ಎಳ್ಳಾಮಾಸಿಯಂಥ ಕೂಸು, ಕೂಸಿನಂಥ ಎಳ್ಳಾಮಾಸಿ

ಹೆಸರೇ ಅನಾಮಿಕಾ ಹಾಗಾಗಿಯೇ ಈಕೆ ಅನಾಮಿಕೆ .

ಹೆಸರು ಹೇಳಲು ಒಲ್ಲದ ಈಕೆ ಭೋಜನಪ್ರಿಯೆ ಅಂತ ಬಿಡಿಸಿ ಹೇಳಬೇಕಿಲ್ಲವಲ್ಲ. ಅದು ಎಷ್ಟು ಖರೆ ಎಂದು ನಮಗೂ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ನಿಜ. ಭೋಜನಕ್ಕೆ ನಮ್ಮನ್ನು ಬಡಿದೆಬ್ಬಿಸುವಂತೆ ಈಕೆ ಬರೆಯುತ್ತಾಳೆ.

ಅಷ್ಟೇ ಆಗಿದ್ದರೆ ಇದನ್ನು ಒಂದು ‘ರಸ ರುಚಿ’ ಕಾಲಂ ಹೆಸರಿನಡಿ ಸೇರಿಸಿ ನಾವು ಕೈ ತೊಳೆದುಕೊಳ್ಳುತ್ತಿದ್ದೇವೇನೋ..!

ಆಕೆಗೆ ಒಳಗಣ್ಣಿದೆ. ಒಂದು ಆಹಾರ ಹೇಗೆ ಒಂದು ಸಂಸ್ಕೃತಿಯ ಭಾಗವಾಗಿ ಬರುತ್ತದೆ ಎನ್ನುವುದರ ಬಗ್ಗೆ ಹಾಗೂ ಹೇಗೆ ಆಹಾರ ಒಂದು ಸಂಸ್ಕೃತಿಯನ್ನು ರೂಪಿಸುತ್ತದೆ ಎನ್ನುವುದರ ಬಗ್ಗೆಯೂ

ಹಾಗಾಗಿಯೇ ಇದು ರಸದೂಟವೂ ಹೌದು ಸಮಾಜ ಶಾಸ್ತ್ರದ ಪಾಠವೂ ಹೌದು.

ಎಂಥ ಸೊಸಿ ಅದು ಇದು… ಯಳ್ಳಾಮಾಸಿ ಆಗೇದ… ನನ್ನ ಸೊಸಿ ಮುದ್ದ… ಅಂತ ಅನ್ಕೊಂತ ನನ್ನ ಸಹೋದ್ಯೋಗಿ ಕೌಟಗೆ ಅನ್ನೋರು, ದುಂಡದುಂಡ, ಹುಣ್ಣಿಮಿ ಚಂದ್ರಾಮನ್ಹಂಗಿದ್ದ ನನ್ನ ಮಗಳು ಭೂಮಿಗೆ ಆಡಿಸಿದ್ರು.

ನನಗರೆ ಸಿಟ್ಟು ಬಂದಿತ್ತು. ಎಂಥ ಚಂದನ ಮಗಳು.. ಭೂಮಿ ತೂಕದ ಮಗಳು. ಮ್ಯಾಗಿ ನೂಡಲ್ಸ್‌ನಂಥ ಗುಂಗುರು ಕೂದಲಿರುವ, ಚಂದ್ರಾಮನಂಥ ಮಗಳು. ಅಕಿಗೆ ಯಳ್ಳಾಮಾಸಿ ಅಂತಾರಲ್ಲ ಅನ್ನೂಹಂಗ ಹಣಿಗೆ ಗಂಟು ಹಾಕಿದೆ.

ಯಳ್ಳಾಮಾಸಿ ಬಂದ್ರ ಮಾಘ ಮಾಸ ಮುಗದ್ಹಂಗ. ಎಳ್ಳಿನಷ್ಟೇ ಹಿತವಾದ ಬಿಸಿಲು ಶುರುವಾಗ್ತದ. ಕರಿಕತ್ತಲಿನ ರಾತ್ರಿಯೊಳಗ ಶ್ವೇತ ಶುಭ್ರ ನಕ್ಷತ್ರಗಳು ಮಿನುಗ್ತಾವ. ಕಾಡುಗತ್ತಲೆಯ ರಾತ್ರಿ ಬರುವ ಅಮವಾಸಿ ಅದು. 

ಆದ್ರ ಕೌಟಗೆ ಅಗ್ದಿ ನನಗ ಅಣ್ಣ ಇದ್ದಂಗ. ಅವರು ಪಟ್ನೆ ನನ್ನ ಮನಸು ಓದಿದೋರ ಹಂಗ… ‘ಅಕ್ಕಾರ… ನಿಮ್ಮಪ್ಪ ಅಮ್ಮ ಇಬ್ಬರೂ ಕೆಲಸ ಮಾಡ್ತಾರ. ಹಿಂಗಾಗಿ ನಿಮಗ ಅಮಾಸಿ ಅಂದ್ರ ಬರೇ ಕತ್ಲು ನೆನಪಾಗ್ತದ. ನಮಗ ಯಳ್ಳಮಾಸಿ ಅಂದ್ರ ಸಮೃದ್ಧಿ ನೆನಪಾಗ್ತದ. ಒಮ್ಮೆ ಯಳ್ಳಾಮಾಸಿ ಹಿಂದ ಮುಂದ ಬಾಜಾರು ಹೆಂಗಿರ್ತದ ನೆನಪು ಮಾಡ್ಕೋರಿ’ ಅಂದ್ರು.

ನನ್ನ ಕಣ್ಮುಂದ ಅಗ್ದಿ ಹಚ್ಚ ಹಸರಿನ, ತೊಗರಿ ಕಾಯಿ, ಬಟಾಣಿಕಾಳು, ಕಡಲಿಕಾಳು, ಹೆಸರುಕಾಳು, ತೆನೆದುಂಬಿದ ಜೋಳ, ಅಲಸಂದಿ, ಹುರುಳಿಕಾಳು, ರಾಶಿ ಹಾಕ್ಕೊಂಡು ಸೇರು ಇಟ್ಕೊಂಡು ಕುಂತಿರ್ತಾರ. ಹಸಿರು ಬಣ್ಣದ ಎಲ್ಲ ವರ್ಣ ಸಂಯೋಜನೆಗಳೂ ಈ ಬಣ್ಣದೊಳಗಿರ್ತಾವ. ಇವುಗಳಿಗೆ ದೃಷ್ಟಿ ಆಗಬಾರದು ಅನ್ನುವ ಹಂಗ ಕೆಂಬಣ್ಣದ ಗಜ್ಜರಿ, ಬಿಳೀ ಬಣ್ಣದ ಮೂಲಂಗಿ, ಉದ್ದಾನುದ್ದ ಕಬ್ಬು, ಬಾರಿಹಣ್ಣು, ಪೇರಲ ಹಣ್ಣು, ನೆಲಗಡಲೆ, ಹಿಂಗ ಹಣ್ಣು, ತರಕಾರಿ, ಕಾಳು, ಸೊಪ್ಪು ಹಿಂಗ ಒಟ್ಟ ಎಲ್ಲಿ ನೋಡಿದ್ರೂ ಸಮೃದ್ಧಿ. 

ಹಿಂಗ ಈ ಸಮೃದ್ಧಿ ಇರೂದ್ರಿಂದ, ಇದು ಅಗ್ದಿ ಫಲಿತ, ಫಲಭರಿತ ಅಮವಾಸಿ ಅಂತ ಕೃಷಿಕರು ಕರೀತಾರಂತ. ಹಂಗಾಗಿ ಭೂಮಿ, ಯಳ್ಳಾಮಾಸಿಯ ಭೂಮಿತಾಯಿ ಇದ್ದಂಗ ಅಂತ ಹೊಗಳಿದ್ರಂತ. ನನಗ ಅವಾಗ ಸಮಾಧಾನ ಆಯ್ತು. 

ಇದಿಷ್ಟೂ ಯಾಕ ಹೇಳಬೇಕಾಯ್ತಂದ್ರ, ಹೈದರಾಬಾದ ಕರ್ನಾಟಕದ ಬೀದರ್‌ ಮತ್ತು ಕಲಬುರ್ಗಿ ಜಿಲ್ಲೆಯೊಳಗ ಇದೇ ಸಮಯದೊಳಗ ‘ಬಜ್ಜಿ’ ಅಂತ ಮಾಡ್ತಾರ. ರಾಯಚೂರಿನೋರು ಬಜ್ಜಿಹಂಗೆನೆ ಭರ್ತ ಮಾಡ್ತಾರ.

ಬಜ್ಜಿ ಮಾಡ್ಬೇಕಂದ್ರ ಮನೀಮಂದಿಯೆಲ್ಲ ದುಡಿಯಾಕಬೇಕು. ಮನೀ ಹುಡುಗ್ರೆಲ್ಲ ಸುಲಗಾಯಿ ಅಂದ್ರ ಕಡಲಿಗಿಡ ಸುಲ್ಯಾಕ ಕುಂದರ್ತಾರ. ಒಂದು ಕಾಳು ಬಟ್ಟಲಿಗೆ, ಎರಡು ಕಾಳು ಹೊಟ್ಟಿಗೆ. ಹಿಂಗಾಗಿ ಮಕ್ಕಳ ಮುಂದ ಒಂದು ಹಿಂಡು ತಂದುಕೊಡ್ತಾರ. ಸೇಂಗಾ ಒಡಿಯಾಕೂ ಅವರಿಗೇ ಕುಂದರಸೂದು. 

ಉಳದ್ಹಂಗ ಎಳೀಮುಳ್ಳಿರುವ ತೊಗರಿ, ಹೆಸರು, ಅಲಸಂದಿ ಸುಲಿಯಾಕ, ಅವರಿಕಾಳು ಸುಲಿಯಾಕ ಮನ್ಯಾಗಿನ ಹಿರಿಯ ಹೆಣ್ಮ್ಮಕ್ಕಳು ಕುಂದರ್ತಾರ. ಸೀರಿಯಲ್‌ ಮುಗೀತನಾನೂ ಇವನ್ನು ಕಾಳುಬಿಡಸೂದೆ ಕೆಲಸ. 

ಮನ್ಯಾಗ ಹಿರಿಯರು ಇದ್ರ ಅವರ ಮುಂದ ಪಾಲಕ್‌ ಸೂಡು, ಮೆಂತ್ಯ ಸೂಡು, ಹುಣಚಿಕ್ಕಿ, ಪುಂಡಿ ಎಲ್ಲಾ ಸೋಸ್ತಾರ. ಮರುದಿನ ಕುಕ್ಕರ್‌ನಾಗ ಒಂದು ಹದದಾಗ ಹಸಿಕಾಳು ಕುದಸ್ಕೊಂತಾರ. ಅದನ್ನು ಕುದಸು ಮುಂದ ಹೊಸ ಹುಣಸಿಕಾಯಿ ಬಂದಿರ್ತದಲ್ಲ ಅದನ್ನೂ ಹಾಕಿರ್ತಾರ. ಅದರ ಮ್ಯಾಲಿನ ಸಿಪ್ಪಿ ಮೆತ್ಗಾಗಿ ಬಿಚ್ಚಾಕ ಅನುಕೂಲ ಆಗಿರ್ತದ. ಹಂಗ ಕುದ್ದ ಕಾಳಿನಾಗ, ಸಿಪ್ಪಿ ಬಿಡಿಸಿದ ಹುಣಸೀಕಾಯಿಯನ್ನು ಕಿವುಚತಾರ. ಕಿವುಚಿ ಅದನ್ನ ಹುಳೀಯೊಂದಿಗೆ ಕುದಿಯಾಕ ಇಡ್ತಾರ. 

ಇದು ಕುದಿಯೂ ಮುಂದ ಕಡಲಿಹಿಟ್ಟಿಗೆ ನೀರು ಹಾಕಿ, ದೋಸೆ ಹಿಟ್ಟಿನ ಹದಕ್ಕ ಬೆರಸ್ಕೊಂತಾರ. ಆ ಕುದಿಯೂ ಹುಳಿ ಮತ್ತು ಕಾಳುಗಳ ಮಿಶ್ರಣಕ್ಕ ಸಾವಕಾಶಗೆ ಈ ಹಿಟ್ಟಿನ ಮಿಶ್ರಣವನ್ನು ಹಾಕುತ್ತ ಕಲಸ್ತಾರ. ಒಂದು ಹಂತಕ್ಕ ಹಿಟ್ಟಿನ ವಾಸನಿ ಕಡಿಮಿ ಆಗಿ, ಹದವಾಗಿ ಕುದಿಯಾಕ ಶುರು ಆಗ್ತದ. ಅವಾಗ.. ಸೋಸಿಟ್ಟ ಸೊಪ್ಪನ್ನೆಲ್ಲ ಸಣ್ಣಗೆ ಹೆಚ್ಚಿ, ಕೊಚ್ಚಿ, ಈ ಮಿಶ್ರಣಕ್ಕ ಸುರುವುತಾರ. 

ಇಡೀ ಮಿಶ್ರಣವನ್ನು ಕಲಕುತ್ತಲೇ ಇರ್ತಾರ. ಆಮೆಲೆ ಇದೆಲ್ಲವೂ ಒಂದು ಹದಕ್ಕ ಬಂದದ, ಅಂತನಿಸುವ ಮುಂದ ಪಾತ್ರೆಗೆ ಮುಚ್ಚಳ ಹಾಕಿ ಮುಚ್ಚಿಡ್ತಾರ. ಹಗುರುಕ ಮನ್ಯಾಗ ಹುಳಿ ವಾಸನಿ ಹರಡಾಕ ಶುರು ಆಗ್ತದ. ಎಲ್ಲಾನೂ ಚೂರುಚೂರೆ ಹಾಕಿದ್ರೂ ಬೊಗೊಣಿ ತುಂಬ, ಪಲ್ಯ ಆಗ್ತದ. ಹೆಚ್ಚಾದಷ್ಟೂ ಖುಷಿನೆ. ಮೂರು ದಿನ ಇಟ್ರ, ಮೂರನೆ ದಿನಾನೂ ಅಗ್ದಿ ರುಚಿ ಇರುವ ಪಲ್ಯ ಇದು. ಹಂಗಾಗಿ ಯಾರೂನು ಚೂರುಚೂರೆ ಮಾಡೂದೆ ಇಲ್ಲ. 

ಬಜ್ಜಿ ಮಾಡುವ ಬೊಗೊಣಿನೆ ಮನ್ಯಾಗ ಬ್ಯಾರೆ ಇರ್ತದ. ಅದ್ರೊಳಗ ಏನರೆ ಅನ್ನಕ್ಕಿಟ್ರ ಒಂದೈವತ್ತು ಮಂದಿ ಆರಾಮಗೆ ಊಟ ಮಾಡಬಹುದು. ಹುಬ್ಬೇರಸಬ್ಯಾಡ್ರಿ ಅಕ್ಕಾರ… ಎಲ್ಲಾನು ಪಾವುಕೇಜಿಯಷ್ಟು ತೊಗೊಂಡ್ರೂ ಐದು ಕೆಜಿಯಷ್ಟು ಪಲ್ಯ ಆಗ್ತದ. ಮತ್ತ ಇಷ್ಟು ಇಟ್ಕೊಂಡು ಏನ್ಮಾಡ್ತಾರ, ಮೂರು ದಿನ ಉಣ್ಣಾಕ ಬೇಕು ಅಂತ ಅನ್ಕೊಬ್ಯಾಡ್ರಿ.

ಹೊಲ ಇದ್ದೋರು, ತಮ್ಮ ಸ್ನೇಹಿತರನ್ನಷ್ಟೆ ಅಲ್ಲ, ಅವರ ಕುಟುಂಬದವರನ್ನೂ ಊಟಕ್ಕ ಕರಕೊಂಡು ಹೋಗ್ತಾರ. ಮತ್ತದೇ ನಮ್ಮ ಕಾಯಂ ಮೆನು ಇದ್ದೇ ಇರ್ತದ. ಹಪ್ಪಳದಂಥ ಸಜ್ಜಿ ರೊಟ್ಟಿ, ಜೋಳದ ರೊಟ್ಟಿ, ಚಪಾತಿ, ಎಣ್ಣಿಗಾಯಿ ಇದ್ದೇ ಇರ್ತದ. ಇದರ ಜೊತಿಗೆ ಎಳೀ ಗಜ್ಜರಿ, ತಪ್ಪಲು ಉಳ್ಳಾಗಡ್ಡಿ, ಮೂಲಂಗಿ ಪಚಡಿ ಕಾಯಂ. ಗಟ್ಟಿ ಮೊಸರು, ಅಗಸಿ, ಸೇಂಗಾ, ಪುಠಾಣಿ, ಗುರೆಳ್ಳು ಹಿಂಡಿ ಗಾಜಿನ ಬಾಟಲಿಯೊಳಗ ಎಷ್ಟು ಚಂದ ಕಾಣ್ತಿರ್ತಾವ. 

ಕಾಟನ್‌ ದುಪ್ಪಟ್ಟಾದಾಗ ರೊಟ್ಟಿ ಬುತ್ತಿ ಕಟ್ತಾರ. ಮೊದಲಾದ್ರ ಬೆಣ್ಣೀ ಸೈತ ಕಡೀತಿದ್ರು. ಈಗ ನಂದಿನಿ ಮತ್ತು ಅಮುಲ್‌ ಸಾಲ್ಟೆಡ್‌ ಬಟರ್‌ ಬಂದು ಅದೊಂದು ಕೆಲಸ ಕಡಿಮಿ ಆಗೇದ. 

ಬೆಣ್ಣಿ ಐತಿ ಅಂತ ತುಪ್ಪ ಬಿಡೂಹಂಗಿಲ್ಲ. ಯಾಕಂದ್ರ ಸೇಂಗಾ ಮತ್ತು ಯೆಳ್ಳಿನ ಹೋಳಿಗಿಗೆ ಹೆರ್ತಿದ್ದ ತುಪ್ಪಾನ ಆಗಬೇಕು. 

ಹಂಗೇ ಬಿಸಿಯನ್ನ, ತುಪ್ಪ ಬಜ್ಜಿ ತಿನ್ನುವ ಸುಖಾನೇ ಬ್ಯಾರೆ. ಬಿಸಿಯನ್ನಕ್ಕ ಬರುವ ಮೊದಲು ಖಟಿರೊಟ್ಟಿಯೊಳಗ ಬಜ್ಜಿ ಹಾಕಿ, ಪುಡಿಗಳನ್ನು ರಂಗೋಲಿ ಗುಪ್ಪಿ ಇಟ್ಕೊಂಡಂಗ ಸೈಡಿಗೆ ಹಾಕ್ಕೊಂಡು, ಕರದ ಮೆಣಸಿನಕಾಯಿ ಕಡಕೊಂತ ಉಂಡ್ರ… ಹೊಲದಾಗಿನ ಹಸಿರು ಬೆಳಿ, ಆಕಾಶದ ನೀಲಿ, ಭೂಮ್ತಾಯಿ ಒಡಲು ಎಲ್ಲಾ ಖುಷಿ ಕೊಡ್ತಾವ.

ಅದಕ್ಕೇನೆ ಉಣ್ಣಾಕ ಮೊದಲು ಗಡಗಿಯೊಳಗ ಎಲ್ಲ ಅಡುಗಿನೂ ಹಾಕಿ, ಕಲಸಿ, ಹೊಲಕ್ಕ ಚರಗಾ ಚಲ್ತಾರ. ಮಡಿಲುತುಂಬಿಕೊಂಡ ಭೂಮಿಗೆ ಬಿಟ್ಟು ಉಣ್ಣೂದರೆ ಹೆಂಗ.. ಹೊಲದ ತುಂಬೆಲ್ಲ ಚರಗ ಚಲ್ಲಿದ ಮ್ಯಾಲೆ ಉಣ್ಣೂದು ಶುರು ಆಗ್ತದ. ಎಲ್ಲಾರು ಉಂಡು, ಎಲಿ ಹಾಕ್ಕೊಂಡು ಅಲ್ಲಲ್ಲೇ ಪಟ್ಟಾಂಗ ಹೊಡೀತಾರ. ಯಾರು ಏನು ಸೋಸಿದ್ರು, ಯಾಕ ಬಜ್ಜಿ ರುಚಿ ಆಯ್ತು ಅಂತ ಒಂದು ಸಣ್ಣ ರೌಂಡು ಚರ್ಚೆನೂ ಆಗ್ತದ.

ಪ್ರತಿಯೊಬ್ಬರೂ ಪ್ರತಿಯೊಬ್ಬರ ಕೆಲಸಾನೂ ಮುಕ್ತ ಕಂಠದಿಂದ ಹೊಗಳ್ತಾರ. ಎಲ್ಲೀತನಾ ಅಂದ್ರ, ಸೇಂಗಾ ಸುಲದ ಸಿಪ್ಪಿ ಸಣ್ಣ ಮಗಳು ಎತ್ತಿ ಹಾಕಿದ್ದಕ್ಕ ರುಚಿಯಾಗೇದ. ಹಂಗ ಎತ್ತಿದ ಮ್ಯಾಲೆ ಕಸಗುಡಿಸಿದ್ದವರ ಕೈಗುಣದಿಂದಲೂ ರುಚಿಯಾಗೇದ. ಅಂದ್ರ ಇಲ್ಲಿ ಯಾರೂನು ನಾನೇ ಮಾಡಿದೆ ಅನ್ನುವ ಭಾವದಿಂದ ಹೇಳೂದೆ ಇಲ್ಲ. ಸಣ್ಣ ಸಣ್ಣ ಕೆಲಸಗಳನ್ನೂ ಮೆಚ್ಕೊಂತ, ನಕ್ಕೊಂತ ಬಜ್ಜಿ ಸವೀತಾರ. 

ತರಕಾರಿ ತಂದೋರಿಂದ ಹಿಡಿದು, ಡಬ್ಬಿಗೆ ಸುರುವುತನ, ಊಟಕ್ಕ ಬಡಸೂತನನೂ ಎಲ್ಲರ ಶ್ರಮಶ್ಲಾಘನೆ ಆಗ್ತದ. ಕೂಡಿ ಬಾಳುವ, ಹಂಚಿ ಉಣ್ಣುವ ಸಂಭ್ರಮದ ಎಳ್ಳಾಮಾಸಿ ಆಚರಣೆ ಹಿಂಗದ.

ಈಗ ನಾನೂ ಯಾವರೆ ಚಂದನೆಯ ಮಕ್ಕಳು ಕಂಡ್ರ… ಎಂಥಾ ಚಂದನೆಯ ಎಳ್ಳಾಮಾಸಿ ಕೂಸಿದು ಅಂತೇನಿ..

‍ಲೇಖಕರು ಅನಾಮಿಕಾ

December 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: