ನನ್ನ ಬದುಕಿನ ಹೂ ಕಟ್ಟಿದವರು ‘ಅಕ್ಕು’ವಿಗೆ ಮೊದಲೇ ಹೊರಟರು..

ಕನ್ನಡ ರಂಗಭೂಮಿಯ ಮಹತ್ವದ ಹೆಸರು ಚಂಪಾ ಶೆಟ್ಟಿ.

ಕಾಲೇಜು ರಂಗ ಶಿಬಿರದ ಮೂಲಕ ರಂಗಭೂಮಿ ಪ್ರವೇಶಿಸಿದ ಈಕೆ ನಂತರ ಚಿತ್ರರಂಗದಲ್ಲಿ ಕಂಠದಾನ ಕಲಾವಿದೆಯಾಗಿ ಹೆಸರು ಮಾಡಿದರು.

ರಂಗ ಮಂಟಪ’ ತಂಡದ ಸ್ಥಾಪಕಿಯೂ ಹೌದು. ಈ ತಂಡಕ್ಕೆ ‘ಗಾಂಧಿ ಬಂದ’ ನಿರ್ದೇಶಿಸಿ ಸೈ ಅನಿಸಿಕೊಂಡರು. ನಂತರ ವೈದೇಹಿಯವರ ‘ಅಕ್ಕು’ ಅಮ್ಮಚ್ಚಿ ಎಂಬ ನೆನಪು ಆಗಿ ಚಿತ್ರ ನಿರ್ದೇಶಕಿಯೂ ಆದರು.ಒಂದು ಸುಂದರ ಕಾವ್ಯದಂತಿರುವ ‘ಅಮ್ಮಚ್ಚಿ ಎಂಬ ನೆನಪು’ ತೆರೆಯ ಮೇಲೆ ಅರಳಿದ ಕಥೆ ನಿಮ್ಮ ಮುಂದೆ..

“ಹರಿವ ಹೊಳೆಯ ಳುಳುಳು ಚೆಂದ
ಸುರಿವ ಮಳೆಯ ರುರುರು ಚೆಂದ
ಎಲ್ಲಕ್ಕಿಂತ ಜೋಲಿಯೊಳಗೆ
ಲಲಲ ನಗುವ ಹಸುಳೆ ಚೆಂದ”…,

“ಅಕ್ಕು”ನಾಟಕದ ಆರಂಭದ  ಈ ಜೋಗುಳದಿಂದ, “ಕಿಟಕಿ‌‌ಯಾಚೆಯ ಕಾಲ”, “ಏಳು ಸುತ್ತಿನ ಕೋಟೆ”, “ಸರಪಳಿ ಇಲ್ಲದೆ ಬಂಧಿ ಇವಳೀ ಹುಡುಗಿ” ” ಕೆಲಹೂವ ಹಣೆಬರಹ” ಎಲ್ಲ ಕವನಗಳನ್ನೂ ಕೂಡ ವೈದೇಹಿ ಮೇಡಮ್ಮೇ ಬರೆದದ್ದು ನಿಜ ಆಶ್ಚರ್ಯವೆಂದರೆ ಯಾವ ಕವನಗಳೂ ನಾಟಕಕ್ಕಾಗಿ ಬರೆದದ್ದಲ್ಲ,ಇವೆಲ್ಲವೂ ಅವರ “ಹೂವಕಟ್ಟುವ ಕಾಯಕ” ಕವನಸಂಕಲನದಿಂದ ಆರಿಸಿ ತೆಗೆದ ಪದ್ಯಗಳೆಂದರೆ ನಂಬಲು ಸಾಧ್ಯವಿಲ್ಲವಾದರೂ ಅದೇ ಸತ್ಯ….

ಎಲ್ಲಾ ಕವನಗಳೂ ನಾಟಕದಲ್ಲಿ  ತಮ್ಮ ತಮ್ಮ ಜಾಗವನ್ನು ಹುಡುಕಿ ಬಂದು ಕುಳಿತುಕೊಂಡವು. ಆದರೆ, ಅಕ್ಕು, ಅಮ್ಮಚ್ಚಿ, ಪುಟ್ಟಮ್ಮತ್ತೆ ಮೂವರೂ, ಮೂರು ದ್ವೀಪಗಳ ಹಾಗೆ ಕುಳಿತುಕೊಳ್ಳುವ ನಾಟಕದ ಅಂತ್ಯದ ದೃಶ್ಯಕ್ಕೆ ಒಂದು ಕವನ ಬೇಕಿತ್ತು. “ವೈದೇಹಿ ಕವನ”ಗಳಿಂದ ಸಿಕ್ಕ ಕವಿತೆಗಳನ್ನು ಬಳಸಿಯಾಗಿತ್ತು, ಹಾಗಾದರೆ  ಯಾವುದು?. ಅಕ್ಕ ಮಹಾದೇವಿಯ ವಚನ ಬಳಸಲೇ?  ವಚನಗಳನ್ನು ಹುಡುಕಿದೆ ಊಹೂ…. ಸರಿಯಾಗಿ ಹೊಂದುತ್ತಿಲ್ಲ…. ಮತ್ಯಾವುದು?  ಇನ್ನೊಮ್ಮೆ  ನೋಡಿಬಿಡೋಣವೆಂದು “ಹೂವ ಕಟ್ಟುವ ಕಾಯಕ”ವನ್ನೇ  ತೆಗೆದಾಗ “ನಾನಿಲ್ಲಿದ್ದೇನೆ ಪುಟ ತಿರುವಮ್ಮ” ಅಂತ ಕಾದು ಕೂತಿತ್ತು ಈ ಕವನ…

ಒಳಹೋಗಿ ನಿಂತವಳ
ಹೊರಗು ಮಾಡಿದರು.. (ಪುಟ್ಟಮ್ಮತ್ತೆ)
ಬಯಲಂತೆ ಬಂದವಳ
ಬದಲು ಮಾಡಿದರು… (ಅಮ್ಮಚ್ಚಿ)
ಸಹಜವಾಗಿದ್ದಳು,
ಅಸಹಜಕ್ಕೆ ದೂಡಿದರು‌ (ಅಕ್ಕು)
ನಿಜವಾಗಿದ್ದವಳನ್ನು
ಸುಳ್ಳು ಮಾಡಿದರು,……
.
ಎಷ್ಟೋ ವರುಷಗಳ ಹಿಂದೆ ಬರೆದ ಕವನವಿದು….

ಅದೇನು ವೈದೇಹಿ ಮೇಡಂ‌ಗೆ  ಕನಸು ಬಿದ್ದಿತ್ತೇ, ಮುಂದೊಂದು ದಿನ ನಾನು ಈ ಮೂರು ಕತೆಗಳನ್ನು ಸೇರಿಸಿಯೇ ನಾಟಕ ಮಾಡುತ್ತೇನೆಂದು!…
ಇಲ್ಲವಾದರೆ ಈ ಸಾಲುಗಳು ಹೇಗೆ ಈ‌ ಮೂರು‌ ಪಾತ್ರಗಳಿಗೆ ಅಷ್ಟು ಸರಿಯಾಗಿ ಹೋಲುತ್ತವೆ ?.. ಇದನ್ನಲ್ಲವೇ ಹೇಳುವುದು ಆಗಿಬಿಡುತ್ತದೆ ಎಂದು.. ಸೋ ಆಗಿಬಿಟ್ಟ ಘಟನೆಗಳಲ್ಲಿ  ಇದೂ ಒಂದು…

ಪಂಡಿತ್ ಕಾಶೀನಾಥ್ ಪತ್ತಾರರಿಂದ ಕವನಗಳಿಗೆ ತಕ್ಕ ಸೊಗಸಾದ ರಾಗ ಸಂಯೋಜನೆಯೂ ಆಗಿಹೋಯಿತು… ಇಂತಹ ಆಗಿಬಿಟ್ಟ ಘಟನೆಗಳ ಮಧ್ಯೆ, ಆಗಬಾರದ ಘಟನೆಯೊಂದು ಆಗಿಯೇ ಹೋಯಿತು…

ನನ್ನ ಅಜ್ಜಿ ಶಾಲೆಗೆ ಹೋದವರಲ್ಲ ಆದರೆ “ಹರಿಕಥಾಮೃತಸಾರ”ದಂತ ದೊಡ್ಡ ಗ್ರಂಥಗಳಿಂದ ದಿನ ಪತ್ರಿಕೆ, ವಾರ ಪತ್ರಿಕೆಗಳೆಲ್ಲವನ್ನೂ ಜಾಹೀರಾತನ್ನು ಬಿಡದೇ ಓದುತ್ತಿದ್ದರು… ಗುರುವಾರ ಬಂದರೆ ಸಾಕು, “ಸುಧಾ” ಪತ್ರಿಕೆ ನನಗೆ ಮೊದಲು ನಾನು ಮೊದಲು ಅಂತ ಮನೆಯಲ್ಲಿ ಜಗಳವೇ ಶುರುವಾಗುತ್ತಿತ್ತು ,.. ಜಗಳದಲ್ಲಿ ಗೆಲುವು ಅಜ್ಜಿಯದೇ..

ಅಂತದೇ ಓದುವ ಹುಚ್ಚು ಅಮ್ಮನದೂ ಕೂಡಾ… “ಅಕ್ಕು” ಅಂತ ನಾಟಕ ಮಾಡಬೇಕೆಂದಿದ್ದೇನೆ, ಅಂದ ಕೂಡಲೇ ಇಡೀ ಕತೆಯನ್ನೇ ಹೇಳಿಬಿಟ್ಟಿದ್ದರು ಅಮ್ಮಾ.. ಅಂದು ನಾನು ಓದಿದ್ದ ಆಶಾದೇವಿಯವರ ವಿಮರ್ಶಾ ಲೇಖನವನ್ನು ಅವರೂ ಓದಿದ್ದು ಮಾತ್ರವಲ್ಲ, ಎಲ್ಲವನ್ನೂ ನೆನಪಿನಲ್ಲಿಟ್ಟುಕೊಂಡಿದ್ದರು. ಅದು ಅಮ್ಮನ ವೈಶಿಷ್ಟ್ಯ…

“ನಾಟಕ ಮಾಡು ಚೆನ್ನಾಗಿ ಆಗತ್ತೆ” ಗ್ರೀನ್ ಸಿಗ್ನಲ್ ಕೊಟ್ಟುಬಿಟ್ಟರು. ನಾಟಕ ತಯಾರಾಗುತ್ತಿದ್ದ ದಿನಗಳಲ್ಲಿ ಒಮ್ಮೆ ಬೆಂಗಳೂರಿಗೆ ಬಂದಿದ್ದ ವೈದೇಹಿ ಮೇಡಂ ಮಮತಾ ಸಾಗರ್ ಅವರೊಂದಿಗೆ ಮನೆಗೆ ಬಂದಿದ್ದರು.. “ನಿಜವಾಗಲೂ… ಅಷ್ಟು ದೊಡ್ಡ ಸಾಹಿತಿ ನಿಮ್ಮ ಮನೆಗೆ ಬಂದಿದ್ರಾ? ಹೇಳಿದ್ರೆ ನಾನು ಬರ್ತಿದ್ನಲ್ಲೇ” ಆಸೆಯಿಂದ ಕೇಳಿದ್ದರು  ಅಮ್ಮಾ….

ಕೊನೆ ಘಳಿಗೆಯ ನಾಟಕದ ಸಿದ್ಧತೆಯಲ್ಲಿದ್ದ ಕಾರಣ, ಅಮ್ಮನ ಜೊತೆ ಫೋನ್ ನಲ್ಲಿ ಮಾತ್ರ ಮಾತುಕತೆಯಾಗುತ್ತಿತ್ತು… ನಾಟಕದ ತಯಾರಿಯ ಬಗ್ಗೆ  ಕೂಡ ಪ್ರತಿ ದಿನ ತಪ್ಪದೇ  ವಿಚಾರಿಸುತ್ತಿದ್ದರು…

ಸಣ್ಣವಳಿದ್ದಾಗಿಂದಲೂ,  ಸಂಜೆ ನಾನು ಮನೆಗೆ ಬಂದ ಕೂಡಲೇ ಅಡುಗೆ ಕೋಣೆಯಲ್ಲಿಯೇ ಕುಳಿತು  ಶಾಲೆ ಕಾಲೇಜಿನಲ್ಲಿ ನಡೆಯುವ ಪ್ರತಿಯೊಂದನ್ನೂ ಚಾಚೂ ತಪ್ಪದೆ ಒಪ್ಪಿಸುತ್ತಾ ಊಟ ಮಾಡುವುದು… ಅಮ್ಮ ನಾನಾಡುವ  ಎಲ್ಲಾ ಮಾತುಗಳನ್ನು ಕೇಳಿಸಿಕೊಳ್ಳುತ್ತಾ ಬಡಿಸುವುದು… ಮಾಡುತ್ತಿದ್ದ ಊಟ ಹಿಡಿಯಷ್ಟಾದರೂ, ಆಡುತ್ತಿದ್ದ ಮಾತು ಮಾತ್ರ ಸಾಕಷ್ಟು.. ಸಾಕಿತ್ತೋ ಬೇಕಿತ್ತೋ ಒಮ್ಮೆಯೂ ಅಮ್ಮ ಸಾಕೆನ್ನಲಿಲ್ಲ  ನನಗೆ ಅವಳು ವೆಂಟಿಲೇಟರ್ ಇದ್ದ ಹಾಗೆ, ಎಲ್ಲವನ್ನೂ ಅವಳ ಮೂಲಕ ಹೊರಹಾಕುತ್ತಿದ್ದೆ….

ಹಾಗಾಗಿಯೇ, ಮನೆಯಲ್ಲಿ  ನನ್ನ ಮದುವೆಯ ಪ್ರಸ್ತಾಪ ಬಂದ ಸಂದರ್ಭ, ನಾನು  ಹಿಂಜರಿಯುತ್ತಾ “ಅಮ್ಮ ನಾನು ಒಬ್ಬರನ್ನು ಪ್ರೀತಿಸಿದ್ದೇನೆ ” ಅಂತಾ ಸಂಕೋಚದಲ್ಲಿ ಹೇಳಿದಾಗ “ಯಾರು, ಪ್ರಕಾಶ”ನಾ? ಅಂದು ನನಗೆ  ಶಾಕ್ ಕೊಟ್ಟಿದ್ದರು… 

ಮದುವೆಯಾದ ಮೇಲೂ ನಮ್ಮ ಈ ಹೇಳುವ ಕೇಳುವ ಪರಿಪಾಠ ಮುಂದುವರಿದೇ ಇತ್ತು.. ಅಕ್ಕು ಕೂಡಾ ಕಣ್ಣಿಂದ ನೋಡುವುದಕ್ಕೆ ಮೊದಲೇ ಅಮ್ಮನ ಮನಸ್ಸಿನಲ್ಲಿ  ಪ್ರದರ್ಶನವೇ ಆಗಿಬಿಟ್ಟ ಹಾಗೇ ವರ್ಣಿಸಿದ್ದೆ… ಅಮ್ಮನಿಗೂ ರಂಗದ ಮೇಲೆ ಅಕ್ಕುವನ್ನು ನೋಡುವ ಕುತೂಹಲ…

 “ನಾಟಕದ ಮೊದಲ ಪ್ರದರ್ಶನ ರಂಗಶಂಕರದಲ್ಲಿ  ಅಲ್ಲಿ ನಿನಗೆ ಕಷ್ಟವಾಗಬಹುದು  ಪದೇ ಪದೇ  ಬಾತ್ ರೂಮ್ ಗೆ ಹೋಗಕ್ಕೆ ಆಗಲ್ಲ, ಹಿಂದಿನ ದಿನ ಕೆ ಎಚ್ ಕಲಾಸೌಧದಲ್ಲಿ ಟೆಕ್ನಿಕಲ್ ಷೋ, ನೀನು ಅಲ್ಲಿಗೆ ಬಂದುಬಿಡು” ಅಂದಿದ್ದೆ….

ಜನವರಿ 20. ಬೆಳಗಿನಿಂದ ಟೆಕ್ನಿಕಲ್ ಷೋಗೆ ಬೇಕಾದ ತಯಾರಿಗಳು ಭರದಿಂದ ನಡೆಯುತ್ತಿದ್ದವು, ಸಾಕಷ್ಟು ರಿಹರ್ಸಲ್ ಆಗಿದ್ದರೂ ಸಣ್ಣ ಆತಂಕ ಎಲ್ಲರಲ್ಲೂ ಇತ್ತು….ಹನ್ನೆರಡು ಗಂಟೆಯ ಹೊತ್ತಿಗೆ ಅಣ್ಣ ಕಾಲ್ ಮಾಡಿ ಅಮ್ಮನಿಗೆ ಸ್ವಲ್ಪ ಸುಸ್ತು ಹೆಚ್ಚಾಗಿ, ಆಸ್ಪತ್ರೆಗೆ ಸೇರಿಸಿದ್ದು, ಆರಾಮಾಗೇ ಇದ್ದಾರೆ ಎಂದು ತಿಳಿಸಿದ.

ಅಮ್ಮನಿಗಿದೇನೂ ಹೊಸತಲ್ಲ, ಆಗಾಗ ಆಸ್ಪತ್ರೆಯ ಭೇಟಿ ಅವರಿಗೆ  ಸಾಮಾನ್ಯ… ನನ್ನ ಗಮನ ಪೂರಾ ಷೋ ಕಡೆಗೇ ಇತ್ತು. ನಾಲ್ಕು ಗಂಟೆಗೆ ಅಕ್ಕ ಕಾಲ್ ಮಾಡಿ ಅಮ್ಮ ಈಗ ಐ ಸಿ ಯು ನಲ್ಲಿ ಇದ್ದಾರೆ  ಜ್ಞಾನ ತಪ್ಪಿ ಹೋಗಿದೆ, ಆದರೆ ಬಂದುಬಿಡು ಅನ್ನುವ ಬೆನ್ನಿಗೆ ಅಣ್ಣ,  ಐ ಸಿ ಯು ಒಳಗೆ ಯಾರನ್ನೂ ಬಿಡುತ್ತಿಲ್ಲ  ಟೆಕ್ನಿಕಲ್ ಷೋ ಮುಗಿಸಿಯೇ ಬಾ ಅಂದ.. ತಲೆ, ಗೊಂದಲದ ಗೂಡಾಯಿತು.. ಏನು ಮಾಡಲಿ ? ಇಲ್ಲಿರಲಾರೆ….. ಅಲ್ಲಿಗೆ ಹೋಗಲಾರೆ ಅನ್ನುವ ಸ್ಥಿತಿ….

ಅಲ್ಲಿಗೆ ಹೋಗುವುದು ನನ್ನ ಸಮಾಧಾನಕ್ಕಷ್ಟೇ ಅಮ್ಮ ನೋಡುವುದೂ ಇಲ್ಲ, ಮಾತನಾಡುವುದೂ ಇಲ್ಲ… ಹೋಗಿ ಏನು ಮಾಡಲಿ? ಇಲ್ಲಿ ನನ್ನ ಅವಶ್ಯಕತೆಯಿದೆಯಲ್ಲಾ.. ಸಾಕಷ್ಟು ಯೋಚಿಸಿ ಕೊನೆಗೆ,  ಟೆಕ್ನಿಕಲ್ ಷೋ ಮುಗಿಸಿ ಹೋಗುವ ನಿರ್ಧಾರಕ್ಕೆ ಬಂದೆ.. ಒಂದಿಬ್ಬರನ್ನು ಬಿಟ್ಟರೆ ಯಾರಿಗೂ ವಿಷಯ ತಿಳಿದಿರಲಿಲ್ಲ

ತಯಾರಿಗಳೆಲ್ಲಾ ಮುಗಿದು ಷೋ ಕೂಡಾ ಪ್ರಾರಂಭವಾಯಿತು… ಎಂದಿನಂತೆ, ಕರೆಕ್ಷನ್ಸ್ ಬರೆದುಕೊಳ್ಳಲು ಪೆನ್ ಮತ್ತು ಪ್ಯಾಡ್ ಹಿಡಿದು ಮೂರನೇ ಸಾಲಿನಲ್ಲಿ ಕುಳಿತಿದ್ದೆ… ಟೆಕ್ನಿಕಲ್ ಷೋ  ಅಂದುಕೊಂಡದ್ದಕ್ಕಿಂತ ಚೆನ್ನಾಗಿಯೇ ಆಗಿತ್ತು… ಖುಷಿಯಲ್ಲಿ, ಕಲಾವಿದರನ್ನು ಅಭಿನಂದಿಸಿ, ಸಣ್ಣ ಪುಟ್ಟ ಕರೆಕ್ಷನ್ಸ್ ಗಳನ್ನು ತಿಳಿಸಲು ವೇದಿಕೆಯಲ್ಲಿ ನನ್ನ ಅಭಿಪ್ರಾಯಕ್ಕಾಗಿ ಕಾದು ಕುಳಿತ ಕಲಾವಿದರ ಕಡೆಗೆ ಹೊರಟೆ.

ಇನ್ನೇನು ವೇದಿಕೆಯ ಮೆಟ್ಟಿಲೇರಬೇಕು ನನ್ನ ಗಂಡ (ಪ್ರಕಾಶ್ ಶೆಟ್ಟಿ) ಬಂದು ಗುಟ್ಟಾಗಿ, ಬೇಗ ಹೊರಡು ಅಮ್ಮ ಇನ್ನಿಲ್ಲ.. ಅನ್ನಬೇಕೇ?..  ಷೋ ಪ್ರಾರಂಭವಾದ ಹತ್ತೇ ನಿಮಿಷಕ್ಕೆ  ಅಮ್ಮ ಹೊರಟುಬಿಟ್ಟಿದ್ದಳು… ನಾನಿಲ್ಲಿರಬೇಕಾದ ಅನಿವಾರ್ಯತೆ ಅವಳಿಗೂ ಗೊತ್ತಿತ್ತಲ್ಲ ಅದಕ್ಕೇ ಕಾದಿದ್ದಳೇನೋ..

ಒಂದು ಕ್ಷಣ ಎಲ್ಲವೂ ಸ್ತಬ್ಧ.. ಛೇ.. ವೇದಿಕೆ ಏರಲೋ? ಹೊರಗೆ ಹೋಗಲೋ? ಮತ್ತೂ ಗೊಂದಲ.. ಕಲಾವಿದರೆಲ್ಲಾ ನನ್ನ ರಿಯಾಕ್ಷನ್ ಗಾಗಿ ಕಾಯುತ್ತಿದ್ದಾರೆ… ನಡುಗುವ ಕಾಲುಗಳಲ್ಲೇ ವೇದಿಕೆ ಏರಿ ಸರ್ಕಲ್ ನಲ್ಲಿ ಕೂತೆ…. ಧ್ವನಿ ನಡುಗುವುದನ್ನು ತೋರಗೊಡದೆ ಖುಷಿಯಿಂದ ಕಲಾವಿದರನ್ನು ಅಭಿನಂದಿಸಿ, ಕರೆಕ್ಷನ್ಸ್ ಗಳನ್ನು ಹೇಳಿ ಮರುದಿನದ ಮೊದಲ ಪ್ರದರ್ಶನಕ್ಕೆ ತಯಾರಾಗಲು ತಿಳಿಸಿದೆ.

ನಡುಗುವ ಕಾಲುಗಳಲ್ಲೇ ವೇದಿಕೆಯ ಮೆಟ್ಟಲಿಳಿದು,.. ಮುಂದಿನ ಜವಾಬ್ದಾರಿಯನ್ನು ಗಂಡನಿಗೆ ಒಪ್ಪಿಸಿ, ಪವನ್ (ಕಲಾವಿದ) ಜೊತೆ  ಅಮ್ಮನ ಮನೆ ತಲುಪಿದ್ದೆ… ಅಮ್ಮ ಇನ್ನೂ ಬಂದಿರಲಿಲ್ಲ.. ಅವಳಿಗಾಗಿ ಕಾಯುತ್ತಾ ಕುಳಿತೆ…. 

‍ಲೇಖಕರು ಚಂಪಾ ಶೆಟ್ಟಿ

September 6, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Shyamala Madhav

    ಚಂಪಾ, ಅಂತಹ ಅಮ್ಮ ಈಗಲೂ ಚೇತನವಾಗಿ ನಿಮ್ಮ ಜೊತೆಗೆ ಇರುವುದು ಖಂಡಿತ!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: