ಗುಡ್ಡಜ್ಜನ ಗೇರುಬೀಜ ಮತ್ತು ಮೋಣುಚ್ಚನ ಐದ್ರುಪಾಯಿ!

ದಿನೇಶ್ ಕುಕ್ಕುಜಡ್ಕ

ಊರ ಜಾತ್ರೆ ಬಂತೆಂದರೆ ಖುಷಿಯೋ ಖುಷಿ.  ಅಣ್ಣ, ಅಕ್ಕ, ಅಣ್ಣನ ದೋಸ್ತು ಗೋಪಾಲ, ಅಮ್ಮುಣ, ಬಾಬು….ಎಲ್ಲ ಭಯಂಕರ ತುಡುಗು ಬುದ್ಧಿಯ ತುಂಟರು. ಇಲ್ಲೇ- ಮನೆಯಾಚೆ, ಹದಿನೈದಿಪ್ಪತ್ತು ಗಜ ದೂರದಲ್ಲಿದ್ದ ಗುಡ್ಡಜ್ಜನ ಗೇರುಬೀಜದ ಮರಹತ್ತಿ ಬಲಿತ ಬೀಜಗಳನ್ನೆಲ್ಲ ಲಗುಬಗನೆ ಕುಯ್ದು ಜೇಬಿಗೆ ತುರುಕುತ್ತ, ಗೆಲ್ಲುಗೆಲ್ಲಲ್ಲೇ ಈಜಾಡುವ ಮರಪಂಡಿತರು!

ಸೂಕ್ಷ್ಮವಾಗಿ ಕಣ್ಣು ಹಾಯಿಸುವಷ್ಟು ದೂರದಿಂದಲೇ ಕದಲುತ್ತಿರುವ ಬ್ರಹ್ಮರಥದಂತೆ, ಹೂಬಿಟ್ಟ ಹುಲುಸು ಮರ ಕುಲುಕುತ್ತ ಅಲ್ಲಾಡುವಾಗ, ಅಂಗಳದ ಮೂಲೆಯಿಂದ ಉದ್ದನೆ ದೊಣ್ಣೆ ಕೈಗೆತ್ತಿ ” ಯೋಯ್… ಕಳ್ಳ ಹಡಬೆ ಮಕ್ಳಾ…… ನಿಮ್ಮ ಗುಂಡಿ ಕಡೀತೇನೆ…..” ಅಂತ ಅಟ್ಟಿಸಿ ಬರುತ್ತಿದ್ದರು ಗುಡ್ಡಜ್ಜ! ಭಾರೀ ಗಾತ್ರದ ಹೂಬುತ್ತಿಯಿಂದ ಸುತ್ತಮುತ್ತೆಲ್ಲ ಬೆಳಕಿನ ಕಿಡಿಗಳು ಪಟಪಟನೆ ಚದುರಿಬೀಳುವ ಹಾಗೆ ಗೆಲ್ಲುಗೆಲ್ಲುಗಳಿಂದ ಹಾರಿಬೀಳುವ ಈ ‘ಕಿಡಿ’ಗೇಡಿಗಳು  ಚಡ್ಡಿಕಿಸೆಯೊಳಗಿನ ಬೀಜಗಳನ್ನು ಗಪ್ಪನೆ ಹಿಡಿದು ಒಲಿಂಪಿಕ್ ಓಟ ಓಡುವವು! ದೂರದಲ್ಲೇ ನಿಂತು ಆಸೆಗಣ್ಣುಗಳಿಂದ ನೋಡುತ್ತಿರುವ ಒಂದನೇ ಕ್ಲಾಸಿನ ಹುಡುಗ – ನಾನು, ಪಿಳ್ಳೆಜೀವ ಹಾರಿದಂತಾಗಿ ಮನೆ ಕಡೆ ಪೇರಿಕಿತ್ತು ಬಡಜೀವ ಉಳಿಸಿಕೊಳ್ಳುವೆನು!

ಅಣ್ಣ ಅಕ್ಕಂದಿರ ಜೇಬುಗಳಲ್ಲಿ ಕದ್ದ ಗೇರುಬೀಜದ ದುಡ್ಡು- ಜಾತ್ರೆ ಖರ್ಚಿಗೆ ಧಾರಾಳ.  ಒಂದರ್ಥದಲ್ಲಿ ಗುಡ್ಡಜ್ಜನ ಗೇರುಬೀಜದ ಮರ ಊರಹುಡುಗರ ಪಾಲಿಗೆ  “ಮನಃಸಂಕಲ್ಪ ಪ್ರಾಪ್ತಿ ರಸ್ತು” ಅನ್ನುವ ಕಲ್ಪವೃಕ್ಷ! ಕರೆಕ್ಟಾಗಿ ಜಾತ್ರೆ ಸೀಸನ್ನಿಗೇ ಬಲಿತು ಬೀಜ ಕೊಡುವ ಆ ಮರದ ನೆಳಲೇ ಅಣ್ಣನ ಪಟಾಲಮ್ಮಿನ ಹುಡುಗರ ಬಾಲಲೀಲೆಗಳ ಆಡುಂಬೊಲ. ತುಂಟ ಹುಡುಗರ ಗುಂಪೂ- ದೊಣ್ಣೆನಾಯಕ ಗುಡ್ಡಜ್ಜನೂ ಇಲ್ಲದ ಊರಚಿತ್ರ- ಅದು ಅರ್ಧಕ್ಕೇ ನಿಲ್ಲಿಸಿದ ಭಿತ್ತಿಯ ಡ್ರಾಯಿಂಗಿನಂತಾದೀತು! ಈ ನಿಜಾಯಿತಿಯ ಪುಟ್ಟನಾಟಕ, ಊರ ಇತಿಹಾಸದಲ್ಲಿ ಅಷ್ಟೊಂದು ಹಾಸುಹೊಕ್ಕು.

ಆಗಷ್ಟೆ ಈ ರಣಭೀಕರ ತುಂಟಾಟಗಳನ್ನೆಲ್ಲ ಅರಳುಗಣ್ಣಿನಿಂದ ನೋಡುತ್ತಿದ್ದ ನಾನು ಮಾತ್ರ ಇನ್ನೂ ಸಣ್ಣವನಿದ್ದು ಯಾವತ್ತೂ ಈ ಪೋಕರಿ ಗುಂಪಿನ ಮೀಸಲು ಆಟಗಾರನಂತೆ! ದೂರದಿಂದಲೇ ನಿಂತು ನೋಡುವ ಎಕ್ಸ್‌ಟ್ರಾ ಪ್ಲೇಯರ್!

ಇನ್ನು ಜಾತ್ರೆಯ ಸಂಭ್ರಮವಾದರೋ ಎಂಥಾದ್ದೆನ್ನುತ್ತೀರಿ! ಸೂರ್ಯ ಮುಳುಗಲು ಮುಕ್ಕಾಲು ಮೂರೊತ್ತು ಇರುವಾಗಲೇ ಅಣ್ಣನೂ ಗೋಪಾಲನೂ ಕೈ ಕೈ ಹಿಡಿದು ಚಿಲ್ಲರೆ ಕಾಸಿನ ಜಂಭದೊಂದಿಗೆ ಜಾತ್ರೆಯ ಅಡ್ಕದಲ್ಲಿ ಠಳಾಯಿಸುವರು. ಇಡೀ ಅಡ್ಕ ಓಡಾಡುವರು. ಕೀ ಕೊಡುವಾಗ “ಠಮಠಮಠಮ” ಬೊಟ್ಟುವ ಮಂಗಣ್ಣನನ್ನು ಐದ್ರುಪಾಯಿ ಕೊಟ್ಟು ಕೊಳ್ಳುವರು. “ಕಿರ್ರೋಕಿರ್ರೆನ್ನುವ” ರಾಟೆಯ ತೊಟ್ಟಿಲಲ್ಲಿ ಬೇಕೆಂದಾಗಲೆಲ್ಲ ಹತ್ತಿ ಜೀಕುವರು. ತಿರುಗಾಣಿಯಲ್ಲಿ ಕೂರುವರು. ಕೈಕೈ ಹಿಡಿದು ಪೆಟ್ಟಿಗೆ ಸಿನಿಮಾ ನೋಡುವರು. ಗಾಜಿನ ಪೆಟ್ಟಿಗೆಯೊಳಗೆ ಸಾಲಾಗಿ ಕೂತ ಕೆಂಪು ಚಂದ್ರರಂಥ ಬಚ್ಚಂಗಾಯಿಯ ಹೋಳುಗಳನ್ನು ಮೆಲ್ಲುವರು. ದೂರದಿಂದ ಆಸೆಗಣ್ಣಲ್ಲೇ ಸಿಐಡಿಯಂತೆ ಹಿಂಬಾಲಿಸುವ ನನ್ನನ್ನೂ ಕೂಗಿ ಕರೆದು ದೂದ್‌ಕ್ಯಾಂಡಿ ಕೊಡಿಸುವರು. ತಡೆಯಲಾರದೆ ಕೈತೋರಿದಾಗ ಪೀಪಿ ಬಿಗಿಲು ಕೊಡಿಸಿದ್ದೂ ಉಂಟು…..
ಎಲ್ಲಾ ಗುಡ್ಡಜ್ಜನ ಮರದ ಗೇರುಬೀಜದ ಮಹಿಮೆಯೇ!

ಎರಡನೇ ಕ್ಲಾಸಿನ ಹೊತ್ತಿಗೆ, ಈ ಬಾರಿಯ ಜಾತ್ರೆಗೆ ನಾನೇ ಸ್ವತಃ ಚಿಲ್ಲರೆ ಸಂಪಾದಿಸಬೇಕೆಂಬ ಸ್ವಾಭಿಮಾನದ ಸಕಾರಣ ಬೀಜವೊಂದು ನನ್ನಲ್ಲೂ ಮೆಲ್ಲನೆ ಮೊಳೆಯಲಾರಂಭಿಸಿತ್ತು! ಊರ ಜಾತ್ರೆಗೆ ಇನ್ನೂ ಜೋಡಿವಾರಗಳಿರುವಷ್ಟರಲ್ಲಿ ಗೋಪಾಲನೂ ಅಣ್ಣನೂ ಎಂದಿನಂತೆ ಗುಡ್ಡಜ್ಜನೊಂದಿಗೆ ಬೀಜಾಟದ ಬಹುಬಗಲ್ಬಂದಿಯಲ್ಲಿ ತೊಡಗಿದ್ದರೆ, ನನಗೋ ಬೇರೆಯದೇ ಗುಂಗು! ಕದಿಯುವುದು ಅಪರಾಧವೆಂದಾಗಲೀ, ಸಿಕ್ಕಿಬಿದ್ದರೆ ಸಹಿಸಲಾಗದ ಪಾಪಪ್ರಜ್ಞೆಯೆಂದಾಗಲೀ ಅರಿವೇ ಇಲ್ಲದ ಹೊತ್ತದು. ಗುಡ್ಡಜ್ಜ ಓಡಿಸುತ್ತಿದ್ದುದು, “ತನಗಿಲ್ಲವಲ್ಲ” ಎಂಬ ನಂಜಿನಿಂದಷ್ಟೇ ಹೊರತು ಬೇರೇನಕ್ಕೂ ಅಲ್ಲ ಎಂಬ ಮುಗ್ಧ ಲಾಜಿಕ್ಕು ನನ್ನ ತಲೆಯಲ್ಲಿ! ‘ನಾವೆಲ್ಲ ಆ ಮನುಷ್ಯನ ಸಂಪತ್ತು ಕೊಳ್ಳೆಹೊಡೆಯುವ ಡಕಾಯಿತರು’ ಅನ್ನೋ ಸಾಸಿವೆ ಗಾತ್ರದ ಅರಿವಾದರೂ ನನಗೆಲ್ಲಿ ಬರಬೇಕು ಆ ಹೊತ್ತು? ಸಂದರ್ಭದ ಸಾಕ್ಷಿಪ್ರಜ್ಞೆಗಳಿಗೆಲ್ಲ ದುಬಾರಿಯೆನಿಸುವ ಬಾಲ್ಯದ ಹರೆಯ ಮತ್ತು ನಾನು ನನ್ನದುಗಳ ವಿಪರೀತ ದರ್ದುಗಳಿಲ್ಲದ ಊರ ಸಂದರ್ಭ ಅದು! ಮರ ಏರಿ ಬೀಜ ಕುಯ್ವಾಗ ಅಟ್ಟಿಸಿ ಬರುವ ಅದೇ ಗುಡ್ಡಜ್ಜನ ಹೊಟೇಲಿಗೆ ಮರುದಿನ ಹೋದರೆ ಕಕ್ಕುಲತೆಯಿಂದಲೇ “ಕಂಡ್ರಕುಟ್ಟಿಗಳೇ” ಅಂತ ತಲೆಗೊಂದು ‘ಕುಟ್ಟಿಹಾಕಿ’ ಅಲ್ಲೇ ಕುಳ್ಳಿರಿಸಿ ಸಿಂಗಲ್ ಚಹಾ-ಎಳ್ಳುಂಡೆ ಕೊಡುವರು! ಇಂತಿಪ್ಪ ಊರ ಕಹಾನಿಯಲ್ಲಿ ದ್ವೇಷ- ದ್ರೋಹ- ಕಳವು- ವಂಚನೆಗಳೆಂಬ ನಾಗರಿಕ ಊಹೆಗಳಿಗೆ ಸ್ಥಳವೇ ಇರಲಿಲ್ಲ!

ಸಂಜೆ ಬಾನು ಕೆಂಪಾಗುವ ವೇಳೆಯಾಗಿ, ಆಡಿನ ಜೋಡಿಮರಿಗಳನ್ನು ಗೂಡಿಗೆ ಹೊಡೆಯುವ ನನ್ನ ನಿತ್ಯದ ಕಾಯಕ ಮುಗಿಸುವಷ್ಟರಲ್ಲಿ ಹಟ್ಟಿಯಲ್ಲಿ ಅಜ್ಜಿ ಹಾಲುಕರೆದು ಚೊಂಬಿಗೆ ಮೊಗುಚಿಡುತ್ತಿದ್ದರು. ಅಲ್ಲೇ ಹಟ್ಟಿ ಬಾಗಿಲಲ್ಲೇ ಇರುವ ಅಂಗಾರನ ಕಲ್ಲಿಗೆ ತುದಿಎಲೆಯಲ್ಲಿ ಚೂರು  ನೊರೆಹಾಲು ಅದ್ದಿ ಎಡೆಯಿಡುತ್ತಿದ್ದರು ಅಜ್ಜಿ. ಅಂಗಾರ ಎಂದರೆ ದನಗಳನ್ನು ಮಾಯಕದಲ್ಲಿ ಕಾಯುವ ದೈವ. ಅಜ್ಜಿ ಉದ್ದನೆ ಲೋಟವೊಂದಕ್ಕೆ ಒಂದು ಕೊಂಡೆ ಹಾಲು ಮೊಗುಚಿಕೊಟ್ಟು, ನನ್ನನ್ನು ಮೋಣುಚ್ಚನ ಅಂಗಡಿಗೆ ಕಳಿಸುತ್ತಿದ್ದರು. ಮೋಣುಚ್ಚನಿಗೆ ನಮ್ಮ ಹಟ್ಟಿಯ ಮಲೆನಾಡು ಗಿಡ್ಡನ ಹಾಲೆಂದರೆ ಪಂಚಪ್ರಾಣ. ಹಾಗೇ ದಿನಾ ಬೈಗಾಗುವ ವೇಳೆ ಹಾಲು ತಂದುಕೊಂಡುವ ನನ್ನನ್ನು ಕಂಡರೂ ಅಷ್ಟೇ ಪ್ರಾಣ. ಒಮ್ಮೊಮ್ಮೆ ವಾಪಸು ಬರುವಾಗ ಸಾರಿಗೆ ಒಂದು ಒಣತೊರಕೆ ಪೀಸು ಕೊಡುವರು.

ಅಣ್ಣನ ಡಕಾಯಿತ ಪಟಾಲಂ ಗೇರುಬೀಜ ಕದ್ದೊಯ್ದು ಕೊಡುತ್ತಿದ್ದುದು ಇದೇ ಮೋಣುಚ್ಚನ ಅಂಗಡಿಗೆ. ಮೋಣುಚ್ಚ ಖರೀದಿಸಿದ ಬೀಜಗಳನ್ನೆಲ್ಲ ಅಂಗಡಿಯ ಹೊರಗೆ ಗೋಣಿ ತಾಟಿನ ಚಾದರದ ಬಾಗಿಲಿನ ಪಕ್ಕ ಬಿದಿರ ಬುಟ್ಟಿಗಳಲ್ಲಿ ಸಂಗ್ರಹಿಸಿಡುತ್ತಿದ್ದರು. ದಿನಾ ಹಾಲು ತರುವ ವೇಳೆ ಈ ಬುಟ್ಟಿಗಳಲ್ಲಿರುವ ರಾಶಿ ರಾಶಿ ಗೇರುಬೀಜ ನೋಡಿ ನನಗೋ ತುಂಬು ಆಸೆ. ಮೋಣುಚ್ಚನಿಗೆ ಎಷ್ಟು ದುಡ್ಡು ಸಿಗಬಹುದು!!ಅದೊಂದು ದಿನ ಹಾಲು ಕೊಟ್ಟು ವಾಪಸು ಬರುತ್ತಲೇ ಒಂದೆರಡು ಹಿಡಿ ಬೀಜಗಳನ್ನು ನನ್ನ ಹರಕಲು ಚಡ್ಡಿಯ ಜೇಬಿಗೆ ತುರುಕಿ ಮನೆಯತ್ತ ಹೊರಟೆ.

ಹೀಗೇ ದಿನಾ ತಂದು ಸೇರಿನಷ್ಟಾದರೆ ಮತ್ತೆ ಒಯ್ದು ಮೋಣುಚ್ಚನಿಗೇ ಕೊಟ್ಟು ಕೈ ತುಂಬ ಚಿಲ್ಲರೆ ತಕ್ಕೊಳ್ಳಬಹುದೆಂಬ ಮಹತ್ವಾಕಾಂಕ್ಷೆ ನನ್ನದು. ನೇರ ಮನೆಗೆ ಬಂದವನೇ ಬಾಚಿತಂದ ಬೀಜಗಳನ್ನು ಅಜ್ಜಿಗೆ ತೋರಿಸಿ ಭಾರೀ ದುಡ್ಡುಹೊಂದಲಿರುವ ಸಂಭಾವ್ಯ ಸಿರಿವಂತನಂತೆ ಎದೆಯುಬ್ಬಿಸಿ ಈ ಬಗೆಗಿನ ಕಿರುಗತೆ ಹೇಳಿದೆ….

ಅಷ್ಟೆ!!!!

ಬಲಗಿವಿ ಎತ್ತಿ ಹಿಡಿದ ಅಜ್ಜಿ ,”ಹಡಬೇ ಬುದ್ಧಿ ಎಲ್ಲಿಂದ ಕಲಿತ್ಯೋ ಹಮ್ಕು! ನಿನ್ನಪ್ಪ ಬರಲಿ, ನಿನ್ನ ಸೊಂಟದ ಕೀಲು ಜಾರಿಸದಿದ್ದರೆ…….. ಹೋಗ್! ಈ$$ಗಲೇ ಹೋಗ್ಹೋಗ್! ಎಲ್ಲಿತ್ತೋ ಅಲ್ಲೇ ಹಾಕಿ , ಮೋಣುಚ್ಚನಿಗೆ ಸತ್ಯ ಕತೆ ಹೇಳಿ ಬಾ. ಇಲ್ಲಾಂದ್ರೆ ನಾನೇ ಹೊಡಕೊಂಡ್ಹೋಗುವೆ ದರ್ವೇಸಿ ಮಗನೇ….” ಎಂದೆಲ್ಲ ಬಾಯಿಗೆ ಬಂದಂತೆ ಬಯ್ಯುತ್ತಿದ್ದರೆ, ನಾನು ಏನೂ ಅರಿಯದೆ, ಏನೋ ಎಡವಟ್ಟಾಗಿರುವುದನ್ನು ಗ್ರಹಿಸಿ ಬೀಜಗಳನ್ನು ಅದೇ ಚಡ್ಡಿಕಿಸೆಗೆ ತುರುಕಿ ಓಟಕ್ಕಿತ್ತೆ.

ಸಂಜೆಗತ್ತಲು. ಮೋಣುಚ್ಚನ ಅಂಗಡಿಯಲ್ಲಿ ಸೀಮೆಣ್ಣೆ ಬುಡ್ಡಿ ಸಣ್ಣಕೆ ಉರಿಯುತ್ತಿತ್ತು. ಮನೆಯಿಂದ ಅಲ್ಲಿಗೆ ವಾಹನ ಹೋಗಿ ಬರುವ ಮಣ್ಣಿನ ರಸ್ತೆಯೇ ಆದುದರಿಂದ ಹೆದರಿಕೆಯೂ ಆಗಿರಲಿಲ್ಲ. ಆದರೂ ಯಾಕೋ ಬೆವೆತಿದ್ದೆ. ಉಬ್ಬಿದ ಚೆಡ್ಡಿ ಕಿಸೆಯಿಂದ ಒಂದೊಂದೇ ಬೀಜಗಳನ್ನು ಹೊರತೆಗೆದು ಮತ್ತದೇ ಬುಟ್ಟಿಗೆ ಹಾಕುವಾಗ ನನ್ನೆದೆ ಹೊಡಕೊಳ್ಳುತ್ತಿತ್ತು. ಅಪ್ಪ ಮನೆಗೆ ಬಂದಾಗ ಅಜ್ಜಿ ಈಗಾಗಲೇ ಹಾಕಿದ ಬೆದರಿಕೆಯನ್ನು ಕಾರ್ಯರೂಪಕ್ಕೆ ತಂದರೇನು ಗತಿ? ಅಷ್ಟಕ್ಕೂ, ಮೋಣುಚ್ಚನಿಗೆ ನನ್ನನ್ನು ಕಂಡರೆ ತುಂಬಾನೇ ಪ್ರೀತಿ! ಇಷ್ಟೊಂದು ಪ್ರೀತಿಸುವ ಮೋಣುಚ್ಚ, ತೆಗೆದ ಎರಡೊಡ್ಡಿ ಬೀಜ ವಾಪಸು ಕೊಟ್ಟರೆ ಚಿಲ್ಲರೆ ಕೊಡ್ತಾರೆಯೇ ವಿನಃ ಹೀಗೆಲ್ಲ ಹೊಡೆಯಲಾರರು. ಅಜ್ಜಿಗೇನು ಹಾಂಕಾರ? ಮುದಿಅಜ್ಜಿ! ಏನೇನೋ ಮಾತಾಡೋದು! ಅಜ್ಜಿ ಹೇಳಿದ್ದು ಕೇಳಿ ಅಪ್ಪ ಹೊಡೆದರೆ……??

ಬೇರೆಯದೇ ಭಯದಲ್ಲಿ ಏನೇನೋ ಯೋಚಿಸುತ್ತ ಕೊನೇಯ ಬೀಜ ಬುಟ್ಟಿಗೆ ಹಾಕುವಾಗ ಆದ ಸಣ್ಣನೆ ತರಪರ ಸದ್ದಿಗೆ ಬುಡ್ಡಿದೀಪ ಹಿಡಿದು ಹೊರಬಂದ ಮೋಣುಚ್ಚ ಬಗ್ಗಿ ಕಣ್ಣಿನ ನೇರಕ್ಕೆ ದೀಪ ಹಿಡಿದು, ನನ್ನ ಕಂಡವರೇ ” ಹೋ! ನೀನಿನ್ನೂ ಇಲ್ಲೇ ನಿಂತಿದ್ದೀಯೋ ತಮ್ಣಾರೂ…? ಬಾ ಬಾ… ಒಳಗೆ ಬಾ” ಅಂತ ಕರೆದರು. ನನಗೋ ಓಡಿ ಹೋಗಬೇಕೆಂದು ಸಹಾ ಅನಿಸಿರಲಿಲ್ಲ! ತೀರಾ ಸಹಜವೆಂಬಂತೆ ಒಳಗೆ ಕರೆದು ನನ್ನನ್ನು ಅಡಿಕೆ ಸಲಾಕೆಯ ಬೆಂಚಲ್ಲಿ ಕೂರಿಸಿದ ಮೋಣುಚ್ಚ ” ನಿಂಗೆ ಮೊನ್ನೆಯೇ ಕೊಡಬೇಕೂಂತಿದ್ದೆ. ಮರ್ತೇ ಹೋಗಿತ್ತು ನೋಡು..” ಅನ್ನುತ್ತಾ ಯಾವುದೋ ಗೋಣಿತಾಟಿನ ಚೀಲದಿಂದ ಐದ್ರುಪಾಯಿ ತೆಗೆದು ನನ್ನತ್ತ ಬಗ್ಗಿ “ಜಾತ್ರೆ ಖರ್ಚಿಗೆ” ಅಂತ ಕಿಸೆಗೆ ತುರುಕಿದರು. ಗಾಜಿನ ಭರಣಿ ಮುಚ್ಚಳ ತೆಗೆದು ” ಇಕ್ಕಾ” ಅಂತ ಎರಡು ಪೆಪ್ಪರಮೆಂಟು ಕೈಗಿತ್ತರು. ” ಹುಂ, ಇನ್ನು ಹೋಗು. ಕತ್ತಲಾಗ್ತಾ ಬಂತು” ಅಂತ ಒತ್ತಾಯದ ದನಿಯಲ್ಲಿ ಎಚ್ಚರಿಸಿ ಬಾಗಿಲತ್ತ ಬುಡ್ಡಿದೀಪ ನಿರುಕಿಸಿ ಬಾಗಿಲ ಚೌಕಟ್ಟು ಹಿಡಿದು ನಿಂತರು. ನಾನು ಅಡ್ಡಬಿದ್ದ ಒಟ್ಟೆ ಹವಾಯಿ ಚಪ್ಪಲಿ ಮಗುಚಿ ನನ್ನ ಸಣ್ಣನೆ ಮುಂಗಾಲಿಗೆ ತುರುಕಿಸಿಕೊಂಡೆ.

‍ಲೇಖಕರು avadhi

April 28, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: