ಅವಳ ಬದುಕೇ ಒಂದು ಸೇವಾಕ್ಷೇತ್ರ..

ಕಾರ್ನೀಲಿಯಾ ಸೊರಾಬ್ಜಿ (1866-1954)

| ಭಾರತದ ಮೊದಲ ಮಹಿಳಾ ಬ್ಯಾರಿಸ್ಟರ್ |

ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಪ್ರಾರಂಭದಲ್ಲಿಯೇ ಹುಟ್ಟಿಬಂದ ಮಹಿಳಾಪರ ಹೋರಾಟಗಾರ್ತಿ ಹಾಗೂ ಭಾರತದ ಮೊತ್ತ ಮೊದಲ ಮಹಿಳಾ ಬ್ಯಾರಿಸ್ಟರ್ ಎಂದರೆ ಕಾರ್ನೀಲಿಯಾ ಸೊರಾಬ್ಜಿಯೇ.

“ಇಂಡಿಯಾ ಕಾಲಿಂಗ್” (1934) ಎಂಬ ಅವಳ ಆತ್ಮಕಥೆಯನ್ನು ಸಂಪಾದಿಸಿ ಮರುಪ್ರಕಾಶಿಸಿದ ಚಾಂದನಿ ಲೋಕುಗೆಯವರ ಪ್ರಕಾರ “ಅವಳ ಬದುಕೇ ಒಂದು ಸೇವಾಕ್ಷೇತ್ರ” ಭಾರತೀಯ ಜನಾನಾದಲ್ಲಿನ ಘೋಷಾ ಮಹಿಳೆಯರ ಉದ್ಧಾರಕ್ಕಾಗಿ ಕೈಗೊಂಡ ಆ ಸೇವೆಯೇ ಅವಳ ವೃತ್ತಿಯಾಯಿತು.

1866ರಲ್ಲಿ ನಾಸಿಕ್ ನ  ಶ್ರೀಮಂತ ಹಾಗೂ ಪಾಶ್ಚಾತ್ಯ ಆಧುನಿಕತೆಗೆ ತೆರೆದುಕೊಂಡ ಪಾರ್ಸಿ ಕುಟುಂಬವೊಂದರಲ್ಲಿ ಕಾರ್ನೀಲಿಯಾ ಜನಿಸಿದಳು. ಪ್ರಾರಂಭದಲ್ಲಿಯೇ ಅತಿ ಚುರುಕು ಬುದ್ಧಿಯ ಕಾರ್ನೀಲಿಯಾ ಓದು ಬರಹದಲ್ಲಿ ತನ್ನ ಸಹಪಾಠಿಗಳಿಗಿಂತ ಮುಂದಿದ್ದಳು. 1883 ರಲ್ಲಿ ಪುಣೆಯ ಡೆಕ್ಕನ್ ಕಾಲೇಜು ಸೇರಿ, 1884 ರಲ್ಲಿ ಆರ್ಟ್ಸ್ ಪರೀಕ್ಷೆಯಲ್ಲಿ ತೇರ್ಗಡೆಯಾದಳು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೊಡಲಾಗುವ ಹಫ್ಲಂಗ್ ಶಿಷ್ಯವೇತನವನ್ನು ಅವಳು ಪಡೆದುಕೊಂಡಳು. 1887ರಲ್ಲಿ ಪುಣೆಯ ಡೆಕ್ಕನ್ ಕಾಲೇಜಿನಿಂದ ಪದವೀಧರೆಯಾದ ಮೊತ್ತ ಮೊದಲ ಮಹಿಳೆ ಕಾರ್ನೀಲಿಯಾ.

ಹೀಗೆ ಅವಳು ಹಲವು ಪ್ರಥಮಗಳ ಒಡತಿಯಾಗುತ್ತಾ ಸಾಗಿದಳು. ಬ್ರಿಟಿಷ್ ಭಾರತ ಸರ್ಕಾರವು ಅವಳಿಗೆ ಇಂಗ್ಲೆಂಡಿನಲ್ಲಿ ಅಧ್ಯಯನ ಮಾಡಲು ಶಿಷ್ಯವೇತನವನ್ನು ದಯಪಾಲಿಸಿತು. ಆದರೆ ಕೈಗೆ ಬಂದ ತುತ್ತು ಬಾಯಿಗೆ ಇಲ್ಲವಾಯಿತು. ಅವಳು ಮಹಿಳೆ ಎನ್ನುವ ಕಾರಣಕ್ಕೆ ಅವಳ ಶಿಷ್ಯವೇತನವನ್ನು ತಡೆಹಿಡಿಯಲಾಯಿತು. ಅಂದಿನಿಂದಲೇ ತನ್ನ ಹಕ್ಕುಗಳಿಗಾಗಿ ಅವಳ ಹೋರಾಟವು ಪ್ರಾರಂಭವಾಯಿತು.

ಅಹಮದಾಬಾದಿನ ಕಾಲೇಜೊಂದರಲ್ಲಿ ಇಂಗ್ಲಿಷ್ ಸಾಹಿತ್ಯದ ಉಪನ್ಯಾಸಕಿಯಾಗಿ ವೃತ್ತಿಯನ್ನು ಪ್ರಾರಂಬಿಸಿದಳು. ಅಷ್ಟರಲ್ಲಿಯೇ ಅವಳಿಗೆ 1889ರಲ್ಲಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಶಿಕ್ಷಣಕ್ಕಾಗಿ ದೊರೆತ ಶಿಷ್ಯವೇತನವನ್ನು ಒಪ್ಪಿಕೊಂಡು ಇಂಗ್ಲೇಂಡಿಗೆ ಹೊರಡುತ್ತಾಳೆ. ಆದರೆ ಅವಳಿಗೆ ಆಶ್ರಯವನ್ನು ಕೊಡಲಿದ್ದವರು, ಹಾಗೂ ಇನ್ನಿತರ ಅಧಿಕಾರಿಗಳು ಅಧ್ಯಾಪನ ವೃತ್ತಿಗೆ ಅನುವಾಗುವಂತಹ ಸಾಹಿತ್ಯ ಮುಂತಾದ ವಿಷಯವನ್ನು ಅಭ್ಯಾಸಮಾಡಲು ಸೂಚಿಸುತ್ತಾರೆ. ಆದರೆ ಅವಳಿಗೆ ಕಾನೂನು ಶಿಕ್ಷಣವನ್ನು ಅಧ್ಯಯನ ಮಾಡಬೇಕೆಂಬ ಹಂಬಲವಿರುತ್ತದೆ.

ಕಾರ್ನೀಲಿಯಾಳಿಗೆ ಈ ಹಂಬಲ ಬಲವಾಗಲು ಅವಳ ಬಾಲ್ಯದ ಒಂದು ಘಟನೆಯು ಕಾರಣವಾಗಿರುತ್ತದೆ. ಅದೆಂದರೆ ಕಾಥೇವಾಡದ ವಿಧವೆಯೊಬ್ಬಳು ತನ್ನ ಆಸ್ತಿಯಿಂದ ವಂಚಿತಳಾಗಿ, ದುಃಖಿತಳಾಗಿ ಕಾರ್ನೀಯಾಳ ತಾಯಿಯ ಮುಂದೆ ನಿಂತ ದೃಶ್ಯವು ಅವಳ ಮೇಲೆ ಗಾಢವಾಗಿ ಪರಿಣಾಮ ಬೀರಿರುತ್ತದೆ. ಅಂತಹ ವಂಚಿತ ಮಹಿಳೆಯರಿಗೆ ಏನಾದರೂ ಸಹಾಯ ಮಾಡಬೇಕೆಂಬ-ಅಂದು ಬೀಜರೂಪದಲ್ಲಿ ಹುದುಗಿದ್ದ ಅಭಿಲಾಷೆಯು ಮೊಳಕೆಯೊಡೆಯಲು ಪ್ರಾರಂಭವಾಗುತ್ತದೆ. ಆದ್ದರಿಂದ ಕಾನೂನು ಶಿಕ್ಷಣಕ್ಕಾಗಿ ಆಕ್ಸ್ಫರ್ಡ್ ವಿಶ್ವವಿದ್ಯಾಲಯಕ್ಕೆ  ತನ್ನ ಕೋರಿಕೆಯನ್ನು ಸಲ್ಲಿಸುತ್ತಾಳೆ. ಆದರೆ ಅದು ನಿಷ್ಫಲವಾದರೂ ಅದೇ ವಿಶ್ವವಿದ್ಯಾಲಯದಲ್ಲಿ BCL ಪರೀಕ್ಷೆಗೆ ಕುಳಿತುಕೊಳ್ಳಲು ಅವಳಿಗೆ ಅನುಮತಿ ದೊರೆಯುತ್ತದೆ.

ಆ ಪರೀಕ್ಷೆಯಲ್ಲಿ ತೇರ್ಗಡೆಯಾದರೂ ಮಹಿಳೆಯೆನ್ನುವ ಕಾರಣಕ್ಕೆ ಪುನಃ ಪದವಿ ದೊರೆಯದೇ ಹೋಗುತ್ತದೆ. ನಿರಾಶಳಾದ ಕಾರ್ನೀಲಿಯಾ1894ರಲ್ಲಿ ಭಾರತಕ್ಕೆ ಮರಳಿ ಬರುತ್ತಾಳೆ.

ಇದು ಅವಳ ವೈಯಕ್ತಿಕ ಹೋರಾಟದ ಒಂದು ಮಜಲಾದರೆ, ಭಾರತಕ್ಕೆ ಮರಳಿದ ನಂತರ ಅವಳ ಸಾರ್ವಜನಿಕ ನೆಲೆಯಲ್ಲಿನ ಹೋರಾಟದ ಇನ್ನೊಂದು ಮಜಲು ಪ್ರಾರಂಭವಾಗುತ್ತದೆ. ಅವಳು ಸಾರ್ವಜನಿಕ ಕ್ಷೇತ್ರಕ್ಕೆ ಧುಮುಕಲು ಐರಿಷ್ ಲೇಖಕಿ ಉನಾ ಆರ್ಟ್‍ವೆಲ್ಡ್ ಟೇಲರ್ ಎನ್ನುವವಳ ಪ್ರಭಾವ ಕಾರಣವಾಗಿರುತ್ತದೆ. ಉನಾ ಟೇಲರಳು ಭಾರತ ಹಾಗೂ ಐರ್ಲೆಂಡ್ ಗಳ ನಡುವೆ ಸಂಪ್ರದಾಯ, ಮೂಢನಂಬಿಕೆ, ಜಾನಪದ ಲೋಕ ಮುಂತಾದ ಸಾಂಸ್ಕೃತಿಕ ಸಾಮ್ಯತೆಯ ಕುರಿತಾದ ಅಧ್ಯಯನದಲ್ಲಿ ಆಸಕ್ತಳಾಗಿರುತ್ತಾಳೆ.

“ಭಾರತದಲ್ಲಿನ ನನ್ನ ಆನಂತರದ ಶೋಧನೆಗಳಿಗೆ ಸ್ಫೂರ್ತಿಯೆಂದರೆ ಅವಳೇ” ಎಂದು ಕಾರ್ನೀಲಿಯಾ ಸ್ಪಷ್ಟವಾಗಿ ಟೇಲರಳ ಬಗ್ಗೆ ಹೇಳಿಕೊಂಡಿದ್ದಾಳೆ. ಹೀಗೆ ಪಾಶ್ಚಾತ್ಯ ಆಲೋಚನೆ ಮತ್ತು ಪ್ರಭಾವಗಳನ್ನು ತುಂಬಿಕೊಂಡು ಭಾರತದ ನೆಲದಮೇಲೆ ಕಾಲಿಟ್ಟ ಕಾರ್ನೀಲಿಯಾ ತನ್ನ ಸೇವೆಯನ್ನು, ಹೊಸ್ತಿಲಿನಾಚೆ ಸೂರ್ಯನನ್ನೇ ಕಾಣದೆ ಮನೆಯ ಒಳಕೋಣೆಗಳಲ್ಲಿ, ಘೋಷಾದ ಕತ್ತಲಿನಲ್ಲಿ ಬದುಕುತ್ತಿದ್ದ “ಪರ್ದಾ ನಶೀನ್” (ಘೋಷಾದಲ್ಲಿರುವ ಜನಾನಾದ ಮಹಿಳೆಯರು) ಗಳಿಗೆ ಮುಡಿಪಾಗಿರಿಸುತ್ತಾಳೆ.

ಘೋಷಾದಲ್ಲಿರುವ ನಿಜ ಅಂತಃಪುರವನ್ನು ಹೊರ ಜಗತ್ತಿಗೆ ಮೊತ್ತಮೊದಲು ತೆರೆದು ತೋರಿಸಿದ ಸಾಹಸ ಕಾರ್ನೀಲಿಯಾಳದು. ಶಕ್ತಿಯುತವಾದ ಪಿತೃಪ್ರಧಾನ ವ್ಯವಸ್ಥೆಯ ಹಿಡಿತದಲ್ಲಿ, ಪುರೋಹಿತಶಾಹಿಯ ಕುಯುಕ್ತಿಗಳಲ್ಲಿ, ಜನಾನಾದ ತಮ್ಮದೇ ಆದ ಸಂಪ್ರದಾಯ, ರೀತಿ ರಿವಾಜು ಹಾಗೂ ರಾಜಕಾರಣಗಳಲ್ಲಿ, ಪರದೆಯ ಬಂದನದಲ್ಲಿ ದಮ್ಮುಕಟ್ಟಿ ಮೂಗುಬ್ಬಸ ಪಡುತ್ತಿದ್ದ ಮಹಿಳೆಯರಿಗೆ ಒಂದು ಮುಕ್ತವಾದ ವಾತಾವರಣವನ್ನು ಕಲ್ಪಿಸಿಕೊಡಬೇಕೆಂದು ಹೊರಟ ಕಾರ್ನೀಲಿಯಾಳ ಪ್ರಯತ್ನಗಳು ಅವಳ ಸಾಹಸ ಹಾಗೂ ಆತ್ಮಸ್ಥೈರ್ಯದ ಪ್ರತೀಕಗಳಾಗಿವೆ.

ಇದು ಸದಾ ದೀನದಲಿತರ ಸೇವೆಯಲ್ಲಿಯೇನಿರತಳಾಗಿ ಅವರ ಬಗ್ಗೆ ಅತ್ಯಂತ ಕಾಳಜಿ ವಹಿಸುತ್ತಿದ್ದ ಅವಳ ತಾಯಿಯಿಂದಲೇ ಬಂದ ಕೊಡುಗೆಯಾಗಿದೆ ಎಂದು ಕಾರ್ನೀಲಿಯಾಳೇ ಹೇಳಿಕೊಳ್ಳುತ್ತಾಳೆ. ಸಮಾಜಸೇವೆಯಲ್ಲಿ ತೊಡಗಿಕೊಳ್ಳಲು ಅವಳು ಮಹಿಳೆಯರ ಹಕ್ಕುಗಳಿಗಾಗಿ ಹೋರಾಟವೊಂದನ್ನು ನಿರ್ಮಿಸಿಕೊಳ್ಳುವುದು ಅವಳ ವೈಯಕ್ತಿಕ ಹೋರಾಟದ ವಿಸ್ತೃತ ರೂಪವೇ ಆಗಿದೆ.ಇದು ಅವಳ ಸಾಹಸವನ್ನಲ್ಲದೇ ಘೋಷಾದಲ್ಲಿರುವ ಮಹಿಳೆಯರ ಅಸಹಾಯಕತೆಯನ್ನೂ, ಅಧಿಕಾರಯುತ ವ್ಯಸ್ಥೆಯೊಂದರ ಪೊಳ್ಳುತನವನ್ನೂ ಬಯಲಾಗಿಸುತ್ತದೆ.

ಕಾರ್ನೀಲಿಯಾಳ “ಇಂಡಿಯಾ ಕಾಲಿಂಗ್” ಪುಸ್ತಕ, ಮೇಲೆ ಹೇಳಿದ ಅಸಹಾಯಕತೆಗಳ ಮೊತ್ತವಾದ ಅನೇಕ ಮೊಕದ್ದಮೆಗಳ ದಾಖಲೆಯಾಗಿದೆ. ಮಕ್ಕಳಿಂದ, ಗಂಡಂದಿರಿಂದ ಉಳಿದ ಇನ್ನಿತರ ಪುರುಷವರ್ಗದಿಂದ ವಂಚಿತರಾದ ಮಹಿಳೆಯರಿಗೆ ಕಾನೂನಿನ ಭದ್ರತೆಯನ್ನು ದೊರಕಿಸಿಕೊಡಲು ಹೋರಾಡಿದ ಕಾರ್ನೀಲಿಯಾಳಲ್ಲಿ ಅವಳ ವೈಯಕ್ತಿಕ ಯಶಸ್ಸೂ ಅಡಗಿದೆ. ಅಮರಪುರದ ರಾಣಿಯೊಬ್ಬಳನ್ನು ತನ್ನ ಪ್ರಾಣವನ್ನೇ ಪಣಕ್ಕಿಟ್ಟು ರಕ್ಷಿಸಿದ ಪ್ರಸಂಗವೊಂದನ್ನು ಕಾರ್ನೀಲಿಯಾ ದಾಖಲಿಸುತ್ತಾಳೆ. ಅಮರಪುರದ ವಿದ್ಯಾವಂತಳಾದ ರಾಣಿಯು ಮೋಸಕ್ಕೆ ಒಳಗಾಗಿ ಒಬ್ಬ ಮೂರ್ಖ ಗಂಡನನ್ನು ಮದುವೆಯಾಗಿ, ಆನಂತರ ದಾಯಾದಿಗಳ ಕುತಂತ್ರಕ್ಕೆ ಸಿಕ್ಕಿ, ಅತ್ಯಂತ ದಾರುಣವಾದ ಸ್ಥಿತಿಯಲ್ಲಿ ತನ್ನ ಮಗನೊಡನೆ ಯಾವುದೋ ಪಾಳು ಕೋಟೆಯಲ್ಲಿ ಬಂಧಿಯಾಗಿರುವ ವಿಷಯವು ಕಾರ್ನೀಲಿಯಾಳಿಗೆ ತಿಳಿಯುತ್ತದೆ.  ಅನೇಕ ಡಕಾಯಿತರ, ಕೊಲೆಗಾರರ, ವೈರಿಗಳ ಪಿತೂರಿಗಳ ನಡುವೆಯೂ ಕಳ್ಳತನದಿಂದ ಹೋಗಿ ರಾಣಿಯನ್ನು ಪಾರುಮಾಡುತ್ತಾಳೆ.

ಇಂತಹ ನೆಲೆಯಲ್ಲಿ ಅಸಹಾಯಕ ಮಹಿಳೆಯರಿಗೆ ಕೇವಲ ಕಾನೂನು ರಕ್ಷಣೆ ಮಾತ್ರವಲ್ಲದೇ ನೈತಿಕ ಸ್ಥೈರ್ಯವನ್ನೂ, ಆತ್ಮವಿಶ್ವಾಸವನ್ನೂ ತುಂಬುವುದರಲ್ಲಿ ನೆರವಾಗುತ್ತಾಳೆ. ಸರ್ಕಾರವು ವಾರ್ಡ್ ಕಾಯಿದೆಯನ್ನು 1904 ರಲ್ಲಿ ಜಾರಿಗೆ ತರುವುದರ ಮೂಲಕ ವಿಧವೆಯ ಕೆಲವು ಹಕ್ಕುಗಳನ್ನು ದಯಪಾಲಿಸಿದಾಗ, ಕಾರ್ನೀಲಿಯಾಳಿಗೆ ಹೊಸ ಆಶಾಕಿರಣವೊಂದು ದೊರೆಯುತ್ತದೆ. ಘೋಷಾದ ಹೆಣ್ಣುಮಕ್ಕಳ ಪರವಾಗಿ ಪುರುಷರೇ ಕಾರ್ಯನಿರ್ವಹಿಸುತ್ತಿದ್ದುದರಿಂದ ಅದರ ಪ್ರಾಮಾಣಿಕತೆಯು ಅನುಮಾನಾಸ್ಪದವಾದುದು, ಜನಾನಾದಲ್ಲಿರುವ ಹೆಣ್ಣುಮಕ್ಕಳು ನೇರವಾಗಿ ತಾವೇ ಹಕ್ಕಗುಳನ್ನು ಚಲಾಯಿಸಲು ಸಾಧ್ಯವಿಲ್ಲದುದರಿಂದ ಸರ್ಕಾರ ಹಾಗೂ ಜನಾನಾದ ನಡುವೆ ಮಧ್ಯವರ್ತಿಯಾಗಿ ಒಬ್ಬ ಮಹಿಳಾ ಅಧಿಕಾರಿಯ ಅಗತ್ಯವಿದೆಯೆಂದು ಆಗ, ಮಹಿಳೆಯರು ನಿಸ್ಸಂಕೋಚವಾಗಿ ತಮ್ಮ ಹಕ್ಕುಗಳನ್ನು ನಿರ್ವಹಿಸಲು ಸಹಾಯವಾಗುವುದೆಂದು ಬ್ರಿಟಿಷ್ ಸರ್ಕಾರಕ್ಕೆ ಪತ್ರ ಬರೆಯುತ್ತಾಳೆ.

ಜನಾನಾದ ಮಹಿಳೆಯರ ಆರೋಗ್ಯ, ಶಿಕ್ಷಣ ಇನ್ನಿತರ ವ್ಯವಹಾರಗಳನ್ನು ಇಂತಹ ಮಹಿಳಾ ಅಧಿಕಾರಿಯ ಸುಪರ್ಧಿನಲ್ಲಿರಿಸುವುದು, ಜನಾನಾದ ಮಹಿಳೆಯರ ಸ್ವಭಾವಕ್ಕೆ ಸೂಕ್ತವಾದುದೆಂಬುದು ಅವಳ ಅಭಿಪ್ರಾಯವಾಗಿರುತ್ತದೆ.  ಆದರೆ ಭಾರತದ ಬ್ರಿಟಿಷ್ ಸರ್ಕಾರವು ಅವಳ ಮಾತನ್ನು ಅನುಮೋದಿಸದೇ ಹೋಗುತ್ತದೆ. ಆನಂತರ 1906ರಲ್ಲಿ ಬಂಗಾಳ ಸರ್ಕಾರವು ತನ್ನ ಪ್ರಾಂತ್ಯದ ಜನಾನಾಗಳ ವಾರ್ಡ್  ಅಧಿಕಾರಿಯಾಗಿ ಕೆಲಸ ನಿರ್ವಹಿಸಲು ಅವಳಿಗೆ ಕರೆ ನೀಡುತ್ತದೆ. ಬಂಗಾಳ, ಬಿಹಾರ, ಒರಿಸ್ಸಾ ಅಸ್ಸಾಂ ಈ ನಾಲ್ಕೂ ಕ್ಷೇತ್ರದ ವಾರ್ಡುಗಳಿಗೆ ಅವಳ ಅಧಿಕಾರವು ಮೀಸಲಾಗಿರುತ್ತದೆ. ಆದರೆ ಕಾರ್ನೀಲಿಯಾ ಇಂಗ್ಲೆಂಡಿನಿಂದ ಕಾನೂನು ಪದವಿಯನ್ನು ಪಡೆಯದೇ, ಅಲ್ಲಿನ ಸರ್ಕಾರದಿಂದ ನೇಮಕಗೊಳ್ಳದ ಕಾರಣ, ಅವಳ ಸ್ಥಾನವನ್ನು ಭಾರತದ ಬ್ರಿಟಿಷ್ ಸರ್ಕಾರ ಕೆಳಗಿಳಿಸುತ್ತದೆ.

ಯಾವ ವಿಶೇಷ ಸೌಲಭ್ಯಗಳೂ ಇಲ್ಲದೇ, ಸಾಕಷ್ಟು ವೇತನವೂ ಇಲ್ಲದಂತಹ ಕೆಲಸವನ್ನು ಕಾರ್ನೀಲಿಯಾ ಒಪ್ಪಿಕೊಳ್ಳುವಲ್ಲಿ ಅವಳಿಗೆ ಆ ಕೆಲಸದ ಬಗ್ಗೆ ಇದ್ದ ಆಸಕ್ತಿ ಹಾಗೂ ನಿಷ್ಠೆಗಳೇ ಕಾರಣ. ಘೋಷಾ ಮಹಿಳೆಯರ ಕಷ್ಟ ಕೋಟಲೆಗಳ ನಿವಾರಣೆಯ ವಿರುದ್ಧದ ಹೋರಾಟದೊಂದಿಗೆ ಕಾರ್ನೀಲಿಯಾ ತನ್ನ ವೈಯಕ್ತಿಕ ಹೋರಾಟವನ್ನೂ ಗುರುತಿಸಿಕೊಳ್ಳುತ್ತಾಳೆ. ಆದುದರಿಂದಲೇ ಅವಳಿಗೆ ತನ್ನ ಕೆಲಸದಲ್ಲಿ ತೃಪ್ತಿ ಹಾಗೂ ಆನಂದವನ್ನು ಅನುಭವಿಸುತ್ತಾಳೆ. ಭಾರತೀಯ ಜನತೆಯನ್ನು ಅತಿ ನಿಕಟವಾಗಿ ಅಭ್ಯಾಸ ಮಾಡುವುದು ಒಂದು ರೀತಿಯ ರೋಚಕ ಅನುಭವವಾಗಿ ಅವಳಿಗೆ ಕಾಣುತ್ತದೆ. ಯಾರೂ ಪ್ರವೇಶ ಮಾಡದಂತಹ ಹಾದಿಯಲ್ಲಿ(off the beaten track) ಕಾರ್ಯಮಾಡುವಂತಹ ಸಾಹಸಮಯ ಸವಾಲುಗಳನ್ನು ಅವಳು ಪ್ರೀತಿಯಿಂದ ಸ್ವೀಕರಿಸುತ್ತಾಳೆ. ಅವರ ಜಾನಪದ ಲೋಕ, ಸಂಪ್ರದಾಯ, ಪುರಾಣ, ನಂಬಿಕೆ, ಮಾಟಮಂತ್ರ, ಶಾಪಗಳು, ಪೂಜೆಗಳು ಇವುಗಳನ್ನು ಹತ್ತಿರದಿಂದ ಕಾಣುತ್ತಾಳೆ.

ಈ ಎಲ್ಲದಕ್ಕಿಂತ ಮಿಗಿಲಾಗಿ ಜನಾನಾದ ಮಹಿಳೆಯರ ಸಾಹಚರ್ಯವು ಅವಳಿಗೆ ಬಹಳ ಸಂತೋಷಕೊಟ್ಟಿತೆಂದೂ, ಅಂತಹ ಸಂತೋಷವೊಂದಕ್ಕೆ ಸಮನಾದ ಯಾವ ಸಂತೋಷವೂ ಇಲ್ಲವೆಂದೂ ಅವಳು ಅವರ ಜೊತೆಗೆ ಕಳೆದ ಸಂತಸದ ಕ್ಷಣಗಳನ್ನು ಉತ್ಸಾಹದಿಂದ ಹೇಳಿಕೊಳ್ಳುತ್ತಾಳೆ. ಇವು ಅವಳು ಮಹಿಳಾ ಪರವಾದ ಪ್ರಾಮಾಣಿಕ ಕಾಳಜಿಗಳಿಗೆ, ಅದನ್ನು ಕಾರ್ಯಗತಗೊಳಿಸುವಲ್ಲಿನ ಅವಳ ನಿಷ್ಕಾಮಕರ್ಮಕ್ಕೆ, ಸೇವಾಕಾಂಕ್ಷೆಗೆ ನಿದರ್ಶನಗಳಾಗಿವೆ. ಅವಳ ಹೋರಾಟವೆನ್ನುವುದು ಏಕಾಕಿಯಾಗಿರುವಂತಹದು. ತನ್ನ ಸಹಾಯಕ್ಕೆಂದು ತನ್ನಂತೆ ಕಾನೂನು ಅಭ್ಯಾಸ ಮಾಡಿದ ಯಾವ ಭಾರತೀಯ ಮಹಿಳೆಯೂ ಇಲ್ಲದೇ ಇದ್ದುದರ ಬಗ್ಗೆ ಅವಳು ವಿಷಾದವನ್ನು ವ್ಯಕ್ತಪಡಿಸುತ್ತಾಳೆ. ಇಂಗ್ಲೆಂಡಿನಲ್ಲಿದ್ದ ಸ್ಕಾಟಿಷ್ ಮಹಿಳೆಯೊಬ್ಬಳು ಕಾರ್ನೀಲಿಯ ಸಹಾಯಕ್ಕೆ ಬರಲು ನಿರ್ಧರಿಸಿದ್ದರೂ, ಆಕೆಯು ಭಾರತೀಯ ಪ್ರಜೆಯಲ್ಲವೆನ್ನುವ ಕಾರಣಕ್ಕೆ ಅವಳ ಪ್ರವೇಶವನ್ನು ನಿರಾಕರಿಸಲಾಗುತ್ತದೆ. ಹೀಗಾಗಿ ಕಾರ್ನೀಲಿಯಾಳ ಹೋರಾಟಕ್ಕೆ ಯಾವ ಬಲವೂ ದೊರಕದೇ ಅವಳು ಏಕಾಂಗಿಯಾಗಿಯೇ ಹೋರಾಡಬೇಕಾಗುತ್ತದೆ.

ಈ ಹೋರಾಟದ ಪ್ರಕ್ರಿಯೆಯಲ್ಲಿ ಕಾರ್ನೀಲಿಯಾ ಕಂಡುಂಡ ಅನುಭವಗಳು ನೂರಾರು. ತನ್ನ ಪ್ರಯಾಣದಲ್ಲಿ, ಸತಿಯಾಗುವುದರಿಂದ ತಪ್ಪಿಸಿಕೊಂಡ ಮಹಿಳೆಯೊಬ್ಬಳ ದಾರುಣ ಕತೆಯನ್ನು ದಾಖಲಿಸಿದ್ದಾಳೆ. ಆ ಮಹಿಳೆಯು ತನ್ನ ಬೆಂದು ಹೋಗಿರುವ ಸೊಟ್ಟ ಬೆರಳನ್ನು ತೋರಿಸುತ್ತಾ “ಈ ನನ್ನ ಬೆರಳುಗಳನ್ನು ನೋಡು. ನಾನು ಮೂರು ವರುಷದವಳಾಗಿದ್ದನಿಂದಲೂ ನನಗೆ ಸುಟ್ಟುಕೊಳ್ಳುವ ತರಬೇತಿಯನ್ನು ಮನೆಯಲ್ಲಿ ನೀಡಲಾಗುತ್ತಿತ್ತು. ಕುದಿಯುವ ಅನ್ನವನ್ನು ನಾವು ಬರಿಗೈನಿಂದಲೇ ತೊಳಸುತ್ತಿದ್ದೆವು. ಮುಂದೆ, ಸತಿಸಹಗಮನದ ಕಾಲಕ್ಕೆ, ಬೆಂಕಿಯಲ್ಲಿ ಸುಟ್ಟುಕೊಳ್ಳಬೇಕಾದ ಸಹನೆಯ ಪಾಠವನ್ನು ನಮಗೆ ಕಲಿಸಲಾಗುತ್ತಿತ್ತು. ಆದರೆ ನನ್ನ ಪತಿಯು ಗತಿಸುವ ಕಾಲಕ್ಕೆ ಕಾನೂನು ನನ್ನ ರಕ್ಷಣೆಗೆ ಬಂದಿದ್ದರಿಂದ ಸತಿಹೋಗುವುದರಿಂದ ನಾನು ಪಾರಾಗಿ ಉಳಿದುಕೊಂಡೆ”, ಆದರೆ ಈ ವಿಧವೆ ತನ್ನ ಮಗನಿಂದಲೂ ಯಾವ ಸುಖ ಕಾಣದೇ ಹೋದ ವ್ಯಥೆಯನ್ನು ಅವಳ ಸಹಾಯಕ್ಕಾಗಿ ನಿಂತ ಕಾರ್ನೀಲಿಯಾ ಹೇಳುತ್ತಾಳೆ.

ತಾಯಿಯ ಮರಣವನ್ನು ಬಹಿರಂಗವಾಗಿ ಆಶಿಸುತ್ತಿದ್ದ ಆಕೆಯ ಮಗ, ಇನ್ನೂ ಜೀವಂತವಾಗಿರುವ ಅವಳನ್ನು ಸ್ಮಶಾನಕ್ಕೆ ಸುಡಲೆಂದು ಹೊತ್ತೊಯ್ಯುತ್ತಿರುವ ಸುದ್ದಿಯು ಕಾರ್ನೀಲಿಯಾಳಿಗೆ ತಲುಪಿ, ಅವಳು ಅಲ್ಲಿಗೆ ಬಂದು ಮಧ್ಯೆ ಪ್ರವೇಶಿಸಿದಾಗ ಸತಿಯಾಗುವ “ಪುಣ್ಯ”ದಿಂದ ಅವಳನ್ನು ತಪ್ಪಿಸಿದ್ದಕ್ಕಾಗಿ ಆಕ್ಷೇಪಿಸಿದನೆಂದು ಕಾರ್ನೀಲಿಯಾ ಬರೆಯುತ್ತಾಳೆ. ಆದರೆ ಆಕೆ ಮಾರನೆಯ ದಿನವೇ ನಿಜವಾಗಿ ಸತ್ತಳೆಂದು ತಿಳಿದು ಕಾರ್ನೀಲಿಯ ಅಲ್ಲಿಗೆ ಧಾವಿಸುವ ಹೊತ್ತಿಗೆ ಚಿತೆಗೆ ಬೆಂಕಿಯ ಸ್ಪರ್ಷವಾಗಿರುತ್ತದೆ. ಮರಣವನ್ನು ಅಧಿಕೃತವಾಗಿ ಪ್ರಮಾಣೀಕರಿಸಿಕೊಳ್ಳದೇ ಶವ ಸಂಸ್ಕಾರಮಾಡುವ ಬ್ರಾಹ್ಮಣರ ಅಮಾನವೀಯ ಪದ್ಧತಿಗಳನ್ನು ಆಕ್ಷೇಪಿಸುತ್ತಾ “ಸಂಪ್ರದಾಯವಾದಿ ಜನರ ನಡುವೆ ಎಲ್ಲಿ ಮರಣದ ಪ್ರಮಾಣದ (Death Certificate) ಪತ್ರಗಳ ಬಳಕೆಯು ಸಾಮಾನು ಸಂಗತಿಯಲ್ಲವೋ, ಎಲ್ಲಿ ಸತ್ತವರನ್ನು ಕೂಡಲೇ ಸಂಸ್ಕಾರ ಮಾಡುವ ಆತುರವಿದೆಯೋ, ಅಂತಹ ದೇಶದಲ್ಲಿ ಅಂತ್ಯ ಸಂಸ್ಕಾರಕ್ಕೆ ಒಳಗಾಗುವವರು ಜೀವಂತವಾಗಿದ್ದಿರಲಾರರು ಎಂಬುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ” ಎಂದು ಹೇಳುತ್ತಾಳೆ.

ಬ್ರಾಹ್ಮಣರ ಶವವನ್ನು ಅನ್ಯರು ಮುಟ್ಟಬಾರದೆಂಬ ನಂಬಿಕೆಯು ಪ್ರಬಲವಾಗಿರುವ ಕಡೆಯಲ್ಲ, ಜೀವಂತವಾಗಿ ಅಂತ್ಯಕ್ರಿಯೆಗೆ ಒಳಗಾಗುವ ಮಹಿಳೆಯರ ಮೇಲಿನ ಅನ್ಯಾಯಗಳು ಬೆಳಕಿಗೆ ಬಾರದೇ ಹೋಗುವ ದುಃಸ್ಥಿತಿಯನ್ನಲ್ಲದೇ, “ಸತಿ” ಯ ಹಿಂದಿರುವ ಕ್ರೌರ್ಯವನ್ನೂ ಇದು ಬಯಲಾಗಿಸುತ್ತದೆ. “ಸತಿ” ವಿರೋಧದ ಕಾಯಿದೆ ಬಂದ ನಂತರ ಬಂಗಾಳದಲ್ಲಿ ಸತಿಹೋದ ಪ್ರಕರಣಗಳು ಅಧಿಕವಾದವು ಎಂದು ರಾಧಾಕುಮಾರ್ ಅವರು ತಮ್ಮ “ಹಿಸ್ಟರಿ ಆಫ್ ಡೂಯಿಂಗ್” ಕೃತಿಯಲ್ಲಿ ಅಭಿಪ್ರಾಯಪಟ್ಟಿರುವುದರ ಮಹತ್ವ ಇಲ್ಲಿ ಅರಿವಾಗುತ್ತದೆ. ಸ್ಮಶಾನಕ್ಕೆ ಹೆಣವಾಗಿ ಹೋದವರು ಮರಳಿ ಮನೆಯೊಳಗೆ ಪ್ರವೇಶಿಸುವುದು ಅಶುಭವಾದ ಕಾರಣ, ಹಾಗೆ ಬದುಕುಳಿದ ಮಹಿಳೆಯರು ಹೆಣದ ಮೇಲಿನ ಹಣದಿಂದ ಪಿಶಾಚಿಗಳಂತೆ ಜೀವಿಸಬೇಕಾಗಿದ್ದ ಅಮಾನವೀಯ ಸಂಗತಿಗಳನ್ನು ತನ್ನ ಅನುಭವಗಳ ಮೂಲಕ ಕಾರ್ನೀಲಿಯಾ ದಾಖಲಿಸುತ್ತಾಳೆ. ವಿಧವೆಯರ ಆಸ್ತಿಗಾಗಿ, ಆಭರಣಗಳಿಗಾಗಿ, ಹಕ್ಕುಗಳಿಗಾಗಿ ತಾಯಂದಿರನ್ನೂ, ಶಿಶುಗಳನ್ನೂ ಬಿಡದೇ ಬಲಿ ತೆಗೆದುಕೊಳ್ಳುವ ಭಾರತೀಯ ಪಿತೃಪ್ರಧಾನ ವ್ಯವಸ್ಥೆಯ ಬಗೆಗೆ ಕಾರ್ನೀಲಿಯಾ ಕ್ರೋಧ ವ್ಯಕ್ತಪಡಿಸುತ್ತಾಳೆ.

ಐದು ವರುಷದ ಬಾಲಕನೊಬ್ಬ ತನ್ನ ತಾಯಿಯನ್ನು ಕಳೆದುಕೊಂಡಾಗ, ಅವಳ ಅಂತ್ಯ ಸಂಸ್ಕಾರವನ್ನು ಪುಟ್ಟ ಬಾಲಕನಿಂದಲೇ ಮಾಡಿಸಿ, ಶವದ ಕಣ್ಣು ಹಾಗೂ ಉಗುರುಗಳಲ್ಲಿನ ಅಸ್ಥಿಯನ್ನು ಆ ಪುಟ್ಟ ಕೈಗಳೇ ತೆಗೆಯಬೇಕೆಂಬ ಬ್ರಾಹ್ಮಣರ ಹಟಕ್ಕೆ ಮಣಿಯದೇ, ಬಾಲಕನ ತಾಯಿಗಿತ್ತ ವಚನದಂತೆ ಅವನನ್ನು ತನ್ನ ಸುಪರ್ದಿಗೆ  ತೆಗೆದುಕೊಳ್ಳುವುದರ ಮೂಲಕ ಸಂಪ್ರದಾಯವಾದಿಗಳೆಲ್ಲರ ವಿರೋಧ ಕಟ್ಟಿಕೊಳ್ಳುತ್ತಾಳೆ ಕಾರ್ನೀಲಿಯಾ. ಆದರೆ ಸಾವಿನ ಸಂದರ್ಭದ ಅಮಾನವೀಯ ಆಚರಣೆಗಳ ಆಘಾತದಿಂದ ಒಂದು ಮಗುವನ್ನು ಪಾರುಮಾಡಿದ ತೃಪ್ತಿ ಲಭಿಸಿತೆಂದು ಅವಳು ಹೇಳಿಕೊಳ್ಳುತ್ತಾಳೆ. ಜನಾನಾದ ಮಹಿಳೆಯರ ನಿಷ್ಕಪಟತೆಯನ್ನು ಪ್ರಶಂಸಿಸುತ್ತಾ ಅವರ ಅಜ್ಞಾನವನ್ನೂ ಖಂಡಿಸುತ್ತಾ ಅವರಲ್ಲಿ ಅರಿವನ್ನು ಮೂಡಿಸುವಂತಹ ಸುಧಾರಣೆಯ ಕಾರ್ಯವನ್ನೂ ಮಾಡುತ್ತಾಳೆ. ಅತೀವ ಜ್ವರದ ತಾಪದಿಂದ ಬಳಲುತ್ತಿದ್ದ ಒಬ್ಬ ಹುಡುಗಿಗೆ ‘ದೆವ್ವದ ಪೀಡೆ’ ಎಂದು ಮಾಂತ್ರಿಕೆ ಚಿಕಿತ್ಸೆಯನ್ನು ಕೊಡಲು ಅನುವಾದ ಮಹಿಳೆಯರನ್ನು ತಡೆದು, ವೈದ್ಯರಿಂದ ಅವಳಿಗೆ ಉಪಚಾರ ಮಾಡಿಸುವುದರ ಮೂಲಕ ಅನೇಕ ಪಂಡಿತರ, ಪುರೋಹಿತರ ಕ್ರೋಧಕ್ಕೆ ಗುರಿಯಾಗುತ್ತಾಳೆ. ಒಬ್ಬ ಎಳೆ ವಯಸ್ಸಿನ ಗರ್ಭಿಣಿಯನ್ನೂ ಇಂತಹುದೇ ಅಜ್ಞಾನದಿಂದ ಪಾರುಮಾಡುತ್ತಾಳೆ. ಹೀಗೆ ಜನಾನಾದ ಮಹಿಳೆಯರ ಮೂರ್ಖತನ, ಅಂಧಶ್ರದ್ಧೆ, ಸಾಂಪ್ರದಾಯಕತೆಗಳಿಗೆ ಸವಾಲಾಗಿ ನಿಲ್ಲುವ ಕಾರ್ನೀಲಿಯಾ, ಕೇವಲ ಒಬ್ಬ ವಕೀಲಳಾಗಿ ಮಾತ್ರ ಕೆಲಸ ಮಾಡುವುದಿಲ್ಲ. ಅವಳ ಹೋರಾಟವೆನ್ನುವುದು ಘೋಷಾದಲ್ಲಿರುವ ಮಹಿಳೆಯರ ಅಂಧಶ್ರದ್ಧೆಯ ವಿರುದ್ಧ ಹಾಗೂ ಅದನ್ನು ಬಲಪಡಿಸುತ್ತಿದ್ದ ಭಾರತೀಯ ಪಿತೃಪ್ರಧಾನ ವ್ಯವಸ್ಥೆಯ ವಿರುದ್ಧವೇ ಆಗಿದೆ.

(ಮುಂದುವರೆಯುವುದು……)

‍ಲೇಖಕರು avadhi

April 28, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: