ಹುಳಿಯುಣಿಸಿ, ಸವಿ ನೆನಪಾಗುವ ಪುಂಡಿ

ಹೆಸರೇ ಅನಾಮಿಕಾ ಹಾಗಾಗಿಯೇ ಈಕೆ ಅನಾಮಿಕೆ .

ಹೆಸರು ಹೇಳಲು ಒಲ್ಲದ ಈಕೆ ಭೋಜನಪ್ರಿಯೆ ಅಂತ ಬಿಡಿಸಿ ಹೇಳಬೇಕಿಲ್ಲವಲ್ಲ. ಅದು ಎಷ್ಟು ಖರೆ ಎಂದು ನಮಗೂ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ನಿಜ. ಭೋಜನಕ್ಕೆ ನಮ್ಮನ್ನು ಬಡಿದೆಬ್ಬಿಸುವಂತೆ ಈಕೆ ಬರೆಯುತ್ತಾಳೆ.

ಅಷ್ಟೇ ಆಗಿದ್ದರೆ ಇದನ್ನು ಒಂದು ‘ರಸ ರುಚಿ’ ಕಾಲಂ ಹೆಸರಿನಡಿ ಸೇರಿಸಿ ನಾವು ಕೈ ತೊಳೆದುಕೊಳ್ಳುತ್ತಿದ್ದೇವೇನೋ..!

ಆಕೆಗೆ ಒಳಗಣ್ಣಿದೆ. ಒಂದು ಆಹಾರ ಹೇಗೆ ಒಂದು ಸಂಸ್ಕೃತಿಯ ಭಾಗವಾಗಿ ಬರುತ್ತದೆ ಎನ್ನುವುದರ ಬಗ್ಗೆ ಹಾಗೂ ಹೇಗೆ ಆಹಾರ ಒಂದು ಸಂಸ್ಕೃತಿಯನ್ನು ರೂಪಿಸುತ್ತದೆ ಎನ್ನುವುದರ ಬಗ್ಗೆಯೂ…

ಹಾಗಾಗಿಯೇ ಇದು ರಸದೂಟವೂ ಹೌದು ಸಮಾಜ ಶಾಸ್ತ್ರದ ಪಾಠವೂ ಹೌದು.

ಗಣಪತಿ ಬಪ್ಪಾ ಮೋರಯಾ‍

ಪುಂಡಿಪಲ್ಯ ಸೋರಯಾ

ಹಿಂಗ ಗಂಟಲಿನ ನರಗಳೆಲ್ಲ ಬಿಗಿಯೂಹಂಗ ಚೀರ್ತಿದ್ವಿ. ಅವಾಗ ಅನಿಸ್ತಿತ್ತು.. ಈ ಪುಂಡಿ ಪಲ್ಯ ಎಲ್ಲಿ ಸೋರ್ತದ ಅಂತ. 

ಆಮೇಲೆ ಗೊತ್ತಾಯ್ತು.. ಅದು ಸೋರಯಾ ಅಲ್ಲ, ಸವರಯಾ ಅಂತ. ಆಮೇಲೆ ಪುಂಡಿ ಪಲ್ಯ ಅನ್ನೂ ಮುಂದೆಲ್ಲ ಮುಸಿಮುಸಿ ನಗ್ತಿದ್ವಿ. ಆ ಪು ಬಗ್ಗೆ ಯಾವಾಗಲೂ ಸಣ್ಣದೊಂದು ಸಂಶಯ ಇದ್ದೇ ಇರ್ತಿತ್ತು.  ನಿಮಗ ಪುಂಡಿ ಪಲ್ಯ ಅಂದ್ರ ತಿಳೀತಿಲ್ಲೊ.. ಅದೇ ನಮ್ಮ ಆಂಧ್ರದೋರು ಗೊಂಗುರಾ ಅಂತಾರಲ್ಲ.. ಅದೇ ಪಲ್ಯ.

ಎಲಿ ಬಾಯಿಗಿಟ್ರ ಹುಳಿರಸ ಬರ್ತದ. ಅಷ್ಟೇ ಅಲ್ಲ, ನಮ್ಮ ಲಾಲಾರಸ ಉತ್ಪತ್ತಿ ಮಾಡುವ ಎಲ್ಲ ಗ್ರಂಥಿಗಳೂ ಇದ್ದಕ್ಕಿದ್ದಂಗ ಚುರುಕಾಗಿ, ಚಟುವಟಿಕೆ ಆರಂಭಿಸ್ತಾವ. ಬಾಯಾಗೆಲ್ಲ ಜಲಪಾತದ ಪಕ್ಕ ಸಿಡಿಯುವ ನೀರ ಸಿಂಚನದ ಅನುಭವ.. ಈ ‍‍ಪಲ್ಯ ನೆನೆಸಿದಾಗ.  

ಬ್ಯಾಸಗಿಯೊಳಗೇನರೆ ಪುಂಡಿ ಪಲ್ಯ ಸಿಕ್ತು ಅಂದ್ರ, ಜೋಳದ ನುಚ್ಚಿನ ಜೊತಿಗೆ ಬೆರೀಬೇಕು. ಹಸಿರು ಮೈಮ್ಯಾಲೆ ಬಿಳಿಮುತ್ತು ಹೊದ್ದಂತ ಈ ಪಲ್ಯ ಹುಳಿಯೆಲ್ಲ ನಂದು ಅಂತ ನುಚ್ಚು ಬೀಗುತ್ತದೆ. ಬಿಳಿ ರೊಟ್ಟಿ ಮ್ಯಾಲೆ ನುಚ್ಚಿನ ಈ ಪಲ್ಯ ಹಾಕ್ಕೊಂಡ್ರ ಒಲಿಮ್ಯಾಲೆ ಎಣ್ಣಿ ಕಾಯ್ತಿರ್ತದ. ಬಿಸಿಯೆಣ್ಣಿಗೆ ಸಾಸಿವಿ, ಜೀರಗಿ, ಬಳ್ಳೊಳ್ಳಿ ಭಾಳಷ್ಟು ಹಾಕಿ ಖಮ್ಮಗ ಮಾಡಿರ್ತಾರ. ಇದಕ್ಕ ಕಾದೆಣ್ಣಿ ಅಂತಾರ.

ನಮ್ಮ ಕಾರವಾರದ ಬಿಳಿ ಉಸುಕಿನೊಳಗ ಅಂಗಾತ ಮಲಗಿರುವ ಚೆಲುವಿ ಹಂಗ ಪಲ್ಯೆ ಹರಡಿರ್ತದ. ಅದರ ಮ್ಯಾಲೆ ಈ ಕಾದೆಣ್ಣಿ ಹುಯ್ದು, ಹಸಿಮೆಣಸಿನಕಾಯಿ ಜೊತಿ ತಿಂತಾರ.. ಏನು ರುಚಿ ಅದು.. ಏನ್ತನ.. ಬಾಯೊಳಗೊಮ್ಮೆ, ಹುಳಿ, ಖಾರ, ಬಳ್ಳೊಳ್ಳಿ ಘಮ ಎಲ್ಲ ಕೂಡಿ ಬರ್ತಾವು. ರೊಟ್ಟಿ ಎಣಸೂಹಂಗಿಲ್ಲ, ಪಲ್ಯ ಬಿಡೂಹಂಗಿಲ್ಲ. 

ಬೀದರ್‌, ವಿಜಯಪುರ, ರಾಯಚೂರ, ಕಲಬುರ್ಗಿಯವರಿಗೆ ಇಷ್ಟೇ ಆದ್ರ ಸಾಲೂದಿಲ್ಲ. ಮತ್ತ ಎಳೀ ಮೆಣಸಿನಕಾಯಿ ತಂದು, ಉದ್ದಾನುದ್ದ ಹೊಟ್ಟಿ ಸೀಳಿ, ಅದರೊಳಗೊಂಚೂರು ಜೀರಗಿಪುಡಿ ತುಂಬಿ, ಬಿಸಿಯೆಣ್ಣಿಯೊಳಗ ತಾಳಸ್ತಾರ… ಬಾಳಸ್ತಾರ.. ಅಂದ್ರ ಹಸಿಮೆಣಸು ತನ್ನ ತಾಜಾತನ ಕಳಕೊಬಾರದು. ಕೆಂಪಾಗಬಾರದು, ಕಂದಾಗಬಾರದು. ಹಂಗ.. ಅದಕ್ಕ ಯಾವ ಜನ್ಮದ ಶತ್ರು ಇದು ಅನ್ನೂಹಂಗ ಗಾಯದ ಮ್ಯಾಲೆ ಉಪ್ಪು ಸುರೀತಾರ. ಅದನ್ನ ಪ್ರತಿ ತುತ್ತಿಗೆ ಒಮ್ಮೆ ಕಚ್ಚಿ ಕಚ್ಚಿ ತಿಂತಾರ.. 

ಹಿಂಗ ಬ್ಯಾಸಗಿ ಬಿಸಿಲಿಗೆ ಬೆವರಿಳಿಸ್ಕೊಂತ ಉಂಡ್ರಂದ್ರ ಪಾಪ.. ಸೂರ್ಯ ಸುಮ್ನೆ ಬೈಸ್ಕೊತಾನ. ತಾವುಣ್ಣುವ ಖಾರಕ್ಕ, ಸ್ವೇದಗ್ರಂಥಿಗಳೆಲ್ಲ ಬಾಯ್ಬಿಟ್ಕೊಂಡು ಬೆವರು ಸುರಸ್ತಾವ. ವರಸ್ಕೊಂಡು ವರಸ್ಕೊಂಡು ಮುಖ, ಕತ್ತು ಕೆಂಪಾಗಿರ್ತದ.  ಆದರೂ ಪುಂಡಿಪಲ್ಯೆ ಇದ್ರ ಒಂದೆರಡು ರೊಟ್ಟಿ ಹೆಚ್ಗಿನೆ ಹೊಟ್ಟಿಗಿಳೀತಾವ. ಬುಟ್ಟಿ ತುಂಬಾ ರೊಟ್ಟಿ, ಬೊಗೊಣಿ ತುಂಬಾ ಪಲ್ಯ, ಬಾಣಲಿ ತುಂಬಾ ಮೆಣಸಿನಕಾಯಿ, ಬಟ್ಟಲತುಂಬಾ ಬೆಣ್ಣಿ, ಮಿಳ್ಳಿ ತುಂಬಾ ಕಾದೆಣ್ಣಿ ಇಟ್ಕೊಂಡು ಕುಂತ್ರ, ಉಂಡೇಳುಮುಂದ ಹೊಟ್ಟಿ ವಜ್ಜಿ, ಪಾತ್ರಿ ಖಾಲಿ. 

ಇದು ಖಟಿರೊಟ್ಟಿ, ಬಿಸಿರೊಟ್ಟಿ. ತಂಗಳ ರೊಟ್ಟಿ, ಸಜ್ಜಿರೊಟ್ಟಿ ಯಾವುದಕ್ಕಾದರೂ ಸಾಥ್‌ ಕೊಡ್ತದ. ಸಂಗೀತಗಾರರಿಗೆ ಸಾಥಿ ಕೊಟ್ಟಂಗ. ಇನ್ನೊಂದು ಥರ ಪಲ್ಯೆ ಮಾಡ್ತಾರ. ಮುದ್ದಿ ಪಲ್ಯ ಮಾಡಿದ್ಹಂಗ. ಈ  ಮುದ್ದಿ ಪಲ್ಯ ಏನಂತ ಇನ್ನೊಮ್ಮೆ ಹೇಳ್ತೀನಿ. ಇದರೊಳಗ ತೊಗರಿಬ್ಯಾಳಿ, ಪಾಲಕ್‌, ಮೆಂತ್ಯ ಜೊತಿಗೆ ಪುಂಡಿ ಪಲ್ಯೆ ಸೇರಿಸಿ ಬೇಯಸೂದು. ಅಗ್ದಿ ನುಣ್ಣಗ. ಅಮ್ಮ ಉಟ್ಟುಟ್ಟು ಹಳೀದಾಗಿರುವ ಹಳದಿಬಣ್ಣದ ಸೀರಿಯೊಳಗಿನ ಹಸಿರು ಲತೆಗಳ ಪ್ರಿಂಟ್‌ನ್ಹಂಗ ಕಾಣುವ ಪುಂಡಿ ಪಲ್ಯ ತನ್ನ ಅಸ್ತಿತ್ವನ ಕಳಕೊಂಡಿರ್ತದ.

ಸಾರಿನಷ್ಟು ಅಳ್ಳಕಲ್ಲ, ಪಲ್ಯದಷ್ಟು ಗಟ್ಟಿಯಲ್ಲ. ಮಧ್ಯಮ ವ್ಯಾಯೋಗದ್ಹಂಗ ಇತ್ತಾಗೂ ಸೈ, ಅತ್ತಾಗೂ ಜೈ ಅನ್ನುಹಂಗಿರ್ತದ. ಇದಕ್ಕ ಮೊದಲ ದಿನ ಪೂರಿ ದಿ ಬೆಸ್ಟ್‌ ಕಾಂಬಿನೇಷನ್ನು. ಎರಡನೆಯ ದಿನ ಚಪಾತಿ, ಮೂರನೆಯ ದಿನ ರೊಟ್ಟಿ… ಮೂರಲ್ಲ ಆರುದಿನ ಇಟ್ರೂ ಹಳಸೂದಿಲ್ಲ. ಆದ್ರ ಆರು ದಿನ ಉಳಿಯೂದಿಲ್ಲ ಅನ್ನೂದು ಅಷ್ಟೇ ಖರೆ.

ಇಂತಿಷ್ಟು ಈ ಪಲ್ಯ ಬುತ್ತಿಯೂಟಕ್ಕ ಹೇಳಿಮಾಡಿಸಿದ್ದು. ಒಂದ್ಸಲೆ ಮಾಡಿದ್ರ ಮೂರು ದಿನಾ ಆದ್ರೂ ಹಾಳಾಗುವುದಿಲ್ಲ. ಅದಕ್ಕೆ ಬಸುರಿಯರಾದಾಗ ಈ ಪಲ್ಯ ಬಯಕಿಯೂಟದಾಗ ಇದ್ದೇ ಇರ್ತದ. ಮತ್ತ ಸಾಕಷ್ಟು ವಿಟಾಮಿನ್‌ ಸಿ ಸಿಗ್ತದ. ಈ ಕಾರಣಕ್ಕ ನೆಗಡಿ ಆದಾಗ ತಿನ್ನಾಕ ಕೊಡ್ತಾರ. ಯಾವುದೇ ದೇವರಿಗೆ ಪಾದಯಾತ್ರೆ ಹೊರಟ್ರೂ ಈ ಪಲ್ಯಕ್ಕೂ ಒಂದು ಸ್ಥಾನ ಇದ್ದದ್ದೇ.

ಕೆಲವರಿಗಿದು ಒಗ್ಗೂದಿಲ್ಲ. ಬದನೆಕಾಯಿ, ಪುಂಡಿಪಲ್ಯ ಒಂದೇ ದಿನ ಮಾಡೂದಿಲ್ಲ. ನಂಜು ಅಂತಾರ. ವಾತ ಅಂತಾರ. ಮತ್ತೆಷ್ಟು ಇದ್ದರೂ ಪುಂಡಿಪಲ್ಯ ಇದ್ದಾಗ ಮತ್ತ ಬ್ಯಾರೆ ಪಲ್ಯೆ ಮನಸು ಬಯಸೂದೆ ಇಲ್ಲ. ಇದಕ್ಕ ಇನ್ನಾ ರುಚಿ ಹೆಚ್ಚಿಸಬೇಕಂದ್ರ ರಾತ್ರಿ ನುಚ್ಚಿನ ಜೊತಿಗೆ ಸೇಂಗಾನೂ ನೆನಿಸಿಟ್ಟು, ಪಲ್ಯಕ್ಕ ಬೆರಸ್ತಾರ. 

 ಗಂಡಹೆಂಡಿರ ಸಂಬಂಧ ಉಂಡು ಮಲಗುವ ತನಕ ಅಂತಾರಲ್ಲ.. ಏನುಂಡು ಅಂತೇನರೆ ಗೊತ್ತದ ಏನು ನಿಮಗ.. ಈ ಪುಂಡಿಪಲ್ಯ ಉಂಡು ಮಲಗೂತನಕರಿ. ತಮ್ಮ ತಮ್ಮ ಹುಳಿ ಕಳಕೊಂಡು ಹದವಾಗಿ ಬೆರೆತು ಮಲಗಿದ್ರ… ಸ್ವರ್ಗ. ಇದಿಷ್ಟೂ ಬ್ಯಾಸಗಿ ಪಲ್ಯ ಸಂಗ್ತಿಯಾತು. ಮಳಿಗಾಲದಾಗ ಪುಂಡಿಪಲ್ಯ ಸಿಕ್ರ ಚಟ್ನಿ ಅರಿಯೂದೆ. ಎಲ್ಲ ಎಲಿ ಸೋಸಿಟ್ಟು, ಅದರಷ್ಟೇ ಉಳ್ಳಾಗಡ್ಡಿ ಸುಲದು, ಚೂರೆಚೂರು ಅಲ್ಲಾ (ಹಸಿಶುಂಠಿರಿ.. ಮತ್ತೇನರೆ ಅನ್ಕೊಂಡೀರಿ) ಹಾಕಿ, ಜೀರಗಿ ಒಗದು ಹಂಚಿನಮ್ಯಾಲೆ ಹುರೀಬೇಕು. ಬಾಣಲಿ ತುಂಬ ಇದ್ದ ಎಲಿ, ಬಟ್ಟಲಿಗಿಳಿಯುವಷ್ಟು ಮೆತ್ತಗಾಗಬೇಕು. ಹಂಗ ಮೆತ್ತಗಾದಾಗ ಒಂದಷ್ಟು ಬಿಳಿಯೆಳ್ಳು ಇದೇ ಪಾತ್ರಿಗೆ ಹಾಕಿ, ಒಲಿಯಾರಿಸಬೇಕು. ಎಲ್ಲ ತಣಿದ ಮ್ಯಾಲೆ ಮಿಕ್ಸಿಗೆ ಹಾಕಿ ಜುಂಯ್‌ ಅನಿಸಿದ್ರ.. ಎಳ್ಳಿನ ಜಿಗುಟು, ಎಲ್ಲಾ ಸೇರಿ ಹದವಾದ ಮಿಶ್ರಣ ಆಗ್ತದ. 

ಇದಕ್ಕೆ ಕಾದೆಣ್ಣಿ ಒಗ್ಗರಣಿ ಆಗಬೇಕು. ಒಂದೀಟು ಇಂಗು ಹಾಕಿರಬೇಕು. ಇನ್ನೇನು ಬೇಕ್ರಿ ನಿಮಗ.. ಈ ಚಟ್ನಿ ಒಂಥರಾ ಮಾಧುರಿ ದೀಕ್ಷಿತ್‌ ಇದ್ಹಂಗ. ವಿನೋದ್‌ ಖನ್ನಾ ಜೊತಿಗೂ ಜೈ. ಮಗ ಅಕ್ಷಯ್‌ ಖನ್ನಾನ ಜೊತಿಗೂ ಸೈ ಅನ್ನೂಹಂಗ ರೊಟ್ಟಿ, ದೋಸೆ, ಬ್ರೆಡ್ಡು, ಮಗಳು ಪೀಟ್ಜಾ ಮಾಡ್ತಿದ್ಲಂದ್ರ ಅದಕ್ಕೂ ಜೊತಿಯಾಗ್ತೇನಿ ಅಂತದ. ಅಂಥ ಹದ. ಎಂಥಾ ಮುದ… ತಿಂದೋರಿಗೆ ಗೊತ್ತಿದು.. ಈ ಪಲ್ಯ ಖುಷಿ.

ಬೆಂಗಳೂರಿಗೆ ಹೋದಾಗ ಆಂಧ್ರ ಮೆಸ್‌ನಾಗ ಗೊಂಗುರಾ ಚಟ್ನಿಯಾಗಿ ಕುಂತಿರ್ತದ, ಒಂದು ಭರಣಿಯೊಳಗ. ಹಸಿರು ಬಾಳಿ ಎಲಿ ಇಟ್ಕೂಡ್ಲೆ ಎಲ್ಲಾರೂ ಇದನ್ನ ಎಲಿಗೆ ಹಾಕ್ಕೊಂಡು, ತೋರು ಬೆರಳಿಗೂ, ನಾಲಗೆಯ ಮೇಲಿನ ರುಚಿಮೊಗ್ಗುಗಳಿಗೂ ಜುಗುಲ್ಬಂದಿ ಶುರು ಹಚ್ತಾರ.

ಇಲ್ಲಿ ಎಳೀಎಲಿಯನ್ನು ಎಣ್ಣಿಯೊಳಗ ಹುರೀತಾರ. ಅಲ್ಲಲ್ಲ.. ತಾಳಸ್ತಾರ. ಈ ಪದ ನನಗ ಭಾಳ ಸೇರ್ತದ. ಬೆನ್ನು ಸುಡುವಂಥ ಬಿಸಿಯೊಳಗ, ಮೈ ಹೊರಳಸ್ಕೊಂತ ತನ್ನ ಹೆಚ್ಚುವರಿ ಕಹಿ, ಹುಳಿ ಹಿಗೆ ಗುಣ ಕಳೆದುಕೊಳ್ಳುವ, ಹೊಸತೊಂದು ಸ್ವರೂಪಕ್ಕೆ ಒಗ್ಗಿಕೊಳ್ಳುವ, ಕಡುರುಚಿಯನ್ನು ಹದವಾಗಿಸುವ ಈ ಪ್ರಕ್ರಿಯೆ ತಾಳಿಸುವುದು.  ಅದೆಷ್ಟು ತಾಳ್ಮೆಯ, ಬಾಳಿಸುವ ಪಾಠಗಳು ಹೀಗೆ ಅಡುಗೆಮನೆಯಲ್ಲಿ ಕರಗತವಾಗ್ತಾ ಹೋಗ್ತವೋ.. ಗೊತ್ತಿಲ್ಲ. ಒಳಹೊರಗನ್ನು ಗಟ್ಟಿಯಾಗಿಸುತ್ತ ಹೋಗುತ್ತವೆ. 

ಹಿಂಗ ಇಷ್ಟೆಲ್ಲ ರೂಪಬದಲಾವಣೆ ಮಾಡಿದ ಪಲ್ಯ ರುಚಿಯಾಯ್ತು ಅಂತ ಅತಿಯಾಗಿ ತಿಂದರೆ.. ಪುಂಡಿಪಲ್ಯ ಸೋರಯಾ ಅಂತ ಚೀರ್ತೀವಲ್ಲ.. ಹಂಗ ಹೊಟ್ಟಿ ಜಾಡಿಸಿ ಸೋರಸ್ತದ…  ಇದಕ್ಕ ಹೆಸರೂ ಅಷ್ಟೆ ಚಂದ ಅದಾವ. ಪುಂಡಿಪಲ್ಯ, ಹುಳಿಪಲ್ಯ, ಗೊಂಗುರಾ,

ಉತ್ತರ ಭಾರತದಲ್ಲಿ ಮೆಸ್ತಾ ಎಂದು ಕರೆಯಿಸಿಕೊಳ್ಳುವ ಪಲ್ಯ ತಂಗಳಾದಷ್ಟು ರುಚಿಯಾಗುತ್ತದೆ. ನಮ್ಮ ಬದುಕು ಮಾಗಿದಷ್ಟೂ ಚಂದ ಆಗುವಂತೆ. 

‍ಲೇಖಕರು Avadhi

September 6, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ರೇಣುಕಾ ರಮಾನಂದ

    ಆಹಾ..ಬಾಯಾಗ ನೀರ ಬಂದ್ವು..ಕಾರವಾರದ ಉಸುಕಿನ ಚಲುವೀನೂ ಕಣ್ಣಾಗ ಬಂದಳು.ಒಮ್ಮೆ ಮೀನಿನ ಬಗ್ಗೆನೂ ಬರೀರಲ್ಲ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: