ಇದು ಸೂರ್ಯನೇ ಇಲ್ಲದ ಖಾಲಿ ಮಾರ್ತಾಂಡ!

ಹುಟ್ಟಿದ್ದುಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ.

ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಮಹಿಳಾ ಸ್ವಾವಲಂಬನೆ ವಿಭಾಗದಲ್ಲಿ ಗ್ರಾಮೀಣ ಮಹಿಳೆಯರಿಗೆ ಕಲಾ ತರಬೇತಿ ನೀಡುತ್ತಿರುವುದು ತೃಪ್ತಿಕೊಟ್ಟಿದೆ.

ತಿರುಗಾಟ ಹುಚ್ಚು. ಸ್ಟ್ರೆಂತೂ, ವೀಕ್ನೆಸ್ಸುಗಳೆರಡೂ ಹಿಮಾಲಯವೇ. ಬದುಕಿನ ಚಿಕ್ಕ ಚಿಕ್ಕ ಸಂಗತಿಗಳು ಕ್ಯಾಮರಾ ಫ್ರೇಮಿನೊಳಗೆ ಇಳಿವಾಗ ಅವುಗಳು ರೂಪಾಂತರ ಹೊಂದುವ ಅದ್ಭುತ ಸಾಧ್ಯತೆಗಳ ಬಗ್ಗೆ ಸದಾ ಬೆರಗು.

ಕೆಲವೊಮ್ಮೆ ಎಲ್ಲಿಗೋ ಹೊರಟು ಎಲ್ಲಿಗೋ ಹೋಗಿ ತಲುಪಿಬಿಡುತ್ತೇವೆ. ಹಾಗೆ ತಲುಪಿದ ಜಾಗದಲ್ಲಿ ಒಂದು ಸರ್‌ಪ್ರೈಸ್‌ ಕಾದಿರುತ್ತದೆ! ಒಂದು ಅನಿರೀಕ್ಷಿತ ಜಾಗ, ಒಂದು ಅನಿರೀಕ್ಷಿತ ಬಂಧ ಕಟ್ಟಿಕೊಡುವ ಅಚ್ಚರಿಯೇ ಅಂಥದ್ದು. ಪ್ರಯಾಣ ಎನ್ನುವುದು ಅದಕ್ಕೇ ವಿಸ್ಮಯ. ಎಂದೂ ಮುಗಿಯದ ಸೆಳೆತ.

ಈ ಮಾರ್ತಾಂಡ ದೇವಸ್ಥಾನದ ವಿಷಯದಲ್ಲೂ ಆಗಿದ್ದು ಅದೇ. ಬೆಳ್ಳಂಬೆಳಿಗ್ಗೆ ಗಡಗಡ ಚಳಿಯಲ್ಲಿ ಎದ್ದು ಸೀದಾ ಕಾಶ್ಮೀರದ ಅನಂತನಾಗ್‌ ಜಿಲ್ಲೆಯಲ್ಲಿರುವ ಈ ಮಾರ್ತಾಂಡ ದೇವಾಲಯವನ್ನು ಗೂಗಲ್‌ ಮ್ಯಾಪಿನಲ್ಲಿ ಹಾಕಿಕೊಂಡು ಅದು ಹೇಳಿದಂತೆ ಹೋಗಿ, ಕೊನೆಗೆ ಅದು ʻಇದೇ ನೋಡಿ ನೀವು ಕೇಳಿದ ಮಾರ್ತಾಂಡ ದೇವಸ್ಥಾನʼ ಖಂಡತುಂಡವಾಗಿ ತೀರ್ಪು ಕೊಟ್ಟಾಗ ನಮಗೆ ಫುಲ್‌ ಶಾಕು. ನಾವು ಚಿತ್ರದಲ್ಲಿ ನೋಡಿದ ಮಾರ್ತಾಂಡ ದೇವಸ್ಥಾನ ಯಾವುದು! ಇದ್ಯಾವುದು! ಎಂದು ತಿಳಿಯದೆ, ಕಾರಿಳಿದು ಒಳಹೋದರೆ ಇದರ ಬೋರ್ಡೂ ಮಾರ್ತಾಂಡ ದೇವಸ್ಥಾನ ಎಂದು ಹೇಳುತ್ತಿತ್ತು. ಗೂಗಲ್ಲು ಸುಳ್ಳು ಹೇಳಿರಲಿಲ್ಲ. ಆದರೆ ಇದು ಮಾತ್ರ ನಾವು ಕೇಳಿದ್ದು ಅಲ್ಲವಲ್ಲ ಎಂದು ತಲೆಕೆರೆದುಕೊಳ್ಳುತ್ತಾ, ಮಿಲಿಟರಿ ಕಾವಲಿದ್ದ ಹಾಗೂ ಇದಕ್ಕೂ ಹತ್ತಿರ ಹತ್ತಿರ ಸಾವಿರ ವರ್ಷ ಇತಿಹಾಸವಿದೆ ಎಂದು ತಿಳಿಯುತ್ತಿದ್ದಂತೆ, ಇಂಟರೆಸ್ಟಿಂಗ್‌ ಆಗಿ ಕಂಡು ಒಳ ಹೊಕ್ಕರೆ ಇನ್ನೂ ಒಂದು ಅಚ್ಚರಿ ಕಾದಿತ್ತು.

ಆಗಷ್ಟೇ, ಆ ಭವ್ಯ ಬಂಗಲೆಯಂತಿದ್ದ ಪಂಡಿತರೊಬ್ಬರ ಪಾಳು ಬಿದ್ದ ಮನೆಯೊಂದನ್ನು ದಾಟಿಕೊಂಡು ಬಂದಿದ್ದೆವು. ಕಣ್ಣ ಮುಂದಿನ್ನೂ ಆ ಮನೆಯ ಮುಚ್ಚಿದ ಬಾಗಿಲು, ಅರ್ಧ ತೆರೆದ ಕಿಟಕಿ, ಧೂಳು ಹಿಡಿದ ಬೀಗದ ಚಿತ್ರವೇ ಮತ್ತೆ ಮತ್ತೆ ಬರುತ್ತಿತ್ತು. ʻಆ ಮಾರ್ತಾಂಡ ದೇವಾಲಯಕ್ಕಿಂತ ನಂತರ ಕಟ್ಟಿದ ದೇವಾಲಯವಿದು. ಇದೂ ಅದರ ಒಂದು ಭಾಗವೇ. ಇಲ್ಲಿ ನೀರಿನ ಚಿಲುಮೆಯೂ ಇದೆ ನೋಡಿ. ಹಾಗಾಗಿ ಇಂದಿಗೂ ದೇಶದ ನಾನಾ ಕಡೆಗಳಿಂದ ದರ್ಶನಕ್ಕಾಗಿ ಬರುವುದು ಇಲ್ಲಿಗೇ.

ನೀವು ಈ ಊರಲ್ಲಿ ಎಲ್ಲೇ ತಿರುಗಾಡಿ ನೋಡಿ, ಈ ಊರಿನ ಅಳಿದುಳಿದ ಪಂಡಿತರು ಈ ದೇವಸ್ಥಾನದೊಳಗೆ ಮಾತ್ರ ಕಂಡಾರು, ಬಿಟ್ಟರೆ ಸುಲಭವಾಗಿ ಕಾಣಸಿಗುವುದಿಲ್ಲ, ಬೇಕಾದರೆ ಒಂದು ರೌಂಡು ನೋಡಿಕೊಂಡು ಬನ್ನಿ ಆಮೇಲೆʼ ಎಂದು ಹೇಳುತ್ತಾ ಆ ದೇವಾಲಯದ ಅರ್ಚಕರು ನಮಗಾಗಿ ಬಾಗಿಲು ತೆರೆದಿದ್ದರು. ದೇವಸ್ಥಾನ ಖಾಲಿ ಇತ್ತು. ಪಕ್ಕದಲ್ಲೊಂದು ಸ್ಪಟಿಕ ಶುದ್ಧ ನೀರಿನ ಕೆರೆ. ಕಾಶ್ಮೀರದ ತುಂಬ ʻನಾಗʼ (ಉದಾ: ಅನಂತನಾಗ್‌, ನಾರ್‌ನಾಗ್‌) ಎಂಬ ಪದವನ್ನು ತಮ್ಮ ಹೆಸರಿನೊಂದಿಗೆ ಜೋಡಿಸಿಕೊಂಡು ಕರೆಯಲ್ಪಡುವೂದೂ ಇಂತಹ ನೀರಿನ ಚಿಲುಮೆಗಳು ಅಲ್ಲಿರುವುದಕ್ಕಾಗಿಯೇ.

ದೇಗುಲದ ಆ ಕೆರೆ ತುಂಬಾ ಮೀನುಗಳು. ʻಪಾರ್ವತೀ ದೇವಿಯ ಮಕ್ಕಳಿವು. ಒಂದು ಮೀನು ಸತ್ತರೂ, ಹಿಂದೂ ಧರ್ಮದ ಪ್ರಕಾರ ಶವ ಸಂಸ್ಕಾರ ಮಾಡುತ್ತೇವೆʼ ನನ್ನ ಕ್ಯಾಮರಾ ಕ್ಲಿಕ್ಕಿನ ಸೌಂಡಿನೊಂದಿಗೆ, ಥರಗುಟ್ಟುವ ಆ ಚಳಿನೀರನ್ನು ಕೊಡಪಾನದಲ್ಲಿ ಬುಳುಬುಳು ತುಂಬುತ್ತಾ ಅವರಂದರು. ಬರಿಗಾಲು ನನಗೆ ಶೀತಗಟ್ಟುತ್ತಿತ್ತು. ಬೇಗಬೇಗನೆ ಒಂದು ರೌಂಡು ಹಾಕಿ ಹೊರಗೆ ಬಂದಾಗ ಅಚಾನಕ್ಕಾಗಿ ಸಿಕ್ಕಿದ್ದು ಸತೀಶ್‌ ಭಟ್.‌

ʻಮಾರ್ತಾಂಡ ದೇವಸ್ಥಾನ ಎಂದುಕೊಂಡು ಇಲ್ಲಿಗೆ ತಪ್ಪಿ ಬಂದುಬಿಟ್ಟೆವು. ಅದೆಷ್ಟು ದೂರವಿದೆ? ಹೇಗೆ ಹೋಗಬೇಕು? ದಾರಿ ಹೇಳುವಿರಾʼ ಎಂದು ಕೇಳಿದ್ದೆವು. ʻನೀವು ತಪ್ಪಿ ಇಲ್ಲಿ ಬಂದುಬಿಟ್ಟೆವು ಎನ್ನಬೇಡಿ, ತಪ್ಪಿ ಯಾರೂ ಬರುವುದಿಲ್ಲ. ಇದೂ ಮಾರ್ತಾಂಡವೇ. ನೀವು ಇಲ್ಲಿಗೆ ಬರಬೇಕಿತ್ತು, ಹಾಗಾಗಿ ಈ ಜಾಗವೇ ಕರೆಸಿಕೊಂಡಿದೆ ನಿಮ್ಮನ್ನು. ಇಂಥ ಹೊತ್ತಲ್ಲೀಗ ಊಟ ಮಾಡಿಸದೆಯೂ ನಿಮ್ಮನ್ನು ಬಿಡುವುದಿಲ್ಲ. ಈ ಊಟ, ಈ ಪರಿಚಯ ಎಲ್ಲವೂ ಹಾಗೆಯೇ, ನಾವು ನಾವು ಬೇಕೆಂದೇ ಮಾಡಿಕೊಳ್ಳುವುದಲ್ಲ, ಅದಾಗಿಯೇ ಆಗಿದ್ದುʼ ಎಂದೆಲ್ಲ ಮಾತನಾಡಿ ನಮ್ಮ ಬಾಯಿಕಟ್ಟಿ ಹಾಕಿ, ಹೊಟ್ಟೆ ತುಂಬಾ ರುಚಿಯಾದ ಊಟ ಬಡಿಸಿದ್ದರು. ಕಾಶ್ಮೀರದಲ್ಲಿದ್ದ ಅಷ್ಟೂ ದಿನ ಪದೇ ಪದೇ ವಿಚಾರಿಸಿಕೊಂಡು ಕಾಳಜಿ ತೋರಿದ್ದರು. ಇಂಥ ಸತೀಶ್‌ ಭಟ್‌ ಮೊನ್ನೆ ಫೋನ್‌ ಮಾಡಿ, ʻಮರೆತೇ ಹೋಯಿತೇನ್ರಿ ನಿಮ್ಗೆ ನನ್ನ? ವಾಪಸ್ಸು ಮನೆಗೆ ಹೋದ ಮೇಲೆ ಸುದ್ದಿನೇ  ಇಲ್ಲʼ ಅಂತ ಪ್ರೀತಿಯಿಂದಲೇ ದಬಾಯಿಸಿದ್ದರು.

ಅಷ್ಟಕ್ಕೂ ಕಾಶ್ಮೀರಕ್ಕೆ ಹೋದ ಮೇಲೆ ಈ ಮಾರ್ತಾಂಡ ಸೂರ್ಯ ದೇವಾಲಯದ ಹಿಂದೆ ಬಿದ್ದಿದ್ದಕ್ಕೂ ಕಾರಣ ಇದೆ. ಕಾಶ್ಮೀರದ ಇತಿಹಾಸದಲ್ಲಿ ಇಂದಿಗೂ ತನ್ನ ಅತ್ಯದ್ಭುತ ವಾಸ್ತುಶಿಲ್ಪದಿಂದ ಹಾಗೂ ಹಲವು ದಾಳಿಗಳಿಗೆ ಸಿಕ್ಕಿ ನಜ್ಜುಗುಜ್ಜಾಗಿ ಅವಶೇಷವಾದರೂ ಈಗಲೂ ತನ್ನ ಸೌಂದರ್ಯವನ್ನು ಅಂತೆಯೇ ಕಾಪಿಟ್ಟುಕೊಂಡಿರುವ ದೇವಾಲಯವಿದು. ಇವಿಷ್ಟೇ ಅಲ್ಲದೆ, ಇದು ಇನ್ನೂ ಎರಡು ಕಾರಣಗಳಿಗೆ ಭಾರತದ ಇತಿಹಾಸದಲ್ಲಿ ತನ್ನದೇ ಸ್ಥಾನವನ್ನು ಉಳಿಸಿಕೊಂಡಿದೆ. ಒಂದು, ಇದು ಭಾರತದ ಅತ್ಯಂತ ಹಳೆಯ ಸೂರ್ಯ ದೇವಾಲಯ. ಇನ್ನೊಂದು ಇದು ಅತ್ಯಂತ ದೊಡ್ಡದೂ ಕೂಡಾ.

ನೀವು ಕಿಶೋರ್‌ ಕುಮಾರ್‌, ಅಥವಾ ಲತಾಮಂಗೇಶ್ಕರ್‌ ಅಥವಾ ಆರ್‌ ಡಿ ಬರ್ಮನ್‌ ಅಥವಾ ಕಡೇ ಪಕ್ಷ ಹಳೇ ಹಿಂದಿ ಹಾಡುಗಳನ್ನು ಇಷ್ಟಪಡುವವರಾಗಿದ್ದರೂ ಸಾಕು, ಖಂಡಿತಾ ʻತೇರೆ ಬಿನಾ ಝಿಂದಗೀ ಸೇ ಕೋಯೀ…ʼ ಹಾಡು ಖಂಡಿತಾ ಕೇಳಿರುತ್ತೀರಿ. ಈ ಪ್ರಸಿದ್ಧ ಹಾಡಿನಲ್ಲಿ ಬರುವ ದೇವಾಲಯ ಇದೇ ಮಾರ್ತಾಂಡ. ಇನ್ನೂ ಸ್ವಲ್ಪ ಇತ್ತೀಚೆಗಿನ ಕಾಲಕ್ಕೆ ಬರುವುದಾದರೆ, ವಿಶಾಲ್‌ ಭಾರಧ್ವಾಜ್‌ ನಿರ್ದೇಶನದ ʻಹೈದರ್‌ʼ ಚಿತ್ರದ ʼಬಿಸ್ಮಿಲ್‌ ಬಿಸ್ಮಿಲ್‌ʼ ಪೂರ್ತಿ ಹಾಡಿನಲ್ಲಿ ಬರುವ ದೇವಾಲಯವೂ ಇದೇ ಮಾರ್ತಾಂಡ. ಈ ಹಾಡನ್ನು ಈ ಪರಿಸರದಲ್ಲಿ ಚಿತ್ರೀಕರಿಸಿದ್ದಕ್ಕೆ ವಿವಾದವೂ ಆಗಿತ್ತು. ಮೊನ್ನೆ ಮೊನ್ನೆ ಭೂಮಿ ಪೂಜೆ ಮುಗಿಸಿಕೊಂಡು ನಿರ್ಮಾಣವಾಗಲಿರುವ, ನವದೆಹಲಿಯ ಹೊಸ ಸಂಸದ್‌ ಭವನದ ಮುಖ್ಯ ದ್ವಾರ ಕೂಡಾ ಇದೇ ಮಾರ್ತಾಂಡ ದೇಗುಲದ ಪ್ರವೇಶ ದ್ವಾರವನ್ನು ಹೋಲುವಂತೆ ನಿರ್ಮಿಸಲಾಗುತ್ತದೆ ಎಂಬ ಸುದ್ದಿಯೂ ಇದೀಗ ಹೊರಬಿದ್ದಿದೆ.

ಭಾರತದಲ್ಲಿರುವ ಪ್ರಮುಖ ಪ್ರಾಚೀನ ಸೂರ್ಯ ದೇವಾಲಯಗಳು ಬೆರಳೆಣಿಕೆಯವು. ಅದರಲ್ಲಿ, ಸೂರ್ಯ ದೇವಾಲಯ ಎಂದ ಕೂಡಲೇ ಥಟ್ಟಂತ ನೆನಪಾಗುವುದು ಒಡಿಶಾದ ಕೋಣಾರ್ಕ ಸೂರ್ಯ ದೇವಾಲಯ. ಪ್ರಸಿದ್ಧಿಯ ಮಟ್ಟಿನಲ್ಲಿ ಇದಕ್ಕೆ ಮೊದಲನೇ ಸ್ಥಾನವಿರಬಹುದು. ಇದು ಗಂಗರ ಕಾಲದಲ್ಲಿ ೧೩ನೇ ಶತಮಾನದಲ್ಲಿ ನಿರ್ಮಿತವಾದುದು. ಇದನ್ನು ಬಿಟ್ಟರೆ ಮತ್ತೊಂದು ಸೂರ್ಯ ದೇವಾಲಯ ನೆನಪಿಗೆ ಬರುವುದು ಗುಜರಾತಿನ ಮೊಢೇರಾ ಸೂರ್ಯ ದೇವಾಲಯ. ಇದೂ ಕೂಡಾ ತುಂಬ ಸುಂದರವಾದ ಕೆತ್ತನೆಗಳಿರುವ ಚಾಲುಕ್ಯರ ಕಾಲದ ೧೧ನೇ ಶತಮಾನದಲ್ಲಿ ನಿರ್ಮಿತವಾದ ಸೂರ್ಯ ದೇವಾಲಯ. ಇವೆರಡೂ ಪ್ರಾಚೀನ ಸೂರ್ಯ ದೇವಾಲಯಗಳು ನಿತ್ಯಪೂಜೆಯ ಬಳಕೆಯಲ್ಲಿಲ್ಲದಿದ್ದರೂ, ಸಾಕಷ್ಟು ಸುಸ್ಥಿತಿಯಲ್ಲಿಯೂ ಇವೆ. ಇವೆರಡಕ್ಕೆ ಹೋಲಿಸಿದರೆ ಕಾಶ್ಮೀರದ ಮಾರ್ತಾಂಡ ದೇವಾಲಯ ಭಿನ್ನ ಹಾಗೂ ದುರಂತದ ಕಥೆಯೊಂದನ್ನು ತನ್ನೊಳಗೆ ಹುದುಗಿಸಿಟ್ಟುಕೊಂಡಿರುವ ಅವಶೇಷ ಎಂದೇ ಹೇಳಬಹುದಾದ ಸ್ಥಿತಿಯಲ್ಲಿದೆ. ಇಷ್ಟಾಗಿಯೂ ಇದು ತನ್ನ ಅಗಾಧತೆ ಹಾಗೂ ವೈಶಿಷ್ಟ್ಯತೆಯನ್ನು ತನ್ನೆದುರು ನಿಂತ ವ್ಯಕ್ತಿಗೆ ದಾಟಿಸುವಲ್ಲಿ ಸೋಲದು ಎಂಬುದೂ ಸತ್ಯವೇ.

ಈಗ ದೊಡ್ಡ ದೊಡ್ಡ ಗಗನಚುಂಬಿ ಕಟ್ಟಡಗಳು, ಹೋದಷ್ಟೂ ಮುಗಿಯದ ನಗರಗಳೆಂಬ ಸಮುದ್ರಗಳು, ಹೊರಗಿನ ಪ್ರಪಂಚದಲ್ಲಿ ಏನಾಗುತ್ತಿದೆಯೆಂಬುದು ಅರಿವಿಗೇ ಬಾರದಂತಹ ಅಪಾರ್ಟ್ಮೆಂಟುಗಳಲ್ಲೆಲ್ಲ ಜೀವಿಸುವ ನಮ್ಮ ಕಣ್ಣಿಗೂ ಈ ದೇವಾಲಯ ಎಷ್ಟು ಬೃಹತ್ತಾಗಿ ಕಾಣಿಸುತ್ತದೆಯೆಂದರೆ, ಅಂದಿನ ಕಾಲಕ್ಕೆ ಎಂಟನೇ ಶತಮಾನದಲ್ಲಿ, ಖಾಲಿ ಖಾಲಿ ಬಟಾ ಬಯಲು ಗದ್ದೆ, ನದೀ ತೀರದಲ್ಲೊಂದು ಇಂತಹ ದೈತ್ಯ ಕಲ್ಲಿನ ದೇವಾಲಯವೊಂದು ಆಗಸದೆತ್ತರಕ್ಕೆ ತಲೆಯೆತ್ತಿ ನಿಂತಿದ್ದನ್ನು ಕಣ್ಣಾರೆ ನೋಡಿದವರ ಭಾವನೆ ಹೇಗಿದ್ದೀತು! ಊಹನೆಗೆ ನಿಲುಕುವುದು ಕಷ್ಟ. ಆದರೂ, ಈ ದೇವಾಲಯ ವಿಶೇಷವೆನಿಸುವುದು ಅಲ್ಲಿಯೇ. ಬೃಹತ್‌ ಗಾತ್ರದ ಬಂಡೆಕಲ್ಲುಗಳನ್ನು ಅಲುಗಾಡದ ಹಾಗೆ ಒಂದರ ಮೇಲೆ ಇನ್ನೊಂದು ಪೇರಿಸಿಟ್ಟಂತೆ ಇಡೀ ದೇವಾಲಯ ಕಟ್ಟಲಾಗಿದೆ. ಮಕ್ಕಳು ಬಿಲ್ಡಿಂಗ್‌ ಬ್ಲಾಕ್ಸ್‌ ಆಡುತ್ತಾರಲ್ಲ ಹಾಗೇ ಇದೆ ಇದೂ ಕೂಡಾ. ವಿಚಿತ್ರವೆಂದರೆ ಹೀಗೆ ಪೇರಿಸಿಟ್ಟ ಬೃಹತ್‌ ಗಾತ್ರದ ಬಂಡೆಗಳು ಯಾವ್ಯಾವ ದಾಳಿಗಳಲ್ಲೂ ಅಲುಗಾಡದೆ ೧೨೦೦ ವರ್ಷಗಳನ್ನು ಕಾಲವನ್ನು ಸವೆಸಿದ್ದು!

೮ನೇ ಶತಮಾನದಲ್ಲಿ ಲಲಿತಾದಿತ್ಯ ಇದನ್ನು ಕಟ್ಟಿಸಿದ ಎಂದು ಇತಿಹಾಸಕಾರರು ಹೇಳುತ್ತಾರೆ. ಆದರೆ, ಈ ದೇವಾಲಯದ ಅಡಿಪಾಯ ಅದಕ್ಕೂ ಮೊದಲೇ ಸುಮಾರು ಕ್ರಿಶ ೩೭೦-೫೦೦ರೊಳಗೆಯೇ ರಾಣಾದಿತ್ಯನ ಕಾಲದಲ್ಲಿಯೇ ಹಾಕಲಾಗಿತ್ತು ಹಾಗೂ ಇದೇ ಅಡಿಪಾಯದ ಮೇಲೆ ರಾಜ ಲಲಿತಾದಿತ್ಯ ಇದನ್ನು ೮ನೇ ಶತಮಾನದಲ್ಲಿ ಕಟ್ಟಿಸಿದ ಎಂಬ ವಿವರಗಳು ಇತಿಹಾಸದಲ್ಲಿ ಸಿಗುತ್ತವೆ.

ಸೂರ್ಯನನ್ನು ಹೊರತಾಗಿ ಗಂಗಾ, ಯಮುನಾ, ವಿಷ್ಣುವೂ ಇಲ್ಲಿ ಪ್ರಾತಿನಿಧ್ಯ ಪಡೆದುದನ್ನು ಇಲ್ಲಿನ ಶಿಲ್ಪಗಳಲ್ಲಿ ಕಾಣಬಹುದು. ಕಾಶ್ಮೀರದ ಸಾಂಪ್ರದಾಯಿಕ ವಾಸ್ತುಶಿಲ್ಪದ ಜೊತೆಗೆ, ಗಾಂಧಾರ, ಗುಪ್ತ, ಚೈನೀಸ್‌, ರೋಮನ್‌ ಹಾಗೂ ಗ್ರೀಕ್‌ ವಾಸ್ತುಶಿಲ್ಪದ ಪ್ರಭಾವವನ್ನೂ ಮೈಗೂಡಿಸಿಕೊಂಡು ಎದ್ದು ನಿಂತ ಈ ದೇವಾಲಯ ೮೪ ಪುಟ್ಟ ಮಂದಿರಗಳಿಂದ ಸುತ್ತುವರಿಯಲ್ಪಟ್ಟಿದೆ. ಸೂರ್ಯ ಆಗಸದಲ್ಲಿರುವ ಅಷ್ಟೂ ಹೊತ್ತು ಸೂರ್ಯನ ಬೆಳಕು ಗರ್ಭಗೃಹದೊಳಗೆ ಬೀಳುವಂತೆ ಇದನ್ನು ವಿನ್ಯಾಸಗೊಳಿಸಿರುವುದು ಇದರ ವೈಶಿಷ್ಟ್ಯತೆ. ದೇವಾಲಯದ ಗೋಪುರ ಪಿರಮಿಡ್‌ ಆಕೃತಿಯಲ್ಲಿದಿರಬಹುದು ಎಂದು ಅಂದಾಜಿದ್ದು, ಈಗ ಛಾವಣಿಯಿಲ್ಲದೆ ಆಗಸಕ್ಕೆ ಬಾಯ್ತೆರೆದು ನಿಂತಿದೆ. ಮುರಿದುಬಿದ್ದ ಶಿಲ್ಪಗಳು, ಕಂಬಗಳು ದೇವಾಲಯದ ಸುತ್ತಲೂ ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿವೆ. ಯಾರು ಒಳಗೆ ಬಂದಿದ್ದಾರೆ, ಯಾರು ಏನು ಮಾಡುತ್ತಾರೆ ಎಂದು ನೋಡಲೂ ಸಹ ಸರಿಯಾದ ಕಾವಲು ಇಲ್ಲಿಲ್ಲ ಎಂಬುದೇ ಬಹಳ ವಿಷಾದದ ವಿಚಾರ.

ಈ ದೇವಾಲಯ ಈ ಸ್ಥಿತಿಗೆ ಯಾಕೆ ಬಂತು ಎಂದು ಕೆದಕ ಹೊರಟರೆ ಪ್ರಮುಖವಾಗಿ ಕಲ್ಹಣ ಹಾಗೂ ಜೋನರಾಜನ ರಾಜ ತರಂಗಿಣಿಗಳೂ ಸೇರಿದಂತೆ ಹಲವು ಆಕರಗಳಲ್ಲಿ ಇಬ್ಬರು ರಾಜರ ಬಗ್ಗೆ ಉಲ್ಲೇಖಗಳು ಸಿಗುತ್ತವೆ. ಒಬ್ಬ ೧೧ನೇ ಶತಮಾನದಲ್ಲಿ ಕಾಶ್ಮೀರವನ್ನಾಳಿದ ರಾಜ ಹರ್ಷ. ಇನ್ನೊಬ್ಬ ೧೪-೧೫ನೇ ಶತಮಾನದ ರಾಜ ಸಿಕಂದರ್‌ ಬುಟ್ಶಿಕಾನ್. ಲಲಿತಾದಿತ್ಯ ತನ್ನ ಕನಸಿನಂತೆ ಕಟ್ಟಿ ಮೆರೆದು ರಾಜ್ಯವಾಳಿದ ಪರಿಹಾಸಪುರವನ್ನೂ ಕೂಡಾ ಒಂದು ಮಟ್ಟಿಗೆ ಹಾಳುಗೆಡವಿದ್ದು ಈತನೇ.

ಹಿಂದೂ ರಾಜನೊಬ್ಬ ಹಿಂದೂ ದೇವಾಲಯಗಳನ್ನೇ ಹಾಳುಗೆಡವಿದ ಪ್ರಸಂಗ ಇತಿಹಾಸದಲ್ಲಿ ಬಹು ಅಪರೂಪವಾದದ್ದು. ಸಾಹಿತ್ಯ ಸಂಗೀತಗಳಲ್ಲಿ ಅಪಾರ ಪ್ರೀತಿಯಿದ್ದ, ಸಂಸ್ಕೃತಿಯಲ್ಲಿ ನಂಬಿಕೆಯಿದ್ದ ರಾಜನೊಬ್ಬ ಹೀಗೇಕೆ ಮಾಡಿದ ಎಂದರೆ, ಆತನ ಶೋಕಿ ಪ್ರವೃತ್ತಿಯೇ ಕಾರಣ ಎಂಬ ಉತ್ತರ ಸಿಗುತ್ತದೆ. ಮಾಡಿದ ದುಂದುವೆಚ್ಚದಿಂದ ಬೊಕ್ಕಸ ತುಂಬಲು ಈತನ ಕಣ್ಣು ಬಿದ್ದಿದ್ದು, ಲಲಿತಾದಿತ್ಯನ ಕಾಲದಲ್ಲಿ ಸುವರ್ಣಯುಗದಂತೆ ಮೆರೆದಿದ್ದ ಹಲವಾರು ದೇವಾಲಯಗಳ ಬೆಲೆಬಾಳುವ ಮೂರ್ತಿಗಳು. ಈತ ದೇವಾಲಯವನ್ನು ಹಾಳು ಮಾಡಲಿಲ್ಲ, ಆದರೆ, ಅಲ್ಲಿನ ಲೋಹದ ಮೂರ್ತಿಗಳಿಗಷ್ಟೇ ಕನ್ನ ಹಾಕಿದ. ಇದೇ ಹರ್ಷ ಈ ಮಾರ್ತಾಂಡ ದೇವಾಲಯದಲ್ಲೂ ತನ್ನ ಕಾಲಿಟ್ಟು ಇಲ್ಲಿನ ಮೂರ್ತಿಗಳನ್ನೂ ಅಪಹರಿಸಿ, ದೇವಾಲಯದ ಅವನತಿಗೆ ಕಾರಣನಾದ. ಆದರೆ, ಆತನ ಈ ಕಾರ್ಯಗಳು ಅವನನ್ನು ಕೊನೆಗಾಲದಲ್ಲಿ ಕಾಡದೆ ಬಿಡಲಿಲ್ಲ ಎಂಬ ಕಥೆಗಳೂ ಇವೆ.

ಹರ್ಷನ ನಂತರ ಇಡೀ ದೇವಾಲಯ ಮುರಿದು ಬಿದ್ದು ನಾಶವಾಗಲು ಇನ್ನೊಬ್ಬ ಕಾರಣಕರ್ತ ಸುಲ್ತಾನ್‌ ಸಿಕಂದರ್ ಬುಟ್ಶಿಕಾನ್.‌ ಲಲಿತಾದಿತ್ಯನ ಕಾಲ ಮುಗಿದು ಆತನ ಮೊಮ್ಮಕ್ಕಳೂ ಕಾಶ್ಮೀರ ಆಳಿದ ಮೇಲೆ ಸುಮಾರು ೭೦೦ ವರ್ಷಗಳ ನಂತರ ಪ್ರಾಬಲ್ಯ ಮೆರೆದದ್ದು ಈ ಸಿಕಂದರ್.‌ ಈ ರಾಜ ಕಾಶ್ಮೀರದ ಇಸ್ಲಾಮೀಕರಣದಲ್ಲಿ ಬಹುಮುಖ್ಯ ಹೆಸರು. ಈ ಸಿಕಂದರ್‌ಗೆ ʻವಿಗ್ರಹ ಭಂಜಕʼ ಎಂಬ ಅನ್ವರ್ಥನಾಮವೇ ಇತ್ತು. ಅದು ಬಿರುದಿನಂತೆ. ಈತ ಈ ಮಾರ್ತಾಂಡ ದೇವಾಲಯವನ್ನೂ ಸೇರಿದಂತೆ ಹಲವು ದೇವಾಲಯಗಳನ್ನು ನಾಶಗೊಳಿಸಿರುವ ವಿವರಗಳು ರಾಜತರಂಗಿಣಿಯೂ ಸೇರಿದಂತೆ ಹಲವೆಡೆಗಳಲ್ಲಿ ದಾಖಲಾಗಿದೆ. ಸುಮಾರು ಒಂದು ವರ್ಷ ಕಾಲ ಈ ದೇಗುಲದ ಧ್ವಂಸ ಕಾರ್ಯ ಜಾರಿಯಲ್ಲಿತ್ತು ಎಂಬ ವಿವರಗಳೂ ದೊರೆಯುತ್ತವೆ.

ಸೂರ್ಯನನ್ನು ಭಗವಂತನ ಸ್ಥಾನದಲ್ಲಿಟ್ಟು ಪೂಜಿಸುವುದಕ್ಕೆ ಬಹಳ ದೊಡ್ಡ ಇತಿಹಾಸವಿದೆ. ಕೇವಲ ಭಾರತವಷ್ಟೇ ಅಲ್ಲ, ಚೀನಾ, ಈಜಿಪ್ಟ್‌, ಜಪಾನ್‌, ಪೆರು ಹೀಗೆ ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಸೂರ್ಯ ಮಂದಿರವಿದ್ದ ಕುರುಹುಗಳು ಸಿಕ್ಕಿವೆ ಹಾಗೂ ಈಗಲೂ ಇವೆ. ಹಿಂದೂ ಧರ್ಮ ಸೇರಿದಂತೆ, ಹಲವು ಧರ್ಮಗಳಲ್ಲಿ ಜಗತ್ತಿಗೆ ಬೆಳಕು ನೀಡುವ ಸೂರ್ಯನನ್ನು ದೇವರು ಎಂದು ಪೂಜಿಸುವುದು ತಲೆತಲಾಂತರಗಳಿಂದಲೂ ನಡೆದುಕೊಂಡು ಬಂದಿದೆ. ಕಾಶ್ಮೀರದ ಪಂಡಿತರೂ ಇದಕ್ಕೆ ಹೊರತಲ್ಲ. ಹಾಗಾಗಿಯೇ ಇಂದಿಗೂ ಮಟ್ಟನ್‌ನ ಆ ಇನ್ನೊಂದು ಮಾರ್ತಾಂಡ(ಸೂರ್ಯ)ನೆಂದರೆ ಅವರಿಗೆ ಮನೆದೇವರಂತೆ. ಈ ಮಾರ್ತಾಂಡವೇನಿದ್ದರೂ ಈಗ ಪಳೆಯುಳಿಕೆ ಅಷ್ಟೇ.

ನಾವು ಈ ಮಾರ್ತಾಂಡಕ್ಕೆ ಕಾಲಿಡುತ್ತಿದ್ದಂತೆ ಓಡಿ ಬಂದ ಆ ಗೈಡ್‌, ನಿಮಗೆ ತೋಚಿದ ದುಡ್ಡು ಕೊಡಿ, ಮಾರ್ತಾಂಡದ ಕಥೆ ಹೇಳುತ್ತೇನೆ ಎಂದು ಹಿಂದೆ ಬಿದ್ದಿದ್ದ ಗೈಡ್‌ ಕಥೆ ಹೇಳಿ ಮುಗಿಸಿದ್ದ. ಅಷ್ಟರಲ್ಲಿ ಬಗೆಬಗೆಯ ಜಾಕೆಟ್ಟು ಹಾಕಿ ತೆಗೆದು ನಾನಾ ಅವತಾರಗಳಲ್ಲಿ ಸೆಲ್ಫೀ ತೆಗೆದುಕೊಂಡಿದ್ದ ಆ ಯಾರೋ ನಾಲ್ಕೈದು ಮುಂಬೈ ಹುಡುಗರು ನಮಗೂ ಕಥೆ ಹೇಳಿ ಎಂದು ಕರೆದರು. ಆತನ ಕೆಲಸವೇ ಕಥೆ ಹೇಳುವುದು. ಹೇಳುವ ಬಾಯಿ, ಕೇಳುವ ಒಂದೆರಡು ಕಿವಿಗಳಷ್ಟೇ ಈಗ ಅಲ್ಲಿ ಉಳಿದದ್ದು. ಮಿಕ್ಕಂತೆ ಬರೀ ಮೌನ. ಸ್ಮಶಾನ ಮೌನ!

‍ಲೇಖಕರು ರಾಧಿಕ ವಿಟ್ಲ

December 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: