ ಕೃಷ್ಣನ ಭಜನೆ ಮಾಡುತ್ತಾ ಕುಣಿಯುತ್ತಾ ಸಾಗುತ್ತಿದ್ದ ಗುಂಪನ್ನು ನೋಡಿ ಅವರ ಜೊತೆ ಸೇರಿ ಭಕ್ತಿಭಾವದಲ್ಲಿ ಮುಳುಗಿ ಧನ್ಯರಾಗುತ್ತಾರೆ. ಆಗ ಆಗಸದಿಂದ ಹೊನ್ನಿನ ಪುಷ್ಪವೃಷ್ಠಿಯಾಯಿತೆಂದೂ, ಹಾಗಾಗಿ ಇವರ ಜೊತೆ ಕುಣಿದವರು ರಾಧಾ-ಕೃಷ್ಣರೇ ಎಂಬುದು ಕಥೆಯಲ್ಲಿ ಬರುವ ವಿಚಾರ. ಇರಲಿ, ಇದಾಗಿ ರಾಜ ಇನ್ನೂ ಉತ್ತೇಜಿತನಾಗಿ ಸೀದಾ ಕೃಷ್ಣ ಜನ್ಮಭೂಮಿ ಮಥುರಾಕ್ಕೆ ಹೋಗಬೇಕೆಂದೂ, ಅದಕ್ಕೆ ರಾಣಿ ಜೊತೆಯಾಗಬೇಕೆಂದೂ ಕೇಳುತ್ತಾನೆ. ಆದರೆ ರಾಣಿಯ ಲೆಕ್ಕಾಚಾರ ಬೇರೆಯೇ. ಹೇಗೂ ಇಷ್ಟು ದೂರ ಬಂದಾಗಿದೆ, ಒಮ್ಮೆ ರಾಮ ಜನ್ಮಭೂಮಿ ಅಯೋಧ್ಯೆಗೂ ಹೋಗಬಹುದಲ್ಲಾ ಎಂದೆನಿಸಿ, ತನ್ನ ಲೆಕ್ಕಾಚಾರ ಹೀಗೆ ಎಂದು ತನ್ನ ಮನದಿಂಗಿತವನ್ನು ರಾಜನ ಮುಂದಿಡುತ್ತಾಳೆ.

ಆದರೆ, ಕೃಷ್ಣನ ಹೊರತು ಬೇರೇನೂ ಯೋಚಿಸದ ರಾಜನಿಗೆ ರಾಣಿಯ ಈ ಆಸೆ ಸಿಟ್ಟು ತರಿಸಿತು. ʻನೀನು ರಾಮನ ಭಜನೆ ಮಾಡುತ್ತಲೇ ಇರು, ಆತ ಯಾವತ್ತೂ ನಮ್ಮ ಮುಂದೆ ಬರಲಾರ. ಆದರೆ ಕೃಷ್ಣ ನೋಡು, ರಾಧೆಯ ಜೊತೆ ಸೇರಿ ಬಂದು ನಮ್ಮ ಜೊತೆ ನೃತ್ಯಮಾಡಲಿಲ್ಲವಾ! ನಿನಗೆ ನನ್ನ ಮಾತಿನಲ್ಲಿ ನಂಬಿಕೆ ಇಲ್ಲದಿದ್ದರೆ, ನಿನ್ನ ಹಠ ಮುಂದುವರಿಸುತ್ತೀಯಾದರೆ ಹೋಗು, ಅಯೋಧ್ಯೆಗೆ ಹೋಗು. ಆದರೆ ಒಂದು ಮಾತು ನೆನಪಿನಲ್ಲಿಟ್ಟುಕೋ, ರಾಮನನ್ನೊಲಿಸಿ, ಬಾಲರಾಮನ ರೂಪವನ್ನು ನಿನ್ನ ಜೊತೆ ಕರೆತರುವವರೆಗೆ ಮರಳಬೇಡ. ಆಗಷ್ಟೇ ನಿನ್ನ ಭಕ್ತಿಯನ್ನೂ, ಆ ರಾಮನನ್ನೂ ನಂಬುವೆʼ ಎಂದು ಖಡಕ್‌ ಮಾತಾಡಿ ತನ್ನ ದಾರಿ ಹಿಡಿದ. ರಾಜನ ಈ ಮಾತನ್ನು ಹಠದಿಂದಲೇ ಸ್ವೀಕರಿಸಿದ ರಾಣಿ, ʻಬಾಲರಾಮನ್ನು ಕರೆತರಲಾಗದಿದ್ದರೆ ನಾನು ಸರಯೂ ನದಿಯಲ್ಲೇ ಮುಳುಗಿದೆ ಅಂತಿಟ್ಟುಕೋʼ ಎಂದು ಸವಾಲೆಸೆದು ಅಯೋಧ್ಯಾ ಕಡೆಗೆ ಹೊರಟಳು.

ಹೀಗೆ ಹೊರಡುವ ರಾಣಿ, ತಾನು ಹೊರಡುವ ಮೊದಲು, ರಾಜನಿಗೂ ಗೊತ್ತಾಗದಂತೆ ತನ್ನ ಸೇವಕರಿಗೆ ಓರ್ಛಾದಲ್ಲಿ ತನ್ನ ರಾಣೀವಾಸದ ಪಕ್ಕದಲ್ಲೇ ಈಗಿನಿಂದಲೇ ನಾನು ಕರೆತರುವ ರಾಮನಿಗಾಗಿ ದೇವಾಲಯವೊಂದನ್ನು ಕಟ್ಟಲು ಆರಂಭಿಸಿ ಎಂದು ಅಪ್ಪಣೆಕೊಟ್ಟು ಅಯೋಧ್ಯೆಯ ಕಡೆಗೆ ಪ್ರಯಾಣ ಆರಂಭಿಸುತ್ತಾಳೆ.

ಅಯೋಧ್ಯೆ ತಲುಪುವ ರಾಣಿ ಕಠೋರ ತಪಸ್ಸು ಮಾಡಿಯೇ ಮಾಡಿದಳು, ದಿನಗಟ್ಟಲೆ, ವಾರಗಟ್ಟಲೆ. ರಾಮ ಪ್ರತ್ಯಕ್ಷನಾಗಲೇ ಇಲ್ಲ. ʻಸರಿ ಇನ್ನೇನು ಮಾಡಲಿ ಎಂದು ಸರಯೂ ನದಿಗೆ ಹಾರಿ ಪ್ರಾಣತ್ಯಾಗವೇ ಸರಿʼ ಎಂದು ನದಿಗೆ ಹಾರಲು ಮುಂದಾದಾಗ, ಎಲ್ಲ ಕಥೆಗಳಲ್ಲಿರುವಂತೆ, ಈ ಕಥೆಯಲ್ಲೂ ಯಥಾವತ್‌ ಟ್ವಿಸ್ಟ್. ಕಥೆ ಕೇಳುವ ನಾವು ನೀವೆಲ್ಲ ಅಂದುಕೊಳ್ಳುವಂತೆ,‌ ಬಾಲರಾಮ ಪ್ರತ್ಯಕ್ಷನಾಗುತ್ತಾನೆ!

ರಾಣಿ ರಾಮನೊಂದಿಗೆ ಹೊರಟು ನಿಂತಾಗ, ರಾಮ ತನ್ನ ಷರತ್ತುಗಳನ್ನು ಮುಂದಿಟ್ಟ. ʼನಾನು ಕೇವಲ ಪುಷ್ಯ ನಕ್ಷತ್ರದ ದಿನ ಮಾತ್ರ ಪ್ರಯಾಣಿಸುತ್ತೇನೆ. ಪುಷ್ಯ ನಕ್ಷತ್ರದ ಅವಧಿ ಮುಗಿದಾಕ್ಷಣ ಅಲ್ಲೇ ನಿಂತುಬಿಡುತ್ತೇನೆ, ಇನ್ನೊಂದು ಪುಷ್ಯ ನಕ್ಷತ್ರ ಬರುವವರೆಗೆ. ಹೀಗೆ ಹೋಗಿ ನಿನ್ನೂರು ತಲುಪಿದ ಮೇಲೆ ಅಲ್ಲಿ ನಂತರ, ಅಲ್ಲಿಗೆ ನಿನ್ನ ಗಂಡ ರಾಜನಲ್ಲ. ನಾನೇ ರಾಜ. ಈ ಷರತ್ತಿಗೆ ಒಪ್ಪಿದಲ್ಲಿ ಮಾತ್ರ  ಪಯಣ.’ ರಾಣಿ ಒಪ್ಪಿದಳು.

ರಾಮನನ್ನು ಮಡಿಲಲಿರಿಸಿ ರಾಣಿ ನಡೆದಳು, ಹೀಗಾಗಿ, ಈ ಪಯಣಕ್ಕೆ ಬರೋಬ್ಬರಿ ಎಂಟು ತಿಂಗಳು ೨೭ ದಿನಗಳೇ ತಗುಲಿತು (೧೫೭೪-೭೫ರ ಮಧ್ಯೆ) ಎನ್ನುತ್ತದೆ ಇಲ್ಲಿನ ಗೋಡೆಬರಹ.

ಇತ್ತ ರಾಜನಿಗೊಂದು ಕನಸು ಬಿತ್ತು. ʼಬಾಂಕೇ ಬಿಹಾರಿ ಕನಸಿನಲ್ಲಿ ಬಂದು ನನ್ನ ಮತ್ತು ರಾಮನ ನಡುವೆ ಯಾಕೆ ತಂದಿಟ್ಟೆ? ನಾವಿಬ್ಬರೂ ಒಂದೇ ಅಲ್ಲವೇ!’ ಎಂದಾಗ ರಾಜನಿಗೆ ತನ್ನ ತಪ್ಪಿನ ಅರಿವಾಯಿತು. ಅಷ್ಟರಲ್ಲಿ ರಾಣಿ ಇತ್ತ ಕಡೆಗೆ ಬರುತ್ತಿರುವ ವಿಚಾರ ತಿಳಿದು ಸ್ವಾಗತಿಸಲು ಆನೆ ಕುದುರೆಗಳೊಂದಿಗೆ ಸಜ್ಜಾದ. ಆದರೆ ರಾಣಿ ಈ ಎಲ್ಲ ಅದ್ದೂರಿಗಳನ್ನು ತಿರಸ್ಕರಿಸಿ ತಾನು ನಿರ್ಮಿಸಲು ಹೇಳಿದ ದೇವಾಲಯದಲ್ಲಿ ಈ ಬಾಲರಾಮನನ್ನು ಪ್ರತಿಷ್ಠಾಪಿಸುವ ಯೋಚನೆಯಲ್ಲಿ ಮಗುವಿನೊಂದಿಗೆ ರಾಣೀವಾಸ ಹೊಕ್ಕು ಕುಳಿತು ರಾತ್ರಿ ಕಳೆದಳು.

ಬೆಳಗ್ಗೆ ಎದ್ದು ದೇವಾಲಯಕ್ಕೆ ರಾಮನನ್ನು ಕರೆದೊಯ್ಯಲೆಂದು ನೋಡಿದರೆ, ಆಗಲೇ ರಾಮ ಮೂರ್ತಿ ರೂಪ ತಳೆದು ರಾಣಿವಾಸದಲ್ಲೇ ಪ್ರತಿಷ್ಠಾಪಿಸಲ್ಪಟ್ಟಿದ್ದಾನೆ! ಹೀಗಾಗಿ ರಾಣಿ ಮಹಲೇ ರಾಜಾರಾಮ ದೇವಾಲಯವಾಗಿಬಿಟ್ಟಿತು. ದೇವಾಲಯ ಅನಾಥವಾಯಿತು. ರಾಣಿಯ ಮಾತಿನಂತೆ ರಾಮ ಓರ್ಛಾಕ್ಕೆ ರಾಜನಾದ. ರಾಮರಾಜನಾದ! ಆಮೇಲೆ ಎಂದೆಂದಿಗೂ ಓರ್ಛಾದಲ್ಲಿ ಇದೇ ರಾಮನಿಗೆ ರಾಜನೆಂಬ ಮರ್ಯಾದೆ. ರಾಮನ ಹೆಸರಿನಲ್ಲಿ ರಾಜ್ಯಭಾರ!

ಮಧ್ಯಪ್ರದೇಶದ ನಿವಾರಿ ಜಿಲ್ಲೆಯ ಈ ಓರ್ಛಾ ಎಂಬ ಪುಟಾಣಿ ಪಟ್ಟಣದ ಘಮವೇ ಅಂಥಾದ್ದು. ಬುಂದೇಲ್ ಖಂಡದ ರಾಜ ರುದ್ರ ಪ್ರತಾಪ ಸಿಂಗ್‌ ಕಟ್ಟಿದ ಊರು. ಚರಿತ್ರೆಯ ಪುಟಗಳಲ್ಲಿ ಮಿಂಚಿದ ರಾಣಿ ಲಕ್ಷ್ಮೀಬಾಯಿಯ ಝಾನ್ಸಿಯಿಂದ ೧೫ ಕಿ ಮೀ ದೂರವಷ್ಟೇ. ಹಾಗಾಗಿ ಝಾನ್ಸಿಯ ಪ್ರಖರ ಬೆಳಕಿನೆಡೆಯಲ್ಲಿ ನೆರಳಾಗಿ ಉಳಿದು ಕಾಣದೆ ಹೋದದ್ದೇ ಹೆಚ್ಚು. ಆದರೆ ಝಾನ್ಸಿಗಿಂತಲೂ ಒಂದು ಪಟ್ಟು ಹೆಚ್ಚು ಚೆಂದನೆಯ ತಾನಿರುವ ರೀತಿಯಲ್ಲೇ ಮೌನವಾಗಿ ಕಥೆ ಹೇಳುವ ಸೌಮ್ಯ ಪಟ್ಟಣ.

ಒಂದೆಡೆ, ಬೆಟ್ವಾ ನದಿದಂಡೆಯಲ್ಲಿ ಕುಳಿತೆವೆಂದರೆ ಎತ್ತರೆತ್ತರದ ಕೋಟೆ ಕೊತ್ತಲಗಳು, ಇನ್ನೊಂದೆಡೆಯಲ್ಲಿ ಆಗಸವನ್ನು ಮುಟ್ಟೇಬಿಟ್ಟೀತೆಂದು ಕಾಣುವ ಚತುರ್ಭುಜ ದೇವಾಲಯದ  ಗೋಪುರ, ನದಿನೀರಿನಲ್ಲಿ ತನ್ನ ಬಿಂಬ ನೋಡುತ್ತಾ ನಿಂತ ಓರ್ಛಾದ ಹೆಸರಿಗೇ ಅನ್ವರ್ಥವಾಗುವ ಸಾಲು ಸಾಲು ೧೪ ರಾಜರ ಸ್ಮಾರಕಗಳು, ನದಿ ದಾಟಿದರೆ ಸಿಗುವ ಓರ್ಛಾ ರಾಷ್ಟ್ರೀಯ ಉದ್ಯಾನ! ಒಂದು ಪುಟಾಣಿ ಊರೊಳಗಿನ ಹಲವು ಜಗತ್ತಿಗೊಂದು ಬೆಸ್ಟ್‌ ಉದಾಹರಣೆಯಿದು.

ಜಮ್ಮುವಿನ ರಘುನಾಥ ದೇವಾಲಯದಿಂದ ಮೊದಲ್ಗೊಂಡು ಅಯೋಧ್ಯೆಯೂ ಸೇರಿ ದಕ್ಷಿಣತುದಿಯ ಇನ್ಯಾವುದೋ ಸಾಮಾನ್ಯ ರಾಮಮಂದಿರದವರೆಗೆ ಎಲ್ಲೂ ರಾಮನನ್ನು ರಾಜನಾಗಿ ಪೂಜಿಸುವ ಪರಂಪರೆ ಇಲ್ಲ. ಬಹುಶಃ ಭಾರತದಲ್ಲಿ ಇಂದಿಗೂ ರಾಮನನ್ನು ರಾಜನನ್ನಾಗಿ ನೋಡಿ ಪೂಜಿಸುವ ಏಕೈಕ ಮಂದಿರವೆಂದರೆ ಇದು.

ದೇವಸ್ಥಾನವೆಂದರೆ ದೇವಸ್ಥಾನವೂ ಅಲ್ಲ. ಅರಮನೆಯಂತಹ ಆವರಣದ ಗರ್ಭಗೃಹದೊಳಗೆ ಪದ್ಮಾಸನ ಹಾಕಿ ಕೂತ ರಾಮ. ರಾಜನ ರೂಪದಲ್ಲಿ ಒಂದು ಕೈಯಲ್ಲಿ ಖಡ್ಗ, ಇನ್ನೊಂದರಲ್ಲಿ ಗುರಾಣಿ. ತೀರ್ಥ ಪ್ರಸಾದವೂ ಇಲ್ಲಿ ದೊರೆಯುವುದಿಲ್ಲ. ಪ್ರಸಾದವಾಗಿ ಊಟವೇ ನೀಡಲಾಗುತ್ತದೆ. ಪೂಜೆಯೂ ಭಿನ್ನ. ಪ್ರತಿದಿನವೂ ರಾಜನ ಸೈನಿಕ ವೇಷಧಾರಿಯಾಗಿರುವ ದೇವಾಲಯದ ಕಾವಲುಗಾರ ರಾಜನಿಗೆ ನೀಡುವ ಸೇನಾ ಮರ್ಯಾದೆಯ ನಂತರವಷ್ಟೇ ಪೂಜೆ ಆರಂಭವಾಗುತ್ತದೆ.

ಹೇಗೆ ಮಥುರಾ ಬೃಂದಾವನ ಸುತ್ತುವಾಗ ಎಲ್ಲೆಲ್ಲೂ ಕೃಷ್ಣ-ರಾಧೆಯರನ್ನು ಬಿಟ್ಟು ಬೇರೆ ಜಗತ್ತಿಲ್ಲ ಅನಿಸುತ್ತದೋ, ಅಯೋಧ್ಯೆಯ ಗಲ್ಲಿಗಳಲ್ಲಿ ತಿರುಗಾಡುವಾಗ ರಾಮನಿಲ್ಲದೆ ಜಗವಿಲ್ಲ ಎಂಬ ಬೇರೆಯದೇ ಜಗತ್ತು ಕಾಣಿಸುತ್ತದೋ, ಕಾಶಿಯಲ್ಲಿ ಎಲ್ಲೇ ಸುತ್ತಿದರೂ ಗಂಗೆ- ವಿಶ್ವನಾಥ ಬಿಟ್ಟರೆ ಎಲ್ಲವೂ ಗೌಣ ಎನಿಸುತ್ತದೋ, ಗೋಲ್ಡನ್‌ ಟೆಂಪಲ್‌ ಸುತ್ತು ಹಾಕಿದಾಗ ಎಲ್ಲವೂ ವಾಹೆಗುರುವಾಗುತ್ತದೋ, ಧರ್ಮಶಾಲಾದ ಗಲ್ಲಿಗಲ್ಲಿಯೂ ಬುದ್ಧಂ ಶರಣಂ ಗಚ್ಛಾಮಿಯಾಗಿ ಫೀಲಾಗುತ್ತದೋ ಹಾಗೆಯೇ ಈ ಪುಟಾಣಿ ಊರು ಅಯೋಧ್ಯೆಯ ಹಾಗೆಯೇ ಹಗಲಿರುಳು ರಾಮನಾಮವಾಗುತ್ತದೆ. ಇನ್ನೂ ಒಂದು ಪಟ್ಟು ಹೆಚ್ಚೇ ಎಂಬಂತೆ ರಾಮ ಎಂದರೆ ನಮ್ಮನಿಮ್ಮಂತೆ ಒಬ್ಬ ಸಾಮಾನ್ಯ, ಪ್ರಜೆಗಳ ಕಷ್ಟಸುಖಗಳನ್ನರಿವ ರಾಜನೆಂಬ ಪರಮಾಪ್ತ ಸಖನೆಂಬ ಭಾವನೆ ಇಲ್ಲಿನ ಜನರದ್ದು. ನಮ್ಮ ದೇಶದ ಮಹಿಮೆಯೇ ಅಂಥಾದ್ದು.

ಅಯೋಧ್ಯೆಯ ರಾಮನನ್ನು ರಾಜನ ರೂಪದಲ್ಲಿ ನೋಡಿದ್ದೇವೆ. ರಾಮರಾಜ್ಯದ ಕಲ್ಪನೆ ಕೇಳಿದ್ದೇವೆ. ಇಡೀ ರಾಮಾಯಣ ಕೇಳಿ ನೋಡಿ ಓದಿ ಬಲ್ಲೆವು. ಹತ್ತುಹಲವು  ರಾಮ ಮಂದಿರಗಳನ್ನು ನೋಡಿದ್ದೇವೆ. ಅವುಗಳ ವಿಶೇಷತೆಗಳನ್ನೂ ಕೇಳಿದ್ದೇವೆ. ಮಂದಿರದ ಹೆಸರೆತ್ತಿದರೆ ಆಗುವ ರಾಜಕೀಯ ಧಾರ್ಮಿಕ ಅಲ್ಲೋಲಕಲ್ಲೋಲಗಳೂ ಗೊತ್ತು. ಆದರೀಗ ಇದೆಲ್ಲವನ್ನು ಸ್ವಲ್ಪ ಸೈಡಿಗಿಟ್ಟು ಹೇಳಿದ ಕಥೆಯಿದು.

ರಾಜಕೀಯಗಳನ್ನೆಲ್ಲ ಮರೆತು, ಅವನ್ನೆಲ್ಲ ಎಡ ಬಲಗಳೆಂಬ ಬಣ್ಣದ ಬೇಗಡೆಯಿಂದು ನೋಡದೆ, ನಮ್ಮ ಬಾಲ್ಯಕ್ಕಿಳಿದು ಮತ್ತೆ ಅದೇ ಎಳೆಕಿವಿಗಳಿಂದಲೇ ಇಂತಹ ಕಥೆಗಳನ್ನು ಕೇಳಿದಾಗ ಆಗುವ ಅನುಭಾವವೇ ಬೇರೆ.

ಕೊನೆಗೊಂದು ಸರ್ಪ್ರೈಸು:
ಓರ್ಛಾ, ಖಜುರಾಹೋಗಳೆಲ್ಲ ಮುಗಿದು ಮನೆಗೆ ಮರಳಿದ್ದೂ ಆಗಿತ್ತು. ಎಂದಿನಂತೆ ನಮ್ಮ ಅಪಾರ್ಟ್‌ಮೆಂಟಿನ ಸೆಕ್ಯೂರಿಟಿ ತಿವಾರಿ ಅಂಕಲ್‌, ʻಈ ಬಾರಿ ಎಲ್ಲಿಗೆ ಸವಾರಿ ಬಿಟ್ಟಿದ್ರಿ? ಒಂದು ವಾರ ಕಾಣೆಯಾದಂಗಿತ್ತು! ಎಂದು ಮಗನ ಕೆನ್ನೆ ಹಿಂಡುತ್ತಾ ತಮ್ಮ ಎಂದಿನ ಶೈಲಿಯಲ್ಲಿ ಮಾತಿಗೆಳೆದರು. ʻಮಧ್ಯಪ್ರದೇಶʼ ಎಂದೆ ನಾನು. ʻಅರೆ, ನಾನೂ ಮಧ್ಯಪ್ರದೇಶವನೇ! ಮಧ್ಯಪ್ರದೇಶದಲ್ಲಿ ಎಲ್ಲಿಗೆ ಹೋಗಿದ್ರಿ?ʼ ಎಂದರು ಕುತೂಹಲದಿಂದ. ʻಖಜುರಾಹೋʼ ಎಂದೆ ನಾನು. ʻನಾನೂ ಖಜುರಾಹೋ ಪಕ್ಕದವನೇ. ಝಾನ್ಸಿ ಗೊತ್ತಾ ನಿಮ್ಗೆ? ಅದ್ರ ಹತ್ತಿರವೇ ಇರೋ ಊರು, ಓರ್ಛಾ ಅಂತ ನನ್ನೂರುʼ ಎನ್ನಬೇಕೇ!!!

ಅರೆ ಇದೊಳ್ಳೆ ಮಜಾ ಆಯ್ತಲ್ಲಾ ಅಂತ ನಾನು, ʻಓರ್ಛಾದಲ್ಲೂ ಇದ್ವಿ ಒಂದಿನʼ ಅಂದ್ನಾ, ʻಹೌದಾ? ನನ್ನೂರಲ್ಲಿದ್ರಾ? ಛೇ, ಮೊದ್ಲೇ ಹೇಳೋದಲ್ವಾ, ನಮ್ಮನೇಲೇ ಉಳ್ಕೊಳ್ಳೋಕೆ ವ್ಯವಸ್ಥೆ ಮಾಡ್ತಿದ್ದೆ. ನನ್ಹೆಂಡ್ತಿ ಮಕ್ಳು ಎಲ್ಲ ಅಲ್ಲೇ ಇರೋದು, ಅಲ್ಲಿ ರಾಮರಾಜ ದೇವಸ್ಥಾನ ಇದ್ಯಲ್ಲಾ? ಅದ್ರ ಹಿಂದಿನ ಗಲ್ಲಿಲೇ ಇದೆ ನಮ್ಮನೆ, ಇನ್ನೊಮ್ಮೆ ಬನ್ನಿ, ಓರ್ಛಾ ಫುಲ್ಲು ತೋರಿಸುವೆ. ಚೆಂದದೂರು ಗೊತ್ತಾ ನಮ್ಮೂರುʼ ಅಂತ ಹೇಳುತ್ತಾ ಹೇಳುತ್ತಾ ಎಲ್ಲೋ ಕಳೆದುಹೋದರು. ನಾನೂ ನಿಂತಲ್ಲೇ…!

‍ಲೇಖಕರು ರಾಧಿಕ ವಿಟ್ಲ

September 6, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: