ಹಣಕ್ಕಿಂತ ಕಲಿಕೆ ಮತ್ತು ಅನುಭವ ದಕ್ಕಿದೆ

ಮಂಜು ಸಿರಿಗೇರಿ

ಬಳ್ಳಾರಿ ಜಿಲ್ಲೆಯ ಸಿರಗುಪ್ಪೆ ತಾಲೂಕಿನ ಸಿರಿಗೇರಿ ಗ್ರಾಮದ ಮಂಜು ಸಿರಿಗೇರಿಯವರು ನೀನಾಸಮ್ ಪದವೀಧರರು. ನಾಟಕದಲ್ಲಿ ಸ್ನಾತಕೋತ್ತರ ಪದವೀಧರರು. ಕಳೆದ ಹನ್ನೆರಡು ವರ್ಷಗಳಿಂದ ರಂಗ ಕಾಯಕದಲ್ಲಿ ತೊಡಗಿಕೊಂಡಿರುತ್ತಾರೆ.

ರಂಗಭೂಮಿಯ ಇತಿಹಾಸದಲ್ಲಿ ಕರ್ನಾಟಕದ ಕಂಪನಿ ನಾಟಕಕ್ಕೆ ವಿಶೇಷವಾದ ಸ್ಥಾನಮಾನವಿದೆ. ಆ ಹಿನ್ನೆಲೆಯಲ್ಲಿ “ಸತ್ಯಶೋಧನ ರಂಗ ಸಮುದಾಯ ಹೆಗ್ಗೋಡು, ಹಾಗೂ ಜನಮನದಾಟ ನಾಟಕ ತಂಡ 2018ರಲ್ಲಿ ಕರ್ನಾಟಕದಾದ್ಯಂತ ಪ್ರದರ್ಶನಗಳನ್ನು ಕೈಗೊಳ್ಳಲು ಒಂದು ಪ್ರಾಯೋಗಿಕ ನಾಟಕವಾಗಿ ಬಿ. ಪುಟ್ಟಸ್ವಾಮಯ್ಯ, ಪಿ. ವಜ್ರಪ್ಪ, ಕಲ್ಲೂರು ಶ್ರೀನಿವಾಸ್ ಹಾಗೂ ಕುವೆಂಪುರವರ ಕೃತಿಗಳನ್ನಾಧರಿಸಿ, ಡಾ. ಎಂ ಗಣೇಶ ಹೆಗ್ಗೋಡು ಇವರ ನಿರ್ದೇಶನದಲ್ಲಿ “ಕುರುಕ್ಷೇತ್ರ” ಎಂಬ ಮಹಾನ್ ಪೌರಾಣಿಕ ಸಂಗೀತಮಯ ನಾಟಕವನ್ನು ಒಂದು ತಿಂಗಳ ಕಾಲ ತಾಲೀಮು ನಡೆಸಿ, ಸುಮಾರು ಮೂರು ಲಕ್ಷದಷ್ಟು ಖರ್ಚು ಮಾಡಿ, ನಾಗರಾಜ್ ಶಿರಸಿ, ಉಮಾ ವೈ.ಜಿ. ಕೋಲಾರ, ಶರತ್ ಮೈಸೂರು, ಮಂಜು ಬಾದಾಮಿ, ಅಳೆಬಸಪ್ಪ ಗದಗ್, ಮಹಾಂತೇಶ್ ಆದಿಮಾ, ವಾಣಿ ಬೀದರ್, ಕರಿಯಪ್ಪ ಕೊಪ್ಪಳ, ಚಂದ್ರು ನೆಲಮಂಗಲ, ಸಲ್ಮಾ ದಂಡಿನ್ ಧಾರವಾಡ, ಸತೀಶ್ ಚೌಹಾಣ್ ವಿಜಯಪುರ, ನವೀನ್ ಪ್ರತಾಪ್ ಚನ್ನಗಿರಿ, ಹೀಗೇ 16 ಜನ ಕಲಾವಿದರ ತಂಡ ತಿರುಗಾಟ ಮಾಡಲು ಹೊರಟೆವು.

ಮೊದಲಿಗೆ ಅಷ್ಟೇನೂ ಯಶಸ್ವಿಯಾಗಿ ಪ್ರದರ್ಶನಗಳು ಸಿಗಲಿಲ್ಲ. ಹಾಗೂ ನಮ್ಮ ನಾಟಕ ಮತ್ತು ನಟರು ಕಂಪನಿ ಶೈಲಿಗೆ ಹೊಂದಿಕೊಳ್ಳಲು ನಾಟಕ ಒಂದು ಹದಕ್ಕೆ ಬರಲು ಸ್ವಲ್ಪ ಸಮಯ ಹಿಡಿದಿತ್ತು. ಮಾರ್ಚ್ 2018 ರಲ್ಲಿ ಪ್ರಾರಂಭವಾಗಿ ದಿನೇ-ದಿನೇ ಈ ನಾಟಕ ತನ್ನ ಗಟ್ಟಿತನವನ್ನು, ಬೇಡಿಕೆಯನ್ನು ಹೆಚ್ಚಿಸಿಕೊಂಡು ಮುನ್ನುಗ್ಗಿತು. ಆದರೆ ಕೆಲವು ಸಲ ಪ್ರದರ್ಶನಗಳು ಇಲ್ಲದೆ ಪರದಾಡಿದ್ದು ಇದೆ, ಕೇವಲ ಒಂದು ಹೊತ್ತಿನ ಊಟಕ್ಕಾಗಿ ಪ್ರದರ್ಶನ ಕೊಟ್ಟಿದ್ದು ಇದೆ, 500/- ಪ್ರದರ್ಶನದಿಂದ 1,50,000 ಸಂಭಾವನೆಯ ಪ್ರದರ್ಶನ ಮಾಡಿದ್ದು ಇದೆ.

ಬಯಲು ವೇದಿಕೆಯಲ್ಲಿ ನಡೆದ ಎಷ್ಟೊ ಪ್ರದರ್ಶನಗಳು ಮಳೆಗೆ ತುತ್ತಾಗಿ ನಮ್ಮ ರಂಗಸಜ್ಜಿಕೆ, ನಮ್ಮ ಬಟ್ಟೆಗಳು, ಸಂಪೂರ್ಣ ಕುರುಕ್ಷೇತ್ರವೇ ಮಳೆ ನೀರಿನಲ್ಲಿ ಕೊಚ್ಚಿ ಹೋದ ಕೆಲವು ಪ್ರಸಂಗಗಳಿವೆ. ಹಳ್ಳಿಗಳಲ್ಲಿ ಜಾತಿಯ ವಿಷಯದಲ್ಲಿ ಕಲಾವಿದರನ್ನು ಕೀಳಾಗಿ ಕಂಡು, ಮನೆಯೊಳಗೆ ಸೇರಿಸದೆ ಹೊರಗೆ ಕಳಿಸಿದ ಅನುಭವಗಳು ಇದೆ. ನಾಟಕ ಆಯೋಜಕರೊಂದಿಗೆ ಜಗಳವಾಡಿದ್ದು ಇದೆ, ಪ್ರದರ್ಶನ ಇಲ್ಲದಿದ್ದಾಗ ಕರ್ನಾಟಕದಲ್ಲಿರುವ ಮೂಲೆಮೂಲೆಯ ಮಠಗಳನ್ನು ಹುಡುಕಿ ಊಟ ಮತ್ತು ವಸತಿ ಪಡೆದದ್ದು ಇದೆ.

ಇದರ ಜೊತೆಗೆ ಹೆಚ್ಚುಪಾಲು ನಾಟಕವನ್ನು ಮೆಚ್ಚಿಕೊಂಡು ಹಾಡಿ ಹೊಗಳಿ “ಕುರುಕ್ಷೇತ್ರ ಕಂಪನಿ ನಾಟಕವನ್ನು ಹೀಗೂ ಮಾಡಬಹುದೇ” ಎಂದು ಬಾಯಿ ಮೇಲೆ ಬೆರಳಿಟ್ಟುಕೊಂಡದ್ದು ಇದೆ. ಇಂದಿನ ಕಾಲಕ್ಕೆ ಕಂಪನಿ ನಾಟಕವನ್ನು ಮತ್ತೆ ಏಕೆ ಮಾಡಬೇಕಿತ್ತು ಎಂದು ಹೇಳಿದ್ದು ಇದೆ. ಕಂಪನಿ ನಾಟಕಗಳ ಇತಿಹಾಸದಲ್ಲಿ ಇದು ಅತ್ಯುತ್ತಮ ಪ್ರಯೋಗ ಎಂದು ಹಿರಿಯರು ಹೊಗಳಿದ್ದೂ ಇದೆ. ಕೃಷ್ಣನ ಕಾಲಿಗೆ ನಮಸ್ಕರಿಸಿದ್ದೂ ಇದೆ. ಮಕ್ಕಳು ರಂಗದ ಮೇಲೆ ಮಣ್ಣು ತೂರಿದ್ದು ಇದೆ. ಕೆಲವೊಮ್ಮೆ ಮೃಷ್ಟಾನ್ನ ಭೋಜನ, ಕೆಲವೊಮ್ಮೆ ತಂಗಳನ್ನ  ತಿಂದದ್ದು ಇದೆ. ಕೆಲವೊಮ್ಮೆ ಎ.ಸಿ ರೂಮ್ ಗಳಲ್ಲಿ, ಇನ್ನು ಕೆಲವೊಮ್ಮೆ ರಸ್ತೆಯಲ್ಲಿ, ಗುಂಡಿಗಳು ಮುಂದೆ ಮಲಗಿದ್ದೂ ಇದೆ. ನಮ್ಮ ತಂಡದ ನಟ-ನಟಿಯರನ್ನು ಸೆಲೆಬ್ರಿಟಿಗಳ ತರ ಮೆರೆಸಿದ್ದು ಇದೆ, ಕೀಳಾಗಿ ಕಂಡದ್ದು ಇದೆ.

ಆದರೆ ಇವೆಲ್ಲವುಗಳ ಮಧ್ಯೆ ನಮಗೆ ಕುರುಕ್ಷೇತ್ರ ತಿರುಗಾಟ ತುಂಬಾ ದೊಡ್ಡ ಬದುಕು ಕಲಿಸಿಕೊಟ್ಟಿದೆ. ತುಂಬ ಹಣ ಸಿಕ್ಕಿಲ್ಲದಿರಬಹುದು ಕಲಿಕೆ, ಅನುಭವ ದಕ್ಕಿದೆ…..

‍ಲೇಖಕರು Avadhi

December 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನೀನು…

ನೀನು…

ದೊರೆ..

ದೊರೆ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: