ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಲ್ಲಿ, ನನ್ನೆದೆಯಲ್ಲಿ..

ನಂದಿನಿ ವಿಶ್ವನಾಥ ಹೆದ್ದುರ್ಗ

ಇಲ್ಲಿ
ನನ್ನೆದೆಯಲ್ಲಿ
ಇರುವೆ ಇಲಿಯಾಗಿ
ಇಲಿ ಮೊಲವಾಗಿ
ಮೊಲ ಹುಲ್ಲೆಯಾಗಿ
ಹುಲ್ಲೆ ತೋಳವಾಗಿ
ತೋಳ ಹುಲಿಯಾಗಿ
ಹುಲಿ ಆನೆಯಾಗಿ
ಆನೆ ಹಾವಾಗಿ
ಹಾವು ನೋವಾಗಿ
ನೋವೇ ಸಾವಾಗಿ
ಸಾವು ಇವನೊಂದು
ನಿರ್ಲಕ್ಷ್ಯದ
ನೋಟವಾಗುತ್ತದೆ.

ಇಲ್ಲಿ..
ನನ್ನೆದೆಯಲ್ಲಿ
ಗುಟ್ಟು ಮೊಟ್ಟೆಯಾಗಿ
ಮೊಟ್ಟೆ ಚಿಟ್ಟೆಯಾಗಿ
ಚಿಟ್ಟೆ ಹೂವಾಗಿ
ಹೂವು ಹಣ್ಣಾಗಿ
ಹಣ್ಣೇ ಸಸಿಯಾಗಿ
ಸಸಿಯೇ ಮರವಾಗಿ
ಮರ ಮುಗಿಲಾಗಿ
ಮುಗಿಲು ನೆಲವಾಗಿ
ನೆಲವೇ ಜಲವಾಗಿ
ಜಲ ಒಲವಾಗಿ
ಒಲವು ಇವನೊಂದು
ಮುತ್ತುಗಿತ್ತಾಗುತ್ತದೆ

ಇಲ್ಲಿ ..
ನನ್ನೆದೆಯಲ್ಲಿ
ಆಸೆಯೊಂದು ಅಣುವಾಗಿ
ಅಣು ಅಕ್ಷರವಾಗಿ
ಅಕ್ಷರ ಅಳುಕಾಗಿ
ಅಳುಕು ಪಲುಕಾಗಿ
ಪಲುಕು ಪದವಾಗಿ
ಪದಕೆ ಬೆದೆಯಾಗಿ
ಬೆದೆಯೇ ಭಾವವಾಗಿ
ಭಾವ ಸಾಲಾಗಿ
ಸಾಲು ಕವಿತೆಯಾಗಿ
ಕವಿತೆಯೇ ನಾನಾಗಿ
ನನ್ನಿಯಾಗಿ
ಮಾಗಿ ಬಾಗಿ
ಜಗವಾಗುತ್ತದೆ.

ಸಾವೂ ಒಲವೂ ಕವಿತೆಯೂ
ನಾ ಹೆತ್ತ ಕೂಸುಗಳೇ.
ಸಂದರ್ಭವೆಂಬ ಅಪ್ಪನಿಗೆ
ಎಷ್ಟೊಂದು ಹೆಸರು!

‍ಲೇಖಕರು avadhi

28 April, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading